ಶ್ರೀ ಭಾರತೀ ತಾಯ ವಿಜ್ಞಾನದೈಸಿರಿಯ
ಲೋಕದೊಳ್ ವಿಸ್ತರಿಪ ಕುವರನೆನಿಸಿ ।
ಕಪಿಲ ಕಾಣಾದಾದಿ ಸದಸದ್ವಿಚಾರಕರ
ಕುಲದ ಕೀರ್ತಿಗೆ ರನ್ನಗಲಶವೆನಿಸಿ ।
ನರನವೊಲೆ ತರುಗಳುಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ ।
ಅಣುರೇಣು ತೃಣಗಳೊಳಮಮಲ ಚೈತನ್ಯವಿಹ
ಮರ್ಮವಂ ಲೋಚನಕೆ ವಿಷಯಮೆನಿಸಿ ॥
ಭೌತತಾತ್ವಿಕ ಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ ।
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ ।
ಕಣ್ಗೆ ಕಾಣದ ತತ್ತ್ವಮಂ ಶ್ರಮಿಸುತರಸಿ ।
ಮೆರೆವನೀ ಜಗದೀಶನಾರ್ಯಕುಲತೋಷಂ ॥
ಪರತತ್ತ್ವವನರಿವೊಡೆಯುಂ ।
ಸಿರಿಯಂ ಸುಖಮಂ ಸುಕೀರ್ತಿಯಂ ಪಡೆವೊಡೆಯುಂ ॥
ಅರಿಭೀತಿಯ ಕಳೆವೊಡೆಯುಂ ।
ತಿರೆಯೊಳ್ ವಿಜ್ಞಾನಮೊಂದೆ ಸಾಧನಮಲ್ತೇ ॥
ಆ ವಿಜ್ಞಾನಕಲಾರಹಸ್ಯಗಳ ತಾವನ್ವೇಷಿಸುತ್ತಂ ಸುಹೃ– ।
ದ್ಭಾವಂದಾಳ್ದು ಜಗಕ್ಕೆ ಬೋಧಿಸುತುಮಂತೆಂದುಂ ಜಗತ್ಕರ್ತನಾ ॥
ಸೇವಾಕಾರ್ಯದಿ ದೀಕ್ಷೆಯೊಂದಿ ನಿಜದೇಶೀಯರ್ ಶುಭಂಬೊಂದಲೆಂ– ।
ದಾ ವಿಖ್ಯಾತ ಮಹಾಶಯಂ ರಚಿಸಿಹಂ ಚಿಜ್ಜ್ಯೋತಿಯಾಗಾರಮಂ ॥
No comments:
Post a Comment