Tuesday 10 October 2023

ಮಥನ - ಕೇತಕೀವನ - ಡಿವಿಜಿ

ಮುತ್ತು ಹವಳಗಳಂತೆ
ಅಲ್ಲ ಅಹುದುಗಳು
ಸುತ್ತಿಹುವು ಸರವಾಗಿ
ಎಲ್ಲ ಬಾಳ್ಕೆಯನು.

ಮತಿ ಬೇಡವೆಂಬುದನು
ಮನಸು ಬೇಡುವುದು;
ಮತಿ ಮಾಳ್ಬುದೆಂಬುದನು
ಮನಸೊಲಿಯದಿಹುದು
ಹಿಂದೆ ಬೇಕೆನಿಸಿದುದು
ಇಂದು ಸಾಕಾಯ್ತು;
ಅಂದಿನಾಟಗಳೆಲ್ಲ
ಇಂದು ದಣಿವಾಯ್ತು.

ಗಗನದೆಡೆ ತಿರುಗುವುವು
ನಯನಂಗಳೊಮ್ಮೆ;
ಜಗವಿದುವೆ ಲೇಸೆಂದು
ನಲಿವುವಿನ್ನೊಮ್ಮೆ.
ನಗೆ ಕಣ್ಣೊಳಿರಲೆದೆಯ
ಸುಡುವುದೊಂದುರಿಯು;
ಹೊಗೆಯತ್ತಣಿಂದೊಗೆಯೆ
ತಡೆವುದದ ತುಟಿಯು.

ಭೋಗಿಯಂತೊಮ್ಮೊಮ್ಮೆ,
ಮರುಮರುಗುತೊಮ್ಮೆ,
ಜೋಗಿಯಂತೊಮ್ಮೊಮ್ಮೆ,
ಹರುಷವಡುತೊಮ್ಮೆ,

ಹಿಗ್ಗಿ ಹಿರಿದಾಗುತ್ತೆ,
ಕುಗ್ಗಿ ಕಂದುತ್ತೆ,
ಸರಸದಿಂ ನಲಿಯುತ್ತೆ,
ವಿರತಿಯಾನುತ್ತೆ,

ಬಿಸಿಲಿನಲಿ ದುಡಿಯುತ್ತೆ,
ನೆರಳನರಸುತ್ತೆ,
ಬಯಲಿನಲಿ ಕುಣಿಯುತ್ತೆ,
ಮರೆಯನರಸುತ್ತೆ, 

ಒಂದರಲಿ ನಿಲಲೊಲದೆ
ದ್ವಂದ್ವಗಳ ನಡುವೆ
ಹಿಂದುಮುಂದಲೆದಾಡಿ
ನೊಂದಿಹೆನು ಬರಿದೆ.

ಸಾಕುಬೇಕುಗಳೆಂಬ,
ಇಂತು ಅಂತೆಂಬ,
ಲೋಕದಾಸೆಗಳೆಂಬ,
ಸಂದೆಯಗಳೆಂಬ, 
ದೇವದಾನವರುರುಬು-
ವೊಡಲ ಕಡಲಿನಲಿ
ಜೀವ ಮಂದರಗಿರಿಯ
ಕಡೆಯೆ ಬಿರುಬಿನಲಿ, 
ದೊರೆಕೊಳ್ವ ಪುರುಳೇನೊ
ಬಿಸವೊ ಮೇಣ್‍ ಸೊದೆಯೋ!
ದೊರೆವನ್ನೆಗಂ ಸೈಸಿ
ಬಸವಳಿಯರಾರೋ!

No comments:

Post a Comment