ಕೋಟೆಗಲ್ಲಿನ ರಾಣಿ, ಕಾಳಾಹಿ ವೇಣಿ,
ಘೋಟಕ ಶ್ರೋಣಿ, ಓ ಕೂರ್ಪು ಕಟ್ಟಾಣಿ
ಓ ಶಾಮಲಾಂಗ ಸುಂದರಿ, ನೀನದಾರು?
ಹಾಸ್ಯವಿಲಸಿತ ನಯನದರ್ಪೆ ನೀನಾರು?
ನೀನಾರೊ ನಾನಾರೊ ಹೊಗೆಬಂಡಿ ನಿಲ್ವ
ತಾಣದೊಳದೇಂ ಚೇಷ್ಟೆಯಾಗಿಸಿತೊ ದೈವ!
ನಾನಲ್ಲಿ ಸೇರ್ದಂದು ನೀನಿರ್ದುದೇಕೆ?
ನನ್ನ ಕಣ್ ನಿನ್ನ ಕಣ್ ಒಂದಾದುದೇಕೆ?
ಪಯಣದಾಯಸವ ನಾಂ ನಸು ನೀಗಲೆಂದು?
ಬಯಸಿ ಹೊಸ ನೋಟವನು ಬಂಡಿಯಿಂದಿಳಿದು
ದೃಷ್ಟಿಗಳ ಪಸರಿಸುತಲತ್ತಿತ್ತ ತಿರುಗೆ,
ದಿಟ್ಟತನದವಳೆ, ನೀಂ ಕಣ್ಗೊದಗಬೇಕೆ?
ಏನು ನಿನ್ನಾ ಬೆಡಗದೇನು ಕಣ್ಮಿಂಚು!
ಏನು ನಡಿಗೆಯ ಠೀವಿಯೇನು ನಗುಸಂಚು!
ಮುಗಿಲ ತೆಳುಗಪ್ಪು ಮೈ, ಮೈಕಟ್ಟಿನೊಪ್ಪು,
ಅಗಲ ಮುಖ, ಮುಂಗುರುಳ ಮಿರುಮಿರುಗು ಕಪ್ಪು
ಒಡವೆಯೊಂದಿಲ್ಲ; ಉಡಿಗೆಯ ಡಂಭವಿಲ್ಲ;
ನಿಡುಜಡೆಯ ಮೇಲ್ಮುಡಿದ ಹೂವೆ ತೊಡವೆಲ್ಲ.
ಕಣ್ಣ ಹೊಳಹೊಳಪು, ಹುಸಿ ಮುಸಿನಗೆಯ ಸುಳಿವು
ನುಣ್ಣ ನಿಡುತೋಳ್ ಬೀಸು, ನೀಳೊಡಲ ನಿಲುವು
ಈ ಸೊಬಗಿನಿಂದೆನ್ನ ಕಣ್ಮನವ ನೀನು
ಕೈಸೆರೆಯ ಪಿಡಿದು ಗಳಿಸಿದ ಲಾಭವೇನು?
ನಿನ್ನೆಡೆಗೆ ನನ್ನ ಕಣ್ ಪರಿದಾಗ ನೀನು
ಕಣ್ಣಿನೆಡಹುಬ್ಬ ಹಾರಿಸಿದ ಗುಟ್ಟೇನು?
ಕಡೆಗೇನೊ ನೆವದಿಂದ ನೀನೆನ್ನ ಬಳಿಗೆ
ಸಡಗರದಿ ನುಗ್ಗಿಬರಲೆನ್ನ ಕೈ ನಿನಗೆ
ತಗುಲಲೆನ್ನಂಕ್ಷಮಿಪುದೆಂದ ನಯವೇನು?
ದ್ವಿಗುಣ ನಾಂ ಕ್ಷಮೆ ಬೇಡೆ ನೀಂ ನಕ್ಕುದೇನು?
ಬಳಿಕ ನೀಂ ತೆರಳೆ ನಾನನುಸರಿಸಿ ನಡೆದು
ಬಳಿನಿಂತು ವಂದಿಸಲು ನೋಡಿ ನೀಂ ಬಿಗಿದು
ಹೊರಡುವುದದೋ ಬಂಡಿಯೆಂದ ಬಿರುಸೇನು?
ಸರಸಕಾ ಒರಟುತನವಷ್ಟೆ ಕೊನೆಯೇನು?
ಕಲ್ಲೆದೆಯ ಕಾಮಬ್ಬೆ, ಬೆಡಗು ಭೂತಬ್ಬೆ,
ಕೊಲ್ಲುವೆಯ ಯುವಕರನು ಕರೆದು ರಸವುಬ್ಬೆ?
ಕೊರೆದೆಯಲೆ ನಿನ್ನ ಕಟು ಭಾವಚಿತ್ರವನು,
ಅರಿಯದೆನ್ನೆದೆಯ ಹಲಗೆಯಲಿ ಗಾಯವನು
ಬಿನದ ನಿನಗೇನೊ ಅದು! ಎನಗದುನ್ಮಾದ,
ನೆನಪಿನಲಿ ಮುಳ್ಳಾಯ್ತು ನಿನ್ನ ಪ್ರಸಾದ.
************************
ಉಗಿಬಂಡಿ ಪಯಣದ ಸಮಯದಲ್ಲಿ ಕೋಟಗಲ್ಲಿನ ರೈಲು ನಿಲ್ದಾಣದಲ್ಲಿ ಒಂದಿನಿತುಹೊತ್ತು ರೈಲು ನಿಂತಾಗ ಕಣ್ಸೆಳೆದು ಮಾಯವಾದ ಕಾಳಾಹಿವೇಣಿಯ ಚಿತ್ರವು ಕವಿಯ ಮನದಲ್ಲಿ ಕಾಡುತ್ತಲೇ ಇದೆ.
ಕೋಟೆಗಲ್ಲಿನಲ್ಲಿ ಮಿಂಚಿದಂತೆ ಕಣ್ಸೆಳೆದು ಕಾಡುತ್ತಿರುವ ಸುಂದರಿಯು ಕಾಳಸರ್ಪದಂತಹ ಶ್ಯಾಮಲವಾದ ಉದ್ದನ್ನೆಯ ಜಡೆಯಿಂದ ಶೋಭಿಸುತ್ತಿದ್ದಾಳೆ. ಕೆನೆಯುತ್ತ ಹಾರಾಡುವ ಕುದುರೆಯ ನಡುವಿನಂತಹ ಬಳುಕುವ ಸೊಂಟದಿಂದೊಪ್ಪುವ ಕೋಟೆಗಲ್ಲಿನ ರಾಣಿಯು ಒನಪು ವಯ್ಯಾರಗಳಿಂದ ಚೆಲುವೆಕಟ್ಟಾಣಿ!.
ಕವಿಯು ಕಾಳಾಹಿವೇಣಿಯನ್ನು (ಕಾಳಿಂಗಸರ್ಪವನ್ನ ಹೋಲುವ ಜಡೆಯವಳು) ಸ್ಮರಿಸುತ್ತಾ, ನೀಳಕಾಯದ ನೀಳವೇಣಿ! ಶ್ಯಾಮಲಾಂಗಿಯಾದ ಸೌಂದರ್ಯರಾಣಿ! ನೀನಾರು? ತುಂಟನಗೆಯ ವಿಶಾಲಾಕ್ಷಿಯೇ ನೀನಾರೆಂದು ಕೌತುಕವೆನಗೆ!
ನೀನಾರೆಂದು ತಿಳಿವಿಲ್ಲ. ನಾನಾರೆಂದು ನಿನಗೂ ಅರಿವಿಲ್ಲ. ಉಗಿಬಂಡಿ ನಿಲ್ದಾಣದಲ್ಲಿ ದೈವವೇ ನಮ್ಮಿಬ್ಬರನು ಸಂಧಿಸುವ ಚೇಷ್ಟೆಯಾಡಿಸಿತು. ನಾನು ಹೊಗೆಬಂಡಿ ನಿಲ್ದಾಣದಲ್ಲಿದ್ದಾಗ ನೀನೇಕೆ ಆಗಸದ ಚಿಕ್ಕೆಯಂತೇಕೆ ಕಾಣಿಸಿಕೊಂಡೆ! ನಮ್ಮ ಕಂಗಳೇಕೆ ಒಂದಾದವು?
ರೈಲುಪಯಣದ ಆಯಾಸವನ್ನು ಒಂದಿನಿತು ಪರಿಹರಿಸಿಕೊಂಡು ಹಾಯೆನ್ನಿಸಿಕೊಳ್ಳಲು ಒಂದಿನಿತು ಆ ಊರಿನ ಹೊಸನೋಟವನ್ನು ಬಯಸಿ ಬಂಡಿಯಿಂದಿಳಿದೆ. ಹಾಗೆ ಸುಮ್ಮನೆ ಅತ್ತಿತ್ತ ನೋಡುತ್ತಿರಲು, ತುಂಟನಗುವಿನ ಬೊಗಸೆಕಂಗಳ ನಿನ್ನ ಕಂಗಳ ತುಂಟನೋಟವು ನನ್ನೆಡೆಗೆ ತೂರಿಬರಬೇಕೇ?
ಮಿಂಚಿನಲಗಿನಂತಹ ಚಂಚಲನೋಟದ ನಿನ್ನ ಸೌಂದರ್ಯದ ಬೆಡಗನ್ನು ಬಣ್ಣಿಸಲಾಗದು! ಅದೇನು ಬಿಂಕದ ಸಿಂಗಾರಿಯಂತಹ ಠೀವಿಯ ನಡುಗೆಯದು! ತುಂಟತನದಿಂದ ಯುವಕರ ಮನಸ್ಸನ್ನು ಹುಚ್ಚೆಬ್ಬಿಸುವ ನಗೆಸಂಚನ್ನು ಕಂಡರೆ ಅದೂ ನಿನ್ನ ಸೊಬಗಿನ ಸೌಂದರ್ಯದಮಿನುಗು ಮಿಂಚು!. ತಿಳಿಮುಗಿಲಿನಂತಹ ನಸುಗಪ್ಪಿನ ತನುಸೌಂದರ್ಯವು ನಿನ್ನ ತೊನೆದಾಡುವ ಯೌವನದ ಮೈಕಟ್ಟಿಗೊಪ್ಪುವಂತಿದೆ.
ವಿಶಾಲವಾದ ನಿನ್ನ ಮೊಗದಾವರೆಗೆ ಮಿರಿಮಿರಿ ಮಿಂಚುವ ಕಸ್ತೂರಿಯಂತಹ ಮುಂಗುರುಳು ಚೆಲುವನ್ನು ಕುಣಿಸುತ್ತದೆ.
ನಿರಾಭರಣ ಸುಂದರಿಯಾದ ಉಡುಗೆ ತೊಡುಗೆಗಳಲ್ಲಿ ಆಡಂಬರವಿಲ್ಲ. ನೀಳವಾದ ನೀಲವೇಣಿಗೆ ಮುಡಿದ ಹೂವೇ ನಿನ್ನ ಅಲಂಕರಣದ ಆಭೂಷಣವು !
ಮಿಂಚಿಮಿನುಗುವ ಕಣ್ಣುಗಳು! ಹುಸಿನಗೆಯ ಕಳ್ಳನೋಟದ ತುಂಟತನ!
ನಯವಾದ ನೀಳವಾದ ತೋಳುಗಳ ಬೀಸಿ ನಡೆಯುವ ಭಂಗಿ! ನೀಳವಾದ ನಿಲುವಿನ ಚೆಲುವಿನ ಸುಗ್ಗಿ ನೀನು!
ಇಂತಹ ರೂಪರಾಶಿಯಿಂದ ನೀನು ನನ್ನ ಕಣ್ಮನಗಳನ್ನು ಸೆರೆಹಿಡಿದೆ. ಗಳಿಸಿದ ಲಾಭವಾದರೂ ಏನು?
ನಿನ್ನೆಡಗೆ ನನ್ನ ಕಣ್ಣನೋಟ ಹರಿದಾಗ ನೀನು ಕಣ್ಣ ಎಡಹುಬ್ಬನ್ನು ಹಾರಿಸಿದ ಗುಟ್ಟು ಏನೆಂದು ಅರಿಯದಾದೆ. ಕನ್ನೆಗೆ ಎಡಹುಬ್ಬು ಹಾರಿದರೆ ಶುಭವಲ್ಲ ಎಂಬುದು ನಂಬುಗೆ.
