ಸತ್ತೆನೆಂದೆನಬೇಡ
ಸೋತೆನೆಂದೆನಬೇಡಮುತ್ತುತಿದೆ ವಿಧಿಯ ಪಡೆಯೆಂದಳಲ ಬೇಡ
ಸತ್ತ್ವನಿನ್ನೊಳಗಹುದ
ವೆರ್ತವೆನ್ನಿಸಬೇಡ
ಚಿತ್ತವನು ವಜ್ರವಾಗಿಸಿ ನಿಲ್ಲು ಸಖನೆ
ಬಾಳೊಂದು ಕಾಳಗವು
ಬೀಳದೆದೆ ನಿನ್ನಸ್ತ್ರ
ತಾಳುಮೆಯ ತುಂಬಿ ನಿಲುವುದೆ ನಿನ್ನ ವಿಜಯ
ಸೋಲು ಗೆಲುವುಗಳನೀ
ಕಾಲಮಿತಿಯಿಲ್ಲದೀ
ಕೋಲಾಹಲದಿ ಗಣಿಪ ದಿನಮೆಂದು ಸಖನೆ
ಅದಿರದಿರು ಬೆದರದಿರು!
ಎದೆಯನುಕ್ಕಾಗಿಸಿರು
ಬಿದಿಯಬ್ಬರವ ಕೇಳಿ ನಡುಗಿ ಹದುಗದಿರು
ಬದುಕಿ ನೀ ಕದನದಲಿ
ಹದಗೆಡದೆ ಗುರಿಬಿಡದೆ
ಮುದಗೊಂಡು ಹೋರ್ವವಗೆ ಬಿದಿಯೊಲವು ಸಖನೆ
******************
ವಿಧಿಯ ನಿಯತಿಯನ್ನು ಬಲ್ಲವರಿಲ್ಲ. ವಿಧಿಯು ನಿಯತಿಗನುಸಾರವಾಗಿ ಆವರಿಸುತ್ತದೆ. ವಿಧಿಯ ಆವರಣದಿಂದ ದೂರವಿರಲಾದೀತೆ!? ಇಲ್ಲ.
ವಿಧಿಯು ವಧುವಿನಂತೆ ಅಥವಾ ವಧುವಿನ ರೂಪದಲ್ಲಿ ಬರಬಹುದು. ವಿಧಿಯನಿಯತಿಯಂತೆ ನಾನರೀತಿಯ ಅಗ್ನಿಪರೀಕ್ಷೆಗಳು ಧುತ್ತೆಂದು ಅವತರಿಸುತ್ತವೆ. ಸಮಸ್ಯೆಗಳ ಸುರಿಮಳೆಯನ್ನೇ ಎದುರಿಸುವ ಸನ್ನಿವೇಶಗಳು ಬರುತ್ತವೆ. ವಿಧಿಯು ಈರೀತಿ ನಾನಾ ಪ್ರಕಾರಗಳಿಂದ ಬಂದು ಆವರಿಸಿದಾಗ, ಸತ್ತೆನೆಂದು ಕಂಗೆಡದಿರು. ಸೋತೆನೆಂದು ಮನೋದೌರ್ಬಲ್ಯಕ್ಕೆ ಒಳಗಾಗಬಾರದು. ವಿಧಿಯೆಂಬ ಶತ್ರುವಿನಸೈನ್ಯವೇ ಸುತ್ತುವರಿದು ಬಲಿತೆಗೆದುಕೊಳ್ಳುತ್ತಿದೆ ಎಂದು ಋಣಾತ್ಮಕವಾಗಿ ಚಿಂತೆಯ ಚಿತೆಯನ್ನು ರಚಿಸಿಕೊಳ್ಳಬಾರದು. ವಿಧಿಯೇ ವಧುವಾಗಿ ಬಂದು ನಿನ್ನೊಳಗಿನ ಸತ್ತ್ವವನ್ನು ಹುರಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರಬಹುದು. ಗುಣತ್ರಯಗಳಲ್ಲಿ ಶ್ರೇಷ್ಠವಾದ ಗುಣ ಸತ್ತ್ವ ಗುಣ. ಸತ್ತ್ವಗುಣಶೀಲರಾದ ಮಹಾಪುರುಷರೆಲ್ಲರೂ ನಾನಾರೀತಿಯ ಅಗ್ನಿದಿವ್ಯಗಳನ್ನೆದುರಿಸಿ ವಿಧಿಯ ವರಮಾಲಿಕೆಯನ್ನು ಸಮಚಿತ್ತದಿಂದ ಸ್ವೀಕರಿಸಿ ವಿಜಯಮಾಲಿಕೆಯನ್ನಾಗಿಸಿಕೊಂಡರು. ಪ್ರತಿಯೊಬ್ಬ ಮಾನವನಲ್ಲೂ ಮೂಲತಃ ಸತ್ತ್ವ ಗುಣವೇ ಇರುವುದು. ಸತ್ತ್ವಗುಣದೊಡನೆ, ರಾಜಸ ಹಾಗೂ ತಾಮಸಗುಣಗಳು ಸೇರಿಕೊಳ್ಳುತ್ತವೆ. ವಿಧಿಯಾಟದಲ್ಲಿ ಮಾನಸಿಕವಾಗಿ ಕುಗ್ಗಿದರೆ ತಾಮಸದೆಡಗೆ ಜಾರುವ ಅಪಾಯ. ಒಳಗಿರುವ ಅಮಿತಶಕ್ತಿಯನ್ನು ತಾನು ತಿಳಿದುಕೊಂಡವನಾಗಿ, 'ಬಾಳು ಗೋಳು' ಎಂದು ಹಳಿಯದೆ ಚಿತ್ತವನು ವಜ್ರವಾಗಿಸಿಕೊಳ್ಳುವುದು ಅನಿವಾರ್ಯ. ವಿಧಿಯ ಆದೇಶದಂತೆ ಆಪತ್ತುಗಳು ಬಂದು ಮುತ್ತಿಟ್ಟಾಗ ಸಮಚಿತ್ತದಿಂದ ಇರಬೇಕು. ಮನಸ್ಸನ್ನು ಕಲ್ಲಾಗಿಸಬೇಕು. 'ಸಹನೆ ವಜ್ರದ ಕವಚವು ನಿನಗೆ' ಎಂದು ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಸೂಚಿಸುತ್ತಾರೆ. ವಜ್ರವು ತನ್ನನ್ನು ರಕ್ಷಿಸುವುದಾದರೆ, ಶತ್ರುಗಳನ್ನು ಚಿಂದಿಚೂರನ್ನಾಗಿಸಬಲ್ಲುದು.
ಬಾಳುವೆಯು ಹೂಗಳ ಪಕಳೆಗಳ ಹಾಸುಗೆಯಲ್ಲ. ನಿರಂತರ ಕಾಳಗದ ರಣರಂಗ. ಹೇಡಿಯಾಗದ ಎಂಟೆದೆಯ ದಿಟ್ಟತನವೇ ಅಸ್ತ್ರಶಸ್ತ್ರ! ಸಹನೆ, ತಾಳ್ಮೆ, ಸಂಯಮ, ವಿವೇಕವೆಂಬ ಚೈತನ್ಯವನ್ನು ಮನದೊಳಗೆ ತುಂಬಿಕೊಂಡು ಹೋರಾಡುವವನು ಬಾಳ ಕಾಳಗದಲ್ಲಿ ವಿಜಯಿಯಾಗುತ್ತಾನೆ.
ಕೋಲಾಹಲಗಳಿಂದ ತುಂಬಿದ ಈ ಬದುಕಿನ ರಣರಂಗದಲ್ಲಿ ಸೋಲುಗೆಲುವುಗಳೇ ಬೆರಳೆಣಿಕೆಯ ದಿನಗಳು. ಜೀವನವನ್ನು ಪ್ರೀತಿಸುವ ಡಿವಿಜಿಯವರು ಬಾಳನ್ನು ಗೋಳೆಂದು ಹೀಗಳೆಯುವವನನ್ನೂ 'ಸಖನೇ' ಎಂದು ಅನುನಯದಿಂದ ಸಮಾಧಾನಪಡಿಸುತ್ತಾರೆ.
