Wednesday, 3 January 2024

ಮನುಷ್ಯ-ನದಿ - ಕೇತಕೀವನ - ಡಿವಿಜಿ

ಮನುಷ್ಯ :- 
ಓ ನದಿಯೆ, ನಿಲುಗಡೆಯ 
ಕಾಣದೋಡುವ ನದಿಯೆ, 
ಏನು ನಿನ್ನುದ್ಯೋಗವೇತಕೀ ವೇಗ? 
ಮಾನಿಸಂಗೊರೆಯೆಯಾ ನಿನ್ನದೇಂ ಯೋಗ? 
ಬದುಕಿನಲಿ ಸೊಗ ನಿನಗೆ 
ಮೊದಲೊಳೋ ಮುಗಿವಿನೊಳೊ? 
ಎತ್ತರದ ಬೆಟ್ಟದೊಳೊ 
ಬಿತ್ತರದ ಕಡಲಿನೊಳೊ, 
ನಡುವಣೆಸಕದೊಳೋ 
ಹುಡುಗಹುಚ್ಚಿನೊಳೋ? 
ಶಿಲೆಯರೆದು ನೆಲಕೊರೆದು ಪರಿದ ರಭಸವದೇನು? 
ಅಲೆಯುಡುಗಿ ಸೆಲೆಯುಡುಗಿ ಕಡಲುಗುವ ನಯವೇನು? 
ಪೆರ್ಮೆ ನಿನದೂರಿನೊಳೆ 
ಕಾರ್ಮಬ್ಬು ಗವಿಗಳೊಳೆ 
ಅಡವಿಗಳ ಪಾಳಿನೊಳೆ 
ಕಡಿದರ್ಬಿ ಬೀಳಿನೊಳೆ 
ಪೇಳ್‍ ನದಿಯೆ ನಿನ್ನ 
ಬಾಳ್‍ ಎಲ್ಲಿ ಚೆನ್ನ? 

ನದಿ :- 

ಮನುಜ, ಪೆರ್ಮೆಯ ತರ್ಕ- 
ಕೆನಗೆಲ್ಲಿ ಬಿಡುವು? 
ಸೃಷ್ಟಿಯೋಡುತಿರೆಂಬಳ್‍ 
ಅಷ್ಟೆ ಎನ್ನರಿವು. 
ಉನ್ನತಿಯ ಹಸದವನು 
ನಿಮ್ನದೆಡೆಗೊಯ್ವಾ
ಊಳಿಗದ ಪಾಡೆನದು. 

ಬಾಳು ಬೇರೇನು? 
ಗಿರಿಕುಹರ ಧರೆವಿಸರ ಶರನಿಧಿ ಗಭೀರ 
ಪರಿಪಾಟಿಯೊಳಗೆನ್ನ ಧರ್ಮಪ್ರಕಾರ 
ಧರ್ಮಪರಿಪೂರಣವೆ 
ಪೆರ್ಮೆಯೆಂದೆನೆಯಾ? 
ನಿರ್ಮಾಪಕನ ಮೆಚ್ಚೆ 
ಪೆರ್ಮೆಯೆಂದೆನೆಯಾ? 

ಮನುಷ್ಯ :- 

ಓ ನದಿಯೆ, ಊಳಿಗದೊ- 
ಳಾನಂದವಿರದೇಂ? 
ಕಾಣೆಯೇಂ ದಾರಿಯಲಿ 
ಕಾನನದ ಸೊಬಗ? 
ಕರೆಯವೇಂ ತೋಳ್‍ ನೀಡಿ 
ಮರ ನಿನ್ನ ಬೇಡಿ? 
ಬಳುಕವೇಂ ಕುಡಿಬಳ್ಳಿ 
ಒಲಿದು ನಿನ್ನಲ್ಲಿ? 

ಬಾಲೆವೊಲು ಕುಣಿಕುಣಿದು ಸುಳಿಸುಳಿದು ಪರಿದು 
ಲೀಲೆಗಳನಾಡುತಿಹೆ ನೆಗೆದು ಬೀಳ್ದೇಳ್ದು. 
ತನ್ನ ತಾಂ ಮರೆತಾಟವಾಡುವಣುಗನವೋಲ್‍ 
ನಿನ್ನ ನೀಂ ಚಿಂತಿಸದೆ ನಿಜಪಥವ ನಡೆವೆ. 
ಆನಂದಮೂರ್ತಿ ನೀನಾನಂದದಾನಿ, 
ನಾನೆಂದು ನಿನ್ನಂತೆ ಬಾಳ್ವೆನೋ ಮೌನಿ!

************************************

ನಿಲ್ಲದೆ ಮುಂದೋಡುತ್ತಿರುವ ನದಿಯನ್ನು ಕಂಡು, ಕವಿಯ ಮನದಲ್ಲಿ ಮೂಡಿದ ಭಾವಲಹರಿಯನ್ನು ನದಿಯೊಡನೆ  ಸಂವಾದಚಿತ್ರದಂತೆ ಡಿವಿಜಿಯವರು ಬಣ್ಣಿಸುತ್ತಾರೆ.

ಮನುಷ್ಯ :    
ಓ ನದಿಯೇ, ಒಂದಿನಿತು ನಿಲ್ಲದೆ ನಿರಂತರವಾಗಿ  ಹಿಂದೆ ನೋಡದೆ ಮುಂದೆ ಮುಂದೆ ಓಡುತ್ತಲೇ ಇರುವೆಲ್ಲ!   ಯಾರ ಕಣ್ಣಿಗೂ ನಿಲುಕದಂತೆ ಅದೇನು ಆವೇಶದಿಂದ ವೇಗವನ್ನು ಹೆಚ್ಚಿಸಿಕೊಂಡು ಓಡುತ್ತಿರುವೆ?  ನಿನ್ನ ಈ ರೀತಿಯ ಓಟದ ಉದ್ದೇಶವೇನಿರಬಹುದು? ಯಾವ ಕಾರ್ಯಸಾಧನೆಗಾಗಿ ಈ ನಿನ್ನ ನಿಲ್ಲದ ಆವೇಗ!?

ನಿನ್ನ ಓಟದ ಉದ್ದೇಶವೇನು? ಯಾವ ಕಾರ್ಯಸಾಧನೆಗಾಗಿ ಹೀಗೆ ಓಡುತ್ತಿರುವೆ ಈ ಮನುಷ್ಯನಿಗೆ ಹೇಳಬಾರದೇ!?
  
ಹೇ ನದಿಯೇ, ನಿನ್ನ  ಬಾಳು ಎಲ್ಲಿ ಚೆಲುವೆಂಬ ಕೌತುಕವು ಎನಗೆ!  ನಿಲ್ಲದೆ ಓಡುತ್ತಿರುವ ನಿನ್ನ ಬಾಳಿನಲ್ಲಿ ಓಟವೇ ಚೆಲುವೇ? ಎತ್ತರದ ಗಿರಿಬೆಟ್ಟಗಳೆಡೆಯಿಂದ ದುಡುದುಡನೆ ಅಬ್ಬರಿಸುತ್ತ ಕೆಳಗಿಳಿಹುವುದು ಸೊಗಸೇ!? ಬೆಟ್ಟದೆಡೆಯಿಂದ ಹರಿದೋಡೋಡಿ 
 ಸೇರುವ ವಿಶಾಲ ಗಂಭೀರವಾದ ಕಡಲಿನಲ್ಲಿ ನಿನ್ನ ಬಾಳುವೆಯು ಚಂದವೇ!?  ಅಥವಾ ಗಿರಿಶಿಖರಗಳಿಂದ ಕೆಳಗಿಳಿದು ಸಮುದ್ರ ಸೇರುವ‌ಮೊದಲು ನಡುವೆ ನಿನ್ನ  ಹುಡುಗುಹುಚ್ಚಿನ ಹರಿವಿನ‌ಕುಣಿತ ಹಾರಾಟಗಳಲ್ಲಿ ಚೆಂದವೇ!?

ಶಿಲೆಗಳನ್ನು ಬಂಡೆಗಳನ್ನು ಅರೆಯುತ್ತಾ ಕೊರೆಯುತ್ತಾ   ಮುಂದೆ ಸಾಗುವ ನಿನ್ನ ರಭಸದ ಸಾಹಸವೇ ಸೊಗಸೇ?  ಮುನ್ನುಗ್ಗುತ್ತಾ ಅಲೆಗಳನ್ನು ಕುಗ್ಗಿಸಿಕೊಂಡು,  ಹುರುಪು,ಉತ್ಸಾಹ, ಹಾರಾಟ ಸೆಡವುಗಳ ಗುರುತುಗಳನ್ನು ಅಳಿಸಿಕೊಂಡು ಕಡಲನ್ನು ಸೇರುವ ಸಡಗರವೇ ಚೆಲುವೇ!?

ನಿನ್ನ ಹಮ್ಮು ಬಿಮ್ಮು ಹಿರಿಮೆಗಳು ನೀನು ಓಡೋಡಿ ಬಂದ ಪರ್ವತದಿಂದ ನಿನಗೆ ಬಂತೇ!  ಓಡುತ್ತಿರುವಾಗ ಅಡವಿ ಗವಿಕಂದರಗಳಿಂದ ನೀನು ಪೆರ್ಚಿದ ಪೆರ್ಮೆಯನು ಒಡಮೂಡಿಸಿಕೊಂಡೆಯಾ? ಕಡಿದಾದ ಆಳಕೊಳ್ಳ ಗಳಲ್ಲಿ ಏಳುತ್ತ ಬೀಳುತ್ತಾ ನುಸುಳುತ್ತಾ ಈ ಅಬ್ಬರದ ಹಮ್ಮು ಬಿಮ್ಮುಗಳನ್ನು ಕಲಿತಿರುವೆಯಾ! ನಿನ್ನ ಬಾಳಿನ ಚೆಲುವಿಕೆಯ ರಹಸ್ಯವು ಎಲ್ಲಿಹುದು!? 

ನದಿ: 
ಕವಿಯ ಕಲ್ಪನೆಯ ಜಿಜ್ಞಾಸೆಗೆ ನದಿಯ ಉತ್ತರ ಇಂತಿರಬಹುದೆಂದು  ಕವಿಯ ಬಣ್ಣನೆ.
ಹುಲುಮಾನವಾ! ಹಮ್ಮುಬಿಮ್ಮು ಒಣತರ್ಕವನ್ನು ಮಾಡಲು ನನಗೆಲ್ಲಿದೆ ಅವಕಾಶ! ನನಗೆಲ್ಲಿದೆ ವಿರಾಮ! ಪ್ರಕೃತಿಯು ನನಗೆ ಓಡು ಎಂದು ಎನ್ನುತ್ತಿದ್ದಾಳೆ. ಸೃಷ್ಟಿಯ ಕರೆಗೆ ಓಗೊಟ್ಟು  ತಡಮಾಡದೆ, ವಿರಾಮವಿಲ್ಲದೆ ಆದೇಶವನ್ನು ಪಾಲಿಸುತ್ತಿದ್ದೇನೆ.  ನನ್ನ ಅರಿವು ಸೀಮಿತವಾದುದು.  ಆದೇಶವನ್ನು ಪಾಲಿಸುವುದಷ್ಟೇ ನನಗೆ ಗೊತ್ತು.

ಔನ್ನತ್ಯದ ಪ್ರಸಾದವನ್ನು ಕೆಳಗಿಳಿದು ಬಂದು, ತಗ್ಗಿನಲ್ಲಿರುವವರಿಗೆ ಸಮಾನವಾಗಿ ಹಂಚುವುದು ನನ್ನ  ಸೇವೆ. ಈ ಸೇವೆಯ ಧರ್ಮವಷ್ಟೇ ನನಗೆ ಗೊತ್ತು.

ಸೃಷ್ಟಿಯ ಆದೇಶವನ್ನು ಪಾಲಿಸುವುದು, ಮುಂದಕ್ಕೆ ಹೋಗುವುದೇ ನನ್ನ ಬಾಳುವೆ.ಅದಕ್ಕಿಂತ ಹೆಚ್ಚಿನದೇನಿದೆ!?ಗಿರಿಕಂದರಧರೆಗಳಲ್ಲಿ ವಿಸ್ತರಿಸುತ್ತಾ , ಗಂಭೀರವಾದ ಶರಧಿಯನ್ನು ಸೇರುವುದು  ನನ್ನ ಧರ್ಮ! ಧರ್ಮಪರಿಪಾಲನೆ ಧರ್ಮಪರಿಪೂರ್ಣತೆಯತ್ತ ಸಾಗುತ್ತೇನೆ.ಇದುವೇ ನನಗೆ ಹೆಮ್ಮೆ ಎಂದರೆ ತಪ್ಪಲ್ಲ. ಸೃಷ್ಟಿಕರ್ತನು ಮೆಚ್ಚುವಂತೆ ನಡೆದರೆ ಅದೇ ಹೆಮ್ಮೆಯಲ್ಲವೇ!? 

ಮನುಷ್ಯ: 

ಓ ನದಿಯೇ! ಸೇವೆಯಲ್ಲಿ ಆನಂದವಿದೆಯಲ್ಲ.   ನಿನ್ನ ಪಯಣದ ದಾರಿಯಲ್ಲಿ ಸೃಷ್ಟಿಯಸೊಬಗಾದ ಹಸಿರುಕಾನನದ ಸೌಂದರ್ಯ ವಿದೆಯಲ್ಲ. ಕಾನನದ ಸಿಬಗಿನಿಂದ ನಿನಗೆ ಆನಂದವಲ್ಲವೇ! ತರುಲತೆಗಳು, ತೋಳುಗಳನ್ನು ನೀಡಿ ಆಲಂಗಿಸಲು ನಿನ್ನನ್ನು ಕರೆಯುತ್ತ ಸ್ವಾಗತಿಸುತ್ತವೆ. ಕುಡಿ ಬಳ್ಳಿಗಳು ನಿನ್ನನ್ನು ಒಲಿಸಿಕೊಂಡು ‌ನಿನ್ನಬಳಿಸಾರಿ ನಾಚಿ ತಲೆತಗ್ಗಿಸಿ ನಾಚುತ್ತವೆ.
ಇದು ನಿನ್ನ ಸೌಭಾಗ್ಯವಲ್ಲವೇ!

ತರಳೆ ಬಾಲೆಯಂತೆ ನೀನು ಕುಣಿದಾಡುತ್ತಾ, ಸುಳಿಸುಳಿಯುತ್ತಾ  ಆಟವಾಡುತ್ತಾ  ಏಳುತ್ತಾ ಬೀಳುತ್ತಾ ಸುಳಿದಾಡುತ್ತಾ  ಮೈಮರೆತು ಲಕ್ಷ್ಯದೆಡೆಗೆ  ಓಡುತ್ತಿರುವೆ.  ನೀನು ಆನಂದದ ಮೂರ್ತಸ್ವರೂಪ!  ಸದಾ ಆನಂದಮಯಳಾದ ನೀನು ಆನಂದವನ್ನು ಹಂಚುತ್ತಾ ಮುನ್ನಡೆಯತ್ತ ಓಡುವವಳು! ನಾನೂ  ನಿನ್ನಂತೆ ಇರಬೇಕು. ಸೃಷ್ಟಿಯು ಆದೇಶಿಸಿದಂತೆ  ಧರ್ಮಪರಿಪಾಲನೆಯ ದಾರಿಯಲ್ಲಿ ಮುಂದೋಡಬೇಕೆಂದು  ಹಂಬಲಿಸುತ್ತೇನೆ.
ಭಾವಗ್ರಹಣ : ©✒ಕೊಕ್ಕಡ ವೆಂಕಟ್ರಮಣ ಭಟ್*

No comments:

Post a Comment