ಗುರು ಪುರೋಹಿತರವನ ಶಯ್ಯೆ ಬಳಿ ಸೇರಿದರು,
ಮರಣದಾಗಮನ ಚಿಹ್ನೆಗಳ ನೆರೆ ನೋಡಿದರು;
ಚರಮಸಾಂತ್ವನ ವಚನಕದು ಸಮಯವೆಂದು
ಒರೆದರೊಲಿದಾ ರಸಿಕ ರೋಗಿಗವರಿಂತು :-
“ಮರುಗದಿರಿ, ಕೊರಗದಿರಿ, ಹರಿಯನೇ ನೆನೆಯುತಿರಿ;
ಕರೆಯುತಿಹರವನವರು ನಿಮ್ಮನವನಡಿಗೆ;
ಕರುಣಾಳುವವನು, ದುರಿತವ ಹರಿಯಿಪವನು ಹರಿ;
ದೊರೆವುದವನಡಿದಾವರೆಯ ಸೊದೆಯು ನಿಮಗೆ.
ಎಷ್ಟು ದಿನ ಬದುಕಿದೊಡಮ್ ಇಳೆ ಕಷ್ಟಭೂಯಿಷ್ಠ,
ಇಷ್ಟ ಸುಖಗಳ ಪಟ್ಟಿಹಿರಿ ನೀಂ ಯಥೇಷ್ಟ
ಇನ್ನು ಮುಂದಿನ ಗತಿಗೆ ಸಿದ್ಧವಾಗುವುದುಚಿತ,
ಪುಣ್ಯವಂತರೆ, ನಿಮಗೆ ನಿಸದ ವಿಷ್ಣುಪದ.
ನೀಮೆಲ್ಲ ತೆರದೊಳಂ ಚೆನ್ನಾಗಿ ಬಾಳಿದಿರಿ;
ಪ್ರೇಮಪ್ರಸಿದ್ಧಿ ಸಿರಿಗಳನೆಲ್ಲ ಭುಜಿಸಿದಿರಿ;
ಅರಸನೋಲಗದಿ ಮೇಲ್‍ಚತುರತೆಯ ತೋರಿದಿರಿ;
ಪರಮಾಪ್ತ ಮಂತ್ರಿಪದವಿಯನು ನಿರ್ವಹಿಸಿದಿರಿ.
ಬಲು ತೆರದ ಲೋಕೋಪಕಾರಂಗಳನೊಡರ್ಚಿ,
ಬಲು ಜನದ ಮೆಚ್ಚುಮನ್ನಣೆಗಳಿಂ ನೀಂ ಪೆರ್ಚಿ
ಬಹು ಸೊಗವ ಕಂಡಿಹಿರಿ, ಬಹು ಭೋಗವುಂಡಿಹಿರಿ,
ಇಹುದೆ ನೀಂ ಸವಿಯದಿಹ ಮಧುಕಣವದೊಂದಿಲ್ಲಿ?
ಇನ್ನೇನು ನಿಮಗೆ ಬೇಕೆನಿಪುದೀ ಜಗದಲ್ಲಿ?
ಇನ್ನಾವ ಸೌಖ್ಯ ನೀಮುಣಲು ಮಿಕ್ಕಿಹುದಿಲ್ಲಿ?
ಶ್ರೀಪತಿ ದಯಾಮಯಂ ನಾರಾಯಣಂ ನಿಮ್ಮನ್
ಆಪತ್ತಿನಿಂ ಪಾರುಗೆಯ್ದು ಕರೆದೊಯ್ಯುವನ್
ನಿತ್ಯನಿರ್ಮಲ ಸುಖಕೆ, ವೈಕುಂಠ ವೈಭವಕೆ
ಅತ್ಯಂತ ವಾತ್ಸಲ್ಯದಿಂ ತನ್ನ ಸನ್ನಿಧಿಗೆ.
