ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ
(ಗೋಖಲೆಯವರ ದೇಶಸೇವಕ ಸಂಘದ ನಿಬಂಧನೆಗಳಿಂದ)
ಎನ್ನಯ ಮಾನಸ ಭವನದೊ– ।
ಳುನ್ನತ ವೇದಿಯಲಿ ದೇಶಮಾತೆಯನಿರಿಸು– ।
ತ್ತೆನ್ನಯ ಸರ್ವಸ್ವಮನಾ ।
ಪುಣ್ಯೋರ್ವೀದೇವಿಯಂಘ್ರಿಗರ್ಪಿಸಿ ಮಣಿವೆಂ ॥ ೧
ಭಾರತರೊಳ್ ವಂಶಮತಾ– ।
ಚಾರಂ ನೂರಿರೆಯುಮವರದೊಂದೆ ಕುಟುಂಬಂ ॥
ಬೇರೆಣಿಕೆಗಳವರೆಡೆಯೊಳ್ ।
ತೋರದವೊಲ್ ಸೋದರೈಕ್ಯಮಂ ನೆಲೆವಡಿಪೆಂ ॥ ೨
ಕಲಹಿಸೆನಾರೊಳಮ್ ಅರ್ಥದ ।
ಕಲುಷಂಗಳ ದೂರವಿಟ್ಟು ಧೀರಸ್ಮೃತಿಯಂ ॥
ತಳೆದುರದೊಳವರ ಚರಿತೆಯ ।
ಬೆಳಕಿಂದಾಂ ನಡೆದು ಬಾಳ ನೋಂಪಿಯ ಮಾಳ್ಪೆಂ ॥ ೩
ರಾಜಕಟಾಕ್ಷ ಮನುಂ ಜನ– ।
ತಾಜಲ್ಪಶ್ಲಾಘನೆಗಳನುಂ ಗಣಿಸದೆ ನಾಂ ॥
ಭೂಜನನಿಯನೊಮ್ಮನದಿಂ ।
ಪೂಜಿಸುವೆಂ ಸತ್ಯಧರ್ಮಸಂಯಮವಿಧಿಯಿಂ ॥ ೪
ಜನಪದಸೇವೆಯೆ ದೈವಾ ।
ರ್ಚನೆಯದು ನಮಗಾತ್ಮಭಾವವಿಸ್ತಾರನಯಂ ॥
ಅನುಗೊಳುವೆಂ ರಾಷ್ಟ್ರಿಕ ಜೀ– ।
ವನ ಕಾರ್ಯಂಗಳ್ಗೆ ದೀಕ್ಷಿತೋಚಿತ ಮತಿಯಿಂ ॥ ೫
ಮಾನವ ಸಂಸ್ಕಾರಕ ಧ ।
ರ್ಮಾನುವ್ರತಮಕ್ಕೆ ಸಾರ್ವಜನಿಕ ವಿಚಾರಂ ॥
ಜ್ಞಾನಿಯಿನಕ್ಕುಂ ಶುಭ ಸಂ– ।
ಧಾನಂ ರಾಜ್ಯಾದಿಲೌಕಿಕ ವ್ಯವಹೃತಿಯೊಳ್ ॥ ೬
No comments:
Post a Comment