ಹೊಂಬಿಸಿಲು ತಂಬೆಲರು
ಸಂಭ್ರಮದ ಬೆಳಗು
ಒಂಬತ್ತು ತಾಸೇನೊ
ತುಂಬು ಸಭೆ ಬೆಡಗು
ಫುಲ್ಲಮುಖಿ ನೀನು
ಅಲ್ಲಿದ್ದುದೇನು?
ನೀನಾರೊ ಕುಲವೇನೊ
ಹೆಸರೇನೊ ಅರಿಯೆ
ಬಾನಿನೊಂದಲರೆಸೆದ
ಕುಸುಮವೋ ನೀನು
ವರವೊ, ಹೂ ಕವಿದ
ಗರಗಸವೊ ಬಿದಿಯಾ?
ನಿನ್ನ ಮೊಗವೆಳೆಮೊಗ್ಗು
ಅತ್ತಲಿಂದೆರಡು
ಕಣ್ಣಿನಲಿ ಬಂದೆನ್ನ
ಸುತ್ತ ಬಳಸುತಿರೆ
ಬಂದಿ ನಾನಾದೆ,
ಸುಂದರಕೆ ಸೋತೆ.
ಮೊಗವ ಬಿಗಿದಿಹೆಯೇಕೆ
ದುಗುಡವಾಂತಿಹೆಯೇಕೆ!
ಚಿಗುರಿರದ ಗಿಡವೇನು,
ನಗದ ಚೆಲುವೇನು?
ಕುಸುಮದಿಂದ ವನ,
ಹಸಿತದಿಂ ವದನ.
ವೇದಿಕೆಯನಿಳಿದು ನಾಂ
ನಿನ್ನೆಡೆಗೆ ನಡೆದೆ.
ಕಾದಿದ್ದೆಯೇನೋ ನೀನ್
ಎನ್ನ ಬಳಿ ಸರಿದೆ.
ಆಗ ಋಣ ಸಂದು
ನಾಗಣ್ಗಳೊಂದು.
ಮುಗುಳು ಬಿರಿಯಿತು, ತುಟಿಯ
ಮುಗುಳು, ಕಣ್ಮುಗುಳು
ಜಗವೆಲ್ಲ ಬೆಳಕಾಯ್ತು
ಜಗ ಮರೆತೆಹೋಯ್ತು
ದೈವ್ಯವಾ ಯೋಗ
ಜೀವಸಂಯೋಗ.
ಭೂಲೋಕ ರಸವಷ್ಟೆ!
ಬಾಳ ಸವಿಯಷ್ಟೆ!
ಗಾಳಿ ಬೀಸುತೆ ತಂದ
ಮಾಲ್ಯದಷ್ಟೆ ಸುಖ.
ಮುಗಿಯಲಾ ಗಳಿಗೆ
ತಗುಲಿತುರಿಯೆದೆಗೆ.
ನಸುನಗುವೆ, ಕುಡಿನೋಟ,
ನಿನಗದೇ ತೃಪ್ತಿ
ಬಿಸಿನೆನಸು, ಎದೆಹಸಿವು,
ಎನಗದೇ ಪ್ರಾಪ್ತಿ.
ಕಹಿಕಹಿಯ ಮಧುವೆ?
ಸಿಹಿಸಿಹಿಯ ವಿಷವೆ?
ಅಕ್ಷಿ ನಾಲ್ಕೊಂದಾಗಿ
ಮಾಡಿಸಿದ ದೈವಂ
ಮೆಚ್ಚು ಜೀವಗಳೆರಡ
ಕೂಡಿಸನದೇಕೆ?
ವಿಧಿಯೆದೆಯ ಕುಹಕ
ತ್ರಿದಿವದೊಳೆ ನರಕ.
No comments:
Post a Comment