ಏನೋ ಕಾರಣವೊಡ್ಡಿ ನೀನೆಲ್ಲ ಬಳಿಬಂದೆ. ನಾನು ಸಡಗರ ಸಂಭ್ರಮಗಳಿಂದ ನಿನ್ನಬಳಿಗೆ ನುಗ್ಗಿಬರುತಿರಲು, ನನ್ನ ಕೈ ನಿನ್ನನ್ನು ಸ್ಪರ್ಶಿಸಿತು. ಆಗ ನೀನೇ "ಕ್ಷಮಿಸಿ" ಎಂದು ನುಡಿದ ಮಾತಲ್ಲಿ ವಿನಮ್ರತೆಯು ನಾಚಿ ನಿಂತಿತ್ತು! ಪ್ರತಿಯಾಗಿ ನಾನು ಎರಡೆರಡುಬಾರಿ ಕ್ಷಮೆ ಕೋರಿದಾಗ ನೀನು ಕಿಸಕ್ಕನೆ ನಕ್ಕಿದ್ದರ ರಹಸ್ಯವೇನು!?
ನೀನತ್ತ ತೆರಳಿದೆ. ನೀನತ್ತ ನಡೆಯುವಾಗ ನಿನ್ನನ್ನು ಹಿಂಬಾಲಿಸಿ ಬಂದು, ನಿನ್ನ ಸನಿಹದಿ ನಿಂತು ವಂದಿಸುತ್ತಿರುವಾಗಲೇ, ಸಮಯವಾಯಿತು. ಸೀಟಿಯೂದಿತು. ಬಂಡಿಹೊರಡುತ್ತದೆ ಎಂದು ಬಿರುಸಾಗಿ ನಡೆದೆ. ಒರಟುತನದಿಂದ ಕಣ್ಮುಚ್ಚಾಲೆಯಾಟದಂತೆ ಟಾಟಾ ಹೇಳಿ ಹೊರಟುಹೋಗುವದು ನಿನ್ನಲ್ಲಿರುವ ಸರಸತನಕ್ಕೆ ಸರಿಹೊಂದುವುದೇ!?
ಕಾಮದೇವನಿಗೆ ಅಬ್ಬೆಯಿರುತ್ತಿದ್ದರೆ ನಿನ್ನಂತೆ ಇರುತಿದ್ದಳು, ಆದರೆ ನಿನ್ನಂತಹ ನಿರ್ದಯಿ ಕಲ್ಲೆದೆಯವಳಾಗಿರುತ್ತಿರಲಿಲ್ಲ! ಬೆಡಗುಗಾತಿಯಾದರೂ ನೀನು ಭೂತದಂತೆ ಕಾಡುತ್ತಿರುವೆ. ಮೋಹಿನಿಯಂತೆ ಯುವಕರನು ಬಳಿಕರೆದು ರಸೋತ್ಕರ್ಷಕ್ಕೆ ಕಾರಣವಾಗಿ ಯುವಕರನ್ನು ಜೀವಂತವಾಗಿ ಕೊಲ್ಲುವಂತೆ ಕಾಡುವೆಯೇಕೆ?
ನಿನ್ನ ಕಟುವಾದ ಕರಾಳವಾದ ಭಾವಚಿತ್ರವನ್ನು ನನ್ನ ಹೃದಯ ಹಲಗೆಯಲ್ಲಿ ಕೊರೆದು ಘಾಸಿಗೊಳಿಸಿದೆ. ನನ್ನ ಎದೆಯ ಗಾಯದ ನೋವನ್ನು ನೀನೆಂತು ಬಲ್ಲೆ?
ನನ್ನ ಹೃದಯವನ್ನು ಕೊರೆದು ಘಾತಿಸುವುದು ನಿನಗೇನೋ ತಮಾಷೆ, ವಿನೋದವಾಗಿರಬಹುದು. ಆದರೆ ನನಗೆ ಅದು ಉನ್ಮಾದಕ್ಕೆ ಕಾರಣವಾಯಿತು. ನಿನ್ನ ಹಸ್ತದ ಆ ದಿವ್ಯ ಸ್ಪರ್ಶಪ್ರಸಾದವು ನನಗೆ ಪ್ರಸನ್ನತೆಯನ್ನು ನೀಡುವ ಅಮೃತವಾಗಲಿಲ್ಲ. ಹೃದಯವನ್ನು ಚುಚ್ಚಿದ ಮುಳ್ಳಾಯಿತು. ನಿನ್ನ ತುಂಟನಗು ನನಗೆ ಪ್ರಸಾದವಾಗುವ ಬದಲು,ಮನವನ್ನು ಇರಿಯುವ ಮುಳ್ಳಾಯಿತು.
ಭಾವಾನುವಾದ ಹಾಗೂ ದನಿ: ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
No comments:
Post a Comment