Sunday, 7 January 2024

ಸುಶೀಲೆಗೆ–೧ - ಕೇತಕೀವನ - ಡಿವಿಜಿ

ಬೆಡಗನರಿಯದ ಬಾಲೆ 
ತೊಡವು ಬೇಡದ ಬಾಲೆ 
ಕೆಡಕು ಸೋಕದ ಬಾಲೆ-ಈ ಸುಶೀಲೆ. 

ಮೊಗದ ಸೊಬಗವಳ ಸಿರಿ, 
ಅಗಲ ಕಣ್ಮಲರ ಪರಿ 
ಚಿಗುರುತುಟಿ ನಗುಲಹರಿ-ಈ ಕುಮಾರಿ. 

ಇಂಬುಗೊರಲಿನ ಹಾಡು 
ಹೊಂಬಿಸಿಲ ನುಣ್ಗದಪು 
ನಂಬುಗೆಯ ತಿಳಿಗಣ್ಣು-ಸರಳೆಯಿವಳು. 

ಕಿರುಗುಲಾಬಿಯ ಮೊಗ್ಗು 
ಬಿರಿದು ಬಿರಿದು ಸಿಗ್ಗು 
ಸರಳ ಹೃದಯಕೆ ಹಿಗ್ಗು-ಸಾಜ ನೈಜ. 

ಆವ ಜನುಮದ ಋಣವೊ 
ಆವ ದೈವದ ವರವೊ 
ಆವ ಆಕಸ್ಮಿಕವೊ-ಇವಳ ನೇಹ. 

ಬದುಕಿ ನಾಂ ಪಟ್ಟೆಲ್ಲ 
ನುಡಿಯಲಳವಡದೆಲ್ಲ 
ಎದೆಯೊಳಡಗಿರುವೆಲ್ಲ-ನೋವ ಗೋಳ 

ಅರಿತ ಕೆಳೆಯಾ ಮುಖದ 
ಮರುಕವೆರೆವಾ ಕಣ್ಣ 
ಉರ ತಡಹುವಾ ದನಿಯ-ನಚ್ಚಿಪೊಲುಮೆ 

ಮರೆಯಿಪುದು ತೊರೆಯಿಪುದು 
ಕರೆಕರೆಯನೊರಸುವುದು 
ಪರವಶತೆಯಾಗಿಪುದು-ಎನ್ನ ಮನಕೆ. 

ಲೋಕಗಳ ಸಾಕುವನು 
ಈಕೆಯನುರಾಗದಲಿ 
ಸಾಕಲೆನ್ನನದೆಂದುಮ್‍-ಆತ್ಮ ಬಂಧು.

Saturday, 6 January 2024

ಮುಗುಳು ನಗೆ - ಕೇತಕೀವನ - ಡಿವಿಜಿ

ಹೊಂಬಿಸಿಲು ತಂಬೆಲರು 
ಸಂಭ್ರಮದ ಬೆಳಗು 
ಒಂಬತ್ತು ತಾಸೇನೊ 
ತುಂಬು ಸಭೆ ಬೆಡಗು 
ಫುಲ್ಲಮುಖಿ ನೀನು 
ಅಲ್ಲಿದ್ದುದೇನು? 

ನೀನಾರೊ ಕುಲವೇನೊ 
ಹೆಸರೇನೊ ಅರಿಯೆ 
ಬಾನಿನೊಂದಲರೆಸೆದ 
ಕುಸುಮವೋ ನೀನು 
ವರವೊ, ಹೂ ಕವಿದ 
ಗರಗಸವೊ ಬಿದಿಯಾ? 

ನಿನ್ನ ಮೊಗವೆಳೆಮೊಗ್ಗು 
ಅತ್ತಲಿಂದೆರಡು 
ಕಣ್ಣಿನಲಿ ಬಂದೆನ್ನ 
ಸುತ್ತ ಬಳಸುತಿರೆ 
ಬಂದಿ ನಾನಾದೆ, 
ಸುಂದರಕೆ ಸೋತೆ. 

ಮೊಗವ ಬಿಗಿದಿಹೆಯೇಕೆ 
ದುಗುಡವಾಂತಿಹೆಯೇಕೆ! 
ಚಿಗುರಿರದ ಗಿಡವೇನು, 
ನಗದ ಚೆಲುವೇನು? 
ಕುಸುಮದಿಂದ ವನ, 
ಹಸಿತದಿಂ ವದನ. 

ವೇದಿಕೆಯನಿಳಿದು ನಾಂ 
ನಿನ್ನೆಡೆಗೆ ನಡೆದೆ. 
ಕಾದಿದ್ದೆಯೇನೋ ನೀನ್‍ 
ಎನ್ನ ಬಳಿ ಸರಿದೆ. 
ಆಗ ಋಣ ಸಂದು 
ನಾಗಣ್ಗಳೊಂದು. 

ಮುಗುಳು ಬಿರಿಯಿತು, ತುಟಿಯ 
ಮುಗುಳು, ಕಣ್ಮುಗುಳು 
ಜಗವೆಲ್ಲ ಬೆಳಕಾಯ್ತು 
ಜಗ ಮರೆತೆಹೋಯ್ತು 
ದೈವ್ಯವಾ ಯೋಗ 
ಜೀವಸಂಯೋಗ. 

ಭೂಲೋಕ ರಸವಷ್ಟೆ! 
ಬಾಳ ಸವಿಯಷ್ಟೆ! 
ಗಾಳಿ ಬೀಸುತೆ ತಂದ 
ಮಾಲ್ಯದಷ್ಟೆ ಸುಖ. 
ಮುಗಿಯಲಾ ಗಳಿಗೆ 
ತಗುಲಿತುರಿಯೆದೆಗೆ. 

ನಸುನಗುವೆ, ಕುಡಿನೋಟ, 
ನಿನಗದೇ ತೃಪ್ತಿ 
ಬಿಸಿನೆನಸು, ಎದೆಹಸಿವು, 
ಎನಗದೇ ಪ್ರಾಪ್ತಿ. 
ಕಹಿಕಹಿಯ ಮಧುವೆ? 
ಸಿಹಿಸಿಹಿಯ ವಿಷವೆ? 

ಅಕ್ಷಿ ನಾಲ್ಕೊಂದಾಗಿ 
ಮಾಡಿಸಿದ ದೈವಂ 
ಮೆಚ್ಚು ಜೀವಗಳೆರಡ 
ಕೂಡಿಸನದೇಕೆ? 
ವಿಧಿಯೆದೆಯ ಕುಹಕ 
ತ್ರಿದಿವದೊಳೆ ನರಕ.

ಭಾಗ ೧ - ಗ್ರಂಥಮಹಿಮ - ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪ ಬರೆದ ಮುನ್ನುಡಿಗಳು

ಶ್ರೀರಾಮಾಯಣಹೇಮಾದ್ರಿರ್ನೃಸತ್ತ್ವಮಣಿಶೇಖರಃ । 
ಧರ್ಮಸ್ರವಂತೀಮಹಿತಃ ಶೋಭತೇ ಸರ್ವಶೋಭನಃ ॥ 

ಶ್ರೀಮದ್ವಾಲ್ಮೀಕಿಮಹರ್ಷಿಪ್ರಣೀತವಾದ ಶ್ರೀಮದ್ರಾಮಾಯಣವು * ಪರಮಸುಂದರವೂ ಪರಮಮಂಗಲಕರವೂ ಆದ ಗ್ರಂಥವೆಂದು ಜಗತ್ಪ್ರಸಿದ್ಧವಾಗಿದೆ. ಭರತಖಂಡದ ಜನಕ್ಕೆ ಅದು ಎಷ್ಟೋ ಸಹಸ್ರ ವರ್ಷಗಳಿಂದ ಜೀವನಯಾತ್ರೆಯಲ್ಲಿ ಮಾರ್ಗಜ್ಯೋತಿಯಾಗಿ ನಿಂತಿದೆ. ಭರತಖಂಡದ ಹೊರಗೂ ಅದರ ಕೀರ್ತಿ ವಿಸ್ತಾರವಾಗಿದೆ. ಈಗ ಇಂಡೋನೇಸಿಯ (Indonesia), ಇಂಡೊಚೈನ (Indo-China) ಎಂದು ಹೆಸರಾದ ಪ್ರದೇಶಗಳಲ್ಲಿ–ಕಾಂಬೋಡಿಯಾ (ಚಂಪ), ಬಾಲಿ, ಜಾವ ಮೊದಲಾದ ದ್ವೀಪಾಂತರಗಳಲ್ಲಿ ಕ್ರಿಸ್ತಶಕ ಐದನೆಯ–ಆರನೆಯ ಶತಮಾನಗಳಷ್ಟು ಹಿಂದಿನ ಕಾಲದಲ್ಲಿ ರಾಮಾಯಣ ವ್ಯಾಸಂಗವು ಪ್ರಚುರವಾಗಿತ್ತೆಂದು ಅಲ್ಲಿಯ ದೇವಾಲಯಗಳ ಶಿಲ್ಪಾವಶೇಷಗಳಿಂದಲೂ ಪ್ರಾಚೀನ ಶಿಲಾಲೇಖಗಳಿಂದಲೂ ಆ ಜನತೆಯಲ್ಲಿ ಇಂದಿಗೂ ಕಾಣಬರುವ ನಾಮಧೇಯ ರೂಢಿಯಿಂದಲೂ ಸಾಮಾಜಿಕ ಸಂಪ್ರದಾಯಸಂಕೇತಗಳಿಂದಲೂ ನಿರ್ವಿವಾದವಾಗಿ ತಿಳಿದುಬರುತ್ತದೆಯೆಂದು ಸಂಶೋಧಕರು ಹೇಳಿದ್ದಾರೆ. 

ಕನ್ನಡ ಜನಕ್ಕಂತೂ ರಾಮಾಯಣವು ಪರಮ ಪ್ರಿಯವಾದ ಗ್ರಂಥ. ಸೀತಾರಾಮ ಸ್ಪರ್ಶದಿಂದ ಪವಿತ್ರಿತವಾದ ಪಂಚಾಸರೋವರವೂ ಸುಗ್ರೀವಾಂಜನೇಯರ ಸ್ವಸ್ಥಲವಾದ ಕಿಷ್ಕಿಂಧೆಯೂ ಕರ್ಣಾಟಕದ ಕ್ಷೇತ್ರಸಂಪತ್ತು. ಕುಮಾರವ್ಯಾಸನ ಕಾಲಕ್ಕೆ–ಎಂದರೆ ಇಂದಿಗೆ ಐನೂರು ವರ್ಷಗಳ ಹಿಂದೆ–ಕನ್ನಡದಲ್ಲಿ ರಾಮಾಯಣ ಗ್ರಂಥಗಳು ನೂರಾರು ಆಗಿದ್ದಿರಬೇಕು. ಆತ ಹೇಳಿದ್ದಾನೆ: 

ತಿಣಿಕಿದನು ಫಣಿರಾಯ ರಾಮಾ– । 
ಯಣದ ಕವಿಗಳ ಭಾರದಲಿ ತಿಂ– । 
ತಿಣಿಯ ರಘುವರಚರಿತದಲಿ ಕಾಲಿಡಲು ತೆರಪಿಲ್ಲ ॥ 
(ಕುಮಾರವ್ಯಾಸ ಭಾರತ: ೧-೧೭) 

ಹಾಗಿದ್ದರೂ ರಾಮಾಯಣಗ್ರಂಥಗಳು ಕನ್ನಡದಲ್ಲಿ ಇನ್ನೂ ಹೊಸಹೊಸದಾಗಿ ಹುಟ್ಟಿಯೂ ಹುಟ್ಟುತ್ತಲೂ ಇವೆ. ಅಂಥವುಗಳಲ್ಲಿ ಮೊನ್ನೆ ತಾನೆ ಪುತ್ತೂರಿನ ಶ್ರೀ ಶಿವರಾಮ ಕಾರಂತರವರಿಂದ ಪ್ರಕಟಿತವಾದ ಕೌಶಿಕ ರಮಾಯಣ ಒಂದು. 

ಇಂಡಿಯಾದ ಇತರ ದೇಶಭಾಷೆಗಳೆಲ್ಲವುಗಳಲ್ಲಿಯೂ ರಾಮಾಯಣ ಕಾವ್ಯಗಳು ಹೇರಳವಾಗಿವೆ. ತಮಿಳಿನ ಕಂಬರಾಮಾಯಣವೂ ಹಿಂದೀ ಭಾಷೆಯ ತುಲಸೀ ರಾಮಾಯಣವೂ ಮಹಾಪ್ರಸಿದ್ಧಿ ಪಡೆದಿರುವ ಕಾವ್ಯಗಳು. 

ಸಂಸ್ಕೃತಭಾಷೆಯಲ್ಲಂತೂ ವಾಲ್ಮೀಕಿರಾಮಾಯಣವನ್ನವಲಂಬಿಸಿಕೊಂಡು ಹುಟ್ಟಿರುವ ಪದ್ಯ ಪ್ರಬಂಧಗಳು, ಚಂಪುಗಳು, ನಾಟಕಗಳು, ಸ್ತೋತ್ರಗಳು ಮೊದಲಾದ ನಾನಾಜಾತಿಗಳ ಕಾವ್ಯಕೃತಿಗಳ ಲೆಕ್ಕಕ್ಕೆ ಕೊನೆಮೊದಲಿಲ್ಲ. ಭಾಸಕಾಲಿದಾಸಾದಿಯಾಗಿ, ನೂರಾರು ಮಂದಿ ಸಂಸ್ಕೃತಕವಿಗಳು ರಾಮವೃತ್ತಾಂತವನ್ನು ಬಗೆಬಗೆಯಾಗಿ ಬಣ್ಣಿಸಿದ್ದಾರೆ. 

ವೇದಾಂತಿಗಳಿಗೂ ಪರಮಪ್ರಿಯವಾದದ್ದು ರಾಮಸ್ಮರಣೆ. ರಾಮರಹಸ್ಯ, ರಾಮತಾಪನೀ ಮೊದಲಾದ ಉಪನಿಷತ್ತುಗಳೂ ಯೋಗವಾಸಿಷ್ಠ, ಆದ್ಯಾತ್ಮ ರಾಮಾಯಣ ಮೊದಲಾದ ಪರತತ್ತ್ವಪ್ರಕರಣಗಳೂ ರಾಮಸಂಕೀರ್ತನೆಗಳೇ ಆಗಿವೆ. ವಾಲ್ಮೀಕಿ ಮಹರ್ಷಿ ತನ್ನ ಕೃತಿಯ ವಿಷಯದಲ್ಲಿ– 

ಪರಂ ಕವೀನಾಮಾಧಾರಮ್‍ ॥ (ಬಾಲಕಾಂಡ: ೪–೨೦) 

ಎಂದು ನುಡಿದ ಭವಿಷ್ಯದ್ವಾಣಿಯು ಕಾಲಕ್ರಮದಲ್ಲಿ ಸಾರ್ಥಕವಾಗಿದೆ. ವಾಲ್ಮೀಕಿಯನ್ನು ಉಪಜೀವಿಸಿಕೊಂಡಿರುವ ಕವಿಗಳ ಪಟ್ಟಿ ಬೆಳೆಯುತ್ತಲೇ ಇದೆ. 

ಹೀಗೆ ವಾಲ್ಮೀಕಿಯ ಉಪಜೀವಿಗಳಾದ ರಾಮಕಾವ್ಯಗಳು ಸಾವಿರವಿರುವಲ್ಲಿ ಅವುಗಳ ನಡುವೆ ವಾಲ್ಮೀಕಿಯ ಮೂಲಕೃತಿಗೆ ಇನ್ನೂ ಒಂದು ಸ್ಥಾನವುಂಟೆ? ಅದೇನೋ ಆದಿಕಾವ್ಯ ಸರಿ. ಕಾಲದೃಷ್ಟಿಯಿಂದ ಅದು ಅಗ್ರಗಣ್ಯವಾಗಿರುವುದು ಸರಿ. ಅದಕ್ಕೆ ಬೇರೆ ಪ್ರಾಶಸ್ತ್ಯವೇನಾದರೂ ಉಂಟೆ? ಉಂಟು; ಖಂಡಿತವಾಗಿ ಉಂಟು; ಮತ್ತು ಬಹುವಾಗಿ ಉಂಟು. ಕಾವ್ಯಗುಣದೃಷ್ಟಿಯಿಂದಲೂ ಅದಕ್ಕೆ ಅಗ್ರಸ್ಥಾನ ಸಲ್ಲುತ್ತದೆ. 

ಉಪಜೀವಿಕಾವ್ಯಗಳಲ್ಲಿ ಒಂದೊಂದೂ ಒಂದೊಂದು ಸ್ವಾರಸ್ಯವಿಶೇಷದಿಂದ ಆದರಣೀಯವಾಗಿವೆ. ಕೆಲವುಗಳ ಸ್ವಾರಸ್ಯವು ಕಥಾನಿರೂಪಣೆ; ಕೆಲವುಗಳದು ಸನ್ನಿವೇಶ ವರ್ಣನೆ; ಕೆಲವುಗಳದು ಸಂವಾದ; ಕೆಲವುಗಳು ಪಾತ್ರಪೋಷಣೆ; ಕೆಲವುಗಳಲ್ಲಿ ಓಜಸ್ಸು. ಕೆಲವುಗಳಲ್ಲಿ ಕರುಣವೀರಾದಿ ರಸಪುಷ್ಟಿ ಮುಖ್ಯ; ಕೆಲವುಗಳಲ್ಲಿ ಭಕ್ತಿಯ ಆವೇಶ ದೊಡ್ಡದು. ಹೀಗೆಯೇ ಈ ನಾನಾ ಕಾವ್ಯಜಾತಿಗಳಲ್ಲಿ ಒಂದೊಂದಕ್ಕೂ ಒಂದೊಂದು ವಾಚಕವರ್ಗದ ಪುರಸ್ಕಾರವಿರುತ್ತದೆ. ವಾಚಕವರ್ಗದಲ್ಲಿ ನಾಲ್ಕಾರು ಮಟ್ಟಗಳುಂಟಷ್ಟೆ? ಒಂದೊಂದು ಅಂತಸ್ತಿನವರಿಗೆ ಒಂದೊಂದು ತೆರದ ರಾಮಾಯಣಗ್ರಂಥ ಮೆಚ್ಚಾಗಿದೆ. 

ಆದರೆ ವಾಲ್ಮೀಕಿಯ ಸ್ವಾರಸ್ಯ ಈ ಎಲ್ಲ ಕಾವ್ಯ ಜಾತಿಗಳ ಸ್ವಾರಸ್ಯಗಳಿಂದ ಬೇರೆಯಾದದ್ದಾಗಿ, ಆ ಎಲ್ಲದರ ಗುಣಾಂಶಗಳನ್ನೂ ಒಳಕೊಂಡದ್ದಾಗಿ, ತನ್ನದೇ ಆದ ಒಂದು ವಾಗ್ವೈಭವದಿಂದಲೂ ಪಾತ್ರಪ್ರತ್ಯಕ್ಷೀಕರಣಚಾತುರ್ಯದಿಂದಲೂ ಭಾವೋದಾತ್ತತೆಯಿಂದಲೂ ಅನುಪಮ ಪ್ರಭಾವಶಾಲಿಯಾಗಿದೆ. ಉಪಜೀವಿಕಾವ್ಯಗಳು (ಫೋಟೋ) ಪ್ರತಿಚ್ಛಾಯಾಬಿಂಬದಂತೆ ವಸ್ತುವಿನ ಒಂದೊಂದು ಭಾಗವನ್ನು, ಅಥವಾ ಒಂದೊಂದು ದೃಶ್ಯಪ್ರಕಾರವನ್ನು, ಅಷ್ಟಿಷ್ಟು ಪ್ರತಿಬಿಂಬಿಸುತ್ತವೆ. ಮೂಲದ ಸಮಗ್ರಸ್ವರೂಪ ಫೋಟೋವಿನಲ್ಲಿ ಬಾರದು. ರಾಮಾಯಣದ ಸ್ವಾರಸ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕೆನ್ನುವವರು ವಾಲ್ಮೀಕಿರಚಿತವಾದ ಮೂಲಗ್ರಂಥಕ್ಕೆ ಹೋಗಬೇಕು. ಸಂಸ್ಕೃತ ಭಾಷೆಯ ಪರಿಚಯ ಸಾಕಷ್ಟಿಲ್ಲದವರು ಸಂಪೂರ್ಣ ಮೂಲಗ್ರಂಥದ ದೇಶಭಾಷೀಯ ಅನುವಾದಕ್ಕೆ ಹೋಗಬೇಕು. 

ಸಾಮಾನ್ಯಜನರನ್ನು ವಾಲ್ಮೀಕಿಯ ಸನ್ನಿಧಿಗೆ ನೇರವಾಗಿ ಕೂಡಿದಷ್ಟು ಹತ್ತಿರ ಕರೆದುಕೊಂಡು ಹೋಗಬೇಕೆಂಬುದು ಪ್ರಕೃತಗ್ರಂಥದ ಉದ್ದೇಶ. ಸಂಸ್ಕೃತಮೂಲವನ್ನು ಸಾಮಾನ್ಯರಿಗೆ ದೊರಕಿಸುವ ಮಾರ್ಗಗಳಲ್ಲಿ ಅತ್ಯಂತ ಸಮೀಪದ್ದು ಪದವಿಭಾಗ–ಪ್ರತಿ ಪದಪದಾರ್ಥದ್ದು. ಆದರೆ ಅದರ ಉಪಯೋಗ ಬೇಕೆನ್ನುವವರು ಹೆಚ್ಚಿನ ಕಾಲವ್ಯಯಕ್ಕೆ ಸಿದ್ಧರಾಗಿರಬೇಕು, ಮತ್ತು ಹೆಚ್ಚು ತಾಳ್ಮೆಯೂ ನೆಮ್ಮದಿಯೂ ಚಿತ್ತಾವಧಾನವೂ ಉಳ್ಳವರಾಗಿರಬೇಕು. ನಮ್ಮ ಇಂದಿನ ಅವಸರ–ಜೀವನದ ಒತ್ತಡದಲ್ಲಿ ಅಂಥ ಜನ ತೀರಾ ಕಡಮೆ. ಆದದ್ದರಿಂದ ಪ್ರತಿಪದಾರ್ಥದ ದಾರಿಯು ಈಗ ಬಹುಸಂಖ್ಯೆಯ ಜನಕ್ಕೆ ಪ್ರಯೋಜಕವಾಗಲಾರದು. ಅದನ್ನು ಬಿಟ್ಟರೆ ಸುಗಮವಾದ ದಾರಿ ಮೂಲ ಸಂಸ್ಕೃತದ ಕನ್ನಡ ವಾಕ್ಯಾನುವಾದದ್ದು. ಅದು ಪ್ರಕೃತಗ್ರಂಥದ್ದು. ಕೊಂಚಕೊಂಚವಾದರೂ ಸಂಸ್ಕೃತದ ಪರಿಚಯವಿರುವವರಿಗೆ ಈ ಅನುವಾದಗ್ರಂಥ ಅನೇಕ ವಿಧಗಳಲ್ಲಿ ಉಪಕಾರಕವಾಗುತ್ತದೆ. ಅಂಥವರು ಕನ್ನಡ ವಾಕ್ಯಗಳನ್ನೋದುವಾಗ ಅಲ್ಲಲ್ಲಿ ಸಂಸ್ಕೃತ ಮೂಲದ ಕಡೆಗೂ ಕಣ್ಣನ್ನು ತಿರುಗಿಸಿದರೆ ಇಲ್ಲಿಗೂ ಅಲ್ಲಿಗೂ ಇರುವ ಸಾಮ್ಯವನ್ನು ಕಾಣುವಂತಾಗುತ್ತದೆ. ಅವರಿಗೆ ಮೂಲಗ್ರಂಥವು ಅತ್ಯಂತ ಸಮೀಪದ್ದಾಗುತ್ತದೆ. ಸಂಸ್ಕೃತದ ಕಡೆ ತಿರುಗದೆ ಕನ್ನಡ ವಾಕ್ಯಭಾಗಮಾತ್ರವನ್ನೇ ಓದಿದರೂ ಅವರಿಗೆ ವಾಲ್ಮೀಕಿಯ ಪ್ರಸಾದ ತಪ್ಪದೆ ದೊರೆಯುತ್ತದೆ.

Friday, 5 January 2024

ಸಂದೇಹ ಸೂಕ್ತ - ಕೇತಕೀವನ - ಡಿವಿಜಿ

ಸಂದೇಹ ಸೂಕ್ತ 

(ಸಾಮರಾಗ)

ದೇವನಂತೆ 
ಜೀವನಂತೆ 
ಆರ ಮಾತದು? ಸ್ವ
ರ್ಗವಂತೆ 
ನರಕವಂತೆ 
ಆರ ಕತೆಯದು! 
ಕನವರಿಕ್ಕೆಯೋ 
ಮನದ ಪೂಣ್ಕೆಯೋ ೧ 

ದೇವರೆಂಬ 
ಭಾವ ಕೃತಕ 
ಚಿತ್ರ ಭೂತವೇ 
ನಿಜವೆ ನೀನು 
ಋಜುವೆ ನೀನು 
ವಾಸ್ತವೀಕವೇ 
ಬರಿಯ ನಚ್ಚಿನಾ 
ಹೊರಗದೆಲ್ಲಿ ನೀಂ? ೨ 

ಮಹಿಮೆ ಕೇಳಿ 
ರಹಸಿ ನಿನ್ನ 
ತಡಕುವರ್‍ ಜನರ್‍ 
ಇಹೆಯೊ ನೀನು 
ನಹಿಯೊ ನೀನು 
ಪಿಡಿಯದಲೆಯುವರ್‍ 
ಮರೆಯೊಳಿರ್ಪೆಯೋ 
ಕುರುಡು ಸುದ್ದಿಯೋ ೩ 

ಜಗದಿ ನೂರು
ಬಗೆಯ ರುಚಿಯ 
ರಾಶಿಯಾಗಿಸಿ 
ಎದೆಯ ಕೆಣಕಿ 
ಬದುಕ ಕುಲುಕಿ 
ಘಾಸಿಯಾಗಿಸಿ 
ಪಾಶ ಬಿಗಿದು ನೀ- 
ನೀಶನೆನಿಸಿಹೆ ೪ 

ನೋವ ಬೀರಿ 
ಸಾವ ತೋರಿ 
ಭಯವ ಬಿತ್ತುತಾ 
ಓವನಂತೆ 
ಕಾವನಂತೆ 
ನಯವ ನಟಿಸುತಾ 
ಮನುಜಕುಲವ ನೀ- 
ನಣಕುಗೆಯುತಿಹೆ ೫ 

ಅಳುಕುವಡಿಸಿ 
ಅಳುವ ಬರಿಸಿ 
ಹರಕೆ ಸಲಿಕೆಯ 
ಕೊಳುತೆ ಮೌನ- 
ದೊಳಗೆ ನಗುವ 
ಬರಡು ದೈವವೇ 
ಕಾಟ ಕೊಡುತ ನೀ- 
ನಾಟವಾಡುವೆ ೬ 

ವಾಂಛೆ ಸಲಿಪ 
ಸಂಚುಗೈದು 
ಭಕ್ತನ ಕರೆದು 
ಹೊಂಚಿ ನೋಡಿ 
ಲಂಚಗೊಂಡು 
ರಿಕ್ತನಗೆಯ್ವೆ 
ಎಷ್ಟು ಜನಕೆ ನೀಂ 
ಹೊಟ್ಟೆಯುರಿಸಿಹೆ ೭ 

ಮಂತ್ರ ನುಡಿದು 
ತಂತ್ರವಿಡಿದು 
ವ್ರತವ ನೋಂತವರ್‍ 
ಸಂತಸಂಗ- 
ಳಾಂತು ಶುಭದ 
ಗತಿಯ ಕಂಡರೇಂ 
ಎನಿಬರಳಲ ನೀಂ 
ಕೊನೆಗೆ ತಂದಿಹೆ? ೮ 

ಸ್ವಾಮಿ ಸರ್ವ 
ಪ್ರೇಮಿಯೆಂಬ 
ಕೀರ್ತಿ ನಿನ್ನದು 
ಕ್ಷಾಮ ಯುದ್ದ 
ಡಾಮರಂಗ- 
ಳಾರ್ತಿ ನಮ್ಮದು 
ನಿನ್ನ ರಾಜ್ಯಮೇಂ 
ಶೂನ್ಯ ಭೋಜ್ಯವೈ ೯ 

ನ್ಯಾಯ ಜಗದಿ 
ಗಾಯವಡೆದು 
ಕುಗ್ಗುತಿರ್ಪುದುಂ 
ಆಯದಿಂದ 
ಹೇಯ ಹೂಟ 
ಹಿಗ್ಗುತಿರ್ಪುದುಂ 
ನಿನ್ನ ನೀತಿಯೊಂ- 
ದುನ್ನತಿಕ್ಕೆಯೇಂ ೧೦ 

ಕರದೊಳಭಯ- 
ವರದ ಮುದ್ರೆ 
ತಳೆದು ಭಜಕರಂ 
ಮರುಳುಕವಿಸಿ 
ಚರುವಗಳಿಸಿ- 
ಕೊಳುತ ನಲಿಯುವೆ 
ಅಕಟವಿಕಟಿಯೋ 
ಬಕ ತಪಿಸ್ವಿಯೋ ೧೧ 

ಊಹೆ ರೂಢಿ 
ಈಹೆ ಭೀತಿ 
ಯೋಜಿಸಿರ್ಪುದಂ 
ದಾಹ ದುಗುಡ 
ಮೋಹ ಚಿಂತೆ 
ಪೂಜೆಮಾಡಿಕುಂ 
ಮನುಜ ಮನದೊಳೇ 
ಜನಿಸಿ ಬಾಳ್ವೆ ನೀಂ ೧೨ 

ನರನು ಕಂಡುಮ್‍ 
ಅರಿಯಲಾಗ- 
ದನಿತು ಚೋದ್ಯಮಂ 
ನಿರವಿಸಿ ನೀಂ 
ತೆರೆಯೊಳಣಗಿ 
ಇಣಿಕಿ ನೋಳ್ಪುದೇಂ 
ನಾಣ್ಚೆ ನಿನಗೆ? ನೀಂ 
ವಂಚನಾರ್ಥಿಯೇಂ? ೧೩ 

ಇರುಳು ಪಗಲು 
ಬೆರೆತ ಮಬ್ಬೊ- 
ಳಿರಿಸಿ ನರನ ನೀಂ 
ಅರೆಯರಿವಿಂ- 
ದರಸಿಸುತ್ತೆ 
ಕರವ ಚಾಚಿಸಿ 
ಸಾರಿ ಬರಲವಂ 
ಜಾರಿಕೊಳುತಿಹೆ ೧೪ 

ಗಾಳಿ ಧೂಳು 
ಮೋಡವಾಡು- 
ವಾಟವೆಲ್ಲವು 
ಆಳ್ವನಾರು 
ಕೇಳ್ವನಾರು 
ತೀಟೆಯೆಲ್ಲವು 
ಸೃಷ್ಟಿಯ ಸ್ವತ- 
ಶ್ಚೇಷ್ಟೆ ವಿಶ್ವವು ೧೫ 

ಆವಿ ಹೊಗೆಯ 
ಡಾವು ಡವಲು 
ದೈವವದರೊಳೇಂ 
ಕೋವಿಯುಸಿರು 
ಗಾವು ಗಡಣೆ 
ಜೀವವದರೊಳೇಂ 
ಭ್ರಮೆಯ ಶಿಶುವೊ ನೀ- 
ಮಮರ ಮರ್ಮವೋ ೧೬ 

ನರನ ಭಯವೆ 
ಹರಿಯ ಜಯವೆ? 
ತಥ್ಯವಾವುದೋ! 
ಎರಡುಮೊಂದೆ 
ಬೆರತಿರಲದೆ 
ಪಥ್ಯವಪ್ಪುದೋ? 
ನೆಳಲ ತೊರೆದಿಹಾ 
ಬೆಳಕದೆಲ್ಲಿಯೋ ೧೭ 

ನರರು ಸುರರು 
ಕುರಿ ಹುಲಿವೊಲು 
ಬೇರೆ ಬೇರೆಯೇಂ 
ಧರಣಿ ತರಣಿ- 
ಯರಿಗಳವೊಲು 
ದೂರ ದೂರವೇಂ 
ಪಿಂಡಿಯೊಂದೆ 
ಬ್ರ ಹ್ಮಾಂಡವಲ್ಲವೇ? ೧೮ 

ವಿಕಸಿತಾಕ್ಷಿ- 
ಯ ಕಲುಷಾಕ್ಷಿ 
ದೃಷ್ಟಿಯಿರ್ದೊಡೀ 
ವಸ್ತುಬಹುತೆ- 
ಯಸ್ತಿಯೈಕ್ಯ 
ಸ್ಪಷ್ಟವಾಗದೇ 
ರುಂಡವೊಂದು ಭೇ- 
ರುಂಡ ದ್ವಿಮುಖಕೆ ೧೯ 

ಜೀವವೇನು 
ದೈವವೇನು 
ಯಮಕ ಕವಿತೆಯೋ 
ಚಿಂತೆಗೊಂದು 
ಶಾಂತಿಗೊಂದು 
ಗಮಕರೀತಿಯೋ 
ಅಂತರಂಗಕೇಂ
ಮಂಥಶಿಕ್ಷೆಯೋ ೨೦

Thursday, 4 January 2024

ಜನರಾಷ್ಟ್ರೋದಯ - ಕೇತಕೀವನ - ಡಿವಿಜಿ

ನಗುತಿಹರೆ ದೇವರ್ಕಳೀ ನಮ್ಮ ವಿಜಯದಲಿ?
ನಗು ಮೆಚ್ಚುಗೆಯಿನೊ, ಹಾಸ್ಯದಿನೊ ತಿಳಿವುದದೆಂತು? 
ವಿಗಡಿಪ್ಪುದುಂಟವರ್‍ ಧರೆಯ ಸಂಭ್ರಮಗಳಲಿ 
ಪ್ರಗತಿಯೊಳ್‍ ತಮ್ಮ ಮರೆತಿಹರೊ ಮಾನವರೆಂದು. 
ಅರಸಿಹೆವೆ ನಾಮ್‍ ಅವರನ್‍? ಒಲಿಸಿಕೊಳಲರಿತವರೆ? 
ಶರಣೆನುತೆ ಹೂ ಹಣ್ಣುಗಳ ನೀಡೆ ನಾಮ್‍ ಅವರು 
“ವರವಿದುವೆ ನಿಮಗೆ ಸರಿ"-ಎಂದು ಹಿಂದಿರುಗಿಸರೆ? 
ಪರಿಕಿಸರೆ ನಮ್ಮ ಭಕುತಿಗಳೊಳಗನೇನವರು? 
“ದುಡಿದಿಹಿರೆ ಸತ್ಯದೂಳಿಗದಿ ನೀಮ್‍?” -ಎನ್ನುವರು; 
“ಮಡಿಯಿಂದ, ಮತಿಯಿಂದ, ದುಡಿದಿಹಿರ ನೀಮ್‍?” -ಎನುತೆ, 
“ಪೊಡವಿಯಾಳ್ತನ ಶಿವನ ಗುಡಿಯೊಳರ್ಚನೆ” -ಎನುತೆ, 
“ಮುಡುಪೆಂತೊ ಹಸದವಂತೆಂದು” ಪೇಳುವರವರು. 
ನಿಸ್ಸ್ವಾರ್ಥ ಸತ್ತ್ವದ ವಿವೇಕಕವರೊಲವಿಂದೆ 
ಶಾಶ್ವತದ ಜನರಾಷ್ಟ್ರದಭ್ಯುದಯಪಥವಂತೆ.

************************************

ಜನರಾಷ್ಟ್ರೋದಯ  ಕೇತಕೀವನ-ಡಿವಿಜಿ
~~~~~~~~~~~~~~~
ಮಾನುಷ್ಯನ ವೈಜ್ಞಾನಿಕ ತಾಂತ್ರಿಕ ಆವಿಷ್ಕಾರಗಳಿಂದ ಭೂಮ್ಯಾಕಾಶವ್ಯೋಮಾದಿಗಳ ಸವಾಲನ್ನು ಸ್ವೀಕರಿಸಿ ವಿಜಯಧ್ವಜವನ್ನು ಹಿಡಿದೆತ್ತಿ ಮುನ್ನಡೆಸಾಧಿಸುವುದನ್ನು ಕಂಡು  ಕವಿ ಡಿವಿಜಿಯವರು  ಈ ಮನುಷ್ಯನ ಅಭ್ಯುದಯವನ್ನು ಕಂಡು ದೇವತೆಗಳು  ಕೌತುಕದಿಂದ  ನಗೆಮಿಂಚಿನಬೆಳಕನ್ನು ಮನುಷ್ಯನೆಡೆಗೆ ಹರಿಸುತ್ತಿರಬಹುದೇ ಎಂದು ಕಲ್ಪಿಸುತ್ತಾರೆ.

ನಮ್ಮ ವಿಜಯವನ್ನು ಕಂಡು ತ್ರಿಮೂರ್ತಿಗಳು ಹಾಗೂ ದೇವಲೋಕದ ದೇವತೆಗಳು   ಅಚ್ಚರಿಯಿಂದ ನಗುತ್ತಿರಬಹುದೇ!?  ನಗುತ್ತಿದ್ದರೆ, ಆ ನಗುವಿನ ಹಿಂದೆ ಕುಹಕದ ಅಣಕವಿರಬಹುದೇ? ಮೆಚ್ಚುಗೆಯ ಮಂದಹಾಸವಿರಬಹುದೇ?

   ಧರೆಯ ಸಂಭ್ರಮಗಳಲ್ಲಿ  ‌ಮನುಜನು ಸಾಹಸ ಪರಾಕ್ರಮಗಳನ್ನು ಮೆರೆಯುವುದುಂಟು. ತನ್ನ ವಿಜಿಗೀಷುಪ್ರವೃತ್ತಿಯ ನಡುವೆ ಮನುಷ್ಯನು ತಮ್ಮನ್ನು  ಮರೆತೇ ಬಿಟ್ಟಿರುವರೇನೋ ಎಂದು ದೇವತೆಗಳು ವಿಚಲಿತರಾದರೇ ಎಂಬುದು ಕವಿಯ ಜಿಜ್ಞಾಸೆ.

 ಈಶಾವಾಸ್ಯಮಿದಂ ಜಗತ್! ತೇನ ತ್ಯಕ್ತೇನ ಭುಂಜೀಥಾ|

ಭೂವ್ಯೋಮಮಂಡಲವೆಲ್ಲವೂ ಭಗವಂತನಿಂದಲೇ ವ್ಯಾಪಿಸಲ್ಪಟ್ಟಿದೆ. ಅಣುರೇಣುತೃಣಕಾಷ್ಠಗಳ ಕಣಕಣಕಣಗಳಲ್ಲೂ ಅಂತಶ್ಶಕ್ತಿಯಾಗಿ ಪರಮೇಶ್ವರನೇ ಉಸಿರಾಡುತ್ತಿದ್ದಾನೆ. ಅವನಿಲ್ಲದ ನೆಲೆಯಿಲ್ಲ. ಅವನು ಸೃಷ್ಟಿಸಿ ನೀಡಿದ ಹೂಹಣ್ಣು ಕಾಯಿ ಧಾನ್ಯಾದಿಗಳನ್ನು ಅವನಿಗೇ ಸಮರ್ಪಿಸಿ ಅನುಭವಿಸುತ್ತೇವೆ. ದೇವತೆಗಳ ಮೂಲಕ ದೇವನು ಸೃಷ್ಟಿಯ ಆಗುಹೋಗುಗಳ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ.

    ಅಂತಹ ದೇವನನ್ನು ಹಾಗೂ ದೇವತೆಗಳನ್ನು  ಮನುಷ್ಯನು ಹುಡುಕಾಡುತ್ತಿರವನೇ!?  ಪರಮಾತ್ಮ ಹಾಗೂ ದೇವತೆಗಳ ಒಲವನ್ನು ಪಡೆಯಲು ಅರಿತುಕೊಂಡಿದ್ದಾರಾ!? 

    ನಾವು ಶರಣು ಎಂದು ಭಕ್ತಿಯಿಂದ ಹೂಹಣ್ಣುಗಳನ್ನು  ನೈವೇದ್ಯವಾಗಿ ನೀಡಿದರೆ,  ದೇವತೆಗಳು ಮಿಗಿಲಾದ ಸಂತೋಷದಿಂದ ಮಳಬೆಳೆಗಳನ್ನು ನೀಡುತ್ತಾರೆ. ಪರಮಾತ್ಮನು ಅನುಗ್ರಹಿಸುತ್ತಾನೆ. ಭಕ್ತನು ಭಗವಂತನೆಡೆಗೆ  ಮೂರುಹೆಜ್ಜೆಗಳನ್ನಿಟ್ಟರೆ ಭಗವಂತನು ಭಕ್ತನಡೆಡಗೆ ಆರು ಹೆಜ್ಜೆಗಳನಿಡುವನಂತೆ.  ಶಿಶುವಿನೆಡೆಗೆ ಅಮ್ಮನು ಓಡೋಡಿಬರುವಂತೆ  ಓಡಿಬರುವನಂತೆ.

    ನಮ್ಮ ಭಕ್ತಿಯ ಅಂತಸ್ಸತ್ತ್ವವನ್ನು   ಭಗವಂತನು ಪರೀಕ್ಷಿಸುತ್ತಲೇ ಇರುತ್ತಾನೆ.
"ನಿಜಕ್ಕೂ ನೀವು ಪರಮಸತ್ಯದ ಪಥದಲ್ಲಿ ನೀವು ದುಡಿಸಿಕೊಂಡಿರುವಿರೇ!?" ಎಂದು ದೇವತೆಗಳು ಪ್ರಶ್ನಿಸುತ್ತಲೇ ಇದ್ದಾರೆ.

"ನಿಜವಾದ ಆಂತರಂಗಿಕವಾಗಿ ಪರಿಶುದ್ಧರಾಗಿ,  ವಿವೇಕದಿಂದ ನೀವು ದುಡಿದಿದ್ದೀರಾ?" ಎಂದು ದೇವತೆಗಳು ಪ್ರಶ್ನಿಸುತ್ತಿದ್ದಾರೆ.

ಸರ್ವಶಕ್ತನಾದ ಜಗದೀಶನ ನ್ನು ಅಚಲ ಭಕ್ತಿಯಿಂದ ಪೂಜಿಸುವುದರಿಂದ ಭೂಮಂಡಲದ ಒಡೆತನ ಎಂಬುದನ್ನು  ಮನದಲ್ಲಿಟ್ಟುಕೊಳ್ಳಿ ಎಂದು ದೇವತೆಗಳು ನೆನಪಿಸುವರು. 

ದೈವಭಕ್ತಿಯ ಮುಡಿಪು ಪ್ರಸನ್ನತೆ ಪ್ರಸಾದಗಳ ದಾರಿ ಎಂದು ದೇವತೆಗಳು ನೆನಪಿಸುವರು.
ನಿಸ್ವಾರ್ಥ ಸತ್ತ್ವದ ವಿವೇಕದಿಂದ ಶಾಶ್ವತವಾದ ಜನರಾಷ್ಟ್ರದ ಅಭ್ಯುದಯಕ್ಕೆ  ರಾಜಪಥ ಎಂದೆನ್ನುತ್ತಾರೆ ಕವಿ ಗುಂಡಪ್ಪನವರು.
ಭಾವಗ್ರಹಣ:  ✒©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Wednesday, 3 January 2024

ಮನುಷ್ಯ-ನದಿ - ಕೇತಕೀವನ - ಡಿವಿಜಿ

ಮನುಷ್ಯ :- 
ಓ ನದಿಯೆ, ನಿಲುಗಡೆಯ 
ಕಾಣದೋಡುವ ನದಿಯೆ, 
ಏನು ನಿನ್ನುದ್ಯೋಗವೇತಕೀ ವೇಗ? 
ಮಾನಿಸಂಗೊರೆಯೆಯಾ ನಿನ್ನದೇಂ ಯೋಗ? 
ಬದುಕಿನಲಿ ಸೊಗ ನಿನಗೆ 
ಮೊದಲೊಳೋ ಮುಗಿವಿನೊಳೊ? 
ಎತ್ತರದ ಬೆಟ್ಟದೊಳೊ 
ಬಿತ್ತರದ ಕಡಲಿನೊಳೊ, 
ನಡುವಣೆಸಕದೊಳೋ 
ಹುಡುಗಹುಚ್ಚಿನೊಳೋ? 
ಶಿಲೆಯರೆದು ನೆಲಕೊರೆದು ಪರಿದ ರಭಸವದೇನು? 
ಅಲೆಯುಡುಗಿ ಸೆಲೆಯುಡುಗಿ ಕಡಲುಗುವ ನಯವೇನು? 
ಪೆರ್ಮೆ ನಿನದೂರಿನೊಳೆ 
ಕಾರ್ಮಬ್ಬು ಗವಿಗಳೊಳೆ 
ಅಡವಿಗಳ ಪಾಳಿನೊಳೆ 
ಕಡಿದರ್ಬಿ ಬೀಳಿನೊಳೆ 
ಪೇಳ್‍ ನದಿಯೆ ನಿನ್ನ 
