Wednesday, 13 December 2023

ಪರವೆಯಿಲ್ಲ - ಕೇತಕೀವನ - ಡಿವಿಜಿ

ಪರವೆಯಿಲ್ಲ-ನಿನಗೆ 
ಕೊರತೆಯಿಲ್ಲ. 
ಏನಾದೊಡೇನು! 
ಏಂ ಪೋದೊಡೇನು! 
ಬಿಡಲಿ ಬಾನ್‍ ಕೊಳ್ಳಿಗಳ; 
ಸಿಡಿ ಸಿಡಿಲು ಮಳೆ ಬರಲಿ; 
ಬಿರುಗಾಳಿ ಬೊಬ್ಬಿಡಲಿ 
ಪರವೆಯಿಲ್ಲ. 
ಧರಣಿ ತಲೆಕೆಳಗಾಗಿ ತಿರುತಿರುಗಲಿ 
ಅಂತಾದೊಡೇನು; 
ಎಂತಾದೊಡೇನು; 

ಇಂದೇನು ಕೊನೆಯಲ್ಲ, 
ಮುಂದೇನೊ ಗೊತ್ತಿಲ್ಲ, 
ಕಾಲಕೇನಳಿವಿಲ್ಲ, 
ಪರವೆಯಿಲ್ಲ. 
ಬಾಳು ಪಳೆ ಪಾಳ್‍ಬಾವಿ ಮತ್ತೇನುಮಲ್ಲ 
ಎಂತಾದೊಡೇನು? 
ಎಂತಿರದೊಡೇನು? 

ಮೆಟ್ಟಲನು ಕಟ್ಟಿಲ್ಲ; 
ದಿಟ್ಟಿಸಲು ಬೆಳಕಿಲ್ಲ; 
ಆಳವರಿತವರಿಲ್ಲ, 
ಪರವೆಯಿಲ್ಲ. 
ಮೇಲಕೆಳೆದಾದರಿಪೆವೆನಲಾರುಮಿಲ್ಲ. 
ಅಂತಿದ್ದೊಡೇನು? 
ಎಂತಿದ್ದೊಡೇನು? 

ತಂಬೆಲರು ಬೀಸುತಿರೆ 
ತುಂಬಿ ಜೇನ್‍ ಸೋರುತಿರೆ 
ತುಂಬೆಹೂ ಬಿರಿಯುತಿರೆ 
ಪರವೆಯಿಲ್ಲ. 
ತುಂಬುಣಿಸದೆಂದೆಣಿಸಿ ದಿನಕಳೆಯಲಹುದು.
ಆಗದಿರಲೇನು? 
ಹೋಗದಿರಲೇನು? 

ಗಳಿಗಳಿಗೆ ಹಾರುವುದು 
ಕೊಳದ ಜಲ ಬತ್ತುವುದು 
ಮಣಲು ಕಣ ಜಾರುವುದು 
ಪರವೆಯಿಲ್ಲ. 
ನಿಲದೆಲ್ಲ ನಡೆಯುವುದು 
ನಮ್ಮನಾಶಿಸದೆ. 
ಅಂತಿರಲದೇನು? 
ಎಂತಿರಲದೇನು? 

ಅಳುವುದೇತಕೊ, ಮಗುವೆ, 
ಅಳುಕುವುದದೇತಕೆಲೊ? 
ಉಳಿಯದೊಂದುಂ ಜಗದಿ; 
ಪರವೆಯಿಲ್ಲ. 
ಕಳೆದುಪೋಪುದು ಕಷ್ಟಸುಖದವೊಲದೆಂದೋ 
ವೋದೊಡೇನು?-ಎಂತು 
ಆದೊಡೇನು?
 
ಆದುದಾಗಲಿ; ಏನು? 
ಪೋದುದಾದರು ಏನು? 
ಬರುವುದೆಲ್ಲಾ ಬರಲಿ 
ಪರವೆಯಿಲ್ಲ. 
ಗಿರಿಯ ಪೋಲ್ವೆದೆಯೊಂದು ನಿನಗಿರಲಿ ಸಾಕು; 
ಪರವೆಯಿಲ್ಲ-ನಿನಗೆ 
ಕೊರತೆಯಿಲ್ಲ.

