Monday, 18 December 2023

ರಂಗಸೆಟ್ಟಿ - ಕೇತಕೀವನ - ಡಿವಿಜಿ

ಪುರದ ಧನಿಕರಲಿ ಮೊದಲಿಗರವನ ಜನರು 
ಮರೆಯದಿರುವಂತೆಸಗಲೆಂದವನ ಸುತರು 
ಹೊಸ ಮಹಡಿಮನೆಯ ಕಟ್ಟಿಸಿ ಕಲಶವಿಟ್ಟು 
ಹಸನಾದ ಮನೆಸಾಲೆಗತ್ತಲೆಡೆಬಿಟ್ಟು 
ಕೆಂಪುಶೆಟ್ಟಿಯ ಬೀದಿಯೆಂದು ಹೆಸರಿಟ್ಟರ್‍ 
ಪೆಂಪಿನಿಂದದು ಬೆಳೆವುದೆಂದಾಸೆಪಟ್ಟರ್‍. 

ಹರದಾರಿಯುದ್ದವಿರ್ಕೆಲದಿ ಮನೆಮಠಗಳ್‍ 
ಅರವಟಿಗೆ ಸತ್ರಗಳು ಗುಡಿಗಳಂಗಳಗಳ್‍ 
ಬರುವ ಹೋಗುವ ಜನದ ತಂಡತಂಡಗಳು 
ತುರು ಕರುಗಳಾಳುಕಾಳುಗಳು ಬಂಡಿಗಳು 
ನಗುಗಳಾಟಗಳು ಮೆರೆತಗಳು ಮೇಳಗಳು 
ರಗಳೆಗಳು ಜಗಳಗಳು ಕೂಗುಗೋಳುಗಳು 
ಈ ಪರಿಯ ಜೀವಕಳೆಯಿಂದಲಾ ಬೀದಿ 
ಆ ಪುರಕೆ ತಿಲಕವಹುದೆಂದವರು ಬಗೆದರ್‍. 

ಇಂದು ನೋಡಾ ಮಹಡಿಮನೆಯತ್ತಲಿಲ್ಲ 
ಮಂದಿರದ ಸಾಲ್ಗಳಾ ಕೆಲದಿ ಬೆಳೆದಿಲ್ಲ. 
ಅಲ್ಲಿ ನರಜಂತುಗಳ ಹೆಜ್ಜೆಯೂರಿಲ್ಲ. 
ಫುಲ್ಲಸುಮದಿಂ ಬಳುಕುವುದ್ಯಾನವಿಲ್ಲ 
ಗೊಬ್ಬರದ ನಾತಗಳು ಕಸದ ರಾಶಿಗಳು 
ಉಬ್ಬಿಕೊಂಡಿಹುವಲ್ಲಿ ಹೊಲಸು ಹಾಳುಗಳು. 
ನೋಡಲ್ಲಿ ಲಾಲ್‍ಬಾಗಿಗನತಿದೂರದಲಿ 
ಬೀಡುಬಯಲಿನೊಳೊಂದು ಕಂಬ ನಿಂದಿಹುದು 
ನಾಚಿಕೆಯ ನೀಗಿ ತಾಳಿಹುದು ಪಾಳ್ಮೊಗವ 
ಸೂಚಿಸುತ ನರಯಶಃಕಾಮನೆಯ ಫಲವ 
ಅದರ ನೆತ್ತಿಯ ಶಿಲಾಶಾಸನವ ಪಠಿಸು 
ಹುದುಗಿಹುದು ಕೆಂಪುಶೆಟ್ಟಿಯ ಬೀದಿಕನಸು.

*********

ನಗರದಲ್ಲಿ ಹೆಸರಾದ ಧನಿಕರಲ್ಲಿ ರಂಗಸೆಟ್ಟಿಯಹೆಸರು ಮೊದಲ ಪಂಕ್ತಿಯದು. ಸೆಟ್ಟರ ಹೆಸರನ್ನು  ಜನರು ಮರೆಯದೆ ಮೆರೆಯ ಬೇಕೆಂಬ  ಹಂಬಲದಿಂದ ಸೆಟ್ಟಿಯ ಮಕ್ಕಳು  ಸೇರಿ  ಬಲುದೊಡ್ಡ ಮಹಡಿಮನೆಯನ್ನು ಕಟ್ಟಿಸಿದರು‌.  ಮನೆಗಾನಿಸಿದಂತೆ  ಕಲಶವೇರಿಸಿದ  ಪುಟ್ಟ ಗುಡಿಯನ್ನೂ ಕಟ್ಟಿಸಿದರು.  ಅರಮನೆಯಂತೆ ಕಂಗೊಳಿಸುವ ವಿಲಾಸೀ  ಬಂಗಲೆಯು  ನೋಡುಗರ ಕಣ್ಣುಕೋರೈಸುವಂತೆ  ತಲೆಎತ್ತಿತು.

 ಸೆಟ್ಟರ ಮನೆ ಅಕ್ಕಪಕ್ಕಗಳಲ್ಲಿ  ವಿಶಾಲವಾದ ಬೀದಿಗಳಾಗಿ ಸ್ಥಳಾವಕಾಶವನ್ನು  'ಕೆಂಪುಶೆಟ್ಟಿಯಬೀದಿ' ಎಂದು ಬೀದಿಗಳಿಗೆ ನಾಮಕರಣವಾಯಿತು.

ಆ ಬೀದಿಗಳು  ವ್ಯಾಪಾರಿಗಳ ಅಂಗಡಿಗಳಿಂದ ಕಿಕ್ಕಿರಿದು ತುಂಬಿ ಬೀದಿಯ ಹೆಸರಿನೊಂದಿಗೆ ಸೆಟ್ಟರ ಘನತೆ ಗೌರವಗಳಿಗೆ ಗರಿಮೂಡುವುದೆಂದು ಸೆಟ್ಟರ ಮಕ್ಕಳ ಚಿಂತನೆಯಿತ್ತು.

 (ಸೆಟ್ಟರಹೆಸರಿನೊಂದಿಗೆ ಬೀದಿಗಳು ಬೆಳೆಯುವುದರೊಡನೆ ತಮ್ಮ ಒಳಹಿತಾಸಕ್ತಿಯು ಕೈಗೂಡುವುದೆಂಬ ಲೆಕ್ಕಾಚಾರ ಸೆಟ್ಟರ ಮಕ್ಕಳಿಗುತ್ತು ಎಂದು ಹೇಳಬೇಕಿಲ್ಲ.)  

    ಸೆಟ್ಟರ ಮನೆಯ ಇಕ್ಕೆಲದ ಬೀದಿಗಳು ಸುಮಾರು ಎರಡುಮೂರು ಮೈಲುಗಳಷ್ಟು ವಿಸ್ತರಿಸಬಹುದಾದಷ್ಟು ವಿಶಾಲ. ಈ ಬೀದಿಗಳ ಉದ್ದಗಲಕ್ಕೂ ಮನೆಮಠಗಳು, ಅರವಟ್ಟಿಕೆಗಳು, ಗುಡಿಗುಂಡಾರಗಳು, ಧರ್ಮಛತ್ರಗಳಿಂದ ಕಿಕ್ಕಿರಿದು ತುಂಬಿ ಸದಾ ಕಾಲ ಜನರಿಂದ ಕಿಕ್ಕಿರಿದು ತಂದೆಯ ಹೆಸರು  ಅಜರಾಮರವಾಗುದು ಮಾತ್ರವಲ್ಲದೆ, ತಾವೂ ಅನಾಯಾಸವಾಗಿ ಹೆಸರು ಮತ್ತು ಗಳಿಕೆಯನ್ನು ಒಟ್ಟಿಗೆ ಸಂಪಾದಿಸಬಹುದೆಂದು ಲೆಕ್ಕಿಸಿದ್ದರು.

 ಜನಜಾನುವಾರು, ಆಳುಕಾಳುಗಳು, ಓಡಾಡುವ ಬಂಡಿಗಳಿಂದ ಜನರ ವ್ಯವಹಾರ, ವ್ಯಾಪಾರಾದಿಗಳಿಂದ ಬಿಡುವಿಲ್ಲದ ಜನಸಂದಣಿಯಿಂದ  ನಗು ಉಲ್ಲಾಸ, ಮೆರೆತಗಳಿಂದ ಗಜಿಬಿಜಿಯಾದ ಜನಜೀವನದ ನಡುವೆ ರಗಳೆಗಳು, ಒಳಜಗಳಗಳು, ಕೂಗುಗೋಳುಗಳಿಂದ  ಬೀದಿಗಳು ಎಂದೆಂದೂ ಜೀವಕಳೆಯಿಂದ ನಗರಕ್ಕೆ ತಿಲಕಪ್ರಾಯವಾಗಿ ಶೋಭಿಸುವುದೆಂದು ಸೆಟ್ಟಿಯ ಮಕ್ಕಳು ಕನಸುಕಾಣುತ್ತಿದ್ದರು.
 'ಹಗಲುಗನಸುಗಳು ನೆನಸಾಗುವುದು ಇರುಳಕನಸಿನಲ್ಲಿ' ಎಂಬ‌ ಮಾತಿದೆ. 

     ಇಂದು ನೋಡಿದರೆ, ಅಲ್ಲಿ ರಂಗಸೆಟ್ಟಿಯ ಮಹಡಿ ಮನೆಯಿತ್ತು ಎಂಬುದರ ಕುರುಹೂ ಕಾಣುತ್ತಿಲ್ಲ. ಮಂದಿರವಿರುವ ಬೀದಿಯೂ ಬೆಳೆಯಲಿಲ್ಲ. ಬಿಕೋ ಎನ್ನತ್ತಿದೆ. ಬಣ ಬಣವೆನ್ನುತ್ತಿದೆ. ಸೆಟ್ಟರ ಹೆಸರುಳ್ಳ  ಬೀದಿಯಲ್ಲಿ ನರಪಿಳ್ಳೆಗಳ ಸುಳಿವಿಲ್ಲ‌. ಸೆಟ್ಟರ ಹೆಸರಲ್ಲಿ ಕಂಗೊಳಿಸಬೇಕಾಗಿದ್ದ ಮಗಮಗಿಸುವ ಸುಮಸುಂದರ ಉದ್ಯಾನವನವು ಕನಸಲ್ಲೇ ಉಳಿಯಿತು. 

    ಬೀದಿಯ ಸುತ್ತಮುತ್ತೆಲ್ಲಾ ಕಸದರಾಶಿತಿಪ್ಪೆಗಳಿಂದ ಇಡುಕಿದೆ. ಜನರು ಮೂಗುಮುಚ್ಚಿಕೊಂಡು ಓಡಾಡಬೇಕಾದಂತಹ ಪರಿಸರವಾಗಿದೆ. ಎಲ್ಲೆಲ್ಲೂ ಹೊಲಸು ಸುರಿಯುತ್ತಿದೆ.

     ಲಾಲ್ ಬಾಗಿಗೆ ಸಮೀಪದಲ್ಲಿ  ಬಟ್ಟಬಯಲಿನಲ್ಲಿ ಒಂದು  ಕಲ್ಲುಕಂಬವು ದೂರಕ್ಕೆ ಗೋಚರಿಸುತ್ತದೆ.  ಸ್ವಾರ್ಥದ ಯಶೋಡಿಂಡಿಮದ ಕನಸಿನ ಧ್ವನಿಯ ಸಂಕೇತವೆಂಬಂತೆ ಆ ಕಂಬ ಮೂಕ ಸಾಕ್ಷಿಯಾಗಿ ಕೂಗಿ ಹೇಳುತಿದೆ. ಆ ಕಲ್ಲು ಕಂಬದ ಮೈಯಲ್ಲಿ 'ಕೆಂಪುಶೆಟ್ಟಿಯ ಬೀದಿ' ಎಂದು ಶಿಲಾಶಾಸನದಂತೆ ಬರೆದಿರುವುದಷ್ಟೇ ಕಾಣುತ್ತಿದೆ.  ಕೆಂಪುಸೆಟ್ಟಿಯ ಬೀದಿ ಎಂಬುದು ಕನಸಾಗಿಯೇ ಉಳಿಯಿತು. ಸ್ವಾರ್ಥಸಾಧನೆಯ ಹಗಲುಗನಸು  ನೆನಸಾಗಲಿಲ್ಲ.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Sunday, 17 December 2023

ಹುಟ್ಟು ಹಕ್ಕು - ಕೇತಕೀವನ - ಡಿವಿಜಿ

ಹುಟ್ಟಿನಿಂದ ಬಂದ ಹಕ್ಕುಗಳಂತೆ! ಹುಚ್ಚರಿರ! 
ಸೃಷ್ಟಿಯಾ ದಾನಶಾಸನವೆಲ್ಲಿ, ಮರುಳರಿರ? 
ಕಟ್ಟುಕಥೆಗಳ ಕೇಳಿ ಕೆರಳದಿರಿ, ದುಡುಕದಿರಿ; 
ತೊಟ್ಟಿಲಿಂ ನಮಗೆ ಬಂದಿಹುವೆರಡೆ ಹಕ್ಕುಗಳು; 
ಹೊಟ್ಟೆಯಲಿ ಕೊರೆಯಾದೊಡತ್ತು ಕರೆವುದದೊಂದು, 
ಬಟ್ಟೆಯೊಳೆ ಹೇಸಿಕೆಯ ಮಾಡಿಕೊಳ್ಳುವುದೊಂದು. 
ಮಿಕ್ಕೆಲ್ಲ ಹಕ್ಕುಗಳು ನರಯುಕ್ತಿ ಸೃಷ್ಟನೆಯೆ 
ದಕ್ಕಿಸುವುದವುಗಳನು ಪುರುಷಮತಿಜಾಗೃತಿಯೆ. 

