Sunday, 18 February 2024

ದಾರಿಗರ ಹಾಡು- ಹಾಡುಗಳು - ನಿವೇದನ - ಡಿವಿಜಿ

ದಾರಿಗರ ಹಾಡು- ಹಾಡುಗಳು - ನಿವೇದನ - ಡಿವಿಜಿ

(ಮೋಹನ ರಾಗ)

ದಾರಿಹೋಕರು ನಾವು-ಊರ ತೊಡಕಿಗೆ ನಮ್ಮ ।
ಸೇರಿಸದೆ ಬಿಡಿರಿ ಸಖರೇ ॥ ಪ ॥

ದೂರದಿಂದಲಿ ಬಂದು–ಊರ ಸತ್ರದಿ ನಿಂದು । 
ಸಾರುವೆವು ಮುಂದಕಿಂದು-ಸಖರೇ ॥ ಅ–ಪ ॥ 

ಗುರುಗಳಾಣತಿಯಂತೆ ಚರಿಸುತಿರುವರು ನಾವು । 
ಇರಲಾಗದೆರಡುದಿನಮೊಂದೆಡೆಯೊಳಂ ॥ 
ಕೊರತೆ ಕನಲಿಕೆಗಳನು ಮರೆಯಿಪೆಮ್ಮಯ ಬಗೆಯ । 
ನೊರೆವೆವದನಾಲಿಪುದು ನೀಂ–ಸಖರೇ ॥ ೧ ॥ 

ಹೊರಟು ಮುಂಬೆಳಗಿನಲಿ ಶಿರದಿ ಭಾರವ ತಳೆದು । 
ಬಿರುಗಾಳಿ ಬೀಸುತಿರೆ ಭರದಿಂದ ನಡೆದು ॥ 
ತರುಣಿಯೊಲುಮೆಯ ಪಡೆದು ಹರುಷದಿಂ ಮುಂಬರಿದು । 
ತೊರೆಯೊಂದ ಕಂಡೆವತ್ತ–ಸಖರೇ ॥ ೨ ॥ 

ತೊರೆಯ ನೀರೊಳು ಮಿಂದು ಮರದ ನೆರಳಲಿ ಕುಳಿತು । 
ಶಿರದ ಬುತ್ತಿಯ ತಂಗಳೂಟವುಂಡು ॥ 
ಬಳಿಯ ತರುಗಳ ಬಳಸಿ ದೊರೆತ ಫಲಗಳ ಭುಜಿಸಿ । 
ಬಳಲಿ ಮಲಗಿದೆವತ್ತಲೇ–ಸಖರೇ ॥ ೩ ॥ 

ಖಗಕುಲದ ಕಲರವಂ ಬಗೆಬಗೆಯ ಪರಿಮಳಂ । 
ಮಿಗೆ ಸಂತಸವ ಸೂಸೆ ಮೈಯ ಮರೆತು ॥ 
ಸೊಗದಿ ನಿದ್ರಿಸಿ ಬಳಿಕಲೆಚ್ಚತ್ತು ನೀರ್ಗುಡಿದು । 
ಮಗುಳೆ ನಡೆದೆವು ಮುಂದಕೆ–ಸಖರೇ ॥ ೪ ॥ 

ತೆರಳಿ ಮುಂದಕೆ ಮುನ್ನ ಕರುಣಿಸಿದ ದಿನಪತಿಯ । 
ಕಿರಣಗಳು ಕನಲಿ ಬೇಯಿಸೆ ನಮ್ಮ ತನುವ ॥ 
ಮರದ ನೆರಳನು ಬಯಸಿ ಮುಗಿಲ ರಾಶಿಯನರಸಿ । 
ನಿರುಕಿಸಿದೆವಾಗಸವನು–ಸಖರೇ ॥ ೫ ॥ 

ಮುಗಿಲು ತಾನೊಂದೊಗೆದು ತಂಬೆಲರುಗಳನೆಸೆದು । 
ಗಗನವೆಲ್ಲವ ಕವಿಯೆ ನಲಿದು ನಡೆದು ॥ 
ಮಿಂಚೆಸೆದು ಸಿಡಿಲಿರಿದು ಮಳೆಗರೆಯೆ ನಾವಾಗ । 
ನಡನಡುಗೆ ನಡೆನಡೆದೆವೈ–ಸಖರೇ ॥ ೬ ॥ 

ನಡೆದು ಬಂದೀಯೂರ ಗುಡಿಯ ಸತ್ರವ ಸೇರಿ । 
ಬಡದಾರಿಗರ ಹಲವರನು ಕಂಡೆವು ॥ 
ಕೂಡಿ ನಾವವರೊಡನೆ ಪಾಡಿ ಸುದ್ದಿಗಳಾಡಿ । 
ಬಿಡುವೆವಿಲ್ಲಿಯೆ ನಿಶಿಯನು–ಸಖರೇ ॥ ೭ ॥ 

ಹೊರಟು ನಾವಿಲ್ಲಿಂದಲರುಣೋದಯದಿ ಮರಳಿ । 
ಭರದಿಂದ ಕಾಲಿಡುತ ಮರೆತು ಬಳಲಿಕೆಯ ॥ 
ಪರಿಪರಿಯ ನೋಟಗಳ ನೋಡಿ ರಾಗದಿ ಪಾಡಿ । 
ಸರಿವೆವಿನ್ನೊಂದೂರಿಗೈ–ಸಖರೇ ॥ ೮ ॥ 

ಪಯಣವನು ನಾವಿಂತು ಗೈಯುತಿಹೆವನುದಿನವು । 
ಬಯಕೆಗಳು ನಿಲವೆಮ್ಮೊಳರೆಗಳಿಗೆಯುಂ ॥ 
ಭಯವನರಿಯೆವು ಸಾಹಸಕ್ಕೆ ತೊಡಗೆವು ನಿಮ್ಮ । 
ದಯೆಯೊಂದೆ ಸಾಕು ನಮಗೈ–ಸಖರೇ ॥ ೯ ॥ 

ಊರುಗಳ ಸುತ್ತಿಹೆವು ಕೇರಿಗಳ ತಿರುಗಿಹೆವು । 
ಊರಿಗರ ಜಪ ತಪಂಗಳನರಿತೆವು ॥ 
ಊರಿನಲ್ಲಿರುವೆಲ್ಲುದಾರತೆಯ ಸವಿದಿಹೆವು । 
ಊರು ಸಾಕಿನ್ನು ನಮಗೈ–ಸಖರೇ ॥ ೧೦ ॥ 

ಅಳುವವರ ಕಂಡಿಹೆವು ನಗುವವರ ಕಂಡಿಹೆವು । 
ಕಂಡಿರುವೆವಳುಕಿಪರನಳುಕದರನು ॥ 
ದುರುಳರನು ಕಂಡಿಹೆವು ಮರುಳರನು ಕಂಡಿಹೆವು । 
ಕಂಡಿಹೆವು ಬಲ್ಲವರನು-ಸಖರೇ ॥ ೧೧ ॥ 

ನೋಡಿಹುದೆ ಸಾಕು ನಿನ್ಮೋಡಾಟಗಳನಿನ್ನು । 
ಗೂಡ ಸೇರುವ ಹಕ್ಕಿಯಂತೆ ನಾವು ॥ 
ಸಾರಿ ಮುಂದಕೆ ಜವದಿ ಸೇರಿ ನಮ್ಮಾಲಯವ । 
ಭಾರಗಳನಿಳುಹಬೇಕೈ–ಸಖರೇ ॥ ೧೨ ॥ 

ಹಳ್ಳಗಳ ಮುಚ್ಚುತ್ತ ಮುಳ್ಳುಗಳ ಬಿಸುಡುತ್ತ । 
ಒಳ್ಳೆದಾರಿಯ ತೋರಿ ಯಾತ್ರಿಕರಿಗೆ ॥ 
ಒಳ್ಳೊಳ್ಳೆ ಕಥೆಗಳನು ಪೇಳುತ್ತ ಕೇಳುತ್ತ । 
ತಳ್ಳುವೆವು ಚಿಂತೆಗಳನು–ಸಖರೇ ॥ ೧೩ ॥ 

ಇಂತೆಸಗಬೇಕೆಂಬ ಹಟದ ಬಂಧನವಿಲ್ಲ । 
ಪಂಥವಿದು ಕಡಿದೆಂಬ ಭೀತಿಯಿಲ್ಲ ॥ 
ಅಂತರಂಗದೊಳು ನಾವಾಂತು ಗುರುಗಳ ಪದವ । 
ಸಂತಸಿಪೆವವರ ನುಡಿಯಿಂ–ಸಖರೇ ॥ ೧೪ ॥ 

ಬಿದಿಯಣಕಿಪುದ ಕಂಡು ಹೆದರುವರು ನಾವಲ್ಲ । 
ಎದುರುಗೊಳ್ಳುವೆವದನು ವಿನಯದಿಂದೆ ॥ 
ಎದೆಯೊಳಿಹುದೆಮಗೊಂದು ಸುಧೆಯ ಸಾರದ ಬಿಂದು । 
ಅದ ಸವಿಯುತಳುಕದಿಹೆವೈ–ಸಖರೇ ॥ ೧೫ ॥ 

ಕಂಡುಕಂಡುದನೆಲ್ಲ ಬೇಡುವರು ನಾವಲ್ಲ । 
ಉಂಡು ಸುಖಿಪೆವು ಕೈಗೆ ಬಂದ ಫಲವ । 
ಎಮ್ಮ ಸುಖವೆಮಗಿಹುದು ನಿಮ್ಮ ದುಗುಡವು ನಿಮಗೆ । 
ನಿಮ್ಮೂರು ನಮಗೆ ಸಾಕೈ–ಸಖರೇ ॥ ೧೬ ॥

Saturday, 17 February 2024

ಸ್ವಾತಂತ್ರ್ಯವೇಕೆ?- ಹಾಡುಗಳು - ನಿವೇದನ - ಡಿವಿಜಿ

ಸ್ವಾತಂತ್ರ್ಯವೇಕೆ?- ಹಾಡುಗಳು - ನಿವೇದನ - ಡಿವಿಜಿ

(ಸಾವೇರಿ ರಾಗ)

ಸ್ವಾತಂತ್ರ್ಯವನು ದೇವ ಏತಕೆನಗಿತ್ತೆ ಅದು ।
ನೀತಿಯಿಂದೆನ್ನ ಬೀಳಿಪ ಯುಕುತಿಯೇನೈ ॥ ಪ ॥

ಚೈತನ್ಯಕಾದಿಕಾರಣನೆ ನೀನಿರಲೆನ್ನ ।
ಚೇತಸದ ಸಾಸಂಗಳೆಲ್ಲ ಬರಿದಾಯಸವು ॥ ಅ–ಪ ॥

ಶುಕಪಿಕಂಗಳಿಗೆ ನೀನತಿಮತಿಯನೀಯದಿರೆ ।
ನಲಿದು ನುಣ್ಚರದೊಳವು ಪಾಡಿ ಸುಳಿದಾಡಿ ।
ನಿನ್ನ ನಿಂದಿಸವೆ ಮೇಣನ್ಯರನು ಕುಂದಿಸದೆ ।
ನಿನ್ನ ರಚನೆಯ ಸೊಬಗ ತೋರ್ಪ ಹರುಷದೊಳಿರಲು ॥ ೧ ॥

