ಮನೆಯೊಳೊಂದು ಮನೆಯ ಕಟ್ಟಹೊರಟರೆಳೆಯರು;
ಅನುವಿನಿಂದ ಗೋಡೆಯಿರಿಸಬಂದ ಮುದುಕನು.
ಕುಡಿಕೆ ಪುಟಿಕೆಗಳನು ರಾಶಿಯಿಟ್ಟರೆಳೆಯರು;
ಅಡಿಗೆಗವನು ಜೋಡಿಸಿಡಲು ಬರುವ ಮುದುಕನು.
ಕಡಲೆಪುರಿಯ ಭಕ್ಷ್ಯಗಳನು ಮಾಳ್ಪರೆಳೆಯರು;
ಬಡಿಸಿರಿ, ಹಸಿವೆನುತಲೆಲೆಯ ತರುವ ಮುದುಕನು.
ಬೊಂಬೆ ಮದುವೆ; ಹಸೆಯ ಹಾಸಿರೆನುವರೆಳೆಯರು;
ತುಂಬ ಬಾಗಿನಗಳ ತನ್ನಿರೆನುವ ಮುದುಕನು.
ಮಾಡಲಿಲ್ಲ, ತಿಂಡಿ; ಹೋಗಿರೆನುವರೆಳೆಯರು;
ಹಾಡೆ ಸುಬ್ಬಿ, ಕುಣಿಯೆ ವೆಂಕಿ, ಎನುವ ಮುದುಕನು.
ತಿಂಡಿ ಕೊಟ್ಟರಾಗ ಹಾಡು ಎನುವರೆಳೆಯರು;
ಕಂಡಸಕ್ರೆ ಕೈಲಿ ತೋರಿ ಬಿಗಿವ ಮುದುಕನು.
ಸುಬ್ಬಿ ಕೊನೆಗೆ ಹಾಡೆ ಸುಬ್ಬನಣಕುಗೈದನು;
ಉಬ್ಬಿಯುಬ್ಬಿ ನಕ್ಕರೆಲ್ಲ, ನಕ್ಕ ಮುದುಕನು.
ಮುನಿದು ಸುಬ್ಬಿಯಳಲು ಸುಬ್ಬ ಓಡಲೆದ್ದನು;
ಮುನಿಯನವನ ಹಿಡಿಯ ಹೊರಟು ಜಾರಿಬಿದ್ದನು.
ಅಳುವು ನಗುವು ಮುಳಿಸು ಸೆಣಸು-ಆಯಿತಬ್ಬರ;
ಎಳೆಯರಾಟ ಮೊದಲು, ಕಡೆಗೆ ಭಾರತಸ್ವರ.
ಮುಗುಳುನಗೆಯ ತಳೆದು ಮುದುಕನಾಗ ಸಕ್ರೆಯ
ತೆಗೆದು ಹಂಚಿ ಪೇಳ್ದ ಭೀಮ ಬಕರ ಸುದ್ದಿಯ.
ಕೇಳಿ ನಗುತ ಬಾಲರೆಲ್ಲ ಚದರಿ ನಡೆದರು;
ಬಾಳು ಇಷ್ಟೆಯೆಂದು ಮುದುಕ ಚಿಟಿಕೆ ಹೊಡೆದನು.
ಬಾಲಲೀಲೆಯಲ್ಲಿ ಪಾಲುಗೊಂಡ ಮುದುಕನ
ಹೋಲು ಭವದಿ ಸಖನೆ ಮುಕುತಿಗದುವೆ ಸಾಧನ.