ಬಾಳ್‍ ಎಲ್ಲಿ ಚೆನ್ನ? 

ನದಿ :- 

ಮನುಜ, ಪೆರ್ಮೆಯ ತರ್ಕ- 
ಕೆನಗೆಲ್ಲಿ ಬಿಡುವು? 
ಸೃಷ್ಟಿಯೋಡುತಿರೆಂಬಳ್‍ 
ಅಷ್ಟೆ ಎನ್ನರಿವು. 
ಉನ್ನತಿಯ ಹಸದವನು 
ನಿಮ್ನದೆಡೆಗೊಯ್ವಾ
ಊಳಿಗದ ಪಾಡೆನದು. 

ಬಾಳು ಬೇರೇನು? 
ಗಿರಿಕುಹರ ಧರೆವಿಸರ ಶರನಿಧಿ ಗಭೀರ 
ಪರಿಪಾಟಿಯೊಳಗೆನ್ನ ಧರ್ಮಪ್ರಕಾರ 
ಧರ್ಮಪರಿಪೂರಣವೆ 
ಪೆರ್ಮೆಯೆಂದೆನೆಯಾ? 
ನಿರ್ಮಾಪಕನ ಮೆಚ್ಚೆ 
ಪೆರ್ಮೆಯೆಂದೆನೆಯಾ? 

ಮನುಷ್ಯ :- 

ಓ ನದಿಯೆ, ಊಳಿಗದೊ- 
ಳಾನಂದವಿರದೇಂ? 
ಕಾಣೆಯೇಂ ದಾರಿಯಲಿ 
ಕಾನನದ ಸೊಬಗ? 
ಕರೆಯವೇಂ ತೋಳ್‍ ನೀಡಿ 
ಮರ ನಿನ್ನ ಬೇಡಿ? 
ಬಳುಕವೇಂ ಕುಡಿಬಳ್ಳಿ 
ಒಲಿದು ನಿನ್ನಲ್ಲಿ? 

ಬಾಲೆವೊಲು ಕುಣಿಕುಣಿದು ಸುಳಿಸುಳಿದು ಪರಿದು 
ಲೀಲೆಗಳನಾಡುತಿಹೆ ನೆಗೆದು ಬೀಳ್ದೇಳ್ದು. 
ತನ್ನ ತಾಂ ಮರೆತಾಟವಾಡುವಣುಗನವೋಲ್‍ 
ನಿನ್ನ ನೀಂ ಚಿಂತಿಸದೆ ನಿಜಪಥವ ನಡೆವೆ. 
ಆನಂದಮೂರ್ತಿ ನೀನಾನಂದದಾನಿ, 
ನಾನೆಂದು ನಿನ್ನಂತೆ ಬಾಳ್ವೆನೋ ಮೌನಿ!

************************************

ನಿಲ್ಲದೆ ಮುಂದೋಡುತ್ತಿರುವ ನದಿಯನ್ನು ಕಂಡು, ಕವಿಯ ಮನದಲ್ಲಿ ಮೂಡಿದ ಭಾವಲಹರಿಯನ್ನು ನದಿಯೊಡನೆ  ಸಂವಾದಚಿತ್ರದಂತೆ ಡಿವಿಜಿಯವರು ಬಣ್ಣಿಸುತ್ತಾರೆ.

ಮನುಷ್ಯ :    
ಓ ನದಿಯೇ, ಒಂದಿನಿತು ನಿಲ್ಲದೆ ನಿರಂತರವಾಗಿ  ಹಿಂದೆ ನೋಡದೆ ಮುಂದೆ ಮುಂದೆ ಓಡುತ್ತಲೇ ಇರುವೆಲ್ಲ!   ಯಾರ ಕಣ್ಣಿಗೂ ನಿಲುಕದಂತೆ ಅದೇನು ಆವೇಶದಿಂದ ವೇಗವನ್ನು ಹೆಚ್ಚಿಸಿಕೊಂಡು ಓಡುತ್ತಿರುವೆ?  ನಿನ್ನ ಈ ರೀತಿಯ ಓಟದ ಉದ್ದೇಶವೇನಿರಬಹುದು? ಯಾವ ಕಾರ್ಯಸಾಧನೆಗಾಗಿ ಈ ನಿನ್ನ ನಿಲ್ಲದ ಆವೇಗ!?

ನಿನ್ನ ಓಟದ ಉದ್ದೇಶವೇನು? ಯಾವ ಕಾರ್ಯಸಾಧನೆಗಾಗಿ ಹೀಗೆ ಓಡುತ್ತಿರುವೆ ಈ ಮನುಷ್ಯನಿಗೆ ಹೇಳಬಾರದೇ!?
  
ಹೇ ನದಿಯೇ, ನಿನ್ನ  ಬಾಳು ಎಲ್ಲಿ ಚೆಲುವೆಂಬ ಕೌತುಕವು ಎನಗೆ!  ನಿಲ್ಲದೆ ಓಡುತ್ತಿರುವ ನಿನ್ನ ಬಾಳಿನಲ್ಲಿ ಓಟವೇ ಚೆಲುವೇ? ಎತ್ತರದ ಗಿರಿಬೆಟ್ಟಗಳೆಡೆಯಿಂದ ದುಡುದುಡನೆ ಅಬ್ಬರಿಸುತ್ತ ಕೆಳಗಿಳಿಹುವುದು ಸೊಗಸೇ!? ಬೆಟ್ಟದೆಡೆಯಿಂದ ಹರಿದೋಡೋಡಿ 
 ಸೇರುವ ವಿಶಾಲ ಗಂಭೀರವಾದ ಕಡಲಿನಲ್ಲಿ ನಿನ್ನ ಬಾಳುವೆಯು ಚಂದವೇ!?  ಅಥವಾ ಗಿರಿಶಿಖರಗಳಿಂದ ಕೆಳಗಿಳಿದು ಸಮುದ್ರ ಸೇರುವ‌ಮೊದಲು ನಡುವೆ ನಿನ್ನ  ಹುಡುಗುಹುಚ್ಚಿನ ಹರಿವಿನ‌ಕುಣಿತ ಹಾರಾಟಗಳಲ್ಲಿ ಚೆಂದವೇ!?

ಶಿಲೆಗಳನ್ನು ಬಂಡೆಗಳನ್ನು ಅರೆಯುತ್ತಾ ಕೊರೆಯುತ್ತಾ   ಮುಂದೆ ಸಾಗುವ ನಿನ್ನ ರಭಸದ ಸಾಹಸವೇ ಸೊಗಸೇ?  ಮುನ್ನುಗ್ಗುತ್ತಾ ಅಲೆಗಳನ್ನು ಕುಗ್ಗಿಸಿಕೊಂಡು,  ಹುರುಪು,ಉತ್ಸಾಹ, ಹಾರಾಟ ಸೆಡವುಗಳ ಗುರುತುಗಳನ್ನು ಅಳಿಸಿಕೊಂಡು ಕಡಲನ್ನು ಸೇರುವ ಸಡಗರವೇ ಚೆಲುವೇ!?

ನಿನ್ನ ಹಮ್ಮು ಬಿಮ್ಮು ಹಿರಿಮೆಗಳು ನೀನು ಓಡೋಡಿ ಬಂದ ಪರ್ವತದಿಂದ ನಿನಗೆ ಬಂತೇ!  ಓಡುತ್ತಿರುವಾಗ ಅಡವಿ ಗವಿಕಂದರಗಳಿಂದ ನೀನು ಪೆರ್ಚಿದ ಪೆರ್ಮೆಯನು ಒಡಮೂಡಿಸಿಕೊಂಡೆಯಾ? ಕಡಿದಾದ ಆಳಕೊಳ್ಳ ಗಳಲ್ಲಿ ಏಳುತ್ತ ಬೀಳುತ್ತಾ ನುಸುಳುತ್ತಾ ಈ ಅಬ್ಬರದ ಹಮ್ಮು ಬಿಮ್ಮುಗಳನ್ನು ಕಲಿತಿರುವೆಯಾ! ನಿನ್ನ ಬಾಳಿನ ಚೆಲುವಿಕೆಯ ರಹಸ್ಯವು ಎಲ್ಲಿಹುದು!? 

ನದಿ: 
ಕವಿಯ ಕಲ್ಪನೆಯ ಜಿಜ್ಞಾಸೆಗೆ ನದಿಯ ಉತ್ತರ ಇಂತಿರಬಹುದೆಂದು  ಕವಿಯ ಬಣ್ಣನೆ.
ಹುಲುಮಾನವಾ! ಹಮ್ಮುಬಿಮ್ಮು ಒಣತರ್ಕವನ್ನು ಮಾಡಲು ನನಗೆಲ್ಲಿದೆ ಅವಕಾಶ! ನನಗೆಲ್ಲಿದೆ ವಿರಾಮ! ಪ್ರಕೃತಿಯು ನನಗೆ ಓಡು ಎಂದು ಎನ್ನುತ್ತಿದ್ದಾಳೆ. ಸೃಷ್ಟಿಯ ಕರೆಗೆ ಓಗೊಟ್ಟು  ತಡಮಾಡದೆ, ವಿರಾಮವಿಲ್ಲದೆ ಆದೇಶವನ್ನು ಪಾಲಿಸುತ್ತಿದ್ದೇನೆ.  ನನ್ನ ಅರಿವು ಸೀಮಿತವಾದುದು.  ಆದೇಶವನ್ನು ಪಾಲಿಸುವುದಷ್ಟೇ ನನಗೆ ಗೊತ್ತು.

ಔನ್ನತ್ಯದ ಪ್ರಸಾದವನ್ನು ಕೆಳಗಿಳಿದು ಬಂದು, ತಗ್ಗಿನಲ್ಲಿರುವವರಿಗೆ ಸಮಾನವಾಗಿ ಹಂಚುವುದು ನನ್ನ  ಸೇವೆ. ಈ ಸೇವೆಯ ಧರ್ಮವಷ್ಟೇ ನನಗೆ ಗೊತ್ತು.

ಸೃಷ್ಟಿಯ ಆದೇಶವನ್ನು ಪಾಲಿಸುವುದು, ಮುಂದಕ್ಕೆ ಹೋಗುವುದೇ ನನ್ನ ಬಾಳುವೆ.ಅದಕ್ಕಿಂತ ಹೆಚ್ಚಿನದೇನಿದೆ!?ಗಿರಿಕಂದರಧರೆಗಳಲ್ಲಿ ವಿಸ್ತರಿಸುತ್ತಾ , ಗಂಭೀರವಾದ ಶರಧಿಯನ್ನು ಸೇರುವುದು  ನನ್ನ ಧರ್ಮ! ಧರ್ಮಪರಿಪಾಲನೆ ಧರ್ಮಪರಿಪೂರ್ಣತೆಯತ್ತ ಸಾಗುತ್ತೇನೆ.ಇದುವೇ ನನಗೆ ಹೆಮ್ಮೆ ಎಂದರೆ ತಪ್ಪಲ್ಲ. ಸೃಷ್ಟಿಕರ್ತನು ಮೆಚ್ಚುವಂತೆ ನಡೆದರೆ ಅದೇ ಹೆಮ್ಮೆಯಲ್ಲವೇ!? 

ಮನುಷ್ಯ: 

ಓ ನದಿಯೇ! ಸೇವೆಯಲ್ಲಿ ಆನಂದವಿದೆಯಲ್ಲ.   ನಿನ್ನ ಪಯಣದ ದಾರಿಯಲ್ಲಿ ಸೃಷ್ಟಿಯಸೊಬಗಾದ ಹಸಿರುಕಾನನದ ಸೌಂದರ್ಯ ವಿದೆಯಲ್ಲ. ಕಾನನದ ಸಿಬಗಿನಿಂದ ನಿನಗೆ ಆನಂದವಲ್ಲವೇ! ತರುಲತೆಗಳು, ತೋಳುಗಳನ್ನು ನೀಡಿ ಆಲಂಗಿಸಲು ನಿನ್ನನ್ನು ಕರೆಯುತ್ತ ಸ್ವಾಗತಿಸುತ್ತವೆ. ಕುಡಿ ಬಳ್ಳಿಗಳು ನಿನ್ನನ್ನು ಒಲಿಸಿಕೊಂಡು ‌ನಿನ್ನಬಳಿಸಾರಿ ನಾಚಿ ತಲೆತಗ್ಗಿಸಿ ನಾಚುತ್ತವೆ.
ಇದು ನಿನ್ನ ಸೌಭಾಗ್ಯವಲ್ಲವೇ!

ತರಳೆ ಬಾಲೆಯಂತೆ ನೀನು ಕುಣಿದಾಡುತ್ತಾ, ಸುಳಿಸುಳಿಯುತ್ತಾ  ಆಟವಾಡುತ್ತಾ  ಏಳುತ್ತಾ ಬೀಳುತ್ತಾ ಸುಳಿದಾಡುತ್ತಾ  ಮೈಮರೆತು ಲಕ್ಷ್ಯದೆಡೆಗೆ  ಓಡುತ್ತಿರುವೆ.  ನೀನು ಆನಂದದ ಮೂರ್ತಸ್ವರೂಪ!  ಸದಾ ಆನಂದಮಯಳಾದ ನೀನು ಆನಂದವನ್ನು ಹಂಚುತ್ತಾ ಮುನ್ನಡೆಯತ್ತ ಓಡುವವಳು! ನಾನೂ  ನಿನ್ನಂತೆ ಇರಬೇಕು. ಸೃಷ್ಟಿಯು ಆದೇಶಿಸಿದಂತೆ  ಧರ್ಮಪರಿಪಾಲನೆಯ ದಾರಿಯಲ್ಲಿ ಮುಂದೋಡಬೇಕೆಂದು  ಹಂಬಲಿಸುತ್ತೇನೆ.
ಭಾವಗ್ರಹಣ : ©✒ಕೊಕ್ಕಡ ವೆಂಕಟ್ರಮಣ ಭಟ್*

Tuesday, 2 January 2024

ಮಹಾನದಿ - ಕೇತಕೀವನ - ಡಿವಿಜಿ

ಗಿರಿಗುಹೆಯಿನಿಳಿದು ಕಲ್ಗಳನರೆದು ನೆಲ ಕೊರೆದು 
ನೆರೆದು ಮಡುಹಳ್ಳದಲಿ ಸರಸರನೆ ಮುಂಬರಿದು 
ಝರಿಯಾಗಿ ತೊರೆಯಾಗಿ ಸಾರಿ ಪರಿಪರಿಯಾಗಿ 
ಹರಡುತ್ತೆ ಹಾರುತ್ತೆ ಮುಂದು ಮುಂದಕೆ ಸಾಗಿ. 
ಶಿಲೆಗಳಿಕ್ಕಟ್ಟಿನಲಿ ಸಿಲುಕಿ ಸಿಡಿಮಿಡಿಗೊಂಡು 
ಕೆಲದ ದಡಗಳ ತಿಕ್ಕಿ ಸಿಕ್ಕಿದೆಲ್ಲವ ಕೊಂಡು 
ಸೀಳಿ ಬಯಲನು ಕಾಡಕೆಡಹಿ ಮರಗಳನೊಯ್ದು 
ಬೀಳುತ್ತೆ ಭೋರ್ಗರೆಯುತೇಳುತ್ತೆ ಮಾರ್ಮುನಿದು 
ಮೊರೆಯುತ್ತೆ ಸುಳಿಸುತ್ತಿ ಮತ್ತುರುಬಿ ಕುಪ್ಪಳಿಸಿ 
ಕೆರಳಿ ಕವಲೊಡೆದುರುಳಿ ಬಂಡೆಗಳನಪ್ಪಳಿಸಿ 
ಉರವಣಿಸಿ ತೆರೆಯೆದ್ದು ಸೇನೆ ಸಾಲೆನೆ ನುಗ್ಗಿ 
ಹೊರಳಿ ಜಗವನೆ ಕೊಚ್ಚಲೆನೆ ಬಿತ್ತರದಿ ಹಿಗ್ಗಿ 

ಹುಚ್ಚಿನಿಂ ಕೆಚ್ಚಿನಿಂ 
ಪೆರ್ಚಿದುತ್ಸಾಹದಿಂ 
ನೋಡು ನದಿಯೆಂತು 
ಓಡಿಬರುತಿಹುದು! 
ಏತರಾವೇಶವಿದು, 
ಆತುರತೆಯೇತಕಿದು? 
ಪ್ರೀತಿಸಂಭ್ರಮವೆ? 
ಕೌತುಕಾದರವೆ? 
ವೈರಶಪಥವೆ, ಹಟವೆ? 
ಶೂರಸಾಹಸವೆ? 

ಎಳೆಗರುವ ನೆನೆದೋಡಿ ಬಹ ಹಸುವಿನಂತೆ 
ನಳನನರಸುತಲಲೆದ ದಮಯಂತಿಯಂತೆ 

ಪರಿದು ಸಾರೆ ನದಿ 
ಕರೆಯುತಿಹುದುದಧಿ 
ನದಿಗೀಗ ಶಾಂತಿ 
ಹೃದಯವಿಶ್ರಾಂತಿ 

ಈಗಳಾತುರವಿಲ್ಲ ಆವೇಶವಿಲ್ಲ, 
ವೇಗ ರಭಸಗಳಿಲ್ಲ ಆಯಾಸವಿಲ್ಲ, 
ಮೊರೆತ ಕೊರೆತಗಳಿಲ್ಲ ಸದ್ದದೇನಿಲ್ಲ, 
ತೆರೆನೊರೆಯ ಗದ್ದಲದ ಗುರುತೊಂದುಮಿಲ್ಲ. 
ಪೋಗಿರ್ಪುದೀಗಳಾ ಸಿಡುಕು ಮಿಡುಕೆಲ್ಲ 
ಸಾಗರಾಲಿಂಗನದಿ ಸೌಮ್ಯ ನದಿಗೆಲ್ಲ 

ಇಂದದು ಉದಾರ 
ಸಿಂಧುಗಂಭೀರ 

ಕ್ರಾಂತಿಯನು ದಾಂಟಿದಾ ಕ್ಷಾಂತಿ 
ಸಾಂತ್ವನವನೊಂದಿದಾ ಶಾಂತಿ. 

ಈ ನದೀಪ್ರವಹದಂತಿರಲಿ ಬಾಳ್ಪಯಣ; 
ಧೂನಧಾವನ ಮುಗಿಯೆ ಧ್ರುವ ಮಹಾಶರಣ.

*************************************

ಮಹಾನದಿಯು ಛತ್ತೀಸ್ ಗಢ ರಾಜ್ಯದ ಸಿಂಹಾವ ಎಂಬಲ್ಲಿ ಉಗಮಿಸಿ, ಸುಮಾರು ೮೬೦ ಕಿ ಮೀ ನಷ್ಟು ದೂರದ ವರೆಗೆ ಹರಿಯುತ್ತದೆ. ಒಡಿಶಾ ರಾಜ್ಯದ ಮೂಲಕ ಬಂಗಾಳವನ್ನು ಪ್ರವೇಶಿಸಿ  ನದೀ ಮುಖಜ ಭೂಮಿಯನ್ನು ಸೃಷ್ಟಿಸಿ ಬಂಗಳಕೊಲ್ಲಿಯನ್ನು ಸೇರುತ್ತದೆ.  ಮಹಾನದಿಗೆ ಹಿರಾಕುಡ್ ಎಂಬ ಅಣೆಕಟ್ಟನ್ನು ಕಟ್ಟಲಾಗಿದೆ. ಮಹಾರಾಷ್ಟ್ರ, ಛತ್ತೀಸ್ ಗಢ,  ಝಾರ್ಖಂಡ್  ಹಾಗೂ ಒಡಿಶಾ ರಾಜ್ಯಗಳ ಕೆಲವು ಭೂಭಾಗಗಳು ಮಹಾನದಿಯ ಹಿರಾಕುಡ್ ಅಣೆಕಟ್ಟಿನ ಜಲಾನಯನ ಪ್ರದೇಶಗಳನ್ನು ಹೊಂದಿವೆ. ಮಹಾನದಿಯ ಅಬ್ಬರದ ಹರಿವು ಸಾಗರಸಂಗಮದ ಅನಂತರದ ಪ್ರಶಾಂತ ಗಾಂಭೀರ್ಯವನ್ನು ಡಿವಿ ಗುಂಡಪ್ಪನವರು ಮಹಾನದಿ ಕವನದಲ್ಲಿ ಬಣ್ಣಿಸಿದ್ದಾರೆ.

