Monday, 15 January 2024

ಭಾಗ 9 - ಸುಂದರಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


*ಭಾಗ 9 - ಸುಂದರಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)*

ಶ್ರೀರಾಮಾಯಣಮೇರುರ್ಹಿ ಧರ್ಮರತ್ನೌಘಸುಂದರಃ ।
ಸುಂದರೇ ಸುಂದರಸ್ಸೊಽಯಮಂಜನಾನಂದನೋತ್ಸವಃ ॥

ಸಂದರ್ಭ ಸೌಂದರ್ಯ

ಸುಂದರಕಾಂಡವು ಕಥಾಸಂದರ್ಭದಿಂದ ಸುಂದರ.

ಪರಮಸುಂದರರಾದ ರಾಮಸೀತೆಯರ ವಿಯೋಗದುಃಖದಲ್ಲಿದ್ದಾಗ ಪರಸ್ಪರ ಪ್ರಿಯವಾರ್ತಾಸಂಧಾನದಿಂದ ಅವರಿಗೆ ಮಾನಸಿಕ ಸಮಾಗಮವಾದದ್ದು ಇಲ್ಲಿಯ ಕಥೆ. ಆ ಸುಂದರಸಂಧಾನಕ್ಕೆ ಸಾಧನಭೂತನಾದವನು ಆಂಜನೇಯಸ್ವಾಮಿ. ಆತನ ಸೌಂದರ್ಯದೌತ್ಯವೂ ದೌತ್ಯಸೌಂದರ್ಯವೂ ಇಲ್ಲಿಯ ವಸ್ತು.

ಸೌಂದರ್ಯವು ಒಂದು ರುಚಿಶಕ್ತಿ. ಒಂದಾನೊಂದು ವಸ್ತುವನ್ನು ಅಥವಾ ಸಂಗತಿಯನ್ನು ನಾವು ಕಂಡಾಗ ಅಥವಾ ನೆನಸಿಕೊಂಡಾಗ ಅದರ ಯಾವ ಸ್ವಾರಸ್ಯವು ನಮ್ಮ ಮನಸ್ಸನ್ನು ಮೃದುಮಾಡಿ ತನ್ನ ಕಡೆಗೆ ಸೆಳೆದುಕೊಂಡು ಸ್ವಾಧೀನಮಾಡಿಕೊಳ್ಳುತ್ತದೆಯೋ–ಯಾವ ರಸಕಾಂತಿಯ ಕಾರಣದಿಂದ ನಮ್ಮ ಮನಸ್ಸು ಆ ಪದಾರ್ಥದಿಂದ ಹಿಂತಿರುಗದೆ ಅದರಲ್ಲಿ ತಾನು ಸೇರಿಕೊಳ್ಳಲಿಚ್ಛಿಸುತ್ತದೆಯೋ–ಆ ರುಚಿಗುಣವೇ ಅದರ ಸೌಂದರ್ಯ.

ನಾನಾ ಸೌಂದರ್ಯಗಳ ಸಮ್ಮೇಳನಸ್ಥಾನ ಸುಂದರಕಾಂಡ.

ರಾಮಾಯಣದಲ್ಲಿ ಗ್ರಂಥಿಸ್ಥಾನಗಳು ಮೂರು.

1. ಮೊದಲನೆಯದು ಅಯೋಧ್ಯಾಕಾಂಡದ್ದು. ರಾಮಾವತಾರ ಕಾಲದಿಂದ ಸಹಜವಾಗಿ ಸರಳವಾಗಿ ಸಾಗಿಬಂದ ಕಥಾತಂತುವಿಗೆ ಅಲ್ಲಿ ಕೈಕೇಯಿ ಕೈಹಾಕಿ ಗಂಟಿಕ್ಕಿ, ಅದು ನಿರೀಕ್ಷಿತವಾಗಿದ್ದಂತೆ ಸಾಗಗೊಡದೆ ಅದನ್ನು ಬೇರೆ ಕಡೆಗೆ ತಿರುಗಿಸುತ್ತಾಳೆ. ಈ ಘಟನೆ ಸುಂದರವಲ್ಲ; ಅಸುಂದರ, ವಿಷಾದಕರ.

2.ಎರಡನೆಯ ಗ್ರಂಥಿ ಅರಣ್ಯಕಾಂಡದ್ದು. ಇಲ್ಲಿ ಕಥಾತಂತುವು ನೈಜಕ್ರಮದಲ್ಲಿ ಸಾಗದಂತೆ ಅಡ್ಡಿಹಾಕಿ ಅದನ್ನು ಬೇರೆಕಡೆಗೆ ತಿರುಗಿಸಿದವರು ರಾವಣಾಸುರ. ಅವನು ಹಾಗೆ ಮಾಡದೆಹೋಗಿದ್ದಿದ್ದರೆ ಸೀತಾರಾಮರು ಹದಿನಾಲ್ಕು ವರ್ಷಗಳ ವನವಾಸವನ್ನು ನಿರೀಕ್ಷಿಸಿಕೊಂಡಿದ್ದಂತೆ ನಿರುಪಾಧಿಕವಾಗಿ ಮುಗಿಸಿ ಅಯೋದ್ಯೆಗೆ ಹಿಂತಿರುಗಬಹುದಾಗಿತ್ತು. ಅದು ತಪ್ಪಿಹೋಗುವಂತೆ ಆದದ್ದು ಸುಂದರವಲ್ಲ; ಅಸುಂದರ, ಅಮಂಗಲ.

3. ಮೂರನೆಯ ಗ್ರಂಥಿ ಸುಂದರಕಾಂಡದ್ದು. ಅನ್ಯೋನ್ಯವಿರಹಿತರಾಗಿ, ಅನ್ಯೋನ್ಯ ಚಿಂತಾಕ್ರಾಂತರಾಗಿ, ಅನ್ಯೋನ್ಯ ಅಜ್ಞಾತವಾಸಿಗಳಾಗಿದ್ದ ಸೀತಾರಾಮರಿಗೆ ಅನ್ಯೋನ್ಯ ಪ್ರಿಯವಾರ್ತೆಯಿಂದ ಮಾನಸಿಕ ಸಮಾಗಮವನ್ನುಂಟುಮಾಡಿ ಸಾಕ್ಷಾತ್ಸಮಾಗಮಕ್ಕೆ ದಾರಿತೋರಿದ ಮಹಾನುಭಾವ ಹನುಮಂತ. ಈ ಸಂಘಟನೆ ಪರಮಸುಂದರವಾದದ್ದು.

ಆಂಜನೇಯನಿಗಿದ್ದ ಕೆಲಸ ಸುಲಭವಾದದ್ದೆ? ಅದು ಅಸಾಧ್ಯವೆನಿಸುವ ಮಟ್ಟಿಗೆ ಕಷ್ಟವಾಗಿತ್ತು. ತನ್ನ ಕಾರ್ಯಕ್ಕೆ ಬಂದ ವಿಘ್ನಗಳಿಂದ ಆಂಜನೇಯನು ಎದೆಗುಂದಿ ಹಿಂತಿರುಗಿದ್ದಿದ್ದರೆ ರಾಮಲಕ್ಷ್ಮಣರ ಶೌರ್ಯಪ್ರತಾಪಗಳು ಸಾರ್ಥಕ ಪಡಲು ಅವಕಾಶ ಎಲ್ಲಿರುತ್ತಿತ್ತು? ಆಂಜನೇಯಮೂರ್ತಿಯ ಸ್ಥೈರ್ಯವಿಕ್ರಮಗಳಿಂದ ರಾಮಾವತಾರ ಕಾರ್ಯವು ಸಂಪೂರ್ಣವಾಗುವುದಾಯಿತು. ಲಂಕಾಪಟ್ಟಣದ ಕೋಟೆಯನ್ನು ಮೊದಲು ಭೇದಿಸಿದವನು ಹನುಮಂತ. ಯುದ್ಧಕಾಂಡದ ವಿಜಯಕ್ಕೆ ದಾರಿತೋರಿದ್ದು ಸುಂದರ ಕಾಂಡದಲ್ಲಿಯ ಸೌಂದರ್ಯ.

ಇದನ್ನು ಹನುಮತ್ಕಾಂಡವೆಂದೇ ಕರೆಯಬಹುದಾಗಿತ್ತಲ್ಲ!–ಎಂದರೆ ಅಲ್ಲ; ಅದಾಗಲಾರದು. ಏಕೆಂದರೆ ಅದು ಹನುಮಂತನ ಸ್ವಭಾವಕ್ಕೆ ಒಪ್ಪದು. ಆತ ತನ್ನ ಸ್ಥಾನ ಯಾವುದೆಂಬುದನ್ನು ತಾನೇ ಗೊತ್ತು ಮಾಡಿಕೊಂಡಿದ್ದವನು. ತನ್ನ ಸ್ವಾಮಿಯೊಡನೆ ತಾನು ಸಮಾನಸ್ಕಂಧನಾಗಿ ಕುಳ್ಳಿರಲು ಸಮ್ಮತಿಸಿಯಾನೆ? ಸ್ವಾಮಿಯ ಉನ್ನತಿಯ ಅಂಗೀಕಾರವೂ ತನ್ನ ನೈಚ್ಯದ ಅಂಗೀಕಾರವೂ ಆಂಜನೇಯನ ಅಂತರಂಗದ ಸೌಂದರ್ಯದ ನೈಜಾಂಶಗಳು. ಸ್ವಾಮಿಯ ಸ್ವಾಮಿತ್ವದ ಅಂಗೀಕಾರವೇ ದಾಸನಿಗೆ ದಾಸ್ಯದಿಂದ ಉದ್ದಾರಸಾಧನ.

ಒಂದು ಕಥೆಯುಂಟು. ಒಬ್ಬಾನೊಬ್ಬ ಮನುಷ್ಯ ಬಹುಕಾಲ ಹೊಟ್ಟೆನೋವಿನಿಂದ ನರಳುತ್ತಿದ್ದ. ಅವನಿಗೆ ಒಂದು ದಿನ ಒಬ್ಬ ವೈದ್ಯ ಕೊಟ್ಟ ಔಷಧದ ಪ್ರಭಾವದಿಂದ ಜಠರಶುದ್ಧಿಯಾಗಿ ನೋವಿಳಿಯಿತು. ಆಗ ಅವನು ಕೃತಜ್ಞತೆಯಿಂದ “ಉಸ್ಸಪ್ಪ! ರಾಮ ರಾಮ–ರಾಮ!” ಎಂದು ದೇವರನ್ನು ನೆನೆದ ಕೂಡಲೆ “ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್‍” –ಆಂಜನೇಯ ಅಲ್ಲಿ ಕಾಣಿಸಿಕೊಂಡು, ಆ ಮನುಷ್ಯನ ಕೆನ್ನೆಗೆ ಕೈ ಅಪ್ಪಳಿಸಿದ. ಆ ಮನುಷ್ಯನಿಗೆ ನೋವಾಗಲಿಲ್ಲ. ಹನುಮಂತನು ಆಶ್ಚರ್ಯಗೊಂಡು ಸಂದರ್ಭವೇನಿರಬಹುದೆಂದು ತಿಳಿಯಲು ರಾಮಸನ್ನಿಧಾನಕ್ಕೆ ಹೋದ. ಅಲ್ಲಿ ಸ್ವಾಮಿ ತನ್ನ ಕೆನ್ನೆಯ ಮೇಲೆ ಕೈಯಿಟ್ಟುಕೊಂಡು ಕುಳಿತಿದ್ದ.

ಹನುಮಂತ: ನನ್ನ ಸ್ವಾಮಿಗೆ ಏನಾಯಿತು? ಕೆನ್ನೆಯ ಮೇಲೆ ಗಾಯವೆ? ಹುಣ್ಣೆ?

ರಾಮ: ನೀನು ಕೊಟ್ಟ ಪೆಟ್ಟು.

ಹನುಮಂತ: ನಾನು ಸ್ವಾಮಿಯನ್ನು ಹೊಡೆದೆನೆ? ಅಂಥ ಪಾಪಿಯೆ?

ರಾಮ: ಈಗ ನೀನು ನನ್ನ ಹೆಸರು ನೆನೆದವನನ್ನು ಹೊಡೆಯಲಿಲ್ಲವೆ?

ಹನುಮಂತ: ಅಯ್ಯೋ ಅವನು ಅಶುದ್ಧ ಸ್ಥಳದಲ್ಲಿದ್ದಾಗ ನನ್ನ ಸ್ವಾಮಿಯ ಪವಿತ್ರನಾಮವನ್ನು ಉಚ್ಚರಿಸಬಹುದೆ?

ರಾಮ: ಆ ಹೆಸರು ಪವಿತ್ರವಾಗಿದ್ದರೆ ಅದು ಎಲ್ಲ ಅಶುದ್ಧಿಗಳನ್ನೂ ಶುದ್ಧಪಡಿಸಲಾರದೆ?

ಹನುಮಂತ: ಅಯ್ಯೋ ನಾನು ಕಪಿಯಲ್ಲವೆ? ಕಪಿಬುದ್ಧಿ ಆ ಕ್ಷಣ ಪ್ರಬಲಿಸಿತು.

ರಾಮನು ನಕ್ಕನಂತೆ. ಹನುಮಂತನು ಅದರಲ್ಲಿ ಸೇರಿಕೊಂಡನಂತೆ.

ಇದು ಹನುಮಂತನ ಭಕ್ತಿ ಎಷ್ಟು ಆಳವಾದದ್ದು, ಎಷ್ಟು ಗಾಢವಾದದ್ದು ಎಂದು ತೋರಿಸುತ್ತದೆ. ಇಂಥವನು, ಸುಂದರಕಾಂಡವನ್ನು ವಾಲ್ಮೀಕಿಗಳು ಹನುಮತ್ಕಾಂಡವೆಂದು ಕರೆದಿದ್ದರೆ ಅವರನ್ನು ಸುಮ್ಮನೆ ಬಿಡುತ್ತಿದ್ದನೆ? ಅದನ್ನು ಬಲ್ಲ ಜಾಗರೂಕರು ವಾಲ್ಮೀಕಿಮಹರ್ಷಿಗಳು. ಕಾವ್ಯದ ಈ ಭಾಗವನ್ನು ನಾಯಕಾಂಕಿತ ಮಾಡುವುದಕ್ಕಿಂತ ಸಂದರ್ಭಾಂಕಿತ ಮಾಡುವುದು ಲೇಸೆಂದು ಅವರಿಗನ್ನಿಸಿರಬೇಕು.

ವ್ಯಕ್ತಿ ಸೌಂದರ್ಯ

ಆದರೆ ಆಂಜನೇಯ ವ್ಯಕ್ತಿಸೌಂದರ್ಯವು ವಾಲ್ಮೀಕಿಗಳ ದೃಷ್ಟಿಯಲ್ಲಿರಲೇ ಇಲ್ಲವೆಂದು ನಾವು ವಾದಿಸಬೇಕಾದದ್ದಿಲ್ಲ. ವ್ಯಕ್ತಿಯು ಅವರ ಗಣನೆಯಲ್ಲಿ ಮುಖ್ಯವಾಗಲ್ಲದಿದ್ದರೂ ಗೌಣವಾಗಿ ಇದ್ದಿರಬಹುದು.

ಸೌಂದರ್ಯವು ದ್ವಿವಿಧವಷ್ಟೆ? ಬಹಿರಂಗದ್ದೊಂದು ಅಂತರಂಗದ್ದೊಂದು. ಆಂಜನೇಯನ ಬಹಿರಾಕಾರದಲ್ಲಿ ಅದು ಇರಲಿಲ್ಲವೆನ್ನಲಾಗದು.

ಕಾಂಚನಾದ್ರಿಕಮನೀಯವಿಗ್ರಹಮ್‍ ॥

–ಎಂದು ಆತನನ್ನು ವರ್ಣಿಸಿದ್ದಾರೆ. ಆತನು ಕಾಮರೂಪಿ; ತನ್ನಿಚ್ಛೆಯಂತೆ ಅಣುವಾಗಬಲ್ಲವನು, ಬೃಹತ್ತಾಗಬಲ್ಲವನು; ಸೌಮ್ಯತಾಳಬಲ್ಲವನು, ಘೋರತಾಳಬಲ್ಲವನು. ಅವನಿಗೆ ಸುಂದರಾಕಾರವು ದುರ್ಲಭವಾಗಿರಲಿಲ್ಲ.

ಆದರೆ “ಪುಂಸಾಂ ಮೋಹನರೂಪಾಯ” ಎನ್ನಿಸಿಕೊಂಡ ಶ್ರೀರಾಮನ ಪಕ್ಕದಲ್ಲಿ ಹನುಮಂತನ ರೂಪಾತಿಶಯದ ಪ್ರಶಂಸೆ ಯುಕ್ತವೆನಿಸದು.

ಹನುಮಂತನ ಬಲಪರಾಕ್ರಮಗಳ ವಿಷಯದಲ್ಲಿಯೂ ಪ್ರಶಂಸೆ ನ್ಯಾಯವಾದದ್ದೇ.

ಮನೋಜವಂ ಮಾರುತತುಲ್ಯವೇಗಮ್‍ ॥

ಈ ವೀರಸಂಪತ್ತು ಮಹತ್ತರವೇ ಆದರೂ ಅದಕ್ಕಿಂತ ಪ್ರಶಂಸನೀಯವಾದದ್ದು ಆಂಜನೇಯನ ಅಂತರಂಗಸಂಪತ್ತು:

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್‍ ॥

ಜಿತೇಂದ್ರಿಯತ್ವವೇ ಆತ್ಮಸಂಯಮ. ಆತ್ಮಸಂಯಮವೆಂದರೆ ತನ್ನನ್ನು ತಾನು ಹತೋಟಿಯಲ್ಲಿರಿಸಿಕೊಂಡಿರುವುದು; ತನ್ನ ಮನಸ್ಸನ್ನು ಸ್ವೇಚ್ಛೆಗೆ ಹೋಗದಂತೆ ಹದ್ದಿನಲ್ಲಿಡುವುದು. ಈ ಗುಣವು ಮಾರುತಿಯಲ್ಲಿ ಎರಡು ರೂಪಗಳಲ್ಲಿ ಫಲಿಸಿತು:

1. ಕರ್ತವ್ಯೈಕನಿಷ್ಠೆ;
2. ಯುಕ್ತಾಯುಕ್ತವಿವೇಕಕ್ಕೆ ಅವಶ್ಯವಾದ ಸಮಚಿತ್ತತೆ.

ಯಾರು ಇಂದ್ರಿಯಪರವಶನೋ ಅವನಿಗೆ ಚಿತ್ತೈಕಾಗ್ರತೆ ಸಾಧ್ಯವಾಗದು, ವಿಮರ್ಶನ ವಿಶದತೆಯಿಂದಲೂ ಸಾಧ್ಯವಾಗದು. ಈ ಎರಡೂ ಆಂಜನೇಯನ ಅಂತರಂಗಸಂಪತ್ತಿನ ಮುಖ್ಯಾಂಶಗಳು. ಇವೆರಡರ ಜೊತೆಗೆ ಸೇರಿದ್ದ ಮತ್ತೊಂದು ಮಹಾಗುಣವು ಔಚಿತ್ಯ ಪರಿಜ್ಞಾನ. ಇದು ಸಂದರ್ಭದ ಆಳವಾದ ವಿಮರ್ಶನೆಯಿಲ್ಲದೆ ಬರತಕ್ಕದ್ದಲ್ಲ. ಈ ಔಚಿತ್ಯ ವಿವೇಕವು ಆಂಜನೇಯಮೂರ್ತಿಯ ವಾಕ್ಪ್ರಕಾರದಲ್ಲಿಯೂ ಆಕಾರಭಂಗಿಯಲ್ಲಿಯೂ ಎಲ್ಲೆಡೆಯೂ ಎದ್ದು ಕಾಣುತ್ತದೆ. ಇದು ಭಾವಸೌಂದರ್ಯ.

ಅಂತಸ್ಸೌಂದರ್ಯ ಬಹಿಸ್ಸೌಂದರ್ಯಗಳು

ಸೌಂದರ್ಯಭೂಯಿಷ್ಠವಾದ ತನ್ನ ಕಾವ್ಯಪ್ರಪಂಚದಲ್ಲಿ ವಾಲ್ಮೀಕಿಯು ಸೌಂದರ್ಯದೌತ್ಯಕ್ಕಾಗಿ ಮನುಷ್ಯನನ್ನು ಬಿಟ್ಟು ಕಪಿಯನ್ನಾರಿಸಿಕೊಂಡದ್ದೇಕೆ? ಆತನಿಗೆ ಮನುಷ್ಯ ಜಾತಿಯಲ್ಲಿ ಅಷ್ಟು ಅಸಹನೆಯೆ? ಇದು ಸೋಜಿಗದ ಪ್ರಶ್ನೆ.

ಈಗ ಕಥಾಸಂದರ್ಭವನ್ನು ಜ್ಞಾಪಕಕ್ಕೆ ತಂದುಕೊಳ್ಳೋಣ.

ಇದು ಸೀತಾನ್ವೇಷಣದ ಪ್ರಕರಣ. ಆ ಅನ್ವೇಷಣೆ ನಾಲ್ಕು ದಿಕ್ಕುಗಳಲ್ಲಿಯೂ ನಡೆಯಬೇಕಾಗಿತ್ತು. ದಕ್ಷಿಣ ಪ್ರಾಂತದಲ್ಲಿ ಅನ್ವೇಷಣ ಮಾಡುವವರು ಸಮುದ್ರವನ್ನು ದಾಟಬೇಕಾದದ್ದು ಅನಿವಾರ್ಯವಾಗಿತ್ತು. ಹೀಗೆ ಅವಶ್ಯಕರ್ತವ್ಯವಾದ ಸಮುದ್ರಲಂಘನ ಕಾರ್ಯಕ್ಕೆ ಅರ್ಹವಾದ ಪ್ರಾಣಿ ಯಾವುದು? ಮನುಷ್ಯನಂತೂ ಅಲ್ಲ.

ಶ್ರೀರಾಮನು ಮಹಾವಿಷ್ಣುವಲ್ಲವೆ? ಆತನು ಆಂಜನೇಯನಿಗಿಂತ ಹೆಚ್ಚು ಪರಾಕ್ರಮಿಯಲ್ಲವೆ? ಆತನು ತಾನೇ ಸಾಗರೋಲ್ಲಂಘನ ಮಾಡಲು ಆಗುತ್ತಿರಲಿಲ್ಲವೆ?

ಇಂಥ ಪ್ರಶ್ನೆಗಳು ಸಂಪೂರ್ಣವಾಗಿ ಅಸಂಗತಗಳು. ಮಹಾವಿಷ್ಣುವು ರಾವಣಾಸುರನು ಹುಟ್ಟದಂತೆಯೇ ಮಾಡಬಹುದಾಗಿತ್ತು. ಸೀತೆ ಎಲ್ಲಿದ್ದಾಳೆಂದು ಆ ಸರ್ವಜ್ಞನು ಯಾವ ಅನ್ವೇಷಣೆಯೂ ಇಲ್ಲದೆಯೇ ಕಂಡುಕೊಳ್ಳಬಹುದಾಗಿತ್ತು. ಇಂತ ಬಹುದುಬಾರದುಗಳು ಇಲ್ಲಿ ಯುಕ್ತವಾಗಲಾರವು. ಇಲ್ಲಿಯದು ಒಂದು ಮಾನವಕಥಾಪ್ರಸಂಗ. ದೈವಿಕವನ್ನು ಕೂಡಿದಮಟ್ಟಿಗೂ ದೂರವಿಟ್ಟು ಮಾನವ ಸ್ವಭಾವವನ್ನು ಹೊರಕ್ಕೆ ತರಬೇಕೆಂಬುದು ಕವಿಯ ಆಶಯ. ಮಾನುಷ್ಯವೇ ಎಲ್ಲಿಯಾದರೂ ಕಾವ್ಯವಸ್ತು. ಕಾವ್ಯದಲ್ಲಿ ಮಾನುಷವು ಮುಖ್ಯ, ದೈವವು ಪ್ರಾಸಂಗಿಕ.

ಪ್ರಕೃತದಲ್ಲಿ ಮನುಷ್ಯನನ್ನು ಬಿಟ್ಟ ಮೇಲೆ ಸಮುದ್ರವನ್ನು ದಾಟಬಲ್ಲವು ಸಿಂಹ, ಗಜ, ವ್ಯಾಘ್ರ ಮೊದಲಾದ ಮೃಗಪ್ರಾಣಿಗಳಾಗಲಿ ಸರ್ಪ ಮೊದಲಾದ ಸರೀಸೃಪಗಳಾಗಲಿ ಅಲ್ಲ. ಶುಕಪಿಕಾದಿ ಪಕ್ಷಿಗಳೂ ಮಶಕಕೀಟಗಳೂ ಹಾರಬಲ್ಲವಾದರೂ ಅವುಗಳ ಸಂಚಾರ ಪ್ರದೇಶವು ಬಹು ಮಿತವಾದದ್ದು. ಮಹಾಸಮುದ್ರವನ್ನು ಹಾರುವ ಶಕ್ತಿ ಅವಕ್ಕೆ ಇಲ್ಲ. ಹೀಗೆ ಮನುಷ್ಯನಿಗೆ ತಿಳಿದಿರುವ ಪ್ರಾಣಿ ವರ್ಗದಲ್ಲಿ ಹಾರುವ ಸಾಮರ್ಥ್ಯಕ್ಕೇ ಪ್ರಸಿದ್ಧವಾದುದು ವಾನರವೊಂದೇ. ಆದದ್ದರಿಂದಲೇ ಅದಕ್ಕೆ ಪ್ಲವಗ, ಪ್ಲವಂಗ, ಪ್ಲವಂಗಮ ಇತ್ಯಾದಿ ಲಂಘನಸಾಮರ್ಥ್ಯಸೂಚಕಗಳಾದ ಹೆಸರುಗಳು. ಈ ಕಾರಣದಿಂದ ವಾಲ್ಮೀಕಿಗಳು ಸೃಷ್ಟಿಯಲ್ಲೆಲ್ಲ ವಾನರಜಾತಿಯನ್ನು ತಮ್ಮ ಸಂದರ್ಭಕ್ಕಾಗಿ ಆರಿಸಿಕೊಂಡಿರಬೇಕು.

ಹೀಗೆ ಕಥೆಗೆ ಕಪಿಪ್ರಸ್ತಾವವು ನಿರ್ಬಂಧವಾಗಿ ಒದಗಿಬಂದ ಬಳಿಕ ಅದನ್ನು ಒಂದು ಸುಂದರ ಪ್ರಕರಣಕ್ಕೆ ಜೋಡಿಸುವುದರಲ್ಲಿ ವಾಲ್ಮೀಕಿಗಳಿಗೆ ಅನೌಚಿತ್ಯದ ಶಂಕೆ ತೋರಿದ್ದಿರಬಹುದೆ? ಸಾಮಾನ್ಯಜನಕ್ಕೆ ಅಂಥ ಶಂಕೆ ತೋರುತ್ತದೆ. ಸೊಗಸಾದ ಔತಣದ ಊಟ ಬಡಿಸಲಿಕ್ಕೆ ಸೊಟ್ಟುಸೊಟ್ಟೂ ಕೊಳಕುಕೊಳಕೂ ಆದ ಪರಿಚಾರಕನೆ? ಪ್ರಣಯಪತ್ರವನ್ನು ಬರೆಯುವುದಕ್ಕೆ ಒರಟಾದ ಕರಡು ಕಾಗದವೆ? ನಳದಮಯಂತಿಯರಿಗೆ ಪರಸ್ಪರ ವಾರ್ತಾವಾಹಿಗಳು ಕೆಟ್ಟ ಕುರೂಪಿಗಳಲ್ಲ; ಸುಂದರವಾದ ಹಂಸೆಗಳು. ಕಪಿಯನ್ನು ನೋಡಿ ಸೀತಾದೇವಿ ಭಯಭ್ರಾಂತಳಾದಾಳೆಂದು ಶ್ರೀರಾಮನು ಶಂಕೆಪಡುವುದು ಅಸಹಜವಲ್ಲ. ಆಕೆ ಭಯಪಟ್ಟಳೆಂದು ರಾಮಾಯಣದಲ್ಲಿಯೇ ಇದೆ. ಹೀಗೆ ವಾನರಾಕಾರದ ಅನುಚಿತತೆಯು ವಾಲ್ಮೀಕಿಗಳ ಮನಸ್ಸಿಗೆ ತೋರಿರಬೇಕೆಂದು ನಾವು ಭಾವಿಸಿದರೂ ಆ ಶಂಕೆಯನ್ನು ವಾಲ್ಮೀಕಿಗಳು ಬದಿಗಿರಿಸುವಂತೆ ಮಾಡುವ ಇನ್ನೊಂದು ಆಲೋಚನೆಯೂ ಅವರ ಮನಸ್ಸಿನಲ್ಲಿ ಇದ್ದಿರಬೇಕೆಂದು ನಾವು ಭಾವಿಸಿಕೊಳ್ಳಬೇಕಾಗುತ್ತದೆ. ಆ ಆಲೋಚನೆಯ ಮುಖ್ಯಾಂಶಗಳು ಎರಡು:

ನರಜಾತಿಯ ಯಾವ ಗುಣಗಳನ್ನು ಉತ್ಕೃಷ್ಟವೆಂದು ಎಣಿಸಿಕೊಂಡಿದೆಯೋ ಆ ಗುಣಗಳು ವಾನರಜಾತಿಯಲ್ಲಿ ಅಸಂಭವವಲ್ಲ–ಎಂಬುದು ವಾಲ್ಮೀಕಿಗಳ ಮೊದಲನೆಯ ಆಲೋಚನೆ.

ರೂಪ ಉತ್ಕೃಷ್ಟವಲ್ಲದಿದ್ದರೂ ಗುಣ ಉತ್ಕೃಷ್ಟವಾಗಿರುವಲ್ಲಿ ನಾವು ಆ ಗುಣವನ್ನು ನೋಡಿದಷ್ಟೂ ಆ ಕುರೂಪವು ಅಳಿಸಿಹೋಗಿ ಇಲ್ಲವಾಗುತ್ತದೆ–ಎಂಬುದು ವಾಲ್ಮೀಕಿಗಳ ಎರಡನೆಯ ಅಲೋಚನೆ.

ಇದನ್ನೇ ಬೇರೆ ಮಾತುಗಳಲ್ಲಿ ಸ್ಪಷ್ಟಪಡಿಸಲು ಹೀಗೆ ಹೇಳಬಹುದು: ನೀತಿಯ ಗುಣವೂ ರೂಪದ ಗುಣವೂ ಒಂದಕ್ಕೊಂದು ಹೊಂದಿಕೊಳ್ಳದಿದ್ದರೂ ನೀತಿಗುಣವು ಪ್ರಬಲಿಸಿದಂತೆಲ್ಲ ರೂಪಗುಣದ ಗಣನೆ ಇಳಿದುಹೋಗುತ್ತದೆ. ರೂಪವನ್ನು ಮಾತ್ರ ನೋಡಿ ನೀತಿಯನ್ನು ನೋಡದೆ ಒಬ್ಬ ಹೆಣ್ಣನ್ನು ಮದುವೆ ಮಾಡಿಕೊಂಡವನಿಗೆ ಆ ರೂಪದ ಮೋಹ ಬಹುಕಾಲ ಉಳಿಯಲಾರದು. ಪೂರ್ವಕಾಲದಲ್ಲಿ ಗಂಡುಹೆಣ್ಣುಗಳು ಕಿರಿಯವರಾಗಿದ್ದಾಗಲೇ ಅವರ ತಾಯಿತಂದೆಯವರು ಅವರಿಗೆ ಮದುವೆಮಾಡಿಸುತ್ತಿದ್ದರು. ಆ ವಧೂವರರು ರೂಪಕ್ಕಾಗಿ ಮೋಹಬಿದ್ದವರೂ ಅಲ್ಲ, ನೀತಿವಿಚಾರ ನಡೆಸಿದವರೂ ಅಲ್ಲ. ಆದರೆ ಅವರು ಬೆಳೆದ ಮೇಲೆ ಆ ದಂಪತಿಗಳಲ್ಲಿ ರೂಪಸಂಪತ್ತಿಲ್ಲದಿದ್ದರೂ ಅವರಲ್ಲಿದ್ದ ನೀತಿಸಂಪತ್ತು ಅವರ ಅನ್ಯೋನ್ಯಪ್ರೇಮವನ್ನು ವೃದ್ಧಿಪಡಿಸುತ್ತಿತ್ತು.

ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಕಾಣಲು ಕಲಿತವನು ಜ್ಞಾನಿಯೆಂದು ಗೀತೆಯಲ್ಲಿ ಉಪದೇಶವಿದೆಯಷ್ಟೆ? ಅವರಂತೆಯೇ ಸೌಂದರ್ಯದಲ್ಲಿ ಅಸೌಂದರ್ಯವನ್ನೂ ಅಸೌಂದರ್ಯದಲ್ಲಿ ಸೌಂದರ್ಯವನ್ನೂ ಕಾಣುವ ಅಭ್ಯಾಸವು ಒಂದು ತತ್ತ್ವಜ್ಞಾನಸಾಧನ. ಹಾಗೆಯೇ ಅಂತಸ್ಸೌಂದರ್ಯಕ್ಕೂ ಬಹಿಸ್ಸೌಂದರ್ಯಕ್ಕೂ ಇರುವ ವ್ಯತ್ಯಾಸವನ್ನು ಲಕ್ಷಿಸದೆ ಎರಡನ್ನೂ ಒಂದಾಗಿ ಪರಿಗಣಿಸುವುದನ್ನು ಅಭ್ಯಾಸ ಮಾಡಬೇಕು. ಅದೇ ದ್ವಂದ್ವಾತೀತನ ಲಕ್ಷಣ. ಭಗವತ್ಸ್ವರೂಪವನ್ನು ವರ್ಣಿಸುವಲ್ಲಿ ಅನೇಕ ಅಸುಂದರಭಾವಗಳನ್ನು ಸೂಚಿಸುವುದರ ತಾತ್ಪರ್ಯ ಇದು. ಗಣಪತಿ ದೇವತೆಯು ಪ್ರಣವದ ಪ್ರತೀಕ. ಪ್ರಣವಾಕ್ಷರವು ಪರಬ್ರಹ್ಮಸಂಜ್ಞೆ. ಪರಬ್ರಹ್ಮವು ಆನಂದ ಸ್ವರೂಪಿ. ಆನಂದವು ಸೌಂದರ್ಯಬೀಜ. ಹೀಗೆ ಸಕಲ ಸೌಂದರ್ಯಮೂಲವಾದ ಬ್ರಹ್ಮ ವಸ್ತುವಿನ ಪ್ರತೀಕಕ್ಕೆ ಕೊಟ್ಟಿರುವ ಹೆಸರುಗಳೆಂಥವು?

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ ।
ಲಂಬೋದರಶ್ಚ ವಿಕಟಃ.... ॥

ಇದೇ ಬೋಧನೋಪಾಯವನ್ನು ರುದ್ರಾಧ್ಯಾಯ ಮೊದಲಾದ ಶ್ರುತಿ ಪ್ರಕರಣಗಳಲ್ಲಿಯೂ ಕಾಣಬಹುದು.

ಈ ತತ್ತ್ವದಿಂದ ನಾವು ಆಂಜನೇಯಾವತಾರದ ಮರ್ಮವನ್ನು ಗ್ರಹಿಸಬೇಕಾದದ್ದು. ಅಂತಸ್ಸೌಂದರ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಬಹುರಾಕೃತಿಯನ್ನು ಮರೆಯಬೇಕಾದದ್ದು.

ಒಂದು ಅನುಭವ

ಗುಣಸ್ವಾರಸ್ಯವೂ ರೂಪದೋಷವೂ ಎರಡೂ ಒಂದೆಡೆಯಿದ್ದಲ್ಲಿ ಆ ಗುಣವು ಆ ದೋಷವನ್ನು ಮರೆಯಿಸುತ್ತದೆಂಬುದಕ್ಕೆ ನಿದರ್ಶನವಾಗಿ ಶ್ರೀ ವಿ.ಎಸ್‍. ಶ್ರೀನಿವಾಸಶಾಸ್ತ್ರಿಗಳವರು ನನಗೆ ವರ್ಣಿಸಿದ ಒಂದು ಅನುಭವ ಜ್ಞಾಪಕಕ್ಕೆ ಬರುತ್ತದೆ. ಶಾಸ್ತ್ರಿಗಳವರು ಚಿಕ್ಕವಯಸ್ಸಿನಲ್ಲಿದ್ದಾಗ ತಂಜಾವೂರಿನಲ್ಲಿ ಒಬ್ಬ ದೊಡ್ಡ ಮನುಷ್ಯರ ಮನೆಯಲ್ಲಿ–ಬಹುಶಃ ಸರ್‍.ಟಿ. ಮುತ್ತುಸ್ವಾಮಿ ಅಯ್ಯರವರ ಮನೆಯಲ್ಲಿ–ಮದುವೆ ನಡೆಯಿತಂತೆ. ಆ ಕಾಲದಲ್ಲಿ ಮದುವೆ ನಾಲ್ಕೈದು ದಿವಸಗಳ ಉತ್ಸವ. ಅದರಲ್ಲೊಂದು ದಿವಸ ಸಭಾಪೂಜೆ. ಅಂದು ನರ್ತಕಿಯರಿಂದ ನರ್ತನ (ತಾಫಾ) ಮಾಡಿಸುವುದು ಆಗಿನ ವಾಡಿಕೆ. ಆ ದಿನದ ಸದಸ್ಸಿಗೆ ಶ್ರೀನಿವಾಸಶಾಸ್ತ್ರಿಗಳೂ ನಾಲ್ವರೈವರು ಸ್ನೇಹಿತರೂ ಹೋಗಿ ಕುಳಿತರು. ಗೊತ್ತಾಗಿದ್ದ ನರ್ತಕಿ ಅವರ ಕಣ್ಣಿಗೆ ಕಾಣಿಸಿದಳು. ಆಕೆ ಮುದುಕಿ. ರೂಪವತಿಯಲ್ಲ. ಆ ಯುವಕರು ತಮ್ಮತಮ್ಮೊಳಗೆ “ಈ ಮುದಿಕುಣಿತವನ್ನೇನು ನೋಡುವುದು! ನಡೀರಿ, ಹೋಗೋಣ” ಎಂದು ಮಾತನಾಡಿಕೊಂಡರಂತೆ. ಅದನ್ನು ಕೇಳಿದ ಹಿರಿಯರೊಬ್ಬರು “ಇನ್ನೂ ಸಭೆ ಪ್ರಾರಂಭವಾಗಿಲ್ಲ; ಈಗ ಎದ್ದುಹೋಗುವುದು ಮರ್ಯಾದೆಯಲ್ಲ, ಹತ್ತು ನಿಮಿಷವಾದಮೇಲೆ ಹೋಗಬಹುದು” –ಎಂದರಂತೆ. ಆದರಂತೆ ಯುವಕರು ಕುಳಿತಿದ್ದರು. ನಾಟ್ಯ ಪ್ರಾರಂಭವಾಯಿತು. ಆಕೆ ಸಭಾವಂದನೆ ಮಾಡಿ ಬಳಿಕ ರಾಧಾಕೃಷ್ಣಲೀಲೆಯಲ್ಲಿ ರಾಧೆ ತನ್ನ ಬಳಿಗೆ ಕೃಷ್ಣ ಇನ್ನೂ ಬರಲಿಲ್ಲವಲ್ಲ!–ಎಂದು ಕಳವಳಪಟ್ಟ ಹಾಡನ್ನು ಹಾಡಿಕೊಂಡು ಅಭಿನಯ ಹಿಡಿಯಲಾರಂಬಿಸಿದಳು. ಹತ್ತು ನಿಮಿಷ ಕಳೆಯಿತು. ಇಪ್ಪತ್ತು ನಿಮಿಷವಾಯಿತು. ನಮ್ಮ ಯುವಕರು ಕದಲಲಿಲ್ಲ. ಆ ಹಿರಿಯರು “ಈಗ ಬೇಕಾದರೆ ಹೋಗಬಹುದು” –ಎಂದರು. ಆಕೆಯ ನೇತ್ರಾಭಿನಯ, ಆಕೆಯ ನಾನಾ ಮುಖಭಾವಗಳು, ಆಕೆಯ ಅಂಗಾಂಗಭಂಗಿಗಳು ಹಾಗೆ ಚಿತ್ತಗ್ರಾಹಿಯಾಗಿದ್ದವು.

ಗುಣವು ಅತಿಶಯವಾದಾಗ ರೂಪದ ಲೋಪವು ಲೆಕ್ಕಕ್ಕಿಲ್ಲದೆ ಹೋಗುತ್ತದೆ, ಆಂಜನೇಯನ ವಾನರತ್ವವು ಮಾಯವಾಗಿ ಆತನು “ಕಾಂಚನಾದ್ರಿ ಕಮನೀಯ ವಿಗ್ರಹ” ನಾಗುತ್ತಾನೆ. ರೂಪನ್ಯೂನತೆಯನ್ನು ಗುಣಬಾಹುಳ್ಯವು ಜಯಿಸುತ್ತದೆ. ಕೆಲವು ದೃಷ್ಟಾಂತಗಳನ್ನು ನೋಡೋಣ.

ಕಥಾಸಂಕ್ಷೇಪ

ಆಂಜನೇಯಮೂರ್ತಿಯ ದರ್ಶನ ನಮಗೆ ಮೊದಲು ಆಗುವುದು ಕಿಷ್ಕಿಂಧಾಪ್ರದೇಶದಲ್ಲಿ. ರಾಮಲಕ್ಷ್ಮಣರು ಸೀತಾದೇವಿಯನ್ನು ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುತ್ತ ಅಲ್ಲಿಗೆ ಬರುತ್ತಿದ್ದಾರೆ. ಸುಗ್ರೀವನು ಅವರನ್ನು ದೂರದಿಂದ ಕಂಡು, ಅವರು ತನ್ನ ಶತ್ರುವಾದ ವಾಲಿಯ ಗುಪ್ತಭಟರಿರಬೇಕೆಂದು ಊಹಿಸಿಕೊಂಡು, ಭೀತಿಪಟ್ಟು ತಲ್ಲಣಗೊಂಡಿದ್ದಾನೆ. ಆಗ ಆತನ ಪರಿವಾರದಲ್ಲಿದ್ದ ವಾಯುಪುತ್ರನು ಧೈರ್ಯಮಾಡಿ ಸುಗ್ರೀವನ ಶಂಕೆಯನ್ನು ಪರಿಹರಿಸಲು ಮುಂದೆ ಬರುತ್ತಾನೆ. ರಾಮಲಕ್ಷ್ಮಣರ ರೂಪ ಲಕ್ಷಣಗಳನ್ನೂ ಮುಖಕಾಂತಿಯನ್ನೂ ನೋಡಿದರೆ ಅವರು ವಾಲಿಯ ಕಡೆಯವರು ಎನಿಸುವುದಿಲ್ಲ; ಇವರು ಯಾರೋ ಸತ್ಪುರುಷರು, ಸ್ನೇಹಯೋಗ್ಯರಾಗಿ ಕಾಣುತ್ತಾರೆ; ಅವರ ಸ್ನೇಹದಿಂದ ನಿನಗೆ ಪ್ರಯೋಜನವೇ ಆಗಬಹುದು–ಎಂದು ಆಂಜನೇಯನು ನುಡಿದದ್ದನ್ನು ಸುಗ್ರೀವನು ಲಾಲಿಸಿ, ಆ ಆಗಂತುಕರನ್ನು ವಿಚಾರಿಸಿ ತಿಳಿದು ಕೊಳ್ಳುವಂತೆ ಆಂಜನೇಯನಿಗೆ ಅನುಜ್ಞೆ ಕೊಡುತ್ತಾನೆ. ಈ ಸಂಗತಿ ಆಂಜನೇಯನ ನೈಜಸಾತ್ತ್ವಿಕತೆಗೂ ದೂರದರ್ಶಿತ್ವಕ್ಕೂ ನಿದರ್ಶನ.

ಹನುಮಂತನು ರಾಮನ ಬಳಿಗೆ ಹೋದದ್ದಾದರೂ ಹೇಗೆ? ವಾನರರೂಪದಿಂದ ಅಲ್ಲ; ಭಿಕ್ಷುಕರೂಪದಿಂದ. ರಾಮಲಕ್ಷ್ಮಣರು ತಾಪಸರೂಪದಲ್ಲಿದ್ದರು. ಅಂಥವರಿಗೆ ಇಷ್ಟವಾದ ವೇಷದಲ್ಲಿ ತಾನು ಅವರಿಗೆ ಕಾಣಿಸಿಕೊಂಡರೆ ಅವರು ಒಡನೆಯೇ ಪ್ರಸನ್ನರಾದರು. ಇದು ಆತನ ತಾತ್ಪರ್ಯ. ಅದು ದಿಟವಾಯಿತು, ಆತನು ಮಾತನ್ನು ಪ್ರಾರಂಭಿಸಿದ ರೀತಿಯಿಂದ ಶ್ರೀರಾಮಚಂದ್ರನಿಗೆ ಸಂತೋಷವಾಯಿತು. ಆತ ತುಂಬು ಮನಸ್ಸಿನಿಂದ ಆಂಜನೇಯನನ್ನು ಕೊಂಡಾಡಿದ.

ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್‍ ॥

ಈಗ ಇನ್ನೊಂದು ದೃಶ್ಯಕ್ಕೆ ಹೋಗೋಣ.

ಆಂಜನೇಯನು ಸಮುದ್ರದ ಮೇಲೆ ಹಾರಿಹೋಗುತ್ತಿದ್ದಾನೆ. ಅವನ ತಂದೆಯಾದ ವಾಯುದೇವನ ಸ್ನೇಹಿತ ಪರ್ವತಮೂರ್ತಿ ಮೈನಾಕನು ಸಮುದ್ರದ ತಳದಲ್ಲಿ ಅಣಗಿಕೊಂಡಿದ್ದವನು ಆಂಜನೇಯನು ಕೊಂಚ ವಿಶ್ರಮಿಸಿಕೊಳ್ಳಲು ಸ್ಥಲ ಒದಗಿಸಬೇಕೆಂದು ಮೇಲಕ್ಕೆದ್ದು ಬರುತ್ತಾನೆ. ಅದನ್ನರಿಯದ ಆಂಜನೇಯನು ಅದೇನೋ ಭೂತವಿರಬೇಕೆಂದು ಭ್ರಮಿಸಿ ಮೈನಾಕಪರ್ವತದ ಮಸ್ತಕವನ್ನು ತನ್ನ ಬಾಲದಿಂದ ಅಪ್ಪಳಿಸುತ್ತಾನೆ. ಆಗ ಮೈನಾಕನು ತಾನಾರೆಂಬುದನ್ನು ತಿಳಿಸಿದ ಬಳಿಕ ವಾಯುಪುತ್ರನು ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದಾಗಿತ್ತು. ಹಾಗೆ ಮಾಡಿದನೆ? ಇಲ್ಲ. ಆತನ ಕರ್ತವ್ಯೋತ್ಸಾಹದಲ್ಲಿ ವಿರಾಮಕ್ಕೆಡೆಯಿರಲಿಲ್ಲ.

ಇಂಥ ನಾಲ್ಕಾರು ಅಡ್ಡಿ ಅಪಾಯಗಳನ್ನು ಆಂಜನೇಯನು ತನ್ನ ಪರಾಕ್ರಮದಿಂದ ಎದುರಿಸಿ ದಾಟಿ ಲಂಕಾಪಟ್ಟಣವನ್ನು ಸೇರಿದ. ಅಲ್ಲಿ ಸೀತಾಮಾತೆಗಾಗಿ ಎಲ್ಲೆಲ್ಲೂ ಹುಡುಕಿದ. ಆಕೆಯ ರೂಪಲಕ್ಷಣಗಳ ವಿಷಯದಲ್ಲಿ ತಾನು ಮನಸ್ಸಿನಲ್ಲಿ ಧರಿಸಿದ್ದ ಪ್ರತಿಕೃತಿಯನ್ನು ಎಲ್ಲಿಯೂ ಕಾಣದೆ ಕಡೆಗೆ ರಾವಣನ ಅಂತಃಪುರಕ್ಕೆ ಬಂದ. ಅಲ್ಲಿ ಸಾವಿರಾರು ಮಂದಿ ಸುರಸುಂದರಿಯರನ್ನು ಕಂಡ. ಅವರಲ್ಲಿ ಯಾವ ಒಬ್ಬಾಕೆಯನ್ನಾದರೂ ಸೀತೆಯೆಂದು ಭ್ರಾಂತಿಪಡಬಹುದಾಗಿತ್ತಲ್ಲ! ಅಂಥಾ ಭ್ರಾಂತಿಗೆ ಆತ ಸಿಕ್ಕಲಿಲ್ಲ. ಸೀತೆ ಅಂಥಾಸನ್ನಿವೇಶವನ್ನು ಸಹಿಸತಕ್ಕವಳಲ್ಲವೆಂಬ ನಂಬಿಕೆ ಅವನ ಮನಸ್ಸಿನಲ್ಲಿ ಬೇರೂರಿತ್ತು. ಮಂಡೋದರಿಯನ್ನು ನೋಡಿದ. ಒಂದು ಕ್ಷಣ ಭ್ರಾಂತಿಪರವಶನಾದ.

ತರ್ಕಯಾಮಾಸ ಸೀತೇತಿ ರೂಪಯೌವನಸಂಪದಾ ॥

ಆದರೆ ಉತ್ತರಕ್ಷಣದಲ್ಲಿಯೇ ಆ ಭ್ರಾಂತಿ ಬಿಟ್ಟಿತು;

ನ ರಾಮೇಣ ವಿಯುಕ್ತಾ ಸಾ ಸ್ವಪ್ತುಮರ್ಹತಿ ಭಾಮಿನೀ ॥

ಪರಪುರುಷನೆಡೆಯಲ್ಲಿ ಮಲಗಿ ನಿದ್ದೆಹೋಗುವಂಥವಳೆ ರಾಮಪತ್ನಿ? ಎಂದಿಗೂ ಹಾಗಾಗಲಾರದು.

ಮತ್ತೆ ಹುಡುಕಲಾರಂಭಿಸಿ ಕಡೆಗೆ ಅಶೋಕವನದತ್ತ ಬಂದ. ಅಲ್ಲಿ ಕಂಡ ಕಾಣಬಯಸಿದ್ದದ್ದನ್ನು.

ಸೀತಮ್ಮನ ಸನ್ನಿಧಾನದಲ್ಲಿ ಆಂಜನೇಯನು ನಡೆದುಕೊಂಡ ನಡವಳಿಕೆಯ ಮರ್ಯಾದೆ, ಆ ಮಾತಿನ ಇಂಗಿತಜ್ಞತೆ, ವಿನಯ, ವಾತ್ಸಲ್ಯಗಳು ಹೃದಯಸ್ಪರ್ಶಿಗಳಾಗಿವೆ:

ಸೋಽವತೀರ್ಯ ದ್ರುಮಾತ್ತಸ್ಮಾತ್‍ ವಿದ್ರುಮಪ್ರತಿಮಾನನಃ ।
ವಿನೀತವೇಷಃ ಕೃಪಣಃ ಪ್ರಣಿಪತ್ಯೋಪಸೃತ್ಯಚ ॥
..........
ಕಾ ನು ಪದ್ಮಪಲಾಶಾಕ್ಷಿ ಕ್ಲಿಷ್ಟಕೌಶೇಯವಾಸಿನಿ ।
ದ್ರುಮಸ್ಯ ಶಾಖಾಮಾಲಂಭ್ಯ ತಿಷ್ಠಸಿ ತ್ವಮನಿಂದಿತೇ ॥
ಕಿಮರ್ಥಂ ತವ ನೇತ್ರಾಭ್ಯಾಂ ವಾರಿ ಸ್ರವತಿ ಶೋಕಜಮ್‍ ।
.........
ಸೀತಾ ತ್ವಮಸಿ ಭದ್ರಂ ತೇ ತನ್ಮಮಾಚಕ್ಷ್ವ ಪೃಚ್ಛತಃ ॥

ಇದರಿಂದ ಸಂತುಷ್ಟಳಾದ ಸೀತೆ ತನ್ನ ವೃತ್ತಾಂತವನ್ನು ಹೇಳುತ್ತಾಳೆ. ಆಂಜನೇಯನು ತನ್ನ ಮಾತಿನಲ್ಲಿ ಆಕೆಗೆ ನಂಬಿಕೆ ದೃಢಪಡಬೇಕೆಂದೂ ಆಕೆ ಧೈರ್ಯಗೊಳ್ಳಬೇಕೆಂದೂ ಉದ್ದೇಶಿಸಿ

ರಾಮನಾಮಾಂಕಿತಂ ಚೇದಂ ಪಶ್ಯ ದೇವ್ಯಂಗುಲೀಯಕಮ್‍ ।
ಪ್ರತ್ಯಯಾರ್ಥಂ ತವಾನೀತಂ ತೇನ ದತ್ತಂ ಮಹಾತ್ಮನಾ ॥

ಹೀಗೆ ಆಂಜನೇಯನು ಶ್ರೀರಾಮನ ಉಂಗುರವನ್ನು ಸೀತಾದೇವಿಗೆ ಒಪ್ಪಿಸಲು ಆಕೆ ಶ್ರೀರಾಮನಿಗೆ ಪ್ರತ್ಯುತ್ತರವಾಗಿ ಕಾಕಾಸುರವಧೆಯ ವೃತ್ತಾಂತವನ್ನು ಜ್ಞಾಪಕಕ್ಕೆ ತಂದು ಅದನ್ನು ಆಂಜನೇಯನು ರಾಮಚಂದ್ರನಿಗೆ ತಿಳಿಸತಕ್ಕದ್ದೆಂದೂ ತನ್ನ ಚೂಡಾಮಣಿಯನ್ನು ಆತನಿಗೆ ಜ್ಞಾಪಕಾರ್ಥವಾಗಿ ಕೊಡತಕ್ಕದ್ದೆಂದೂ ಹೆಳಿದಳು:

ಅಭಿಜ್ಞಾನಂ ಚ ರಾಮಸ್ಯ ದದ್ಯಾ ಹರಿಗಣೋತ್ತಮ ॥
.........
ಏಷ ಚೂಡಾಮಣಿರ್ದಿವ್ಯೋ ಮಯಾ ಸುಪರಿರಕ್ಷಿತಃ ।
ಏತಂ ದೃಷ್ಟ್ವಾ ಪ್ರಹೃಷ್ಯಾಮಿ ವ್ಯಸನೇ ತ್ವಾಮಿವಾನಘ ॥

ಆಂಜನೇಯಮೂರ್ತಿಯು ಈ ಸೀತಾಸಂದೇಶವನ್ನು ಶ್ರೀರಾಮಚಂದ್ರನಿಗೆ ಮುಟ್ಟಿಸಿ ಚೂಡಾರತ್ನವನ್ನು ಆತನಿಗೆ ಕೊಟ್ಟಾಗ ಶ್ರೀರಾಮನು ತನ್ನ ಕೃತಜ್ಞತೆಯನ್ನು ಹೀಗೆ ವ್ಯಕ್ತಪಡಿಸಿದ:

ಕೃತಂ ಹನುಮತಾ ಕಾರ್ಯಂ ಸುಮಹದ್ಭುವಿ ದುರ್ಲಭಮ್‍ ।
ಮನಸಾಽಪಿ ಯದನ್ಯೇನ ನ ಶಕ್ಯಂ ಧರಣೀತಲೇ ॥

ಎಂಥ ಸೌಭಾಗ್ಯಯೋಗ ಆಂಜನೇಯಮೂರ್ತಿಯದು! ಈ ಕಡೆಯ ರಾಘವಹಸ್ತ ಸ್ಪರ್ಶಭಾಗ್ಯವನ್ನು ಆ ಕಡೆಯ ಜಾನಕಿಗೆ ಹಸ್ತಗತವಾಗಿಸಿದ್ದು; ಆ ಕಡೆಯ ಜಾನಕೀ ಹಸ್ತಸ್ಪರ್ಶಸೌಭಾಗ್ಯವನ್ನು ಈ ಕಡೆಯ ರಾಘವನಿಗೆ ಹಸ್ತಗತ ಮಾಡಿಸಿದ್ದು–ಹೀಗೆ ಉಭಯಸೌಭಾಗ್ಯಗಳ ಸಂಧಿಸ್ಥಾನ ಆಂಜನೇಯ. ಮನುಷ್ಯ ಕಾಣಬಹುದಾದ ಸೌಂದರ್ಯಗಳ ಮಾತಿರಲಿ, ಅವನು ಊಹಿಸಬಹುದಾದ ಸೌಂದರ್ಯಗಳಲ್ಲಿ ಸಹ ಆಂಜನೇಯನ ಯೋಗಕ್ಕಿಂತ ಸುಂದರವಾದ್ದು ಏನಿದ್ದೀತು?

ಅಲ್ಲಿಂದ ಮುಂದಿನ ರಾಮಕಥೆನೀರಿಕ್ಷಿಸಬಹುದಾದದ್ದು. ಶ್ರೀರಾಮನು

ಧರ್ಮಾತ್ಮಾ ಸತ್ಯಸಂಧಶ್ಚ.... ।
ಪೌರುಷೇ ಚಾಪ್ರತಿದ್ವಂದ್ವಃ.... ॥

–ಎಂಬುದನ್ನರಿತವರಿಗೆ ಸೇತುನಿರ್ಮಾಣವೂ ರಾವಣಸಂಹಾರವೂ ಸ್ವಾಭವಿಕ ಘಟನೆಗಳೇ, ಅವಶ್ಯಸಂಭಾವ್ಯಗಳೇ ಎಂಬುದು ಸ್ವತಸ್ಸಿದ್ಧವಾಗಿರುತ್ತದೆ.

ಕಿಷ್ಕಿಂಧೆಯಲ್ಲಿ ಉದಿಸಿದ ಸೌಂದರ್ಯಯೋಗಕ್ಕೆ ಅಯೋಧ್ಯೆಯಲ್ಲಿ ಕಿರೀಟ ಪ್ರಾಪ್ತಿ. ರಾಮಚಂದ್ರನ ಪಟ್ಟಾಭಿಷೇಕಕ್ಕಾಗಿ ಒಡ್ಡೋಲಗ ನೆರೆದಿದೆ. ಪ್ರಭುವು ಸುಗ್ರೀವ ವಿಭೀಷಣಾದಿಗಳಿಗೆ ಕೃತಜ್ಞತೆಯ ಪಾರಿತೋಷಕಗಳನ್ನು ಅನುಗ್ರಹಿಸಿದ್ದಾನೆ. ಸೀತಾ ದೇವಿಗೂ ಯಥೋಚಿತವಾಗಿ ಉಡುಗೊರೆ ಕೊಟ್ಟದ್ದಾಯಿತು. ಆ ದೇವಿ ತನ್ನ ಕಂಠದಲ್ಲಿದ್ದ ಮಣಿಹಾರವನ್ನು ವಾಯುಪುತ್ರನಿಗೆ ಕೊಡಲುದ್ದೇಶಿಸಿ ಭರ್ತನ ಮುಖವನ್ನು ನೋಡುತ್ತಾಳೆ. ಆಗ ಪ್ರಭು ನುಡಿದ:

ಪ್ರದೇಹಿ ಸುಭಗೇ ಹಾರಂ ಯಸ್ಯ ತುಷ್ಟಾಸಿ ಭಾಮಿನಿ ।
ತೇಜೋ ಧೃತಿರ್ಯಶೋ ದಾಕ್ಷ್ಯಂ ಸಾಮರ್ಥ್ಯಂ ವಿನಯೋ ನಮಃ ॥
ಪೌರುಷಂ ವಿಕ್ರಮೋ ಬುದ್ಧಿಃ ಯಸ್ಮಿನ್ನೇತಾನಿ ನಿತ್ಯದಾ ।
ದದೌ ಸಾ ವಾಯುಪುತ್ರಾಯ ತಂ ಹಾರಮಸೀತೇಕ್ಷಣಾ ॥

ಇಂಥಾ ಬಹುಮಾನವನ್ನು ಪಡೆದದ್ದಲ್ಲವೆ ಸುಂದರ–ಸುಂದರದಲ್ಲಿ ಸುಂದರ!

ನಿಃಸ್ವಾರ್ಥತೆ

ಆಂಜನೇಯನ ತಂದೆಯ ಸ್ವಭಾವವನ್ನು ಛಾಂದೋಗ್ಯೋಪನಿಷತ್ತಿನ ಒಂದು ಕಥೆ ತಿಳಿಸುತ್ತದೆ. ದೇವತೆಗಳಿಗೂ ಅಸುರರಿಗೂ ಆಗಾಗ ಯುದ್ಧವಾಗುತ್ತಿತ್ತಷ್ಟೆ? ಸಲಸಲವೂ ದೇವತೆಗಳು ಪೆಟ್ಟುತಿಂದು ಸೋಲುತ್ತಿದ್ದರು. ಅವರು ಹಾಗೆ ಕುಗ್ಗಿದ್ದಾಗ ಒಂದು ಸಾರಿ ತಮ್ಮ ತಂದೆ ಪ್ರಜಾಪತಿಯಲ್ಲಿ ಮೊರೆಯಿಟ್ಟುಕೊಂಡು ಉಪಾಯವನ್ನು ಬೇಡಿದರು. ಪ್ರಜಾಪತಿಯು ಅವರಿಗೆ ಉದ್ಗೀಥದ ಉಪಾಸನೆಯು ಜಯಕಾರವೆಂದು ಉಪದೇಶಿಸಿದ. ಉದ್ಗೀಥವೆಂದರೆ ಪರಬ್ರಹ್ಮ ಧ್ಯಾನ. ಆ ಉಪದೇಶವನ್ನು ದೇವತೆಗಳು ಅಂಗೀಕರಿಸಿ, ತಮ್ಮಲ್ಲಿ ಮುಖ್ಯರಾದ ಇಂದ್ರಿಯ ದೇವತೆಗಳನ್ನು ಒಬ್ಬರಾದ ಬಳಿಕ ಒಬ್ಬರಂತೆ ಉಪಾಸನೆಗೆ ನಿಯಮಿಸಿದರು. ವಾಗಿಂದ್ರಿಯವನ್ನು ಬೇಡಿದರು. ಆ ದೇವತೆ ಉದ್ಗೀಥದಿಂದ ಮಹಿಮೆ ಪಡೆಯಿತು. ಅದರಿಂದ ಶುಭಶಬ್ದಗಳು ಹೊರಟವು. ಎಲ್ಲರೂ ಸಂತೋಷಿಸಿದರು. ವಾಕ್ಕು ಆಗ “ಆಹಾ! ನಾನು ಎಂಥಾ ಮಹಾಕಾರ್ಯವನ್ನು ಮಾಡಿದೆ!” ಎಂದುಕೊಂಡಿತು. ಆ ಕ್ಷಣದಲ್ಲಿ ಪಾಪ ಅದನ್ನು ಹೊಕ್ಕಿತು. ಅದು ರಾಕ್ಷಸರ ಹೊಡೆತಕ್ಕೆ ಅವಕಾಶವಾಯಿತು. ದೇವತೆಗಳು ಚಕ್ಷುರಿಂದ್ರಿಯವನ್ನು ಉದ್ಗೀಥಕ್ಕೆ ನಿಯಮಿಸಿದರು. ಅದು ನಾನಾ ಶೋಭನರೂಪಗಳನ್ನು ತೋರಿಸಿತು. ಎಲ್ಲರೂ ಸಂತೋಷಪಟ್ಟರು. ಚಕ್ಷುಸ್ಸು “ಆಹಾ! ನಾನು ಎಂಥಾ ಮಹಾಕಾರ್ಯವನ್ನು ಮಾಡಿದೆ!" ಎಂದುಕೊಂಡಿತು. ಆಗ ಪಾಪ ಪ್ರವೇಶಿಸಿತು. ಮತ್ತೆ ಅಸುರರು ಪ್ರಬಲಿಸಿ ಬಂದರು. ಹೀಗೆಯೇ ಮಿಕ್ಕ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳ ಪಾಡೂ ಆಯಿತು. ಕಡೆಗೆ ದೇವತೆಗಳು ವಾಯುವನ್ನು ಕುರಿತು “ನೀನು ಉದ್ಗೀಥೋಪಾಸನೆ ಮಾಡು" ಎಂದು ಬೇಡಿಕೊಂಡರು. ವಾಯುದೇವನಾದರೋ ಯಾವ ಇಂದ್ರಿಯಕ್ಕೂ ಅಂಟಿಕೊಳ್ಳದೆ ಕೇವಲ ಪ್ರಾಣರೂಪದಲ್ಲಿರುವವನು. ಅವನನ್ನು ಅಹಂತಾಪಾಪವು ಸೋಕದು. ಇಂದ್ರಿಯಗಳಿಗೆ ಸ್ವಸುಖ ಸ್ವಲಾಭಗಳ ಚಿಂತೆ ಇರುವಂತೆ ವಾಯುದೇವನಿಗಿಲ್ಲ. ಆತನು ನಿಃಸ್ವಾರ್ಥಿ; ಕೇವಲ ಕರ್ತವ್ಯತಾಭಾವದಿಂದ ಕೆಲಸ ಮಾಡತಕ್ಕವನು. ಆದದ್ದರಿಂದ ವಾಯುದೇವನು ಮಾಡಿದ ಉದ್ಗೀಥೋಪಾಸನೆ ಪಾಪಸ್ಪರ್ಶವಿಲ್ಲದೆ ನಡೆದು ರಾಕ್ಷಸರನ್ನು ಜಯಿಸಲು ಸಮರ್ಥವಾಯಿತು. ಈ ವಾಯುದೇವಸ್ವಭಾವವು ವಾಯುಪುತ್ರನಿಗೂ ಬಂದಿತ್ತು.

ಈಗ ಪರಿಸಮಾಪನದೃಶ್ಯ. ಶ್ರೀರಾಮಚಂದ್ರನು ಪಟ್ಟಾಭಿಷೇಕಾನಂತರ ಅಯೋಧ್ಯೆಯಲ್ಲಿ ರಾಜ್ಯ ನಡೆಸುತ್ತಿದ್ದಾನೆ: ಹತಶತ್ರುವಾಗಿ, ಕೃತಕೃತ್ಯನಾಗಿ, ನಿಶ್ಚಿಂತನಾಗಿ ಉಪಶಾಂತನಾಗಿದ್ದಾನೆ. ರಾಜ್ಯವು ಸುಖಶಾಂತಿ ಸೌಭಾಗ್ಯಗಳಿಂದ ಸಮೃದ್ಧವಾಗಿದೆ. ಈಗ ಶ್ರೀರಾಮನು ಕಾಲ ಕಳೆಯುವುದು ಹೇಗೆ? ಅದು ಹೀಗೆ: ಮಹರ್ಷಿಗಳು ಸಭೆನೆರೆದಿದ್ದಾರೆ. ಅವರ ನಡುವೆ ಶ್ರೀರಾಮಚಂದ್ರನು ಸೀತಾಸಹಿತನಾಗಿ ಭದ್ರಾಸೀನದಲ್ಲಿ ಸುಖಾಸೀನನಾಗಿದ್ದಾನೆ. ಎಡಬಲಗಳಲ್ಲಿ ತಮ್ಮಂದಿರೂ ಬಂಧುಮಿತ್ರರೂ ಕುಳಿತಿದ್ದಾರೆ. ಋಷಿಮುನಿಗಳು ರಾಮಮುಖದಿಂದ ಪರತತ್ವವನ್ನು ತಿಳಿದುಕೊಳ್ಳಬೇಕೆಂದು ಕುತೂಹಲಿಗಳಾಗಿದ್ದಾರೆ. ಮುಂದುಗಡೆ ಆಂಜನೇಯನು ಕುಳಿತು ಶ್ರುತಿವಾಕ್ಯಗಳನ್ನು ಹೇಳುತ್ತಿದ್ದಾನೆ. ಸ್ವಾಮಿ ವ್ಯಾಖ್ಯಾನ ಮಾಡುತ್ತಿದ್ದಾನೆ.

ಅಗ್ರೇ ವಾಚಯತಿ ಪ್ರಭಂಜನಸುತೇ
ತತ್ತ್ವಂ ಮುನಿಭ್ಯಃ ಪರಮ್‍ ।
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ
ರಾಮಂ ಭಜೇ ಶ್ಯಾಮಲಮ್‍ ॥

ಎಂಥ ಮನೋಹರವಾದ ಸನ್ನಿವೇಶ ! ಇದಲ್ಲವೇ ಜೀವನ ಸೌಂದರ್ಯದ ಶಿಖರಾಗ್ರ!

ಈ ಚಿತ್ರದ ಸೌಂದರ್ಯವನ್ನು ಕಾಣಬಲ್ಲ ಜನ ನಮ್ಮಲ್ಲಿ ಇನ್ನೂ ಇದ್ದಾರೆಂದು ನಾನು ನಂಬಿದ್ದೇನೆ. ಅಂಥವರು ಈ ಸುಂದರಕಾಂಡ ಗ್ರಂಥವನ್ನು ಆದರದಿಂದ ಬರಮಾಡಿಕೊಳ್ಳುವರು.

ಸುಂದರಕಾಂಡದ ನಿತ್ಯಪಾರಾಯಣ ಸಂಪ್ರದಾಯವು ನಮ್ಮ ದೇಶದಲ್ಲಿ ಬಹುಕಾಲದಿಂದ ಬಂದದ್ದು. ಮನಸ್ಸನ್ನು ದಿಕ್ಕುಗೆಡಿಸಿರುವ ಈ ನಮ್ಮ ಕಾಲದಲ್ಲಿಯೂ ಸುಂದರಕಾಂಡಪಾರಾಯಣನಿಷ್ಠರು ಇದ್ದಾರೆಂಬುದು ನಮ್ಮ ದೇಶದ ಭವಿಷ್ಯಚ್ಛುಭಕ್ಕೆ ಭರವಸೆಯಾಗಿದೆ.