ಪ್ರಕೃತಿಯಲಿ ದಯೆಯಿಲ್ಲ, ದಾಕ್ಷಿಣ್ಯಮಣಮಿಲ್ಲ 
ಸುಕೃತದುಷ್ಕೃತಗಳಾ ರಾಜ್ಯದಲಿ ದೇಹದವು 
ಹೊಟ್ಟೆಯದೆ ಕಟ್ಟಾಜ್ಞೆ :- “ಹಸಿಯೆ ಹಿಡಿ, ಬಡಿ, ತಿನ್ನು" 
ದಿಟ್ಟತನ ಬೇಡವೆಂಬನಿಗಿಲ್ಲಿ ನೆಲೆಯಿಲ್ಲ. 
ನೋಡಿರೀ ಜಗದ ಜಂತುಗಳು ಬದುಕುವ ನಯವ. 
ಜೇಡುಹುಳುವಿನ ನೀತಿ ಸೊಳ್ಳೆಗಳನಾರ್ಜಿಪುದೆ. 
ಹುಲ್ಲೆ ಸಾಧುವೆನುತ್ತೆ ಬಿಟ್ಟ ಹುಲಿ ಬದುಕುವುದೆ? 
ಕೊಲ್ಲಬೇಕಿಲಿಯ ಬೆಕ್ಕಂತು ಬೆಕ್ಕನು ನಾಯಿ. 
ಸಸಿಗುಣಿಸು ಕೊಳೆತ ಸಸಿ; ನರನುಣಿಸು ಕಳಿತ ಸಸಿ. 

ನಶಿಸುವನು ಜೀವಿಯಂಶವ ಮುಟ್ಟಲೊಲ್ಲದನು. 
ಜೀವಿ ಜೀವಿಗೆ ತುತ್ತು; ಜೀವಿ ಜೀವಿಗೆ ಮಿತ್ತು. 
ಈ ವಿಚಿತ್ರ ನ್ಯಾಯವೊಂದೆ ಸೃಷ್ಟಿಯ ಪಾಠ. 
ಅದಕಿಂತ ಮೇಲಾದ ಹುಟ್ಟುಹಕ್ಕುಂಟೇನು? 
ಉದರಭರಣನ್ಯಾಯಕಿಂತ ಪಿರಿದಿಹುದೇನು? 

ಇಹುದು ಕುಕ್ಷಿಯ ಜೊತೆಗೆ ಬೇರೊಂದು ಚೋದಕವು 
ಗಹನವಾಗಿಹುದಾತ್ಮಸತ್ತ್ವದಲಿ ತಾನಡಗಿ 
ಅದರ ಮಹಿಮೆಯೆ ಬಗೆಯೆ ನಮ್ಮೆಲ್ಲ ಮಾನವತೆ 
ಉದಯಿಸುವುವದರಿಂದೆ ನಮ್ಮೆಲ್ಲ ಧರ್ಮಗಳು, 
ನೀತಿಗಳು, ನಿಯಮಗಳು, ನಾಗರಿಕ ಸೂತ್ರಗಳು, 
ಜಾತಿ ಕುಲ ಗೃಹ ರಾಷ್ಟ್ರ ಜನಪದ ಸಮಾಜಗಳು. 
ಈ ಮನುಷ್ಯವಿವೇಕವಿಕಸನದ ಕಥೆಗೊಂದು 
ಸೀಮೆಗಡಿ ಗೊತ್ತಿಲ್ಲವದು ಪೂರ್ಣವಾಗಿಲ್ಲ. 
ಬೆಳೆಯಬೇಕಿನ್ನುಮೆಂತೆಂತೊ ಪೌರುಷಯುಕ್ತಿ 
ಅಳೆಯಬೇಕಿನ್ನೆನಿತೊ ಕಡಲುಗಳ ಆಳವನು 
ಮುಟ್ಟಬೇಕೆನಿತೆನಿತೊ ಬೆಟ್ಟಗಳ ತುದಿಗಳನು 
ಕಟ್ಟಬೇಕೆನಿತೆನಿತೊ ಯಂತ್ರಸಾಧನಗಳನು 
ಸಾಸಿರದ ಸೀಳ್ದಾರಿಗಳ ಪಿಡಿಯುತಲೆದಲೆದು 
ಆಸೆಯಿಂ ಘಾಸಿವಡುತಿಹುದೆ ಮನುಜನ ಹಕ್ಕು 
ಪುರುಷಚೇತನವಂತು ಪಾರುತಿರೆ ಬಾಳುವುದು 
ಅದೆ ಮಾನವನ ಹಕ್ಕು; ಆದೊಡಾ ಹಕ್ಕಿಗಿಹ 
ಎದುರಾಳು ಮಾನವನೆ-ಮಾನವನ ಮೃಗಶೇಷ. 
ಬೇರಿನಂಶವದಿನಿತು ಫಲದೊಳಗಮಿರುವಂತೆ 
ಸೇರಿಹುದು ಮನುಜನೊಳು ಮೃಗದ ಗುಣವನಿತಿನಿತು. 
ಪ್ರಕೃತಿಪಾದವೆ ಮೃಗತೆ, ಮಸ್ತಕವೆ ಮಾನವತೆ. 
ನಿಕೃತಿಯೊಮ್ಮೊಮ್ಮೆ ಪದದಿಂದ ಶಿರಕಾಗುವುದು. 
ಶಿರವು ಮುನ್ನಡೆಯೆನಲ್‍ ಚರಣ ಸರಿವುದುಮುಂಟು 
ಸ್ಥಿರದಿ ನಿಲುವುದುಮುಂಟು, ಪಿನ್‍ ತಿರುಗುವುದುಮುಂಟು. 
ಇಂತು ಶಿರಚರಣಗಳ ಹುರುಡು ಹೋರಾಟದಲಿ 
ಕಂತುಕವ ಪೋಲುವುದು ನರನ ಮಿಡಿಗಾಯ್‍ಪಾಡು. 
ಮಿಡಿಯ ಪಣ್ಣಾಗಿಸುವ ಶಾಖವನು ನಿರವಿಪೊಡೆ 
ಒಡಹುಟ್ಟಿ ಬಂದ ಮೃಗತೆಯನು ನರನಳಿಸುವೊಡೆ 
ಮನುಜಪದಗತಿಯ ಪೂರ್ಣತೆಯೆಡೆಗೆ ತಿರುಗಿಪೊಡೆ 
ಅನುವಾಗಿ ನಿಲಬೇಕು ಮತಿಯ ದಿಗ್ವಿಜಯಕ್ಕೆ. 

ತನ್ನೊಳಗಮಂತು ಪೊರಗಂ ಸತ್ತ್ವಗಳನರಸಿ 
ಉನ್ನತಿಗೆ ಯತ್ನಿಪ ಸ್ವಾತಂತ್ರ್ಯಮೇ ಹಕ್ಕು. 
ಅಲೆಯುತಿಹುದೆಲೆಯಂತೆ ಧರೆಯೊಳಿಂದಾ ಹಕ್ಕು 
ಹಲರದಕೆ ಹಗೆಗಳ್‍-ಅವಿಚಾರಿಗಳು, ಭೀರುಗಳು, 
ಉಪಯೋಗಿಸುವ ನೆವದೊಳಪಯೋಗಗೆಯ್ಯುವರು 
ಅಪರಿಷ್ಕೃತಾತುಮರು, ಗೂಢ ಮೃಗಚೇತನರು. 

ಹುಟ್ಟಿನಿಂ ಹಕ್ಕೆನದಿರ್‍ ಅದಕೆ ಹುಟ್ಟಾಸೆ ವಿಷ. 
ಸೃಷ್ಟಿಜಾಲವ ಕಳಚುವಾತ್ಮಸಾಧನೆ ಹಕ್ಕು 
ಹುಟ್ಟಿನಿಂ ಬಂದ ಹಕ್ಕೇನು, ಪಶುಗಳ ಹಕ್ಕು 
ಶಿಷ್ಟಧರ್ಮವಿವೇಕದಿಂದ ಪುರುಷರ ಹಕ್ಕು.

***********************

ಭಗವಂತನು ಯಾರಿಗೂ  ದಾನಶಾಸನವೆಂದು ನಿಯಮಿಸಿಲ್ಲ.  ಜನ್ಮಸಿದ್ಧಹಕ್ಕು ಎಂದು ಜನರು ಬಡಿದಾಡುತ್ತಾರೆ. ಇಂತಹ ಮಾತು ಮರುಳು‌ಮಾತು ಎನ್ನುತ್ತಾರೆ ಕವಿವರ ಡಿವಿ ಗುಂಡಪ್ಪನವರು.

ಹುಟ್ಟಿನಿಂದ ಯಾರೂ ಯಾವ ಹಕ್ಕನ್ನೂ ಪಡೆಯುವುದಿಲ್ಲ. ಈ ಜನ್ಮಜಾತ ಹಕ್ಕು ಎಂಬುದೇನಾದರೂ ಇದ್ದರೆ, ಅವೆಲ್ಲ ಕಟ್ಟುಕತೆ.  ಕಟ್ಟುಕತೆಗಳನ್ನು ಕೇಳಿ  ಸಂಯಮವನ್ನು ಕಳೆದುಕೊಳ್ಳಬಾರದು.
    
ಹುಟ್ಟುವಾಗಲೇ ನಾವು ಪಡೆದುಕೊಂಡು ಬಂದುದು ಎರಡೇ ಹಕ್ಕುಗಳಂತೆ. ಮೊದಲನೆಯದು ಹೊಟ್ಟೆ ಹಸಿದಾಗ ಅತ್ತು ಕರೆಯುವುದು. ಹಸಿವಿನ ತುತ್ತನ್ನು ಕೇಳಿಪಡೆಯುವುದು‌. ಎರಡನೆಯದು ಬಟ್ಟೆಯಲ್ಲೇ ಹೇಸಿಗೆಯನ್ನು  ಸುರಿಸುವುದು. ಉಣ್ಣುವುದು  ವಿಸರ್ಜಿಸುವುದೆರಡು ನಾವು ಹುಟ್ಟಿನಿಂದ ಪಡೆದ ಹಕ್ಕುಗಳು.

ಇವೆರಡನ್ನು ಹೊರತಾಗಿ ಇನ್ನುಳಿದವೆಲ್ಲವೂ ಮನುಷ್ಯರು ತಮ್ಮತಮ್ಮ ಸ್ವಾರ್ಥ ಸಾಧನೆಗಳಿಗಾಗಿ ಬಲವಂತವಾಗಿ ಸೃಷ್ಟಿಸಿದ ಹಕ್ಕುಗಳೆಂಬ ನಿರ್ಬಂಧಗಳು‌.
     
ಪ್ರಕೃತಿಯಲ್ಲಿ ದಯೆ ದಾಕ್ಷಿಣ್ಯಗಳಿಲ್ಲ. ಹಸಿವನ್ನು ಹಿಂಗಿಸಲು 'ಹಿಡಿ ಬಡಿ ತಿನ್ನು' ಎಂಬುದಷ್ಟೇ  ಪ್ರಕೃತಿಯ ರಾಜ್ಯದಲ್ಲಿ ಹೊಟ್ಟೆಯದೇ ಕಟ್ಟಪ್ಪಣೆ.   ಇದು ಶಕ್ತಿಪ್ರದರ್ಶನದ ಸಾಮ್ರಾಜ್ಯ. ದಿಟ್ಟತನವಿಲ್ಲದೆ ಇಲ್ಲಿ ಬಾಳುವೆಯಿಲ್ಲ. ಚಿಗರೆಗಳು ಸಾಧುವೆಂದು ಸೆಣಸಾಡಿ ತಿನ್ನದಿದ್ದರೆ ಹುಲಿಯು,  ಬದುಕುವುದುಂಟೇ! ಬೆಕ್ಕು ಇಲಿಯನ್ನು ಕೊಲ್ಲುವುದೇ ಅದಕ್ಕೆ ಆಹಾರಧರ್ಮ. ನಾಯಿಬೆಕ್ಕನ್ನು  ಬೆಂಬತ್ತುವುದೇ ಪಶುಧರ್ಮ. ಕೊಳೆತ ಸಸಿಗಳು ಜೀವಂತ ಸಸಿಗೆ ಆಹಾರ. ಮಾಗಿ ಬಾಗಿದ ಸಸ್ಯಗಳು ಮನುಷ್ಯನ ಆಹಾರ.
       ‌‌‌   
ಜೀವಿಗಳನ್ನು ಹಿಂಸಿಸದೆ ಮನುಷ್ಯನಿಗೆ ಬಾಳುವೆಯಿಲ್ಲ. ಜೀವಿಜೀವಿಗೆ ಹೊಟ್ಟೆಬಟ್ಟೆಗಳಿಗೆ ಆಧಾರ. ಜೀವಿ ಜೀವಿಗೆ ಮೃತ್ಯುವೆಂಬುದು ಪ್ರಕೃತಿಧರ್ಮ. ಇದು ವಿಚಿತ್ರವೆನ್ನಿಸಿದರೂ, ಇದುವೇ ಪ್ರಕೃತಿಯು ನಮಗೆ ಕಲಿಸುತ್ತಿರುವ ಪಾಠ. ಹಸಿವಹಿಂಗಿಸಲು ದುರ್ಬಲಜೀವಿಯು ಸಬಲಜೀವಿಗೆ ಆಹಾರವಾಗಲೇಬೇಕು. ಇದಕ್ಕಿಂತ ಮೇಲಾದ ಹಕ್ಕು ಎಂಬುದೇನಿದ್ದರೂ ಕಟ್ಟುಕತೆ. ಹಸಿವುಹಿಂಗಿಸುವುದಷ್ಟೇ ನ್ಯಾಯ! ಇದಕಿಂತ ಹಿರಿದಾದ ನ್ಯಾಯವೆಲ್ಲಿದೆ! 
          
