ಸುಶೀಲೆಗೆ-೨ - ಕೇತಕೀವನ - ಡಿವಿಜಿ
ನೂರಾರು ಹೆಣ್ಣುಗಳ
ನೂರು ಬಗೆ ಚೆನ್ನುಗಳ
ಸಾರವರಿತೀ ಕಣ್ಗೆ-ಓ ಸುಶೀಲೆ;
ರುಚಿ ನಿನ್ನ
ಶುಚಿಕಾಂತಿ-ಸುಮಕೋಮಲೆ.
ವಿನಯ ತುಂಬಿದ ವದನ
ಕನಿಕರಿಪ ತಿಳಿನಯನ
ಇನಿಗೊರಲ ಮೃದುಗಾನ-ಉಚಿತವೆಲ್ಲ;
ಮಧುರತೆಯ
ಬದುಕಿಗದು-ಸಹಜವೆಲ್ಲ.
ಪಾರಿಜಾತವ ಪೋಲ್ವೆ
ತಾರಗೆಯವೊಲು ಬಾಳ್ವೆ
ಚಾರುನಮ್ರತೆಯಿಂದ- ಓ ಸುಶೀಲೆ;
ಸಾತ್ತ್ವಿಕದ
ತೃಪ್ತಿಯಿಂ-ಗೀತಕುಶಲೆ.
ಕೋರಿಕೆಯ ಕೆಣಕುವೊಲು
ಗೌರವವನುಂ ಗಳಿಪ
ಸ್ವಾರಸ್ಯ ನಿನ್ನದೆಲೆ-ಕವಿಮನೋಜ್ಞೆ;
ಸೌಮ್ಯದಾ
ರಮ್ಯತೆಗೆ-ನೀಂ ಪ್ರಮಾಣೆ.
ನಿನ್ನ ಮೆಲುದನಿಯಿಂಪು
ನಿನ್ನ ನಸುನಗು ತಂಪು
ನಿನ್ನ ನಲುಮೆಯಲಂಪು-ಓ ಸುಶೀಲೆ
ಪಿಡಿದೆನ್ನ
ಹೃದಯವನು-ಗಾನಲೋಲೆ.
ನಾನಲೆವ ಕಡೆಯಲೆದು
ನಾನಿರ್ಪೆಡೆಯೊಳಿರ್ದು
ನನ್ನ ಜೀವದಿ ನೆರೆದು-ನಿನ್ನ ನಲುಮೆ
ನನ್ನೆಲ್ಲ
ನೀನೆನಿಪುದೆನ್ನ ಮನಕೆ.
ನೆನೆನೆನೆದು ಸುಖಿಪೆ ನಿ-
ನ್ನಿನಿಯ ಭಾವಂಗಳನು
ಕನಿಕರಿಪೆ ನೀನೆಂದು-ಓ ಸುಶೀಲೆ
ತಾಳಿರುವೆ
ಬಾಳನಾಂ-ಮಂಜುಲೀಲೆ.
ಕಾದುಕಾದಿಷ್ಟು ದಿನ
ಪೋದೆಲ್ಲ ಕಡೆ ನಿನ್ನ
ಸಾಧುತನವನೆ ನೆಚ್ಚಿ-ನಲಿದೆ ನಾನು.
ಕುದಿಯುತಿಹು-
ದೆದೆಯ ರಸ ಫಲವದೇನು?
ಕೆಳೆಯ ನೀಂ ಜರಿಯುವೆಯ?
ನಲುಮೆಯನೆ ಪರಿಯುವೆಯ?
ಒಲಿದೆದೆಯ ಮುರಿಯುವೆಯ?-ಓ ಸುಶೀಲೆ
ಬದುಕಿಸೆಯ
ಬಕುತನನು-ಚಾರುಶೀಲೆ?
To receive the posts on your personal email, pls subscribe to https://groups.google.com/g/todayskagga
No comments:
Post a Comment