Saturday 7 October 2023

ತಾಜ್‍ಮಹಲ್‍ - ಕೇತಕೀವನ

ಯಾಮುನೆಯು ಮೆಲುಮೆಲನೆ ಕುಲುಕಿ ಸರಿಯುತಿರೆ
ಯಾಮಿನೀಪತಿಯೊಲಿದು ನೋಡಿ ನಗುತಲಿರೆ
ಆ ಸರಸ ಸಡಗರದ ಸುದ್ದಿಯನು ಪವನಂ
ಆಸೆಯಿಂ ಪೊತ್ತು ಬೆಳ್ಬೆಳಗುವರಮನೆಯ
ಪೂದೋಟದಲಿ ಸಾರಿ ಸುಳಿಸುಳಿದು, ಸರಿದು
ಮೋದದಿಂ ಮಲ್ಲಿಗೆಯ ನಸುನಗಿಸುತಿರ್ದಂ.

ಈ ಬಗೆಯ ಸರಸ ಸಲ್ಲಾಪಮಮರುತಿರೆ
ಆ ಬಳಿಯೊಳೊಂದು ಬೆಳ್ಗದ್ದುಗೆಯ ಮೇಲೆ-
ಕೆರೆಯ ನಡುವೊಳದೊಂದೆ ಮರವು ನಿಂತಂತೆ-
ಹರೆಯದುಕ್ಕೆವದ ಬಳಿ ಜರೆಯು ಸುಯ್ದಂತೆ-
ಬಿಳ್ಪುತಣ್ಪುಗಳ ಆ ಕಡಲ ನಡುನೆಲೆಯೊಳ್‍
ಕುಳ್ಳಿರ್ದನಾ ಮೊಗಲದೊರೆ ಷಾಜಹಾನಂ.

ಕುಳ್ಳಿರುತೆ ಮಲಗುತ್ತೆ ಮತ್ತೆ ಕುಳ್ಳಿರುತೆ
ತಲ್ಲಣವ ಕಳೆಯಲ್ಕೆ ಪಕ್ಕ ತಿರುಗುವನು.
ಅಂತಿರುತಲೋರೊರ್ಮೆ ಕಣ್ಣನರೆತೆರೆದು
ಮುಂದೆಸೆಯಲೀಕ್ಷಿಸುವನರೆ ನಗುತಲೊಮ್ಮೆ
ಮತ್ತೊಮ್ಮೆ ನಿಟ್ಟುಸಿರ ಬಿಡುವನಿನ್ನೊಮ್ಮೆ
ಎತ್ತಿ ಶಿರವನು ಮೆಲ್ಲನೇನನೋ ನುಡಿವಂ.

ಮುಂದೆಸೆಯಲೀಕ್ಷಿಸಲು ನದಿಯೆದುರು ಕರೆಯೊಳ್‍
ಇಂದುವಿಂ ಬೀಳ್ದೊಂದು ಸೊದೆಯೊಟ್ಟಿಲಂತೆ-
ಪಾಲ್ಗಡಲೊಳಿಟ್ಟ ಬೆಣ್ಣೆಯ ಬೊಂಬೆಯಂತೆ
ಬೆಳ್ದಿಂಗಳೊಳ್‍ ರಂಜಿಸಿತ್ತೊಂದು ಸೌಧಂ.
ಆಗಸದ ನೀಲದಲಿ ಮುಗಿಲ ಚೂರುಗಳು
ಸಾಗರದ ನೊರೆಯಂತೆ ತೇಲಾಡುತಿರಲು
ಆ ಪ್ರಕೃತಿ ಕಜ್ಜಲದ ಪಟಕಂದವಾಗಿ
ಶುಭ್ರ ಸೌಧದ ರೂಪಮೆಸೆವುದನುವಾಗಿ.

ಎತ್ತರದಿ ಕಂಗೊಳಿಸೆ ಶಿಖರಗೋಪುರಗಳ್‍
ಅತ್ತಿತ್ತಲೆದ್ದೆಸೆಯಲುದ್ಯಾನ ತರುಗಳ್‍
ಮಾತಿಗೆಟುಕದದೊಂದು ಸೊಗಸಿನತಿಶಯದಿಂ
ನೇತುರ ವನಗಲಗೊಳಿಸಿಡುವೊಂದು ಚೆಲುವಿಂ
ಮನವ ಮರುಳುಗೊಳಿಪ್ಪ ಭಾವದೊಂದಿಂಬಿಂ
ತನುವ ಮರೆಯಿಪದೊಂದು ಮೋಹನದ ತಣ್ಪಿಂ
ರಮ್ಯತೆಯ ಬೀಡಾಗಿ ಸೊಗದ ನಾಡಾಗಿ
ಸೌಮ್ಯಕಾಗರಮಾಗಿ ಶಾಂತಿಗೆಡೆಯಾಗಿ
ಪ್ರೀಯತೆಯ ಸನ್ನಿಧಿಯೊ ಸರಸತೆಯ ನೆಲೆಯೊ
ಮಾಯೆಯಂತಃಪುರಮೊ ಗಂಧರ್ವ ಗೃಹಮೊ
ಬಿರಯಿಗಳ ಕಾವಿನಿಂ ಕುದಿವಿಳೆಯ ತಣಿಸೆ
ಮರುಕದಿಂ ಗಗನವೆರಚಿದ ತುಹಿನಚಯಮೊ
ಧರೆ ತನ್ನವರ ನಲ್ಮೆಯತಿಶಯವ ದಿವಕೆ
ಅರಿಪೆ ಪಿಡಿದೊಂದು ಕೋಮಲ ಧವಳ ಸುಮಮೋ
ಎನ್ನಿಪವೊಲೆಸೆಯುತಿಹುದಾ ಗೌರಭವನಂ
ಬಣ್ಣಿಸಲ್ಕಾಗದಾ ಶಿಲ್ಪಿಗಳ ಕವನಂ.

ಅದ ದಿಟ್ಟಿಸಿದನದಕೆ ಬಾಳನಿತ್ತರಸಂ
ಮೃದುಹೃದಯನಾ ಷಾಜಹಾನ್‍ ಪರಮ ಸರಸಂ
ನೋಡುತ್ತ ಬಿಸಸುಯ್ಯುತೊರ್ಮೆ ಬಾಯ್ದೆರೆದು
ಗೂಢವನುಸಿರ್ದನಾ ದ್ಯುತಿಗೆ ಮನಸೋತು :-

“ಏಸು ಜನ ಘಾಸಿಸಿದರೀ ಸೊಬಗಿಗಾಗಿ
ಏಸು ದಿನ ದುಡಿದರವರೀ ಬೆಡಗಿಗಾಗಿ
ಏಸು ದೂರದೊಳಲೆದು ಸೊದೆಯದುರನಾಯ್ದು
ಬೇಸರದೆ ಕೊರೆದರೆದು ಬಗೆ ಬಗೆದು ಬಿಗಿದು
ಏಸು ಸಹನೆಯ ತಾಳಿ ಸಾಹಸವ ತೋರಿ
ಸಾಸಿರರ್‍ ತಾಮೊಂದು ಮನದಂತೆ ಪೂಡಿ
ನಿರವಿಸಿದರೀ ಜಗದ ಕಣ್ಣ ಹಬ್ಬವನು-
ಮರುಕ ಹರಿಸಗಳ ಬೆರೆಸಿರುವ ಕಬ್ಬವನು!
ಆಹ! ಸುಕೃತಿಗಳವರು ಧನ್ಯಾತ್ಮರವರು
ನೇಹದಳಿಯದ ಕುರುಹ ಲೋಕಕಿತ್ತವರು!

ನರನಾರಿಯರ ನಿರ್ಮಲಾನುರಾಗವನು
ಸ್ಥಿರಹೃದಯರುನ್ನತ ಪ್ರೇಮವೇಗವನು
ವಿಶ್ವವೆಲ್ಲವ ಬಿಗಿವ ದಿವ್ಯಸೂತ್ರವನು
ಶಾಶ್ವತದಿ ಸೃಷ್ಟಿಯೊಳು ಕಾಂಬ ತತ್ತ್ವವನು
ಜಗದಿ ಸುಖಸಾರಮೆನಿಪೊಲುಮೆಯನದೆಂದುಂ
ಪೊಗಳುತ್ತೆ ಬಗೆಗೊಳಿಪುದಲ್ತೆಯೀ ಸದನಂ.


ಆಹ! ಇದರಿಂದೆನ್ನ ಬಾಳಹುದು ಸಫಲಂ
ಆಹ! ಇದರಿಂದೆನಗೆ ದೊರೆವುದಿನಿಸು ಜಸಂ
ಉಳಿದುದೇನಿಹುದಿನ್ನು-ಅಳಿಯದಿಹುದೇನು?
ಕಳೆದುಪೋದುವದೆಂದೊ ಧರೆಯ ಭಾಗ್ಯಗಳು
ಎನ್ನೊಡಲಿನಿಂದೊಗೆದು ಎನ್ನುಣಿಸನುಂಡು
ಎನ್ನೊಲುಮೆಯಿಂ ಬೆಳೆದರೆನ್ನನೇ ಮರೆತು
ಎನ್ನೆದುರಿನಲಿ ಕಾದುತೆನ್ನವರ ಕೊಲಿಸಿ
ಎನ್ನ ರಾಜ್ಯವನೆನಗೆ ನರಕವೆನಿಸಿಹರು.
ಅವರೊಳಣ್ಣದಿರನಹ! ಕೊಲೆಗೈಸಿ ನೀಚಂ
ಆವರಂಗನಕಟಕಟ! ತಂದೆಯಿವನೆನದೆ
ಎನ್ನ ಮನೆಯೊಳೆ ಎನ್ನ ಬಂದಿಯಾಗಿಸಿಹಂ
ಬನ್ನವಿದರಿಂದದೇಂ? ಜೀವದಿಂದಿನ್ನೇಂ?
ಜರೆಯೊಡಲನಿರಿಯುತಿರೆ ಹರಣ ಕುಗ್ಗುತಿರೆ
ಮರುಜೀವದಂತಿದ್ದ ಸತಿ ದಿವವನಡರೆ
ಸುತನೆ ತಾನರಿಯಾಗೆ ಹಿತರಿಲ್ಲದಾಗೆ
ಮೃತಿಯಿಂದೆ ಸೌಖ್ಯಗತಿ ಯಾವುದುಂಟೆನಗೆ?
ಸಿರಿಯಿಲ್ಲ ತಿರೆಯಿಲ್ಲ ಮಿತ್ರರಿಲ್ಲೆನಗೆ
ನಲವಿಲ್ಲ ಒಲವಿಲ್ಲ ಮಾನವಿಲ್ಲೆನಗೆ
ಇಹುದದೊಂದೊಳ್ನೆನಪು ನಲ್ಮೆಯೊಂದೊಲಪು
ಇಹುದದಾ ಬೆಳ್ಸರಿಯೊಳಾಸರೆಯ ಪಡೆದು.


ಅವಳ ಬೆಳ್ಜಸವ ತೋರ್ಪಾ ಬೆಳ್ಪಿನಲ್ಲಿ
ಅವಳ ಸೊಬಗನು ತೋರಿಪಾ ಸೊಬಗಿನಲ್ಲಿ
ಅವಳಿಗಾನಿಟ್ಟ ಆ ಬಾಷ್ಪಕಣದಲ್ಲಿ
ಅವಳು ನೆರೆನಿದ್ರಿಪಾ ಸಿತಶಯನದಲ್ಲಿ
ಅಲ್ಲಿಹುದುಸುಖವೆನಗೆ ಅಲ್ಲಿಹುದು ಶಮವು
ಅಲ್ಲಿಗೆಂದಿಗೆ ಪೋಪೆನೆಂದಲ್ಲಿ ಶಯಿಪೆಂ?


ಇನ್ನೇಸು ದಿನವಿತ್ತಲಿರಲಿ ನಾಂ-ದೇವ?
ಇನ್ನಾವುದನು ಕಾಣಲಿರುವುದೀ ಜೀವ?
ತನುವಿತ್ತ, ಮನವತ್ತ; ಬೇವ ಬಿಸಿಯಿತ್ತ,
ತಣಿಪು ಸೂಸುವ ಕೂರ್ಮೆಯಮೃತರಸವತ್ತ;
ಇಹವಿತ್ತ, ಪರವಿತ್ತ; ಜಗದ ಮುಳಿಸಿತ್ತ,
ಅಹಿತರಂ ಮರೆಯಿಪಾ ಸೊಗದ ನೆಲೆಯತ್ತ.
ಅತ್ತಲೆಂದಿಗೆ-ದೇವ-ಕರೆದೊಯ್ವೆಯೆನ್ನ?
ಅತ್ತಲಾ ಸನ್ನಿಧಿಗೆ ಸಾರುವುದೆ ಪುಣ್ಯ
ತಡೆಯೆನೀ ಸಂಕಟವ, ದಯೆ ತೋರು, ವಿಧಿಯೆ.
ಒಡಲ ತೊಡಕನು ಬಿಡಿಸಿ ಸೇರಿಸವಳೆಡೆಗೆ.