****************

'ಪರವೆ' 'ಪರಿವೆ' ಎಂದರೆ ಅರಿವು, ತಿಳಿವಳಿಕೆ, ಜ್ಞಾನ ಎಂದು ಅರ್ಥ. 
ಪರವೆಯಿಲ್ಲ ಎಂದರೆ ಅರಿವಿಲ್ಲ ಎಂದಾಯಿತು‌. 'ಪರವಾಗಿಲ್ಲ' ಎಂದರೆ ಕಡೆಗಣಿಸು, ನಿರ್ಲಕ್ಷಿಸು, ಮನಸ್ಸಿಗೆ ಹಚ್ಚಿಕೊಂಡು ಹೆದರಬೇಡ, ಎಂಬಿತ್ಯಾದಿ ಅರ್ಥ. ಮೊದಲನೆಯದಾಗಿ ಅಮೃತಪುತ್ರನಾಗಿ ಜನಿಸಿದ  ಮನುಷ್ಯನಿಗೆ ತಾನು ಯಾರು ಎಂಬುದರ ನಿಜವಾದ ಅರಿವಿಲ್ಲದೇ ದಿನಮಾನಗಳನ್ನು ಕಳೆಯುತ್ತಾನೆ. ಎರಡನೆಯದಾಗಿ ಜೀವನದ ಮುಂದಿನ ಕ್ಷಣಗಳಲ್ಲಿ ಏನಾಗುವುದೆಂಬ ಅರಿವು ಮಾನವನಿಗಿಲ್ಲ. ಈ ಕಾರಣಗಳಿಂದ  ಅಸೀಮಚೈತನ್ಯದ ಗಣಿಯಾದ ಮನುಷ್ಯನು ಕ್ಷಣಕ್ಷಣಕ್ಕೂ ಭಯ, ಆತಂಕ, ತಳಮಳಗಳಿಂದ ಕಂಗೆಡುತ್ತಾನೆ. ದಿಕ್ಕುತೋಚದೆ ಕೈಚೆಲ್ಲಿ ಮೂಲೆಸೇರುವ ಹಂತಕ್ಕಿಳಿಯುತ್ತಾನೆ‌. ಇಂತಹ ಸನ್ನಿವೇಶದ ಶಿಶುಗಳಾಗಿ ಅಳುತ್ತಿರುವವರನ್ನು ಕುರಿತು ಡಿವಿ ಗುಂಡಪ್ಪನವರು  ಏನಾದರೂ ಆಗಲಿ, ನಿನಗೆ ಕೊರತೆಯಿಲ್ಲ‌.  ನೀನು ಸತ್ತ್ವ ಶೀಲನು. ಆದರೆ ನಿನ್ನನ್ನು ನೀನು ಅರಿಯದೆ ಆತಂಕಕ್ಕೊಳಗಾಗಿರುವೆ‌. 