ಹನುಮದ್ವಿಲಾಸ

ಕನ್ನಡದಲ್ಲಿ ತಿಪ್ಪಣಾರ್ಯನೆಂಬ ಕವಿ ಸುಂದರಕಾಂಡ ಕಥಾಸಾರವನ್ನು ಹನುಮದ್ವಿಲಾಸವೆಂಬ ಕಾವ್ಯದಲ್ಲಿ ಮನೋಹರವಾಗಿ ರೂಪಗೊಳಿಸಿದ್ದಾನೆ. ಆದರಲ್ಲಿಯ ಪದ್ಯಗಳೂ ಹಾಡುಗಳೂ ಹೃದಯಸ್ಪರ್ಶಿಯಾಗಿವೆ. ಆನಂದಭೈರವಿ, ಮಧ್ಯಮಾವತಿ, ಮೋಹನ ಮೊದಲಾದ ಸುಂದರ ರಾಗಗಳಲ್ಲಿ ಆ ಗೀತಗಳು ಹಾಡತಕ್ಕುವಾಗಿವೆ. ಕನ್ನಡ ಜನದ ಗಾನಾಭಿರುಚಿ ಅನ್ಯಾನುಕರಣ ವ್ಯಾಮೋಹಕ್ಕೆ ಸಿಕ್ಕುವ ಮುನ್ನ–ಐವತ್ತರವತ್ತು ವರ್ಷಗಳ ಹಿಂದಿನವರೆಗೆ–ಹನುಮದ್ವಿಲಾಸವನ್ನು ಹಾಡುವವರು ವಿರಳರಾಗಿರಲಿಲ್ಲ. ನನ್ನ ಬಂಧುವರ್ಗದಲ್ಲಿ ಕೆಲವು ವರ್ಷಗಳ ಹಿಂದಿನವರೆಗೆ ಹನುಮದ್ವಿಲಾಸವು ಪಾರಾಯಣ ಗ್ರಂಥವಾಗಿತ್ತು. ಶನಿವಾರ ಸಂಜೆ ದೇವರಿಗೆ ಮಂಗಳಾರತಿ ಮಾಡಿ ಹನುಮದ್ವಿಲಾಸವನ್ನು ಹಾಡಿ, ಕೇಳಿ, ನೈವೇದ್ಯ ಫಲಾಹಾರದಿಂದ ತೃಪ್ತರಾಗಿ ನೇಮದಿಂದಿರುತ್ತಿದ್ದರು. ಅಂಥಾ ಜನ ಈಗ ಕಡಮೆಯಾಗುತ್ತಿದ್ದಾರೆ–ನಮ್ಮ ನವ ನಾಗರಿಕತೆಯ ಮಹಿಮೆಯಿಂದ. ಇದು ಸುಂದರವಲ್ಲ. ಆ ಭಕ್ತಿಶ್ರದ್ಧೆಗಳು ಜೀವನದಲ್ಲಿ ಸುಂದರ.

ಕೃತಜ್ಞತೆ

ಇನ್ನು ನಾನು ಹೇಳಲು ಉಳಿದಿರುವ ಮಾತು ಸಂತೃಪ್ತಿ ಕೃತಜ್ಞತೆಗಳದು. ಸುಂದರಕಾಂಡವನ್ನು ಸುಂದರವಾಗಿ–ಬೆಲೆಕೊಟ್ಟು ಕೊಳ್ಳುವ ದೃಷ್ಟಿಯಿಂದಲೂ ಸುಂದರವಾಗಿ–ಪ್ರಕಟಪಡಿಸಬೇಕೆಂಬ ಉದ್ದೇಶವನ್ನು ಬೆಂಗಳೂರು ನರಸಿಂಹರಾಜ ಕಾಲೋನಿಯ ಶ್ರೀರಾಮಮಂದಿರ ಸಂಘದ ಪರವಾಗಿ ಮಿತ್ರರು ಶ್ರೀ ಡಿ. ಸಿ. ಅನಂತರಾಮಯ್ಯನವರು ತಿಳಿಸಿದಾಗ ನನಗೆ ತುಂಬ ಆನಂದವಾಯಿತು. ಇಂಥಾ ಗ್ರಂಥದ ಆವಶ್ಯಕತೆ ಕನ್ನಡ ಜನಕ್ಕೆ ತೀವ್ರವಾಗಿದೆ. ಶ್ರೀರಾಮಮಂದಿರದವರು ಇದಕ್ಕೆ ಮನಸ್ಸು ಕೊಟ್ಟಿದ್ದು ಅಭಿನಂದನೀಯವಾಗಿದೆ. ಶ್ರೀ ಅನಂತರಾಮಯ್ಯನವರು ಗ್ರಂಥದ ಬರಹದ ಪ್ರತಿಯನ್ನು ತಯಾರು ಮಾಡುವುದು, ಕರಡು ಪ್ರತಿಗಳನ್ನು ತಿದ್ದುವುದು–ಮೊದಲಾದ ಎಲ್ಲ ಕಾರ್ಯಾಂಶಗಳಲ್ಲಿಯೂ ಶ್ರದ್ಧಾ ಭಕ್ತಿಗಳಿಂದ ಶ್ರಮಪಟ್ಟಿದ್ದಾರೆ.

ಈ ದಿವ್ಯಗ್ರಂಥಕ್ಕೆ ಕನ್ನಡದಲ್ಲಿ ಭಾವಾನುವಾದ ಬರೆದು ಗ್ರಂಥವನ್ನು ಸಂಪಾದಿಸಿಕೊಡುವ ಕಾರ್ಯವನ್ನು ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾ ಅವರು ವಹಿಸಿಕೊಳ್ಳಬೇಕೆಂದು ಅವರನ್ನು ನಾನು ಬೇಡಿದಾಗ ಅವರು ಒಪ್ಪಿಕೊಂಡದ್ದು ನನಗೆ ಮತ್ತೊಂದು ಆನಂದ. ಶ್ರೀ ರಂಗನಾಥಶರ್ಮರವರು ಸಂಸ್ಕೃತ ವ್ಯಾಕರಣಶಾಸ್ತ್ರದಲ್ಲಿ ಆಳವೂ ವಿಶಾಲವು ಆಗಿ ಪ್ರಮಾಣವತ್ತಾಗಿರುವ ಪಾಂಡಿತ್ಯವನ್ನು ಸಂಪಾದಿಸಿರುವವರು. ಅವರ ಕನ್ನಡಭಾಷಾವಿದ್ವತ್ತೂ ಅಂಥಾದ್ದು. ಸಾಹಿತ್ಯದಲ್ಲಿ ಅವರು ಸಹೃದಯರಾಗಿ ಶೋಧನಶೀಲರಾಗಿ ಕಾವ್ಯಮರ್ಮವನ್ನು ಕಂಡು ತೋರಿಸಬಲ್ಲವರು. ಅವರು ಸದಾಚಾರನಿಷ್ಠರು, ಸರಳರು. ಒಂದು ಮಹಾಕಾವ್ಯದ ಅಂತರಂಗವನ್ನು ಅನುಭವದಿಂದ ತಿಳಿಸಬೇಕಾದರೆ ಯಾವ ಮನಃಪ್ರಸಾದವೂ ತತ್ತ್ವನಿಷ್ಠೆಯೂ ಪ್ರಥಮಸಿದ್ಧತೆಗಳೋ ಅವೆರಡನ್ನೂ ಅವರಲ್ಲಿ ನಾನು ಕಂಡಿದ್ದೇನೆ. ಅವರು ತಮಗೊಪ್ಪಿಸಿದ ಕಾರ್ಯವನ್ನು ಸೊಗಸಾಗುವಂತೆ ನಿರ್ವಹಿಸಿದ್ದಾರೆಂದು ನಾನು ಕೃತಜ್ಞನಾಗಿದ್ದೇನೆ. ಅವರ ಅನುವಾದವನ್ನು ಅನೇಕ ಭಾಗಗಳಲ್ಲಿ ನೋಡಿದ್ದೇನೆ. ಪದಶೈಲಿ ಲಲಿತವಾಗಿ ಕಾಂತಿವೀರ್ಯವಿಶಿಷ್ಟವಾಗಿ ಸುಂದರಕಾಂಡಕ್ಕೆ ಒಪ್ಪುವಂಥ ಶೈಲಿಯಿಂದ ಸುಂದರವಾಗಿದೆ. ಮೂಲದ ಸ್ವಾರಸ್ಯವು ಸಾಧ್ಯವಾದಷ್ಟು ಪೂರ್ಣವಾಗಿ ಕನ್ನಡಕ್ಕೆ ಬಂದಿದೆ. ಸಂಸ್ಕೃತ ಮೂಲದ ಕಡೆಗೆ ಕಣ್ಣು ತಿರುಗಿಸದೆ ಬರಿಯ ಕನ್ನಡ ವಚನ ಗ್ರಂಥವನ್ನೇ ಧಾರೆಯಾಗಿ ಓದಿದರೂ ಓದುಗರಿಗೆ ಸಂತೃಪ್ತಿಯಾಗುವಂತಿದೆ. ಕನ್ನಡವನ್ನೋದುತ್ತ ಓದುತ್ತ ನಡುನಡುವೆ ಮೂಲವನ್ನೂ ಅಷ್ಟಿಷ್ಟು ನೋಡುವವರು ಸಂಸ್ಕೃತದ ಪರಿಚಯವನ್ನೂ ಸಂಪಾದಿಸಿಕೊಂಡಂತೆ ಆಗುತ್ತದೆ.

ರಾಮಾಯಣ ಪ್ರಚಾರ ಒಂದು ಪುಣ್ಯಕಾರ್ಯ. ಆ ಪುಣ್ಯವನ್ನು ಶ್ರೀರಾಮಮಂದಿರದ ಅಧಿಕಾರಿಗಳು ಸಂಪಾದಿಸಿಕೊಂಡಿದ್ದಾರೆ. ಅವರೊಡನೆ ಹೀಗೆ ಲವಲೇಶವಾಗಿ ಸೇರಿಕೊಳ್ಳುವ ಅವಕಾಶವನ್ನು ಅವರು ನನ್ನ ಮಿತ್ರರು ಶ್ರೀ ಡಿ. ಸಿ. ಅನಂತರಾಮಯ್ಯನವರ ಮುಖಾಂತರ ನನಗೆ ಒದಗಿಸಿಕೊಟ್ಟಿದ್ದಾರೆ. ಶ್ರೀರಾಮಕೀರ್ತಿ ವಿಸ್ತರಕಾರ್ಯದಲ್ಲಿ ಸೇರಿದವರಿಗೆಲ್ಲ ಶ್ರೀಮದಾಂಜನೇಯಸ್ವಾಮಿಯ ಅನುಗ್ರಹವುಂಟೆಂದು ನಾನು ನಂಬಿದ್ದೇನೆ.

ಸರ್ವಲೋಕಶರಣ್ಯಾಯ
ಸತ್ಯಧರ್ಮೈಕಮೂರ್ತಯೇ ।
ಹನೂಮದ್ದೌತ್ಯತೃಪ್ತಾಯ
ಸೀತಾರಾಮಾಯ ಮಂಗಲಮ್‍ ॥ (೧೯೬೯)

No comments:

Post a Comment