ಶ್ರೀರಾಮಾಯಣಹೇಮಾದ್ರಿರ್ನೃಸತ್ತ್ವಮಣಿಶೇಖರಃ ।
ಧರ್ಮಸ್ರವಂತೀಮಹಿತಃ ಶೋಭತೇ ಸರ್ವಶೋಭನಃ ॥
ಶ್ರೀಮದ್ವಾಲ್ಮೀಕಿಮಹರ್ಷಿಪ್ರಣೀತವಾದ ಶ್ರೀಮದ್ರಾಮಾಯಣವು * ಪರಮಸುಂದರವೂ ಪರಮಮಂಗಲಕರವೂ ಆದ ಗ್ರಂಥವೆಂದು ಜಗತ್ಪ್ರಸಿದ್ಧವಾಗಿದೆ. ಭರತಖಂಡದ ಜನಕ್ಕೆ ಅದು ಎಷ್ಟೋ ಸಹಸ್ರ ವರ್ಷಗಳಿಂದ ಜೀವನಯಾತ್ರೆಯಲ್ಲಿ ಮಾರ್ಗಜ್ಯೋತಿಯಾಗಿ ನಿಂತಿದೆ. ಭರತಖಂಡದ ಹೊರಗೂ ಅದರ ಕೀರ್ತಿ ವಿಸ್ತಾರವಾಗಿದೆ. ಈಗ ಇಂಡೋನೇಸಿಯ (Indonesia), ಇಂಡೊಚೈನ (Indo-China) ಎಂದು ಹೆಸರಾದ ಪ್ರದೇಶಗಳಲ್ಲಿ–ಕಾಂಬೋಡಿಯಾ (ಚಂಪ), ಬಾಲಿ, ಜಾವ ಮೊದಲಾದ ದ್ವೀಪಾಂತರಗಳಲ್ಲಿ ಕ್ರಿಸ್ತಶಕ ಐದನೆಯ–ಆರನೆಯ ಶತಮಾನಗಳಷ್ಟು ಹಿಂದಿನ ಕಾಲದಲ್ಲಿ ರಾಮಾಯಣ ವ್ಯಾಸಂಗವು ಪ್ರಚುರವಾಗಿತ್ತೆಂದು ಅಲ್ಲಿಯ ದೇವಾಲಯಗಳ ಶಿಲ್ಪಾವಶೇಷಗಳಿಂದಲೂ ಪ್ರಾಚೀನ ಶಿಲಾಲೇಖಗಳಿಂದಲೂ ಆ ಜನತೆಯಲ್ಲಿ ಇಂದಿಗೂ ಕಾಣಬರುವ ನಾಮಧೇಯ ರೂಢಿಯಿಂದಲೂ ಸಾಮಾಜಿಕ ಸಂಪ್ರದಾಯಸಂಕೇತಗಳಿಂದಲೂ ನಿರ್ವಿವಾದವಾಗಿ ತಿಳಿದುಬರುತ್ತದೆಯೆಂದು ಸಂಶೋಧಕರು ಹೇಳಿದ್ದಾರೆ.
ಕನ್ನಡ ಜನಕ್ಕಂತೂ ರಾಮಾಯಣವು ಪರಮ ಪ್ರಿಯವಾದ ಗ್ರಂಥ. ಸೀತಾರಾಮ ಸ್ಪರ್ಶದಿಂದ ಪವಿತ್ರಿತವಾದ ಪಂಚಾಸರೋವರವೂ ಸುಗ್ರೀವಾಂಜನೇಯರ ಸ್ವಸ್ಥಲವಾದ ಕಿಷ್ಕಿಂಧೆಯೂ ಕರ್ಣಾಟಕದ ಕ್ಷೇತ್ರಸಂಪತ್ತು. ಕುಮಾರವ್ಯಾಸನ ಕಾಲಕ್ಕೆ–ಎಂದರೆ ಇಂದಿಗೆ ಐನೂರು ವರ್ಷಗಳ ಹಿಂದೆ–ಕನ್ನಡದಲ್ಲಿ ರಾಮಾಯಣ ಗ್ರಂಥಗಳು ನೂರಾರು ಆಗಿದ್ದಿರಬೇಕು. ಆತ ಹೇಳಿದ್ದಾನೆ:
ತಿಣಿಕಿದನು ಫಣಿರಾಯ ರಾಮಾ– ।
ಯಣದ ಕವಿಗಳ ಭಾರದಲಿ ತಿಂ– ।
ತಿಣಿಯ ರಘುವರಚರಿತದಲಿ ಕಾಲಿಡಲು ತೆರಪಿಲ್ಲ ॥
(ಕುಮಾರವ್ಯಾಸ ಭಾರತ: ೧-೧೭)
ಹಾಗಿದ್ದರೂ ರಾಮಾಯಣಗ್ರಂಥಗಳು ಕನ್ನಡದಲ್ಲಿ ಇನ್ನೂ ಹೊಸಹೊಸದಾಗಿ ಹುಟ್ಟಿಯೂ ಹುಟ್ಟುತ್ತಲೂ ಇವೆ. ಅಂಥವುಗಳಲ್ಲಿ ಮೊನ್ನೆ ತಾನೆ ಪುತ್ತೂರಿನ ಶ್ರೀ ಶಿವರಾಮ ಕಾರಂತರವರಿಂದ ಪ್ರಕಟಿತವಾದ ಕೌಶಿಕ ರಮಾಯಣ ಒಂದು.
ಇಂಡಿಯಾದ ಇತರ ದೇಶಭಾಷೆಗಳೆಲ್ಲವುಗಳಲ್ಲಿಯೂ ರಾಮಾಯಣ ಕಾವ್ಯಗಳು ಹೇರಳವಾಗಿವೆ. ತಮಿಳಿನ ಕಂಬರಾಮಾಯಣವೂ ಹಿಂದೀ ಭಾಷೆಯ ತುಲಸೀ ರಾಮಾಯಣವೂ ಮಹಾಪ್ರಸಿದ್ಧಿ ಪಡೆದಿರುವ ಕಾವ್ಯಗಳು.
ಸಂಸ್ಕೃತಭಾಷೆಯಲ್ಲಂತೂ ವಾಲ್ಮೀಕಿರಾಮಾಯಣವನ್ನವಲಂಬಿಸಿಕೊಂಡು ಹುಟ್ಟಿರುವ ಪದ್ಯ ಪ್ರಬಂಧಗಳು, ಚಂಪುಗಳು, ನಾಟಕಗಳು, ಸ್ತೋತ್ರಗಳು ಮೊದಲಾದ ನಾನಾಜಾತಿಗಳ ಕಾವ್ಯಕೃತಿಗಳ ಲೆಕ್ಕಕ್ಕೆ ಕೊನೆಮೊದಲಿಲ್ಲ. ಭಾಸಕಾಲಿದಾಸಾದಿಯಾಗಿ, ನೂರಾರು ಮಂದಿ ಸಂಸ್ಕೃತಕವಿಗಳು ರಾಮವೃತ್ತಾಂತವನ್ನು ಬಗೆಬಗೆಯಾಗಿ ಬಣ್ಣಿಸಿದ್ದಾರೆ.
ವೇದಾಂತಿಗಳಿಗೂ ಪರಮಪ್ರಿಯವಾದದ್ದು ರಾಮಸ್ಮರಣೆ. ರಾಮರಹಸ್ಯ, ರಾಮತಾಪನೀ ಮೊದಲಾದ ಉಪನಿಷತ್ತುಗಳೂ ಯೋಗವಾಸಿಷ್ಠ, ಆದ್ಯಾತ್ಮ ರಾಮಾಯಣ ಮೊದಲಾದ ಪರತತ್ತ್ವಪ್ರಕರಣಗಳೂ ರಾಮಸಂಕೀರ್ತನೆಗಳೇ ಆಗಿವೆ. ವಾಲ್ಮೀಕಿ ಮಹರ್ಷಿ ತನ್ನ ಕೃತಿಯ ವಿಷಯದಲ್ಲಿ–
ಪರಂ ಕವೀನಾಮಾಧಾರಮ್ ॥ (ಬಾಲಕಾಂಡ: ೪–೨೦)
ಎಂದು ನುಡಿದ ಭವಿಷ್ಯದ್ವಾಣಿಯು ಕಾಲಕ್ರಮದಲ್ಲಿ ಸಾರ್ಥಕವಾಗಿದೆ. ವಾಲ್ಮೀಕಿಯನ್ನು ಉಪಜೀವಿಸಿಕೊಂಡಿರುವ ಕವಿಗಳ ಪಟ್ಟಿ ಬೆಳೆಯುತ್ತಲೇ ಇದೆ.
ಹೀಗೆ ವಾಲ್ಮೀಕಿಯ ಉಪಜೀವಿಗಳಾದ ರಾಮಕಾವ್ಯಗಳು ಸಾವಿರವಿರುವಲ್ಲಿ ಅವುಗಳ ನಡುವೆ ವಾಲ್ಮೀಕಿಯ ಮೂಲಕೃತಿಗೆ ಇನ್ನೂ ಒಂದು ಸ್ಥಾನವುಂಟೆ? ಅದೇನೋ ಆದಿಕಾವ್ಯ ಸರಿ. ಕಾಲದೃಷ್ಟಿಯಿಂದ ಅದು ಅಗ್ರಗಣ್ಯವಾಗಿರುವುದು ಸರಿ. ಅದಕ್ಕೆ ಬೇರೆ ಪ್ರಾಶಸ್ತ್ಯವೇನಾದರೂ ಉಂಟೆ? ಉಂಟು; ಖಂಡಿತವಾಗಿ ಉಂಟು; ಮತ್ತು ಬಹುವಾಗಿ ಉಂಟು. ಕಾವ್ಯಗುಣದೃಷ್ಟಿಯಿಂದಲೂ ಅದಕ್ಕೆ ಅಗ್ರಸ್ಥಾನ ಸಲ್ಲುತ್ತದೆ.
ಉಪಜೀವಿಕಾವ್ಯಗಳಲ್ಲಿ ಒಂದೊಂದೂ ಒಂದೊಂದು ಸ್ವಾರಸ್ಯವಿಶೇಷದಿಂದ ಆದರಣೀಯವಾಗಿವೆ. ಕೆಲವುಗಳ ಸ್ವಾರಸ್ಯವು ಕಥಾನಿರೂಪಣೆ; ಕೆಲವುಗಳದು ಸನ್ನಿವೇಶ ವರ್ಣನೆ; ಕೆಲವುಗಳದು ಸಂವಾದ; ಕೆಲವುಗಳು ಪಾತ್ರಪೋಷಣೆ; ಕೆಲವುಗಳಲ್ಲಿ ಓಜಸ್ಸು. ಕೆಲವುಗಳಲ್ಲಿ ಕರುಣವೀರಾದಿ ರಸಪುಷ್ಟಿ ಮುಖ್ಯ; ಕೆಲವುಗಳಲ್ಲಿ ಭಕ್ತಿಯ ಆವೇಶ ದೊಡ್ಡದು. ಹೀಗೆಯೇ ಈ ನಾನಾ ಕಾವ್ಯಜಾತಿಗಳಲ್ಲಿ ಒಂದೊಂದಕ್ಕೂ ಒಂದೊಂದು ವಾಚಕವರ್ಗದ ಪುರಸ್ಕಾರವಿರುತ್ತದೆ. ವಾಚಕವರ್ಗದಲ್ಲಿ ನಾಲ್ಕಾರು ಮಟ್ಟಗಳುಂಟಷ್ಟೆ? ಒಂದೊಂದು ಅಂತಸ್ತಿನವರಿಗೆ ಒಂದೊಂದು ತೆರದ ರಾಮಾಯಣಗ್ರಂಥ ಮೆಚ್ಚಾಗಿದೆ.
ಆದರೆ ವಾಲ್ಮೀಕಿಯ ಸ್ವಾರಸ್ಯ ಈ ಎಲ್ಲ ಕಾವ್ಯ ಜಾತಿಗಳ ಸ್ವಾರಸ್ಯಗಳಿಂದ ಬೇರೆಯಾದದ್ದಾಗಿ, ಆ ಎಲ್ಲದರ ಗುಣಾಂಶಗಳನ್ನೂ ಒಳಕೊಂಡದ್ದಾಗಿ, ತನ್ನದೇ ಆದ ಒಂದು ವಾಗ್ವೈಭವದಿಂದಲೂ ಪಾತ್ರಪ್ರತ್ಯಕ್ಷೀಕರಣಚಾತುರ್ಯದಿಂದಲೂ ಭಾವೋದಾತ್ತತೆಯಿಂದಲೂ ಅನುಪಮ ಪ್ರಭಾವಶಾಲಿಯಾಗಿದೆ. ಉಪಜೀವಿಕಾವ್ಯಗಳು (ಫೋಟೋ) ಪ್ರತಿಚ್ಛಾಯಾಬಿಂಬದಂತೆ ವಸ್ತುವಿನ ಒಂದೊಂದು ಭಾಗವನ್ನು, ಅಥವಾ ಒಂದೊಂದು ದೃಶ್ಯಪ್ರಕಾರವನ್ನು, ಅಷ್ಟಿಷ್ಟು ಪ್ರತಿಬಿಂಬಿಸುತ್ತವೆ. ಮೂಲದ ಸಮಗ್ರಸ್ವರೂಪ ಫೋಟೋವಿನಲ್ಲಿ ಬಾರದು. ರಾಮಾಯಣದ ಸ್ವಾರಸ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕೆನ್ನುವವರು ವಾಲ್ಮೀಕಿರಚಿತವಾದ ಮೂಲಗ್ರಂಥಕ್ಕೆ ಹೋಗಬೇಕು. ಸಂಸ್ಕೃತ ಭಾಷೆಯ ಪರಿಚಯ ಸಾಕಷ್ಟಿಲ್ಲದವರು ಸಂಪೂರ್ಣ ಮೂಲಗ್ರಂಥದ ದೇಶಭಾಷೀಯ ಅನುವಾದಕ್ಕೆ ಹೋಗಬೇಕು.
ಸಾಮಾನ್ಯಜನರನ್ನು ವಾಲ್ಮೀಕಿಯ ಸನ್ನಿಧಿಗೆ ನೇರವಾಗಿ ಕೂಡಿದಷ್ಟು ಹತ್ತಿರ ಕರೆದುಕೊಂಡು ಹೋಗಬೇಕೆಂಬುದು ಪ್ರಕೃತಗ್ರಂಥದ ಉದ್ದೇಶ. ಸಂಸ್ಕೃತಮೂಲವನ್ನು ಸಾಮಾನ್ಯರಿಗೆ ದೊರಕಿಸುವ ಮಾರ್ಗಗಳಲ್ಲಿ ಅತ್ಯಂತ ಸಮೀಪದ್ದು ಪದವಿಭಾಗ–ಪ್ರತಿ ಪದಪದಾರ್ಥದ್ದು. ಆದರೆ ಅದರ ಉಪಯೋಗ ಬೇಕೆನ್ನುವವರು ಹೆಚ್ಚಿನ ಕಾಲವ್ಯಯಕ್ಕೆ ಸಿದ್ಧರಾಗಿರಬೇಕು, ಮತ್ತು ಹೆಚ್ಚು ತಾಳ್ಮೆಯೂ ನೆಮ್ಮದಿಯೂ ಚಿತ್ತಾವಧಾನವೂ ಉಳ್ಳವರಾಗಿರಬೇಕು. ನಮ್ಮ ಇಂದಿನ ಅವಸರ–ಜೀವನದ ಒತ್ತಡದಲ್ಲಿ ಅಂಥ ಜನ ತೀರಾ ಕಡಮೆ. ಆದದ್ದರಿಂದ ಪ್ರತಿಪದಾರ್ಥದ ದಾರಿಯು ಈಗ ಬಹುಸಂಖ್ಯೆಯ ಜನಕ್ಕೆ ಪ್ರಯೋಜಕವಾಗಲಾರದು. ಅದನ್ನು ಬಿಟ್ಟರೆ ಸುಗಮವಾದ ದಾರಿ ಮೂಲ ಸಂಸ್ಕೃತದ ಕನ್ನಡ ವಾಕ್ಯಾನುವಾದದ್ದು. ಅದು ಪ್ರಕೃತಗ್ರಂಥದ್ದು. ಕೊಂಚಕೊಂಚವಾದರೂ ಸಂಸ್ಕೃತದ ಪರಿಚಯವಿರುವವರಿಗೆ ಈ ಅನುವಾದಗ್ರಂಥ ಅನೇಕ ವಿಧಗಳಲ್ಲಿ ಉಪಕಾರಕವಾಗುತ್ತದೆ. ಅಂಥವರು ಕನ್ನಡ ವಾಕ್ಯಗಳನ್ನೋದುವಾಗ ಅಲ್ಲಲ್ಲಿ ಸಂಸ್ಕೃತ ಮೂಲದ ಕಡೆಗೂ ಕಣ್ಣನ್ನು ತಿರುಗಿಸಿದರೆ ಇಲ್ಲಿಗೂ ಅಲ್ಲಿಗೂ ಇರುವ ಸಾಮ್ಯವನ್ನು ಕಾಣುವಂತಾಗುತ್ತದೆ. ಅವರಿಗೆ ಮೂಲಗ್ರಂಥವು ಅತ್ಯಂತ ಸಮೀಪದ್ದಾಗುತ್ತದೆ. ಸಂಸ್ಕೃತದ ಕಡೆ ತಿರುಗದೆ ಕನ್ನಡ ವಾಕ್ಯಭಾಗಮಾತ್ರವನ್ನೇ ಓದಿದರೂ ಅವರಿಗೆ ವಾಲ್ಮೀಕಿಯ ಪ್ರಸಾದ ತಪ್ಪದೆ ದೊರೆಯುತ್ತದೆ.
No comments:
Post a Comment