“ಏರುವೆನದೃಶ್ಯರ್ಪತವ; ಬುದ್ಧಿಸ್ಥಲವ
ಸೇರುವೆನು; ಸಕಲರ್ಗಮಾಶಿಪೆನು ಮಂಗಲವ.
ಬುದ್ಧನ ದಯಾವೀಕ್ಷೆಯಲಿ ನಾಳೆ ಶಾಂತಿಯಲಿ
ನಿದ್ರಿಸಿರೆ ನಾನ್. ಎನ್ನ ಕಾಡನಾವನುಮ್ ಅಲ್ಲಿ.
ಓ ಧರೆಯ ಧಾರ್ಮಿಕರೆ, ನೈಜದಿಂದೇಷಿಯವು
ಸಾಧುವೆಂದರಿಯಿರೇಂ? ಕಟುಕರೆಡೆಯಲ್ಲವದು.
ಕ್ರೂರಿಗಳ್ ಜಾಪ್ಯರೇನಲ್ಲ; ನಿಮ್ಮೊಳ್ತನಕೆ
ತೋರುವರ್ ಕೆಳೆತನವ; ನಲುಮೆಯೊಳ್ಳಿತು ಜಗಕೆ.”
-ಇಂತೊರೆದನಾ ವೀರ ಟೋಜೋ, ಜಪಾನ್ ಸಚಿವ-
ನಂತಿಮ ಕ್ಷಣದಿ, ಪಗೆ ತನಗಿಡಲ್ ಉರುಳ್‍ಸರವ.
ಸ್ವೀಯ ರಾಷ್ಟ್ರೌನ್ನತ್ಯಕುಬ್ಬಿದಾ ವ್ಯಾಮೋಹ-
ವಾಯಿತರಿರಾಷ್ಟ್ರದೃಷ್ಟಿಯಲಿ ವಿಶ್ವದ್ರೋಹ.
ಅವರೆಸಗದಿರ್ದುದೇನ್? ಏನಾ ಜಯೋಪಾಯ?
ಬವರದೊಳ್ ನ್ಯಾಯ ಜವನಿಗೆ ತೆತ್ತ ಸಂದಾಯ.
ಶುದ್ಧ ನಾಂ ದೋಷಿ ನೀನೆಂಬ ನೀತಿಯ ಗಡಣೆ
ಯುದ್ಧವೆಂಬನ್ಯೋನ್ಯವಧೆಯಡುಗೆಯೊಗ್ಗರಣೆ.
ಓ ಹಿರೋಷಿಮ ಭಕ್ಷಿ, ನೋಡು ನಿನ್ನಮೆರಿಕವ;
ದ್ರೋಹಿಯಾರದ್ರೋಹಿ ಯಾರು, ಪೇಳ್ ನೀಂ ದಿಟವ,
ಓ ಗುಟ್ಟಿನಣುಭೂತ, ನೀನಂಧಕಾಸುರನೊ!
ನಾಣ್ಗೆಟ್ಟ ಲೋಕಕ್ಕೆ ತಕ್ಕಂತ್ಯಶಿಕ್ಷಕನೊ!
**********************************
ಟೋಜೋ ಹಿಡೆಕಿಯು ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಜಪಾನಿನ ಪ್ರಧಾನಮಂತ್ರಿಯಾಗಿದ್ದ ಮಹತ್ತ್ವಾಕಾಂಕ್ಷೆಯ ರಾಜನೀತಿಜ್ಞ. ಮಿಲಿಟರಿಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ,ಜಪಾನಿನ ಆಡಳಿತವನ್ನು ವಶಕ್ಕೆ ಪಡೆದವನು. ಟೋಜೋ ಹಿಡೆಕಿ ಜನಿಸಿದ್ದು, ೩೦ -೧೨- ೧೮೮೪ ರಲ್ಲಿ. ಎರಡನೆಯ ಮಹಾಯುದ್ಧದ ಮಾರಣಹೋಮಕ್ಕೆ ಕಾರಣನಾದವನೆಂಬ ಆಪಾದನೆಯಿಂದ ೧೯೪೮ರ ಡಿಸೆಂಬರ್ ೨೩ರಂದು ಗಲ್ಲಿಗೇರಿಸಲ್ಪಟ್ಟರು.