ತರುಲತೆಗಳರಿವಿನೊಳು ನರನಿಗೆಣೆಯಿರದೊಡಂ ।
ನಿನ್ನಾಣತಿಯನರಿದು ದುಗುಡಬಡದೆ ।
ಫಲ ಪುಷ್ಪಗಳ ತಳೆದು ಪರಹಿತವನೆಸಗುತಲಿ ।
ನಿನ್ನೊಲವು ಜಾಣ್ಮೆಗಳ ತೋರ್ಪ ಹರುಷದೊಳಿರಲು ॥ ೨ ॥

*****************

ತರಣಿಶಶಿಪಥಗಳನು, ಧರೆವರುಣಗತಿಗಳನು ।
ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ॥
ನರನರಸಿಕೊಳಲಿ ದಾರಿಯ ತನಗೆ ತಾನೆಂದು ।
ತೊರೆದನೇತಕೆ ನಮ್ಮ? - ಮಂಕುತಿಮ್ಮ ॥ ೫೩೭ ॥

Friday, 16 February 2024

ನಿನ್ನ ನಾಟಕ - ಹಾಡುಗಳು - ನಿವೇದನ - ಡಿವಿಜಿ

ನಿನ್ನ ನಾಟಕ - ಹಾಡುಗಳು - ನಿವೇದನ - ಡಿವಿಜಿ

(ಮಧ್ಯಮಾವತಿ ರಾಗ)

ನಿನ್ನ ನಾಟಕ ಚಿತ್ರವೋ–ಜೀವಾಧಾರ–ಎನ್ನ ನಾಟಕ ಚಿತ್ರವೋ ॥ ಪ ॥
ಭುವನ ರಂಗದಿ ನೀನು ಭವ ರಂಗದೊಳು ನಾನು ।
ವಿವಿಧ ವೇಷಗಳಿಂದ ನಟಿಸಿ ತೋರಿಸುತಿಹ ॥ ಅ–ಪ ॥

ಅಮಿತ ಕಾಯವು ನಿನ್ನದು–ಮಹಾದೇವ–ನೀನಿತ್ತ ತನುವೆನ್ನದು ।
ಖಗ ಮೃಗೋರಗ ಮುಖ್ಯ ಬಹು ರೂಪ ನಿನದಾಗೆ ।
ಸೊಗಯಿಪುವೆನ್ನೊಳಾ ಬಗೆಬಗೆ ಗುಣಗಳು ॥ ೧ ॥

ಶಿಲೆ ನೆಲೆ ಜಲಗಳೊಳು–ನಭಸ್ಥಲ–ತಾರಾ ಸಂಕುಲಗಳೊಳು ।
ಪರಿಪರಿ ಗುಣವ ನೀ ತೋರುತಿರ್ಪುದನೆಲ್ಲ ।
ಅನುಕರಿಸುತಲಿಹೆ ದಿನಚರಿಯೊಳು ನಾನು ॥ ೨ ॥

ಕಾರುಣ್ಯವನು ತೋರುವೆ–ನಿನ್ನಂತೆಯೆ–ಕ್ರೂರತನವ ತೋರುವೆ ।
ಕಟ್ಟುವೆ ಜಗಗಳನಾಳುವೆನವುಗಳ ।
ಕಟ್ಟಿಹುದನು ಮುರಿದಿನ್ನೊಂದ ಕಟ್ಟುವೆ ॥ ೩ ॥

ಅಮಿತ ಶಕ್ತಿಯು ನಿನ್ನದು–ಹೇ ಗುರುದೇವ ನೀನಿತ್ತ ಬಲವೆನ್ನದು ।
ನಿನ್ನ ನಾಟಕದುಪನಾಟಕವೆನ್ನದು ।
ಅಭಯವನೀವುದು ಅನುಚರನಿಗೆ ದೇವ ॥ ೪ ॥

ಅಮಿತಕಾಯ-ಮಿತಿಯಿಲ್ಲದ, ಎಲ್ಲೆಗೊತ್ತಿಲ್ಲದ, ದೇಹ.

Thursday, 15 February 2024

ವನಸುಮ (ಅಠಾಣ ರಾಗ) - ಹಾಡುಗಳು - ನಿವೇದನ - ಡಿವಿಜಿ

ವನಸುಮ - ಹಾಡುಗಳು - ನಿವೇದನ - ಡಿವಿಜಿ 
(ಅಠಾಣ ರಾಗ)

ವನಸುಮದೊಲೆನ್ನ ಜೀ ।
ವನವು ವಿಕಸಿಸುವಂತೆ ।
ಮನವನನುಗೊಳಿಸು ಗುರುವೇ–ಹೇ ದೇವ ॥ ಪ ॥

ಜನಕೆ ಸಂತಸವೀವ ।
ಘನನು ನಾನೆಂದೆಂಬ ।
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್‍ ಬಿಡದೆ ॥ ಅ–ಪ ॥

ಕಾನನದಿ ಮಲ್ಲಿಗೆಯು ।
ಮೌನದಿಂ ಬಿರಿದು ನಿಜ ।
ಸೌರಭವ ಸೂಸಿ ನಲವಿಂ ॥
ತಾನೆಲೆಯ ಪಿಂತಿರ್ದು ।
ದೀನತೆಯ ತೋರಿ ಅಭಿ ।
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ॥ ೧ ॥

ಉಪಕಾರಿ ನಾನು ಎ ।
ನ್ನುಪಕೃತಿಯು ಜಗಕೆಂಬ ।
ವಿಪರೀತ ಮತಿಯನುಳಿದು ॥
ವಿಪುಲಾಶ್ರಯವನೀವ ।
ಸುಫಲ ಸುಮ ಭರಿತ ಪಾ ।
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ॥ ೨ ॥

ವನಸುಮದೊಲ್‍, ವನಸುಮದವೊಲು-ಕಾಡಿನಲ್ಲಿಯ ಹೂವಿನಂತೆ.
ಎಚ್ಚರಿಕೆ : ವನಸುಮದೊಳ್‍ (-ದೊಳು) ಅಲ್ಲ. “ಲ” ಕಾರಕ್ಕೆ ಬದಲಾಗಿ “ಳ” ಕಾರವನ್ನು ನುಡಿಯಬಾರದು.
ವಿಪರೀತಮತಿ-ತಲೆಕೆಳಗು ಬುದ್ಧಿ. ವಿಪುಲ-ವಿಸ್ತಾರ.
ಪಾದಪ-ಗಿಡ, ಮರ.

ಎನ್ನದು ಯಾವುದು? - ಹಾಡುಗಳು - ನಿವೇದನ - ಡಿವಿಜಿ

ಎನ್ನದು ಯಾವುದು? - ಹಾಡುಗಳು - ನಿವೇದನ - ಡಿವಿಜಿ

(ಕಲ್ಯಾಣಿ ರಾಗ)

ಎನ್ನದು ಯಾವುದಯ್ಯಾ–ಎನ್ನಯ ದೊರೆ
ಅನ್ಯರದಾವುದಯ್ಯಾ ॥ ಪ ॥

ಎಲ್ಲಾ ಸೌಭಾಗ್ಯವು ನಿನ್ನದಾಗಿರಲಾಗಿ ॥ ಅ-ಪ ॥

ಗಂಗೆಯ ಜಲವೆಲ್ಲಿ ತುಂಗಭದ್ರೆಯದೆಲ್ಲಿ ।
ಮಂಗಳಕರಳಹ ಯಮುನೆಯದೆಲ್ಲಿ ।
ತುಂಗತರಂಗೆಯಾ ಸಿಂಧೂನದಿಯದೆಲ್ಲಿ ।
ವಿಂಗಡಿಸುವರಾರು ಜಲನಿಧಿಯೊಳು ಪೊಕ್ಕು ॥ ೧ ॥

ಚಂಪಕ ರಜವೆಲ್ಲಿ ಚಂದನ ರಜವೆಲ್ಲಿ ।
ಸೊಂಪಿನ ಪಾಟಲ ರಜವು ಅದೆಲ್ಲಿ ॥
ಪಾರಿಜಾತದ ರಜವೆಲ್ಲಿ ಎಂಬುದನಾರು ।
ಪರಿಕಿಸಿ ಪೇಳ್ವರು ವನ ವಾತದೊಳು ನಿಂದು ॥ ೨ ॥

ಭಿನ್ನ ಭಾವವ ಬಿಟ್ಟು ನಿನ್ನ ಪೂರ್ಣತೆಯನು ।
ಚೆನ್ನಾಗಿ ನೋಳ್ಪ ಕಣ್‍ ಎನ್ನದಾಗಿರಲಿ ॥
ನಿನ್ನ ಮೈಮೆಯನೆನ್ನ ಕಣ್ಣಿಗೆ ತೋರಿಪ ।
ಪುಣ್ಯವೆ ಅನ್ಯರದಾಗಿರಲೆಂದಿಗು ॥ ೩ ॥

Tuesday, 13 February 2024

ನಿನ್ನ ವಿಲಾಸ - ಹಾಡುಗಳು - ನಿವೇದನ - ಡಿವಿಜಿ

ನಿನ್ನ ವಿಲಾಸ - ಹಾಡುಗಳು - ನಿವೇದನ - ಡಿವಿಜಿ 

(ಮೋಹನ ರಾಗ) 

ನಿನ್ನ ವಿಲಾಸವ–ನರಿವರದಾರೋ । 
ನಿಖಿಲಾದಿಮೂಲಾ ॥ ಪಲ್ಲವಿ ॥ 

ದಯೆಯ ಬೀರುವಾ ದೊರೆ । 
ಭಯವ ತೋರುವಾ ಅರಿ । 
ನಯವ ಸಾರುವಾ ಗುರು । 
ನೀನಲ್ಲದಾರೋ ॥ ಅನುಪಲ್ಲವಿ ॥

ಒಲಿದು ಬೊಂಬೆಯನೆತ್ತಿ 
ಮುದ್ದಿಸಿ ಬಳಿಕದ । 
ಮುಳಿದು ಬಿಸುಡುವಾ 
ಶಿಶು ಲೀಲೆಯ ಪೋಲುವ ॥ ೧ ॥ 

ನಾಟ್ಯರಂಗಕೆ ಬಂದು 
ವಿವಿಧ ವೇಷದಿ ನಿಂದು । 
ಅಳಿಸುವಾ ನಗಿಸುವಾ 
ನಟನ ರೀತಿಯ ಪೋಲ್ವ ॥ ೨ ॥

Monday, 12 February 2024

ಗೋಮಟೇಶ್ವರ - ನಿವೇದನ - ಡಿವಿಜಿ

















ನರನಾಗಿರ್ದೊಡದೆಂ ನರಾಧಿಪತಿಯುಂ ತಾನಾದೊಡೇನೀ ವಸುಂ । 
ಧರೆಯೊಳ್‍ ತೃಷ್ಣೆಯ ಪಾಶಮಂ ಪರಿದು ಕರ್ಮಾವರ್ತಮಂ ದಾಂಟಿ ಜೀ ॥ 
ವರಿಗೆಲ್ಲಂ ಶಮ ದೀಕ್ಷೆಯಂ ಕರುಣಿಪಾ ನಿನ್ನಂದದೌನ್ನತ್ಯದಿಂ । 
ಮೆರೆವಾ ಸಂಯಮಿಯೊರ್ವನೇ ಕೃತಿಯಲೈ ಶ್ರೀಗೋಮಟಾಧೀಶ್ವರಾ ॥ ೧ ॥ 

ಜಗದೊಳ್‍ ಜೀವಿಸವೇಳ್ಕುಮೆಂಬುದುಚಿತಂ ಜೀವಿಪ್ಪ ಸಂರಂಭದೊಳ್‍ । 
ಸೊಗಮಂ ಸಾಧಿಸಮೇಳ್ಕುಮೆಂಬುದುಚಿತಂ ತತ್ಸಾಧನೋದ್ಯೋಗದೊಳ್‍ ॥ 
ಪಗೆಯಂ ಗೆಲ್ಲಲೆವೇಳ್ಕುಮೆಂಬುದುಚಿತಂ ನ್ಯಾಯಂಗಳಿಂತಿರ್ದೊಡಂ । 
ಬಗೆಯಲ್‍ ವಾಂಛೆಯ ಗೆಲ್ವುದೇ ಸುಖಮಲೈ ಶ್ರೀಗೋಮಟಾಧೀಶ್ವರಾ ॥ ೨ ॥ 

ಭೋಗಾಪೇಕ್ಷೆಯ ನೀಗಿಯುಂ ಮುದಿತ ದೀಪ್ತಸ್ವಾಂತನಾಗಿರ್ದು ಮೇಣ್‍ । 
ರಾಗ ದ್ವೇಷ ಗಣಂಗಳಂ ತೊರೆದೊಡಂ ತಾಳಿರ್ದು ಸನ್ಮೈತ್ರಿಯಂ ॥ 
ತ್ಯಾಗಾವಸ್ಥಿತನಾದೊಡಂ ಜನತೆಯಂ ನಿನ್ನಂತೆ ಸಂತೈಸುವಾ । 
ಯೋಗಿಶ್ರೇಷ್ಠನೆ ಧನ್ಯನಲ್ತೆ ಭುವಿಯೊಳ್‍ ಶ್ರೀಗೋಮಟಾಧೀಶ್ವರಾ ॥ ೩ ॥ 

ತನುಭೃತ್ಕೋಟಿಯನಾಳುವ ಪ್ರಕೃತಿಯೀ ವಿಶ್ವಂಭರಾ ಚಕ್ರದೊಳ್‍ । 
ಮನುಜಂಗಗ್ರತೆಯಿತ್ತಳೆಂಬ ನುಡಿಯಂತಿರ್ಕಾ ಮಹಾಮಾಯೆ ತಾಂ ॥ 
ತನಯರ್ಗೊಡ್ಡುವ ಮೋಹಜಾಲವನದಾರ್‍ ಭೇದಿಪ್ಪರಾ ತಂತ್ರದಿಂ । 
ಜನಿಪ ಸ್ಪರ್ಧೆಯ ನೀನಲೈ ಗೆಲಿದವಂ ಶ್ರೀಗೋಮಟಾಧೀಶ್ವರಾ ॥ ೪ ॥ 

ಸುತರಂ ತೋಷಿಸಲಾಟವಾಡುತವರಂ ಕಾಡುತ್ತವರ್‍ ಗೋಳಿಡಲ್‍ । 
ಸ್ಮಿತದಿಂ ನೋಡುವ ತಾಯನೊರ್ವ ತನುಜಂ ತಾಂ ಜಾಣ್ಮೆಯಿಂ ಸೋಲಿಸಲ್‍ ॥ ಅತಿಸಂತುಷ್ಟಿಯನಾಂಪಳಾಕೆಯದರಿಂ ನೀನಂತು ಮಾಯಾ ತಿರ । 
ಸ್ಕೃತಿಯಿಂ ವಿಶ್ವವಿಧಾತ್ರಿಯಂ ತಣಿಸಿದೈ ಶ್ರೀಗೋಮಟಾಧೀಶ್ವರಾ ॥ ೫ ॥ 

ಕಲಿಯೀತಂ ಕಲಿತಿರ್ದೊಡಂ ಕಲೆಗಳಂ ಮೌನವ್ರತಖ್ಯಾತ ದೋ । 
ರ್ಬಲಿಯೀತಂ ಬಲಮುಳ್ಳೊಡಂ ಪ್ರಥಿತ ಸೌಮ್ಯಾಕಾರನೀತಂ ಮಹೋ ॥ 
ಜ್ಜ್ವಲರೂಪೋನ್ನತನೀತನೀ ಸೊಬಗನಾಂತಿರ್ದುಂ ತೃಷಾತೀತನೆಂ । 
ದುಲಿಯುತ್ತಿರ್ಪುವು ನಿನ್ನನೀ ಭುವನಗಳ್‍ ಶ್ರೀಗೋಮಟಾಧೀಶ್ವರಾ ॥ ೬ ॥ 

ಧರೆಯೊಳ್‍ ಪುಟ್ಟಿದೊಡಂ ಧರಾಧರವರಂ ಮೇಲೆಳ್ದು ಕಾರ್ಮೋಡಮಾ । ವರಿಸುತ್ತೆಚ್ಚೊಡಮೆರ್ದೆಯೊಳ್‍ ನಿಲದೆ ಮೇಲೇಳುತ್ತೆ ಸೂರ್ಯಾಪ್ತಿಯಿಂ ॥ 
ಮೆರೆವಂತುನ್ನತಿಗೆಳ್ದ ನಿನ್ನ ತೆರನಂ ಪೌರುಷ್ಯ ಪಾರಮ್ಯಮಂ । 
ಪರಮೋತ್ತುಂಗತೆಯಿಂದೆ ನೀನರಿಯಿಪಯ್‍ ಶ್ರೀಗೋಮಟಾಧೀಶ್ವರಾ ॥ ೭ ॥ 

ಅತ್ಯುಚ್ಚಂಡ ಪರಾಕ್ರಮ ಪ್ರಥಿತನಾ ಚಾಮುಂಡರಾಯಂ ಮಹತ್‍ । 
ಕೃತ್ಯಾದರ್ಶನುಮಾದನಲ್ತೆ ಮಹಿಯೊಳ್‍ ನಿನ್ನಾಖ್ಯೆಯಂ ಬಿತ್ತೆ ಸಂ ॥ 
ಸ್ತುತ್ಯಂ ಮಾನವಮಾನದಂ ಪ್ರಕೃತಿಯಿಂದುಚ್ಚಾಶಯಂ ನೀನೆನಿ । 
ಪ್ಪತ್ಯೌನ್ನತ್ಯವ ತೋರಿ ನಿನ್ನಿರವಿನೊಳ್‍ ಶ್ರೀಗೋಮಟಾಧೀಶ್ವರಾ ॥ ೮ ॥ 

೧೧ನೆಯ ಡಿಸೆಂಬರ್‍ ೧೯೨೩.

ಪದ್ಯ ೩ : ಮುದಿತ-ಸಂತೋಷಪಟ್ಟ; ದೀಪ್ತ-ಪ್ರಕಾಶವುಳ್ಳ; ತ್ಯಾಗಾವಸ್ಥಿತ-ವಿರಕ್ತಿಯಲ್ಲಿರುವ. 
ಪದ್ಯ ೪ : ತನುಭೃತ್‍-ದೇಹ ಧರಿಸಿರುವಂಥಾದ್ದು, ಪ್ರಾಣಿ. ಜನಿಪ-ಹುಟ್ಟುವ; ಸ್ಪರ್ಧೆ- Challenge. 
ಪದ್ಯ ೭ : ಧರಾಧರ-ಪರತ್ವ; ಎರ್ದೆ-ಎದೆ. ಪೌರುಷ್ಯ-ಪುರುಷ ಶಕ್ತಿ; ಉತ್ತುಂಗತೆ-ಉನ್ನತಿ. ಇದನ್ನು ನೋಡಿರಿ : “As some tall cliff that lifts its awful form, Swells from the vale, and midway leaves the storm, though round its breast the rolling clouds are spread, Eternal sunshine settles on its head”. –Goldsmith, The Deserted Village. 
ಪದ್ಯ ೮ : ಪ್ರಥಿತ-ಪ್ರಸಿದ್ಧ; ಆಖ್ಯೆ-ಹೆಸರು, ಕೀರ್ತಿ. ಇರವು-ನೆಲೆ, ನಿಲುವು (ಎರಡರ್ಥವೂ ಹೊಂದುತ್ತದೆ).