ಅವನನೇ ನಂಬಿ ನೀಮವನೆ ಸಂರಕ್ಷಕನು,
ಅವನ ಕೃಪೆಯನೆ ನಂಬಿ-"
-ಇಷ್ಟರ್ಧ ವಾಕ್ಯವನು
ಆಡಿದಾ ಸಖರವರು ಮುಂಬರಿವ ಮುನ್ನವನು
ನೋಡಿ ಬಿರುಗಣ್ಣಿನಿಂದಾಗ್ರಹದೆ ಕೆಂಪಾಗಿ
ನುಡಿದನೀ ಪಡಿ ನುಡಿಯನ್ ಆತುರದೆ ಬಿರುಸಾಗಿ :-
“ಬಿಡಿ ಬಿಡಿರಿ; ಸಾಕಿನ್ನು ನಿಮ್ಮ ಕತೆಗಳ ಕಂತೆ!
ಕಡು ದಯಾಮಯನಂತೆ! ಅವನದತಿ ಕೃಪೆಯಂತೆ!!
ಇನಿತೆನಗೆ ಸೊಗವಿತ್ತ ಲೋಕವನು ಜರೆಯಲೇ?
ಎನಿತೆನಿತೊ ಎನಗೆ ದಯೆಗೆಯ್ದುದನೆ ತೊರೆಯಲೇ?
ಆಗದದು! ಹಾ ಆಗದಿಳೆಯೆ ನಾಂ ಬಿಡಲಾರೆ
ಭೋಗ ಸಾಕಾಯ್ತಿನ್ನು ಕೇಡದೆಂದೆನಲಾರೆ.
ಕನಿಕರಂ ನಿಮ್ಮ ನಾರಾಯಣನೊಳಿರ್ದಲ್ಲಿ,
ಎನಗವಂ ಪರಮೋಪಕೃತಿಯನೆಸಗುವೊಡಿಲ್ಲಿ,
ಈಯೆನ್ನ ಪಳಕೆಯೊಡಲೊಳಗೆನ್ನನಿರಬಿಡಲಿ,
ಪ್ರೀಯರಾದೀಯೆನ್ನವರ ಸನಿಹವೆನಗಿರಲಿ,
ಅನುಭವಸಹಸ್ರ ತುಂಬಿರುವುದೀ ತನುಘಟದಿ,
ಅನುರಾಗಸಂಸ್ಮೃತಿಯ ಮಧುವಿಗೀ ತನುವೆ ನಿಧಿ.
ಆಹಾಹ! ಏನೇನನುಣಿಸಿತೆನಗೀ ದೇಹ!
ಸ್ನೇಹಗಳ ಮೋಹಗಳ ಮಾಧುರ್ಯಕಿದು ಗೇಹ!
ಆ ಸುಖಸ್ಮರಣೆಯೊಳೆ ರಮಿಪುದೆನ್ನ ಸ್ವಾಂತ.
ಗುರುಜನರೆ, ಕೇಳಿರೀ ಹೃದಯಸತ್ಯದ ನುಡಿಯ.
ಅರಿತಿಹಿರ ನೀವೆನ್ನ ಜೀವಸಂಸ್ಕೃತಿವಿಧಿಯ?
ಎನಗರೋಚಕಮೇನುಮಾಗಿಲ್ಲ ಧರೆಯ ಸೊದೆ
ದಣಿದಿಲ್ಲವೆನ್ನ ಕರಣಗಳೇನುಮೀ ರಸದೆ.
ಪರಿಯುತಿದೆ ಜೀವೋಷ್ಣವಿನ್ನುಮೀ ನರಗಳಲಿ,
ಮೆರೆಯುತಿದೆ ಮನವಿನ್ನುಮೆನಿತೊ ಸುಖರಥಗಳಲಿ.
ವೈಕುಂಠಭೋಗವೆನಗಿಂತ ಶುದ್ಧರಿಗಿರಲಿ;
ಸಾಕೆನಗೆ ಭೂಭೋಗವದು ಕುಂದದಿರಲಿ.
ಇದಕಿಂತ ಅಲ್ಲೇನು? ಎನ್ನ ಪ್ರೇಮಿಗಳಿಲ್ಲಿ
ಇದಿರೊಳಿವರಿರುವಂದು ವೈಕುಂಠವಿಲ್ಲಿ.
ಓ ಅವಳೆ, ಬಾ ಇತ್ತ, ತಡಹೆನ್ನ ತಲೆಮೊಗವ
ಹಾ ಇವಳೆ, ಬೀಸೆನ್ನ ಮೇಲೆ ನಿನ್ನಾ ಸೆರಗ
ಹೋ, ರತ್ನ, ಹಾ ಎನ್ನ ಮುದ್ದುಗಿಣಿ ಬಾರಿಲ್ಲಿ,
ತೋರು ಮತ್ತೊಮ್ಮೆ ನೀಂ ನಗುಮೊಗವನೆನಗಿಲ್ಲಿ."
ಇಂತವನದಾರಾರನೋ ನೆನೆದು ಕೂಗುತ್ತೆ
ಚಿಂತೆಸಂತಸದ ಬೆರಕೆಯ ಮೊಗದಿ ತೋರುತ್ತೆ
ಉಸಿರಿಳಿದು ಬಸವಳಿದು ಕಣ್ಣ ಮುಚ್ಚಿದನು,
ಹಸಿವ ಮುಳಿದತ್ತು ನಿದ್ರಿಪವೊಲೊರಗಿದನು.
**********
**********
ಕೊನೆಯುಸಿರೆಳೆಯಲು ಇನ್ನೇನು ಕೆಲವು ಕ್ಷಣಗಳನ್ನು ಎಣಿಸುತ್ತಿರುವ ರೋಗಿ. 'ಸಾಂಸಾರಿಕ ವ್ಯಾಮೋಹವನ್ನು ಬಿಟ್ಟು ತೆರಳಲಾರೆ' ಎಂಬ ರಸಿಕ ರೋಗಿಯ ಮಮಕಾರದ ಅಂಟನ್ನು ಡಿವಿಜಿಯವರು ಸುಂದರವಾಗಿ ಬಣ್ಣಿಸಿದ್ದಾರೆ.
ರೋಗಿಯು ಆಸ್ಪತ್ರೆಯಲ್ಲಿ ಹಾಸಿಗೆಯಲ್ಲಿದ್ದಾನೆ. ಹಾಸಿಗೆಯ ಸುತ್ತ ಸೇರಿದ ಮಕ್ಕಳು ಬಂಧುಗಳು, ಗುರುಹಿರಿಯರು, ಪುರೋಹಿತರಾದಿಯಾಗಿ ಸೇರಿದವರು ಮರಣದ ಕ್ಷಣಗಳ ನಿರೀಕ್ಷೆಯಲ್ಲಿದ್ದಾರೆ.
ಇನ್ನೇನು ಕೆಲವು ಕ್ಷಣಗಳಲ್ಲಿ ಪ್ರಾಣಪಕ್ಷಿ ಹಾರುವುದು. ಆದ್ದರಿಂದ ರಸಿಕನಾಗಿ ಬಾಳಿದ ಈ ಮಹನೀಯರಿಗೆ ಚರಮಸಾಂತ್ವನದ ನುಡಿಗಳನ್ನು ನುಡಿಯಲು ಇದೇ ಸರಿಯಾದ ಸಮಯವೆಂದು ಸಮಾಧಾನಿಸಲು ಆರಂಭಿಸುತ್ತಾರೆ.
" ಚಿಂತೆ ಮಾಡಬೇಡಿ, ಕೊರಗಬೇಡಿ, ಶ್ರೀ ಹರಿಯನ್ನು ಧ್ಯಾನಿಸುತ್ತಾ ಇರಿ. ಕರುಣಾಳುವಾದ ನಾರಾಯಣನು ನಿಮ್ಮನ್ನು ತನ್ನ ಬಳಿಗೆ ಕರೆದೊಯ್ಯಲು ನಿಮ್ಮನ್ನು ಕರೆಯುತ್ತಿದ್ದಾನೆ. ನಿಮ್ಮ ಎಲ್ಲಾ ಪಾಪಗಳನ್ನು, ಸಂಕಟಗಳನ್ನು ಅವನು ನಿವಾರಿಸುವನು. ಅವನ ಚರಣಕಮಲಗಳ ಅಮೃತಸವಿಯನ್ನು ಅವನು ನಿಮಗೆ ಕರುಣಿಸುವನು," ಎಂದರು.
ಮುಂದುವರಿದು ಹೇಳಿದರು," ಈ ಮರ್ತ್ಯಲೋಕದಲ್ಲಿ ಎಷ್ಟುದಿನ ಬಾಳಿದರೂ ಇಲ್ಲಿ ಕಷ್ಟಪರಂಪರೆಗಳು. ನೀವು ಇಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಿಂದ ಸುಖವನ್ನು ಅನುಭವಿಸಿದ್ದೀರಿ. ಇನ್ನು ಈ ಭೂಮಿಯ ಋಣ ನಿಮಗೆ ಮುಗಿಯುತ್ತಿದೆ. ಮುಂದಿನ ಗತಿಗೆ ನೀವು ಮಾನಸಿಕವಾಗಿ ಸಿದ್ಧರಾಗುವುದು ಲೇಸು" ಎಂದರು. "ಪುಣ್ಯವಂತರು ನೀವು. ನಿಮಗೆ ವಿಷ್ಣು ಸಾಯುಜ್ಯವು ಖಚಿತ ನೀವು ಹೆಂಡತಿ ಮಕ್ಕಳು, ಸಾಂಸಾರಿಕ ಪ್ರೀತಿ ಪ್ರೇಮ ವನ್ನು ಪಡೆದಿದ್ದೀರಿ. ಸುಖ ಸೌಭಾಗ್ಯಗಳನ್ನು ಅನುಭವಿಸಿದ್ದೀರಿ. ಸಮಾಜದಲ್ಲಿ ಒಳ್ಳೆಯ ಹೆಸರು ಕೀರ್ತಿಗಳನ್ನೂ ಸಂಪಾದಿಸಿದ್ದೀರಿ ಕೊರತೆಯಿಲ್ಲದೆ ಎಲ್ಲಾ ರೀತಿಯ ಸಿರಿಸೌಭಾಗ್ಯಗಳನ್ನೂ ಅನಭವಿಸಿದ ಪುಣ್ಯಶಾಲಿಗಳು ನೀವು " ಎಂದು ಸಾಂತ್ವನ ಮಾತುಗಳನ್ನಾಡಿದರು.
"ರಾಜವೈಭೋಗದ ಆಡಳಿತದಲ್ಲಿ ನಿಮ್ಮ ಚಾತುರ್ಯದಿಂದ ಅರಸರ ಒಲವನ್ನು ಸಂಪಾದಿಸಿದವರು ನೀವು. ಅರಸರ ನರ್ಮಸಚಿವರಾಗಿ ಮಂತ್ರಿಪದವನ್ನು ಸಮರ್ಥವಾಗಿ ನಿರ್ಹಿಸಿದವರು.
ತಾವು ಲೋಕದ ಜನತೆಯ ಹಿತವನ್ನು ಬಯಸಿ ಲೋಕೋಪಕಾರಿಗಳಾಗಿ ಬಾಳಿದಿರಿ. ಸಾಮಾಜಿಕ ಪುರೋಭಿವೃದ್ಧಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನಮನ್ನಣೆಯನ್ನು ಪಡೆದ ಸಾರ್ಥಕ ಜೀವನವು ನಿಮ್ಮದು! ಐಹಿಕ ಜೀವನದಲ್ಲಿ ಬಲುಬಗೆಯ ಸುಖವನ್ನು ಅನುಭವಿಸಿದವರು ನೀವು. ಭೋಗಭಾಗ್ಯಗಳನ್ನು ತಾವು ಮೊಗೆಮೊಗೆದು ಉಂಡಿರುವಿರಿ! ಮಧುಮಹೋತ್ಸವದ ಎಲ್ಲಾ ಸವಿಮಾಧುರ್ಯಗಳನ್ನು ತಾವು ಉಂಡಿರುವಿರಿ. ನೀವು ಸವಿಯದ ಜೇನಹನಿಗಳಿಲ್ಲ.
ಈ ಜಗತ್ತಿನಲ್ಲಿ ನೀವು ಸವಿಯದ ಸವಿ ಬಾಕಿ ಯಾವುದೂ ಇದ್ದಂತಿಲ್ಲ. ನಿಮ್ಮಂತಹ ಭಾಗ್ಯವಂತರಿಗೆ ಇನ್ನೇನು ಬೇಕು!?
ಪರಮದಯಾಳುವಾದ ಶ್ರೀಮನ್ನಾರಾಯಣನು ನಿಮ್ಮನ್ನು ಈ ಹುಟ್ಟುಸಾವುಗಳ ಸಂಕಟಗಳಿಂದ ಪಾರುಮಾಡಿ ತನ್ನೆಡೆಗೆ ಬೇಗನೇ ಕರೆದುಕೊಳ್ಳುವನು. ಅವನ ಸನ್ನಿಧಿಯಲ್ಲಿ ನಿತ್ಯ ನಿರ್ಮಲ ಸುಖ. ಅವನ ಸನ್ನಿಧಿಯು ನಿತ್ಯವೈಭವದ ವೈಕುಂಠ. ಶ್ರೀವಿಷ್ಣುವು ನಿಮ್ಮ ಮೇಲಣ ವಾತ್ಸಲ್ಯದಿಂದ, ತನ್ನ ಸನ್ನಿಧಿಗೆ ಅಕ್ಕರೆಯಿಂದ ಕರೆಸಿಕೊಳ್ಳುವನು. ಅವನನ್ನೇ ನಂಬಿ. ಅವನ ಅನುಗ್ರಹವೇ ನಿಮ್ಮನ್ನು ಕಾಪಾಡುವುದು. ಅವನೇ ನಿಮ್ಮನ್ನು ಸಂರಕ್ಷಿಸುವವನು." ಎಂದು ಮುಂತಾಗಿ ಗುರುಗಳೂ ಪುರೋಹಿತರೂ, ಹಿತೈಷಿಗಳೆಲ್ಲರೂ ಮರಣೋನ್ಮುಖಿಯಾದ ರಸಿಕ ರೋಗಿಗೆ ಅಂತಿಮ ಸಾಂತ್ವನ ವಚನಗಳನ್ನು ನುಡಿದರು.
ಸುತ್ತಲಿದ್ದವರು ನುಡಿಯುತ್ತಿದ್ದ ಸಾಂತ್ವನ ವಚನಗಳು ಮುಂದುವರಿಯುವುದನ್ನು ಮೆಚ್ಚದ ರೋಗಿಯು ಬಿಡುಗಣ್ಣನೋಟದಿಂದ ಕೆಕ್ಕರಿಸಿ ನೋಡುತ್ತಾ, ಅವರೆಲ್ಲರ ಹಿತವಚನಗಳಿಗೆ ಪ್ರತಿಯಾಗಿ ಕೋಪದಿಂದಲೇ ಇಂತೆಂದು ಉತ್ತರಿಸಿದನು, "ಸಾಕು! ಸಾಕಿನ್ನು ಮುಂದುವರಿಸದಿರಿ ನಿಮ್ಮ ಕಂತೆ ಪುರಾಣಗಳನ್ನು! ಆ ದೇವನು ನಾರಾಯಣನಂತೆ! ಪರಮದಯಾಳುವಂತೆ! ಅವನದೇ ಅತಿಯಾದ ಕೃಪೆಯಂತೆ! ಇಂತೆಲ್ಲ ಸುಖ ಸೌಭಾಗ್ಯವನ್ನು ಕರುಣಿಸಿದ ಈ ಸೊಗಸಿನ ಇಹಲೋಕದ ಬಾಳುವೆಯನ್ನು ಜರೆಯಲಾದೀತೇ! ಈ ಲೋಕದ ಜನತೆಯ ಉಪಕಾರವನ್ನು ಮರೆತು ಕಾಣದ ಆ ವೈಕುಂಠಕ್ಕೆ ದಿಡೀರೆಂದು ಹೋಗುವುದುಂಟೇ! ಜನರು ಮೆಚ್ಚುವರೇ? ಏನೇನೋ ಭೋಗಭಾಗ್ಯಗಳನ್ನು ಅನುಗ್ರಹಿಸಿದ ಈ ಲೋಕಸಹವಾಸವನ್ನು ತೊರೆಯುವುದು ಸಾಧ್ಯವೇ! ಆಗದು! ಈ ಭೂಮಿಯನ್ನು ಬಿಡಲಾರೆ! ಭೋಗ ಸಾಕಾಯಿತು ಎಂದೆನ್ನಲಾರೆ! ಭೋಗವದು ಕೇಡು ಎಂದೆನ್ನಲಾರೆ" ಎಂದೆನ್ನುತ್ತಾ ಮರಣವನ್ನು ನಿರಾಕರಿಸುತ್ತಾ ಮುಂದುವರಿದು, ಈ ರಸಿಕ ರೋಗಿಯು, " ಈ ನಿಮ್ಮ ನಾರಾಯಣನಿಗೆ ನನ್ನಲ್ಲಿ ಕನಿಕರವಿದ್ದರೆ, ನನ್ನನ್ನು ಈ ನನ್ನ ಹಳೆಯ ಒಡಲಿನಲ್ಲೇ ವಾಸವಿರಲು ಅನುಗ್ರಹವನ್ನು ನೀಡಲಿ. ನನಗೆ ಪ್ರಿಯರಾದ ಹೆಂಡತಿ ಮಕ್ಕಳು, ಸಂಸಾರ, ರಾಜಭೋಗದ ಈ ಜನರ ಸನಿಹವಾಸವೇ ನನಗಿರಲಿ. ಈ ನನ್ನ ದೇಹವೆಂಬ ಮಡಿಕೆಯಲ್ಲಿ ಸಾವಿರಸಾವಿರ ಅನುಭವಗಳ ರಸಪಾಕವಿದೆ, ಸವಿಯಿದೆ. ಈ ಸವಿಯನ್ನು ಬಿಟ್ಟು ನಿಸ್ಸಾರವಾದ ಆ ವೈಕುಂಠದ ಒಂಟಿತನವೆನಗೆ ಬೇಕಿಲ್ಲ.
ಪ್ರೀತಿ ಪ್ರೇಮಗಳ ಮಧುಭಾಂಡವಾದ ಈ ತನುಘಟವನ್ನು ನಾನೆಂತು ತೊರೆದೇನು! ಆಹಾ! ಅದೆಂತೆಂತಹ ಸುಗ್ರಾಸ ಉಣಿಸನ್ನು ಈ ಮಡಿಕೆಯೆನಗೆ ಬಡಿಸಿತು! ಸ್ನೇಹ ಮೋಹಗಳ ಮಧುಪಾಕವನ್ನು ಈ ಮನೆಯೆನಗೆ ಉಣ್ಣಿಸಿದೆ.
ನನ್ನ ಮನಸ್ಸು ಇಂತಹ ಸುಖದ ಕ್ಷಣಗಳನ್ನು ಸ್ಮರಿಸುತ್ತಾ ಆ ಸವಿಯನ್ನು ಆಸ್ವಾದಿಸುತ್ತಲೇ ಇರಬಯಸುತ್ತದೆ.
ನನ್ನ ಹಿತವನ್ನು ಬಯಸುವ ಗುರುಹಿರಿಯರೇ, ನನ್ನ ಮನದಾಳದ ಸತ್ಯವನ್ನು ಕೇಳಿ! ನನ್ನ ಸಾಂಸಾರಿಕ ಜೀವಸಂಬಂಧಗಳ ಸಂಸ್ಕೃತಿಯ ಒಲವನ್ನು ಅರಿತಲ್ಲವೇನೋ!
ಈ ಲೋಕಜೀವನದ ಜೀವಾಮೃತವು ನನಗೆ ಬೇಸರವೆನಿಸಿಲ್ಲ. ಸಂಸಾರವು ಸಾರಹೀನವೆಂದೆನಿಸಿಲ್ಲ. ನನ್ನ ಇಂದ್ರಿಯಗಳು ಪಟುವಾಗಿವೆ. ಕರಣಗಳು ದಣಿದಿಲ್ಲ. ರಸವನ್ನು ಆಸ್ವಾದಿಸುತ್ತಿರುವಾಗಲೇ 'ತೊಲಗಿಲ್ಲಿಂದ' ಎಂದು ತಳ್ಳುವುದು ಸರಿಯಲ್ಲ.
ಈ ನನ್ನ ನರನಾಡಿಗಳಲ್ಲಿ ಜೀವಧಾತುಗಳು ಚೈತನ್ಯಪೂರ್ಣವಾಗಿ ನಳನಳಿಸುತ್ತಾ ಹರಿಯುತ್ತಿವೆ.
ನನ್ನ ಮನಸ್ಸು ಸುಖಸೌಭಾಗ್ಯದ ಹೊಂದೇರುಗಳನ್ನೇರಿ ಪಯಣಿಸುವುದನ್ನೇ ಇನ್ನೂ ಆಶಿಸುತ್ತದೆ.
ಕಣ್ಣುಗಳಿಗೆ ಕಾಣದ ಆ ವೈಕುಂಠದ ಭೋಗ ಭಾಗ್ಯಗಳನ್ನು ವೈರಾಗ್ಯವನ್ನು ಹೊಂದಿದವರು ಅನುಭವಿಸಲಿ. ಮನ ಇಂದ್ರಿಯಗಳು ಸಂಸಾರವನ್ನು ಬಿಡದೆ, ನಾನೆಂತು ವೈಕುಂಠಕೆ ಪೋಗಲಿ!?
ಭೂಮಿಯ ಭಾಗ್ಯದ ಭೋಗವು ಎನಗಿನ್ನೂ ಎರವಲ್ಲ. ನನಗೆ ಭೂಮಿಯ ಭೋಗವು ಕುಂದದಿರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನನ್ನು ಪ್ರೀತಿಸುವ ಪ್ರೇಮಿಗಳು ನನ್ನ ಸುತ್ತಮುತ್ತ ಇರುವ ಈ ಭೂಮಿಯೇ ನನಗೆ ವೈಕುಂಠ. ಆದ್ದರಿಂದ ಆ ನಾರಾಯಣನ ವೈಕುಂಠ ನನಗೆ ಬೇಕಿಲ್ಲ." ಎಂದೆನ್ನುತ್ತಾ, ತನ್ನನ್ನು ಪ್ರೀತಿಸುವವರೆಂಬ ಕನ್ನೆಯರನ್ನು " ಓ ಅವಳೇ ಇತ್ತ ಬಾ! ಓ ಇವಳೇ ಇಲ್ಲಿ ಬಾ! ನನ್ನ ಮುಖವನ್ನು ಹಿಡಿದುಕೋ! ಮನದನ್ನೇ, ಬಾ ಸೆರಗಿಂದ ಬೀಸಿ ದೇಹದ ಉಷ್ಣವನ್ನು ಸರಿಸು" ಎಂದೆನ್ನುತ್ತಾ " "ರತ್ನಾ! ನನ್ನ ಮುದ್ದುಗಿಣೀ ಬಳಿ ಬಾ! ನಿನ್ನ ಮುದ್ದುಮೊಗವನ್ನು ಮತ್ತೆ ಮತ್ತೆ ನೋಡಬಯಸುವೆನು" ಎಂದು ಮತ್ತೆ ಮತ್ತೆ , ಹತ್ತಾರು ಮನದನ್ನೆಯರನ್ನು ನೆನಪಿಸುತ್ತಾ, ಕೂಗಿ ಕರೆಯುತ್ತಾ, ಮುಖದಲ್ಲಿ ಚಿಂತೆ ಹಾಗೂ ಸಂತೋಷಗಳನ್ನು ತೋರಗೊಡುತ್ತಾ, ಜೀವನದಲ್ಲಿ ಆಶಾಭಾವವನ್ನೇ ತೋರುತ್ತಾ ದೇಹವು ಸಾಕೆನಿಸುತ್ತಾ ಇಂದ್ರಿಯಗಳು ಜಡವಾದವು, ಉಸಿರು ನಿಂತಿತು. ಕಣ್ಣಾಲಿಗಳು ಮುಚ್ಚಿದವು. ಹಸಿದ ದೇಹವು ಹಸಿವು ಹಿಂಗಿಸಿಕೊಳ್ಳದೆ ಅಳುತ್ತಾ ನಿದ್ರಿಸಿದಂತೆ ರಸಿಕ ರೋಗಿಯು ಕೊನೆಯುಸಿರೆಳೆದನು.
ಭಾವಾನುವಾದ:
©✒ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ
No comments:
Post a Comment