ಪುತ್ತಳಿಯಾಟವ ಜೀವಿತ- ।
ಕರ್ತವ್ಯಮೆನುತ್ತೆ ಘಾಸಿಪಡುವಂ ಬಾಲಂ ॥
ನಿತ್ಯದ ಸಂಸೃತಿ ಬೊಂಬೆಯ ।
ಬಿತ್ತರಮೆಂದರಿತು ನಟಿಸಿ ನಲಿವಂ ಜಾಣಂ ॥
**********
ಎಳೆಯ ಮಕ್ಕಳು ಮನೆಯಲ್ಲಿ ಮನೆಕಟ್ಟುವ ಆಟವಾಡುತ್ತಿದ್ದರು. ಮಕ್ಕಳ ಮನೆಕಟ್ಟುವ ಆಟದಲ್ಲಿ ಮುದುಕನು ಗೋಡೆಕಟ್ಟುವ ಸಹಾಯಕನಾಗಿ ಸೇರಿಕೊಂಡನು. ಮಕ್ಕಳು ಮಡಿಕೆ ಕುಡಿಕೆಗಳನ್ನು ರಾಶಿಪೇರಿಸಿದರು. ಮಕ್ಕಳು ಅವರಿಗೆ ತೋಚಿದಂತೆ ರಾಶಿಗೂಡಿದ್ದ ಮಡಿಕೆಗಳನ್ನು, ಅಜ್ಜಯ್ಯನು ಬಂದು ಅಡುಗೆಗೆ ಬೇಕಾದಂತೆ ನೇರ್ಪುಗೊಳಿಸಲು ಜೋಡಿಸಿಡಬಯಸಿದನು.
ಮಕ್ಕಳು ಕಡಲೆಪುರಿಗಳನ್ನು ಭಕ್ಷ್ಯಗಳೆಂದು ಅಣಿಗೊಳಿಸತ್ತಿದ್ದರು.
ಮುದುಕನು, " ಹಸಿವು ಹಸಿವು, ಬಡಿಸಿ" ಎಂದೆನ್ನುತ್ತಾ ಬಾಳೆ ಎಲೆ ಹಾಸಿದನು.
"ಬೊಂಬೆಮನೆಯಿದು. ಹಸೆಯ ಹಾಸಿ " ಎಂದೆನ್ನುತ್ತಾರೆ ಮಕ್ಕಳು.
"ಸುಮಂಗಲಿಯರಿಗಾಗಿ ತುಂಬಾ ಬಾಗಿನಗಳನ್ನು ಸಜ್ಜುಗೊಳಿಸಿ" ಎಂದೆನ್ನುವನು ಮುದುಕನು.
"ತಿಂಡಿ-ತೀರ್ಥ ಊಟಕೂಟವಿಲ್ಲ, ಹೋಗಿ ಹೋಗಿ" ಎಂದರು ಮಕ್ಕಳು.
ಮುದುಕನು, " ಹಾಡೆ ಸುಬ್ಬಿ ಕುಣಿಯೊ ವೆಂಕಿ" ಎಂದು ಮಕ್ಕಳನ್ನು ಹುರಿದುಂಬಿಸಿದನು.
" ತಿಂಡಿಕೊಟ್ಟರೆ ಮಾತ್ರ ಹಾಡು" ಎಂಬುದು ಮಕ್ಕಳ ಸವಾಲು.
ಘಾಟಿ ಮುದುಕನು ಅಂಗೈಯಲ್ಲಿ ಕಲ್ಲುಸಕ್ಕರೆಯ ಖಂಡವನ್ನು ತೋರಿಸಿದಂತೆ ಮಾಡಿ ಕೈಮುಚ್ಚಿದನು.
ಸುಬ್ಬಿ ಕುಣಿದಳು. ಸುಬ್ಬನು ಅಣಕಿಸಿದನು. ಎಲ್ಲರೂ ಒಟ್ಟಾಗಿ ನಗತೊಡಗಿದರು. ಮುದುಕನೂ ಪಕಪಕನಕ್ಕನು. ಅಣಕಿಸಿದ ಸುಬ್ಬನ ಬಗೆಗೆ ಕೋಪಕ್ಕಿಂತ ಎಲ್ಲರೂ ನನ್ನ ಕುಣಿತವನ್ನು ಹಾಸ್ಯಮಾಡಿದರೆಂದು ಅವಮಾನಿತಳಾಗಿ ಸುಬ್ಬಿಯುಕೋಪಿಸುತ್ತಾ ಅಳತೊಡಗಿದಳು. ಅಷ್ಟರಲ್ಲಿ ಸುಬ್ಬ ಎದ್ದು ಓಡಬಯಸಿದನು. ಓಡುತ್ತಿದ್ದ ಸುಬ್ಬನನ್ನು ಮುನಿಯನು ಹಿಡಿಯಲೆಂದು ಬೆಂಬತ್ತಿದನು. ಓಡುವ ರಭಸಕ್ಕೆ ಮುನಿಯನು ಕಾಲುಜಾರಿಬಿದ್ದನು.