ವಿಧಿಯ ಕಟುಪರೀಕ್ಷೆಗಳನ್ನು ಕಂಡು ಭಯಭೀತಿಯ ಹಳ್ಳಕ್ಕೆ ತನ್ನನ್ನು ತಾನೇ ಕೆಡವಿಕೊಳ್ಳಬಾರದು. ಮನಸ್ಸು ಬೆದರಿದರೆ ಅದುರುತ್ತಾರೆ. ಜೀವನದ ಧನಾತ್ಮಕ ಪಥದಿಂದ ಅಪಾಯದ ದಾರಿಯೆಡೆಗೆ ಜಾರುವ ಸಾಧ್ಯತೆ ಇದೆ. ಮನಸ್ಸನ್ನು ಉಕ್ಕಾಗಿಸಬೇಕಂತೆ. ಮನಸ್ಸು ಸಮಚಿತ್ತದಿಂದಿರಬೇಕು. ಸ್ಥಿತಪ್ರಜ್ಞನಾಗಿರಬೇಕು. ಸುಂಟರಗಾಳಿಯಂತೆ ಅಬ್ಬರಿಸಿಬರುವ ವಿಧಿಯ ಕರೆಯನ್ನು ಕೇಳಿ ಹೇಡಿಯಾಗಬಾರದು. ನಡುಗಿ ತನ್ನ ಸತ್ತ್ವವನ್ನು ಮರೆತು ಬಾಗಬಾರದು. ಸೋತೆನೆಂದು ಬಾಗಿದವನು ವಿಧಿವಧುವಿನ ಮಾಲಿಕೆಯನ್ನು ನಿರಾಕರಿಸಿದಂತಾಗುತ್ತದೆ. ಇಂತಹವನನ್ನು ವಿಧಿಯು ವರಿಸುವುದಿಲ್ಲ. ಅವನು ಬಾಳರಣರಂಗದಲ್ಲಿ ಸೋಲನ್ನು ಉಣ್ಣುವುದು ಅನಿವಾರ್ಯ. ಬದುಕಿನ ಕದನದಲ್ಲಿ, ಆಗುಹೋಗುಗಳಿಗೆ ಹದಗೆಡದೆ, ಗುರಿಬಿಡದೆ ಆತ್ಮವಿಶ್ವಾಸದಿಂದ ನಗುನಗುತ್ತಾ ಹೋರಾಡುವವನನ್ನು ವಿಧಿಯು ವಧುವಿನಂತೆ ವಿಜಯಮಾಲಿಕೆಯನ್ನು ತೊಡಿಸಿ ವರಿಸುತ್ತಾಳೆ.
ಆತ್ಮವಿಶ್ವಾಸದಿಂದ ಎಡರುತೊಡರುಗಳನ್ನು ಧನಾತ್ಮಕವಾಗಿ ಸ್ವೀಕರಿಸಿಕೊಂಡು ದಿಟ್ಟತನದಿಂದ ಬಾಳುವವನ್ನು ವಿಧಿಯು ವಿಜಯಲಕ್ಷ್ಮಿಯಾಗಿ ಬಂದು ವರಿಸುತ್ತಾಳೆ.
ಭಾವಾನುವಾದ:
©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
************
ಸತ್ತೆನೆಂದೆನಬೇಡ, ಸೋತೆನೆಂದೆನಬೇಡ,
ಬತ್ತಿತೆನ್ನೊಳು ಸತ್ವದೂಟೆಯೆನಬೇಡ,
ಮೃತ್ಯುವೆನ್ನುವುದೊಂದು ತೆರೆಯಿಳಿತ ; ತೆರೆಯೇರು
ಮತ್ತೆ ತೋರ್ಪುದು ನಾಳೆ -ಮಂಕುತಿಮ್ಮ
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ-
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ
No comments:
Post a Comment