(ಅಠಾಣ ರಾಗ)
ವನಸುಮದೊಲೆನ್ನ ಜೀ ।
ವನವು ವಿಕಸಿಸುವಂತೆ ।
ಮನವನನುಗೊಳಿಸು ಗುರುವೇ–ಹೇ ದೇವ ॥ ಪ ॥
ಜನಕೆ ಸಂತಸವೀವ ।
ಘನನು ನಾನೆಂದೆಂಬ ।
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ ॥ ಅ–ಪ ॥
ಕಾನನದಿ ಮಲ್ಲಿಗೆಯು ।
ಮೌನದಿಂ ಬಿರಿದು ನಿಜ ।
ಸೌರಭವ ಸೂಸಿ ನಲವಿಂ ॥
ತಾನೆಲೆಯ ಪಿಂತಿರ್ದು ।
ದೀನತೆಯ ತೋರಿ ಅಭಿ ।
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ॥ ೧ ॥
ಉಪಕಾರಿ ನಾನು ಎ ।
ನ್ನುಪಕೃತಿಯು ಜಗಕೆಂಬ ।
ವಿಪರೀತ ಮತಿಯನುಳಿದು ॥
ವಿಪುಲಾಶ್ರಯವನೀವ ।
ಸುಫಲ ಸುಮ ಭರಿತ ಪಾ ।
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ॥ ೨ ॥
ವನಸುಮದೊಲ್, ವನಸುಮದವೊಲು-ಕಾಡಿನಲ್ಲಿಯ ಹೂವಿನಂತೆ.
ಎಚ್ಚರಿಕೆ : ವನಸುಮದೊಳ್ (-ದೊಳು) ಅಲ್ಲ. “ಲ” ಕಾರಕ್ಕೆ ಬದಲಾಗಿ “ಳ” ಕಾರವನ್ನು ನುಡಿಯಬಾರದು.
ವಿಪರೀತಮತಿ-ತಲೆಕೆಳಗು ಬುದ್ಧಿ. ವಿಪುಲ-ವಿಸ್ತಾರ.
ಪಾದಪ-ಗಿಡ, ಮರ.
No comments:
Post a Comment