ಆಹ! ಅವಳಿರಲು ನಾಂ ಕೊರಗಿ ಕರಗುವೆನೆ?
ಮೋಹನೆಯ ಬಳಿಸಾರಿ ಮಿಕ್ಕುದೆಣಿಸುವೆನೆ?
ಕಿರುನಗೆಯ ಆ ಮೊಗವೊ! ಆ ಕಣ್ಣ ಹೊಳಪೋ!
ಅರುಮೆಯಾ ನಸುಬಿಸಿಯ ಮಿದುಕೈಯ ಸೋಂಕೋ
ಆ ಹರುಷದಪ್ಪಿಕೆಯೊ ಅ ಸರಸವಾಕ್ಕೊ
ಆಹ! ಅದನೆಲ್ಲ ನಾಂ ಮರೆತಿಹೆನೆ? ಮರೆಯೆಂ.
ಅದನೆ ಬಯಸುವುವೆನ್ನ ಕರಣಂಗಳಿನ್ನುಂ
ಅದರ ನೆನಪೊಂದೆನಗೆ ಸಗ್ಗ ಸುಖವಿಂದುಂ."

ಇಂತು ದೊರೆ ಷಾಜಹಾನನ ಕುಗ್ಗುಕೊರಲಿಂ-
ದಂತರಂಗದ ಶಿಖಿಯ ಕಣಗಳುಣ್ಮುತಿರೆ
ಇಂಗಡಲ ಕಡೆಯೆ ಸಿರಿಯೇಳ್ದು ಬಂದಂತೆ
ಮಂಗಡೆಯ ಸಿತಸೌದ ಕಲಶದಿಂದೊಂದು
ಪರಮಕಾಂತಿಯ ರೂಪು ಸೌಂದರ್ಯದೊಡಲು
ದರ ಹಸಿತವನು ತೋರಿ ದಯೆ ಬೀರಿತಾಗಳ್‍.
ಬೆರಗಾದನದ ಕಂಡು; ಪುಲಕಮೊಂದಿದನು;
ಕರಗಳನು ಚಾಚಿದನು; ಮರೆತನೆಲ್ಲವನು,
ಪನಿಯುಣ್ಮೆ ಕಂಗಳಲಿ, ಮನದಾಸೆಯುಣ್ಮೆ
ಅನುನಯದ ದನಿಯಿಂದಲಿಂತೆಂದನವನು :-


“ಹಾ! ಪ್ರಿಯಳೆ, ಬಂದೆಯ? ಅದೆತ್ತಣಿಂ ಬಂದೆ?
ಹಾ! ಪ್ರಿಯಳೆ, ತಂದೆಯ? ಅದೇಂ ಮುದವ ತಂದೆ?
ಬಾರೆನ್ನ ಜೀವಿತವೆ, ಬಾರೆನ್ನ ಸಿರಿಯೆ.
ಬಾರೆನ್ನ ಮಮ್‍ತಾಜೆ, ಬಾರೆನ್ನ ನಿಧಿಯೆ.
ಬಂದೆನಗೆ ಕೈ ನೀಡು, ಮೈದಡವು, ನೋಡು;
ನೊಂದಿಹೆನು, ಬೆಂದಿಹೆನು; ಬಂದು ಕಾಪಾಡು."


ಈ ತೆರದಿ ಹಂಬಲಿಸಿ ದೊರೆ ಕರವ ಮುಗಿದು
ಮಾತುಗಳ ನಿಲಿಸಿದನು, ಕಣ್ಣ ಮುಚ್ಚಿದನು
ಕನಸಿನಲಿ ಸೊಗವಡುವನಂತೆ ಮೊಗದೊಳಗೆ
ಇನಿಸು ತಳೆದನು ಶಾಂತಿಯರೆನಗೆಯ ಕಳೆಯ.


ನೋಡಿರಾ ಕನಸಿನೈಸಿರಿಯ ಬೆಳ್ಸರಿಯ
ನೋಡಿರಾಗ್ರಾಪುರದ ಗರುವದಾಸರೆಯ
ನೋಡಿರೊಲವಿನ ಪರಿಯನದರಳಲ ನೊರೆಯ
ನೋಡಿರಾ ಬಿದಿಯನೆದುರಿಪ ನಗೆಯ ನೆರೆಯ
ಪ್ರೇಮಿಗಳ ಮಾನ್ಯತೆಯ ಶಿಲ್ಪಧನ್ಯತೆಯ
ಭೂಮಿಯೊಂದುನ್ನತಿಯ ಕಣ್ಣ ಪುಣ್ಯತೆಯ.

No comments:

Post a Comment