ಏನಾದರೂ ಪರವಾಗಿಲ್ಲ. ನಿನ್ನೊಳಗಿನ ಶಕ್ತಿಗೆ ಕೊರತೆಯಿಲ್ಲ. ಬಾನಿಂದಬೆಂಕಿಯ ಕೊಳ್ಳಿಗಳುದುರಿದರೂ ನಿನ್ನ ಚೈತನ್ಯವನ್ನು ಅವು ಅಳಿಸಲಾಗದು. ಸಿಡಿಲಪ್ಪಳಿಸಲಿ,  ವಿನಾಶಕಾರಿ ಪ್ರಳಯದ ಜಡಿಮಳೆ ಲೋಕವನ್ನೇ ಕೊಚ್ಚಿಕೊಂಡುಹೋದರೂ ನಿನ್ನ ಒಳಗಿನ ಶಕ್ತಿಯನ್ನದು ಎಳೆದೊಯ್ಯಲು ಸಾಧ್ಯವಿಲ್ಲ. ಪ್ರಳಯದ ಸುಂಟರಗಾಳಿ ಚರಾಚರಗಳನ್ನು  ತರಗೆಲೆಯಂತೆ ಗಿರಗಿರನೆ ಹಾರಾಡಿಸಿದರೂ ಪರವಾಗಿಲ್ಲ,  ಧರಣಿಯೇ ಅಡಿಮೇಲಾಗಿ ಗಿರ್ರನೆ ತಿರುಗಿದರೂ,  ಅಚ್ಚರಿಯಿಲ್ಲ! 
ಬ್ರಹ್ಮಾಂಡದ  ನಡವಳಿಕೆಯಲ್ಲಿ ಇದು ಸಹಜ!  ಇದು ಇಂದು ಮೊದಲಲ್ಲ. ಕೊನೆಯೂ ಅಲ್ಲ.  ಮುಂದಿನ ಕ್ಷಣಗಳಲ್ಲಿ ಏನೇನು ನಡೆಯುವುದೋ ಬಲ್ಲವರಿಲ್ಲ. ಆದ್ದರಿಂದ  ಎಲ್ಲವನ್ನೂ ಎದುರಿಸಲು ಸಿದ್ಧನಾಗಿರಬೇಕು.  ಕಾಲನ ನಿಯತಿಯನ್ನು  ಅರಿತವರಿಲ್ಲ.  ಕಾಲಕೆ ಅಳಿವಿಲ್ಲ. ಕಾಲವು ಚಕ್ರದಂತೆ ಮುಂದುಮುಂದಕೆ ಚಲಿಸುತ್ತಲೇ ಇರುತ್ತದೆ. 

ಬಾಳೆಂಬುದು ಬಳಕೆಗಿಲ್ಲದ ಪಾಳುಬಾವಿಯಲ್ಲ.   ಬಾಳ್ವೆಯಲ್ಲಿ ಹಳೆನೀರು ಕಾಲಿಯಾಗುತ್ತದೆ. ಹೊಚ್ಚಹೊಸನೀರು ತುಂಬಿಕೊಳ್ಳುತ್ತಲೇ ಇರುತ್ತದೆ. ಬಾಳುವೆಯ ದಿನಗಳಲ್ಲಿ ಏನಾದರಾಗಲಿ,   ಹೇಗಾದರಾಗಲಿ!  ಹೀಗೆಯೇ ಇರಬೇಕೆಂದು ನಿಯಮಿಸಲು ನಾವ್ಯಾರು!? ಅದು ಕಾಲನ ಗೊತ್ತುವಳಿ, ವಿಧಿಯ ನಿರ್ಧಾರ! 

   ಸುತ್ತಮುತ್ತೆಲ್ಲ ತಂಪಾದ ಸುಳಿಗಾಳಿ ಬೀಸುತ್ತಿದ್ದರೆ ಅದರ ತಂಪನ್ನು ಸವಿಯೋಣ. ದುಂಬಿಗಳು  ಗುಂಯಿಗುಡುತ್ತಾ ಹಾರಾಡುತ್ತಿರುವಲ್ಲಿ ಜೇನಿನ‌ಹನಿಗಳು ಸೋರುತ್ತಿರುವುದರ ಭಾಗ್ಯವನ್ನು ಸದುಪಯೋಗ ಪಡೆದುಕೊಳ್ಳುದು. ಹೂಗಳಲ್ಲಿ ತುಂಬಿರುವ ಜೇನನ್ನು ಅರಸಿ ಶಿವನ ಅನುಗ್ರಹವನ್ನು ಸದುಪಯೋಗ ಪಡಿಸಿಕೊಳ್ಳುತ್ತದೆ. ಸುತ್ತೆಲ್ಲಾ ತುಂಬೆ ಹೂ ಅರಳಿರುವುದನ್ನು ಕಂಡು  ಶಿವಮಹಿಮೆ ಅಪಾರವಾದುದು ಎಂಬುದನ್ನು ಅರಿತುಕೊಳ್ಳಬೇಕು.