ಗಲ್ಲು ಶಿಕ್ಷೆಯು ನಿಗದಿಯಾದ ಸಮಯದಲ್ಲಿ ೨೨ - ೧೨ -೧೯೪೮ರಂದು ಟೋಜೋವಿನ ಕೊನೆಯ ಮಾತುಗಳು ಡಿವಿಜಿಯವರ ನುಡಿಗಳಲ್ಲಿ
"ಯಾರೂ ಕಾಣದಂತೆ ಅದೃಶ್ಯಪರ್ವತವನ್ನೇರುವೆನು. ಬುದ್ಧನ ಆರಾಧನೆಯ ನಾಡಲ್ಲಿ ಜನಿಸಿ ಬಾಳಿದರೂ ಬುದ್ಧಿಸ್ಥಲವನ್ನರಸದೆ, ಮಾನವಹತ್ಯೆಗೆ ಕಾರಣನಾಗಿ ಇದೀಗ ಬಲು ತಡವಾಗಿ ಬುದ್ಧಿಸ್ಥಳವನ್ನರಸುತ್ತಾ ಕಾಣದ ಲೋಕಕ್ಕೆ ಪಯಣಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯತೆ."
"ಸಕಲರಿಗೂ ಒಳಿತಾಗಲಿ ಮಂಗಲವಾಗಲಿ ಎಂದು ಆಶಿಸುತ್ತಾ ಹೊರಟಿರುವೆನು."
"ಬುದ್ಧನ ದಯಾಪೂರ್ಣ ಕಟಾಕ್ಷವನ್ನು ನಿರೀಕ್ಷಿಸುತ್ತಾ ಚಿರನಿದ್ದೆಯನ್ನು ಬಯಸುತ್ತೇನೆ." "ಶಾಂತಿಯನ್ನರಸುತ್ತಾ ನಿದ್ರಿಸಬಯಸುತ್ತೇನೆ. ನಾನು ಶಾಂತವಾಗಿ ನಿದ್ರಿಸುತ್ತಿರುವಾಗ ಅಲ್ಲಿ ನನ್ನನ್ನು ಯಾರೂ ಕಾಡಲಾರರು." ನೇಣನ್ನೇರಿದ ಮೇಲೆ ತನಗೆ ಶಾಂತಿ ಸಿಗಲೆಂದು ಟೋಜೋ ಪ್ರಾರ್ಥಿಸುತ್ತಾನೆ.
ಟೋಜೋ ಹಿಡೆಕಿಯ ಕೊನೆಯ ಮಾತು ಏನಾಗಿತ್ತೆಂದು ಡಿವಿಜಿಯವರಿಂದ ಆಲಿಸೋಣ
"ಏಷಿಯಾ ಧರೆಯಭೂಭಾಗದ ಜನರೆಲ್ಲರೂ ಸಾಧು ಸಜ್ಜನರು ಎಂಬುದನ್ನು ಧಾರ್ಮಿಕರು ಅರಿತವರಲ್ಲವೇ!? ಕಟುಕರಂತಹ ಜನರು ಏಷಿಯಾದವರಲ್ಲ. ಬುದ್ಧನಂತಹ ದಯಾವಂತರ ನಾಡು ಏಷಿಯಾ. ಈ ನಾಡಿನ ಜನರು ಕ್ರೂರಿಗಳಲ್ಲ. ಜಗತ್ತಿನ ಜನರ ಒಳಿತನ್ನು ಬಯಸುವವರಾಗಿ ಎಲ್ಲರೊಡನೆ ಗೆಳೆತನ ಬಯಸುವವರು ಏಷಿಯದವರು. ಪ್ರೀತಿ ಸ್ನೇಹ ಗೆಳೆತನವು ಜಗತ್ತಿಗೆ ಒಳಿತು. ದ್ವೇಷ ಸ್ವಾರ್ಥ ಯುದ್ಧ ರಣರಂಗವು ಒಳಿತಲ್ಲ."
ತನ್ನ ಕೊರಳಿಗೆ ನೇಣಿನ ಕುಣಿಕೆಯನ್ನಿಡುವ ಅಂತಿಮಕ್ಷಣದ ಸಮಯದಲ್ಲಿ ಹೀಗೆಂದು ಜಪಾನಿನ ಮಿಲಿಟರಿ ಸಾರ್ವಭೌಮ ಪ್ರಧಾನಿ ಟೋಜೋ ಜಗತ್ತು ಕೇಳಲೆಂದು ಹೀಗೆಂದು ನುಡಿದನು. "ನನ್ನ ರಾಷ್ಟ್ರದ ಔನ್ನತ್ಯದ ವ್ಯಾಮೋಹದಿಂದ ವಿಶ್ವಸಮರದ ರಣರಂಗದ ಕೆನ್ನೀರ ವಿಪ್ಲವಕ್ಕೆ ಕಾರಣನಾಗಿ, ವಿಶ್ವದ್ರೋಹವನ್ನೆಸಗಿದವನೆಂದು ಶತ್ರುರಾಷ್ಟ್ರದ ದೃಷ್ಟಿಯಿಂದ ಬಲಿಯಾಗುವುದು ಅನಿವಾರ್ಯವಾಯಿತು."
"ಶತ್ರುರಾಷ್ಟ್ರದವರು ಮಾನವಹತ್ಯೆ ಮಾಡಿಲ್ಲವೇ! ರಣರಂಗದಲ್ಲಿ ವಿಜಯಸಾಧನೆಯ ದಾರಿಯಲ್ಲಿ ವೀರನಿಗೆ, ಸೈನಿಕನಿಗೆ ನ್ಯಾಯ ಅನ್ಯಾಯಗಳ ತುಲನೆಲೆಗೆಲ್ಲಿದೆ ಬೆಲೆ?
ರಣರಂಗದಲ್ಲಿ ನ್ಯಾಯವೆಂಬುದು ಯಮನಿಗೆ ನೀಡುವ ಬಲಿಯೇ ಸರಿ! ರಣರಂಗದಲ್ಲಿ, ಯಾರು ಶುದ್ಧ, ಯಾರು ಅಶುದ್ಧರು , ಯಾರು ಅನ್ಯಾಯವೆಂದು ಹೇಳಲಾಗದು. ಪರಸ್ಪರ ಕೊಚ್ಚಿಹರಗುವ ಸೌನಿಕನ ಅಡುಗೆಯ ಪಾಕದಲ್ಲಿ ನ್ಯಾಯ ಅನ್ಯಾಯವೆಂಬ ಮಾತು ಅಡುಗೆಯ ಕೊನೆಗೆ ಚಟಪಟಿಸುವ ಒಗ್ಗರಣೆಯಾದೀತು."
"ಓ, ಹಿರೋಷಿಮಾದ ರಾಜಭವನದ ಭಕ್ಷಿ! ಅಮೆರಿಕವನ್ನು ನೋಡು! ಯಾರು ದ್ರೋಹಿ!? ಯಾರ ದ್ರೋಹಿ? ತಥ್ಯವನ್ನು ನೀನೇ ಯೋಚಿಸು. ಅಣುಸಮರದ ಮಹಾಭೂತವಾಗಿ ಒಕ್ಕರಿಸಿದ ಆಟಂಬಾಂಬಿನ ಕಣಗಳು ಉತ್ತರಿಸಲಾರವು. ನೀನು ಕಣ್ಣಿದ್ದೂ ಕುರುಡನಾದ ಅಂಧಕಾಸುರನೇ!? ನಾಚಿಕೆಬಿಟ್ಟ ಮರ್ಯಾದೆಗೆಟ್ಟ ಲೋಕಕ್ಕೆ ತಕ್ಕಪಾಠ ಕಲಿಸಹೊರಟ ಶಿಕ್ಷಕನೋ ಕಾಲವೇ ಉತ್ತರಿಸಬೇಕು"
ಭಾವಗ್ರಹಣ: ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
No comments:
Post a Comment