Monday, 20 November 2023

ಒಂದು ಕಾಗದ - ಕೇತಕೀವನ - ಡಿವಿಜಿ

ತಪ್ಪೆನ್ನದಿರಬಹುದು
ಒಪ್ಪಿಕೊಳ್ಳುವೆನು :
ನಿನ್ನ ಸಿಟ್ಟದರಿಂದ
ತಣ್ಣಗಾಗುವುದೆ?

ಆ ಮಹಾತಪ್ಪೇನು?
ಪ್ರೇಮದುಬ್ಬರವೆ?
ಅದಕೆ ಕಾರಣವೇನು
ಎದೆಕುದಿದ ಕಾವೆ?

ಬಿಸಿಲೇರಿ
ಹಸಿರೊಣಗಿ
ವಸುಧೆ ಕಂಗೆಡಲು
ಗಗನ ಮಳೆಗರೆಯದಿರೆ
ಜಗಮುಳಿಯದಿಹುದೆ?
ಹಸಿವೇರಿ
ಬಸವಳಿದು
ಹಸುಳೆಯಳುತಿರಲು
ತಾಯಿ ಪಾಲೆರೆಯದಿರೆ
ಬಾಯ ಮುಚ್ಚುವುದೆ?

ಪ್ರೀತಿಯೇಂ ದುಷ್ಕೃತಿಯೆ?
ತಾತ್ಸಾರವೊಪ್ಪೆ?
ಆತುರತೆಯಪಕೃತಿಯೆ?
ಉತ್ಸಾಹ ತಪ್ಪೆ?

ತಪ್ಪದೇನಾಗಿರಲಿ,
ಕ್ಷಮೆಯ ಬೇಡಿದೊಡೆ
ದರ್ಪವನೆ ಕಾರುತ್ತ
ದುಮಗುಟ್ಟುತಿಹುದು.

ದೋಷವನೆ ನೆನೆನೆನೆದು
ರೋಷ ಚಿಮ್ಮುವುದು-
ತಪ್ಪು ಅದುಮಲ್ಲವೋ?
ಮಮತೆಗದು ಸರಿಯೋ?

ದಯೆಯ ಯಾಚಿಸಿದವಗೆ
ನಯ ತೋರೆಯೇಕೆ?
ಮನ್ನಣೆಯು ಸಲುವ ಕಡೆ
ಕಣ್ಣು ಕಿಡಿಯೇಕೆ?
ನಗುನುಡಿಯ ನುಡಿವ ಕಡೆ
ಮೊಗ ಖಡ್ಗವೇಕೆ?

ಇಬ್ಬರೊಂದಾದ ಕಡೆ
ಹುಬ್ಬುಗಂಟೇಕೆ?

ಮರೆತೆ, ನೀನೆಲ್ಲ ಹಳೆಯೊಲುಮೆಗಳ ಮರೆತೆ;
ಒರುವರೊರುವರನರಸಿ ಬಳಸಿದುದ ಮರೆತೆ;
ಹಿಂದಿನಾ ಸ್ನೇಹಬಂಧಗಳ ನೀಂ ಮರೆತೆ;
ಅಂದು ನಾವಾಡಿದಾಟಗಳೆಲ್ಲ ಮರೆತೆ;
ಆ ಮೋಹಲೀಲೆಯೇನಾ ಕೇಳಿಯೇನು!
ಆ ಮೈಯ ಮರಸಿದ್ದ ಹೊಂಗನಸದೇನು!
ಆ ಸರಸವೀಕ್ಷೆಯೇನಾ ಹಸಿತವೇನು!
ಮೀಸಲೊಬ್ಬರಿಗೊಬ್ಬರೆನುತಿದ್ದುದೇನು!

ಆ ಅಗಲಿಕೆಗಳೇನು! ಆ ಆಪ್ತವೇನು!
ಆ ಅಂಕಿತಗಳೇನು! ಆ ಹಂಬಲೇನು!
ಮರಳಿ ನಾಂ ಸೇರ್ದಂದು ಸಂಭ್ರಮವದೇನು!
ಎರಡೊಡಲು ಒಂದು ಬಾಳೆಂದ ಕಥೆಯೇನು!
ಮರೆತೆ ನೀನಾ ಮೋಹದನುಭವವನೆಲ್ಲ;
ಮರೆತೆ ನೀನಾ ಅಮೃತಘಳಿಗೆಗಳನೆಲ್ಲ;
ಸರಿಪಾಲು ಪಡೆದು ಸುಖಸಾಹಸದಿ ನಾವು
ಬೆರೆತಿದ್ದುದನು ಮರೆವುದಲ್ಲವೋ ತಪ್ಪು?
ಬಹುಕಾಲ ಬೆಳಸಿದಾ ಪ್ರೇಮವಲ್ಲಿಯನು
ಕಹಿಮನದೆ ನೀಂ ಕಡಿವುದಲ್ಲವೋ ತಪ್ಪು?

ತಪ್ಪೆನ್ನದಿರಲಿ
ಒಪ್ಪು ನಿನದಿರಲಿ
ಮರುಗಿ ಬಂದವನ
ತೊರೆಯದಿರು ಸಖನ.

ಚೆಲುವ ನಿನಗಿತ್ತವನು,
ಕಳೆಯನಿತ್ತವನು,
ಒಳ್ತನವನಿತ್ತವನು,
ಗೆಲವನಿತ್ತವನು.

ಏಕೆ ಕೊಡನೆನಗಾಗಿ ನಿನಗೆ ಮೃದುಮನವ?
ಏಕೆ ತೋರಿಸನು ನಿನಗೆನ್ನೆದೆಯ ನೋವ?
ಪ್ರೇಮ ಕೊರಗುವುದು ಮಾರ್‍ಪ್ರೇಮ ದೊರೆಯದಿರೆ
ಭೂಮಿ ಸೊರಗುವುದು ದಿವ ಮಳೆಯ ಸುರಿಯದಿರೆ

ಚಂದಿರನ ಪಿಡಿಯೆ ಕಡಲೆದ್ದು ಕುಣಿಯುವುದು
ಸುಂದರತೆಯಿಂದೆನ್ನ ಹೃದಯ ಕೆರಳುವುದು.

ಕೆರಳುವುದು ತಪ್ಪೊ?
ಕೆರಳಿಪುದು ತಪ್ಪೊ?
ಚೆಲುವಿಂದ ಕೆರಳು
ಕೆರಳಿಂದ ನರಳು.

ರೂಪಕಾಂತಿಯ ಜೊತೆಗೆ
ಕೋಪವಿರಬೇಕೆ?
ರಮಣೀಯತೆಯ ನಡುವೆ
ಕ್ಷಮೆಯಿಲ್ಲವೇಕೆ?
ತಾಳು ತಾಳುಮೆಯ
ಕೇಳು ಕೆಳೆನುಡಿಯ.

ನೋಡು ಸೌಮ್ಯದಲಿ
ನಿನ್ನ ನೆನಪಿನಲಿ
ಹರಿಯುತಿಹುದಿಲ್ಲಿ ಸಂತಸದೊಂದು ಹೊನಲು

ನೋಡು ನೇಹದಲಿ
ಎನ್ನ ಹೃದಯದಲಿ
ಮೊರೆಯುತಿಹುದಿಲ್ಲಿ ಅನುರಾಗದಿಂಗಡಲು.

ನೀನೆನ್ನ ಬಾಳ್ಗೆಲ್ಲ ರಾಣಿಯಾಗಿರುವೆ
ಬಾಳ ಸೊಗಸೆನಿಸು
ನೀನೆನ್ನೆದೆಯ ಕಡಲ ವರುಣನಾಗಿರುವೆ
ಆಳು ನೀನೊಲಿದು.

ನೀನು ಬಿಸಿಯುಸಿರೆ-ತಳಮಳಗಳಲ್ಲಿ
ನೀನು ಸಿಡಿಲಿರಿಯೆ-ತೆರೆ ಮೊರೆತವಲ್ಲಿ
ನೀನು ನಗುತೊಲಿಯೆ-ಕುಣಿತ ಹಾಡಲ್ಲಿ
ನೀನೊಲಿದು ನಲಿಯೆ-ಶಾಂತಿ ಸುಖವಲ್ಲಿ.

ಎನ್ನ ಮನ ನಿನ್ನಡಿಗೆ ದಾಸನಾಗಿಹುದು
ಮನ್ನಿಸುತ ನೀನದನು ಧನ್ಯನಾಗಿಪುದು.

ಈ ಮಾತ ನಂಬು
ಅದೆ ಪ್ರೀತಿಯಿಂಬು
ಅದೆ ನೀತಿತುಂಬು.

******************************

ಒಂದು ಕಾಗದ
ಕೇತಕೀವನ - ಡಿ.ವಿ.ಜಿ.
~~~~~~~~~~
ಪ್ರೇಯಸಿಯ‌ ಮುನಿಸಿಂದ ಕಸಿವಿಸಿಗೊಂಡ ಪ್ರಿಯಕರನು, "ತಪ್ಪನ್ನು ಮನ್ನಿಸು" ಎಂದು  ಒಲವನ್ನು ಕಾಪಿಡಲು ಸಂತೈಸಿ ಇನಿಯೆಗೆ ಬರೆದ ಓಲೆ!
   ನಿನ್ನ ಮುನಿಸು  ತಣ್ಣಗಾಗುವುದಾದರೆ 'ತಪ್ಪು ನನ್ನದೇ' ಎಂದು ಒಪ್ಪಿಕೊಳ್ಳುತ್ತೇನೆ. 
      ಪ್ರೇಮದುಬ್ಬರದಲ್ಲಿ  ನಿನಗಾಗಿ ಹಂಬಲಿಸುತ್ತಿರುವ ನನ್ನೆದೆಯ ಕಾವೇ ತಪ್ಪೇ!?
  ಬಿಸಿಲೇರಿ ಹಸಿರೊಣಗಿದ ನೆಲದಂತೆ ಕಂಗೆಟ್ಟಿರುವೆನು. ಎನ್ನೆದೆಯ ಕಾವಿಗೆ ತಂಪನ್ನೆರೆವ ಮಳೆಹನಿಯ ಸಿಂಚನಕ್ಕಾಗಿ ಹಂಬಲಿಸುತ್ತಾ ಬಸವಳಿದಿರುವೆ. ಕಾದಿರುವ ಭೂಮಿಗೆ ಮಳೆಹನಿಗಳ ಸೇಚನವಿಲ್ಲದೊಡೆ ಲೋಕದ ಜನವೆಲ್ಲ ಪ್ರಕೃತಿಯ ಬಗೆಗೇ ಮುನಿಸಿಕೊಳ್ಳುವರಲ್ತೆ! 
 ಅಮ್ಮನೆದೆಹಾಲಿಗಾಗಿ ಹಂಬಲಿಸುವ ಹಸುಳೆಯಂತಾಗಿರುವೆನು. ಅಮ್ಮನು ಶಿಶುವನ್ನು ಎದೆಗಪ್ಪಿಕೊಳ್ಳುವವರೆಗೆ ಅಳುವನ್ನು ನಿಲ್ಲಿಸುವುದೇ!?
   ಪ್ರೀತಿ ಪ್ರೇಮವೆಂಬುದು  ತಪ್ಪಲ್ಲ ಎಂಬುದು ದಿಟ. ಮನದನ್ನೇ, ಆತುರತೆಯು ತಪ್ಪೋ! 
ಉತ್ಸಾಹದ ಹಂಬಲವು ತಪ್ಪೇ ಯೋಚಿಸಿ ನೋಡು! ತಪ್ಪು ಅದೇನಾದರೂ ಆಗಿರಲಿ. ಕ್ಷಮಿಸೆಂದು ಯಾಚಿಸಿದರೂ, ದುಮುಗುಡುತ್ತಿರುವುದು ತರವಲ್ಲ ಎಂಬೆ.
  ದೋಷವನ್ನೇ ಕಾಣುತ್ತಾ ಚಿಂತೆಯಲ್ಲೇ ಮುಳುಗಿ ರೋಷದ ಚಿಂಗಾರಿಗಳನ್ನುಗುಳುವುದು ತಪ್ಪಲ್ಲವೇ!? ನಿಜವಾದ ಮಮಕಾರದ ಪ್ರೀತಿಗಿದು ತರವೇ! ಯೋಚಿಸು! 
ದಯದಿಂದ ಒಲವಿನಕಟಾಕ್ಷವನು ಬೀರೆಂದು ಹಂಬಲಿಸುತ್ತಿದ್ದೇನೆ. ಆ ನಿನ್ನ  ನವಿರಾದ ಹಸನ್ಮುಖವದೆಲ್ಲಿ ಮರೆಯಾಯಿತು? 
ಕಂಗಳಲಿ ಎದುರಿಸಲಾರದ ಕಿಡಿಗಳೇಕೆ ಸುರಿಯುತ್ತವೆ! ಚೆಲುನಗುವಿರಬೇಕಾದ  ನಿನ್ನ ಮೊಗದಾವರೆಯಲ್ಲಿ ಕತ್ತಿಯಲಗನ್ನು ಕಾಣುವಷ್ಟು ಶಕ್ತಿ ನನಗಿಲ್ಲ.
ಪ್ರೇಮಸಿಂಚನದಿಂದ ಒಂದಾಗಬೇಕಿರುವ ಕಡೆಗಣ್ಣನೋಟವಿರಬೇಕಾದಲ್ಲಿ ಹುಬ್ಬುಗಂಟಿಕ್ಕುತ್ತಾ ನನ್ನನ್ನು ಇರಿಯಬೇಡ ಮನದನ್ನೆ! 
   ನಮ್ಮ  ಆ ದಿನಗಳ ಪ್ರೀತಿಯೊಲುಮೆಗಳನ್ನು ಅದೆಂತು ಮರೆಯಲಾದೀತು? 
ಅಂದಿನ ನಮ್ಮ ಸ್ನೇಹ ಸಂಬಂಧಗಳ ಬಂಧವನ್ನೆಂತು ಮರೆಯಲಿ!?ಅದೆಂತಹ ಮೋಹಲೀಲೆಗಳ ಆಟಗಳೇನು! ಮರೆತೆಯೇನು!? ಅದೆಂತಹ ಹೊಂಗನಸನ್ನು ಕಾಣುತ್ತಿದ್ದೆವು! ನೆನಪಿಸಿಕೋ.
ಪರಸ್ಪರ ಪ್ರಣಯಕೇಳಿಗಾಗಿ ಹಾತೊರೆವ ಕಟಾಕ್ಷಗಳಿಗಾಗಿ ಹಂಬಲಿಸುತ್ತಿದ್ದ ಆ ದಿನಗಳು ಮರೆತವೇನು! 
'ನಾನಿರುವದೇ ನಿನಗಾಗಿ' ಎಂಬ ಅಂದಿನ ಪಲುಕುಗಳ ಗುಂಗು ನನ್ನ ಕಿವಿಗಳಲ್ಲಿ ಈಗಲೂ ಗುಂಜನಗುಡುತ್ತಿದೆ.
ಒಂದರೆಗಳಿಗೆ ಬಿಟ್ಟಿರಲು ಆಗದ ಅಂದಿನ ದಿನಗಳಲ್ಲಿ ಬಳಿ ಸಾರ್ದಂದು ಅದೇನು ಸಂಭ್ರಮವಿತ್ತು, ನೆನಪಿಸಿಕೊಳ್ಳಲಾರೆಯಾ! 'ಒಡಲೆರಡು ಬಾಳೊಂದು' ಎಂದು ಜೀಕಾಡುತ್ತಿದ್ದೆವು. ನೆನಪಾಗಿರಬೇಕಲ್ಲ. ಆ ಅಮೃತಗಳಿಗೆಗಳನ್ನು ನೀನು ಮರೆತಿರಲು ಸಾಧ್ಯವಿಲ್ಲ.
ಸುಖದುಃಖಗಳನ್ನು ಸಮಪಾಲಾಗಿ ಹಂಚಿಕೊಂಡಿದ್ದ ಆ ದಿನಗಳನ್ನು ನೀನು ಮರೆತೆಯಾದರೆ ಅದು ತಪ್ಪಲ್ಲವೇ! 
ಬಹುದಿನಗಳಿಂದ ಜೋಪಾನವಾಗಿ ಪ್ರೀತಿಯ ಜೊನ್ನವನ್ನೇ ಎರೆದು, ಬೆಳೆಸಿದ ಪ್ರೇಮಲತೆಯನ್ನು ಕಾಪಾಡಿ ಕೊಂಡು ಹೂವರಳಿಸಬೇಕಾದ ನೀನೇ ಲತೆಯನ್ನು ಚಿವುಟಬಲ್ಲೆಯಾ!?  ಯೋಚಿಸಿನೋಡು.
  ತಪ್ಪು ನನ್ನದೆಂದೇ ಒಪ್ಪಿಕೊಳ್ಳೋಣ! 
ಮನ್ನಿಸೆಂದು ಬೊಗಸೆಯೊಡ್ಡಿ ಬಂದ ಈ ನಿನ್ನ ಸಖನನ್ನು ದೂರಸರಿಸದಿರು.
ಚೆಲುವನ್ನು ನೀಡಿದವನು. ಒಳಿತನ್ನು  ಉಣಿಸಿದವನು. ಕಳೆಯನ್ನೇರಿಸಿದವನಲ್ತೆ! 
ನನ್ನೆದೆಯ ನೋವನ್ನು ಅರಿತು ಮೆದುಮನಸ್ಸಿನವಳಾಗು! ಪ್ರೇಮನಿವೇದನೆಗೆ ಪೂರಕವಾದ ಸ್ಪಂದನವಿಲ್ಲದೆ ಹೋದರೆ ಪ್ರೇಮಲತೆಯು ಸೊರಗುವುದು! ಆಗಸವು ಮಳೆಗರೆಯದಿದ್ದರೆ ನೆಲ ಒಣಗುವುದು.
ಹುಣ್ಣಿಮೆಯ ಬೆಳಕಿಂದ ಕಡಲತೆರೆಗಳು ಕುಣಿಯುತ್ತವೆ. ನಿನ್ನ ಮೊಗದಾವರೆಯಲಿ ಮಂದಹಾಸದ ಬೆಳಕಿನ ರೇಖೆಗಳಿಂದ  ನನ್ನ ಎದೆತುಂಬಿ ನಿನಗಾಗಿ  ಅರಳುವುದು. ಅರಳುವುದು ತಪ್ಪೇ ! ಕೆರಳಿಸುವುದು ತಪ್ಪೇ ಎಂಬ ಪ್ರಶ್ನೆ ಬೇಡ! ನಗುನಗುತ್ತಾ  ನನ್ನ ಮನಸ್ಸನ್ನರಳಿಸು! 
 ಸುಂದರವಾದ ಈ ನಿನ್ನ ಮುಖಕ್ಕೆ ಕೋಪವು ಆಭರಣವಲ್ಲ. ಸುಂದರವಾದ ಈ ಮೊಗದಾವರೆಯಲ್ಲಿ ಕ್ಷಮಾಪೂರ್ಣ ಕಟಾಕ್ಷವನ್ನು ಕಾಣಬಯಸುತ್ತಿರುವೆ.ತಾಳ್ಮೆಯಿಂದ ಸ್ನೇಹಸಿಂಚನದ ಮಾತುಗಳನ್ನು ಆಲಿಸು. ಸೌಮ್ಯವಾದ ನೋಟದಿಂದ ನನ್ನನ್ನು ನೋಡು. ಸಂತಸವಾದ ಹೊನಲು ಹರಿಯುತ್ತಿರುವುದನ್ನು ನೀನು ಮರೆಯಲಾರೆ.
ಪ್ರೀತಿ ಸ್ನೇಹರಸದ ಆರ್ದ್ರತೆಯಿಂದ ನನ್ನೆಡೆಗೆ ನೋಡು.
ನನ್ನ ಹೃದಯದಲ್ಲಿ ಅನುರಾಗದ ಇಂಗಡಲ ತೊರೆಗಳು ಮೊರೆಯುತ್ತಿರುವುದನ್ನು ಕೇಳುವೆ.
ಭಾವಾನುವಾದ :
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Friday, 17 November 2023

ನರ-ಹರಿ - ಕೇತಕೀವನ - ಡಿವಿಜಿ

ನರಗೆರಡು ವರಗಳನು 
ಕರುಣಿಸಿಹನೀಶ್ವರನು; 
ಕೊರಗುವೆದೆಯೊಂದು, 
ಒರೆವ ಬಾಯೊಂದು- 
ಎಡೆಬಿಡದ ಕೊರಗು, 
ಸುಡುನುಡಿಯ ಬುರುಗು. 

ಈ ವರಗಳುಳಿದಾವ 
ಜೀವಿಗಣಕುಮಭಾವ. 
ಎಂಥ ವರದ ಹೊರೆ! 
ಅಂತದಾಗದಿರೆ, 
ಹರಿಯ ಹೆಸರನದಾರು 
ಧರೆಯೊಳೆತ್ತ್ಯಾರು? 
ನರನಾರ್ತಭಾಷೆ

**************

ಪರಮಕರುಣಾಳುವಾದ ಜಗದೀಶ್ವರನು ಮನುಷ್ಯನಿಗೆ ಅನನ್ಯವಾದ ಎರಡುವರಗಳನ್ನು ನೀಡಿರುವನು. ಕೊರಗುವ ಹೃದಯವನ್ನೂ ನೀಡಿದನು. ಜೊತೆಗೆ ಮಾತನಾಡುವ ನಾಲಿಗೆಯುಳ್ಳ ಬಾಯನ್ನೂ ನೀಡಿದನು. ಕೊರಗು ಎಂದರೆ ಚಿಂತೆ, ಚಿಂತನೆ, ಕೊರತೆಯಬಗೆಗೇ ಮನದಂಗಳವನ್ನು ಕೊರೆಯುವಂತೆ ದುಃಖಿಸುವುದು.

   ಶ್ರೀಹರಿಯು  ತನ್ನ ಸಂರಕ್ಷಣೆಗಾಗಿ ನೀಡಿದ ವರವನ್ನು ಅರ್ಥ ಮಾಡಿಕೊಳ್ಳುವಲ್ಲಿ  ಈ ನರನು ಸೋತವನಾಗಿ ವರವನ್ನು ಶಾಪವೋ ಎಂಬಂತೆ ಅವರಿವರೊಡನೆ ತನ್ನನ್ನು ಹೋಲಿಸಿಕೊಂಡು  'ಇಲ್ಲ ಇಲ್ಲ' ಎಂದು ತನ್ನ ಮನಸ್ಸನ್ನು ಇಲ್ಲದ ಸಂತೆಯೊಳಗೆ ತಳ್ಳಿ ಸದಾ ಚಿಂತೆಯಲ್ಲೇ ಮುಳುಗಿ ಕಾಲಹರಣಮಾಡುತ್ತಾನೆ. ಚಿಂತೆಯು  ಚಿತೆಗಿಂತ ಬಲುಘೋರ!  ಚಿಂತೆಯಕುಲುಮೆಯೊಳಗೆ ಬೇಯುತ್ತಿರುವ ಈ ನರನು 'ನರಹರಿ'ಯನ್ನು ಅರಿಯುವಲ್ಲಿ ಎಡವಿದವನಾಗಿ ದೇವನನ್ನು ಪ್ರಾರ್ಥಿಸುವ ಬದಲಾಗಿ    ತನ್ನ ನರನಾಡಿಗಳು ಹರಿದುಹೋಗುವಂತೆ ಭಗವಂತನ್ನೇ  ಸುಡುನುಡಿಗಳಿಂದ ನಿಂದಿಸತೊಡಗುತ್ತಾನೆ. ಬೇರೆಯ ಜೀವಿಗಳಿಗಿಲ್ಲದ ಅಮೂಲ್ಯವಾದ ಚಿಂತನೆಯಿಂದ ಸರಿಯಾದ ದಾರಿಯನ್ನು ಕಂಡುಕೊಳ್ಳುವುದನ್ನು ಮಾಡದೆ ಎಲ್ಲರನ್ನೂ ನಿಂದಿಸುತ್ತಾನೆ.  ಪ್ರಾಣ ಸಂಕಟದ ಕ್ಷಣಗಳಲ್ಲೂ ಶ್ರೀಹರಿಯ ಧ್ಯಾನವನ್ನೇ ಉಸಿರಾಗುಳ್ಳ  ಭಕ್ತ ಪ್ರಹಲ್ಲಾದನನ್ನು ಮತ್ತು ಅವನನ್ನು ಸಂರಕ್ಷಿಸಿದ ಶ್ರೀವಿಷ್ಣುವಿನ ಮಹಿಮೆಯನ್ನರಿಯದೆ, ದೇವನನ್ನು ಮತ್ತು ಭಕ್ತನನ್ನು ಇಬ್ಬರನ್ನೂ ನಿಂದಿಸುತ್ತಾ ಅಮೂಲ್ಯವಾದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾನೆ. ಕಾಮಕ್ರೋಧಗಳನ್ನು ಬಿಡದೆ ಕೊರಗಿನಿಂದ ಸುಡುನುಡಿಯ ಬುರುಗಿನಿಂದ ತನ್ನ  ಜೀವನಸೌಧಕ್ಕೆ ತಾನೇ ಕೊಳ್ಳಿಯಿಡುವುದನ್ನು ಅರಿಯದೆ ಕಂಗೆಡುತ್ತಿದ್ದಾನೆ‌.

   ಬೇರಾವ ಜೀವಿಗಳಿಗೂ ನೀಡದ ಅಮೂಲ್ಯವಾದ ವಿವೇಕ, ಚಿಂತನಶೀಲಬುದ್ಧಿ ಹಾಗೂ  ಮಾತನಾಡುವ ಅನನ್ಯ ಶಕ್ತಿಯನಾಲಿಗೆಯನ್ನು  ನಾರಾಯಣನು ನರನಿಗೆ ಕರುಣಿಸಿದ್ದಾನೆ. ಇನ್ನುಳಿದ ಚರಾಚರಗಳಿಗೆ ಈ ವರವನ್ನು ನರಹರಿಯು ಕರುಣಿಸಿಲ್ಲ.
ಆದರೆ ವರಗಳನ್ನೇ ಹೊರೆಯೆಂಬಂತೆ ಈ ಹುಲುಮಾನವನು ಹರಿಯನ್ನೇ ದೂಷಿಸುವಂತೆ ಬಡಬಡಿಸವನೇ! ನಿಂದಿಸುವನೇ?
 
   ದೇವನು ಕರುಣಿಸಿದ ವರಗಳನ್ನು ಅರಿತಿದ್ದರೆ   ಮನುಷ್ಯರು ಸಂಕಟದ ಸಮಯದಲ್ಲಾದರೂ ಭಗವಂತನನ್ನು ಭಕ್ತಿಯಿಂದ ಮೊರೆಯಿಟ್ಟು ಕೂಗಿಕರೆಯುತ್ತಿದ್ದನು!? 
ಕಡುಸಂಕಟದ ಸಮಯದಲ್ಲಿ ನರನು ನಾರಾಯಣನನ್ನು ಆರ್ತನಾದದಿಂದ ಕೂಗಿಕರೆಯುತ್ತಾನೆ. ಭಕ್ತಪ್ರಹಲ್ಲಾದ, ದ್ರೌಪದಿ, ಮೊಸಳೆಯ ಹಲ್ಲುಗಳಲ್ಲಿ ಬಂದಿಯಾದ ಗಜೇಂದ್ರನಂತೆ ಸಂಕಟದ ಕ್ಷಣಗಳಲ್ಲದರೂ ಏಕೋಭಕ್ತಿಯಿಂದ ಕೂಗಿಕರೆಯುವ ನರನ್ನು ನರಹರಿಯು ಕೈವಿಡಿದು ಸಂರಕ್ಷಿಸುತ್ತಾನೆ. 

 ಕೊರಗದೆ ನಾರಾಯಣನನ್ನು ನಿರಂತರ ಧ್ಯಾನಿಸೋಣ! 
ಚಿಂತೆ ಬೇಡ, ಚಿಂತನೆಯಿರಲಿ! ಚಿಂತನೆಯ ಬೆಳಕಿನಲ್ಲಿ  ನಾಲಿಗೆಯ ಮಾತುಗಳು ಬೆಳಗುತ್ತಿರಲಿ ಎಂಬುದು ಡಿ.ವಿ.ಜಿ.ಯವರ ಆಶಯ
ಭಾವಾನುವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Thursday, 16 November 2023

ದೂರು - ಕೇತಕೀವನ - ಡಿವಿಜಿ

ದೂರು - ಕೇತಕೀವನ - ಡಿವಿಜಿ

ನೂರಾರು ದೂರುಗಳ ಹೇಳಿದರು ನಿನಗವರು, 
ಸಲಸಲವು ಹಳಿದರೆನ್ನ, 
ಎನ್ನ ಜೀವದ ನೋವದೇನೆಂದು ತಿಳಿಯದರು; 
ಅವರ ನುಡಿ ನಿನಗೆ ಚೆನ್ನ. 

ನೀನವರ ಕರುಬುಮಾತನು ಕೇಳಿ ಕೆರಳಿರುವೆ 
ದಿಟವನರಸದೆಯೆ ಮುಳಿದು; 
ಕಟ್ಟುಕತೆ ನಿಟ್ಟುಸಿರುಗಳಿಗೆ ಮರುಳಾಗಿರುವೆ 
ಎನ್ನೆದೆಯ ನಿಜವ ಮರೆತು. 

ಅವರ ಕಣ್ಗಳವಡದ ತಪ್ಪೆನ್ನೊಳೊಂದಿಹುದು 
ಈಯೆದೆಯೊಳಾಳವಾಗಿ; 
ಆ ತಪ್ಪಿನಿಂದೆನ್ನ ಬಾಳೆಲ್ಲ ನೊಂದಿಹುದು; 
ಆ ಹಂಬಲೊಲುಮೆಗಾಗಿ.

Wednesday, 15 November 2023

ಪ್ರೀತಿ - ಕೇತಕೀವನ - ಡಿವಿಜಿ

ಮುಗಿಲು ಮುಗಿಲನರಸಿ ಸಾರ- 
ಲೊಗೆವುದೊಂದು ಮಿಂಚಿನೋಜೆ 
ಅದನು ಮೀರ್ದ ಮಿಂಚನಿಳೆಯೊ-
ಳರಿತರಿಲ್ಲವೇಂ? 
ಎದೆಯ ಕೊರೆವ 
ಮಿನುಗುಲತೆಯ ಮರೆಯಲಪ್ಪುದೇಂ? 

ನಯನಯುಗಳ ಯುಗದೊಳೊಂದ 
ಬಯಸುತೊಂದು ಸಾರಿದಂದು 
ಹೊಳೆವ ಜೀವಮಿಂಚು ಜನವ 
ಕೆಣಕುತಿರುವುದು; 
ಸುಳಿವ ನಗೆಯ ಹೊಳಪು 
ಜಗವ ಕುಣಿಸುತಿರುವುದು.

Tuesday, 14 November 2023

ಮೋಹಿನಿಗೆ - ಕೇತಕೀವನ - ಡಿವಿಜಿ

ಕಸವಾಯಿತೆನ್ನೊಲುಮೆ, ಕಾಲ ಧೂಳೆನ್ನ ಬಾಳ್‍, 
ಪರಿಹಾಸಕೀಡಾಯಿತೆನ್ನ ತಪನೆ. 

ಇನ್ನುಮೆಲೆ ಮೋಹಿನಿಯೆ ನಿನ್ನ ಕಂಗಳ 
ಹೊಳಪ ಕಂಡೆನ್ನ ಕಂಗಳರಳವುವದೇಕೆ? 
ಇನ್ನುಮಾ ನಿನ್ನ ನಗುದನಿಯ ಕೇಳಿದೊಡೆನ್ನ 
ಹೃದಯವೆನ್ನನೆ ಮರೆತು ಕುಣಿವುದೇಕೆ? 
ಇನ್ನುಮೆನ್ನಯ ಜೀವ ನಿನ್ನ ಜೀವಕೆ ಜೋಡಿ 
ತಾನೆನುತೆ ನಿನ್ನ ಬಳಿ ಸುಳಿವುದೇಕೆ? 

ಅಹ, ಏಂ ಮಾಹೆಯೋ ಪಿಡಿದೆನ್ನನೆಳೆಯುತಿಹುದು; 
ಒಂದಾತ್ಮವೆಂತೊ ಮತ್ತೊಂದಕ್ಕೆ ಗಾಳವಹುದು; 
ಈ ಜಗದ ಕಣ್ಣಮುಚ್ಚಾಲೆಯಾಟದಲಿ, ಮಗುವೆ, 
ಅರಸಿ ಬಂದೊಡನಾಡಿಯೊಳು ನಿನಗೆ ಮುನಿಸು ತರವೆ?

Monday, 13 November 2023

ಅಳು - ಕೇತಕೀವನ - ಡಿವಿಜಿ

ಮಧುವಿಹುದೇಂ ಕಂಬನಿಯೊಳ್‍ । 
ವಿಧಿ ಪೇಳ್‍ ಅಂತಲ್ಲದಿರ್ದೊಡೆನ್ನೊಡಲಿಂದಂ ॥ 
ರುಧಿರೆವ ನೀಡುವೆನೀಂಟಲ್‍ । 
ಬದುಕನೆ ನೀಂ ಬಗಿಯಲುಗುವ ನೀರುಪ್ಪಲ್ತೇಂ ॥

ನರಜೀವನ ಪರಿಪಾಕದ । 
ಮರುಮಂ ಬಾಷ್ಪೋಷ್ಣಮ್‍ ಅರಿಯೆ ಹಸಿತಮದಲ್ಲಂ ॥ 
ಕರಗಿಪುದೆದೆಯಂ ಕಣ್ಣೀರ್‍ । 
ಹರಣಕೆ ಪುಟವಿಡಿಸಲಂತು ನಗುವಿಂದಹುದೇಂ ॥ 

ಮರುಳಂ ಕೃತ್ರಿಮಿ ಗಾಂಪಂ । 
ಗರುವಿತನಣುಗಂ ವಿದೂಷಕಂ ನಗುವರಿವರ್‍ ॥ 
ಅರಿವರೆ ಬಾಳೊಳಗನವರ್‍ । 
ಪಿರಿಯೆದೆಯೊಳಗವಿಯಿನಲ್ತೆ ಕಣ್ಪೊನಲೊಗೆಗುಂ ॥

ರಘುವರಕಥಾಪ್ರವಾಹಮ- । 
ದೊಗೆದುದು ವಾಲ್ಮೀಕಿಕವಿಯ ಕರುಣಾಶ್ರುವಿನಿಂ ॥ 
ಜಗದಚ್ಚರಿ ತಾಜ್‍ ಬೆಳ್ಸರಿ । 
ನಗುವಿನ ಕಿಲಕಿಲವೆ? ಬಾಷ್ಪಬಿಂದುವದಲ್ತೇಂ ॥ 

ಪ್ರೀತಿಯ ನಿದಾಘ ಮುಖವಳು । 
ಸೇತುವದಳಲಿಂದೆ ನಮ್ಮನುಪಶಮಕೊಯ್ಯಲ್‍ ॥ 
ನೀತಿನದೀ ಸ್ರವಭುವಿಯದು । 
ಯಾತನೆಯರಿಯದನದೆಂತು ಶೋಧಿತನಕ್ಕುಂ ॥

Sunday, 12 November 2023

ನಗು - ಕೇತಕೀವನ - ಡಿವಿಜಿ

ದೆಸೆದೆಸೆಯಿಂ ಸಂಸಾರದ । 
ಬೆಸನಂಗಳ ಮೋಡದೋಳಿ-ಬಾಳಿನ ಬಾನಂ ॥ 
ಮುಸಿಕಿರಲಾ ಕತ್ತಲೆಯೊಳ್‍ । 
ಹಸಿತದ ಮಿನ್‍ಮಿನುಗಲಾಗ ಪಥ ಸುಳುವಲ್ತೆ ॥ 

ಪರಮ ಬ್ರಹ್ಮಸ್ಫುರಣಂ । 
ಸುರನಗರಾಮೋದ ಕಲಕಲ ಪ್ರತಿಕಲನಂ ॥ 
ಸರಲಹೃದಮೃತಸ್ರವಣಂ । 
ನರನಾರೀತರುಲತಾ ಪ್ರಸೂನಂ ಹಸನಂ ॥ 

ಭೀರು ನಿರುದ್ಯಮಿ ಮತ್ಸರಿ । 
ನೈರಾಶಿಗನಶುಭಿ ಕೃಪಣ ತಾಮಿವರಳುವರ್‍ ॥ 
ಪೌರುಷ ವಿವೇಕಶೀಲಂ । 
ಸ್ಮೇರಾಸ್ಯದೆ ಬಾಳ ಹೊರೆಯ ಲಘುತರವೆನಿಪನ್‍ ॥

ವನಧಿಯ ಲಂಘಿಪ ಮುನ್ನಾ । 
ಹನುಮಂತಂ ನಕ್ಕನಲ್ತೆ ಗೋಳಾಡಿದನೇಂ? ॥ 
ಮುನಿದಾ ಭಾಮೆಗಮಳುವ- । 
ರ್ಜುನಗಂ ಧೃತಿ ಕೃಷ್ಣಮಂದಹಾಸದಿನಲ್ತೇಂ ॥ 

ಪ್ರೀತಿಯಿನರಲ್ದ ನಗುಗಣ್‍ । 
ಸೇತುವದದರಿಂದೆ ನಮ್ಮನುಚ್ಛ್ರಯಕೊಯ್ಯಲ್‍ ॥ 
ಭೀತಿಯೊಳದೆ ರಕ್ಷಾಮಣಿ । 
ಸೀತೆಯುಮಾ ಕಪಿಯ ಸಾಸದಿಂ ನಸುನಕ್ಕಳ್‍ ॥