ಮುಳುಗುವವನಿಗೆ ಹುಲ್ಲುಕಡ್ಡಿ ಕಂಡರೂ, ಅದು  ಅವನನ್ನುಳಿಸುವ ಸಂಜೀವಿನಿಯಾಗಬಲ್ಲದು.
ಏನೇ ಆಗಲಿ, ಏನೇ ಹೋಗಲಿ, ಪರವಾಗಿಲ್ಲ.
 
ಅಜೇಯವಾದ ನಿನ್ನನ್ನು ನೀನು ಅರಿತುಕೊಂಡು, ಬಂದದ್ದೆಲ್ಲಾ ಬರಲಿ ಎಂದು ಎದುರಿಸಬೇಕು‌. 
ಗಳಿಗೆಗಳು ಹಾರುತ್ತಿರಲಿ, ಕೊಳದ ಜಲವು ಬತ್ತಿಹೋದರೆ ಬತ್ತಲಿ,  ಮರಳಿನಕಣಗಳು ಕಾಣಲಿ, ಪರವೆಯಿಲ್ಲ. ಜಗತ್ತಿನ  ಆಗುಹೋಗುಗಳು ಯಾರನ್ನೂ ಕೇಳುವುದೂ ಇಲ್ಲ. ಯಾರಿಗೂ ಹುಟ್ಟುಸಾವಿನ ಒಸಗೆಯನು ತಿಳಿಸುವ ಅಂಚೆಯ ಅಣ್ಣನಾಗುವುದೂ ಇಲ್ಲ.  ಹಾಗಿದ್ದರೇನು! ಹೇಗಿದ್ದರೇನು! ಅದರ ಅರಿವು ನಮಗಿಲ್ಲ. ನಮ್ಮ ಅರಿವನ್ನು ಉಳ್ಳವರಾಗೋಣ‌.

   ಏನೋ ಕಳೆದುಹೋಯಿತು ಎಂದು ಮಗುವಿನಂತೆ ಅಳುವುದು ಲಕ್ಷಣವಲ್ಲ. ಮಗುವಿನಂತೆ ಅಳಬಾರದು. ಮಗು ಅಸಹಾಯಕ. ಆದರೆ ನಾವು ಅಸಹಾಯಕರಲ್ಲ.  ಅಂಜಕೆ, ಅಳುಕುವಿಕೆ ಸಲ್ಲದು.  ಕಷ್ಟಸುಖಗಳು ಮೋಡದಂತೆ ಬರುತ್ತವೆ. ಹಿಂದಕ್ಕೆ ಸರಿಯುತ್ತವೆ.

 ಸುಖವೂ ಶಾಶ್ವತವಲ್ಲ. ದುಃಖವೂ ಶಾಶ್ವತವಲ್ಲ.  ಏನದಾರೂ ಆಗಲಿ. ಪರವಾಗಿಲ್ಲ.
ಆಗಿದ್ದೆಲ್ಲಾ ಒಳಿತೇ ಆಯಿತು .ಬಂದದ್ದೆಲ್ಲಾ ಬರಲಿ!  ಪರಿವೆಯೇ ಬೇಡ. ಗಿರಿಬೆಟ್ಟದಂತಹ ಅಚಲಗುಣ ನಿನಗಿರಲಿ. ನಿನ್ನೊಳಗಿನ  ಅಸೀಮವಾದ ಸತ್ತ್ವಶಕ್ತಿಯು ನಿನ್ನನ್ನು ಕಾಪಾಡುತ್ತಾನೆ. ನಿನಗೆ ಕೊರತೆಯಿಲ್ಲ. ಕೊರತೆ ಇಲ್ಲ ಎಂಬುದನ್ನು ಅರಿತುಕೊಂಡು ಹೆಜ್ಜೆಗಳನ್ನು ಮುಂದಿಡೋಣ. 
ಭಾವಾನವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment