Saturday, 24 February 2024

ಆತ್ಮಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

ಆತ್ಮಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

‘ಆತ್ಮಗೀತೆ’ ಯ ಪ್ರಸ್ತಾವನೆ

ಆತ್ಮಗೀತೆಯು ವಾಲ್ಟ್ ‍ವ್ಹಿಟ್‍ಮನ್‍ (Walt Whitman) ಎಂಬ ಆಂಗ್ಲ ಭಾಷಾ ಕವಿಯ “ಸಾಂಗ್‍ ಆಫ್‍ ಮೈ-ಸೆಲ್ಫ್‍” (ಸ್ವಾತ್ಮವಿಷಯಕವಾದ ಹಾಡು) ಎಂಬ ಕೃತಿಯ ಕೆಲವು ವಾಕ್ಯಗಳ ಅನುವಾದ.

ವ್ಹಿಟ್‍ಮನ್‍ ಕವಿ ಅಮೆರಿಕದವನು. ಆತನು ಕ್ರಿ.ಶ. ೧೮೧೯ ರಿಂದ ೧೮೯೨ರ ವರೆಗೆ ಬಾಳಿದನು. ಆತನು ವಿರಕ್ತನಾಗಿದ್ದುಕೊಂಡು ಬಡವರೂ ಸಾಮಾನ್ಯ ವೃತ್ತಿಗಳಲ್ಲಿರತಕ್ಕವರೂ ದೀನರೂ ಆದ ಜನರಿಗೆ ಆಪ್ತ ಮಿತ್ರನಾಗಿ, ಪರತತ್ತ್ವ ವಿಚಾರಕನಾಗಿ, ತನ್ನ ಅಂತರಾತ್ಮನಿಗೆ ತೋರಿಬಂದ ತತ್ತ್ವಗಳನ್ನು ಉಪಪಾದಿಸುವುದರಲ್ಲಿ ಯಾರಿಗೂ ಹೆದರದವನಾಗಿ, ಯಾವ ನಿರ್ಬಂಧಕ್ಕೂ ಸಿಕ್ಕದವನಾಗಿ ಆಯುಷ್ಯವನ್ನು ಕಳೆದನು.

ಈ ಆತ್ಮಗೀತೆಯ ವಚನಗಳಿಗೆ ಸಮಾನಗಳಾದ ವಚನಗಳನ್ನು ಈಶಾವಾಸ್ಯಾದ್ಯುಪನಿಷತ್ತುಗಳಲ್ಲಿಯೂ ಭಗವದ್ಗೀತಾದಿ ಶಾಸ್ತ್ರಗಳಲ್ಲಿಯೂ ಹೇರಳವಾಗಿ ಕಾಣಬಹುದು. ಇದರ ಮೊದಲನೆಯ ವಿಭಾಗದಲ್ಲಿ ಪರಮಾತ್ಮನ ಸರ್ವವ್ಯಾಪಕತೆಯೂ ಅದರಿಂದ ಬೋಧಿತವಾಗುವ ಸರ್ವ ಸಮತಾ ನೀತಿಯೂ ಸೂಚಿತವಾಗಿವೆ. ಎರಡನೆಯ ವಿಭಾಗದಲ್ಲಿ ಮಾನವ ವ್ಯಕ್ತಿಯು ಅವನ ಸುತ್ತಲೂ ಇರುವ ಸಮಸ್ತ ಪ್ರಪಂಚಕ್ಕೆ ಎಷ್ಟು ಮಹಾ ಋಣಿಯಾಗಿದ್ದಾನೆ. ಹೇಗೆ ಅದರ ಅಂಶಮಾತ್ರನಾಗಿದ್ದಾನೆ, ಎಂಬುದು ಸೂಚಿತವಾಗಿದೆ. ಮೂರನೆಯ ಮತ್ತು ನಾಲ್ಕನೆಯ ವಿಭಾಗಗಳಲ್ಲಿ ಕ್ರಮವಾಗಿ ಸ್ಥಲಚರಗಳಾದ ಮತ್ತು ಜಲಚರಗಳಾದ ಜೀವರಾಶಿಗಳೊಡನೆ ಮನುಷ್ಯನು ಐಕ್ಯವನ್ನು ಅನುಸಂಧಾನ ಮಾಡಬೇಕೆಂದು ಸೂಚಿತವಾಗಿದೆ.

ಆತ್ಮಗೀತೆ



ನಾನವಿದಿತಾಖಂಡ ಪರಸತ್ತ್ವದೊಳಕೆ । 
ಮಾನವರನೆಲ್ಲರಂ ಕರೆವೆ ಸುಖಿಪುದಕೆ ॥ 
ಆತ್ಮತಾನಮಿತಬಲನಾತ್ಮ ತಾಂ ಪರಮಂ । 
ಆತ್ಮ ತಾಂ ಮೃತಿರಹಿತನಾತ್ಮ ತಾಂ ಪೂರ್ಣಂ ॥ 
ಎನ್ನಾತ್ಮವನೆ ನಿಖಿಲರಲ್ಲಿ ಕಾಣುತಿಹೆಂ । 
ಎನ್ನ ಗುಣದೋಷಗಳನವರೊಳೆಣಿಸುತಿಹೆಂ ॥ 
ಪಿರಿಯರುಂ ಕಿರಿಯರುಂ ಸಮರೆನ್ನ ಮನದೊಳ್‍ । 
ಸರಿಯೆಲ್ಲರವರವರ ಕಾಲ ತಾಣಗಳೊಳ್‍ ॥ 
ನರನವೊಲು ನಾರಿಯುಂ ಸಂಭಾವ್ಯಳಲ್ತೆ । 
ಪುರುಷನಂ ಪೆತ್ತವಳೆ ಸಂಮಾನ್ಯಳಲ್ತೆ ॥ 