ಹೊಟ್ಟೆಯ ಹಸಿವು ಹಿಂಗಿದ ಬಳಿಕ ಮಾನವೀಯತೆ ಎಂಬ ಗಹನವಾದ ತತ್ತ್ವವು ನಮ್ಮಲ್ಲಿ ಚೋದಕರಸವಾಗಿ ಹರಿಯುತ್ತಿದೆ. ಮಾನವೀಯತೆಯಿಂದ ಧರ್ಮಗಳು ಉದಯಿಸಿದವು. ನೀತಿ‌ನಿಯಮಗಳು,  ನಾಗರಿಕ ಸಂಸ್ಕೃತಿ, ಜಾತಿ,  ಕುಲ, ಮನೆ, ಕುಟುಂಬ, ಸಮಾಜ ರಾಷ್ಟ್ರಾದಿ ಭಾಬಂಧುರತೆಯ ವಿವೇಕವಿಕಸನವು ಕಥೆಯಂತೆ  ಸೀಮೆಯಿಲ್ಲದೆ ಜಗತ್ತಿನಲ್ಲಿ ಬೆಳೆಯಿತು.  ಇದರ ಬೆಳವಣಿಗೆಯು ಪೂರ್ಣಗೊಳ್ಳದು.
     
ಪೌರುಷವು ಇನ್ನಷ್ಟು ಬೆಳೆಯಬೇಕೆನ್ನುತ್ತಿದೆ ಮನುಷ್ಯನ‌ಮನಸ್ಸು. ಕಡಲಿನ ಆಳವನ್ನು ಆಳಬೇಕು, ಗಗನವನ್ನು ಕೈವಶಮಾಡಬೇಕೆಂಬ ಗುರಿಯೆಡೆಗೆ ಜಿಗಿಯುತ್ತಲೇ ಮುನ್ನಡೆಯುತ್ತಿದ್ದಾನೆ. ವಿಜ್ಞಾನ ತಂತ್ರಜ್ಞಾನಗಳ ದಾರಿಯಲ್ಲಿ ಸಾವಿರ ಸಾವಿರ ಕವಲುದಾರಿಗಳಲ್ಲಿ ಸಾಗುತ್ತಾ ಮನುಜಲೋಕವು ದುರಾಸೆಯಿಂದ ಮಾನವೀಯ ನೆಲೆಗಟ್ಟನ್ನು ಹಾಗೂ ಹಕ್ಕನ್ನು ಹತ್ತಿಕ್ಕಿ ಹತಾಶವಾಗುತ್ತಿರುವಂತೆ ಭಾಸವಾಗುತ್ತಿದೆ.
       
ಪೌರುಷವೇ ಬಾಳುವೆಯ ದಾರಿಯಾದಾಗ ಮನುಷ್ಯನಲ್ಲಿ ಪ್ರಕೃತಿಯ ಮೃಗೀಯ ನಡವಳಿಕೆಯು ಗಿಡದ ಬೇರಿಗೆ  ಪೋಷಕಾಂಶವು ಸೇರಿದಂತೆ ಸೇರಿಕೊಂಡಿತು. ಪ್ರಕೃತಿಯಲ್ಲಿ  ಮೃಗೀಯ ಭಾವವವು ಬೇರಿನಂತಾದರೆ, ಮಾನವೀಯತೆಯು ಮಸ್ತಕವು.
    
ಪಾದವು ಮೃಗದಂತೆ ಓಡಲೆಳಸುವುದು. ಓಡು ಓಡೆಂದು ಚೋದಿಸುವ ಕಾಲುಗಳ ಆಜ್ಞೆಯನ್ನು ವಿವೇಕವಿಲ್ಲದೆ ಪಾಲಿಸುವುದರಿಂದ ದಾರಿತಪ್ಪುವುದುಂಟು. ಅತ್ತಿತ್ತ ಚಲಿಸದೆ ನಿಲ್ಲವುದುಂಟು. ಕೆಲವೊಮ್ಮೆ ವಿರುದ್ಧದಿಕ್ಕಿಗೆ ತಿರುಗುವುದುಂಟು‌. ಒಟ್ಟಿನಲ್ಲಿ, ಮೃಗೀಯವಾದ ಪಾದಗಳು ಹಾಗೂ ವಿವೇಕದ ಮಸ್ತಕಗಳ ಪೈಪೋಟಿಯ ಓಟದಲ್ಲಿ  ಮನುಷ್ಯನು ಹಣ್ಣಗಾಯಿ ನೀರುಗಾಯಾಗುತ್ತಿದ್ದಾನೆ.
    
ಮಿಡಿಗಾಯಿಯನ್ನು ಹಣ್ಣಾಗಿಸಲು  ಶಾಖ ನೀಡುತ್ತಾನೆ. ಇದು ತರವೇ! ಶಿರ ಪ್ರಶ್ನಿಸುತ್ತದೆ. ಹುಟ್ಟಿನಿಂದ ಮೂಡಿಬಂದ ಮೃಗೀಯ ಸ್ವಭಾವವನ್ನು ಇನಿತಿನಿತೇ ಅಳಿಸಿಕೊಂಡು ಮಾನವೀಯತೆಯನ್ನು ಒಡಮೂಡಿಸಿಕೊಳ್ಳಬೇಕು. ಪೂರ್ಣತೆಯತ್ತ ಹೆಜ್ಜೆಗಳನ್ನಿಡಲು  ಮತಿಯ ದಿಗ್ವಿಜಯದತ್ತ ಅನುವಾಗಿ ಹೆಜ್ಜೆಗಳು ತಿರುಗಬೇಕು.

        ತನ್ನ ಒಳಹೊರಗೆಲ್ಲ ಸತ್ತ್ವ ಗುಣವನ್ನು ಬಯಸಿದವನಾಗಿ  ಪರಮ ಉನ್ನತಿಗೆ ಪ್ರಯತ್ನಿಸುವ ಮನುಷ್ಯನಿಗೆ ಸ್ವಾತಂತ್ರ್ಯವೇ   ಹಕ್ಕು.

ಇಂದಿನ ದಿನಮಾನಗಳಲ್ಲಿ ಹಕ್ಕಿನ ಪ್ರಶ್ನೆ ಸಾಗರದ ಅಲೆಯೋಪಾದಿಯಲ್ಲಿ  ಅಲೆದಾಡುತ್ತದೆ. ಅಲೆದಾಡುವವರಲ್ಲಿ ನಿಜವಾಗಿ ಹಲವರು ಈ ಹಕ್ಕಿಗೆ ಹಗೆಗಳು. ಹಲವರು ಅವಿಚಾರಿಗಳು. ಕೆಲವರು ಭೀರುಗಳು. ಹಕ್ಕುಚಲಾವಣೆಯ ಹೆಸರಲ್ಲಿ ದುರುಪಯೋಗ ಮಾಡುವರು. ಪಥಭ್ರಷ್ಟರಾಗುವರು. ಪರಿಷ್ಕಾರವಿಲ್ಲದ ಮೃಗಗಳಂತೆ ವರ್ತಿಸುವರು.

        ಹುಟ್ಟುತ್ತಲೇ ಹಕ್ಕುಹಕ್ಕು ಎಂದು ಬಡಬಡಿಸಬೇಡ. ಹುಟ್ಟಾಸೆಯೆಂಬುದು ವಿಷ. ಆತ್ಮಸಾಧನೆಯ ಹಕ್ಕು ಸೃಷ್ಟಿಜಾಲವನ್ನು  ಕಳಚುವುದು. ಮುಕ್ತಿ ಸಾಮ್ರಾಜ್ಯವನ್ನು ಒದಗಿಸುವುದು. ಹುಟ್ಟಿನಿಂದ ಪಡೆದು ಬಂದುದು ಪಾಶವೀಕರ್ಮ. ಪಶುಗಳಂತಹ ವರ್ತನೆ. ವಿವೇಕದ ದಾರಿಯಲ್ಲಿ ಶಿಷ್ಟಧರ್ಮವನ್ನು ಪಾಲಿಸುವುದು  ಪುರುಷನ ಹಕ್ಕು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್.ಮಂಡ್ಯ

Saturday, 16 December 2023

ಕವಿಸಾಕ್ಷ್ಯ - ಕೇತಕೀವನ - ಡಿವಿಜಿ

ಪರಿಪರಿಯ ಸೃಷ್ಟಿರುಚಿ 
ತರುಣಿಯಂಗದೊಳಂತೆ 
ಅದನರಿತೆನಿಂದು, 
ಅನುಭವದೆ ಕವಿಯ 
ನುಡಿ ಮನಕೆ ದಿಟವಾಯ್ತೀಗ 
ಅದನರಿತೆನಿಂದು 

ಮೃಗನಯನ ಲಾವಣ್ಯ 
ಸೊಗಸೆಂದ ವಾಲ್ಮೀಕಿ 
ಅದನರಿತೆನಿಂದು. 
ವಿದ್ಯುಲ್ಲತಾ ತನುವೆ 
ಹೃದ್ಯವೆಂದಂ ವ್ಯಾಸ 
ಅದನರಿತೆನಿಂದು. 

ಕಮಲ ಸುಕುಮಾರತೆಯೆ 
ಕಮನೀಯ ಭಾಸಂಗೆ 
ಅದನರಿತೆನಿಂದು. 
ಶಶಿರುಚಿಯ ಬೆಳ್ನಗುವೆ 
ರಸ ಕಾಳಿದಾಸಂಗೆ 
ಅದನರಿತೆನಿಂದು. 

ಚಂಪಕದ ನಾಸಿಕವೆ 
ಸೊಂಪೆಂದ ಭವಭೂತಿ 
ಅದನರಿತೆನಿಂದು. 
ತೂಣೀರವೆದೆಯಿರಿಯೆ 
ಘ್ರಾಣವೆಂದನು ಬಾಣ 
ಅದನರಿತೆನಿಂದು. 

ಮಾಂದಳಿರ ಚೆಂದುಟಿಯೆ 
ಚೆಂದವೆಂದನು ಮಾಘ 
ಅದನರಿತೆನಿಂದು. 
ಕುಂದರದನವೆ ವದನ 
ಬಂಧುರತೆ ಬಿಲ್ಹಣಗೆ
ಅದನರಿತೆನಿಂದು. 

ಚೆಂಗುಲಾಬಿಯ ಕೆನ್ನೆ 
ಸಿಂಗಾರ ವುಮರನಿಗೆ 
ಅದನರಿತೆನಿಂದು. 
ಕಾರಿರುಳ ತಾರೆಕಣ್‍ 
ಸ್ವಾರಸ್ಯ ಹಾಫಿಸಿಗೆ 
ಅದನರಿತೆನಿಂದು 

ಕಂಬುಕಂಠವೆ ರೂಪ- 
ಕಿಂಬೆಂಬನು ಮುರಾರಿ 
ಅದನರಿತೆನಿಂದು. 
ಬಳ್ಳಿ ಮೈ ಬಳುಕಿಂದೆ 
ಉಲ್ಲಾಸ ಭಾರವಿಗೆ 
ಅದನರಿತೆನಿಂದು 

ಇಭದ ಮೈ ತುಂಬು ನಡೆ 
ಸೊಬಗೆನುವ ಜಯದೇವ 
ಅದನರಿತೆನಿಂದು 
ಕಾರುಮೋಡದ ತುರುಬು 
ಚಾರು ಗದುಗಿನ ಕವಿಗೆ 
ಅದನರಿತೆನಿಂದು 

ನಯನ ಮೀನವೊಲಾಡೆ 
ಪ್ರಿಯವದು ಷಡಕ್ಷರಿಗೆ 
ಅದನರಿತೆನಿಂದು. 
ಪಿಕದ ಕಲರವದ ದನಿ 
ಸುಖದ ಲಕ್ಷ್ಮೀಶಂಗೆ 
ಅದನರಿತೆನಿಂದು. 

ದುಂಬಿವೊಲು ಮುಂಗುರುಳು 
ಯಿಂಬಂತೆ ಹರಿಹರಗೆ 
ಅದನರಿತೆನಿಂದು. 
ಇಂದುಪ್ರಸನ್ನತೆಯೆ 
ಸುಂದರತೆ ಪಂಪಂಗೆ 
ಅದನರಿತೆನಿಂದು. 

ಕವಿವಚನ ಸತ್ಯಕೀ 
ಯುವತಿ ಸಾಕ್ಷಿಣಿಯೆಂಬರ್‍ 
ಅದನರಿತೆನಿಂದು. 
ಸೃಷ್ಟಿಯುತ್ಕೃಷ್ಟಗಳ 
ದೃಷ್ಟಾಂತವೀ ರೂಪು 
ಅದನರಿತೆನಿಂದು.

Friday, 15 December 2023

ರಸಿಕ ರೋಗಿ (ನಡೆದ ಸಂಗತಿ) - ಕೇತಕೀವನ - ಡಿವಿಜಿ

 ಗುರು ಪುರೋಹಿತರವನ ಶಯ್ಯೆ ಬಳಿ ಸೇರಿದರು, 
ಮರಣದಾಗಮನ ಚಿಹ್ನೆಗಳ ನೆರೆ ನೋಡಿದರು; 
ಚರಮಸಾಂತ್ವನ ವಚನಕದು ಸಮಯವೆಂದು 
ಒರೆದರೊಲಿದಾ ರಸಿಕ ರೋಗಿಗವರಿಂತು :- 

“ಮರುಗದಿರಿ, ಕೊರಗದಿರಿ, ಹರಿಯನೇ ನೆನೆಯುತಿರಿ; 
ಕರೆಯುತಿಹರವನವರು ನಿಮ್ಮನವನಡಿಗೆ; 
ಕರುಣಾಳುವವನು, ದುರಿತವ ಹರಿಯಿಪವನು ಹರಿ; 
ದೊರೆವುದವನಡಿದಾವರೆಯ ಸೊದೆಯು ನಿಮಗೆ. 

ಎಷ್ಟು ದಿನ ಬದುಕಿದೊಡಮ್‍ ಇಳೆ ಕಷ್ಟಭೂಯಿಷ್ಠ, 
ಇಷ್ಟ ಸುಖಗಳ ಪಟ್ಟಿಹಿರಿ ನೀಂ ಯಥೇಷ್ಟ 
ಇನ್ನು ಮುಂದಿನ ಗತಿಗೆ ಸಿದ್ಧವಾಗುವುದುಚಿತ, 
ಪುಣ್ಯವಂತರೆ, ನಿಮಗೆ ನಿಸದ ವಿಷ್ಣುಪದ. 

ನೀಮೆಲ್ಲ ತೆರದೊಳಂ ಚೆನ್ನಾಗಿ ಬಾಳಿದಿರಿ; 
ಪ್ರೇಮಪ್ರಸಿದ್ಧಿ ಸಿರಿಗಳನೆಲ್ಲ ಭುಜಿಸಿದಿರಿ; 
ಅರಸನೋಲಗದಿ ಮೇಲ್‍ಚತುರತೆಯ ತೋರಿದಿರಿ; 
ಪರಮಾಪ್ತ ಮಂತ್ರಿಪದವಿಯನು ನಿರ್ವಹಿಸಿದಿರಿ. 
ಬಲು ತೆರದ ಲೋಕೋಪಕಾರಂಗಳನೊಡರ್ಚಿ, 
ಬಲು ಜನದ ಮೆಚ್ಚುಮನ್ನಣೆಗಳಿಂ ನೀಂ ಪೆರ್ಚಿ 
ಬಹು ಸೊಗವ ಕಂಡಿಹಿರಿ, ಬಹು ಭೋಗವುಂಡಿಹಿರಿ, 
ಇಹುದೆ ನೀಂ ಸವಿಯದಿಹ ಮಧುಕಣವದೊಂದಿಲ್ಲಿ? 
ಇನ್ನೇನು ನಿಮಗೆ ಬೇಕೆನಿಪುದೀ ಜಗದಲ್ಲಿ? 
ಇನ್ನಾವ ಸೌಖ್ಯ ನೀಮುಣಲು ಮಿಕ್ಕಿಹುದಿಲ್ಲಿ? 
ಶ್ರೀಪತಿ ದಯಾಮಯಂ ನಾರಾಯಣಂ ನಿಮ್ಮನ್‍ 
ಆಪತ್ತಿನಿಂ ಪಾರುಗೆಯ್ದು ಕರೆದೊಯ್ಯುವನ್‍ 
ನಿತ್ಯನಿರ್ಮಲ ಸುಖಕೆ, ವೈಕುಂಠ ವೈಭವಕೆ 
ಅತ್ಯಂತ ವಾತ್ಸಲ್ಯದಿಂ ತನ್ನ ಸನ್ನಿಧಿಗೆ. 
ಅವನನೇ ನಂಬಿ ನೀಮವನೆ ಸಂರಕ್ಷಕನು, 
ಅವನ ಕೃಪೆಯನೆ ನಂಬಿ-"

 -ಇಷ್ಟರ್ಧ ವಾಕ್ಯವನು 
ಆಡಿದಾ ಸಖರವರು ಮುಂಬರಿವ ಮುನ್ನವನು 
ನೋಡಿ ಬಿರುಗಣ್ಣಿನಿಂದಾಗ್ರಹದೆ ಕೆಂಪಾಗಿ 
ನುಡಿದನೀ ಪಡಿ ನುಡಿಯನ್‍ ಆತುರದೆ ಬಿರುಸಾಗಿ :- 

“ಬಿಡಿ ಬಿಡಿರಿ; ಸಾಕಿನ್ನು ನಿಮ್ಮ ಕತೆಗಳ ಕಂತೆ! 
ಕಡು ದಯಾಮಯನಂತೆ! ಅವನದತಿ ಕೃಪೆಯಂತೆ!! 
ಇನಿತೆನಗೆ ಸೊಗವಿತ್ತ ಲೋಕವನು ಜರೆಯಲೇ? 
ಎನಿತೆನಿತೊ ಎನಗೆ ದಯೆಗೆಯ್ದುದನೆ ತೊರೆಯಲೇ? 
ಆಗದದು! ಹಾ ಆಗದಿಳೆಯೆ ನಾಂ ಬಿಡಲಾರೆ 
ಭೋಗ ಸಾಕಾಯ್ತಿನ್ನು ಕೇಡದೆಂದೆನಲಾರೆ. 
ಕನಿಕರಂ ನಿಮ್ಮ ನಾರಾಯಣನೊಳಿರ್ದಲ್ಲಿ, 
ಎನಗವಂ ಪರಮೋಪಕೃತಿಯನೆಸಗುವೊಡಿಲ್ಲಿ, 
ಈಯೆನ್ನ ಪಳಕೆಯೊಡಲೊಳಗೆನ್ನನಿರಬಿಡಲಿ, 
ಪ್ರೀಯರಾದೀಯೆನ್ನವರ ಸನಿಹವೆನಗಿರಲಿ, 
ಅನುಭವಸಹಸ್ರ ತುಂಬಿರುವುದೀ ತನುಘಟದಿ, 
ಅನುರಾಗಸಂಸ್ಮೃತಿಯ ಮಧುವಿಗೀ ತನುವೆ ನಿಧಿ. 
ಆಹಾಹ! ಏನೇನನುಣಿಸಿತೆನಗೀ ದೇಹ! 
ಸ್ನೇಹಗಳ ಮೋಹಗಳ ಮಾಧುರ್ಯಕಿದು ಗೇಹ! 
ಆ ಸುಖಸ್ಮರಣೆಯೊಳೆ ರಮಿಪುದೆನ್ನ ಸ್ವಾಂತ. 
ಗುರುಜನರೆ, ಕೇಳಿರೀ ಹೃದಯಸತ್ಯದ ನುಡಿಯ. 
ಅರಿತಿಹಿರ ನೀವೆನ್ನ ಜೀವಸಂಸ್ಕೃತಿವಿಧಿಯ? 
ಎನಗರೋಚಕಮೇನುಮಾಗಿಲ್ಲ ಧರೆಯ ಸೊದೆ 
ದಣಿದಿಲ್ಲವೆನ್ನ ಕರಣಗಳೇನುಮೀ ರಸದೆ. 

ಪರಿಯುತಿದೆ ಜೀವೋಷ್ಣವಿನ್ನುಮೀ ನರಗಳಲಿ, 
ಮೆರೆಯುತಿದೆ ಮನವಿನ್ನುಮೆನಿತೊ ಸುಖರಥಗಳಲಿ. 
ವೈಕುಂಠಭೋಗವೆನಗಿಂತ ಶುದ್ಧರಿಗಿರಲಿ; 
ಸಾಕೆನಗೆ ಭೂಭೋಗವದು ಕುಂದದಿರಲಿ. 
ಇದಕಿಂತ ಅಲ್ಲೇನು? ಎನ್ನ ಪ್ರೇಮಿಗಳಿಲ್ಲಿ 
ಇದಿರೊಳಿವರಿರುವಂದು ವೈಕುಂಠವಿಲ್ಲಿ. 

ಓ ಅವಳೆ, ಬಾ ಇತ್ತ, ತಡಹೆನ್ನ ತಲೆಮೊಗವ 
ಹಾ ಇವಳೆ, ಬೀಸೆನ್ನ ಮೇಲೆ ನಿನ್ನಾ ಸೆರಗ 
ಹೋ, ರತ್ನ, ಹಾ ಎನ್ನ ಮುದ್ದುಗಿಣಿ ಬಾರಿಲ್ಲಿ, 
ತೋರು ಮತ್ತೊಮ್ಮೆ ನೀಂ ನಗುಮೊಗವನೆನಗಿಲ್ಲಿ." 

ಇಂತವನದಾರಾರನೋ ನೆನೆದು ಕೂಗುತ್ತೆ 
ಚಿಂತೆಸಂತಸದ ಬೆರಕೆಯ ಮೊಗದಿ ತೋರುತ್ತೆ 
ಉಸಿರಿಳಿದು ಬಸವಳಿದು ಕಣ್ಣ ಮುಚ್ಚಿದನು, 
ಹಸಿವ ಮುಳಿದತ್ತು ನಿದ್ರಿಪವೊಲೊರಗಿದನು.

**********

ಕೊನೆಯುಸಿರೆಳೆಯಲು ಇನ್ನೇನು ಕೆಲವು ಕ್ಷಣಗಳನ್ನು ಎಣಿಸುತ್ತಿರುವ ರೋಗಿ.  'ಸಾಂಸಾರಿಕ ವ್ಯಾಮೋಹವನ್ನು ಬಿಟ್ಟು ತೆರಳಲಾರೆ' ಎಂಬ ರಸಿಕ ರೋಗಿಯ  ಮಮಕಾರದ ಅಂಟನ್ನು ಡಿವಿಜಿಯವರು ಸುಂದರವಾಗಿ ಬಣ್ಣಿಸಿದ್ದಾರೆ.

 ರೋಗಿಯು ಆಸ್ಪತ್ರೆಯಲ್ಲಿ ಹಾಸಿಗೆಯಲ್ಲಿದ್ದಾನೆ. ಹಾಸಿಗೆಯ ಸುತ್ತ ಸೇರಿದ ಮಕ್ಕಳು ಬಂಧುಗಳು, ಗುರುಹಿರಿಯರು, ಪುರೋಹಿತರಾದಿಯಾಗಿ ಸೇರಿದವರು ಮರಣದ ಕ್ಷಣಗಳ‌ ನಿರೀಕ್ಷೆಯಲ್ಲಿದ್ದಾರೆ.
ಇನ್ನೇನು ಕೆಲವು ಕ್ಷಣಗಳಲ್ಲಿ  ಪ್ರಾಣಪಕ್ಷಿ ಹಾರುವುದು. ಆದ್ದರಿಂದ  ರಸಿಕನಾಗಿ ಬಾಳಿದ ಈ ಮಹನೀಯರಿಗೆ ಚರಮಸಾಂತ್ವನದ ನುಡಿಗಳನ್ನು   ನುಡಿಯಲು ಇದೇ ಸರಿಯಾದ ಸಮಯವೆಂದು ಸಮಾಧಾನಿಸಲು ಆರಂಭಿಸುತ್ತಾರೆ.

" ಚಿಂತೆ ಮಾಡಬೇಡಿ, ಕೊರಗಬೇಡಿ, ಶ್ರೀ ಹರಿಯನ್ನು ಧ್ಯಾನಿಸುತ್ತಾ ಇರಿ. ಕರುಣಾಳುವಾದ ನಾರಾಯಣನು ನಿಮ್ಮನ್ನು ತನ್ನ ಬಳಿಗೆ ಕರೆದೊಯ್ಯಲು ನಿಮ್ಮನ್ನು ಕರೆಯುತ್ತಿದ್ದಾನೆ. ನಿಮ್ಮ ಎಲ್ಲಾ ಪಾಪಗಳನ್ನು, ಸಂಕಟಗಳನ್ನು ಅವನು ನಿವಾರಿಸುವನು. ಅವನ ಚರಣಕಮಲಗಳ ಅಮೃತಸವಿಯನ್ನು ಅವನು  ನಿಮಗೆ ಕರುಣಿಸುವನು," ಎಂದರು.

ಮುಂದುವರಿದು ಹೇಳಿದರು," ಈ ಮರ್ತ್ಯಲೋಕದಲ್ಲಿ ಎಷ್ಟುದಿನ ಬಾಳಿದರೂ ಇಲ್ಲಿ ಕಷ್ಟಪರಂಪರೆಗಳು. ನೀವು ಇಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಿಂದ ಸುಖವನ್ನು ಅನುಭವಿಸಿದ್ದೀರಿ. ಇನ್ನು ಈ ಭೂಮಿಯ ಋಣ ನಿಮಗೆ ಮುಗಿಯುತ್ತಿದೆ. ಮುಂದಿನ ಗತಿಗೆ ನೀವು ಮಾನಸಿಕವಾಗಿ ಸಿದ್ಧರಾಗುವುದು ಲೇಸು" ಎಂದರು. "ಪುಣ್ಯವಂತರು ನೀವು. ನಿಮಗೆ ವಿಷ್ಣು ಸಾಯುಜ್ಯವು ಖಚಿತ ನೀವು ಹೆಂಡತಿ ಮಕ್ಕಳು, ಸಾಂಸಾರಿಕ ಪ್ರೀತಿ ಪ್ರೇಮ ವನ್ನು ಪಡೆದಿದ್ದೀರಿ. ಸುಖ ಸೌಭಾಗ್ಯಗಳನ್ನು ಅನುಭವಿಸಿದ್ದೀರಿ. ಸಮಾಜದಲ್ಲಿ ಒಳ್ಳೆಯ ಹೆಸರು ಕೀರ್ತಿಗಳನ್ನೂ ಸಂಪಾದಿಸಿದ್ದೀರಿ ಕೊರತೆಯಿಲ್ಲದೆ ಎಲ್ಲಾ ರೀತಿಯ ಸಿರಿಸೌಭಾಗ್ಯಗಳನ್ನೂ ಅನಭವಿಸಿದ ಪುಣ್ಯಶಾಲಿಗಳು ನೀವು " ಎಂದು ಸಾಂತ್ವನ‌ ಮಾತುಗಳನ್ನಾಡಿದರು. 

   "ರಾಜವೈಭೋಗದ ಆಡಳಿತದಲ್ಲಿ ನಿಮ್ಮ ಚಾತುರ್ಯದಿಂದ ಅರಸರ ಒಲವನ್ನು ಸಂಪಾದಿಸಿದವರು ನೀವು. ಅರಸರ ನರ್ಮಸಚಿವರಾಗಿ  ಮಂತ್ರಿಪದವನ್ನು ಸಮರ್ಥವಾಗಿ ನಿರ್ಹಿಸಿದವರು. 
ತಾವು ಲೋಕದ ಜನತೆಯ ಹಿತವನ್ನು ಬಯಸಿ ಲೋಕೋಪಕಾರಿಗಳಾಗಿ ಬಾಳಿದಿರಿ. ಸಾಮಾಜಿಕ ಪುರೋಭಿವೃದ್ಧಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನಮನ್ನಣೆಯನ್ನು ಪಡೆದ ಸಾರ್ಥಕ ಜೀವನವು ನಿಮ್ಮದು! ಐಹಿಕ ಜೀವನದಲ್ಲಿ ಬಲುಬಗೆಯ ಸುಖವನ್ನು ಅನುಭವಿಸಿದವರು ನೀವು. ಭೋಗಭಾಗ್ಯಗಳನ್ನು ತಾವು ಮೊಗೆಮೊಗೆದು ಉಂಡಿರುವಿರಿ! ಮಧುಮಹೋತ್ಸವದ ಎಲ್ಲಾ ಸವಿಮಾಧುರ್ಯಗಳನ್ನು ತಾವು ಉಂಡಿರುವಿರಿ‌. ನೀವು ಸವಿಯದ ಜೇನಹನಿಗಳಿಲ್ಲ.
ಈ ಜಗತ್ತಿನಲ್ಲಿ ನೀವು ಸವಿಯದ ಸವಿ ಬಾಕಿ ಯಾವುದೂ ಇದ್ದಂತಿಲ್ಲ. ನಿಮ್ಮಂತಹ ಭಾಗ್ಯವಂತರಿಗೆ ಇನ್ನೇನು ಬೇಕು!? 

     ಪರಮದಯಾಳುವಾದ ಶ್ರೀಮನ್ನಾರಾಯಣನು ನಿಮ್ಮನ್ನು ಈ   ಹುಟ್ಟುಸಾವುಗಳ ಸಂಕಟಗಳಿಂದ ಪಾರುಮಾಡಿ ತನ್ನೆಡೆಗೆ ಬೇಗನೇ ಕರೆದುಕೊಳ್ಳುವನು. ಅವನ ಸನ್ನಿಧಿಯಲ್ಲಿ ನಿತ್ಯ ನಿರ್ಮಲ ಸುಖ. ಅವನ ಸನ್ನಿಧಿಯು ನಿತ್ಯವೈಭವದ ವೈಕುಂಠ. ಶ್ರೀವಿಷ್ಣುವು ನಿಮ್ಮ ಮೇಲಣ ವಾತ್ಸಲ್ಯದಿಂದ, ತನ್ನ ಸನ್ನಿಧಿಗೆ  ಅಕ್ಕರೆಯಿಂದ ಕರೆಸಿಕೊಳ್ಳುವನು. ಅವನನ್ನೇ ನಂಬಿ. ಅವನ ಅನುಗ್ರಹವೇ ನಿಮ್ಮನ್ನು ಕಾಪಾಡುವುದು. ಅವನೇ ನಿಮ್ಮನ್ನು ಸಂರಕ್ಷಿಸುವವನು." ಎಂದು ಮುಂತಾಗಿ ಗುರುಗಳೂ ಪುರೋಹಿತರೂ, ಹಿತೈಷಿಗಳೆಲ್ಲರೂ ಮರಣೋನ್ಮುಖಿಯಾದ  ರಸಿಕ ರೋಗಿಗೆ ಅಂತಿಮ ಸಾಂತ್ವನ ವಚನಗಳನ್ನು ನುಡಿದರು.

    ಸುತ್ತಲಿದ್ದವರು ನುಡಿಯುತ್ತಿದ್ದ ಸಾಂತ್ವನ ವಚನಗಳು ‌ಮುಂದುವರಿಯುವುದನ್ನು ಮೆಚ್ಚದ ರೋಗಿಯು ಬಿಡುಗಣ್ಣನೋಟದಿಂದ  ಕೆಕ್ಕರಿಸಿ ನೋಡುತ್ತಾ, ಅವರೆಲ್ಲರ ಹಿತವಚನಗಳಿಗೆ ಪ್ರತಿಯಾಗಿ ಕೋಪದಿಂದಲೇ ಇಂತೆಂದು ಉತ್ತರಿಸಿದನು, "ಸಾಕು! ಸಾಕಿನ್ನು ಮುಂದುವರಿಸದಿರಿ ನಿಮ್ಮ ಕಂತೆ ಪುರಾಣಗಳನ್ನು! ಆ ದೇವನು ನಾರಾಯಣನಂತೆ! ಪರಮದಯಾಳುವಂತೆ! ಅವನದೇ ಅತಿಯಾದ ಕೃಪೆಯಂತೆ!  ಇಂತೆಲ್ಲ  ಸುಖ ಸೌಭಾಗ್ಯವನ್ನು ಕರುಣಿಸಿದ ಈ ಸೊಗಸಿನ ಇಹಲೋಕದ ಬಾಳುವೆಯನ್ನು ಜರೆಯಲಾದೀತೇ! ಈ ಲೋಕದ ಜನತೆಯ ಉಪಕಾರವನ್ನು ಮರೆತು ಕಾಣದ ಆ ವೈಕುಂಠಕ್ಕೆ ದಿಡೀರೆಂದು ಹೋಗುವುದುಂಟೇ! ಜನರು ಮೆಚ್ಚುವರೇ?  ಏನೇನೋ ಭೋಗಭಾಗ್ಯಗಳನ್ನು ಅನುಗ್ರಹಿಸಿದ  ಈ ಲೋಕಸಹವಾಸವನ್ನು ತೊರೆಯುವುದು ಸಾಧ್ಯವೇ! ಆಗದು! ಈ ಭೂಮಿಯನ್ನು ಬಿಡಲಾರೆ! ಭೋಗ ಸಾಕಾಯಿತು ಎಂದೆನ್ನಲಾರೆ! ಭೋಗವದು ಕೇಡು ಎಂದೆನ್ನಲಾರೆ" ಎಂದೆನ್ನುತ್ತಾ ಮರಣವನ್ನು ನಿರಾಕರಿಸುತ್ತಾ ಮುಂದುವರಿದು, ಈ ರಸಿಕ ರೋಗಿಯು, " ಈ ನಿಮ್ಮ ನಾರಾಯಣನಿಗೆ ನನ್ನಲ್ಲಿ ಕನಿಕರವಿದ್ದರೆ, ನನ್ನನ್ನು ಈ ನನ್ನ ಹಳೆಯ ಒಡಲಿನಲ್ಲೇ ವಾಸವಿರಲು ಅನುಗ್ರಹವನ್ನು ನೀಡಲಿ. ನನಗೆ ಪ್ರಿಯರಾದ ಹೆಂಡತಿ ಮಕ್ಕಳು, ಸಂಸಾರ, ರಾಜಭೋಗದ ಈ ಜನರ ಸನಿಹವಾಸವೇ ನನಗಿರಲಿ. ಈ ನನ್ನ ದೇಹವೆಂಬ ಮಡಿಕೆಯಲ್ಲಿ ಸಾವಿರಸಾವಿರ ಅನುಭವಗಳ ರಸಪಾಕವಿದೆ, ಸವಿಯಿದೆ. ಈ ಸವಿಯನ್ನು ಬಿಟ್ಟು ನಿಸ್ಸಾರವಾದ ಆ ವೈಕುಂಠದ ಒಂಟಿತನವೆನಗೆ ಬೇಕಿಲ್ಲ.
ಪ್ರೀತಿ ಪ್ರೇಮಗಳ ಮಧುಭಾಂಡವಾದ ಈ ತನುಘಟವನ್ನು  ನಾನೆಂತು ತೊರೆದೇನು!  ಆಹಾ! ಅದೆಂತೆಂತಹ ಸುಗ್ರಾಸ ಉಣಿಸನ್ನು ಈ ಮಡಿಕೆಯೆನಗೆ ಬಡಿಸಿತು! ಸ್ನೇಹ ಮೋಹಗಳ ಮಧುಪಾಕವನ್ನು ಈ ಮನೆಯೆನಗೆ ಉಣ್ಣಿಸಿದೆ.

ನನ್ನ ಮನಸ್ಸು  ಇಂತಹ ಸುಖದ ಕ್ಷಣಗಳನ್ನು ಸ್ಮರಿಸುತ್ತಾ ಆ ಸವಿಯನ್ನು  ಆಸ್ವಾದಿಸುತ್ತಲೇ ಇರಬಯಸುತ್ತದೆ.

ನನ್ನ ಹಿತವನ್ನು ಬಯಸುವ ಗುರುಹಿರಿಯರೇ,  ನನ್ನ ಮನದಾಳದ ಸತ್ಯವನ್ನು ಕೇಳಿ!  ನನ್ನ  ಸಾಂಸಾರಿಕ ಜೀವಸಂಬಂಧಗಳ  ಸಂಸ್ಕೃತಿಯ ಒಲವನ್ನು ಅರಿತಲ್ಲವೇನೋ! 
ಈ ಲೋಕಜೀವನದ ಜೀವಾಮೃತವು ನನಗೆ  ಬೇಸರವೆನಿಸಿಲ್ಲ. ಸಂಸಾರವು ಸಾರಹೀನವೆಂದೆನಿಸಿಲ್ಲ. ನನ್ನ ಇಂದ್ರಿಯಗಳು ಪಟುವಾಗಿವೆ. ಕರಣಗಳು ದಣಿದಿಲ್ಲ. ರಸವನ್ನು ಆಸ್ವಾದಿಸುತ್ತಿರುವಾಗಲೇ 'ತೊಲಗಿಲ್ಲಿಂದ' ಎಂದು ತಳ್ಳುವುದು ಸರಿಯಲ್ಲ.

ಈ ನನ್ನ ನರನಾಡಿಗಳಲ್ಲಿ  ಜೀವಧಾತುಗಳು ಚೈತನ್ಯಪೂರ್ಣವಾಗಿ ನಳನಳಿಸುತ್ತಾ ಹರಿಯುತ್ತಿವೆ.
ನನ್ನ ಮನಸ್ಸು ಸುಖಸೌಭಾಗ್ಯದ ಹೊಂದೇರುಗಳನ್ನೇರಿ ಪಯಣಿಸುವುದನ್ನೇ ಇನ್ನೂ ಆಶಿಸುತ್ತದೆ.
 ಕಣ್ಣುಗಳಿಗೆ ಕಾಣದ ಆ ವೈಕುಂಠದ ಭೋಗ ಭಾಗ್ಯಗಳನ್ನು  ವೈರಾಗ್ಯವನ್ನು ಹೊಂದಿದವರು ಅನುಭವಿಸಲಿ. ಮನ ಇಂದ್ರಿಯಗಳು ಸಂಸಾರವನ್ನು ಬಿಡದೆ, ನಾನೆಂತು ವೈಕುಂಠಕೆ ಪೋಗಲಿ!? 
ಭೂಮಿಯ ಭಾಗ್ಯದ ಭೋಗವು ಎನಗಿನ್ನೂ ಎರವಲ್ಲ.  ನನಗೆ ಭೂಮಿಯ ಭೋಗವು ಕುಂದದಿರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನನ್ನು ಪ್ರೀತಿಸುವ ಪ್ರೇಮಿಗಳು ನನ್ನ ಸುತ್ತಮುತ್ತ ಇರುವ ಈ ಭೂಮಿಯೇ ನನಗೆ ವೈಕುಂಠ. ಆದ್ದರಿಂದ  ಆ ನಾರಾಯಣನ ವೈಕುಂಠ  ನನಗೆ ಬೇಕಿಲ್ಲ." ಎಂದೆನ್ನುತ್ತಾ, ತನ್ನನ್ನು ಪ್ರೀತಿಸುವವರೆಂಬ ಕನ್ನೆಯರನ್ನು " ಓ ಅವಳೇ  ಇತ್ತ ಬಾ! ಓ ಇವಳೇ ಇಲ್ಲಿ ಬಾ! ನನ್ನ ಮುಖವನ್ನು  ಹಿಡಿದುಕೋ!  ಮನದನ್ನೇ, ಬಾ ಸೆರಗಿಂದ ಬೀಸಿ ದೇಹದ ಉಷ್ಣವನ್ನು ಸರಿಸು" ಎಂದೆನ್ನುತ್ತಾ " "ರತ್ನಾ! ‌ನನ್ನ ಮುದ್ದುಗಿಣೀ ಬಳಿ ಬಾ! ನಿನ್ನ ಮುದ್ದುಮೊಗವನ್ನು  ಮತ್ತೆ ಮತ್ತೆ ನೋಡಬಯಸುವೆನು" ಎಂದು ಮತ್ತೆ ಮತ್ತೆ , ಹತ್ತಾರು ಮನದನ್ನೆಯರನ್ನು ನೆನಪಿಸುತ್ತಾ, ಕೂಗಿ ಕರೆಯುತ್ತಾ, ಮುಖದಲ್ಲಿ  ಚಿಂತೆ ಹಾಗೂ ಸಂತೋಷಗಳನ್ನು ತೋರಗೊಡುತ್ತಾ, ಜೀವನದಲ್ಲಿ ಆಶಾಭಾವವನ್ನೇ ತೋರುತ್ತಾ ದೇಹವು ಸಾಕೆನಿಸುತ್ತಾ ಇಂದ್ರಿಯಗಳು ಜಡವಾದವು,  ಉಸಿರು ನಿಂತಿತು. ಕಣ್ಣಾಲಿಗಳು ಮುಚ್ಚಿದವು. ಹಸಿದ ದೇಹವು ಹಸಿವು ಹಿಂಗಿಸಿಕೊಳ್ಳದೆ ಅಳುತ್ತಾ ನಿದ್ರಿಸಿದಂತೆ ರಸಿಕ ರೋಗಿಯು ಕೊನೆಯುಸಿರೆಳೆದನು.
ಭಾವಾನುವಾದ: 
©✒ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

Thursday, 14 December 2023

ಎಳೆಯರ ಮುದುಕ (ಒಂದು ಕಥೆ) - ಕೇತಕೀವನ - ಡಿವಿಜಿ

ಮನೆಯೊಳೊಂದು ಮನೆಯ ಕಟ್ಟಹೊರಟರೆಳೆಯರು; 
ಅನುವಿನಿಂದ ಗೋಡೆಯಿರಿಸಬಂದ ಮುದುಕನು. 
ಕುಡಿಕೆ ಪುಟಿಕೆಗಳನು ರಾಶಿಯಿಟ್ಟರೆಳೆಯರು; 
ಅಡಿಗೆಗವನು ಜೋಡಿಸಿಡಲು ಬರುವ ಮುದುಕನು. 
ಕಡಲೆಪುರಿಯ ಭಕ್ಷ್ಯಗಳನು ಮಾಳ್ಪರೆಳೆಯರು; 
ಬಡಿಸಿರಿ, ಹಸಿವೆನುತಲೆಲೆಯ ತರುವ ಮುದುಕನು. 
ಬೊಂಬೆ ಮದುವೆ; ಹಸೆಯ ಹಾಸಿರೆನುವರೆಳೆಯರು; 
ತುಂಬ ಬಾಗಿನಗಳ ತನ್ನಿರೆನುವ ಮುದುಕನು. 
ಮಾಡಲಿಲ್ಲ, ತಿಂಡಿ; ಹೋಗಿರೆನುವರೆಳೆಯರು; 
ಹಾಡೆ ಸುಬ್ಬಿ, ಕುಣಿಯೆ ವೆಂಕಿ, ಎನುವ ಮುದುಕನು. 
ತಿಂಡಿ ಕೊಟ್ಟರಾಗ ಹಾಡು ಎನುವರೆಳೆಯರು; 
ಕಂಡಸಕ್ರೆ ಕೈಲಿ ತೋರಿ ಬಿಗಿವ ಮುದುಕನು. 
ಸುಬ್ಬಿ ಕೊನೆಗೆ ಹಾಡೆ ಸುಬ್ಬನಣಕುಗೈದನು; 
ಉಬ್ಬಿಯುಬ್ಬಿ ನಕ್ಕರೆಲ್ಲ, ನಕ್ಕ ಮುದುಕನು. 
ಮುನಿದು ಸುಬ್ಬಿಯಳಲು ಸುಬ್ಬ ಓಡಲೆದ್ದನು; 
ಮುನಿಯನವನ ಹಿಡಿಯ ಹೊರಟು ಜಾರಿಬಿದ್ದನು. 
ಅಳುವು ನಗುವು ಮುಳಿಸು ಸೆಣಸು-ಆಯಿತಬ್ಬರ; 
ಎಳೆಯರಾಟ ಮೊದಲು, ಕಡೆಗೆ ಭಾರತಸ್ವರ. 
ಮುಗುಳುನಗೆಯ ತಳೆದು ಮುದುಕನಾಗ ಸಕ್ರೆಯ 
ತೆಗೆದು ಹಂಚಿ ಪೇಳ್ದ ಭೀಮ ಬಕರ ಸುದ್ದಿಯ. 
ಕೇಳಿ ನಗುತ ಬಾಲರೆಲ್ಲ ಚದರಿ ನಡೆದರು; 
ಬಾಳು ಇಷ್ಟೆಯೆಂದು ಮುದುಕ ಚಿಟಿಕೆ ಹೊಡೆದನು. 
ಬಾಲಲೀಲೆಯಲ್ಲಿ ಪಾಲುಗೊಂಡ ಮುದುಕನ 
ಹೋಲು ಭವದಿ ಸಖನೆ ಮುಕುತಿಗದುವೆ ಸಾಧನ. 

ಪುತ್ತಳಿಯಾಟವ ಜೀವಿತ- । 
ಕರ್ತವ್ಯಮೆನುತ್ತೆ ಘಾಸಿಪಡುವಂ ಬಾಲಂ ॥ 
ನಿತ್ಯದ ಸಂಸೃತಿ ಬೊಂಬೆಯ । 
ಬಿತ್ತರಮೆಂದರಿತು ನಟಿಸಿ ನಲಿವಂ ಜಾಣಂ ॥

**********

ಎಳೆಯ ಮಕ್ಕಳು ಮನೆಯಲ್ಲಿ ಮನೆಕಟ್ಟುವ ಆಟವಾಡುತ್ತಿದ್ದರು‌. ಮಕ್ಕಳ ಮನೆಕಟ್ಟುವ ಆಟದಲ್ಲಿ ಮುದುಕನು ಗೋಡೆಕಟ್ಟುವ ಸಹಾಯಕನಾಗಿ ಸೇರಿಕೊಂಡನು. ಮಕ್ಕಳು ಮಡಿಕೆ ಕುಡಿಕೆಗಳನ್ನು  ರಾಶಿಪೇರಿಸಿದರು. ಮಕ್ಕಳು ಅವರಿಗೆ ತೋಚಿದಂತೆ ರಾಶಿಗೂಡಿದ್ದ ಮಡಿಕೆಗಳನ್ನು,  ಅಜ್ಜಯ್ಯನು ಬಂದು ಅಡುಗೆಗೆ ಬೇಕಾದಂತೆ ನೇರ್ಪುಗೊಳಿಸಲು   ಜೋಡಿಸಿಡಬಯಸಿದನು.

ಮಕ್ಕಳು ಕಡಲೆಪುರಿಗಳನ್ನು  ಭಕ್ಷ್ಯಗಳೆಂದು ಅಣಿಗೊಳಿಸತ್ತಿದ್ದರು.

ಮುದುಕನು, " ಹಸಿವು ಹಸಿವು, ಬಡಿಸಿ" ಎಂದೆನ್ನುತ್ತಾ ಬಾಳೆ ಎಲೆ ಹಾಸಿದನು.
"ಬೊಂಬೆಮನೆಯಿದು.  ಹಸೆಯ ಹಾಸಿ " ಎಂದೆನ್ನುತ್ತಾರೆ ಮಕ್ಕಳು.

"ಸುಮಂಗಲಿಯರಿಗಾಗಿ ತುಂಬಾ ಬಾಗಿನಗಳನ್ನು ಸಜ್ಜುಗೊಳಿಸಿ" ಎಂದೆನ್ನುವನು ಮುದುಕನು.
"ತಿಂಡಿ-ತೀರ್ಥ  ಊಟಕೂಟವಿಲ್ಲ,  ಹೋಗಿ ಹೋಗಿ" ಎಂದರು ಮಕ್ಕಳು.

ಮುದುಕನು, " ಹಾಡೆ ಸುಬ್ಬಿ ಕುಣಿಯೊ ವೆಂಕಿ" ಎಂದು ಮಕ್ಕಳನ್ನು ಹುರಿದುಂಬಿಸಿದನು‌.
" ತಿಂಡಿಕೊಟ್ಟರೆ ಮಾತ್ರ ಹಾಡು" ಎಂಬುದು ಮಕ್ಕಳ ಸವಾಲು‌.
 
ಘಾಟಿ ಮುದುಕನು ಅಂಗೈಯಲ್ಲಿ ಕಲ್ಲುಸಕ್ಕರೆಯ ಖಂಡವನ್ನು ತೋರಿಸಿದಂತೆ ಮಾಡಿ ಕೈಮುಚ್ಚಿದನು.
ಸುಬ್ಬಿ ಕುಣಿದಳು. ಸುಬ್ಬನು ಅಣಕಿಸಿದನು. ಎಲ್ಲರೂ ಒಟ್ಟಾಗಿ ನಗತೊಡಗಿದರು. ಮುದುಕನೂ ಪಕಪಕ‌ನಕ್ಕನು.  ಅಣಕಿಸಿದ ಸುಬ್ಬನ ಬಗೆಗೆ ಕೋಪಕ್ಕಿಂತ ಎಲ್ಲರೂ ನನ್ನ ಕುಣಿತವನ್ನು ಹಾಸ್ಯಮಾಡಿದರೆಂದು ಅವಮಾನಿತಳಾಗಿ  ಸುಬ್ಬಿಯುಕೋಪಿಸುತ್ತಾ ಅಳತೊಡಗಿದಳು. ಅಷ್ಟರಲ್ಲಿ ಸುಬ್ಬ ಎದ್ದು ಓಡಬಯಸಿದನು. ಓಡುತ್ತಿದ್ದ ಸುಬ್ಬನನ್ನು ಮುನಿಯನು ಹಿಡಿಯಲೆಂದು ಬೆಂಬತ್ತಿದನು. ಓಡುವ ರಭಸಕ್ಕೆ  ಮುನಿಯನು ಕಾಲುಜಾರಿಬಿದ್ದನು.
ನಗು ಅಳು, ಮುನಿಸು ಸೆಣಸಾಟಗಳಿಂದ ಗಜಿಬಿಜಿಯಾಯಿತು.

ಮೊದಲು ಎಳೆಯರಾಟ. ಮುಂದೆ  ದೇಶದುದ್ದಗಲಕ್ಕೆ 'ಮಹಾಭಾರತ'ದ ರಣತೂರ್ಯದ  ಕೋಲಾಹಲ! 
ಘಾಟಿಸ್ವಭಾವದ ಮುದುಕನು ಮುಗುಳು ನಗುತ್ತಾ  ಸಕ್ಕರೆಯನ್ನು  ಮಕ್ಕಳಿಗೆ ಹಂಚಿ, ಬಕರ ಸುದ್ದಿಯನ್ನು ಹೇಳಿದನು. ಯಾರು ಬಕರಗಳೆಂಬುದನ್ನು ಅರಿಯದ ಎಳೆಯ ಮಕ್ಕಳು ಮುಗ್ಧವಾಗಿ ನಗುತ್ತಾ ಚದರಿದರು. 'ಬಾಳು ಎಂದರೆ ಇಷ್ಟೆ' ಎಂದು ಮುದುಕನು ಚಿಟಿಕೆ ಹೊಡೆದನು. ಮಕ್ಕಳಾಟದಲ್ಲಿ  ಮುದುಕನಂತೆ ಸಮರಸವಾಗಿ ಹೊಂದಿಕೊಂಡು ಬಾಳಬೇಕು. ಇದು ಮುಕ್ತಿಸಾಧನ ಎನ್ನುತ್ತಾರೆ ಡಿವಿಜಿ.
 
  ಗೊಂಬೆಯಾಟವು  ಜೀವನದ ಕರ್ತವ್ಯದತ್ತ ಬೊಟ್ಟುಮಾಡುತ್ತದೆ. ನಿತ್ಯದ ಸಂಸೃತಿ ಬೊಂಬೆಯಾಟದ ಸೂತ್ರದಂತೆ ನಡೆಯುತ್ತದೆ. ಜಾಣನಾದವನು ಸೂತ್ರಧಾರನ ಕೈಚಳಕಕ್ಕೆ ತಕ್ಕಂತೆ  ಕುಣಿಯುತ್ತಾನೆ.

ಕಾಲನ ಲೀಲೆಯನ್ನು ಮಕ್ಕಳ ಮನೆಕಟ್ಟುವಾಟದ ಪ್ರತಿಮೆಯೊಂದಿಗೆ ಕವಿವರ ಡಿ ವಿ ಗುಂಡಪ್ಪನವರು ಸುಂದರವಾದ ಚಿತ್ರಣವನ್ನು ರೂಪಿಸಿದ್ದಾರೆ. ಕಾಲನೇ ಸಾವಿಲ್ಲದ ಘಾಟಿ ಮುದುಕ. ಲೋಕದ ಜನರೆಲ್ಲ ಮಕ್ಕಳು. ಸಂಸಾರವೇ, ಮಕ್ಕಳು ಕಟ್ಟುತ್ತಿರುವ ಆಟದ ಮನೆ.   ಮುದುಕನು ಅಂಗೈಯೊಳಗೆ ಇರಿಸಿಕೊಂಡು ಕಣ್ಣುಮುಚ್ಚಾಲೆಯಾಡಿಸುವ ಕಂಡಸಕ್ಕರೆಯು ಸುಖ ಸಂತೋಷ ಫಲನಿರೀಕ್ಷೆಯ ನಿರೀಕ್ಷೆಗಳು. ಮಕ್ಕಳಾಟವು ಮುಂದೆ 'ಮಹಾಭಾರತ' ದ ಕೋಲಾಹಲಕ್ಕೆ ಮುನ್ನುಡಿ.
ಭಾವಾನುವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ



To receive the posts on your personal email, pls subscribe to https://groups.google.com/g/todayskagga

Wednesday, 13 December 2023

ಪರವೆಯಿಲ್ಲ - ಕೇತಕೀವನ - ಡಿವಿಜಿ

ಪರವೆಯಿಲ್ಲ-ನಿನಗೆ 
ಕೊರತೆಯಿಲ್ಲ. 
ಏನಾದೊಡೇನು! 
ಏಂ ಪೋದೊಡೇನು! 
ಬಿಡಲಿ ಬಾನ್‍ ಕೊಳ್ಳಿಗಳ; 
ಸಿಡಿ ಸಿಡಿಲು ಮಳೆ ಬರಲಿ; 
ಬಿರುಗಾಳಿ ಬೊಬ್ಬಿಡಲಿ 
ಪರವೆಯಿಲ್ಲ. 
ಧರಣಿ ತಲೆಕೆಳಗಾಗಿ ತಿರುತಿರುಗಲಿ 
ಅಂತಾದೊಡೇನು; 
ಎಂತಾದೊಡೇನು; 

ಇಂದೇನು ಕೊನೆಯಲ್ಲ, 
ಮುಂದೇನೊ ಗೊತ್ತಿಲ್ಲ, 
ಕಾಲಕೇನಳಿವಿಲ್ಲ, 
ಪರವೆಯಿಲ್ಲ. 
ಬಾಳು ಪಳೆ ಪಾಳ್‍ಬಾವಿ ಮತ್ತೇನುಮಲ್ಲ 
ಎಂತಾದೊಡೇನು? 
ಎಂತಿರದೊಡೇನು? 

ಮೆಟ್ಟಲನು ಕಟ್ಟಿಲ್ಲ; 
ದಿಟ್ಟಿಸಲು ಬೆಳಕಿಲ್ಲ; 
ಆಳವರಿತವರಿಲ್ಲ, 
ಪರವೆಯಿಲ್ಲ. 
ಮೇಲಕೆಳೆದಾದರಿಪೆವೆನಲಾರುಮಿಲ್ಲ. 
ಅಂತಿದ್ದೊಡೇನು? 
ಎಂತಿದ್ದೊಡೇನು? 

ತಂಬೆಲರು ಬೀಸುತಿರೆ 
ತುಂಬಿ ಜೇನ್‍ ಸೋರುತಿರೆ 
ತುಂಬೆಹೂ ಬಿರಿಯುತಿರೆ 
ಪರವೆಯಿಲ್ಲ. 
ತುಂಬುಣಿಸದೆಂದೆಣಿಸಿ ದಿನಕಳೆಯಲಹುದು.
ಆಗದಿರಲೇನು? 
ಹೋಗದಿರಲೇನು? 

ಗಳಿಗಳಿಗೆ ಹಾರುವುದು 
ಕೊಳದ ಜಲ ಬತ್ತುವುದು 
ಮಣಲು ಕಣ ಜಾರುವುದು 
ಪರವೆಯಿಲ್ಲ. 
ನಿಲದೆಲ್ಲ ನಡೆಯುವುದು 
ನಮ್ಮನಾಶಿಸದೆ. 
ಅಂತಿರಲದೇನು? 
ಎಂತಿರಲದೇನು? 

ಅಳುವುದೇತಕೊ, ಮಗುವೆ, 
ಅಳುಕುವುದದೇತಕೆಲೊ? 
ಉಳಿಯದೊಂದುಂ ಜಗದಿ; 
ಪರವೆಯಿಲ್ಲ. 
ಕಳೆದುಪೋಪುದು ಕಷ್ಟಸುಖದವೊಲದೆಂದೋ 
ವೋದೊಡೇನು?-ಎಂತು 
ಆದೊಡೇನು?
 
ಆದುದಾಗಲಿ; ಏನು? 
ಪೋದುದಾದರು ಏನು? 
ಬರುವುದೆಲ್ಲಾ ಬರಲಿ 
ಪರವೆಯಿಲ್ಲ. 
ಗಿರಿಯ ಪೋಲ್ವೆದೆಯೊಂದು ನಿನಗಿರಲಿ ಸಾಕು; 
ಪರವೆಯಿಲ್ಲ-ನಿನಗೆ 
ಕೊರತೆಯಿಲ್ಲ.

****************

'ಪರವೆ' 'ಪರಿವೆ' ಎಂದರೆ ಅರಿವು, ತಿಳಿವಳಿಕೆ, ಜ್ಞಾನ ಎಂದು ಅರ್ಥ. 
ಪರವೆಯಿಲ್ಲ ಎಂದರೆ ಅರಿವಿಲ್ಲ ಎಂದಾಯಿತು‌. 'ಪರವಾಗಿಲ್ಲ' ಎಂದರೆ ಕಡೆಗಣಿಸು, ನಿರ್ಲಕ್ಷಿಸು, ಮನಸ್ಸಿಗೆ ಹಚ್ಚಿಕೊಂಡು ಹೆದರಬೇಡ, ಎಂಬಿತ್ಯಾದಿ ಅರ್ಥ. ಮೊದಲನೆಯದಾಗಿ ಅಮೃತಪುತ್ರನಾಗಿ ಜನಿಸಿದ  ಮನುಷ್ಯನಿಗೆ ತಾನು ಯಾರು ಎಂಬುದರ ನಿಜವಾದ ಅರಿವಿಲ್ಲದೇ ದಿನಮಾನಗಳನ್ನು ಕಳೆಯುತ್ತಾನೆ. ಎರಡನೆಯದಾಗಿ ಜೀವನದ ಮುಂದಿನ ಕ್ಷಣಗಳಲ್ಲಿ ಏನಾಗುವುದೆಂಬ ಅರಿವು ಮಾನವನಿಗಿಲ್ಲ. ಈ ಕಾರಣಗಳಿಂದ  ಅಸೀಮಚೈತನ್ಯದ ಗಣಿಯಾದ ಮನುಷ್ಯನು ಕ್ಷಣಕ್ಷಣಕ್ಕೂ ಭಯ, ಆತಂಕ, ತಳಮಳಗಳಿಂದ ಕಂಗೆಡುತ್ತಾನೆ. ದಿಕ್ಕುತೋಚದೆ ಕೈಚೆಲ್ಲಿ ಮೂಲೆಸೇರುವ ಹಂತಕ್ಕಿಳಿಯುತ್ತಾನೆ‌. ಇಂತಹ ಸನ್ನಿವೇಶದ ಶಿಶುಗಳಾಗಿ ಅಳುತ್ತಿರುವವರನ್ನು ಕುರಿತು ಡಿವಿ ಗುಂಡಪ್ಪನವರು  ಏನಾದರೂ ಆಗಲಿ, ನಿನಗೆ ಕೊರತೆಯಿಲ್ಲ‌.  ನೀನು ಸತ್ತ್ವ ಶೀಲನು. ಆದರೆ ನಿನ್ನನ್ನು ನೀನು ಅರಿಯದೆ ಆತಂಕಕ್ಕೊಳಗಾಗಿರುವೆ‌. 

ಏನಾದರೂ ಪರವಾಗಿಲ್ಲ. ನಿನ್ನೊಳಗಿನ ಶಕ್ತಿಗೆ ಕೊರತೆಯಿಲ್ಲ. ಬಾನಿಂದಬೆಂಕಿಯ ಕೊಳ್ಳಿಗಳುದುರಿದರೂ ನಿನ್ನ ಚೈತನ್ಯವನ್ನು ಅವು ಅಳಿಸಲಾಗದು. ಸಿಡಿಲಪ್ಪಳಿಸಲಿ,  ವಿನಾಶಕಾರಿ ಪ್ರಳಯದ ಜಡಿಮಳೆ ಲೋಕವನ್ನೇ ಕೊಚ್ಚಿಕೊಂಡುಹೋದರೂ ನಿನ್ನ ಒಳಗಿನ ಶಕ್ತಿಯನ್ನದು ಎಳೆದೊಯ್ಯಲು ಸಾಧ್ಯವಿಲ್ಲ. ಪ್ರಳಯದ ಸುಂಟರಗಾಳಿ ಚರಾಚರಗಳನ್ನು  ತರಗೆಲೆಯಂತೆ ಗಿರಗಿರನೆ ಹಾರಾಡಿಸಿದರೂ ಪರವಾಗಿಲ್ಲ,  ಧರಣಿಯೇ ಅಡಿಮೇಲಾಗಿ ಗಿರ್ರನೆ ತಿರುಗಿದರೂ,  ಅಚ್ಚರಿಯಿಲ್ಲ! 
ಬ್ರಹ್ಮಾಂಡದ  ನಡವಳಿಕೆಯಲ್ಲಿ ಇದು ಸಹಜ!  ಇದು ಇಂದು ಮೊದಲಲ್ಲ. ಕೊನೆಯೂ ಅಲ್ಲ.  ಮುಂದಿನ ಕ್ಷಣಗಳಲ್ಲಿ ಏನೇನು ನಡೆಯುವುದೋ ಬಲ್ಲವರಿಲ್ಲ. ಆದ್ದರಿಂದ  ಎಲ್ಲವನ್ನೂ ಎದುರಿಸಲು ಸಿದ್ಧನಾಗಿರಬೇಕು.  ಕಾಲನ ನಿಯತಿಯನ್ನು  ಅರಿತವರಿಲ್ಲ.  ಕಾಲಕೆ ಅಳಿವಿಲ್ಲ. ಕಾಲವು ಚಕ್ರದಂತೆ ಮುಂದುಮುಂದಕೆ ಚಲಿಸುತ್ತಲೇ ಇರುತ್ತದೆ. 

ಬಾಳೆಂಬುದು ಬಳಕೆಗಿಲ್ಲದ ಪಾಳುಬಾವಿಯಲ್ಲ.   ಬಾಳ್ವೆಯಲ್ಲಿ ಹಳೆನೀರು ಕಾಲಿಯಾಗುತ್ತದೆ. ಹೊಚ್ಚಹೊಸನೀರು ತುಂಬಿಕೊಳ್ಳುತ್ತಲೇ ಇರುತ್ತದೆ. ಬಾಳುವೆಯ ದಿನಗಳಲ್ಲಿ ಏನಾದರಾಗಲಿ,   ಹೇಗಾದರಾಗಲಿ!  ಹೀಗೆಯೇ ಇರಬೇಕೆಂದು ನಿಯಮಿಸಲು ನಾವ್ಯಾರು!? ಅದು ಕಾಲನ ಗೊತ್ತುವಳಿ, ವಿಧಿಯ ನಿರ್ಧಾರ! 

   ಸುತ್ತಮುತ್ತೆಲ್ಲ ತಂಪಾದ ಸುಳಿಗಾಳಿ ಬೀಸುತ್ತಿದ್ದರೆ ಅದರ ತಂಪನ್ನು ಸವಿಯೋಣ. ದುಂಬಿಗಳು  ಗುಂಯಿಗುಡುತ್ತಾ ಹಾರಾಡುತ್ತಿರುವಲ್ಲಿ ಜೇನಿನ‌ಹನಿಗಳು ಸೋರುತ್ತಿರುವುದರ ಭಾಗ್ಯವನ್ನು ಸದುಪಯೋಗ ಪಡೆದುಕೊಳ್ಳುದು. ಹೂಗಳಲ್ಲಿ ತುಂಬಿರುವ ಜೇನನ್ನು ಅರಸಿ ಶಿವನ ಅನುಗ್ರಹವನ್ನು ಸದುಪಯೋಗ ಪಡಿಸಿಕೊಳ್ಳುತ್ತದೆ. ಸುತ್ತೆಲ್ಲಾ ತುಂಬೆ ಹೂ ಅರಳಿರುವುದನ್ನು ಕಂಡು  ಶಿವಮಹಿಮೆ ಅಪಾರವಾದುದು ಎಂಬುದನ್ನು ಅರಿತುಕೊಳ್ಳಬೇಕು.

ಮುಳುಗುವವನಿಗೆ ಹುಲ್ಲುಕಡ್ಡಿ ಕಂಡರೂ, ಅದು  ಅವನನ್ನುಳಿಸುವ ಸಂಜೀವಿನಿಯಾಗಬಲ್ಲದು.
ಏನೇ ಆಗಲಿ, ಏನೇ ಹೋಗಲಿ, ಪರವಾಗಿಲ್ಲ.
 
ಅಜೇಯವಾದ ನಿನ್ನನ್ನು ನೀನು ಅರಿತುಕೊಂಡು, ಬಂದದ್ದೆಲ್ಲಾ ಬರಲಿ ಎಂದು ಎದುರಿಸಬೇಕು‌. 
ಗಳಿಗೆಗಳು ಹಾರುತ್ತಿರಲಿ, ಕೊಳದ ಜಲವು ಬತ್ತಿಹೋದರೆ ಬತ್ತಲಿ,  ಮರಳಿನಕಣಗಳು ಕಾಣಲಿ, ಪರವೆಯಿಲ್ಲ. ಜಗತ್ತಿನ  ಆಗುಹೋಗುಗಳು ಯಾರನ್ನೂ ಕೇಳುವುದೂ ಇಲ್ಲ. ಯಾರಿಗೂ ಹುಟ್ಟುಸಾವಿನ ಒಸಗೆಯನು ತಿಳಿಸುವ ಅಂಚೆಯ ಅಣ್ಣನಾಗುವುದೂ ಇಲ್ಲ.  ಹಾಗಿದ್ದರೇನು! ಹೇಗಿದ್ದರೇನು! ಅದರ ಅರಿವು ನಮಗಿಲ್ಲ. ನಮ್ಮ ಅರಿವನ್ನು ಉಳ್ಳವರಾಗೋಣ‌.

   ಏನೋ ಕಳೆದುಹೋಯಿತು ಎಂದು ಮಗುವಿನಂತೆ ಅಳುವುದು ಲಕ್ಷಣವಲ್ಲ. ಮಗುವಿನಂತೆ ಅಳಬಾರದು. ಮಗು ಅಸಹಾಯಕ. ಆದರೆ ನಾವು ಅಸಹಾಯಕರಲ್ಲ.  ಅಂಜಕೆ, ಅಳುಕುವಿಕೆ ಸಲ್ಲದು.  ಕಷ್ಟಸುಖಗಳು ಮೋಡದಂತೆ ಬರುತ್ತವೆ. ಹಿಂದಕ್ಕೆ ಸರಿಯುತ್ತವೆ.

 ಸುಖವೂ ಶಾಶ್ವತವಲ್ಲ. ದುಃಖವೂ ಶಾಶ್ವತವಲ್ಲ.  ಏನದಾರೂ ಆಗಲಿ. ಪರವಾಗಿಲ್ಲ.
ಆಗಿದ್ದೆಲ್ಲಾ ಒಳಿತೇ ಆಯಿತು .ಬಂದದ್ದೆಲ್ಲಾ ಬರಲಿ!  ಪರಿವೆಯೇ ಬೇಡ. ಗಿರಿಬೆಟ್ಟದಂತಹ ಅಚಲಗುಣ ನಿನಗಿರಲಿ. ನಿನ್ನೊಳಗಿನ  ಅಸೀಮವಾದ ಸತ್ತ್ವಶಕ್ತಿಯು ನಿನ್ನನ್ನು ಕಾಪಾಡುತ್ತಾನೆ. ನಿನಗೆ ಕೊರತೆಯಿಲ್ಲ. ಕೊರತೆ ಇಲ್ಲ ಎಂಬುದನ್ನು ಅರಿತುಕೊಂಡು ಹೆಜ್ಜೆಗಳನ್ನು ಮುಂದಿಡೋಣ. 
ಭಾವಾನವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Monday, 11 December 2023

ವಿಧಿಯ ಸ್ವಯಂವರ - ಕೇತಕೀವನ - ಡಿವಿಜಿ

ಸತ್ತೆನೆಂದೆನಬೇಡ
ಸೋತೆನೆಂದೆನಬೇಡ
ಮುತ್ತುತಿದೆ ವಿಧಿಯ ಪಡೆಯೆಂದಳಲ ಬೇಡ
ಸತ್ತ್ವನಿನ್ನೊಳಗಹುದ
ವೆರ್ತವೆನ್ನಿಸಬೇಡ
ಚಿತ್ತವನು ವಜ್ರವಾಗಿಸಿ ನಿಲ್ಲು ಸಖನೆ

ಬಾಳೊಂದು ಕಾಳಗವು
ಬೀಳದೆದೆ ನಿನ್ನಸ್ತ್ರ
ತಾಳುಮೆಯ ತುಂಬಿ ನಿಲುವುದೆ ನಿನ್ನ ವಿಜಯ
ಸೋಲು ಗೆಲುವುಗಳನೀ
ಕಾಲಮಿತಿಯಿಲ್ಲದೀ
ಕೋಲಾಹಲದಿ ಗಣಿಪ ದಿನಮೆಂದು ಸಖನೆ

ಅದಿರದಿರು ಬೆದರದಿರು!
ಎದೆಯನುಕ್ಕಾಗಿಸಿರು
ಬಿದಿಯಬ್ಬರವ ಕೇಳಿ ನಡುಗಿ ಹದುಗದಿರು
ಬದುಕಿ ನೀ ಕದನದಲಿ
ಹದಗೆಡದೆ ಗುರಿಬಿಡದೆ
ಮುದಗೊಂಡು ಹೋರ್ವವಗೆ ಬಿದಿಯೊಲವು ಸಖನೆ

******************

ವಿಧಿಯ ನಿಯತಿಯನ್ನು ಬಲ್ಲವರಿಲ್ಲ‌‌. ವಿಧಿಯು ನಿಯತಿಗನುಸಾರವಾಗಿ ಆವರಿಸುತ್ತದೆ. ವಿಧಿಯ ಆವರಣದಿಂದ ದೂರವಿರಲಾದೀತೆ!? ಇಲ್ಲ.  

ವಿಧಿಯು ವಧುವಿನಂತೆ ಅಥವಾ ವಧುವಿನ ರೂಪದಲ್ಲಿ ಬರಬಹುದು. ವಿಧಿಯನಿಯತಿಯಂತೆ ನಾನರೀತಿಯ ಅಗ್ನಿಪರೀಕ್ಷೆಗಳು ಧುತ್ತೆಂದು ಅವತರಿಸುತ್ತವೆ.  ಸಮಸ್ಯೆಗಳ ಸುರಿಮಳೆಯನ್ನೇ ಎದುರಿಸುವ ಸನ್ನಿವೇಶಗಳು ಬರುತ್ತವೆ. ವಿಧಿಯು ಈರೀತಿ ನಾನಾ ಪ್ರಕಾರಗಳಿಂದ ಬಂದು ಆವರಿಸಿದಾಗ, ಸತ್ತೆನೆಂದು ಕಂಗೆಡದಿರು. ಸೋತೆನೆಂದು ಮನೋದೌರ್ಬಲ್ಯಕ್ಕೆ ಒಳಗಾಗಬಾರದು. ವಿಧಿಯೆಂಬ ಶತ್ರುವಿನ‌ಸೈನ್ಯವೇ ಸುತ್ತುವರಿದು  ಬಲಿತೆಗೆದುಕೊಳ್ಳುತ್ತಿದೆ ಎಂದು ಋಣಾತ್ಮಕವಾಗಿ ಚಿಂತೆಯ ಚಿತೆಯನ್ನು ರಚಿಸಿಕೊಳ್ಳಬಾರದು. ವಿಧಿಯೇ ವಧುವಾಗಿ ಬಂದು ನಿನ್ನೊಳಗಿನ ಸತ್ತ್ವವನ್ನು ಹುರಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರಬಹುದು. ಗುಣತ್ರಯಗಳಲ್ಲಿ ಶ್ರೇಷ್ಠವಾದ ಗುಣ ಸತ್ತ್ವ ಗುಣ.  ಸತ್ತ್ವಗುಣಶೀಲರಾದ ಮಹಾಪುರುಷರೆಲ್ಲರೂ ನಾನಾರೀತಿಯ ಅಗ್ನಿದಿವ್ಯಗಳನ್ನೆದುರಿಸಿ ವಿಧಿಯ ವರಮಾಲಿಕೆಯನ್ನು  ಸಮಚಿತ್ತದಿಂದ ಸ್ವೀಕರಿಸಿ ವಿಜಯಮಾಲಿಕೆಯನ್ನಾಗಿಸಿಕೊಂಡರು. ಪ್ರತಿಯೊಬ್ಬ ಮಾನವನಲ್ಲೂ ಮೂಲತಃ ಸತ್ತ್ವ ಗುಣವೇ ಇರುವುದು. ಸತ್ತ್ವಗುಣದೊಡನೆ, ರಾಜಸ ಹಾಗೂ ತಾಮಸಗುಣಗಳು ಸೇರಿಕೊಳ್ಳುತ್ತವೆ. ವಿಧಿಯಾಟದಲ್ಲಿ ಮಾನಸಿಕವಾಗಿ ಕುಗ್ಗಿದರೆ ತಾಮಸದೆಡಗೆ ಜಾರುವ ಅಪಾಯ.  ಒಳಗಿರುವ ಅಮಿತಶಕ್ತಿಯನ್ನು ತಾನು ತಿಳಿದುಕೊಂಡವನಾಗಿ,  'ಬಾಳು ಗೋಳು' ಎಂದು ಹಳಿಯದೆ ಚಿತ್ತವನು ವಜ್ರವಾಗಿಸಿಕೊಳ್ಳುವುದು ಅನಿವಾರ್ಯ. ವಿಧಿಯ ಆದೇಶದಂತೆ  ಆಪತ್ತುಗಳು ಬಂದು ಮುತ್ತಿಟ್ಟಾಗ  ಸಮಚಿತ್ತದಿಂದ ಇರಬೇಕು.  ಮನಸ್ಸನ್ನು ಕಲ್ಲಾಗಿಸಬೇಕು. 'ಸಹನೆ ವಜ್ರದ ಕವಚವು ನಿನಗೆ'  ಎಂದು ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಸೂಚಿಸುತ್ತಾರೆ. ವಜ್ರವು ತನ್ನನ್ನು ರಕ್ಷಿಸುವುದಾದರೆ, ಶತ್ರುಗಳನ್ನು ಚಿಂದಿಚೂರನ್ನಾಗಿಸಬಲ್ಲುದು.

      ಬಾಳುವೆಯು ಹೂಗಳ ಪಕಳೆಗಳ ಹಾಸುಗೆಯಲ್ಲ.  ನಿರಂತರ ಕಾಳಗದ ರಣರಂಗ. ಹೇಡಿಯಾಗದ ಎಂಟೆದೆಯ ದಿಟ್ಟತನವೇ ಅಸ್ತ್ರಶಸ್ತ್ರ!  ಸಹನೆ, ತಾಳ್ಮೆ, ಸಂಯಮ, ವಿವೇಕವೆಂಬ ಚೈತನ್ಯವನ್ನು ಮನದೊಳಗೆ   ತುಂಬಿಕೊಂಡು ಹೋರಾಡುವವನು  ಬಾಳ ಕಾಳಗದಲ್ಲಿ ವಿಜಯಿಯಾಗುತ್ತಾನೆ.
ಕೋಲಾಹಲಗಳಿಂದ ತುಂಬಿದ ಈ ಬದುಕಿನ ರಣರಂಗದಲ್ಲಿ ಸೋಲುಗೆಲುವುಗಳೇ  ಬೆರಳೆಣಿಕೆಯ ದಿನಗಳು.  ಜೀವನವನ್ನು ಪ್ರೀತಿಸುವ ಡಿವಿಜಿಯವರು  ಬಾಳನ್ನು ಗೋಳೆಂದು ಹೀಗಳೆಯುವವನನ್ನೂ 'ಸಖನೇ' ಎಂದು ಅನುನಯದಿಂದ ಸಮಾಧಾನಪಡಿಸುತ್ತಾರೆ.

    ವಿಧಿಯ ಕಟುಪರೀಕ್ಷೆಗಳನ್ನು ಕಂಡು  ಭಯಭೀತಿಯ ಹಳ್ಳಕ್ಕೆ ತನ್ನನ್ನು ತಾನೇ ಕೆಡವಿಕೊಳ್ಳಬಾರದು. ಮನಸ್ಸು  ಬೆದರಿದರೆ  ಅದುರುತ್ತಾರೆ. ಜೀವನದ ಧನಾತ್ಮಕ ಪಥದಿಂದ  ಅಪಾಯದ ದಾರಿಯೆಡೆಗೆ ಜಾರುವ ಸಾಧ್ಯತೆ ಇದೆ. ಮನಸ್ಸನ್ನು ಉಕ್ಕಾಗಿಸಬೇಕಂತೆ. ಮನಸ್ಸು ಸಮಚಿತ್ತದಿಂದಿರಬೇಕು. ಸ್ಥಿತಪ್ರಜ್ಞನಾಗಿರಬೇಕು. ಸುಂಟರಗಾಳಿಯಂತೆ ಅಬ್ಬರಿಸಿಬರುವ ವಿಧಿಯ ಕರೆಯನ್ನು ಕೇಳಿ  ಹೇಡಿಯಾಗಬಾರದು‌. ನಡುಗಿ ತನ್ನ ಸತ್ತ್ವವನ್ನು ಮರೆತು ಬಾಗಬಾರದು. ಸೋತೆನೆಂದು ಬಾಗಿದವನು  ವಿಧಿವಧುವಿನ ಮಾಲಿಕೆಯನ್ನು ನಿರಾಕರಿಸಿದಂತಾಗುತ್ತದೆ. ಇಂತಹವನನ್ನು ವಿಧಿಯು ವರಿಸುವುದಿಲ್ಲ. ಅವನು ಬಾಳರಣರಂಗದಲ್ಲಿ ಸೋಲನ್ನು ಉಣ್ಣುವುದು ಅನಿವಾರ್ಯ. ಬದುಕಿನ ಕದನದಲ್ಲಿ, ಆಗುಹೋಗುಗಳಿಗೆ ಹದಗೆಡದೆ, ಗುರಿಬಿಡದೆ ಆತ್ಮವಿಶ್ವಾಸದಿಂದ  ನಗುನಗುತ್ತಾ ಹೋರಾಡುವವನನ್ನು ವಿಧಿಯು ವಧುವಿನಂತೆ ವಿಜಯಮಾಲಿಕೆಯನ್ನು ತೊಡಿಸಿ ವರಿಸುತ್ತಾಳೆ. 
 ಆತ್ಮವಿಶ್ವಾಸದಿಂದ ಎಡರುತೊಡರುಗಳನ್ನು  ಧನಾತ್ಮಕವಾಗಿ ಸ್ವೀಕರಿಸಿಕೊಂಡು ದಿಟ್ಟತನದಿಂದ ಬಾಳುವವನ್ನು ವಿಧಿಯು ವಿಜಯಲಕ್ಷ್ಮಿಯಾಗಿ ಬಂದು ವರಿಸುತ್ತಾಳೆ.
ಭಾವಾನುವಾದ: 
©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

************

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ, 
ಬತ್ತಿತೆನ್ನೊಳು ಸತ್ವದೂಟೆಯೆನಬೇಡ, 
ಮೃತ್ಯುವೆನ್ನುವುದೊಂದು ತೆರೆಯಿಳಿತ ; ತೆರೆಯೇರು 
ಮತ್ತೆ ತೋರ್ಪುದು ನಾಳೆ -ಮಂಕುತಿಮ್ಮ

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ-  
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