ಶ್ರವಣಕೆ ಸಿಲುಕದ ಲಲಿತಾ ।
ರವ ಸುಖಮಂ ರಸನೆಗೊದವದಮೃತ ದ್ರವಮಂ ॥
ಎವೆಯಿಕ್ಕದ ನಯನಗಳಿಂ ।
ಸವಿವುದು ನೀಮೆಂಬ ಮಾಯಗಾತಿಯರಿವರಾರ್ ॥ ೧ ॥
ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀಂ
ನೃತ್ಯ ಲಾಸ್ಯದಿನಾರನೊಲಿಸುತಿರುವೆ ।
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ
ದಾರ ಚರಿತೆಗಳ ಶುಕಿಗುಸಿರುತಿರುವೆ ।
ಮುಗ್ಧ ಮೋಹನ ವದನೆ ಮುಕುರದೊಳ್ ನೋಡಿ ನೀ
ನಾರ ನೆನೆದಿಂತು ನಸುನಗುತಲಿರುವೆ ॥
ಪ್ರಣಯ ಪ್ರರೋಹೆ ನೀಂ ಪ್ರಿಯತರಾಕೃತಿಯಿಂದೆ
ರುಷೆಯನಿಂತಾರೊಳಭಿನಯಿಸುತಿರುವೆ ॥
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ ।
ದೇವದೇವನ ಸೇವೆಗೈತರ್ಪ ಸಾಧುಕುಲಮಂ ।
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ ॥ ೨ ॥
ಇನ್ನೆವರಮೊಲಿದು ಬಾರದ ನಿಮ್ಮ ಮನದಿನಿಯ
ನಿನ್ನು ಬಹನೆಂದು ನೀಂ ತಿಳಿವುದೆಂತು ।
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯೀ
ವಿಷಮ ಸಮಯದಿ ನಿಮಗೆ ದೊರೆವುದೆಂತು ।
ನಿಮ್ಮ ವದನದ್ಯುತಿಗೆ ಮರುಳಾಗಿ ಸೋಲದನ
ರಸಜೀವಿಯೆನ್ನುತಾದರಿಪುದೆಂತು ।
ನಿಮ್ಮ ನೂಪುರ ರವಕೆ ಬೆರಗಾಗಿ ನಿಲ್ಲದನ
ಭಾವಜ್ಞನೆಂದು ನೀಂ ಬಗೆವುದೆಂತು ॥
ರೂಪಮಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ ।
ರೂಪ ವಿಭವದಿನಿತ್ತಲೈತಂದು ಮೆರೆಯೆ ನಿಮ್ಮ ।
ಲಾಸ ಲಾವಣ್ಯಗಳ್ ಧರೆಯಿಂದೆ ಪಾರ್ವುವೆನುತೆ ।
ಮರೆಯಿಂದೆ ಕಂಡು ನಿಮ್ಮೊಲವಿಂದೆ ನಲಿವನೇನೋ ॥ ೩ ॥
ಶ್ರುತ ಗಾನಮಭಿರಾಮಮಾದೊಡಶ್ರುತಗಾನ
ಮಭಿರಾಮತರಮೆನುತೆ ರಸಿಕರೊಸೆವರ್ ।
ರಾಮಣೀಯಕ ಕುಲುಮೆ ನಿಮ್ಮೆದೆಯ ನುಡಿ ಕಿವಿಯ
ನಾನದೊಡಮೆಮ್ಮೆದೆಯ ಸೇರಲರಿಗುಂ ।
ಅದರಿಂದಮಲ್ತೆ ನಿಮ್ಮಭಿಮತಂಗಳನರಿತು
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್ ।
ವರ್ಷಶತಕಗಳಿಂದೆ ಕುಂದದಿಹ ಲಾವಣ್ಯ
ದಂತರಂಗವನಿಂತು ಬಗೆವೆನೀಗಳ್ ॥
ಬಿದಿಯ ಕರ ಚಾತುರಿಯೊಳನಿತಿನಿತು ಸುಳಿದು ಸರಿವ ।
ಮನುಜ ಮಾನಸದೊಳತಿ ಚಿತ್ರದಿಂ ಚಲಿಸಿ ಮೆರೆವ ।
ಭುವನ ಜೀವನ ಸಸ್ಯಕಮೃತ ಬಿಂದುಗಳನೆರೆವ ।
ಪರತತ್ತ್ವ ಮಾಧುರಿಯನಿನಿಸು ನೀಂ ತೋರ್ಪಿರಲ್ತೆ ॥ ೪ ॥
ಆನಂದನಿಧಿಯಾ ಪರಾತ್ಪರನೆನಲ್
ಜಗದೊ ಳಾನಂದವೀವರಂ ಕಳೆಯಲಹುದೇಂ ।
ಪ್ರೇಮಮಯ ಮೂರ್ತಿಯಾ ಪರದೇವನೆನುತಿರಲ್
ಪ್ರೇಮಾಂಕುರಂಗಳಂ ಮುರಿಯಲಹುದೇಂ ।
ಸೌಂದರ್ಯ ಸರ್ವಸ್ವ ನಿಧಿಯಾತನೆನುತಿರಲ್
ಸುಂದರಾಕಾರರೊಳ್ ಮುಳಿಯಲಹುದೇಂ ॥
ಜೀವನಾಧಾರನವನೆನುತೆ ಪೊಗಳುತ್ತಿರಲ್
ಜೀವನೋಜ್ಜ್ವಲೆಯರಂ ಪಳಿಯಲಹುದೇಂ ॥
ಜಗದುದಯಕಾರಣನ ಮೈಮೆಗಳನರಿತು ನೆನೆದು ।
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ ।
ಸೊಗಮಿನಿಸು ತೋರಿ ಸಂಸೃತಿಪಥಂ ಸುಗಮಮೆನಿಸಲ್ ।
ಅದುವೆ ದೇವಂಗೆ ನೀಮೆಸಗುವಾ ಸೇವೆಯಲ್ತೆ ॥ ೫ ॥
ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು
ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ ।
ವಿಗತ ಸೌಮನಸರುಂ ವಿಪರೀತ ಚರಿತರುಂ
ವಿಮುಖತೆಯನಾನಲದರಿಂದೆ ನಿಮಗೇಂ ।
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು
ಪದವನನು ಕರಿಪ ವಾದಿತ್ರಗಳ್ ಸೂಕ್ಷ್ಮದಿಂದೆ ।
ನೆಳಲನಿತ್ತೀ ಲತಾವಳಿ ನಿಮ್ಮನಾದರಿಸು
ಗೆಂದಿಗುಂ ತಂಬೆಲರ ಸುರಭಿಯಿಂದೆ ॥
ನಗುತ ನಲಿಯುತ ಮೆರೆದು ಹಾವ ಭಾವಗಳಿನೆಸೆದು ।
ಮಂಜು ಜಲ್ಪವ ತೋರಿ ಮುಗ್ಧ ವೀಕ್ಷಣವ ಬೀರಿ ।
ಕಠಿನರಾಗದೆ ಕಾಲ ದೌಷ್ಟ್ಯದಿಂ ಕುಂದುವಡದೆ ।
ಶುಷ್ಕ ಹೃದಯರ್ಗೆ ನೀಂ ಸೌಹೃದವ ನೀಡುತಿಹುದೌ ॥ ೬ ॥
ಅವ್ಯಕ್ತ ನಿನದದಿಂದಕಲಂಕಿತಾಂಗದಿಂ
ದನ್ಯೂನ ತರುಣತೆಯಿನಮಿತಯಶದಿಂ ।
ಚಿರ ಕಾಲಮೆಸೆವುದೌ ಚಿತ್ತವೇಧನಿಯರಿರ
ಕುದಿವ ಲೋಕಕೆ ಮುದದ ತಣಿವ ಬೀರಿ ।
ಸೌಂದರ್ಯಮೇ ವಿಶ್ವತತ್ತ್ವಮಾ ಪರತತ್ತ್ವ
ಭಾಸಮೇ ಸೌಂದರ್ಯಮೆನುತ ಸಾರಿ ।
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ ॥
ಪೊಳೆಯಿರೌ ಸರಸ ಜೀವನ ಮಂತ್ರ ಗುರುಗಳೆನಿಸಿ ।
ಪಳಿಯಿರೌ ಮಧುರ ಭಾವವ ಪಳಿವ ವಿಕೃತ ಮತಿಯಂ ।
ಕಳೆಯಿರೌ ರಸಕಲಾವಿಮುಖತೆಯ ಜನದ ಮನದಿಂ ।
ಬೆಳೆಯಿರೌ ಪ್ರೇಮ ಧರ್ಮೋದ್ಧರಣ ವಿಧಿಯೊಳೆಂದುಂ ॥ ೭ ॥
೧೧ನೆಯ ಡಿಸೆಂಬರ್ ೧೯೨೩
ಪದ್ಯ ೧ : ಶ್ರವಣ-ಕಿವಿ; ಆರವ (ರವ) ಧ್ವನಿ, ನಾದ; ರಸನೆ-ನಾಲಗೆ. ಕಿವಿಗೂ ನಾಲಗೆಗೂ ದೊರೆಯಲಾರದ ಒಂದು ಇಂಪು ಇಲ್ಲಿ ಕಣ್ಣಿನ ಮೂಲಕ ದೊರೆಯುವುದಾಗಿದೆ.
ಪದ್ಯ ೨ : ವಲ್ಲರಿ-ಹಬ್ಬಿದ ಬಳ್ಳಿ; ಲಾಸ್ಯ-ಗೀತಾಭಿನಯ ಸಮೇತ ನರ್ತನ. ಮಂಜೂಷಾ-ಕೈಪೆಟ್ಟಿಗೆ, ಡಬ್ಬಿ. ಪ್ರರೋಹ-ಮೊಳಕೆ; ರುಷೆ-ರೋಷ.
ಪದ್ಯ ೩ : ನೂಪುರ-ಕಾಲಂದುಗೆ, ಗೆಜ್ಜೆ.
ಪದ್ಯ ೪ : ಶ್ರುತ-ಕೇಳಿಸಿದ, ಕಿವಿಮುಟ್ಟಿದ; ಅಶ್ರುತ-ಕೇಳಿಸದ, ಕಿವಿತಾಕದ; ಅಭಿರಾಮತರಮ್-ಹೆಚ್ಚು (More) ಮನೋಹರವಾದದ್ದು. “Heard melodies are sweet, but those unheard Are sweeter”. –Keats, Ode on A Grecian Urn. ಎದೆಯ ನುಡಿ–ಅಂತರಂಗದ ಮಾತು, ಹೃದಯವಾಣಿ; ಬಿದಿಯ–ವಿಧಿಯ, ಸೃಷ್ಟಿಕರ್ತನ; ಕರಚಾತುರಿ-ಕೈಚಳಕ.
ಪದ್ಯ ೫ : ಆನಂದನಿಧಿ... ಪ್ರೇಮಮಯಮೂರ್ತಿ...
“ತಸ್ಯ ಪ್ರಿಯಮೇವ ಶಿರಃ । ಮೋದೋ ದಕ್ಷಿಣಃ ಪಕ್ಷಃ । ಪ್ರಮೋದ ಉತ್ತರಃ ಪಕ್ಷಃ । ಆನನ್ದ ಆತ್ಮಾ ॥ –ತೈತ್ತಿರೀಯ ಉಪನಿಷತ್ತು II - ೫.
To receive the posts on your personal email, pls subscribe to https://groups.google.com/g/todayskagga
No comments:
Post a Comment