ನರನಾಗಿರ್ದೊಡದೆಂ ನರಾಧಿಪತಿಯುಂ ತಾನಾದೊಡೇನೀ ವಸುಂ ।
ಧರೆಯೊಳ್ ತೃಷ್ಣೆಯ ಪಾಶಮಂ ಪರಿದು ಕರ್ಮಾವರ್ತಮಂ ದಾಂಟಿ ಜೀ ॥
ವರಿಗೆಲ್ಲಂ ಶಮ ದೀಕ್ಷೆಯಂ ಕರುಣಿಪಾ ನಿನ್ನಂದದೌನ್ನತ್ಯದಿಂ ।
ಮೆರೆವಾ ಸಂಯಮಿಯೊರ್ವನೇ ಕೃತಿಯಲೈ ಶ್ರೀಗೋಮಟಾಧೀಶ್ವರಾ ॥ ೧ ॥
ಜಗದೊಳ್ ಜೀವಿಸವೇಳ್ಕುಮೆಂಬುದುಚಿತಂ ಜೀವಿಪ್ಪ ಸಂರಂಭದೊಳ್ ।
ಸೊಗಮಂ ಸಾಧಿಸಮೇಳ್ಕುಮೆಂಬುದುಚಿತಂ ತತ್ಸಾಧನೋದ್ಯೋಗದೊಳ್ ॥
ಪಗೆಯಂ ಗೆಲ್ಲಲೆವೇಳ್ಕುಮೆಂಬುದುಚಿತಂ ನ್ಯಾಯಂಗಳಿಂತಿರ್ದೊಡಂ ।
ಬಗೆಯಲ್ ವಾಂಛೆಯ ಗೆಲ್ವುದೇ ಸುಖಮಲೈ ಶ್ರೀಗೋಮಟಾಧೀಶ್ವರಾ ॥ ೨ ॥
ಭೋಗಾಪೇಕ್ಷೆಯ ನೀಗಿಯುಂ ಮುದಿತ ದೀಪ್ತಸ್ವಾಂತನಾಗಿರ್ದು ಮೇಣ್ ।
ರಾಗ ದ್ವೇಷ ಗಣಂಗಳಂ ತೊರೆದೊಡಂ ತಾಳಿರ್ದು ಸನ್ಮೈತ್ರಿಯಂ ॥
ತ್ಯಾಗಾವಸ್ಥಿತನಾದೊಡಂ ಜನತೆಯಂ ನಿನ್ನಂತೆ ಸಂತೈಸುವಾ ।
ಯೋಗಿಶ್ರೇಷ್ಠನೆ ಧನ್ಯನಲ್ತೆ ಭುವಿಯೊಳ್ ಶ್ರೀಗೋಮಟಾಧೀಶ್ವರಾ ॥ ೩ ॥
ತನುಭೃತ್ಕೋಟಿಯನಾಳುವ ಪ್ರಕೃತಿಯೀ ವಿಶ್ವಂಭರಾ ಚಕ್ರದೊಳ್ ।
ಮನುಜಂಗಗ್ರತೆಯಿತ್ತಳೆಂಬ ನುಡಿಯಂತಿರ್ಕಾ ಮಹಾಮಾಯೆ ತಾಂ ॥
ತನಯರ್ಗೊಡ್ಡುವ ಮೋಹಜಾಲವನದಾರ್ ಭೇದಿಪ್ಪರಾ ತಂತ್ರದಿಂ ।
ಜನಿಪ ಸ್ಪರ್ಧೆಯ ನೀನಲೈ ಗೆಲಿದವಂ ಶ್ರೀಗೋಮಟಾಧೀಶ್ವರಾ ॥ ೪ ॥
ಸುತರಂ ತೋಷಿಸಲಾಟವಾಡುತವರಂ ಕಾಡುತ್ತವರ್ ಗೋಳಿಡಲ್ ।
ಸ್ಮಿತದಿಂ ನೋಡುವ ತಾಯನೊರ್ವ ತನುಜಂ ತಾಂ ಜಾಣ್ಮೆಯಿಂ ಸೋಲಿಸಲ್ ॥ ಅತಿಸಂತುಷ್ಟಿಯನಾಂಪಳಾಕೆಯದರಿಂ ನೀನಂತು ಮಾಯಾ ತಿರ ।
ಸ್ಕೃತಿಯಿಂ ವಿಶ್ವವಿಧಾತ್ರಿಯಂ ತಣಿಸಿದೈ ಶ್ರೀಗೋಮಟಾಧೀಶ್ವರಾ ॥ ೫ ॥
ಕಲಿಯೀತಂ ಕಲಿತಿರ್ದೊಡಂ ಕಲೆಗಳಂ ಮೌನವ್ರತಖ್ಯಾತ ದೋ ।
ರ್ಬಲಿಯೀತಂ ಬಲಮುಳ್ಳೊಡಂ ಪ್ರಥಿತ ಸೌಮ್ಯಾಕಾರನೀತಂ ಮಹೋ ॥
ಜ್ಜ್ವಲರೂಪೋನ್ನತನೀತನೀ ಸೊಬಗನಾಂತಿರ್ದುಂ ತೃಷಾತೀತನೆಂ ।
ದುಲಿಯುತ್ತಿರ್ಪುವು ನಿನ್ನನೀ ಭುವನಗಳ್ ಶ್ರೀಗೋಮಟಾಧೀಶ್ವರಾ ॥ ೬ ॥
ಧರೆಯೊಳ್ ಪುಟ್ಟಿದೊಡಂ ಧರಾಧರವರಂ ಮೇಲೆಳ್ದು ಕಾರ್ಮೋಡಮಾ । ವರಿಸುತ್ತೆಚ್ಚೊಡಮೆರ್ದೆಯೊಳ್ ನಿಲದೆ ಮೇಲೇಳುತ್ತೆ ಸೂರ್ಯಾಪ್ತಿಯಿಂ ॥
ಮೆರೆವಂತುನ್ನತಿಗೆಳ್ದ ನಿನ್ನ ತೆರನಂ ಪೌರುಷ್ಯ ಪಾರಮ್ಯಮಂ ।
ಪರಮೋತ್ತುಂಗತೆಯಿಂದೆ ನೀನರಿಯಿಪಯ್ ಶ್ರೀಗೋಮಟಾಧೀಶ್ವರಾ ॥ ೭ ॥
ಅತ್ಯುಚ್ಚಂಡ ಪರಾಕ್ರಮ ಪ್ರಥಿತನಾ ಚಾಮುಂಡರಾಯಂ ಮಹತ್ ।
ಕೃತ್ಯಾದರ್ಶನುಮಾದನಲ್ತೆ ಮಹಿಯೊಳ್ ನಿನ್ನಾಖ್ಯೆಯಂ ಬಿತ್ತೆ ಸಂ ॥
ಸ್ತುತ್ಯಂ ಮಾನವಮಾನದಂ ಪ್ರಕೃತಿಯಿಂದುಚ್ಚಾಶಯಂ ನೀನೆನಿ ।
ಪ್ಪತ್ಯೌನ್ನತ್ಯವ ತೋರಿ ನಿನ್ನಿರವಿನೊಳ್ ಶ್ರೀಗೋಮಟಾಧೀಶ್ವರಾ ॥ ೮ ॥
೧೧ನೆಯ ಡಿಸೆಂಬರ್ ೧೯೨೩.
ಪದ್ಯ ೩ : ಮುದಿತ-ಸಂತೋಷಪಟ್ಟ; ದೀಪ್ತ-ಪ್ರಕಾಶವುಳ್ಳ; ತ್ಯಾಗಾವಸ್ಥಿತ-ವಿರಕ್ತಿಯಲ್ಲಿರುವ.
ಪದ್ಯ ೩ : ಮುದಿತ-ಸಂತೋಷಪಟ್ಟ; ದೀಪ್ತ-ಪ್ರಕಾಶವುಳ್ಳ; ತ್ಯಾಗಾವಸ್ಥಿತ-ವಿರಕ್ತಿಯಲ್ಲಿರುವ.
ಪದ್ಯ ೪ : ತನುಭೃತ್-ದೇಹ ಧರಿಸಿರುವಂಥಾದ್ದು, ಪ್ರಾಣಿ. ಜನಿಪ-ಹುಟ್ಟುವ; ಸ್ಪರ್ಧೆ- Challenge.
ಪದ್ಯ ೭ : ಧರಾಧರ-ಪರತ್ವ; ಎರ್ದೆ-ಎದೆ. ಪೌರುಷ್ಯ-ಪುರುಷ ಶಕ್ತಿ; ಉತ್ತುಂಗತೆ-ಉನ್ನತಿ. ಇದನ್ನು ನೋಡಿರಿ : “As some tall cliff that lifts its awful form, Swells from the vale, and midway leaves the storm, though round its breast the rolling clouds are spread, Eternal sunshine settles on its head”. –Goldsmith, The Deserted Village.
ಪದ್ಯ ೮ : ಪ್ರಥಿತ-ಪ್ರಸಿದ್ಧ; ಆಖ್ಯೆ-ಹೆಸರು, ಕೀರ್ತಿ. ಇರವು-ನೆಲೆ, ನಿಲುವು (ಎರಡರ್ಥವೂ ಹೊಂದುತ್ತದೆ).
No comments:
Post a Comment