    ಮಹಾನದಿಯು ಗಿರಿಬೆಟ್ಟಗಳಿಂದ ದುಡುದುಡನೆ ಇಳಿಯುತ್ತಾ , ಕಂದರಗಳೊಳಗೆ ಇಳಿಯುತ್ತಾ,  ಕಲ್ಲುಬಂಡೆಗಳನ್ನು ಅರೆಯುತ್ತಾ ಮುಂದೆ ಸಾಗುತ್ತಾಳೆ. ನೆಲವನ್ನು ಪ್ರವೇಶಿಸುವಲ್ಲಿ ಮಹಾನದಿಯ ಅಬ್ಬರದ ಓಟದಿಂದ ನೆಲದ ಮಣ್ಣನ್ನು ಕೊರೆಯುತ್ತಾ ಸಾಗುತ್ತಾಳೆ.  ಹಳ್ಳಕೊಳ್ಳಗಳನ್ನು ತುಂಬಿ ನೆರೆಯುಕ್ಕಿಸಿಕೊಂಡು,  ಸರಸರನೇ ಮುಂದೋಡುತ್ತಾಳೆ.  ಜರಿಯಾಗಿ ತೊರೆಯಾಗಿ ಹರಿಯುತ್ತಾಳೆ. ಹಾರುತ್ತಾ ಕುಣಿಯುತ್ತಾ, ಅಬ್ಬರಿಸುತ್ತಾ , ವಿಶಾಲವಾಗಿ  ವಿಸ್ತಾರವಾಗಿ ‌ಮುಂದಕ್ಕೆ ಮುಂದಕ್ಕೆ ಓಡುತ್ತ, ಶಿಲೆಗಳ ಇಕ್ಕಟ್ಟಿನ ಇರುಕಿಗೆ ಸಿಲುಕಿದಾಗ ಸಿಡಿಮಿಡಿಗೊಂಡಂತೆ ಅಬ್ಬರಿಸುತ್ತಾಳೆ. ನದಿಯ ದಂಡೆಗಳಲ್ಲಿ ತಿಕ್ಕಿ ತಿಕ್ಕಿ ತೊಳೆದಂತೆ ಎಲ್ಲವನ್ನೂ ಕೊಚ್ಚಿಕೊಂಡುಹೋಗುತ್ತಾಳೆ. ಬಯಲುಪ್ರದೇಶಗಳನ್ನು ಸೀಳಿಕೊಂಡು ಓಡುತ್ತಾಳೆ. ಕಾಡುಪ್ರದೇಶಗಳನ್ನು ಹೊಕ್ಕು ಗಿಡಮರಲತೆಗಳನ್ನೆಲ್ಲಾ ಅಡಿಮೇಲಾಗಿಸಿ ಕೊಚ್ಚಿಕೊಂಡು ಹೋಗುತ್ತಾಳೆ. ಏಳುತ್ತ ಬೀಳುತ್ತ ಭೋರ್ಗರೆಯುತ್ತ  ಮುನಿಸಿಕೊಂಡ ಕಾಳಿಯ ಆವೇಶದಂತೆ , ಮೊರೆಯುತ್ತ, ಸುಳಿಸುಳಿದು,  ಕುಪ್ಪಳಿಸುತ್ತಾ,ಕೆರಳಿ ಕವಲೊಡೆದು  ಉರುಳುತ್ತಾ,  ಬಂಡೆಗಳ‌ಮೇಲೆ ಅಪ್ಪಳಿಸುತ್ತ ಓಡುತ್ತಾಳೆ. ಓಟದ ರಭಸ ಸಂಭ್ರಮಗಳಿಂದ ತೆರೆಗಳ ಸೇನೆಯನ್ನೆಬ್ಬಿಸಿ  ತೆರೆಗಳ ಸಾಲುಸಾಲುಗಳನ್ನು ಮುನ್ನುಗ್ಗಿಸುತ್ತಾಳೆ. ಜಗತ್ತನ್ನೇ ಕೊಚ್ಚಿಕೊಂಡುಹೋಗುವಳೇನೋ ಎಂಬಂತೆ ಬಹುವಿಶಾಲವಾಗಿ ಅಬ್ಬರದಿಂದ ಬೊಬ್ಬಿರಿದು ಹರಿಯುತ್ತಾಳೆ. ಆವೇಶದಿಂದ ಮೆರೆಯುತ್ತಾ ಹಿಗ್ಗಿಹಿಗ್ಗಿ ಹರಿಯುತ್ತಾಳೆ.

       ಹುಚ್ಚುಸಾಹಸದ ಪರಾಕ್ರಮದಂತೆ ಅಮಿತೋತ್ಸಾಹದಿಂದ ತುಂಬಿ ಹರಿಯುವ ಮಹಾನದಿಯ ಆವೇಶದ ಓಟವನ್ನು ನೋಡಿದವರು ಬೆರಗಾಗಿ ಸ್ತಂಭೀಭೂತರಾಗುತ್ತಾರೆ‌! 
ಅದೇನು ಆವೇಶವೋ! ಅದೇನು ಆತುರವೋ ಪರಮಚೋದ್ಯವೆನಿಸುವುದು‌! ಸಾಗರಪತಿಯನ್ನು ಸೇರುವ ಸಂಭ್ರಮವೋ !? ಸಮುದ್ರರಾಜನನ್ನು ತೋಳುಗಳಿಂದ ಆಲಂಗಿಸುವ  ಕೌತುಕದ ಸಂಭ್ರಮವೋ ಎಂಬ ಅಚ್ಚರಿ ಕವಿಮನಸ್ಸು ಪ್ರಶ್ನಿಸುತ್ತದೆ!

ಅದಾರಲ್ಲಿ ವೈರವೋ ಶಪಥವೋ ಅದೇನು ಹಟವೋ ಹುಚ್ಚುಸಾಹಸವೋ ಎಂದು ಕವಿ ಬೆರಗಾಗಿ ಮೂಗಿನಮೇಲೆ ಬೆರಳಿಡುತ್ತಾರೆ‌!!.

          ದೊಡ್ಡಿಯಲ್ಲಿ ಅಮ್ಮನಿಗಾಗಿ ಹಂಬಲಿಸಿ ಕೂಗಿಕರೆಯುತ್ತಿರುವ ಕಂದನನ್ನು  ನೆನಪಿಸಿಕೊಂಡು  ಕರುವಿನ ಬಳಿಗೋಡುತ್ತಿರುವ ಹಸುವಿನಂತೆ ಮಹಾನದಿಯು ಸಾಗರದೆಡೆಗೆ ದುಡುದುಡನೆ ಓಡುತ್ತಾಳೆ.
 ಕಾನನದಲ್ಲಿ ಪತಿಯನ್ನು ಕಾಣದೆ ನಳನನ್ನು ಹುಡುಕಾಡುತ್ತಾ ಅಲೆದಾಡುತ್ತಿದ್ದ ದಮಯಂತಿಯಂತೆ ಮಹಾನದಿ ಸುತ್ತಿ ಸುಳಿದಾಡುತ್ತಾ ಅಲೆದಾಡುತ್ತಾ ಮುಂದೋಡುತ್ತಿದ್ದಾಳೆ.

       ಕೌತುಕದಿಂದ ಕುಣಿಯುತ್ತ, ಹಾರುತ್ತ, ಕೆನೆಯುತ್ತಾ, ಆವೇಶದಿಂದ ಮುಂದೋಡುವ ಮಹಾನದಿಯನ್ನು  ಬಂಗಾಳದ ಉದಧಿಯು ತನ್ನೆಡೆಗೆ ಬಾರೆಂದು ಕೂಗಿ ಕರೆಯುತ್ತಿದೆ.  ಬಂಗಸಮುದ್ರನ ಕರೆಗೆ ಓಗೊಟ್ಟು ಓಡೋಡಿಬಂದು ಸಾಗರಪತಿಯನ್ನು ಸೇರಿದಾಗ ಮಹಾನದಿಗೆ ಒಂದಿನಿತು ಸಮಾಧಾನ!  ಶಾಂತವಾದಳು! ನದಿಯ ಹೃದಯವು ಏರಿಳಿತದ ಅಬ್ಬರವನ್ನು ಕಳೆದುಕೊಂಡು ವಿಶ್ರಾಂತವಾಯಿತು.

    ಈಗ ಆತುರ ಆವೇಶಗಳನ್ನು ಕಳೆದುಕೊಂಡು ಪ್ರಸನ್ನವಾಗಿದೆ. ನೆರೆತೊರೆಯೆ ಅಬ್ಬರವಿಲ್ಲ. ಸದ್ದುಗದ್ದಲವಿಲ್ಲ. ನೆರೆತೊರೆಯ ಗುರುತುಗಳಿಲ್ಲ.  ಸಿಡುಕು ಮಿಡುಕುಗಳೆಲ್ಲವೂ  ಪ್ರಶಾಂತವಾದವು.
ಸಾಗರಮಿಲನದಿಂದ ಮಹಾನದಿಯು ಸೌಮ್ಯವಾಯಿತು.
 ಸಾಗರವನ್ನು ಸೇರಿದ ಮೇಲೆ ಮಹಾನದಿಯು ಉದಾರವಾಯಿತು‌. 
ಸಿಂಧುವಿನಲಿ ವಿಲೀನವಾದ ನದಿಯು ಗಂಭೀರವಾಯಿತು! 

  ಸಾಗರಪತಿಯನ್ನು ಸೇರುವ  ಕ್ರಾಂತಿಯ ಆವೇಶದ ಓಟದ ಲಕ್ಷ್ಯವನ್ನು ಸಾಧಿಸಿದ ಬಳಿಕ ನದಿಯಿವಳು ಗಂಭೀರವಾದ ಸಹನೆಯಿಂದ ಮೌನವಾಂತಳು!
(ಕ್ಷಾಂತಿ= ಸಹನೆ,ತಾಳ್ಮೆ) ಸಾಂತ್ವನದಿಂದ ಶಾಂತವಾದಳು! 

   ಮಹಾನದಿಯ ಪ್ರವಹಿಸುವಿಕೆಯಂತೆ ಬಾಳ ಪಯಣವಿರಬೇಕು.
ಆವೇಶದ ಓಟದ ಕಂಪನವು ಕೊನೆಗೊಂಡಮೇಲೆ  ಮಹಾಶರಣನಿಗೆ ಶರಣೆನ್ನುವ ಶಾಂತಿ ಸಹನೆಯಿಂದ ಮನುಷ್ಯನು ‌ಮೌನವಾಗುತ್ತಾನೆ.

(ಧೂನ= ಕಂಪನ.ಧಾವನ= ಓಟ) 
ಭಾವಾನುವಾದ: ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