Wednesday 4 October 2023

ಮಾಟಗಾರ - ಕೇತಕೀವನ

ಮಾಟಗಾರನೆ ನಿನ್ನ ಮಾಟಂಗಳಿನಿಸಿರಲು
ಪಿರಿದಿದೆನುತರಿವುದೆಂತೋ ।
ಕೋಟಿ ಬೆರಗುಗಳೆನ್ನ ಮರುಳುವಡಿಸಲದೊಂದ
ಮಿಗಿಲೆನುತ ಬಗೆವುದೆಂತೋ ॥

ಒಡಲ ತಣಿಪುದೆ ಪಿರಿದೊ ಮನವಲೆಪುದೆ ಪಿರಿದೊ
ಮತಿಯ ಮರಿಯಿವುದೆ ಪಿರಿದೋ ।
ಪೊಡವಿಯೊಳು ಬೆಳೆದಿಹುದೊ ಬಾಂದಳದಿ ಬೆಳಗಿಹುದೊ
ಜೀವಿಗಳ ಕೆರಳಿಸಿಹುದೋ ॥

ಪೊಂಬಿಸಿಲೊ ತಂಬೆಲರೊ ತಾರಗೆಯೊ ಕಾರಿರುಳೊ
ಸುರಿಮಳೆಯೊ ಸುಳಿವ ಮುಗಿಲೋ ।
ಪೊನಲ ತೆರೆಗಳ ಪೆಂಪೊ ಬನದ ಪೂಗಳ ಕಂಪೊ
ಪಕ್ಕಿಗಳ ಪಾಡಿನಿಂಪೋ ॥

ಪಸುಳೆಗಳ ಪೊಸನುಡಿಯೊ ಮುಗುದೆಯರ ಮೆಲುನಡೆಯೊ
ಕಲಿತರೋದುಗಳ ಪಡೆಯೋ ।
ಚೆಂದುಟಿಯೊ ನುಣ್ದನಿಯೊ ಕಂಬನಿಯೊ ಕಿರುನಗೆಯೊ
ಪಿರಿಯರಿವಿನ ನಲುಮೆಯೋ ॥

ಮಲೆಯ ಸಾಲಿನ ಬಲುಹೊ ಕಡಲಿನಲೆಗಳ ಸೆಡಕೊ
ಸಿಡಿಲು ಮಿಂಚುಗಳ ಬೆಡಗೋ ।
ಚೆಂದಳಿರೊ ತಣ್ಗದಿರೊ ಪಸಿರೆಲೆಯೊ ಬಿಸಿಬೆಳಕೊ
ಮಿಸುಮಣಲೊ ಮುಸುರ್ವ ನೆರಲೋ ॥

ಚೆಲುಮೊಗದ ಪುಸಿಮುನಿಸೊ ಒಲುಮೆನೋಟದ ಮಿನಿಸೊ
ಬಲುಮೆಯುಬ್ಬರದ ಸೆಣಸೋ ।
ನಲಿದು ಕುಣಿದಾಡುವುದೊ ಮುಳಿದು ಪರಿದೋಡುವುದೊ
ಅಲುಗದುಲಿಯದೆ ಬಾಳ್ವುದೋ ॥

ಇಳೆಯ ಮೈಸಿರಿ ಪಿರಿದೋ ಗಗನದೈಸಿರಿ ಪಿರಿದೊ
ನರನೆದೆಯ ಸುಯಿಲೆ ಪಿರಿದೋ ।
ತಿಳಿಯಲರಿಯದೆ ಮತಿಯು ತೊಳಲುತಿಹುದಿಲ್ಲಲ್ಲಿ
ನೆಲೆ ತೊರೆದ ಮರುಳನಂತೆ ॥

ಒಂದು ಗಳಿಗೆಯಲೊಂದು ದೆಸೆ ತೋರುತಿದೆ ನಿನ್ನ
ಬೆರಳ ಯುಕುತಿಗಳನೆನಗೆ
ಚಿತ್ರಿಗರ ಚಿತ್ರಿಗನೆ ಕವಿಕುಲದ ಕವಿಕಲೆಯೆ
ಸೊಗಸುಗಳ ಸೊಗದ ನೆಲೆಯೇ ॥

To receive the posts on your personal email, pls subscribe to https://groups.google.com/g/todayskagga

No comments:

Post a Comment