ನಗು ಅಳು, ಮುನಿಸು ಸೆಣಸಾಟಗಳಿಂದ ಗಜಿಬಿಜಿಯಾಯಿತು.
ಮೊದಲು ಎಳೆಯರಾಟ. ಮುಂದೆ ದೇಶದುದ್ದಗಲಕ್ಕೆ 'ಮಹಾಭಾರತ'ದ ರಣತೂರ್ಯದ ಕೋಲಾಹಲ!
ಘಾಟಿಸ್ವಭಾವದ ಮುದುಕನು ಮುಗುಳು ನಗುತ್ತಾ ಸಕ್ಕರೆಯನ್ನು ಮಕ್ಕಳಿಗೆ ಹಂಚಿ, ಬಕರ ಸುದ್ದಿಯನ್ನು ಹೇಳಿದನು. ಯಾರು ಬಕರಗಳೆಂಬುದನ್ನು ಅರಿಯದ ಎಳೆಯ ಮಕ್ಕಳು ಮುಗ್ಧವಾಗಿ ನಗುತ್ತಾ ಚದರಿದರು. 'ಬಾಳು ಎಂದರೆ ಇಷ್ಟೆ' ಎಂದು ಮುದುಕನು ಚಿಟಿಕೆ ಹೊಡೆದನು. ಮಕ್ಕಳಾಟದಲ್ಲಿ ಮುದುಕನಂತೆ ಸಮರಸವಾಗಿ ಹೊಂದಿಕೊಂಡು ಬಾಳಬೇಕು. ಇದು ಮುಕ್ತಿಸಾಧನ ಎನ್ನುತ್ತಾರೆ ಡಿವಿಜಿ.
ಗೊಂಬೆಯಾಟವು ಜೀವನದ ಕರ್ತವ್ಯದತ್ತ ಬೊಟ್ಟುಮಾಡುತ್ತದೆ. ನಿತ್ಯದ ಸಂಸೃತಿ ಬೊಂಬೆಯಾಟದ ಸೂತ್ರದಂತೆ ನಡೆಯುತ್ತದೆ. ಜಾಣನಾದವನು ಸೂತ್ರಧಾರನ ಕೈಚಳಕಕ್ಕೆ ತಕ್ಕಂತೆ ಕುಣಿಯುತ್ತಾನೆ.
ಕಾಲನ ಲೀಲೆಯನ್ನು ಮಕ್ಕಳ ಮನೆಕಟ್ಟುವಾಟದ ಪ್ರತಿಮೆಯೊಂದಿಗೆ ಕವಿವರ ಡಿ ವಿ ಗುಂಡಪ್ಪನವರು ಸುಂದರವಾದ ಚಿತ್ರಣವನ್ನು ರೂಪಿಸಿದ್ದಾರೆ. ಕಾಲನೇ ಸಾವಿಲ್ಲದ ಘಾಟಿ ಮುದುಕ. ಲೋಕದ ಜನರೆಲ್ಲ ಮಕ್ಕಳು. ಸಂಸಾರವೇ, ಮಕ್ಕಳು ಕಟ್ಟುತ್ತಿರುವ ಆಟದ ಮನೆ. ಮುದುಕನು ಅಂಗೈಯೊಳಗೆ ಇರಿಸಿಕೊಂಡು ಕಣ್ಣುಮುಚ್ಚಾಲೆಯಾಡಿಸುವ ಕಂಡಸಕ್ಕರೆಯು ಸುಖ ಸಂತೋಷ ಫಲನಿರೀಕ್ಷೆಯ ನಿರೀಕ್ಷೆಗಳು. ಮಕ್ಕಳಾಟವು ಮುಂದೆ 'ಮಹಾಭಾರತ' ದ ಕೋಲಾಹಲಕ್ಕೆ ಮುನ್ನುಡಿ.
ಭಾವಾನುವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
To receive the posts on your personal email, pls subscribe to https://groups.google.com/g/todayskagga
No comments:
Post a Comment