Tuesday, 2 January 2024

ಮಹಾನದಿ - ಕೇತಕೀವನ - ಡಿವಿಜಿ

ಗಿರಿಗುಹೆಯಿನಿಳಿದು ಕಲ್ಗಳನರೆದು ನೆಲ ಕೊರೆದು 
ನೆರೆದು ಮಡುಹಳ್ಳದಲಿ ಸರಸರನೆ ಮುಂಬರಿದು 
ಝರಿಯಾಗಿ ತೊರೆಯಾಗಿ ಸಾರಿ ಪರಿಪರಿಯಾಗಿ 
ಹರಡುತ್ತೆ ಹಾರುತ್ತೆ ಮುಂದು ಮುಂದಕೆ ಸಾಗಿ. 
ಶಿಲೆಗಳಿಕ್ಕಟ್ಟಿನಲಿ ಸಿಲುಕಿ ಸಿಡಿಮಿಡಿಗೊಂಡು 
ಕೆಲದ ದಡಗಳ ತಿಕ್ಕಿ ಸಿಕ್ಕಿದೆಲ್ಲವ ಕೊಂಡು 
ಸೀಳಿ ಬಯಲನು ಕಾಡಕೆಡಹಿ ಮರಗಳನೊಯ್ದು 
ಬೀಳುತ್ತೆ ಭೋರ್ಗರೆಯುತೇಳುತ್ತೆ ಮಾರ್ಮುನಿದು 
ಮೊರೆಯುತ್ತೆ ಸುಳಿಸುತ್ತಿ ಮತ್ತುರುಬಿ ಕುಪ್ಪಳಿಸಿ 
ಕೆರಳಿ ಕವಲೊಡೆದುರುಳಿ ಬಂಡೆಗಳನಪ್ಪಳಿಸಿ 
ಉರವಣಿಸಿ ತೆರೆಯೆದ್ದು ಸೇನೆ ಸಾಲೆನೆ ನುಗ್ಗಿ 
ಹೊರಳಿ ಜಗವನೆ ಕೊಚ್ಚಲೆನೆ ಬಿತ್ತರದಿ ಹಿಗ್ಗಿ 

ಹುಚ್ಚಿನಿಂ ಕೆಚ್ಚಿನಿಂ 
ಪೆರ್ಚಿದುತ್ಸಾಹದಿಂ 
ನೋಡು ನದಿಯೆಂತು 
ಓಡಿಬರುತಿಹುದು! 
ಏತರಾವೇಶವಿದು, 
ಆತುರತೆಯೇತಕಿದು? 
ಪ್ರೀತಿಸಂಭ್ರಮವೆ? 
ಕೌತುಕಾದರವೆ? 
ವೈರಶಪಥವೆ, ಹಟವೆ? 
ಶೂರಸಾಹಸವೆ? 

ಎಳೆಗರುವ ನೆನೆದೋಡಿ ಬಹ ಹಸುವಿನಂತೆ 
ನಳನನರಸುತಲಲೆದ ದಮಯಂತಿಯಂತೆ 

ಪರಿದು ಸಾರೆ ನದಿ 
ಕರೆಯುತಿಹುದುದಧಿ 
ನದಿಗೀಗ ಶಾಂತಿ 
ಹೃದಯವಿಶ್ರಾಂತಿ 

ಈಗಳಾತುರವಿಲ್ಲ ಆವೇಶವಿಲ್ಲ, 
ವೇಗ ರಭಸಗಳಿಲ್ಲ ಆಯಾಸವಿಲ್ಲ, 
ಮೊರೆತ ಕೊರೆತಗಳಿಲ್ಲ ಸದ್ದದೇನಿಲ್ಲ, 
ತೆರೆನೊರೆಯ ಗದ್ದಲದ ಗುರುತೊಂದುಮಿಲ್ಲ. 
ಪೋಗಿರ್ಪುದೀಗಳಾ ಸಿಡುಕು ಮಿಡುಕೆಲ್ಲ 
ಸಾಗರಾಲಿಂಗನದಿ ಸೌಮ್ಯ ನದಿಗೆಲ್ಲ 

ಇಂದದು ಉದಾರ 
ಸಿಂಧುಗಂಭೀರ 

ಕ್ರಾಂತಿಯನು ದಾಂಟಿದಾ ಕ್ಷಾಂತಿ 
ಸಾಂತ್ವನವನೊಂದಿದಾ ಶಾಂತಿ. 

ಈ ನದೀಪ್ರವಹದಂತಿರಲಿ ಬಾಳ್ಪಯಣ; 
ಧೂನಧಾವನ ಮುಗಿಯೆ ಧ್ರುವ ಮಹಾಶರಣ.

*************************************

ಮಹಾನದಿಯು ಛತ್ತೀಸ್ ಗಢ ರಾಜ್ಯದ ಸಿಂಹಾವ ಎಂಬಲ್ಲಿ ಉಗಮಿಸಿ, ಸುಮಾರು ೮೬೦ ಕಿ ಮೀ ನಷ್ಟು ದೂರದ ವರೆಗೆ ಹರಿಯುತ್ತದೆ. ಒಡಿಶಾ ರಾಜ್ಯದ ಮೂಲಕ ಬಂಗಾಳವನ್ನು ಪ್ರವೇಶಿಸಿ  ನದೀ ಮುಖಜ ಭೂಮಿಯನ್ನು ಸೃಷ್ಟಿಸಿ ಬಂಗಳಕೊಲ್ಲಿಯನ್ನು ಸೇರುತ್ತದೆ.  ಮಹಾನದಿಗೆ ಹಿರಾಕುಡ್ ಎಂಬ ಅಣೆಕಟ್ಟನ್ನು ಕಟ್ಟಲಾಗಿದೆ. ಮಹಾರಾಷ್ಟ್ರ, ಛತ್ತೀಸ್ ಗಢ,  ಝಾರ್ಖಂಡ್  ಹಾಗೂ ಒಡಿಶಾ ರಾಜ್ಯಗಳ ಕೆಲವು ಭೂಭಾಗಗಳು ಮಹಾನದಿಯ ಹಿರಾಕುಡ್ ಅಣೆಕಟ್ಟಿನ ಜಲಾನಯನ ಪ್ರದೇಶಗಳನ್ನು ಹೊಂದಿವೆ. ಮಹಾನದಿಯ ಅಬ್ಬರದ ಹರಿವು ಸಾಗರಸಂಗಮದ ಅನಂತರದ ಪ್ರಶಾಂತ ಗಾಂಭೀರ್ಯವನ್ನು ಡಿವಿ ಗುಂಡಪ್ಪನವರು ಮಹಾನದಿ ಕವನದಲ್ಲಿ ಬಣ್ಣಿಸಿದ್ದಾರೆ.

    ಮಹಾನದಿಯು ಗಿರಿಬೆಟ್ಟಗಳಿಂದ ದುಡುದುಡನೆ ಇಳಿಯುತ್ತಾ , ಕಂದರಗಳೊಳಗೆ ಇಳಿಯುತ್ತಾ,  ಕಲ್ಲುಬಂಡೆಗಳನ್ನು ಅರೆಯುತ್ತಾ ಮುಂದೆ ಸಾಗುತ್ತಾಳೆ. ನೆಲವನ್ನು ಪ್ರವೇಶಿಸುವಲ್ಲಿ ಮಹಾನದಿಯ ಅಬ್ಬರದ ಓಟದಿಂದ ನೆಲದ ಮಣ್ಣನ್ನು ಕೊರೆಯುತ್ತಾ ಸಾಗುತ್ತಾಳೆ.  ಹಳ್ಳಕೊಳ್ಳಗಳನ್ನು ತುಂಬಿ ನೆರೆಯುಕ್ಕಿಸಿಕೊಂಡು,  ಸರಸರನೇ ಮುಂದೋಡುತ್ತಾಳೆ.  ಜರಿಯಾಗಿ ತೊರೆಯಾಗಿ ಹರಿಯುತ್ತಾಳೆ. ಹಾರುತ್ತಾ ಕುಣಿಯುತ್ತಾ, ಅಬ್ಬರಿಸುತ್ತಾ , ವಿಶಾಲವಾಗಿ  ವಿಸ್ತಾರವಾಗಿ ‌ಮುಂದಕ್ಕೆ ಮುಂದಕ್ಕೆ ಓಡುತ್ತ, ಶಿಲೆಗಳ ಇಕ್ಕಟ್ಟಿನ ಇರುಕಿಗೆ ಸಿಲುಕಿದಾಗ ಸಿಡಿಮಿಡಿಗೊಂಡಂತೆ ಅಬ್ಬರಿಸುತ್ತಾಳೆ. ನದಿಯ ದಂಡೆಗಳಲ್ಲಿ ತಿಕ್ಕಿ ತಿಕ್ಕಿ ತೊಳೆದಂತೆ ಎಲ್ಲವನ್ನೂ ಕೊಚ್ಚಿಕೊಂಡುಹೋಗುತ್ತಾಳೆ. ಬಯಲುಪ್ರದೇಶಗಳನ್ನು ಸೀಳಿಕೊಂಡು ಓಡುತ್ತಾಳೆ. ಕಾಡುಪ್ರದೇಶಗಳನ್ನು ಹೊಕ್ಕು ಗಿಡಮರಲತೆಗಳನ್ನೆಲ್ಲಾ ಅಡಿಮೇಲಾಗಿಸಿ ಕೊಚ್ಚಿಕೊಂಡು ಹೋಗುತ್ತಾಳೆ. ಏಳುತ್ತ ಬೀಳುತ್ತ ಭೋರ್ಗರೆಯುತ್ತ  ಮುನಿಸಿಕೊಂಡ ಕಾಳಿಯ ಆವೇಶದಂತೆ , ಮೊರೆಯುತ್ತ, ಸುಳಿಸುಳಿದು,  ಕುಪ್ಪಳಿಸುತ್ತಾ,ಕೆರಳಿ ಕವಲೊಡೆದು  ಉರುಳುತ್ತಾ,  ಬಂಡೆಗಳ‌ಮೇಲೆ ಅಪ್ಪಳಿಸುತ್ತ ಓಡುತ್ತಾಳೆ. ಓಟದ ರಭಸ ಸಂಭ್ರಮಗಳಿಂದ ತೆರೆಗಳ ಸೇನೆಯನ್ನೆಬ್ಬಿಸಿ  ತೆರೆಗಳ ಸಾಲುಸಾಲುಗಳನ್ನು ಮುನ್ನುಗ್ಗಿಸುತ್ತಾಳೆ. ಜಗತ್ತನ್ನೇ ಕೊಚ್ಚಿಕೊಂಡುಹೋಗುವಳೇನೋ ಎಂಬಂತೆ ಬಹುವಿಶಾಲವಾಗಿ ಅಬ್ಬರದಿಂದ ಬೊಬ್ಬಿರಿದು ಹರಿಯುತ್ತಾಳೆ. ಆವೇಶದಿಂದ ಮೆರೆಯುತ್ತಾ ಹಿಗ್ಗಿಹಿಗ್ಗಿ ಹರಿಯುತ್ತಾಳೆ.

       ಹುಚ್ಚುಸಾಹಸದ ಪರಾಕ್ರಮದಂತೆ ಅಮಿತೋತ್ಸಾಹದಿಂದ ತುಂಬಿ ಹರಿಯುವ ಮಹಾನದಿಯ ಆವೇಶದ ಓಟವನ್ನು ನೋಡಿದವರು ಬೆರಗಾಗಿ ಸ್ತಂಭೀಭೂತರಾಗುತ್ತಾರೆ‌! 
ಅದೇನು ಆವೇಶವೋ! ಅದೇನು ಆತುರವೋ ಪರಮಚೋದ್ಯವೆನಿಸುವುದು‌! ಸಾಗರಪತಿಯನ್ನು ಸೇರುವ ಸಂಭ್ರಮವೋ !? ಸಮುದ್ರರಾಜನನ್ನು ತೋಳುಗಳಿಂದ ಆಲಂಗಿಸುವ  ಕೌತುಕದ ಸಂಭ್ರಮವೋ ಎಂಬ ಅಚ್ಚರಿ ಕವಿಮನಸ್ಸು ಪ್ರಶ್ನಿಸುತ್ತದೆ!

ಅದಾರಲ್ಲಿ ವೈರವೋ ಶಪಥವೋ ಅದೇನು ಹಟವೋ ಹುಚ್ಚುಸಾಹಸವೋ ಎಂದು ಕವಿ ಬೆರಗಾಗಿ ಮೂಗಿನಮೇಲೆ ಬೆರಳಿಡುತ್ತಾರೆ‌!!.

          ದೊಡ್ಡಿಯಲ್ಲಿ ಅಮ್ಮನಿಗಾಗಿ ಹಂಬಲಿಸಿ ಕೂಗಿಕರೆಯುತ್ತಿರುವ ಕಂದನನ್ನು  ನೆನಪಿಸಿಕೊಂಡು  ಕರುವಿನ ಬಳಿಗೋಡುತ್ತಿರುವ ಹಸುವಿನಂತೆ ಮಹಾನದಿಯು ಸಾಗರದೆಡೆಗೆ ದುಡುದುಡನೆ ಓಡುತ್ತಾಳೆ.
 ಕಾನನದಲ್ಲಿ ಪತಿಯನ್ನು ಕಾಣದೆ ನಳನನ್ನು ಹುಡುಕಾಡುತ್ತಾ ಅಲೆದಾಡುತ್ತಿದ್ದ ದಮಯಂತಿಯಂತೆ ಮಹಾನದಿ ಸುತ್ತಿ ಸುಳಿದಾಡುತ್ತಾ ಅಲೆದಾಡುತ್ತಾ ಮುಂದೋಡುತ್ತಿದ್ದಾಳೆ.

       ಕೌತುಕದಿಂದ ಕುಣಿಯುತ್ತ, ಹಾರುತ್ತ, ಕೆನೆಯುತ್ತಾ, ಆವೇಶದಿಂದ ಮುಂದೋಡುವ ಮಹಾನದಿಯನ್ನು  ಬಂಗಾಳದ ಉದಧಿಯು ತನ್ನೆಡೆಗೆ ಬಾರೆಂದು ಕೂಗಿ ಕರೆಯುತ್ತಿದೆ.  ಬಂಗಸಮುದ್ರನ ಕರೆಗೆ ಓಗೊಟ್ಟು ಓಡೋಡಿಬಂದು ಸಾಗರಪತಿಯನ್ನು ಸೇರಿದಾಗ ಮಹಾನದಿಗೆ ಒಂದಿನಿತು ಸಮಾಧಾನ!  ಶಾಂತವಾದಳು! ನದಿಯ ಹೃದಯವು ಏರಿಳಿತದ ಅಬ್ಬರವನ್ನು ಕಳೆದುಕೊಂಡು ವಿಶ್ರಾಂತವಾಯಿತು.

    ಈಗ ಆತುರ ಆವೇಶಗಳನ್ನು ಕಳೆದುಕೊಂಡು ಪ್ರಸನ್ನವಾಗಿದೆ. ನೆರೆತೊರೆಯೆ ಅಬ್ಬರವಿಲ್ಲ. ಸದ್ದುಗದ್ದಲವಿಲ್ಲ. ನೆರೆತೊರೆಯ ಗುರುತುಗಳಿಲ್ಲ.  ಸಿಡುಕು ಮಿಡುಕುಗಳೆಲ್ಲವೂ  ಪ್ರಶಾಂತವಾದವು.
ಸಾಗರಮಿಲನದಿಂದ ಮಹಾನದಿಯು ಸೌಮ್ಯವಾಯಿತು.
 ಸಾಗರವನ್ನು ಸೇರಿದ ಮೇಲೆ ಮಹಾನದಿಯು ಉದಾರವಾಯಿತು‌. 
ಸಿಂಧುವಿನಲಿ ವಿಲೀನವಾದ ನದಿಯು ಗಂಭೀರವಾಯಿತು! 

  ಸಾಗರಪತಿಯನ್ನು ಸೇರುವ  ಕ್ರಾಂತಿಯ ಆವೇಶದ ಓಟದ ಲಕ್ಷ್ಯವನ್ನು ಸಾಧಿಸಿದ ಬಳಿಕ ನದಿಯಿವಳು ಗಂಭೀರವಾದ ಸಹನೆಯಿಂದ ಮೌನವಾಂತಳು!
(ಕ್ಷಾಂತಿ= ಸಹನೆ,ತಾಳ್ಮೆ) ಸಾಂತ್ವನದಿಂದ ಶಾಂತವಾದಳು! 

   ಮಹಾನದಿಯ ಪ್ರವಹಿಸುವಿಕೆಯಂತೆ ಬಾಳ ಪಯಣವಿರಬೇಕು.
ಆವೇಶದ ಓಟದ ಕಂಪನವು ಕೊನೆಗೊಂಡಮೇಲೆ  ಮಹಾಶರಣನಿಗೆ ಶರಣೆನ್ನುವ ಶಾಂತಿ ಸಹನೆಯಿಂದ ಮನುಷ್ಯನು ‌ಮೌನವಾಗುತ್ತಾನೆ.

(ಧೂನ= ಕಂಪನ.ಧಾವನ= ಓಟ) 
ಭಾವಾನುವಾದ: ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment