Monday, 18 December 2023

ರಂಗಸೆಟ್ಟಿ - ಕೇತಕೀವನ - ಡಿವಿಜಿ

ಪುರದ ಧನಿಕರಲಿ ಮೊದಲಿಗರವನ ಜನರು 
ಮರೆಯದಿರುವಂತೆಸಗಲೆಂದವನ ಸುತರು 
ಹೊಸ ಮಹಡಿಮನೆಯ ಕಟ್ಟಿಸಿ ಕಲಶವಿಟ್ಟು 
ಹಸನಾದ ಮನೆಸಾಲೆಗತ್ತಲೆಡೆಬಿಟ್ಟು 
ಕೆಂಪುಶೆಟ್ಟಿಯ ಬೀದಿಯೆಂದು ಹೆಸರಿಟ್ಟರ್‍ 
ಪೆಂಪಿನಿಂದದು ಬೆಳೆವುದೆಂದಾಸೆಪಟ್ಟರ್‍. 

ಹರದಾರಿಯುದ್ದವಿರ್ಕೆಲದಿ ಮನೆಮಠಗಳ್‍ 
ಅರವಟಿಗೆ ಸತ್ರಗಳು ಗುಡಿಗಳಂಗಳಗಳ್‍ 
ಬರುವ ಹೋಗುವ ಜನದ ತಂಡತಂಡಗಳು 
ತುರು ಕರುಗಳಾಳುಕಾಳುಗಳು ಬಂಡಿಗಳು 
ನಗುಗಳಾಟಗಳು ಮೆರೆತಗಳು ಮೇಳಗಳು 
ರಗಳೆಗಳು ಜಗಳಗಳು ಕೂಗುಗೋಳುಗಳು 
ಈ ಪರಿಯ ಜೀವಕಳೆಯಿಂದಲಾ ಬೀದಿ 
ಆ ಪುರಕೆ ತಿಲಕವಹುದೆಂದವರು ಬಗೆದರ್‍. 

ಇಂದು ನೋಡಾ ಮಹಡಿಮನೆಯತ್ತಲಿಲ್ಲ 
ಮಂದಿರದ ಸಾಲ್ಗಳಾ ಕೆಲದಿ ಬೆಳೆದಿಲ್ಲ. 
ಅಲ್ಲಿ ನರಜಂತುಗಳ ಹೆಜ್ಜೆಯೂರಿಲ್ಲ. 
ಫುಲ್ಲಸುಮದಿಂ ಬಳುಕುವುದ್ಯಾನವಿಲ್ಲ 
ಗೊಬ್ಬರದ ನಾತಗಳು ಕಸದ ರಾಶಿಗಳು 
ಉಬ್ಬಿಕೊಂಡಿಹುವಲ್ಲಿ ಹೊಲಸು ಹಾಳುಗಳು. 
ನೋಡಲ್ಲಿ ಲಾಲ್‍ಬಾಗಿಗನತಿದೂರದಲಿ 
ಬೀಡುಬಯಲಿನೊಳೊಂದು ಕಂಬ ನಿಂದಿಹುದು 
ನಾಚಿಕೆಯ ನೀಗಿ ತಾಳಿಹುದು ಪಾಳ್ಮೊಗವ 
ಸೂಚಿಸುತ ನರಯಶಃಕಾಮನೆಯ ಫಲವ 
ಅದರ ನೆತ್ತಿಯ ಶಿಲಾಶಾಸನವ ಪಠಿಸು 
ಹುದುಗಿಹುದು ಕೆಂಪುಶೆಟ್ಟಿಯ ಬೀದಿಕನಸು.