೨ 

ಎನಿತೋ ಕಾಲದ ಫಲದಿನಿಂತು ಜನ್ಮಿಸಿಹೆಂ । 
ಎನಿಬರೋ ಉಪಕರಿಸೆ ನಾನಿಂತು ಬೆಳೆದೆಂ ॥ 
ಇಂತೆನಿತೊ ಜೀವಿಗಳುಮೆನಿತೊ ಲೋಕಗಳುಂ । 
ತಂತಮ್ಮ ನಿಯಮಗಳೊಳಿಹವು ಸಂತತಮುಂ ॥ 
ಈ ವಿಧಿಯೊಳನ್ಯೋನ್ಯ ಸಂಬದ್ಧಮಾಗಿ । 
ಈ ವಿಶ್ವದೊಳ್‍ ಸಕಲಮಿರೆ ಚಿತ್ರಮಾಗಿ ॥ 
ಇದನೆಲ್ಲ ಭೇದಿಸುತೆ ಮುತ್ತಿಕೊಂಡಿಹುವು । 
ಮೊದಲು ಕೊನೆಯಿಲ್ಲದಿಹ ಕಾಲ ದಿಕ್ಕುಗಳು ॥ 
ಕಾಲ ದೇಶಂಗಳನತಿಕ್ರಮಿಸಿ ನಿತ್ಯಂ । 
ಸ್ಥೂಲ ಸೂಕ್ಷ್ಮಂಗಳೊಳ್‍ ವ್ಯಾಪಿಸುತೆ ಸತ್ಯಂ ॥ 
ಪರಮಾತ್ಮನಿಹನು ನಿಲ್ಲಿಸುತ ಕೊಲ್ಲಿಸುತುಂ । 
ಪರಿಪೂರ್ಣನಾತನಾತನೆ ಸರ್ವಶಕ್ತಂ ॥ 
ಆತನುಚ್ಛ್ವಾಸಗಳೆ ಸಕಲ ರೂಪಗಳುಂ ।
ಆತನಿಂ ಪುಟ್ಟುವುವೆ ಸಕಲ ಶಬ್ದಗಳುಂ ॥ 
ಆತನಂ ಕಾಣಲ್ಕೆ ಕಷ್ಟವೇನಿಹುದೈ । 
ಆತನಿಂ ಬೇರೊಂದು ವಸ್ತುವೆಲ್ಲಿಹುದೈ? ॥ 

೩ 

ವನ ನದೀ ಗಿರಿ ನಿವಹದಿಂ ಮೆರೆವ ಧರೆಯೇ । 
ದಿನಪ ಶಶಿ ಕಿರಣಗಳಿನೆಸೆಯುತಿಹ ತಿರೆಯೇ ॥ 
ಎನಗೊಲವನಿತ್ತು ಸಲಪುವ ತಾಯೆ ಬಂದೆಂ । 
ನಿನಗೆನ್ನ ಸಂಪ್ರೀತಿ ಪುಷ್ಪಮಂ ತಂದೆಂ ॥ 

೪ 

ವಾರಿಧಿಯೆ ನಿನ್ನೊಳಿದೊ ಸೇರುವೆನು ಬೇಗ । 
ಬಾರೆಂದು ನಿನ್ನಲೆಗಳುಲಿಯುತಿಹುವೀಗ ॥ 
ನಿನಗೆನ್ನೊಳೆನಿತು ಸಂಪ್ರೀತಿಯಿಹುದಯ್ಯ । 
ಎನಗಮಂತೆಯೆ ನಿನ್ನೊಳನುರಾಗವಯ್ಯ ॥ 
ನಿನ್ನೊಳೈಕ್ಯವ ಪಡೆಯೆ ಕಾದಿರ್ಪೆನಯ್ಯ । 
ಎನ್ನನೀ ತೀರದಿಂದಾಕರ್ಷಿಸಯ್ಯ ॥ 
ನಿನ್ನ ವೀಚಿಗಳೊಳಾನುಯ್ಯಲಾಡುವೆನೈ । 
ನಿನ್ನೊಳಾಂ ಜಲಕೇಳಿಯಾಡಿ ನಲಿಯುವೆನೈ ॥ 
ನಿನ್ನಯ ಶ್ವಾಸಂಗಳಿನಿತು ಭೀಷಣಮೇಂ । 
ನಿನ್ನುಪ್ಪುನೀರು ಜೀವಿಗಳ ಕಣ್ಣೀರೇಂ ॥ 
ನೀನೆನಿಬರಿಗೆ ರುದ್ರಭೂಮಿಯಾಗಿಹೆಯೈ । 
ನೀನೆನಿತು ಗಂಭೀರನೆನಿತು ಚಂಚಲನೈ ॥ 
ಏಕರೂಪನನೇಕ ರೂಪನಾಂ ನಿನ್ನೊಲ್‍ । 
ಏಕಮಾನಸನಾಗಿ ಬೆರೆವೆನಾಂ ನಿನ್ನೊಳ್‍ ॥

No comments:

Post a Comment