ನಿಜದೇಶಂ ನಿಜಮಾತೃದೇವಿ ನಿಜದೇಶೀಯರ್ ನಿಜಭ್ರಾತೃಗಳ್ ।
ನಿಜಸೌಖ್ಯಂ ನಿಜರಾಷ್ಟ್ರಸೌಖ್ಯಮೆ ಎನುತ್ತಂತರ್ಬಹಿಶ್ಶುದ್ಧಿಯಿಂ ॥
ಸುಜನಾರಾಧಿತಮಾರ್ಗದೊಳ್ ನಡೆದ ದಾದಾಭಾಯಿಯಂ ಧನ್ಯನಂ ।
ಭಜಿಪೆಂ ಮಾನಸಶುದ್ಧಿಯಂ ಬಯಸುತಂ ಶ್ರೀ ಭಾರತೀಸೇವೆಯೊಳ್ ॥
ತಾತ ನಿವನಾತ್ಮೀಯರಿಗೆ ಸಹ ।
ಜಾತ ನೆಲ್ಲಜನರ್ಗೆ ಭಾರತ ।
ಮಾತೆಗಮಿತ ಶುಭೋದಯ ನವದಿನದ ರವಿಯೆನಿಪಾ ॥
ರೀತಿಯಲಿ ಬಾಳ್ದಖಿಲರಿಂ ಸಂ ।
ಪ್ರೀತನಾದ ಯಥಾರ್ಥನಾಮ ।
ಖ್ಯಾತ ದಾದಾಭಾಯಿ ನವರೋಜಿಯ ಸದಾ ನೆನೆವೆಂ ॥
ತನುಸೌಖ್ಯವನೆ ಕೋರಿ ಧನದಾಸೆಯಲಿ ಬಳಲು–
ತೆನಿಬರೋ ಜನನಿಯನೆ ಮರೆಯುತಿಹರು ।
ಘನವೆನಿಪ ಬಿರುದಾವಳಿಯ ಗಳಿಪ ಚತುರತೆಯೊ–
ಳೆನಿಬರೋ ಜೀವನವ ಕಳೆಯುತಿಹರು ।
ನಿಜಜನರ ಮೇಲ್ಮೆಯಂ ನೆನೆಯದರೆನಿಮಿಷಮುಂ
ಪಶುಸುಖದೊಳೆನಿಬರೋ ಮುಳುಗುತಿಹರು ।
ಜಾತಿಭೇದವೆ ಸೋದರತ್ವದಿಂ ಮೇಲೆನ್ನು–
ತೆನಿಬರೋ ವೈರದೊಳ್ಮೆರೆಯುತಿಹರು ॥
ದೇಶಹಿತವನೆ ತನ್ನ ಗುರಿಯೊಳಿಡುತೆ ।
ಮುದದಿನಾತ್ಮಾರ್ಪಣೆಯನಾಕೆಗೆಸಗಿ ।
ನಿಲುವ ಮಹನೀಯರತಿವಿರಳರವರೊಳಿಂದು ।
ಪೂಜ್ಯನಾ ನವರೋಜಿ ಮೊದಲೆನಿಪನಲ್ತೆ ॥
ಭಾರತೀಯರ ದುಃಖದುರ್ಬಲದೈನ್ಯದಾಸ್ಯಗಳೆಲ್ಲಮಂ ।
ದೂರ ನೀಗುತೆ ವಿದ್ಯೆ ಸೌಖ್ಯ ಸುಸಂಪದಂಗಳನಾಗಿಪಾ ॥
ದಾರಿತೋರಿದ ಬಂಧುವಾ ನವರೋಜಿಯಲ್ತೆ ನಿರಂತರಂ ।
ಪ್ರೇರಿಕಾ ಮಹನೀಯನೆನ್ನಯ ಚಿತ್ತವೃತ್ತಿಯ ಧರ್ಮದೊಳ್ ॥
ಪರಮಶುಭಚರಿತ್ರಂ ಭಾರತೀವೀರಪುತ್ರಂ ।
ಪರಹಿತಕರವೃತ್ತಂ ಸತ್ಯಮಾರ್ಗಪ್ರವೃತ್ತಂ ॥
ವಿರಚಿತಬಹುಪುಣ್ಯಂ ದೇಶಭಕ್ತಾಗ್ರಗಣ್ಯಂ ।
ಸ್ಫುರಿಕೆ ಮನದಿ ದಾದಾಭಾಯಿಯೆಂಬಾ ವರೇಣ್ಯಂ ॥
ಹನುಮಭೀಷ್ಮರವೊಲದ್ಭುತವೃತ್ತಂ ।
ವಿನಯಶೌರ್ಯಕರುಣಾಗುಣಯುಕ್ತಂ ॥
ಜನಪದೋದ್ಧರಣ ಧರ್ಮಕೃತಾರ್ಥಂ ।
ಮನದೊಳಿರ್ಕೆ ನವರೋಜಿ ಮಹಾತ್ಮಂ ॥
ಸ್ವರಾಜ್ಯಮಂತ್ರಬೋಧಕಂ ಸುರಾಜನೀತಿಕೋವಿದಂ ।
ಪರೇಶಭಕ್ತಿಪೂರಿತಂ ಪರೋಪಕಾರದೀಕ್ಷಿತಂ ॥
ಸ್ಫುರದ್ಯಶಶ್ಶರೀರನಾ ಗುರೂತ್ತಮಂ ಗುಣಾಕರಂ ।
ವಿರಾಜಿಕಾವಗಂ ಮದೀಯ ಮಾನಸಾಬ್ಜಪೀಠದೊಳ್ ॥
No comments:
Post a Comment