*********

ನಗರದಲ್ಲಿ ಹೆಸರಾದ ಧನಿಕರಲ್ಲಿ ರಂಗಸೆಟ್ಟಿಯಹೆಸರು ಮೊದಲ ಪಂಕ್ತಿಯದು. ಸೆಟ್ಟರ ಹೆಸರನ್ನು  ಜನರು ಮರೆಯದೆ ಮೆರೆಯ ಬೇಕೆಂಬ  ಹಂಬಲದಿಂದ ಸೆಟ್ಟಿಯ ಮಕ್ಕಳು  ಸೇರಿ  ಬಲುದೊಡ್ಡ ಮಹಡಿಮನೆಯನ್ನು ಕಟ್ಟಿಸಿದರು‌.  ಮನೆಗಾನಿಸಿದಂತೆ  ಕಲಶವೇರಿಸಿದ  ಪುಟ್ಟ ಗುಡಿಯನ್ನೂ ಕಟ್ಟಿಸಿದರು.  ಅರಮನೆಯಂತೆ ಕಂಗೊಳಿಸುವ ವಿಲಾಸೀ  ಬಂಗಲೆಯು  ನೋಡುಗರ ಕಣ್ಣುಕೋರೈಸುವಂತೆ  ತಲೆಎತ್ತಿತು.

 ಸೆಟ್ಟರ ಮನೆ ಅಕ್ಕಪಕ್ಕಗಳಲ್ಲಿ  ವಿಶಾಲವಾದ ಬೀದಿಗಳಾಗಿ ಸ್ಥಳಾವಕಾಶವನ್ನು  'ಕೆಂಪುಶೆಟ್ಟಿಯಬೀದಿ' ಎಂದು ಬೀದಿಗಳಿಗೆ ನಾಮಕರಣವಾಯಿತು.

ಆ ಬೀದಿಗಳು  ವ್ಯಾಪಾರಿಗಳ ಅಂಗಡಿಗಳಿಂದ ಕಿಕ್ಕಿರಿದು ತುಂಬಿ ಬೀದಿಯ ಹೆಸರಿನೊಂದಿಗೆ ಸೆಟ್ಟರ ಘನತೆ ಗೌರವಗಳಿಗೆ ಗರಿಮೂಡುವುದೆಂದು ಸೆಟ್ಟರ ಮಕ್ಕಳ ಚಿಂತನೆಯಿತ್ತು.

 (ಸೆಟ್ಟರಹೆಸರಿನೊಂದಿಗೆ ಬೀದಿಗಳು ಬೆಳೆಯುವುದರೊಡನೆ ತಮ್ಮ ಒಳಹಿತಾಸಕ್ತಿಯು ಕೈಗೂಡುವುದೆಂಬ ಲೆಕ್ಕಾಚಾರ ಸೆಟ್ಟರ ಮಕ್ಕಳಿಗುತ್ತು ಎಂದು ಹೇಳಬೇಕಿಲ್ಲ.)  

    ಸೆಟ್ಟರ ಮನೆಯ ಇಕ್ಕೆಲದ ಬೀದಿಗಳು ಸುಮಾರು ಎರಡುಮೂರು ಮೈಲುಗಳಷ್ಟು ವಿಸ್ತರಿಸಬಹುದಾದಷ್ಟು ವಿಶಾಲ. ಈ ಬೀದಿಗಳ ಉದ್ದಗಲಕ್ಕೂ ಮನೆಮಠಗಳು, ಅರವಟ್ಟಿಕೆಗಳು, ಗುಡಿಗುಂಡಾರಗಳು, ಧರ್ಮಛತ್ರಗಳಿಂದ ಕಿಕ್ಕಿರಿದು ತುಂಬಿ ಸದಾ ಕಾಲ ಜನರಿಂದ ಕಿಕ್ಕಿರಿದು ತಂದೆಯ ಹೆಸರು  ಅಜರಾಮರವಾಗುದು ಮಾತ್ರವಲ್ಲದೆ, ತಾವೂ ಅನಾಯಾಸವಾಗಿ ಹೆಸರು ಮತ್ತು ಗಳಿಕೆಯನ್ನು ಒಟ್ಟಿಗೆ ಸಂಪಾದಿಸಬಹುದೆಂದು ಲೆಕ್ಕಿಸಿದ್ದರು.

 ಜನಜಾನುವಾರು, ಆಳುಕಾಳುಗಳು, ಓಡಾಡುವ ಬಂಡಿಗಳಿಂದ ಜನರ ವ್ಯವಹಾರ, ವ್ಯಾಪಾರಾದಿಗಳಿಂದ ಬಿಡುವಿಲ್ಲದ ಜನಸಂದಣಿಯಿಂದ  ನಗು ಉಲ್ಲಾಸ, ಮೆರೆತಗಳಿಂದ ಗಜಿಬಿಜಿಯಾದ ಜನಜೀವನದ ನಡುವೆ ರಗಳೆಗಳು, ಒಳಜಗಳಗಳು, ಕೂಗುಗೋಳುಗಳಿಂದ  ಬೀದಿಗಳು ಎಂದೆಂದೂ ಜೀವಕಳೆಯಿಂದ ನಗರಕ್ಕೆ ತಿಲಕಪ್ರಾಯವಾಗಿ ಶೋಭಿಸುವುದೆಂದು ಸೆಟ್ಟಿಯ ಮಕ್ಕಳು ಕನಸುಕಾಣುತ್ತಿದ್ದರು.
 'ಹಗಲುಗನಸುಗಳು ನೆನಸಾಗುವುದು ಇರುಳಕನಸಿನಲ್ಲಿ' ಎಂಬ‌ ಮಾತಿದೆ. 

     ಇಂದು ನೋಡಿದರೆ, ಅಲ್ಲಿ ರಂಗಸೆಟ್ಟಿಯ ಮಹಡಿ ಮನೆಯಿತ್ತು ಎಂಬುದರ ಕುರುಹೂ ಕಾಣುತ್ತಿಲ್ಲ. ಮಂದಿರವಿರುವ ಬೀದಿಯೂ ಬೆಳೆಯಲಿಲ್ಲ. ಬಿಕೋ ಎನ್ನತ್ತಿದೆ. ಬಣ ಬಣವೆನ್ನುತ್ತಿದೆ. ಸೆಟ್ಟರ ಹೆಸರುಳ್ಳ  ಬೀದಿಯಲ್ಲಿ ನರಪಿಳ್ಳೆಗಳ ಸುಳಿವಿಲ್ಲ‌. ಸೆಟ್ಟರ ಹೆಸರಲ್ಲಿ ಕಂಗೊಳಿಸಬೇಕಾಗಿದ್ದ ಮಗಮಗಿಸುವ ಸುಮಸುಂದರ ಉದ್ಯಾನವನವು ಕನಸಲ್ಲೇ ಉಳಿಯಿತು. 

    ಬೀದಿಯ ಸುತ್ತಮುತ್ತೆಲ್ಲಾ ಕಸದರಾಶಿತಿಪ್ಪೆಗಳಿಂದ ಇಡುಕಿದೆ. ಜನರು ಮೂಗುಮುಚ್ಚಿಕೊಂಡು ಓಡಾಡಬೇಕಾದಂತಹ ಪರಿಸರವಾಗಿದೆ. ಎಲ್ಲೆಲ್ಲೂ ಹೊಲಸು ಸುರಿಯುತ್ತಿದೆ.

     ಲಾಲ್ ಬಾಗಿಗೆ ಸಮೀಪದಲ್ಲಿ  ಬಟ್ಟಬಯಲಿನಲ್ಲಿ ಒಂದು  ಕಲ್ಲುಕಂಬವು ದೂರಕ್ಕೆ ಗೋಚರಿಸುತ್ತದೆ.  ಸ್ವಾರ್ಥದ ಯಶೋಡಿಂಡಿಮದ ಕನಸಿನ ಧ್ವನಿಯ ಸಂಕೇತವೆಂಬಂತೆ ಆ ಕಂಬ ಮೂಕ ಸಾಕ್ಷಿಯಾಗಿ ಕೂಗಿ ಹೇಳುತಿದೆ. ಆ ಕಲ್ಲು ಕಂಬದ ಮೈಯಲ್ಲಿ 'ಕೆಂಪುಶೆಟ್ಟಿಯ ಬೀದಿ' ಎಂದು ಶಿಲಾಶಾಸನದಂತೆ ಬರೆದಿರುವುದಷ್ಟೇ ಕಾಣುತ್ತಿದೆ.  ಕೆಂಪುಸೆಟ್ಟಿಯ ಬೀದಿ ಎಂಬುದು ಕನಸಾಗಿಯೇ ಉಳಿಯಿತು. ಸ್ವಾರ್ಥಸಾಧನೆಯ ಹಗಲುಗನಸು  ನೆನಸಾಗಲಿಲ್ಲ.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment