Wednesday, 31 January 2024

ಸರ್ವಂ ಶಿವಂ - ಕೇತಕೀವನ - ಡಿವಿಜಿ

ಭಾನುಬಿಂಬದೊಳಾರೊ
ಎನ್ನೆದೆಯೊಳವನು ।
ನಾನೆಂಬವನದಾರೊ
ನೀನುಮವನು ॥

ಬಾನ ಗಾಳಿಯೊಳಾರೊ
ಎನ್ನುಸಿರೊಳವನು ।
ನಾನೆನುತ್ತಿಹನಾರೊ
ನೀನುಮವನು ॥

Monday, 29 January 2024

ಆಡೋಣ, ಹಾಡೋಣ ಬಾ - ಕೇತಕೀವನ - ಡಿವಿಜಿ

ಯಾರೆಲ್ಲಿ ಹೋದರೇನು
ಊರು ಕೊಳ್ಳೆಯಾದರೇನು
ನಾರಿ ಮೀಸೆ ತೊಟ್ಟರೇನು
ಆಡೋಣ ಹಾಡೋಣ ಬಾ- ಗಿಣಿಯೇ
ನಾಡೇನು ಕಾಡೇನು ಬಾ.

ಲೋಕವೆಂಬುದೊಂದು ಸಂತೆ
ಬೇಕು ಬೇಡಗಳ ಕಂತೆ
ಸಾಕು ನಮಗಾ ಚಿಂತೆ
ಆಡೋಣ ಹಾಡೋಣ ಬಾ-ಗಿಣಿಯೇ
ನಾಡೇನು ಕಾಡೇನು ಬಾ.

ಚಿಂತೆಪಟ್ಟು ಫಲವೇನು
ಪಂತ ತೊಟ್ಟು ಗೆಲುವೇನು
ಸಂತಸಕ್ಕೆ ಬೆಲೆಯೇನು
ಆಡೋಣ ಹಾಡೋಣ ಬಾ-ಗಿಣಿಯೇ
ನಾಡೇನು ಕಾಡೇನು ಬಾ.

ಗಗನ ಬರಿ ನೀಲ ಕಡಲು
ಮುಗಿಲ ಮೂಟೆ ನಮ್ಮೊಡಲು
ದುಗುಡ ಬಿಡು ಸೊಗವ ತೊಡು
ಆಡೋಣ ಹಾಡೋಣ ಬಾ-ಗಿಣಿಯೇ
ನಾಡೇನು ಕಾಡೇನು ಬಾ.

Saturday, 20 January 2024

123

ಕೇಳೌ ಹೃದಯೇಶ್ವರಿ ನೀ- ।
ನಾಲಿಪುದಾನೊರೆವ ಧರ್ಮಸೂಕ್ಷ್ಮವ ದಯಿತೇ ॥
ತಾಳಳಲನ್‍, ಎದೆಯ ಸಂತವಿ- ।
ಡಾಲೋಚಿಸು ತತ್ತ್ವಗತಿಯ ಶಾಂತದ ಮನದಿಂ ॥ ೩೮


ಜಾನಕಿ ನೀಂ ಸುಖದುಃಖಸ- ।
ಮಾನಸ್ವೀಕಾರೆಯೆಂದು ನಾನೆಣಿಸಿರ್ದೆನ್‍ ॥
ಮಾನವಸಾಮಾನ್ಯರವೊಲೆ ।
ನೀನುಂ ವೈಷಯಿಕ ಮೋಹ ಮೋಕಾವೃತಳೇಂ? ॥ ೩೯

ಧರಣಿಜೆ ಧರ್ಮದ ತುಲೆಯೊಳ್‍ ।
ಪುರುಷಂ ನಿಜಭೋಗ ಲೋಕಸಂಸ್ಥಿತಿಯೆಂಬೀ ॥
ಎರಡು ಧನಂಗಳ ತೂಗಿಸಿ ।
ಗುರುತರವಂ ಗ್ರಹಿಪುದಲ್ತೆ ಸುಕೃತ ವಿವೇಕಂ? ॥ ೪೦

ದೊರೆಯ ಕುಟುಂಬಂ ಪ್ರಜೆ, ಪಾ- ।
ಮರರೋ ಪಂಡಿತರೊ ಆರೊ ಪರಿಪಾಲ್ಯರವರ್‍ ॥
ಗುರುವೊಲು ಗೃಹಪತಿವೊಲವಂ ।
ಪರಿರಕ್ಷಿಪುದವರ ಧರ್ಮಸಮಯಾದರಮಂ ॥ ೪೧

ಜನದೊಳ್‍ ದಂಪತಿಜೀವನ- ।
ಧನುರಾಗವ ಶಂಕೆ ಸೋಕದಂತೆಸಗಲ್‍ ಮೇ- ॥
ದಿನಿಪಾಲಪಾಲೆಯರ್‍ ತಾಂ ।
ಮನೆಬದುಕಂ ಬಲಿಯ ಕುಡುವುದೆನೆ ತಪ್ಪುವರೇಂ? ॥ ೪೨

ಅನ್ಯಾಯವ ನಿನಗೆಸಗದೆ ।
ನಾಣ್ನುಡಿಗಾಂ ಕಿವಿಯ ಕುಡದೆ ನಡೆದಿರಲಾಗಳ್‍ ॥
ಮುನ್ನಿನ ಧರ್ಮಾಚರಣೆಗೆ ।
ಮನ್ನಣೆಯಂ ನೀಡುತಿರ್ಕುಮೇಂ ಜಾನಪದಂ? ॥ ೪೩

ತ್ಯಾಗಕೆ ನಾಂ ಮನಮಿಲ್ಲದೆ ।
ಲೋಗರ ಮಾತೇನದೆಂದುಪೇಕ್ಷಿಸಿ ಬಾಳ್ದುಂ ॥
ಬೇಗುದಿಯದುಸಿರುತಿರ್ದೆವೆ? ।
ಬಾಗಿಸದೇಂ ಚಿಂತೆ ನಮ್ಮ ಶಿರಗಳನಂದುಂ? ॥ ೪೪

ಸಲುವುದಬಲರಿಗೆ ಮರುಕಂ ।
ಬಲವಂತರ್ಗುಚಿತಮಾತ್ಮನಿಗ್ರಹನಿಯಮಂ ॥
ಎಳೆಗೂಸನೆತ್ತಿಕೊಳುವಳು ।
ಬೆಳೆದವನಂ ತಾಯಿ ನಡೆಯ ಪೇಳಳೆ ನಲವಿಂ? ॥ ೪೫

ಊರ್ಮಿಳೆಯೇಂ ಲಕ್ಷ್ಮಣನೊಳು ।
ಕೂರ್ಮೆಯನಿಡದವಳೆ? ಬಗೆದು ನೈಜಸ್ಥಿತಿಯಂ ॥
ಧರ್ಮವನರಿತದರರ್ಚೆಗೆ ।
ನಿರ್ಮಲಜೀವಿತವನಿತ್ತಳವಳೆ ಸುತೃಪ್ತಳ್‍ ॥ ೪೬

ನಿನಗದಕಿಂತಾದುದೇಂ? ।
ವನವಾಸಕ್ಲೇಶ ನಿನಗೆ ಪೊಸತೆರದೆಡರೇಂ? ॥
ಎಣಿಸೆಯ ನಿನ್ನಂತೆಯೆ ನಾ- ।
ನನುಭವಿಸಿಹೆನೆಂದು ನಿನ್ನ ವಿವಸಿಸಿದಳಲಂ? ॥ ೪೭

ಚಿರದಿಂ ರಾಜ್ಯವ ಕಾಯ್ದು ಜಾನಪದದಂಗೀಕಾರದಿಂ ನಿಂದು ಸು- ।
ಸ್ಥಿರಮಾರ್ಗಂಗಳೊಳೆಲ್ಲರಂ ನಡೆಯಿಸುತ್ತಿರ್ಪಾರ್ಷಧರ್ಮಂಗಳೊಳ್‍ ॥
ಧರಣೀಸಂಭವೆ ನಿನ್ನ ನನ್ನ ಕಥೆಯಿಂ ಲೋಗರ್ಗೆ ಸಂದೇಹಮಂ- ।
ಕುರಿಸಲ್ಕಾಗದವೋಲು ನಾಮಿರುವುದೆಂದಾಂ ಗೈದೆನಾ ಕ್ರೂರಮಂ ॥ ೪೮

ಮಾತೆಕ್ಷ್ಮಾದೇವಿಸರ್ವಂಸಹೆಶಮಮಯೆಸಾಕ್ಷಾತ್‍ ಕ್ಷಮಾಮೂರ್ತಿನಿನ್ನಾ ।
ತಾತಂ ರಾಜರ್ಷಿಮುಖ್ಯಂ ಜನಕ ನರವರಂ ಬ್ರಹ್ಮಯೋಗಪ್ರತಿಷ್ಠಂ ॥
ಸೀತೇ ನೀಂ ತ್ಯಕ್ತಸರ್ವಸ್ಪೃಹೆಯವರವೊಲೇ ಲೌಕಿಕದ್ವಂದ್ವ ಭೋಗಾ- ।
ತೀತಾಂತರ್ಭಾವೆಯೆಂದಾನೆಣಿಸಿದೆನದು ತಾನಾಯಿತೆನ್ನ ಪ್ರಮಾದಂ ॥

Friday, 19 January 2024

ಭಾಗ 13 - ಉತ್ತರಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)



ಶ್ರೀ ಸೀತಾರಾಮ ಭಗವಂತನ ಕೃಪೆಯಿಂದ ಸನ್ಮಿತ್ರರಾದ ಶ್ರೀಮಾನ್‍ ಡಿ. ಸಿ. ಅನಂತರಾಮಯ್ಯನವರೂ ಅವರ ಸ್ನೇಹಿತರೂ ಶ್ರೀಮದ್ರಾಮಾಯಣ ಪ್ರಕಾಶನ ಸಮಿತಿಯ ಮೂಲಕ ಪ್ರಾರಂಭ ಮಾಡಿದ ಮಹಾಕಾರ್ಯವು ಈಗ ಸಾಂಗವಾಗಿ ನೆರವೇರಿತು. ಈ ಉತ್ತರಕಾಂಡದ ಪ್ರಕಟನೆಯಿಂದ ಅದು ಸಾರ್ಥಕವಾಗಿ ಸಮಾಪ್ತಿ ಪಡೆದಿದೆ. ಇದಕ್ಕಾಗಿ ಸಮಿತಿಯವರಿಗೆ ಕನ್ನಡ ಮಹಾಜನರ ಅಭಿನಂದನೆ, ಕೃತಜ್ಞತೆಗಳು ಸಲ್ಲುತ್ತವೆ. ಭಗವಂತನು ಶ್ರೀಮದ್ರಾಮಾಯಣ ಪ್ರಕಾಶನ ಸಮಿತಿಯವರಿಗೆ ಆಯುರಾರೋಗ್ಯ ಐಶ್ವರ್ಯಾದಿ ಸಕಲ ಶುಭಗಳನ್ನೂ ಅನುಗ್ರಹಿಸಲಿ.

ವಿದ್ವನ್ಮಿತ್ರರಾದ ಶ್ರೀ ರಂಗನಾಥ ಶರ್ಮಾರವರ ಉಪಕಾರವನ್ನು ಇಲ್ಲಿ ಸ್ಮರಿಸುವುದು ಕರ್ತವ್ಯವಾಗಿದೆ. ಬೇರೆ ಸಂದರ್ಭವೊಂದು ನಡೆಯದಿದ್ದರೆ, ನಮ್ಮ ಸಂತೋಷವನ್ನೂ ಕೃತಜ್ಞತೆಯನ್ನೂ ಅರ್ಪಿಸುವುದರಲ್ಲಿ ಗಂಟಲು ಕಟ್ಟುತ್ತಿರಲಿಲ್ಲ. ಅವರಿಗೆ ಈಚೆಗೆ ಉಂಟಾಗಿರುವ ನಷ್ಟ ಬಹುದೊಡ್ಡದು. ಅವರ ಪತ್ನಿಯವರು ವಾಸ್ತವವಾಗಿ ಈ ಸಾರಸ್ವತ ಕಾರ್ಯದಲ್ಲಿ ಅವರಿಗೆ ನೆರವಾಗಿ ಸಹಧರ್ಮಿಣಿ ಎಂಬ ವಿಶೇಷಣವನ್ನು ಸಾರ್ಥಕ ಮಾಡುವವರಾಗಿದ್ದರೆಂಬುದನ್ನು ನಾನು ವೈಯಕ್ತಿಕವಾಗಿ ಬಲ್ಲೆ. ದೈವವು ಇಂಥ ವಿದ್ವಾಂಸರನ್ನೂ ಪರಿಶುದ್ಧ ಚರಿತ್ರರನ್ನೂ ಕೂಡ ಬಿಟ್ಟಿಲ್ಲವಲ್ಲ–ಎಂಬುದು ನನ್ನ ಕೊರತೆ.

ಆದರೆ, ದೈವವು ಯಾರನ್ನು ಬಿಟ್ಟಿದೆ? ಶ್ರೀರಾಮನನ್ನೂ ಶ್ರೀಕೃಷ್ಣನನ್ನೂ ಸಹ ಅದು ಪರೀಕ್ಷಿಸದೆ ಬಿಟ್ಟಿಲ್ಲ. ಶ್ರೀರಾಮನಿಗೆ ಎರಡು ಸಲ ವಿರಹಪ್ರಾಪ್ತಿಯಾದದ್ದೂ, ಇತರ ಕಷ್ಟಗಳು ಒದಗಿದ್ದೂ ಪ್ರಸಿದ್ಧವಾಗಿವೆ. ಶ್ರೀಕೃಷ್ಣನೂ ಸಹ ರೋಗಪೀಡಿತನಾಗಿದ್ದದ್ದು, ಆಂಗಿರಸ ಮಹರ್ಷಿಯು ಆತನನ್ನು ಕಂಡು ಹಿತೋಪದೇಶ ಮಾಡಿದ್ದು ಛಾಂದೋಗ್ಯೋಪನಿಷತ್ತಿನಲ್ಲಿ ಹೇಳಿದೆ.

ಹೀಗೆ ಸತ್ತ್ವಪರೀಕ್ಷೆ ಮಾಡುವುದು ದೈವದ ಕಾರ್ಯ.

ಶ್ರೀಮಾನ್‍ ರಂಗನಾಥಶರ್ಮಾ ಅವರು ಇಂಥ ನಿಷ್ಠುರ ಪ್ರಸಂಗವನ್ನು ಮನಸ್ಸಿಗೆ ತಂದುಕೊಳ್ಳದೆ ಧೈರ್ಯವನ್ನವಲಂಬಿಸಬೇಕೆಂದು ನನ್ನ ವಿಜ್ಞಾಪನೆ.

ಈಗ ಗ್ರಂಥವಿಚಾರ.

ಶ್ರೀಮದ್ರಾಮಾಯಣದ ‘ಉತ್ತರಕಾಂಡ’ ವೆಂಬುದು ಪ್ರಕ್ಷಿಪ್ತಭಾಗವೆ? ವಾಲ್ಮೀಕಿ ಮಹರ್ಷಿಗಳು ರಚಿಸಿದ್ದಲ್ಲವೆ?–ಈ ಪ್ರಶ್ನೆಯನ್ನು ಎಷ್ಟೋ ಮಂದಿ ಹಾಕಿದ್ದಾರೆ. ನಮ್ಮ ಹೈಕೋರ್ಟಿನ ಜಡ್ಜಿಯಾಗಿದ್ದ ಒಬ್ಬ ಸ್ನೇಹಿತರು ಈ ಪ್ರಶ್ನೆಯನ್ನು ಕೇಳಿದರು. ಅವರ ಶಂಕೆಗೆ ಕಾರಣವೇನೆಂದು ವಿಚಾರಿಸಲಾಗಿ:

1. "ಉತ್ತರಕಾಂಡದಲ್ಲಿ ಶ್ರೀರಾಮನು ಶ್ರೀ ಸೀತಾದೇವಿಯ ವಿಷಯದಲ್ಲಿ ಅಷ್ಟು ನಿಷ್ಕರುಣಿಯಾಗಿ ನಡೆದುಕೊಂಡಿದ್ದಾನೆ–ಎಂದು ಹೇಳಿದೆ.

2. ಅದಲ್ಲದೆ ಯಾವ–ಯಾವ ಕಥೆಗಳೋ ಉತ್ತರಕಾಂಡದಲ್ಲಿ ಸೇರಿಕೊಂಡಿವೆ.

3. ಗ್ರಂಥದ ಶೈಲಿ ಕೂಡಾ ವಾಲ್ಮೀಕಿಗಳದ್ದಾಗಿಲ್ಲ.

–ಈ ಕಾರಣಗಳಿಂದ ಶಂಕೆ” ಎಂದು ಹೇಳಿದರು ಅವರು.

ಈ ಮೇಲೆ ಹೇಳಿದ ಸ್ನೇಹಿತರು ಸಂಸ್ಕೃತದ ಮೂಲಗ್ರಂಥವನ್ನು ನೋಡಿದವರಲ್ಲ; ಇಂಗ್ಲಿಷಿನಲ್ಲಿ ಯಾರು–ಯಾರೋ ಬರೆದಿದ್ದ ಟೀಕೆಗಳನ್ನು ಮಾತ್ರ ಓದಿದ್ದವರು. ಇದರ ನ್ಯೂನತೆಯನ್ನು ನಾನು ಅವರಿಗೆ ತೋರಿಸಿಕೊಟ್ಟೆ. ಆ ಚರ್ಚೆಯ ಮಾತು ಹಾಗಿರಲಿ.

ಶ್ರೀಮದ್ರಾಮಾಯಣದ ಮುಖ್ಯ ಪಾತ್ರಗಳಲ್ಲಿ ಸೀತಾದೇವಿಯೊಬ್ಬಳಷ್ಟೆ. ಶ್ರೀರಾಮನ ತರುವಾಯು ಮುಖ್ಯತೆ ಸಲ್ಲತಕ್ಕದ್ದು ಆಕೆಗೆ. ಇದನ್ನು:

... ಸೀತಾಯಾಶ್ಚರಿತಂ ಮಹತ್‍... ಬಾಲಕಾಂಡ, ೪–೭

[ಮಹತ್ವಪೂರ್ಣವಾದ ಸೀತಾದೇವಿಯ ಚರಿತ್ರೆ]

–ಎಂಬ ವಾಲ್ಮೀಕಿ ವಚನವೇ ಸ್ಪಷ್ಟಪಡಿಸುತ್ತದೆ. ಬ್ರಹ್ಮದೇವನು ವಾಲ್ಮೀಕಿಗಳಿಗೆ ಕಥೋಪದೇಶ ಮಾಡಿದ ಸಂದರ್ಭದಲ್ಲಿಯೇ ಸಂಗ್ರಹವಾಗಿ ಹೇಳಿದ್ದಾನೆ:

ರಾಮಾಭೀಷೇಕಾಭ್ಯುದಯಂ ಸರ್ವಸೈನ್ಯವಿಸರ್ಜನಮ್‍ ।
ಸ್ವರಾಜ್ಯರಂಜನಂ ಚೈವ ವೈದೇಹ್ಯಾಶ್ಚ ವಿಸರ್ಜನಮ್‍ ॥

....................................

ತಚ್ಚಕಾರೋತ್ತರೇ ಕಾವ್ಯೇ ವಾಲ್ಮೀಕಿರ್ಭಗವಾನೃಷಿಃ ॥ ಬಾಲಕಾಂಡ, ೩–೩೮, ೩೯

ಸೀತಾದೇವಿಯ ಮಹತ್ವವೇನು? ಆಕೆಯನ್ನು ದೈವ ಪರೀಕ್ಷಿಸಿದ್ದು, ಆಕೆ ಆ ಪರೀಕ್ಷೆಯಲ್ಲಿ ಉತ್ತೀರ್ಣಳಾದದ್ದು. ಆಕೆಯ ವ್ರತನಿಷ್ಠೆ ಮತ್ತು ಧೈರ್ಯ.

ಪುನಃ ಬ್ರಹ್ಮದೇವನು ವಾಲ್ಮೀಕಿಗಳಿಗೆ ಆದೇಶ ಕೊಡುವ ಸಂದರ್ಭದಲ್ಲಿ, ಹೀಗೆನ್ನುತ್ತಾನೆ:

ರಾಮಸ್ಯ ಚರಿತಂ ಕೃತ್ಸ್ನಂ... ।

.................... ವೈದೇಹ್ಯಾಶ್ಚೈವ ಯದ್ವೃತ್ವಂ ಪ್ರಕಾಶಂ ಯದಿ ವಾ ರಹಃ || ಬಾಲಕಾಂಡ, ೨–೩೨, ೩೪

ಎಂದರೇನಾಯಿತು? ವಾಲ್ಮೀಕಿಗಳಿಂದ ಉದ್ದಿಷ್ಟವಾದದ್ದು ರಾಮಚರಿತ್ರೆ ಮಾತ್ರವೇ ಅಲ್ಲ; ಸೀತಾಚರಿತ್ರೆ ಸಹ. ಸೀತಾಚರಿತ್ರೆ ಎಂದರೆ ಏನು? ಸೀತಾದೇವಿಯ ಬಾಲ್ಯದ ಅನಂತರದ ಕಥೆಯಲ್ಲಿ ಎರಡು ಘಟ್ಟಗಳು ದೊಡ್ಡವು. ಮೊದಲನೆಯದು: ರಾವಣನಿಂದಾದ ಮೋಸ; ಎರಡನೆಯದು ಜನವಾಕ್ಯ ಕಾರಣದಿಂದ ಶ್ರೀರಾಮಚಂದ್ರನೇ ಮಾಡಬೇಕಾಗಿ ಬಂದ ವಿವಾಸನ. ಈ ಎರಡನ್ನು ಬಿಟ್ಟರೆ ‘ಚರಿತಂ ಮಹತ್‍’ ಎಂಬುದಕ್ಕೆ ಅರ್ಥವಿಲ್ಲ.

ಸೀತೆಯ ಜೀವನ ಅರ್ಥವತ್ತಾಗಿ ನಮ್ಮ ಮೆಚ್ಚುಗೆಗೂ ಅನುಕರಣೆಗೂ ಪಾತ್ರವಾಗತಕ್ಕದ್ದು ಆಕೆಯ ವಿವಾಸನ ಕಥೆಯಿಂದ. ಆಕೆಯ ಮಹತ್ವ ತೋರುವುದು ಅಲ್ಲಿ.

ರಾವಣನು ಬಲಾತ್ಕಾರದಿಂದ ಆಕೆಯನ್ನು ಸೆರೆಯಲ್ಲಿಟ್ಟ. ಆಕೆ ಅದನ್ನು ಸಹಿಸದೆ ಏನು ಮಾಡಿಯಾಳು? ವಿವಾಸನವಾದರೋ ಆಕೆ ಬೇಡವೆನ್ನಬಹುದಾಗಿದ್ದದ್ದು. ಆದರೂ ತನ್ನ ಕರ್ತವ್ಯ ಸ್ಮರಣೆಯಿಂದ ಆಕೆ ಒಪ್ಪಿಕೊಂಡಳು.

ಯಥಾಪವಾದಂ ಪೌರಾಣಾಂ ತಥೈವ ರಘುನಂದನ ।
ಪತಿರ್ಹಿ ದೇವತಾ ನಾರ್ಯಾಃ ಪತಿರ್ಬಂದುಃ ಪತಿರ್ಗುರುಃ ॥
ಯಥಾ ಭ್ರಾತೃಷು ವರ್ತೇಥಾಸ್ತಥಾ ಪೌರೇಷು ನಿತ್ಯದಾ ।
ಪರಮೋ ಹ್ಯೇಷ ಧರ್ಮಸ್ತೇ ತಸ್ಮಾತ್‍ ಕೀರ್ತಿರನುತ್ತಮಾ ॥
ಯತ್ತು ಪೌರಜನೋ ರಾಜನ್‍ ಧರ್ಮೇಣ ಸಮವಾಪ್ನುಯಾತ್‍ ।
ಅಹಂ ತು ನಾನುಶೋಚಾಮಿ ಸ್ವಶರೀರಂ ನರರ್ಷಭ ॥

ಉತ್ತರಕಾಂಡ, ಸರ್ಗ ೪೮; ಪುಟ ೩೬೦–೩೬೧

ಇದು ಆಕೆಯ ಮನಃಸ್ಥೈರ್ಯವನ್ನೂ ದೃಢನಿಷ್ಠೆಯನ್ನೂ ತೋರಿಸುತ್ತದೆ. ಹೀಗೆ ಇದು ಮಹತ್ತಾದದ್ದು.

ದೈವ ನಡೆಸಿದ ಸತ್ತ್ವಪರೀಕ್ಷೆಯಲ್ಲಿ ಸೀತಾದೇವಿಯು ಉತ್ತೀರ್ಣಳಾದಳು. ಇದು ಅಪೂರ್ವ ಸಂದರ್ಭ. ಶ್ರೀರಾಮಚಂದ್ರನ ಶೌರ್ಯವು ಎಷ್ಟು ಮೆಚ್ಚತಕ್ಕದ್ದೋ ಶ್ರೀ ಸೀತೆಯ ಸಹನೆ ಅದಕ್ಕಿಂತ ಕಡಮೆಯಿಲ್ಲದೆ ನಮ್ಮ ಮನ್ನಣೆಗೆ ಪಾತ್ರವಾಗತಕ್ಕದ್ದು; ಮತ್ತು ಇದು ರಾಮಚರಿತೆಯ ಅಂಗವೆಂಬದನ್ನು–ಮುಖ್ಯಾಂಗವೆಂಬುದನ್ನು – ವಾಲ್ಮೀಕಿಗಳ ಮೇಲಿನ ಮಾತು ತೋರಿಸುತ್ತದೆ. ಹೀಗಿರುವಲ್ಲಿ ಉತ್ತರಕಾಂಡವು ಪ್ರಕ್ಷಿಪ್ತವೆಂದು ಹೇಳುವುದರಿಂದ ಧೃಷ್ಟತನ ವ್ಯಕ್ತವಾಗುತ್ತದೆ.

ರಾಮಾಯಣಕ್ಕೆ ಮುಖ್ಯವಲ್ಲದೆ ಇದ್ದರೂ ರಾಮಾಯಣದ ಪಾತ್ರಗಳಿಗೆ ಸಂಬಂಧಪಟ್ಟ ಕೆಲವು ಉಪಪಾತ್ರಗಳ ವೃತ್ತಾಂತವು ಉತ್ತರಕಾಂಡದಲ್ಲಿದೆ. ಈ ಕಥೆಗಳನ್ನು, –ಉದಾಹರಣೆಗಾಗಿ;

ರಾವಣೋತ್ಪತ್ತಿ, ಮೈತ್ರಾವರುಣ ಜನನ, ಲವಕುಶರ ಅವತಾರ, ಶತ್ರುಘ್ನನನ್ನು ಬೇರೆ ರಾಜ್ಯದಲ್ಲಿ ಸ್ಥಾಪಿಸಿದ್ದು, ಲವಣಾಸುರ ಮಥನ, ಇತ್ಯಾದಿ, –

ನಾವು ಗ್ರಂಥದ ಪರಿಶಿಷ್ಟ ಭಾಗ (Appendix) ಎಂದು ಸ್ವೀಕರಿಸಬಹುದೇ ವಿನಾ ವಾಲ್ಮೀಕೀಯವಲ್ಲವೆನ್ನಲು ಕಾರಣ ಸಾಲದು.

ಇನ್ನು ಶೈಲಿಯ ವಿಚಾರ. ಉತ್ತರಕಾಂಡದ ಶೈಲಿಯು ರಾಮಾಯಣದ ಇತರ ಕಾಂಡಗಳಿಗಿಂತ ವಿಲಕ್ಷಣವಾದದ್ದೆಂದು ಯಾರಿಗೆ ತೋರುತ್ತದೆಯೋ ಅವರ ಅನುಭವ ವಿಚಿತ್ರವಾಗಿದ್ದಾಗಿರಬೇಕು. ಇದುವರೆಗೆ ವ್ಯಾಖ್ಯಾನ ಬರೆದಿರುವ ಮಹೇಶತೀರ್ಥ, ಗೋವಿಂದರಾಜ, ಮಾಧವಯೋಗಿ–ಮೊದಲಾದವರಿಗೆ ಕಾಣಬಾರದೆಹೋದ ಶೈಲಿಯ ಭೇದ ಕಂಡುಬರಬೇಕಾದರೆ, ಅವರ ವೇದನಶಕ್ತಿ, ಗ್ರಹಣಶಕ್ತಿಗಳು ಅತಿಸೂಕ್ಷ್ಮವಾದವಾಗಿರಬೇಕು. ನನಗೆ ಹಾಗಿಲ್ಲ. ಕಥೆಯ ವರ್ಣನೆಯಿರುವ ಭಾಗದಲ್ಲಿ ರಾಮಾಯಣದ ಉತ್ತರಕಾಂಡವು ಮಿಕ್ಕೆಲ್ಲ ಕಾಂಡಗಳಂತೆಯೇ ಇದೆ. ಇಲ್ಲಿ, ರಾಮ–ಸೀತೆಯರ ಕಥೆಯಲ್ಲದೆ ಬೇರೆ ಬೇರೆ ವಿಷಯ ಹೇಳುವಲ್ಲಿ, ಕೊಂಚ ವಿಸ್ತಾರ ಕಡಮೆಯಾಗಿದೆ; ಅವಸರ–ಅವಸರವಾಗಿ ಹೇಳಿದೆ. ಇದು ಹೊರತು ಶೈಲಿಯ ವ್ಯತ್ಯಾಸ ಕಾಣಬರುವುದಿಲ್ಲ. ಎಲ್ಲವೂ ಒಂದೇ ಆಗಿದೆ.

ಉಳಿದ ಭಾಗಕ್ಕೂ, ಈ ಉತ್ತರಕಾಂಡಕ್ಕೂ ವಿರೋಧವಾಗಲಿ, ಅಸಾಮಂಜಸ್ಯವಾಗಲಿ ಕಾಣುವುದಿಲ್ಲ.

ಶ್ರೀರಾಮಚಂದ್ರನ ನಿರ್ಮಲ ಕೀರ್ತಿಗೆ ಕಳಂಕವಂಟಿಸುವ ಪ್ರಯತ್ನಕ್ಕೆ ಎರಡನೆಯ ವ್ಯಾಜವಿರುವುದು ಶಂಬೂಕನ ಕಥೆಯಲ್ಲಿ.

ಶಂಬೂಕನ ಅಪರಾಧವೇನು? ಸಂಪ್ರದಾಯ ವಿರೋಧ; ಸಮಾಜ ಸಂಕ್ಷೋಭೆ; ವ್ಯವಸ್ಥಾ ಭಂಗ; ಈ ಕಾಲದ ಭಾಷೆಯಲ್ಲಿ ಕ್ರಾಂತಿ (Revolution). ಒಬ್ಬ ಪ್ರಜ್ಞೆ ತನಗೆ ಆಧಿಕಾರವಿಲ್ಲದ ಕಾರ್ಯಕ್ಕೆ ಕೈಯಿಟ್ಟ. ತಪಸ್ಸಿಗೆ ಅರ್ಹನಲ್ಲದವನು ತಪಸ್ಸು ಮಾಡಹೊರಟ.

ಅಬ್ರಾಹ್ಮಣಸ್ತದಾ ರಾಜನ್ನ ತಪಸ್ವೀ ಕಥಂಚನ ಉತ್ತರಕಾಂಡ, ಸರ್ಗ ೭೪; ಪುಟ ೪೭೯

ಅದರಿಂದ ಆಗಿನ ಸಮಾಜ ಅಲುಗಿತು; ಒಬ್ಬ ಬ್ರಾಹ್ಮಣನ ಮಗ ತೀರಿಕೊಂಡ. ಆದುದರಿಂದ ಶ್ರೀರಾಮನು ಆ ಅಕ್ರಮಕ್ಕೆ ದಂಡನೆ ಮಾಡಬೇಕಾದದ್ದು ವಿಹಿತವಾಯಿತು. ಇದೇನು ಸಂತೋಷದ ಕೆಲಸವಲ್ಲ. ರಾಮನು ಕ್ರೂರಿಯಲ್ಲ, ಕರುಣಾಳು. ಆದರೆ, ಕರ್ತವ್ಯದ ಮುಂದೆ ಅವನ ವೈಯಕ್ತಿಕ ಹೃದಯಾವೇದನೆ ಕೆಲಸ ಮಾಡತಕ್ಕದ್ದಲ್ಲ. ಶ್ರೀರಾಮನು ತನಗೆ ಇಷ್ಟವಿಲ್ಲದಿದ್ದರೂ ಕರ್ತವ್ಯವಾದದ್ದನ್ನು ಮಾಡಬೇಕಾಯಿತೆಂಬುದು ಭವಭೂತಿಯ ಈ ಕೆಳಗಿನ ರಾಮವಾಕ್ಯದಿಂದ ನಮಗೆ ಹೃದಯವೇಧಕವಾಗುವಂತೆ ಇದೆ:

ಹೇ! ಹಸ್ತ ದಕ್ಷಿಣ ಮೃತಸ್ಯ ಶಿಶೋರ್ದ್ವಿಜಸ್ಯ
ಜೀವಾತವೇ ವಿಸೃಜ ಶೂದ್ರಮುನೌ ಕೃಪಾಣಮ್‍ ॥
ರಾಮಸ್ಯ ಬಾಹುರಸಿ ನಿರ್ಭರಗರ್ಭಖಿನ್ನ
ಸೀತಾವಿವಾಸನಪಟೋಃ ಕರುಣಾ ಕುತಸ್ತೇ ॥ ಉತ್ತರರಾಮಚರಿತೆ, II – ೯

[ಎಲೈ ಬಾಹುವೇ! ಬ್ರಾಹ್ಮಣಸುತನನ್ನು ಪುನಃ ಬದುಕಿಸುವುದಕ್ಕಾಗಿ ಶೂದ್ರಮುನಿಯನ್ನು ಹೊಡೆ. ರಾಮನ ತೋಳಲ್ಲವೇ ನೀನು? ರಾಮನಾದರೋ ಗರ್ಭಭಾರದಿಂದ ನೊಂದಿರುವ ಸೀತೆಯನ್ನು ಕಾಡಿಗೆ ಕಳಿಸಿದನಲ್ಲವೇ? ಅಂಥವನಿಗೆ ಕರುಣೆಯುಂಟೆ? ನಿನಗೆಲ್ಲಿಯದು ಕರುಣೆ!]

ಶ್ರೀರಾಮಚಂದ್ರನು ಕರುಣಿಯೂ ಹೌದು, ನಿಷ್ಕರುಣಿಯೂ ಹೌದು; ಸಂದರ್ಭಕ್ಕೆ ತಕ್ಕ ನ್ಯಾಯವಾಗುವಂತೆ, ಅದಕ್ಕೆ ಸಂಬಂಧಪಟ್ಟವರಿಗೆ ಹಿತವಾಗುವಂತೆ. ಮೂವತ್ತು ವರ್ಷದವನಿಗೆ ಸಲ್ಲತಕ್ಕದು ಮೂರು ವರ್ಷದವನಿಗೆ ಸಲ್ಲತಕ್ಕದ್ದಲ್ಲ; ಮೂರು ವರ್ಷದವನಿಗೆ ಪ್ರಯೋಜಕವಾಗತಕ್ಕದು ಮೂವತ್ತು ವರ್ಷದವನಿಗಲ್ಲ. ಹೀಗೆ ವಿವೇಚಿಸುತ್ತಾನೆ ಧಮಿಷ್ಠ.

ವಜ್ರಾದಪಿ ಕಠೋರಾಣಿ
ಮೃದೂನಿ ಕುಸುಮಾದಪಿ
ಲೋಕೋತ್ತರಾಣಾಂ ಚೇತಾಂಸಿ
ಕೋ ಹಿ ವಿಜ್ಞಾತುಮರ್ಹತಿ ॥

ಇದು ಶ್ರೀರಾಮಚಂದ್ರನ ತತ್ತ್ವ.

ಮೃದುವೋ ಕಟುವೋ ಹಿತ ಮುಖ್ಯ, ನ್ಯಾಯ ಮುಖ್ಯ.

ಮೇಲೆ ಹೇಳಿದ ಶಂಬೂಕ ವೃತ್ತಾಂತಕ್ಕೆ ಸಂಬಂಧಪಟ್ಟ ಶಾಸ್ತ್ರವಾಕ್ಯವು ತ್ರೇತಾ ಯುಗಕ್ಕೆ ಅನ್ವಯಿಸತಕ್ಕದ್ದು,

ಅಬ್ರಾಹ್ಮಣಸ್ತದಾ ರಾಜನ್ನ ತಪಸ್ವೀ ಕಥಂಚನ ಉತ್ತರಕಾಂಡ, ಸರ್ಗ ೭೪; ಪುಟ ೪೭೯

ಇದರ ತತ್ತ್ವ ಸರಿಯಾದದ್ದೇ?–ಎಂಬುದು ನಾವು ಚರ್ಚಿಸಬೇಕಾದ ವಿಷಯವಲ್ಲ. ಪ್ರಜಾಜನ ಈ ವಿಧಿಯನ್ನಂಗೀಕರಿಸಿದ್ದರು ಎಂಬುದಷ್ಟೇ ನಮಗೆ ಇಲ್ಲಿ ಪ್ರಯುಕ್ತವಾದದ್ದು. ಶ್ರೀರಾಮನು ಆ ಮೃತಶಿಶುವಿನ ತಂದೆಯ ಆರ್ತನಾದವನ್ನು ಕೇಳಿದ:

ರಾಮಸ್ಯ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ ಉತ್ತರಕಾಂಡ, ಸರ್ಗ ೭೩; ಪುಟ ೪೭೫

ಏನು ಮಾಡಿದ? ಮಂತ್ರಿಗಳ ಮತ್ತು ಋಷಿಗಳ ಉಪದೇಶವೇನೆಂದು ಕೇಳಿದ. ಆಗ ಅಲ್ಲಿದ್ದ ಎಂಟು ಮಂದಿ ಋಷಿಗಳ ಪರವಾಗಿ ನಾರದರು: “ಕೃತಯುಗದ ಧರ್ಮವು ತ್ರೇತಾಯುಗಕ್ಕೆ ಅನ್ವಯಿಸದು. ತ್ರೇತಾಯುಗದಲ್ಲಿ ಬ್ರಾಹ್ಮಣನೊಬ್ಬನಿಗೇ ತಪಸ್ಸಿಗೆ ಅಧಿಕಾರ. ಅಬ್ರಾಹ್ಮಣನೊಬ್ಬನು ನಿನ್ನ ರಾಜ್ಯದಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ತೋರುತ್ತದೆ. ಅದೇ ಈ ಬ್ರಾಹ್ಮಣ ಬಾಲಕನ ಮರಣಕ್ಕೆ ಕಾರಣ. ಇದು ಎಲ್ಲಿ ನಡೆದಿದೆಯೆಂದು ನೀನು ಕಂಡುಹಿಡಿದು, ಆ ಅನಧಿಕಾರಿಯಾದ ತಪಸ್ವಿಯನ್ನು ಶಿಕ್ಷಿಸು. ಆಗ ಆ ಬ್ರಾಹ್ಮಣ ಬಾಲಕನು ಮತ್ತೆ ಜೀವಿಸುವನು” ಎಂದು ಹೇಳಿದರು.

ಇದರಿಂದ ಸ್ಪಷ್ಟಪಡುತ್ತದೆ, ರಾಮನು ಸ್ವತಂತ್ರಿಸಿ ನಡೆಯಲಿಲ್ಲವೆಂಬುದು. ನಾರದರು ಹೇಳಿದ ವಿಧಿ ಸರಿಯಾದದ್ದೆ? ಶೂದ್ರನಿಂದ ಯಾರಿಗಾದರೂ ಕೇಡಾಯಿತೆ? ಶಂಬೂಕನು ನಿರಪರಾಧಿಯಲ್ಲವೆ? –ಇತ್ಯಾದಿ ಪ್ರಶ್ನೆಗಳನ್ನು ವಿಚಾರಿಸುವುದು ರಾಮನಿಗೆ ಕರ್ತವ್ಯವಲ್ಲ. ಆ ರಾಜ್ಯದ ಪ್ರಜೆಗಳು, ಅವರಲ್ಲಿ ವಿದ್ಯೋತ್ತಮರು ಸಹ, ಆ ವಿಧಿಯನ್ನು ಒಪ್ಪಿಕೊಂಡಿದ್ದರು. ಅದರಿಂದ ಅದರ ಪಾಲನೆ ಶ್ರೀರಾಮನಿಗೆ ಕರ್ತವ್ಯವಾಯಿತು.

ಹೀಗೆ ಶ್ರೀ ಸೀತಾ ವಿವಾಸನ ವಿಷಯದಲ್ಲಿಯೂ, ಶಂಬೂಕವಧೆಯ ವಿಷಯದಲ್ಲಿಯೂ ಶ್ರೀರಾಮನು ಅನುಸರಿಸಿದ್ದು ಪ್ರಜಾಭಿಪ್ರಾಯವನ್ನು. ಅದು ಡೆಮಾಕ್ರೆಸಿ (Democracy) – ಪ್ರಜಾಪ್ರಭುತ್ವ.

ಇದನ್ನು ನಾವು ಗಮನಿಸಬೇಕು. ಗ್ರೀಸ್‍ ದೇಶದಲ್ಲಿ ಪ್ರಜಾಪ್ರಭುತ್ವವು ಸಾಕ್ರಟೀಸ್‍ (Socrates) ತತ್ತ್ವಜ್ಞನನ್ನು ನುಂಗಿತು. ಅದಕ್ಕಿಂತ ಎಷ್ಟೋ ಸಹಸ್ರ ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಪ್ರಜಾರಾಜ್ಯವು ಶ್ರೀ ಸೀತಾದೇವಿಯನ್ನು ಗಡೀಪಾರು ಮಾಡಿಸಿತು; ಶಂಬೂಕನಿಗೆ ಮೃತ್ಯುವನ್ನು ತಂದಿತು.

ಅಲ್ಲಿಂದೀಚೆಗೆ ನಮ್ಮ ದೇಶದಲ್ಲಿ ಡೆಮಾಕ್ರೆಸಿ ಪುನಃ ಪ್ರಬಲಿಸುತ್ತಿದೆ. ಆದಕಾರಣ ಸತ್ತ್ವಾಭಿಮಾನಿಗಳು ಜಾಗ್ರತೆಯಿಂದಿರಬೇಕಾದದ್ದು.

ಶ್ರೀಮದುತ್ತರಕಾಂಡವು ಹಿಂದಿನ ಕಾಂಡಗಳಂತೆಯೇ ಓದತಕ್ಕದ್ದಾಗಿದೆ. ಎಲ್ಲಿ ನೋಡಿದರೂ ವಾಲ್ಮೀಕಿಗಳ ಮಹೋದಾರವಾದ ಕವಿತ್ವ. ಸನ್ನಿವೇಶಗಳು ಮರ್ಮಭೇದಕವಾದವು. ಮಾತುಗಳು ಅರ್ಥವತ್ತಾದವು; ಶಬ್ದಗಳು ಶ್ರವಣ ಮೋಹಕವಾದವು. ಓದಿ ರಸವನ್ನು ಸವಿಯಬೇಕು; ಮಾತುಗಳಿಂದ ಹೇಳಲಾಗುವುದಿಲ್ಲ. ಇಲ್ಲಿ ಸ್ವಾನುಭವವೇ ಪ್ರಮಾಣ.

ಸ್ವಾನುಭೂತ್ಯೇಕಮಾನಾಯ

—ಎಂಬುದು ಪರಬ್ರಹ್ಮ ವಿಷಯದಲ್ಲಿ ಹೇಳಿದ ಮಾತು. ಬ್ರಹ್ಮಾನಂದವು ಮುಖ್ಯವಾದದ್ದು ಶ್ರೀಮದ್ರಾಮಾಯಣದಲ್ಲಿ.

ಕಾವ್ಯದಲ್ಲಿ ಸ್ವಾರಸ್ಯ ಸ್ಥಾನಗಳು ಮೂರು; ಹೀಗೆ:

ಮೊದಲು ಅಕ್ಷರ. ಇದು ಕಿವಿಯನ್ನು ನಲಿಸಿ ಒಲಿಸಿಕೊಳ್ಳುತ್ತದೆ. ಈ ಶ್ರವಣಾಕರ್ಷೆಯೇ ಕಾವ್ಯಾನುಭವದಲ್ಲಿ ಮೊದಲನೆಯ ಮೆಟ್ಟಿಲು.

ಅನಂತರ, ಅಕ್ಷರ ಸಮೂಹವಾದ ಪದವು ಮನಸ್ಸಿಗೆ ರಸದ ರುಚಿಯನ್ನು ಕೊಡುತ್ತದೆ.

ಹೀಗೆ ಕಿವಿಯ ಮೇಲಿನ ಹಿಡಿತ ಸ್ಥಿರಪಡುತ್ತದೆ. ಆಮೇಲೆ, ಮೂರನೆಯದಾಗಿ, ಪದಬಂಧವಾದ ವಾಕ್ಯವು ಬುದ್ಧಿಗೆ ಅರ್ಥವನ್ನು ಪೂರ್ಣ ಮಾಡುತ್ತದೆ; ನಮ್ಮ ಅನುಭವವು ಪೂರ್ತಿಯಾಗುತ್ತದೆ.

ಕಿವಿ, ಮನಸ್ಸು, ಬುದ್ಧಿ–ಇವು ಕಾವ್ಯಾನುಭವ ಸ್ಥಾನಗಳು.

ಈ ಮರ್ಮವನ್ನು ತಿಳಿದ ಮಹಾನುಭಾವನು, ಯಾರೋ ಪೂರ್ವಿಕನು, ಹೇಳಿದ:

ಕೂಜಂತಂ ರಾಮರಾಮೇತಿ
ಮಧುರಂ ಮಧುರಾಕ್ಷರಮ್‍ ।
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಮ್‍ ॥

ಹೀಗೆ ಅಕ್ಷರದ ಸೊಬಗನ್ನು ನಮ್ಮ ಅನುಭವಕ್ಕೆ ತರುವವರು ವಾಲ್ಮೀಕಿಗಳು. ಜಯದೇವ ಮೊದಲಾದ ಕವಿಗಳು ಪದದ ಮತ್ತು ವಾಕ್ಯದ ಸೌಭಾಗ್ಯವನ್ನು ತೋರಿಸಿದ್ದಾರೆ; ವಾಲ್ಮೀಕಿಗಳಂತೆ ಪ್ರತ್ಯಕ್ಷರ ಸೌಭಾಗ್ಯವನ್ನು, —ಅದರ ಕಾಂತಿಯನ್ನು, ವೀರ್ಯವನ್ನು, ನಿದರ್ಶನಪಡಿಸಿರುವ ಕವಿಗಳು ವಿರಳ. ಅವರ ಅಕ್ಷರಗಳು, ಮಧುರವಾಗಿ, ತೇಜೋವಂತವಾಗಿ, ಕೋಮಲವಾಗಿ, ಇರುವುದರಿಂದ ರಾಮಾಯಣವು ಎಲ್ಲೆಲ್ಲಿಯೂ ಸುಂದರವಾಗಿದೆ. ರಾಮಾಯಣದ ಮುಖ್ಯಗುಣ ಕೋಮಲತೆ.

ನನ್ನ ಪೂಜ್ಯ ಸ್ನೇಹಿತರಾದ ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾ ಅವರ ಕನ್ನಡ ಅನುವಾದದ ವಿಷಯವಾಗಿ ಒಂದು ಮಾತನ್ನು ವಿಶೇಷವಾಗಿ ಹೇಳಲು ಇದು ಅವಕಾಶ. ಅವರ ಅನುವಾದವು ಸ್ವತಂತ್ರ ರಚನೆಯೋ—ಎಂಬಷ್ಟು ಮನೋಹರವಾಗಿದೆ. ಕನ್ನಡದ ಭಾಷಾ ಮರ್ಯಾದೆಯನ್ನು ಎಲ್ಲೆಲ್ಲಿಯೂ ಪಾಲಿಸಿದ್ದಾರೆ. ಎಷ್ಟೋ ಮಂದಿ ಸಂಸ್ಕೃತ ಬಲ್ಲವರಿಗೂ ಇವರ ಅನುವಾದವು ಉಪಕಾರಕವಾದೀತು. ನಮ್ಮ ಸ್ಕೂಲು–ಕಾಲೇಜುಗಳಲ್ಲಿ ಯಾವಯಾವುದೋ ಅಸಂಬದ್ಧ ಲೇಖನಗಳನ್ನು ಪಠ್ಯಪುಸ್ತಕಗಳನ್ನಾಗಿಡುತ್ತಿದ್ದಾರೆ. ಅವುಗಳಿಗೆ ಬದಲಾಗಿ ಈ ಕನ್ನಡ ರಾಮಾಯಣದ ಯಾವುದಾದರೂ ಒಂದು ಭಾಗವನ್ನು ಪಠ್ಯಪುಸ್ತಕವನ್ನಾಗಿ ನಿಯಮಿಸಿದರೆ, ಈ ವ್ಯಾಜದಿಂದಲಾದರೂ ದೇಶದ ಚರಿತ್ರೆ, ಭಾಷೆ ಎರಡನ್ನೂ ನಮ್ಮ ಯುವಕರಿಗೆ ಪರಿಚಯ ಮಾಡಿಸಿದಂತಾಗುವುದು. ಈ ರಾಮಾಯಣದ ಕನ್ನಡ ವಿಷಯದಲ್ಲಿ ನಾನು ತುಂಬ ಹೆಮ್ಮೆಪಟ್ಟುಕೊಂಡಿದ್ದೇನೆ. ನನ್ನಂತೆ ಗ್ರಂಥವನ್ನೋದಿದವರು ಅದನ್ನು ಒಪ್ಪಿಯಾರು–ಎಂಬ ನಂಬಿಕೆ ನನಗೆ ದೃಢವಾಗಿದೆ.

ಕನ್ನಡ ಮಹಾಜನರು ಶ್ರೀಮದ್ರಾಮಾಯಣವನ್ನು ಆಮೂಲಾಗ್ರವಾಗಿ ಪಾರಾಯಣ ಮಾಡಿ ಸಂತೋಷಿಸಲೆಂದೂ, ಶ್ರೀ ಸೀತಾರಾಮಾನುಗ್ರಹದಿಂದ ಅವರು ಯಶಸ್ವಿಗಳಾಗಿ ಶ್ರೀಯಸ್ಸಂಪನ್ನರಾಗಲೆಂದೂ ಆಶಿಸುತ್ತೇನೆ.

ಇಂತು ಸರ್ವಂ ಶಿವಂ (೧೯೭೪)

Wednesday, 17 January 2024

ಭಾಗ 11 & 12 - ಯುದ್ಧಕಾಂಡ–ಉತ್ತರಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ಭಾಗ 11 & 12 - ಯುದ್ಧಕಾಂಡ–ಉತ್ತರಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ಅಯೋಧ್ಯಾನಗರೀ ಧನ್ಯಾ
ಯಾ ದದರ್ಶ ಜಯೋಜ್ಜ್ವಲಮ್‍ ।
ಸೀತಾತೃಪ್ತಂ ಲಕ್ಷ್ಮಣಾಪ್ತಂ
ಶ್ರೀರಾಮಂ ಪುನರಾಗತಮ್‍ ॥

ಧನ್ಯಸ್ತಪಸ್ವೀ ಭರತಃ
ಸೌಭ್ರಾತ್ರಾವಿಷ್ಟಮಾನಸಃ ।
ರಾಜಪೀಠಮನಾರುಹ್ಯ
ಯೋಽಭೂದ್ರಾಜ್ಯಧುರಂಧರಃ ॥

ಪರಮಮಂಗಲನಿಧಿಯಾದ ಯಾವ ವಿಶ್ವಚೈತನ್ಯವು ವಾಲ್ಮೀಕಿಗಳ ಹೃದಯದಿಂದ ಕಾವ್ಯಪ್ರವಾಹವನ್ನು ಹೊರಹೊಮ್ಮಿಸಿತೋ, ಯಾವ ಮಹಾಚೈತನ್ಯವು ಕನ್ನಡ ಜನದ ಪ್ರಯೋಜನಕ್ಕಾಗಿ ಆ ಕಾವ್ಯ ಪ್ರವಾಹವನ್ನು ಹರಿಯಿಸಬೇಕೆಂದು ನಮ್ಮ ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರಲ್ಲಿ ಪ್ರೇರಣೆಯುಂಟು ಮಾಡಿತೋ, ಮತ್ತು ಯಾವ ದಿವ್ಯ ಚೈತನ್ಯವು ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮರವರ ಲೇಖನಿಯಲ್ಲಿ ಅನುಗ್ರಹ ತುಂಬಿತೋ ಆ ಭಗವಚ್ಚೈತನ್ಯದ ಕೃಪೆಯಿಂದ ಈಗ ನಾವು ಈ ಪರಮಪಾವನವಾದ ಪ್ರಯತ್ನದ ಉಪಾಂತ ಘಟ್ಟವನ್ನು ಮುಟ್ಟಿದ್ದೇವೆ. ಇಲ್ಲಿಯವರೆಗೆ ನಮ್ಮನ್ನು ಕಾಪಾಡಿ ನಡಸಿಕೊಂಡು ಬಂದಿರುವ ಶ್ರೀ ಸೀತಾರಾಮ ಭಗವಂತರ ಕರುಣೆ ಇನ್ನು ಮುಂದೆಯೂ ನಮ್ಮನ್ನು ನಡಸಿ ಉತ್ತರಕಾಂಡದ ಸಮಾಪ್ತಿಯನ್ನು ಮುಟ್ಟಿಸೀತೆಂದು ನಂಬಿ ಈಗ ನಮ್ಮ ಕೃತಜ್ಞತೆಯ ನಮಸ್ಕಾರಗಳನ್ನು ಸಲ್ಲಿಸೋಣ.

ಕಥಾಸ್ವಾರಸ್ಯ

ಯುದ್ಧಕಾಂಡದ ಪೂರ್ವಾರ್ಧದ ಕಥೆ ಸೇತುಬಂಧನದ ಪ್ರಕರಣದಿಂದ ಪ್ರಾರಂಭವಾಗಿ ಕುಂಭಕರ್ಣವಧೆಯವರೆಗೆ ಸಾಗಿದೆಯಷ್ಟೆ? ಈಗಿನ ಉತ್ತರಾರ್ಧ ಭಾಗದಲ್ಲಿ ಯುದ್ಧ ಪ್ರಸಂಗ ಮುಂದುವರಿಯುತ್ತದೆ. ಕಥಾಧಾರೆ ಏಕಪ್ರಕಾರವಾದ ಸಾರಸ್ಯದಿಂದ ತುಂಬಿ ಹರಿದಿದೆ. ವಾಲ್ಮೀಕಿಗಳದು ಕಥೆ ಹೇಳುವುದರಲ್ಲಿ ನಿಸ್ಸೀಮವಾದ ನಿಪುಣತೆ. ಕಥೆ ಹೇಳುವ ಅಜ್ಜನ ಸುತ್ತಮುತ್ತ ಚಿಕ್ಕಮಕ್ಕಳು ನೆರೆಯುವಂತೆ ನಾವು ಸರಳ ಹೃದಯರಾಗಿ ಸ್ವಸ್ಥಚಿತ್ತರಾಗಿ ಕಥೆ ಕೇಳಬೇಕು. ಯಾವ ಚಮತ್ಕಾರವನ್ನೂ ನಿರೀಕ್ಷಿಸಬಾರದು. ಯಾವ ಪ್ರಶ್ನೆಯನ್ನೂ ಎತ್ತಬಾರದು. ಯುದ್ಧ ವರ್ಣನೆಯಲ್ಲಿ ಸ್ವಾರಸ್ಯ ಕಾಣಬೇಕಾದರೆ ಈ ಸ್ವಾಭಾವಿಕವಾದ ಸರಳತೆಯೂ ಕೃತಕವಲ್ಲದ ಕುತೂಹಲವೂ ನಮ್ಮಲ್ಲಿರಬೇಕು. ಆಗ ನಮಗೆ ಅನುಭವವಾಗುತ್ತದೆ ವಾಲ್ಮೀಕಿಗಳ ಕೌಶಲ. ಹೇಗೆ ಕಥೆ ಹೇಳುತ್ತಾರೆ! ಕ್ಷಣಕ್ಷಣವೂ ನಮ್ಮ ಮನಸ್ಸು ಕೆರಳಿರುತ್ತದೆ. ಆ ಹೆಸರುಗಳನ್ನೇ ನೋಡಿರಿ: ದೇವಾಂತಕ, ನರಾಂತಕ, ಮಹೋದರ, ಮಹಾಪಾರ್ಶ್ವ, ಕುಂಭ, ನಿಕುಂಭ, ಅತಿಕಾಯ, ಮಹಾಕಾಯ. ವೀರರಸವನ್ನು ಕಲಕುವುದಕ್ಕೆ ಈ ಹೆಸರುಗಳೇ ಸಾಕು; ಆಮೇಲೆ ಅವರು ಬಿಡುವ ಅಸ್ತ್ರಪ್ರತ್ಯಸ್ತ್ರಗಳು: ಇತ್ತಕಡೆಯಿಂದ ಆಗ್ನೇಯಾಸ್ತ್ರ, ಅತ್ತಕಡೆಯಿಂದ ವಾರುಣಾಸ್ತ್ರ. ಇಲ್ಲಿಂದ ಐಂದ್ರಾಸ್ತ್ರ, ಅಲ್ಲಿಂದ ಪಾಶುಪತಾಸ್ತ್ರ. ಇವನು ಮೂರು ಬಾಣಗಳನ್ನು ಬಿಟ್ಟ; ಅವನು ಐದು ಬಾಣಗಳಿಂದ ಅದನ್ನು ಕತ್ತರಿಸಿದ. ಇವನು ಬಂಡೆ ತಂದು ಅಪ್ಪಳಿಸಿದ; ಅವನು ಮೋಡ ಕವಿಸಿ ಕುರುಡು ಮಾಡಿದ. ಹೀಗೆ ವರ್ಣನೆಗಳು ರಾಮಲಕ್ಷ್ಮಣರ ಬಾಣಗಳಂತೆ ಪುಂಖಾನುಪುಂಖವಾಗಿ ಹೊರಟು ನಮ್ಮನ್ನು ಬೆರಗುಗೊಳಿಸುತ್ತವೆ.

ಮಾಯಾಸೀತೆ

ರಾವಣನ ಮಗನಾದ ಇಂದ್ರಜಿತ್ತು ಮಾಯಾಯುದ್ಧಕ್ಕೆ ತೊಡಗುತ್ತಾನೆ. ಗಗನ ಮಂಡಲದಲ್ಲಿ ಮೋಡಗಳನ್ನು ಕವಿಸಿ ಅವುಗಳ ಮರೆಯಲ್ಲಿ ತಾನು ನಿಂತು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಈ ಘಳಿಗೆ ಈ ಕಡೆಯಿಂದ; ಇನ್ನೊಂದು ಘಳಿಗೆ ಬೇರೊಂದು ದಿಕ್ಕಿನಿಂದ; ಮತ್ತೊಂದು ಘಳಿಗೆ ಮಗದೊಂದು ದಿಕ್ಕಿನಿಂದ. ಹೀಗೆ ಅವನು ಎಲ್ಲಿದ್ದಾನೆ ಎಂದು ಗೊತ್ತು ಮಾಡುವುದೇ ರಾಮಲಕ್ಷ್ಮಣರಿಗೆ ಕಷ್ಟವಾಗುತ್ತದೆ. ಕಡೆಗೆ ಇಂದ್ರಜಿತ್ತು ಮಾಯಾಸೀತೆಯನ್ನು ತರುತ್ತಾನೆ.

ಮೋಹನಾರ್ಥಂ ತು ಸರ್ವೇಷಾಂ
ಬುದ್ಧಿಂ ಕೃತ್ವಾ ಸುದುರ್ಮತಿಃ ।
ಹನ್ತುಂ ಸೀತಾಂ ವ್ಯವಸಿತಃ
ವಾನರಾಭಿಮುಖೋ ಯಯೌ ॥ ಸರ್ಗ ೮೧, ಶ್ಲೋಕ ೬

ಆ ಸ್ಥಿತಿಯಲ್ಲಿ ಸೀತೆಯನ್ನು ನೋಡಿ,

ಬಾಷ್ಪಪರ್ಯಾಕುಲಮುಖಃ
ಹನೂಮಾನ್‍ ವ್ಯಥಿತೋಽಭವತ್‍ ॥ ಸರ್ಗ ೮೧, ಶ್ಲೋಕ ೧೨

ಹನುಮಂತನು ಮಿಕ್ಕ ವಾನರರಿಂದ ಕೂಡಿ ಇಂದ್ರಜಿತುವಿನ ಕಡೆಗೆ ನುಗ್ಗಿದ. ಇಂದ್ರಜಿತ್ತು ಸುಮ್ಮನಿದ್ದನೆ?

ತಾಂ ಸ್ತ್ರಿಯಂ ಪಶ್ಯತಾಂ ತೇಷಾಂ
ತಾಡಯಾಮಾಸ ರಾವಣಿಃ ॥ ಸರ್ಗ ೮೧, ಶ್ಲೋಕ ೧೬

ದೃಶ್ಯ ಕಣ್ಣಿಗೆ ಕಟ್ಟಿದಹಾಗಿದೆ. ಇಂದ್ರಜಿತ್ತು ಕೋಪೋದ್ರಿಕ್ತನಾಗಿ ಸೀತಮ್ಮನನ್ನು ಹೊಡೆದನಂತೆ. ಇವನ ಏಟು ಬಿದ್ದಂತೆ ಆಕೆ “ರಾಮ! ರಾಮ!” ಎಂದು ಕೂಗಿಕೊಂಡಳಂತೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಸೆಳೆದನಂತೆ. ಹನುಮಂತನು ಇಂದ್ರಜಿತ್ತುವನ್ನು ಕುರಿತು ಶಾಪವಿಡುತ್ತಾನೆ. ಇಂದ್ರಜಿತ್ತಾದರೋ ತನ್ನ ಹಟವನ್ನು ಬಿಡದೆ ಖಡ್ಗದಿಂದ ಸೀತೆಯನ್ನು ಹೊಡೆಯುತ್ತಾನೆ.

ಸಾ ಪೃಥಿವ್ಯಾಂ ಪೃಥುಶ್ರೋಣೀ
ಪಪಾತ ಪ್ರಿಯದರ್ಶನಾ ॥ ಸರ್ಗ ೮೧, ಶ್ಲೋಕ ೩೨

ಯಾವ ಹೆಂಗಸು ನೆಲಕ್ಕೆ ಬಿದ್ದರೂ ಅದು ದುಃಖಕಾರಕವೇ. ಸೀತೆಯಂಥ ಪರಮ ಸುಂದರಿ ಅಂಥ ಕ್ರೂರತೆಗೆ ತುತ್ತಾದಾಗ ಅದನ್ನು ಯಾರು ಸಹಿಸಿಯಾರು? ಇದನ್ನು ನೋಡಿದ ಎಲ್ಲರೂ ಭಯವಿಷಾದಗಳಿಗೆ ವಶರಾದರು. ಆಂಜನೇಯ ಮೊದಲಾದವರು ಇಂದ್ರಜಿತ್ತನ್ನು ಸಂಹಾರ ಮಾಡುವುದು ತಮಗೆ ಸಾಧ್ಯವಾಗದೆಂದು ಭಾವಿಸಿ, ಅದು ಹಾಗಿದ್ದರೂ ತಾವು ಹಿಮ್ಮೆಟ್ಟತಕ್ಕದ್ದಲ್ಲವೆಂದು ನಿಶ್ಚಯಿಸಿ ತಮ್ಮ ಪ್ರಾಣವನ್ನು ತ್ಯಜಿಸುವವರೆಗೂ ತಾವು ಹೋರಾಡತಕ್ಕದ್ದೇ ಸರಿ ಎಂದು ಪ್ರತಿಜ್ಞೆ ಮಾಡಿಕೊಂಡರು. ಇಂದ್ರಜಿತ್ತಾದರೋ ತನ್ನ ಪ್ರಯತ್ನ ಸಾಗುವುದು ಕಷ್ಟವೆಂದು ಕಂಡುಕೊಂಡು ಲಂಕಾಪಟ್ಟಣದ ನಿಕುಂಭಿಳಾದೇವಿಯ ಗುಹೆಯೊಳಗೆ ಆ ದೇವಿಯನ್ನೊಲಿಸಿಕೊಳ್ಳಲು ಹೋಮ ಮಾಡತೊಡಗಿದನು.

ಲಕ್ಷ್ಮಣನ ನಿರಾಶೆ

ಶ್ರೀರಾಮನಾದರೋ ಈ ವೃತ್ತಾಂತವನ್ನು ಕೇಳಿ ತನ್ನ ಮನಸ್ಸಿನ ಕಳವಳವನ್ನು ವಾನರ ನಾಯಕನಾದ ಜಾಂಬವಂತನಲ್ಲಿ ಹೇಳಿಕೊಂಡ. ಆ ದುಃಖ ಸಮಯದಲ್ಲಿ ಲಕ್ಷ್ಮಣನು ಹೇಳಿದ ಒಂದು ಮಾತು ಸ್ಮರಣಾರ್ಹವಾಗಿದೆ.

ಶುಭೇ ವರ್ತ್ಮನಿ ತಿಷ್ಠಂತಂ
ತ್ವಾಮಾರ್ಯ ವಿಜಿತೇಂದ್ರಿಯಮ್‍ ।
ಅನರ್ಥೇಭ್ಯೋ ನ ಶಕ್ನೋತಿ
ತ್ರಾತುಂ ಧರ್ಮೋ ನಿರರ್ಥಕಃ ॥ ಸರ್ಗ ೩, ಶ್ಲೋಕ ೧೪

ನಮಗೆಲ್ಲ ಹೀಗೆ ಪದೇ ಪದೇ ಅನ್ನಿಸುತ್ತಿಲ್ಲವೆ? “ಧರ್ಮೋ ನಿರರ್ಥಕಃ” –ಈ ಎರಡು ಸಣ್ಣ ಮಾತುಗಳಲ್ಲಿ ಎಷ್ಟು ಅಪಾರವಾದ ಉದ್ವೇಗ ಅಡಗಿದೆ!

ಧರ್ಮೋ ಭವತ್ಯಧರ್ಮಶ್ಚ
ಪರಸ್ಪರವಿರೋಧಿನೌ ॥
ಧರ್ಮೇಣೋಪಲಭೇದ್ಧರ್ಮಂ
ಅಧರ್ಮಂ ಚಾಪ್ಯಧರ್ಮತಃ ॥ ಸರ್ಗ ೮೩, ಶ್ಲೋಕ ೧೮, ೧೯

ಹೀಗೆ ಹತಾಶನಾದ ಲಕ್ಷ್ಮಣಸ್ವಾಮಿಯೇ ಇಂದ್ರಜಿತುವನ್ನು ಸಂಹಾರ ಮಾಡಿದ ಧೀರ. ಆತನು ಅಣ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಹೇಳುತ್ತಿದ್ದಾನೆ. ಆಗ ಅಲ್ಲಿಗೆ ಬಂದ ವಿಭೀಷಣನು ರಾಮನಿಗೆ ಹೇಳುತ್ತಾನೆ: “ಆ ಸೀತಾ ವಧೆಯು ನಿಜವಾದದ್ದಲ್ಲ. ಅದು ಮಾಯಾದೃಶ್ಯ. ಸೀತೆಯನ್ನು ಯಾರೂ ಕೊಂದಿಲ್ಲ. ಯಾರಿಂದಲೂ ಆಕೆಯನ್ನು ಕೊಲ್ಲಲಾಗದು. ಇಂದ್ರಜಿತ್ತು ಈ ಮಾಯೆಯಿಂದ ನಿಮಗೆ ಮೋಹ ಕವಿಸಿ ನಿಮ್ಮನ್ನು ಎದೆಗುಂದಿಸಿ, ತಾನು ನಿಕುಂಭಿಳೆಗೆ ಹೋಗಿ ಹೋಮ ಮಾಡುತ್ತಿದ್ದಾನೆ. ನಾನು ಈ ರಾವಣನ ಉಪಾಯವನ್ನು ಬಲ್ಲೆ. ನೀನು ನಮ್ಮನ್ನು ಲಕ್ಷ್ಮಣನೊಡನೆ ಕಳುಹಿಸು. ಲಕ್ಷ್ಮಣನು ಇಂದ್ರಜಿತುವನ್ನು ಸಂಹರಿಸಿಯಾನು.”

ಅದರಂತೆ ವಾನರಸೇನಾಸಮೇತನಾಗಿ ಲಕ್ಷ್ಮಣನು ಇಂದ್ರಜಿತುವನ್ನು ಎದುರಿಸಲು ಉದ್ಯುಕ್ತನಾಗಿ ನಿಕುಂಭಿಳೆಗೆ ಹೋಗುತ್ತಾನೆ. ಲಕ್ಷ್ಮಣನಿಗೂ ಇಂದ್ರಜಿತುವಿಗೂ ಯುದ್ಧ ಪ್ರಾರಂಭವಾಗಿದೆ. ಇಂದ್ರಜಿತುವಿನ ಪರಾಕ್ರಮವೆಂಥಾದ್ದೆಂಬುದನ್ನು ಲಕ್ಷ್ಮಣನು ಕಂಡುಕೊಂಡಿದ್ದಾನೆ. ಕೇವಲ ಶಸ್ತ್ರಾಸ್ತ್ರಗಳ ಶಕ್ತಿಯಿಂದ ಇಂದ್ರಜಿತುವನ್ನು ವಧಿಸಲಾಗದೆಂಬುದನ್ನು ಲಕ್ಷ್ಮಣನು ತಿಳಿದುಕೊಂಡಿದ್ದಾನೆ. ಶಸ್ತ್ರಬಲಕ್ಕಿಂತ ಮಹತ್ತರವಾದ ಬಲ ತನ್ನ ಕಾರ್ಯಕ್ಕೆ ಅವಶ್ಯವೆಂಬುದನ್ನು ಲಕ್ಷ್ಮಣನು ಮನಗಂಡು, ಅದಕ್ಕಾಗಿ ಮೊದಲು ತನ್ನ ಅಣ್ಣ ಶ್ರೀರಾಮನ ಬಳಿ ಹೋಗಿ ಆತನ ಪಾದಗಳನ್ನು ಸೇವಿಸುತ್ತಾನೆ.

ಬಳಿಕ ಯುದ್ಧಾರಂಭವಾಗುತ್ತದೆ. ಕೊಂಚ ಶಸ್ತ್ರಾಸ್ತ್ರಗಳ ವಿನಿಮಯ ನಡೆಯುತ್ತದೆ. ವಿಭೀಷಣನು ಲಕ್ಷ್ಮಣನಿಗೆ ಉಪಾಯ ಸೂಚನೆ ಮಾಡಿ ಅವನನ್ನು ಹುರಿದುಂಬಿಸುತ್ತಾನೆ. ಇಂದ್ರಜಿತುವಿಗೂ ಲಕ್ಷ್ಮಣನಿಗೂ ವಾಗ್ವಾದ ನಡೆಯುತ್ತದೆ. ಆ ವಿವಾದದಲ್ಲಿ ಸ್ವಾರಸ್ಯ ತುಂಬಿದೆ.

ಲಕ್ಷ್ಮಣನ ಶಪಥ

ಲಕ್ಷ್ಮಣನು ತನ್ನ ಕಟ್ಟಕಡೆಯ ಬಾಣವನ್ನು ಪ್ರಯೋಗಿಸುವಾಗ ಒಂದು ಶಪಥ ಮಾಡುತ್ತಾನೆ. ಇದು ಪ್ರಸಿದ್ಧವಾದದ್ದು. ಈ ವಾಕ್ಯದಲ್ಲಿ ಲಕ್ಷ್ಮಣನು ಶ್ರೀರಾಮನ ವಿಷಯದಲ್ಲಿ ಇಟ್ಟುಕೊಂಡಿದ್ದ ನಂಬಿಕೆ ಅಭಿವ್ಯಕ್ತವಾಗಿದೆ. ಅದು ಹೀಗೆ:

ಧರ್ಮಾತ್ಮಾ ಸತ್ಯಸಂಧಶ್ಚ
ರಾಮೋ ದಾಶರಥಿರ್ಯದಿ ।
ಪೌರುಷೇ ಚಾಪ್ರತಿದ್ವಂದ್ವಃ
ಶರೈನಂ ಜಹಿ ರಾವಣಿಮ್‍ ॥ ಸರ್ಗ ೯೧, ಶ್ಲೋಕ ೭೨

“ಶ್ರೀರಾಮನು (೧) ಧರ್ಮಾತ್ಮನಾಗಿದ್ದಲ್ಲಿ, (೨) ಸತ್ಯಸಂಧನಾಗಿದ್ದಲ್ಲಿ, (೩) ದಶರಥಪುತ್ರನಾಗಿದ್ದಲ್ಲಿ, (೪) ಪರಾಕ್ರಮದಲ್ಲಿ ಎದುರಾಳಿಯಿಲ್ಲದವನಾಗಿದ್ದಲ್ಲಿ, ಎಲೈ ಬಾಣವೆ, ನೀನು ರಾವಣಪುತ್ರನಾದ ಇವನನ್ನು ಹೊಡೆದು ಕೊಲ್ಲು.”

ಈ ವಾಕ್ಯದಲ್ಲಿ ನಾಲ್ಕು ಕರಾರುಗಳನ್ನು ಹೇಳಿದ್ದಾನೆ ಲಕ್ಷ್ಮಣ. ಇದರ ಮೇಲೆ ವ್ಯಾಖ್ಯಾನಕಾರರ ಯುಕ್ತಿ ಬೆಳೆಯಲು ಅವಕಾಶ ದೊರೆತಿದೆ. ಅವರ ತಕರಾರಿಗೆ ಮುಖ್ಯಾಧಾರವಾದದ್ದು “ರಾಮೋ ದಾಶರಥಿರ್ಯದಿ” ಎಂಬ ಪದಸಮುಚ್ಚಯ. ಈ ತಕರಾರನ್ನು ದಾಟಲು ಸುಲಭವಾದ ದಾರಿಯೊಂದುಂಟು. “ದಾಶರಥಿ” ಎಂಬುದನ್ನು ರಾಮ ಎಂಬ ಪದಕ್ಕೆ ವಿಶೇಷಣ ಮಾಡಿಕೊಂಡರಾಯಿತು. “ದಶರಥಪುತ್ರನಾದ ರಾಮನು” ಎಂದರ್ಥ. “ದಶರಥಪುತ್ರನಾದ” ಎಂದು ಹೇಳಬೇಕಾದದ್ದೇಕೆ ಎಂದರೆ ಭಾರ್ಗವರಾಮ ಮೊದಲಾದವರಿಂದ ಪ್ರತ್ಯೇಕವೆಂದು ತೋರಿಸುವುದಕ್ಕೆ.

ಹೀಗೆ ಮಾಡದೆ “ರಾಮನು ದಶರಥಪುತ್ರನಾಗಿರುವ ಪಕ್ಷದಲ್ಲಿ” ಎಂದು ಅರ್ಥಮಾಡುವುದು ಸಾಧ್ಯವಿದೆ. ಇದು ಲೋಕದಲ್ಲಿ ಶಪಥ ನುಡಿಯುವ ರೀತಿಯಾಗಿ ಪ್ರಸಿದ್ಧವಾಗಿದೆ. ಈಗಲೂ ಸಾಮಾನ್ಯ ಜನರು ರೋಷಾವೇಶದಲ್ಲಿ ಮಾತನಾಡುವಾಗ “ನಾನು ಇಂಥಾವನ ಮಗನಾಗಿ ಹುಟ್ಟಿ ಇಂಥಾವನ ಹೆಸರು ಹೇಳಿಕೊಂಡು” –ಹೀಗೆ ಆಣೆಯಿಡುವುದು ರೂಢಿಯಲ್ಲಿದೆ. ಈ ಲೋಕರೂಢಿಯನ್ನು ಲಕ್ಷ್ಮಣನು ಅನುಸರಿಸಿದನೆಂದು ಭಾವಿಸುವುದರಲ್ಲಿ ತಪ್ಪೇನಿದೆ? ಆ ಧೋರಣೆಯಲ್ಲಿ ಒಂದು ಧೀರತನ, ಒಂದು ದಿಟ್ಟತನ ಕಾಣುತ್ತದೆ. ಕುಲದ ಹೆಸರನ್ನು ಹೇಳಿಕೊಳ್ಳುವುದು ಒಂದು ಹೆಮ್ಮೆ.

ಇನ್ನೊಂದು ಪ್ರಶ್ನೆ. “ರಾಮೋ ದಾಶರಥಿರ್ಯದಿ” –ಇದರ ವಿಷಯದಲ್ಲಿ ಸಂದೇಹ ಉಂಟೇನು? ರಾಮಲಕ್ಷ್ಮಣಾದಿಗಳು ಯಜ್ಞಪುರುಷನು ಕೊಟ್ಟ ಪಾಯಸದ ಪ್ರಭಾವದಿಂದ ಹುಟ್ಟಿದವರಲ್ಲವೆ? ಹೌದು. ಪಾಯಸದಿಂದ ಕೌಸಲ್ಯೆ ಮೊದಲಾದವರಿಗೆ ಗರ್ಭಧಾರಣ ಯೋಗ್ಯತೆ ಬಂದಿತು. ಈ ಕಾರಣದಿಂದ ಕೌಸಲ್ಯಾದಿಗಳ ಮಕ್ಕಳು ದಶರಥನ ಔರಸಪುತ್ರರಲ್ಲವೆಂದು ಸಾಧಿಸಲಾಗುತ್ತದೆಯೆ? ಹಾಗಾಗಲಾರದು. ಇಷ್ಟರಮೇಲೆ ದಶರಥನ ಜನಕತ್ವವನ್ನು ಅಂಗೀಕರಿಸಿದ್ದರಿಂದ ತಾನೆ ಶ್ರೀರಾಮನಿಗೆ ಪಿತೃವಾಕ್ಯಪಾಲನೆಯ ಕರ್ತವ್ಯವು ವಿಹಿತವಾದದ್ದು? ಹೀಗೆ ಶ್ರೀರಾಮನ ಮಾತಿನಿಂದಲೇ ಆತನ ದಾಶರಥಿತ್ವ ಸಿದ್ಧವಾಗುತ್ತದೆ.

ಹಾಗಾದರೆ ಸಿದ್ಧವಿಷಯವನ್ನು ಲಕ್ಷ್ಮಣನು ಸಂದೇಹಾಸ್ಪದ ತೋರುವಂತೆ ನುಡಿದದ್ದೇಕೆ? ಲಕ್ಷ್ಮಣನಿಗೆ ತಾನು ಉಪಯೋಗಿಸಿದ ನಾಲ್ಕು ವಿಶೇಷಣಗಳಲ್ಲಿ ಯಾವುದರ ವಿಷಯದಲ್ಲೂ ಸಂದೇಹ ಕೊಂಚ ಮಾತ್ರವೂ ಇರಲಿಲ್ಲ. ಆತನಿಗೆ ಶ್ರೀರಾಮಚಂದ್ರನು ಧರ್ಮಾತ್ಮನೆಂಬುದು ಸ್ವತಸಿದ್ಧವಾದ ಮಾತು. ಹಾಗೆಯೇ ರಾಮನು ಸತ್ಯಸಂಧನೆಂಬ ಮಾತು. ಹಾಗೆಯೇ ರಾಮನು ದಶರಥಪುತ್ರನೆಂಬ ಮಾತು. ಹಾಗೆಯೇ ರಾಮನು ಅಪ್ರತಿಮವೀರನೆಂಬ ಮಾತು. ಹೀಗೆ ತನ್ನ ತಿಳಿವಳಿಕೆಗೆ ಸಿದ್ಧಾಂತವಾಗಿದ್ದದ್ದರಲ್ಲಿ ‘ಯದಿ’ ಎಂಬ ವಿಶೇಷಣದಿಂದ ಪ್ರಶ್ನಾವಕಾಶ ಕಲ್ಪಿಸಿರುವುದು ಆತನ ವೀರೋದ್ವೇಗದ ಧ್ವನಿ.

ಯಾವುದು ಪರಮಸತ್ಯವೋ ಅದನ್ನು ಕುರಿತು ಲಕ್ಷ್ಮಣನು ಪ್ರತಿಜ್ಞೆ ಮಾಡುತ್ತಾನೆ. “ನಾನು ಹೇಳುವ ನಾಲ್ಕು ಮಾತುಗಳೂ ನಿಸ್ಸಂದೇಹವಾದವು. ಆದದ್ದರಿಂದ ಆ ಸತ್ಯ ಪರೀಕ್ಷೆಗಾಗಿ ಈ ಬಾಣವನ್ನು ಬಿಡುತ್ತೇನೆ. ಸತ್ಯ ಗೆಲ್ಲುತ್ತದೆ. ಆದದ್ದರಿಂದ ಈ ನಾಲ್ಕು ಸತ್ಯಗಳನ್ನು ಹೇಳುತ್ತೇನೆ. ಶ್ರುತಿ ಹೇಳುತ್ತದೆ, ‘ಸತ್ಯಮೇವ ಜಯತೇ, ನಾನೃತಮ್‍’ ಎಂದು. ಪೂರ್ವಿಕರು ಹೇಳುತ್ತಾರೆ, ‘ಯತೋ ಧರ್ಮಸ್ತತೋ ಜಯಃ’ ಎಂದು. ಈ ವಾಕ್ಯಗಳು ನಿಜವಾಗಿರುವ ಪಕ್ಷಕ್ಕೆ ಸತ್ಯಧರ್ಮನಿಷ್ಠನಾದವನ ಹೆಸರನ್ನು ಹೇಳಿ ಈ ಬಾಣವನ್ನು ಬಿಡುತ್ತೇನೆ. ಅದು ನನ್ನ ಮಾತನ್ನು ಸುಳ್ಳುಮಾಡಲಾರದು” –ಹೀಗೆಂಬುದು ಲಕ್ಷ್ಮಣನ ಅಂತರ್ಭಾವ. “ನನ್ನ ಬಾಣವು ನನಗಾಗಿ ಗೆಲ್ಲಬೇಕಾಗಿಲ್ಲ. ಸತ್ಯಧರ್ಮಗಳಿಗಾಗಿ ಅದು ಗೆಲ್ಲಲಿ. ನನ್ನಲ್ಲಿ ಸತ್ತ್ವ ಸಾಲದಿದ್ದರೂ ರಾಮ ಮಹಿಮೆಯಿಂದ ಅದಕ್ಕೆ ಸತ್ತ್ವ ಬರಲಿ.” –ಹೀಗೆಂಬುದು ಲಕ್ಷ್ಮಣನ ಅಂತರಂಗ.

ಇನ್ನೂ ವಿಚಾರಮಾಡಿ ನೋಡುವುದಾದರೆ ಧರ್ಮಾತ್ಮಾ, ಸತ್ಯಸಂಧಃ ಎಂಬೆರಡು ಮಾತುಗಳೇ ಲಕ್ಷ್ಮಣಶಪಥದ ಜೀವಾಳ. “ರಾಮೋ ದಾಶರಥಿರ್ಯದಿ” ಎಂಬುದು ಅಷ್ಟು ಮುಖ್ಯವಲ್ಲ. “ಪೌರುಷೇ ಚಾಪ್ರತಿದ್ವಂದ್ವಃ” ಎಂಬುದೂ ಗೌಣವೇ. ರಾಮನ ಶೌರ್ಯವು ಇನ್ನೂ ಪರೀಕ್ಷೆಗೆ ಬರಬೇಕಾಗಿದ್ದದ್ದು; ಆ ಹೊತ್ತಿಗೆ ಅದು ಇನ್ನೂ ಸಿದ್ಧವಾಗಿ ಇದ್ದದ್ದಾಗಿರಲಿಲ್ಲ. ಆಗಿಗೆ ಅದು ಸಾಧ್ಯ ವಸ್ತು; ಉತ್ತರೋತ್ತರ ದೃಷ್ಟಾಂತಕ್ಕೆ ಬರಬೇಕಾಗಿದ್ದದ್ದು. ಲಕ್ಷ್ಮಣನು ಒಂದು ವಿಶ್ವಾಸದ ಧೈರ್ಯದಿಂದ ಆ ಮಾತನ್ನಾಡುತ್ತಾನೆ. ಆದರೆ ರಾಮನ ಧರ್ಮ ಶ್ರದ್ಧೆ, ಸತ್ಯಸಂಧತೆ-ಇವೆರಡೂ ಆ ವೇಳೆಗೆ ಹಿಂದೆ ಎಷ್ಟೋ ಸಾರಿ ಸಿದ್ಧವಾಗಿದ್ದ ಸಂಗತಿ. ಲೋಕಕ್ಕೆ ಅತ್ಯಂತ ಅವಶ್ಯವಾಗಿದ್ದ ಗುಣಗಳು ಅವೆರಡು. ರಾಮನ ಧರ್ಮನಿಷ್ಠೆ, ರಾಮನ ಸತ್ಯನಿಷ್ಠೆ, ರಾಮನ ವಿರಕ್ತಿ, ನಿಃಸ್ವಾರ್ಥತೆ, ಸತ್ತ್ವಶುದ್ಧಿ, ಭೂತಹಿತಶ್ರದ್ಧೆ, ಶೌರ್ಯೌದಾರ್ಯಗಳು–ಇವೆಲ್ಲ ಜನ್ಯಗುಣಗಳು. ಇವಕ್ಕೆಲ್ಲ ಜನಕಗುಣವಾದದ್ದು ಧರ್ಮಶ್ರದ್ಧೆ, ಸತ್ಯಶ್ರದ್ಧೆಗಳು.

ಇನ್ನೂ ಒಂದು ಮಾತು. “ರಾಮೋ ದಾಶರಥಿರ್ಯದಿ” ಎಂಬುದರ ಧ್ವನಿಯನ್ನು ನಾವು ಗಮನಿಸಬೇಕು. “ದಶರಥನು ಸತ್ಯಕ್ಕಾಗಿ ಬದುಕಿದವನು. ಯಾರು ಸತ್ಯಧರ್ಮಗಳಿಗಾಗಿ ತನ್ನ ಸರ್ವಸ್ವವನ್ನೂ ಮುಡುಪಾಗಿಟ್ಟಿದ್ದನೋ ಅಂಥ ದಶರಥನ ಮಗ ಶ್ರೀರಾಮ. ವಂಶಗುಣ ಪ್ರಬಲತರವಾದದ್ದು. ಅದು ಈಗ ಗೆಲ್ಲುತ್ತದೆ” –ಎಂಬುದು ಲಕ್ಷ್ಮಣನ ನಂಬಿಕೆ.

ಇಂದ್ರಜಿಧ್ವದೆ

ಲಕ್ಷ್ಮಣನು ಹೀಗೆ ವೀರಪ್ರತಿಜ್ಞೆ ಮಾಡಿ ಪ್ರಯೋಗಿಸಿದ ಬಾಣವು ವ್ಯರ್ಥವಾಗಲಿಲ್ಲ.

ಹತಸ್ತು ನಿಪಪಾತಾಶು ಧರಣ್ಯಾಂ ರಾವಣಾತ್ಮಜಃ । ಸರ್ಗ ೯೧, ಶ್ಲೋಕ ೭೭

ಇಂದ್ರಜಿತುವಿನ ಪತನದಿಂದ ಯುದ್ಧವನ್ನು ಮುಪ್ಪಾಗಪಾಲು ಗೆದ್ದಂತಾಯಿತು. ಈಗ ಉಳಿದಿದ್ದವನು ನಿಸ್ಸಹಾಯನಾದ ರಾವಣನೊಬ್ಬ. ಕಪಿ ಸಮೂಹಕ್ಕೆ ಸಂತೋಷವಾದದ್ದು ಹಾಗಿರಲಿ; ವಾಲ್ಮೀಕಿಗಳಿಗೇ ಮೈಮರೆತು ಹೋಯಿತು. ನೋಡಿ, ಹೇಗೆ ಹೇಳುತ್ತಾರೆ:

ಕ್ಷ್ವೇಲಂತಶ್ಚ ನದಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ॥
ಲಾಂಗೂಲಾನಿ ಪ್ರವಿಧ್ಯಂತಃ ಸ್ಫೋಟಯಂತಶ್ಚ ವಾನರಾಃ ॥
ಲಕ್ಷ್ಮಣೋ ಜಯತೀತ್ಯೇವಂ ವಾಕ್ಯಂ ವಿಶ್ರಾವಯಂಸ್ತದಾ । ಸರ್ಗ ೯೧, ಶ್ಲೋಕಗಳು ೯೫–೯೭

ನಮ್ಮ ಕಾಲದಲ್ಲಿ ಕಾಲ್ಚೆಂಡಾಟ (Football) ನಡೆಯುತ್ತಿರುವಾಗ ಆಟ ಆಡುತ್ತಿರುವವರ ರಭಸ ಹಾಗಿರಲಿ, ನೋಡುತ್ತಿರುವವರಲ್ಲಿ ಯಾರು ಯಾರೋ ತಮತಮಗೆ ಬೇಕಾದ ಆಟಗಾರನು ಮುನ್ನುಗ್ಗಿ ಚೆಂಡನ್ನು ಒದ್ದಾಗ ಹೇಗೆ ಕೂಗಿಕೊಳ್ಳುತ್ತಾರೆ? ಹಾಗೆ ಕೂಗಿಕೊಂಡರಂತೆ ಕಪಿಗಳು, ಲಕ್ಷ್ಮಣನ ಜಯವನ್ನು ಕುರಿತು.

ರಾವಣನ ಕೋಪ

ರಾವಣಾಸುರನಿಗೆ ಪುತ್ರನಾಶದ ವಾರ್ತೆಯನ್ನು ಕೇಳಿದಾಗ ದುಃಖವಾದದ್ದಕ್ಕಿಂತ ಹೆಚ್ಚಾಗಿ ಕೋಪ ಬಂತು.

ದಂತಾನ್‍ ವಿದಶತಸ್ತಸ್ಯ ಶ್ರೂಯತೇ ದಶನಸ್ವನಃ ॥ ಸರ್ಗ ೯೩, ಶ್ಲೋಕ ೨೪

ಹಲ್ಲುಗಳನ್ನು ಕಟಕಟಾಯಿಸಿದನಂತೆ.

ಸಂಕ್ರುದ್ಧಃ ಖಡ್ಗಮಾದಾಯ ॥

ಅಭಿದುದ್ರಾವ ವೈದೇಹೀಂ ರಾವಣಃ ಕ್ರೋಧಮೂರ್ಛಿತಃ । ಸರ್ಗ ೯೩, ಶ್ಲೋಕಗಳು ೪೦–೪೫

ರಾವಣನನ್ನು ಪರಿವಾರದವರು ತಡೆದರು, ಸೀತಾದೇವಿಯು “ರಾವಣನು ನನ್ನನ್ನು ವಧಿಸುವುದಕ್ಕಾಗಿ ಬರುತ್ತಿದ್ದಾನೋ ಅಥವಾ ರಾಮಲಕ್ಷ್ಮಣರನ್ನು ಸಂಹರಿಸುವುದಕ್ಕಾಗಿ ಬರುತ್ತಿದ್ದಾನೋ? ನನ್ನ ಕಾರಣದಿಂದ ಇಷ್ಟೊಂದು ಅನರ್ಥಗಳು ನಡೆಯುತ್ತಿವೆಯಲ್ಲ! ಹನುಮಂತನು ಅಂದು ಹೇಳಿದ ಮಾತಿನಂತೆ ನಾನು ಅವನ ಬೆನ್ನೇರಿ ಹೋಗಿದ್ದಿದ್ದರೆ ಆಗಿತ್ತೋ ಹೇಗೋ!” ಎಂದು ಪ್ರಲಪಿಸಿದಳು. ಅಷ್ಟರಲ್ಲಿ ಸುಪಾರ್ಶ್ವನೆಂಬ ರಾಕ್ಷಸನು ದಶಕಂಠನನ್ನು ಕುರಿತು–

ಕಥಂ ನಾಮ ದಶಗ್ರೀವ
ಸಾಕ್ಷಾದ್ವೈಶ್ರವಣಾನುಜ ॥
ವೇದವಿದ್ಯಾವ್ರತಸ್ನಾತಃ
ಸ್ವಕರ್ಮನಿರತಸ್ಸದಾ ॥

ಸ್ತ್ರಿಯಾಃ ಕಸ್ಮಾದ್ವಧಂ ವೀರ
ಮನ್ಯಸೇ ರಾಕ್ಷಸೇಶ್ವರ ॥ ಸರ್ಗ ೯೩, ಶ್ಲೋಕಗಳು ೬೨–೬೪

–ಎಂದು ಮೊದಲಾಗಿ ಹೇಳಿ, “ನಿನ್ನ ಕೋಪವನ್ನು ರಾಮನಲ್ಲಿ ತೀರಿಸಿಕೋ” (“ರಾಘವೇ ಕೋಪಮುತ್ಸೃಜ”) ಎನ್ನುತ್ತಾನೆ,

ಬಳಿಕ ರಾವಣನು ತನ್ನ ಪರಿಜನದ ಸಭೆಯನ್ನು ಕುರಿತು ಯುದ್ಧಸನ್ನದ್ಧರಾಗುವಂತೆ ಪ್ರೇರಿಸುತ್ತಾನೆ. ಅವರು ಯುದ್ಧಾರಂಭಮಾಡುತ್ತಾರೆ. ಶ್ರೀರಾಮನು ಧನುಸ್ಸನ್ನೆತ್ತಿ ಅವರ ಮೇಲೆ ಬಾಣಗಳನ್ನು ಮಳೆಗೆರೆಯುತ್ತಾನೆ. ಆ ಬಾಣಗಳಿಂದ ಪೆಟ್ಟು ತಿಂದು ಮೈ ಕೈ ಮುರಿದುಕೊಂಡ ರಾಕ್ಷಸರು ದಿಗ್ಭ್ರಾಂತರಾಗಿ ರಾಮನ ಆಕಾರವನ್ನು ಕಾಣಲಾರದವರಾಗಿ ತಮ್ಮ ತಮ್ಮಲ್ಲಿಯೇ ಒಬ್ಬರನ್ನೊಬ್ಬರು ರಾಮನೆಂದುಕೊಂಡು ಬಡಿದಾಡಿದರು.

ಯುದ್ಧ ಹೀಗೆ ಮುಂದೆ ಸಾಗಿತು. ಲಕ್ಷ್ಮಣನು ಏಳು ಬಾಣಗಳಿಂದ ರಾವಣನ ಧ್ವಜವನ್ನೂ ಸಾರಥಿಯ ತಲೆಯನ್ನೂ ಕುದುರೆಗಳ ತಲೆಗಳನ್ನೂ ತರಿದನು. ರಾವಣನನ್ನು ಐದು ಬಾಣಗಳಿಂದ ಗಾಯಪಡಿಸಿದನು. ರಾವಣನು ಅತ್ಯಂತ ಕ್ರುದ್ಧನಾಗಿ, ತನ್ನಮೇಲೆ ಗದಾಪ್ರಹಾರ ಮಾಡುತ್ತಿದ್ದ ವಿಭೀಷಣನ ಮೇಲೆ ಶಕ್ತ್ಯಸ್ತ್ರವನ್ನು ಪ್ರಯೋಗಿಸಿದನು. ಲಕ್ಷ್ಮಣನು ಮೂರು ಬಾಣಗಳಿಂದ ಆ ಅಸ್ತ್ರವನ್ನು ಕತ್ತರಿಸಿ ಹಾಕಿದನು. ರಾವಣನು–

ಇತ್ಯೇವಮುಕ್ತ್ವಾ ತಾಂ ಶಕ್ತಿಂ
ಅಷ್ಟಘಂಟಾಂ ಮಹಾಸ್ವನಾಮ್‍ ।
ಮಯೇನ ಮಾಯಾವಿಹಿತಾಂ
ಅಮೋಘಾಂ ಶತ್ರುಘಾತಿನೀಮ್‍ ।

ರಾವಣಃ ಪರಮಕ್ರುದ್ಧಃ
ಚಿಕ್ಷೇಪ ಚ ನನಾದ ಚ । ಸರ್ಗ ೧೦೧, ಶ್ಲೋಕಗಳು ೩೦–೩೧

ಈ ಶಕ್ತ್ಯಾಯುಧದಿಂದ ಲಕ್ಷ್ಮಣನು ಹೃದಯ ಭಾಗದಲ್ಲಿ ಏಟು ತಿಂದು ನೆಲದ ಮೇಲೆ ಬಿದ್ದನು. ರಾಮನು ಎದೆಗುಂದದೆ ಲಕ್ಷ್ಮಣನನ್ನು ತಬ್ಬಿಕೊಂಡು ಹನುಮಂತನನ್ನು ಕುರಿತು “ನೀವುಗಳೆಲ್ಲ ಲಕ್ಷ್ಮಣನನ್ನು ಸುತ್ತುಗಟ್ಟಿ ಸಲಹಿಕೊಂಡಿರಿ. ನಾನು ಮಿಕ್ಕೆಲ್ಲವನ್ನೂ ಬಿಟ್ಟು ರಾವಣನನ್ನು ಕೊನೆಗಾಣಿಸುತ್ತೇನೆ.”

ಅರಾವಣಮರಾಮಂ ವಾ
ಜಗದ್ದ್ರಕ್ಷ್ಯತ ವಾನರಾಃ ॥
ಅದ್ಯ ರಾಮಸ್ಯ ರಾಮತ್ವಂ
ಪಶ್ಯಂತು ಮಮ ಸಂಯುಗೇ ॥ ಸರ್ಗ ೧೦೧, ಶ್ಲೋಕಗಳು ೪೯–೫೫

ಇನ್ನು ಲೋಕದಲ್ಲಿ ರಾವಣನಿರುವುದಿಲ್ಲ, ಅಥವಾ ರಾಮನಿರುವುದಿಲ್ಲ. ಈ ನಿರ್ಣಾಯಕವಾದ ಯುದ್ಧವನ್ನು ಈಗ ಕಾಣುವಿರಿ. “ಈಗ ನೋಡಿರಿ ರಾಮನ ರಾಮತ್ವವನ್ನು” -ಎಂದು ಪ್ರತಿಜ್ಞೆ ಮಾಡುತ್ತಾನೆ.

ರಾವಣನ ಹಟ

ಇತ್ತ ರಾವಣನಾದರೋ ರಾಮಪರಾಕ್ರಮವನ್ನು ನೋಡಿ ಚಿಂತಾಕ್ರಾಂತನಾಗಿ ಅಂತಃಪುರಕ್ಕೆ ಹೋಗಿ ತನ್ನ ಜ್ಯೇಷ್ಠಭಾರ್ಯೆಯಾದ ಮಂಡೋದರಿಯೊಡನೆ ತನ್ನ ವ್ಯಾಕುಲವನ್ನು ತೋಡಿಕೊಂಡ.

ರಾವಣನ ಕಣ್ಣಿಗೆ ಎಲ್ಲೆಲ್ಲಿಯೂ ರಾಮನೇ.

ಏಕಂ ರಾಮಸಹಸ್ರಾಣಿ
ಪಶ್ಯಾಮ್ಯದ್ಯ ಸುಮಧ್ಯಮೇ ।
ಅದ್ಯ ರಾಮಾಭಿಭೂತೋಽಹಂ
ದೃಷ್ಟ್ವಾ ವಿಷಮಲೋಚನಮ್‍ ।

“ಈಗ ನನಗಿರುವ ಗತಿ ಪರಮೇಶ್ವರನೊಬ್ಬನೇ. ಕೈಲಾಸಾಧಿಪತಿಯು ನನಗೆ ವರ ಪ್ರದಾನ ಮಾಡಿದ್ದಾನೆ, ‘ನೀನು ಹೋಮ ಮಾಡಿದಾಗ ಯಜ್ಞಕುಂಡದಿಂದ ರಥ ಉತ್ಪತ್ತಿಯಾಗುತ್ತದೆ. ಅದರಲ್ಲಿ ಕುಳಿತು ಯುದ್ಧ ಮಾಡಿದಲ್ಲಿ ಎಲ್ಲ ಶತ್ರುಗಳನ್ನೂ ಸಂಹರಿಸಲು ಸಮರ್ಥನಾಗುತ್ತೀಯೆ’ –ಎಂದು. ಆದದ್ದರಿಂದ ಶಿವಾಲಯಕ್ಕೆ ಹೋಗಿ ಶಿವಾರ್ಚನೆ ಮಾಡುತ್ತೇನೆ.”

ಮಂಡೋದರಿಯು ಗಂಡನಿಗೆ ಹಿತವಚನ ಹೇಳುತ್ತಾಳೆ: “ನಾಥ, ನೀನು ಎಲ್ಲ ದೇವತೆಗಳನ್ನೂ ದಿಕ್ಪಾಲಕರನ್ನೂ ಜಯಿಸಿದವನು. ಈಗ ಈ ದುಷ್ಟಾಲೋಚನೆಯನ್ನು ಬಿಟ್ಟುಬಿಡು.”

ಜಹೀದಂ ಲೋಕಗರ್ಹಿತಮ್‍ ।
ಚೌರ್ಯಕಮಾಣ್ಯಕಾರ್ಷೀಸ್ತ್ವಮ್‍ ।
ಮಾರೀಚಸ್ಯ ವಚಃ ಪಥ್ಯಂ
ನ ಕೃತಂ ತು ಮಹಾತ್ಮನಃ ।
ನ ಹಿ ಧರ್ಮವರಿಷ್ಠಂ ತತ್‍
ವಿಭೀಷಣವಚಃ ಕೃತಮ್‍ ॥

ಈ ಉಪದೇಶವನ್ನು ರಾವಣನು ಲಾಲಿಸಿಯಾನೆ?

ಹವಿರ್ಹುತ್ವಾ ಸುನಯನೇ
ಹನಿಷ್ಯೇ ರಾಘವಂ ರಣೇ ॥ *

ಲಕ್ಷ್ಮಣನ ಮೂರ್ಛೆ, ಚಿಕಿತ್ಸೆ

ಲಕ್ಷ್ಮಣನು ಶಕ್ತ್ಯಾಯುಧದ ಪೆಟ್ಟಿನಿಂದ ಮೂರ್ಛಿತನಾಗಿ ಬಿದ್ದಿದ್ದನಲ್ಲವೆ? ಶ್ರೀರಾಮನು ವ್ರಣಚಿಕಿತ್ಸೆಯಲ್ಲಿ ನಿಪುಣನಾದ ಸುಷೇಣನೆಂಬ ಕಪಿಶ್ರೇಷ್ಠನಲ್ಲಿ ತನ್ನ ದುಃಖವನ್ನು ಹೇಳಿಕೊಂಡ. ಸುಷೇಣನು ಚಿಕಿತ್ಸೆ ಮಾಡುವುದಕ್ಕಾಗಿ ಔಷಧಿಗಳನ್ನು ತರುವಂತೆ ಆಂಜನೇಯನನ್ನು ಬೇಡಿದನು. “ಜಾಂಬವಂತನು ಆ ಔಷಧಿಗಳು ಸಿಕ್ಕುವ ಸ್ಥಳಗಳನ್ನು ತಿಳಿಸಿಯಾನು. ನೀನು ಈ ರಾತ್ರಿ ಮುಗಿಯುವುದರೊಳಗಾಗಿ, ಸೂರ್ಯೋದಯಕ್ಕೆ ಮುಂಚೆ ಔಷಧಿಗಳನ್ನು ತರಬೇಕಾದದ್ದು” ಎಂದು ನಿಯಮಿಸಿದನು. ಆಗ ಶ್ರೀರಾಮನು ನುಡಿದನುಡಿ ನಾವು ಗಮನದಲ್ಲಿರಿಸಬೇಕಾದದ್ದಾಗಿದೆ.

ಗಚ್ಛ ಶೀಘ್ರಂ ಮಹಾಬಾಹೋ
ಭ್ರಾತೃಭಿಕ್ಷಾ ಪ್ರದೀಯತಾಮ್‍ ।
ಚತುರ್ಣಾಮೇವ ಭ್ರಾತೄಣಾಂ
ಅಸ್ಮಾಕಂ ಪಂಚಮೋ ಭವಾನ್‍ ।

ಇದರಂತೆ ಆಂಜನೇಯಸ್ವಾಮಿ ನಡಸಿಕೊಡುತ್ತಾನೆ. ಆ ಕಾರ್ಯಾವಸರದಲ್ಲಿ ಕಾಲನೇಮಿ ಎಂಬ ರಾಕ್ಷಸಸಂನ್ಯಾಸಿಯಿಂದ ಕಾಲಯಾಪನೆಯಾದದ್ದು, ಆಂಜನೇಯಪ್ರಭು ಅದನ್ನು ಸಕಾಲದಲ್ಲಿ ಕಂಡುಕೊಂಡು ಎಚ್ಚತ್ತದ್ದು, ಆತನು ತಂದ ದಿವ್ಯೌಷಧದಿಂದ ಪುನಃ ಪ್ರಜ್ಞೆ ಬಂದದ್ದು ಮನೋವೇಧಕವಾದ ಕಥೆ. ಆಂಜನೇಯನು ವಂಚಿತನಾದದ್ದು ನಮ್ಮ ಕಾಲದ ಕೆಲವು ರಾಜಕೀಯ ಪ್ರಸಂಗಗಳಂತಿದೆ. ನೀರು ಕುಡಿಯಲು ಹೋಗಿ ಮೊಸಳೆಯನ್ನು ಬಡಿದು ಹೊರಕ್ಕೆ ಬಂದದ್ದು–ಇವೆಲ್ಲ ಕುತೂಹಲಕಾರಿಗಳಾದ ಉಪಕಥೆಗಳು. ಆಗ ಆ ಹೆಣ್ಣುಮೊಸಳೆ ತನ್ನ ಪೂರ್ವಕಥೆಯನ್ನು ನಿರೂಪಿಸುವ ವ್ಯಾಜದಲ್ಲಿ ರಾವಣಾಸುರನ ಹಿಂದಿನ ಒಂದು ಅಪಕಾರ್ಯವನ್ನು ವಿವರಿಸುತ್ತಾಳೆ. ಪೂರ್ವಜನ್ಮದಲ್ಲಿ ಆಕೆ ಮಾಲಿನಿಯೆಂಬ ಅಪ್ಸರಃಸ್ತ್ರೀಯಾಗಿದ್ದಳು. ಆಕೆ ಒಂದು ದಿನ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ರಾವಣನು ಬಂದು ಆಕೆಯನ್ನು ಯಾಚಿಸಿದ.

ಆಗ ಆಕೆ ತಾನು ಬ್ರಾಹ್ಮಣಭಾರ್ಯೆಯೆಂದೂ ರಜಸ್ವಲೆಯಾಗಿ ಅಸ್ಪೃಶ್ಯಳೆಂದೂ ಹೇಳಿದಳು. ರಾವಣನು ಅದಕ್ಕೆ ಹೆದರಿಯಾನೆ?

ದೇವಾಂಗನಾಽಸಿ ಬಾಲೇ ತ್ವಂ
ಸರ್ವಲೋಕಸ್ಯ ಸಮ್ಮತಾ ।
ಪುಷ್ಪಿಣೀ ಚ ವಿಶೇಷೇಣ
ರೋಚತೇ ಮಮ ಭಾಮಿನಿ ।

ಇದನ್ನು ಆಕೆಯ ಪತಿ ತಿಳಿದು ಕೊಟ್ಟ ಶಾಪದ ಕಾರಣದಿಂದ ಅವಳಿಗೆ ಮೊಸಳೆಯ ಜನ್ಮ ಬಂದಿತು. ಆ ಶಾಪದಿಂದ ಈಗ ವಿಮೋಚನೆ.

ಹನುಮಂತನು ಅಲ್ಲಿಂದ ಹೊರಡುವುದಕ್ಕೆ ಮುಂಚೆ ಕಾಲನೇಮಿ ರಾಕ್ಷಸನು

ಗೃಹಾಣ ಮಮ ಮಂತ್ರಾಂಸ್ತು
ಶಿಷ್ಯೋ ಮೇ ಭವ ಪುತ್ರಕ ।

ಎಂದು ತನ್ನ ಗುರುಸ್ಥಾನೀಯತೆಯನ್ನು ಹೇಳಿಕೊಂಡ. ಆಂಜನೇಯನಾದರೋ

ಮಂತ್ರಾನಧೀತ್ಯ ಶಿಷ್ಯೇಣ
ದಾತವ್ಯಾ ಗುರುದಕ್ಷಿಣಾ ।
ಗೃಹಾಣ ದಕ್ಷಿಣಾಮೇತಾಂ
ಇತ್ಯುಕ್ತ್ವಾ ರೋಷತಾಂ ಗತಃ ॥
ಜಘಾನೋರಸಿ ರಾಕ್ಷಸಮ್‍ ।

ಆ ಮುಷ್ಟಿಪ್ರಹಾರವಾದ ಮೇಲೆ ಕಾಲನೇಮಿಯ ರಾಕ್ಷಸರೂಪ ಸ್ಪಷ್ಟವಾಯಿತು. *

ಇಂಥ ಉಪಕಥೆಗಳಿಂದ ಯುದ್ಧದ ಘೋರ ಪ್ರಕರಣವು ಸಾಧುಗಳಿಗೆ ಮನೋರಂಜಕವಾಗಿದೆ.

ರಾವಣನ ಹೋಮಭಂಗ

ರಾವಣಾಸುರನು ಇಂದ್ರಜಿದ್ವಧಾ ನಂತರ ದಿಕ್ಕೆಟ್ಟವನಾಗಿ ಪಾತಾಳ ಗುಹೆಯನ್ನು ಹೊಕ್ಕು ಮಾರಣಹೋಮ ಮಾಡುವುದಕ್ಕಾಗಿ ಹೊರಟ.

ಕಾಕಾನ್‍ ಗೃಧ್ರಾನ್‍ ವಯಶ್ಶ್ಯೇನಾನ್‍
ಭಲ್ಲೂಕಾನ್‍ ಕುಕ್ಕುಟಾನಪಿ ।...

ಹೀಗೆ ನಾನಾ ಜಂತುಗಳನ್ನು ಆಹುತಿ ಕೊಟ್ಟ.

ಹುತ್ವಾ ರೋಮಾಣಿ ಕೇಶಾಂಶ್ಚ

ಜುಹಾವ ರಣಕೋವಿದಃ ॥ ಈ ಭಯಂಕರ ಹೋಮದಿಂದ ವಿಭೀಷಣನಿಗೆ ಕೂಡ ತಲ್ಲಣವುಂಟಾಯಿತು. ಆ ಹೋಮವನ್ನು ಧ್ವಂಸ ಮಾಡಬೇಕೆಂದು ಚಿಂತಿಸಿದಾಗ ವಿಭೀಷಣನ ಹೆಂಡತಿ ಸರಮಾ ಎಂಬಾಕೆ ಆ ಹೋಮ ನಡೆಯುತ್ತಿದ್ದ ರಹಸ್ಯ ಸ್ಥಳವನ್ನು ಕೈಸನ್ನೆಯಿಂದ ತೋರಿಸಿದಳು. ಅಂಗದನು ಆಗ ಮಂಡೋದರಿಯ ಮುಂದಲೆ ಹಿಡಿದು ಆ ಕಡೆಗೆ ಎಳೆದು ತಂದ. ಮಂಡೋದರಿ ಅಳುತ್ತಾ ಗಂಡನನ್ನು ಕುರಿತು “ನಿನಗೆ ನಾಚಿಕೆಯಿಲ್ಲವೆ?” ಎಂದು ಮೂದಲಿಸಿದಳು. ಅದರಿಂದ ಉದ್ರಿಕ್ತನಾದ ರಾವಣನು ಖಡ್ಗ ಹಿಡಿದು ಅಂಗದನ ಮೇಲೆ ನುಗ್ಗಿದನು. ಹಾಗೆ ಹೋಮವಿಘ್ನವಾಯಿತು.

ರಾವಣನು ಮಂಡೋದರಿಗೆ ಸಾಂತ್ವವಚನಗಳನ್ನು ಹೇಳಿ ಹೀಗೆಂದನು: “ನಾನು ರಾಮಲಕ್ಷ್ಮಣರನ್ನೂ ಕಪೀಶ್ವರರನ್ನೂ ಸಂಹಾರ ಮಾಡುವವನಾಗಿದ್ದೇನೆ. ಹಾಗೆ ಆಗದೆ ರಾಮನು ನನ್ನನ್ನು ಬೀಳಿಸಿದ್ದೇ ಆದರೆ, ಆಗ ನೀನು ನನ್ನ ಉತ್ತರ ಕ್ರಿಯೆಗಳನ್ನು ಮಾಡಿಸತಕ್ಕದ್ದು. ಆಗ ನೀನು ವೈದೇಹಿಯನ್ನು ಸಮಾಧಾನಪಡಿಸಿ ನನ್ನೊಡನೆ ಸಾಯತಕ್ಕದ್ದು. ‘ಮರ್ತವ್ಯಂ ತು ಮಯಾ ಸಹ ।’”

ಹೀಗೆ ಮರ್ಮಭೇದಕವಾದ ರೀತಿಯಲ್ಲಿ ವಾಗ್ವಾದ ನಡೆಯುತ್ತದೆ. ರಾಮನು ಅವಧ್ಯನೆಂದು ಆಕೆ ಹೇಳುತ್ತಾಳೆ.

ಮರಣಂ ನ ಜರಾ ಚೈವ
ಕಥಂ ಯಾಮಿ ತ್ವಯಾ ಸಹ ।
ದಾಸೀ ಭವಾಮಿ ರಾಮಸ್ಯ
ವಿಭೀಷಣಗೃಹೇಽಥವಾ ।

ಹೀಗೆ ನಿರಾಸೆಯಿಂದ ವಿಲಪಿಸುತ್ತಿದ್ದವಳನ್ನು ಕುರಿತು ರಾವಣನು ಹೇಳಿದ: “ಹೇ ಮಂಡೋದರಿ, ನಿನ್ನಿಂದ ತಿರಸ್ಕರಿಸಲ್ಪಟ್ಟು ನಾನು ಹೇಗೆ ಬದುಕಲಿ?”

ಜೀವನೇ ಚ ನ ಮೇ ಸ್ಪೃಹಾ ॥
ವಿಮುಚ್ಯ ತ್ವಾಂ ಚ ಸಂಸಾರಂ
ಗಮಿಷ್ಯೇ ಮುಕ್ತಿವಲ್ಲಭಾಮ್‍ ।
ಚಿದಾನಂದಮಯೀ ಶುದ್ಧಾ
ಸೇವ್ಯತೇ ಯಾ ಮುಮುಕ್ಷುಭಿಃ ।
ತಾಂ ಗತಿಂ ತು ಗಮಿಷ್ಯಾಮಿ
ಹತೋ ರಾಮೇಣ ಸಂಯುಗೇ । *

ಎಂಥ ಮಾತು! ವೇದಾಂತಸಾರವನ್ನು ಇದರಲ್ಲಿ ಹಿಂಡಿದ್ದಾನೆ ರಾವಣ.

ದೈವ ವೈಕಟ್ಯ

ಇದು ರಾವಣನ ಹೃದಯವನ್ನು ಎತ್ತಿ ತೋರಿಸತಕ್ಕ ಮಾತು. ರಾವಣನು ವಾಸ್ತವವಾಗಿ ಅಸಂಸ್ಕೃತನಲ್ಲ. ಪುಣ್ಯಪಾಪವಿವೇಕದಲ್ಲದವನಲ್ಲ. ಮಹಾತೇಜಸ್ವಿ; ಬ್ರಹ್ಮಕುಲ ಸಂಭೂತನಾದವನು. ಅವನನ್ನು ಅವನ ಶಕ್ತಿಗೆ ಒಳಗಾಗದ ಯಾವುದೋ ಒಂದು ಕಾಮಚೋದನೆ ಪೀಡಿಸುತ್ತಿತ್ತು. ಆ ಕಾಮಚೋದನೆಯನ್ನು ದಮನ ಮಾಡಬೇಕೆಂದು ಅವನು ಎಷ್ಟೋ ಬಗೆಯಾಗಿ ಪ್ರಯಾಸಪಟ್ಟ; ತನಗೆ ತಾನೇ ಬುದ್ಧಿ ಹೇಳಿಕೊಂಡ. ಸಾವಿರಾರುಸಲ ತನ್ನ ಆಸೆ ಅಸಭ್ಯವಾದದ್ದೆಂದೂ ಕಲುಷಿತವಾದದ್ದೆಂದೂ ನೆನೆನೆನೆದುಕೊಂಡಿದ್ದ. ಅವನು ಎಷ್ಟು ಪಶ್ಚಾತ್ತಾಪಪಟ್ಟಿದ್ದರೂ, ಎಷ್ಟು ಆತ್ಮಸಂಯಮ ಪ್ರಯತ್ನ ಮಾಡಿದ್ದರೂ ಅವನ ಮನಸ್ಸಿನಲ್ಲಿದ್ದ ಕಾಮವು ಅವನ ವಿವೇಕಕ್ಕಿಂತಲೂ, ಅವನ ಆತ್ಮ ಸಂಯಮಕ್ಕಿಂತಲೂ ಪ್ರಬಲವಾಗಿ ಅವನನ್ನು ಬಾದಿಸುತ್ತಿತ್ತು. ಇದನ್ನು ರಾವಣನು ತಿಳಿದುಕೊಂಡು, ಆ ದೇಹವಿರುವವರೆಗೂ ತನಗೆ ಆ ಪಾಪದ ಬಾಧೆ ತಪ್ಪಿದ್ದಲ್ಲವೆಂದೂ ದೇಹಪಾತದಿಂದಲೇ ತನಗೆ ಪಾಪದಿಂದ ಬಿಡುಗಡೆಯೆಂದೂ ನಿಶ್ಚಯ ಮಾಡಿಕೊಂಡಿದ್ದ.

ಇದನ್ನೇ ಇಂಗ್ಲಿಷಿನಲ್ಲಿ ‘ಟ್ರಾಜಿಕ್‍ ಎಲಿಮೆಂಟ್‍’ (Tragic element) ದೈವ ವೈಕಟ್ಯಾಂಶವೆನ್ನುತ್ತಾರೆ. ಸರ್ವಗುಣ ಸಂಪನ್ನನಾದ ಒಬ್ಬ ಮಹಾಪುರುಷನು ಸರ್ವ ಬಲೋಪೇತನಾದವನು, ಸರ್ವವಿದ್ಯಾಸಂಪನ್ನನಾದವನು ತನ್ನ ಜೀವನಕ್ಕೆ ಸಂಬಂಧಪಟ್ಟ ನೂರು ಅಂಶಗಳ ಪೈಕಿ ತೊಂಭತ್ತೊಂಭತ್ತರಲ್ಲಿ ಉದ್ದಾಮನಾಗಿದ್ದುಕೊಂಡು, ಮಹಾವೀರನಾಗಿದ್ದುಕೊಂಡು, ಯಾವುದೋ ಒಂದೇ ಒಂದು ಅಂಶದಲ್ಲಿ ಮಾತ್ರ ದುರ್ಬಲನಾಗಿರುತ್ತಾನೆ. ಆ ಒಂದು ಅಂಶವನ್ನು ಬಿಟ್ಟರೆ ಮಿಕ್ಕೆಲ್ಲದರಲ್ಲೂ ಅವನು ಧೀರ. ಆ ಒಂದು ಅಂಶದಲ್ಲಿ ಮಾತ್ರ ಅವನು ದುರ್ಬಲ. ಆ ಒಂದು ದೌರ್ಬಲ್ಯದ ಕಾರಣದಿಂದ ಅವನ ಮಿಕ್ಕೆಲ್ಲ ಗುಣಸಂಪತ್ತುಗಳೂ ಮಣ್ಣುಪಾಲಾಗುತ್ತವೆ. ಆನೆಯನ್ನು ಕಟ್ಟುವ ಕಬ್ಬಿಣದ ಸರಪಳಿಯಲ್ಲಿ ನೂರು ಕೊಂಡಿಗಳಿರುತ್ತವೆ. ಒಂದೇ ಒಂದು ಕೊಂಡಿ ಮಾತ್ರ ಸವೆದಿರುತ್ತದೆ. ಮಿಕ್ಕ ತೊಂಭತ್ತೊಂಭತ್ತು ಕೊಂಡಿಗಳು ಗಟ್ಟಿಯಾಗಿ ಪಟುವಾಗಿರುತ್ತವೆ. ಆದರೆ ಸವೆದ ಒಂದು ಕೊಂಡಿ ಗಟ್ಟಿಯಾದ ತೊಂಭತ್ತೊಂಭತ್ತು ಕೊಂಡಿಗಳಿಗೆ ಮೃತ್ಯುಪ್ರಾಯವಾಗುತ್ತದೆ. ಇದೇ ಟ್ರ್ಯಾಜಿಕ್‍ ಕಥಾನಾಯಕನ ಲಕ್ಷಣ. ಇದು ರಾವಣನಲ್ಲಿ ಕಾಣಬರುತ್ತದೆ. ಅವನ ಶೌರ್ಯ ಸಾಹಸಗಳೂ ವಿದ್ಯೆ ವಿವೇಕಗಳೂ ಅವನ ಒಂದೇ ಒಂದು ಅಂತರಂಗ ವೈಕಲ್ಯದಿಂದ ನಿರರ್ಥಕಗಳಾಗುತ್ತವೆ. ಆ ಅಂತರಂಗಪೀಡೆಯ ಬಲಿಷ್ಠತೆಯನ್ನು ರಾವಣನು ಮನಸಾ ಕಂಡುಕೊಂಡ ಘಳಿಗೆಯಲ್ಲಿ ಅವನ ಬಾಯಿಂದ ಹೊರಟ ಮಾತು ಇದು.

ಜೇತವ್ಯಮಿತಿ ಕಾಕುತ್ಸ್ಥಃ
ಮರ್ತವ್ಯಮಿತಿ ರಾವಣಃ ।

ದಶಕಂಠಪತನ

ಘೋರವಾದ ಯುದ್ಧ ನಡೆಯುತ್ತದೆ, ಅದನ್ನು ವರ್ಣಿಸುವುದು ವಾಲ್ಮೀಕಿಗಳಿಗೇ ಕಷ್ಟವೆಂದೂ ತೋರಿರಬೇಕು;

ಗಗನಂ ಗಗನಾಕಾರಂ
ಸಾಗರಸ್ಸಾಗರೋಪಮಃ ।
ರಾಮರಾವಣಯೋರ್ಯುದ್ಧಂ
ರಾಮರಾವಣಯೋರಿವ । ಸರ್ಗ ೧೧೦, ಶ್ಲೋಕಗಳು ೨೩–೨೪

ರಾಮನು ತನ್ನ ಬಾಣಗಳಿಂದ ದಶಮುಖನ ಶಿರಸ್ಸುಗಳನ್ನು ಛೇದಿಸುತ್ತಾನೆ. ಅದರಿಂದ ಆದದ್ದೇನು? ಒಂದು ಶಿರಸ್ಸು ಬಿದ್ದರೆ ಇನ್ನೊಂದು ಹುಟ್ಟಿತು; ಮತ್ತೊಂದು ಶಿರಸ್ಸು ಬಿದ್ದರೆ ಮತ್ತೊಂದು ಹುಟ್ಟಿತು. ಹೀಗೆ ರಾವಣಪರಂಪರೆ ಏಳುತ್ತಿರುವುದನ್ನು ನೋಡಿ ರಾಮನು ವಿಸ್ಮಿತನಾಗಿದ್ದಾಗ ರಾಮನ ಸಾರಥಿಯಾದ ಮಾತಲಿಯು ರಾಮನಿಗೆ ಜ್ಞಾಪಕ ಕೊಡುತ್ತಾನೆ, ಆತನಿಗೆ ಅಗಸ್ತ್ಯ ಮಹರ್ಷಿಗಳು ಕೊಟ್ಟಿದ್ದ ಬ್ರಹ್ಮಾಸ್ತ್ರದ ವಿಷಯವನ್ನು.

ರಾಮನು ಬ್ರಹ್ಮಾಸ್ತ್ರವನ್ನು ರಾವಣನ ಎದೆಯ ಮೇಲೆ ಪ್ರಯೋಗಿಸಿದ. ಆಗ ದಶಕಂಠಪತನವಾಯಿತು.

ದೇವತೆಗಳು ಸಂತೋಷಿಸಿ ಪುಷ್ಪವೃಷ್ಟಿ ಕರೆದರು.

‘ಆದಿತ್ಯಹೃದಯ’

ಈ ಪ್ರಕರಣದಲ್ಲಿ ಕುತೂಹಲವಾದ ಇನ್ನೊಂದು ಸಂಗತಿ–ಶ್ರೀರಾಮನಿಗೆ ಅಗಸ್ತ್ಯರು ‘ಆದಿತ್ಯಹೃದಯ’ ವನ್ನು ಉಪದೇಶಮಾಡಿದ್ದು. ಶ್ರೀರಾಮನು ಯುದ್ಧ ಶ್ರಮದಿಂದ ಬಳಲಿ ಬೇಸತ್ತಿದ್ದಾನೆ, ಜಯೋಪಾಯವನ್ನು ಕಾಣದೆ ಚಿಂತಾಕ್ರಾಂತನಾಗಿದ್ದಾನೆ. ಆಗ ಅಗಸ್ತ್ಯ ಮಹರ್ಷಿಗಳು ಅಲ್ಲಿಗೆ ಬಂದು ಸೂರ್ಯೋಪಾಸನೆಯಿಂದ ರಾಮನಿಗೆ ಜಯಲಾಭವಾಗುವುದೆಂದು ಭರವಸೆ ಕೊಟ್ಟು ಧೈರ್ಯ ತುಂಬುತ್ತಾರೆ. ಇದೇ ಆದಿತ್ಯಹೃದಯವೆಂಬ ಪ್ರಸಿದ್ಧ ಪ್ರಕರಣ. ಆ ಪ್ರಸಿದ್ಧಿ ಆ ಮಂತ್ರದ ಮಹಿಮೆಯನ್ನು ಅವಲಂಬಿಸಿದ್ದೆಂದು ಬಹುಮಂದಿ ತಿಳಿದುಕೊಂಡಿದ್ದಾರೆ. ಅದರಲ್ಲಿ ನನಗೇನೂ ದೋಷ ಕಾಣುವುದಿಲ್ಲ. ಆದರೆ ನನ್ನ ಮನಸ್ಸಿಗೆ ಈ ಶ್ಲೋಕಗಳ ಮಂತ್ರಮಹಿಮೆಗಿಂತ ಕಡಿಮೆಯಲ್ಲದ ಶಕ್ತಿ ಅದರ ಕಾವ್ಯ ಸೌಂದರ್ಯದ್ದು. ಇದಕ್ಕೆ ಸಮಾನವಾದ ಸೂರ್ಯಪ್ರಭೆಯ ವರ್ಣನೆ ವೇದನೆಗಳಿಂದ ಹೊರಗೆ ಇಲ್ಲವೆಂದು ನಾನು ತಿಳಿದುಕೊಂಡಿದ್ದೇನೆ. “ತಪ್ತಚಾಮೀಕರಾಭಾಯ”, “ತಮೋಽಭಿನಿಘ್ನಾಯ”, “ಲೋಕಸಾಕ್ಷಿಣೇ” –ಎಂಥ ಅರ್ಥಸಮೃದ್ಧವಾದ ಮಾತುಗಳು! ಎಂಥ ಪ್ರತ್ಯಕ್ಷೀಕಾರಕ ಉಪಮಾನಗಳು! ಪದಗಳ ಸೌಂದರ್ಯಕ್ಕಾಗಿಯಾದರೂ, ಭಾವಗಳ ಸೌಂದರ್ಯಕ್ಕಾಗಿಯಾದರೂ ಈ ಆದಿತ್ಯಹೃದಯ ಸ್ತೋತ್ರವನ್ನು ಜನ ಮುಖಸ್ಥ ಮಾಡಿಕೊಳ್ಳತಕ್ಕದಾಗಿದೆ. ಆದಿತ್ಯಹೃದಯವನ್ನು ನೂರಾರು ಮಂದಿ ನಿತ್ಯ ಪಾರಾಯಣದಲ್ಲಿರಿಸಿಕೊಂಡವರಿದ್ದಾರೆ. ಅವರ ಮುಖ್ಯ ಆಶಯವು ಮಂತ್ರ ವಿಷಯದ್ದಾಗಿದ್ದರೆ ಹಾಗಿರಲಿ. ಅದರ ಜೊತೆಗೆ ಅವರು ಸತ್ಕಾವ್ಯವನ್ನೂ ಅನುಭವಿಸುತ್ತಿದ್ದಾರೆ.

ಶ್ರೀರಾಮನು ಅಗಸ್ತ್ಯರಿಂದ ಉಪದೇಶ ಪಡೆದ ಬಳಿಕ

ತ್ರಿರಾಚಮ್ಯ ಶುಚಿರ್ಭೂತ್ವಾ
ಧನುರಾದಾಯ ವೀರ್ಯವಾನ್‍ । ಸರ್ಗ ೧೦೭, ಶ್ಲೋಕ ೨೯

ರಾಮನು ಮತ್ತೆ ಯುದ್ಧೋಪಕ್ರಮ ಮಾಡುವುದಕ್ಕೆ ಮುಂಚೆ ಶುಚಿಯಾದನಂತೆ; ಮೂರುಸಲ ಆಚಮನ ಮಾಡಿದನಂತೆ. ಯುದ್ಧಕಾರ್ಯ ಆತನಿಗೆ ಮಡಿಯ ಕೆಲಸ; ಪವಿತ್ರವಾದ ಕೆಲಸ. ಮೈಲಿಗೆಯಿಂದ ಮಾಡಲಾಗುವ ಕೆಲಸವಲ್ಲ. ಈ ಭಾವ ಅನೇಕ ಕಡೆ ದೊರೆಯುತ್ತದೆ. ಯುದ್ಧವೆಂಬುದು ಉಗ್ರವಾದ ಕರ್ತವ್ಯ; ಹಗುರದ ಆಟವಲ್ಲ. ಮನಸ್ಸು ಬಂದಂತೆ ಹಿಡಿದು ಹೊಡೆಯತಕ್ಕದ್ದಲ್ಲ. ಅದಕ್ಕೆ ನಿಯಮಗಳುಂಟು. ಹೀಗೆ ನಿಯಮವಿಧೇಯವಾಗಿದ್ದದ್ದು ಪೂರ್ವಯುಗಗಳ ಯುದ್ಧ. ಯಾರೆಂದರೆ ಅವರನ್ನು, ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಕೊಲ್ಲುವುದು ನರಹತ್ಯೆಯಾದೀತೇ ಹೊರತು ಯುದ್ಧವೆಂಬ ಗೌರವವನ್ನು ಪಡೆಯಲಾರದು. ಈ ವಿಷಯವನ್ನು ಇಂದಿನ ಐರೋಪ್ಯ ಯುದ್ಧಗಳ ರೀತಿಯೊಡನೆ ಹೋಲಿಸಿ ನೋಡುವುದು ಬೋಧವಾದೀತು.

ಯುದ್ಧವು ಒಂದು ಧರ್ಮಕ್ರಿಯೆ. ಅದು ಒಂದು ವಿಶೇಷಧರ್ಮ, ಸಾಮಾನ್ಯಧರ್ಮವಲ್ಲ. ಅದು ಮಹಾಪ್ರಾಣಕ್ಕೆ ಬೇಕಾಗುವ ಶಸ್ತ್ರಚಿಕಿತ್ಸೆಯ ಹಾಗೆ: ಭಯಂಕರ ಹೌದು, ಆದರೆ ಶುಭಂಕರವೂ ಹೌದು. ಅದರಲ್ಲಿ ಅಪಾಯವುಂಟು. ಆದರೆ ಸಮರ್ಥನ ಕೈಯಿಂದ ಆದಾಗ ಅಪಾಯವಾಗದೆ ಅನಪಾಯ ಕ್ಷೇಮಲಾಭವೇ ಆಗುತ್ತದೆ.

ರಾವಣಪತನಾನಂತರ ವಿಭೀಷಣ, ಮಂಡೋದರಿ ಮೊದಲಾದವರು ಪ್ರಲಾಪ ಮಾಡುತ್ತಾರೆ. ಶ್ರೀರಾಮನು ಅವರಿಗೆ ಸಮಾಧಾನ ಹೇಳುತ್ತಾನೆ.

ವಿಭೀಷಣನು ರಾವಣನಿಗೆ ಔರ್ಧ್ವದೇಹಿಕಗಳನ್ನು ಮಾಡದೆ ಹಿಂಜರಿದಾಗ ರಾಮನು ಉತ್ತರಕ್ರಿಯೆಗಳನ್ನು ಯಥಾಕ್ರಮವಾಗಿ ನಡೆಸುವಂತೆ ವಿಭೀಷಣನನ್ನು ಒಡಂಬಡಿಸುತ್ತಾನೆ.

ಕ್ರಿಯತಾಮಸ್ಯ ಸಂಸ್ಕಾರಃ

ಮಮಾಪ್ಯೇಷ ಯಥಾ ತವ ॥ ಸರ್ಗ ೧೧೨, ಶ್ಲೋಕ ೨೬

“ಈತನಿಗೆ ಉತ್ತರಕ್ರಿಯೆಗಳನ್ನು ನಡಸು. ಈ ರಾವಣನು ನಿನಗೆ ಹೇಗೋ ನನಗೂ ಹಾಗೆ ಗೌರವಾರ್ಹನು.”

ಇಲ್ಲಿ ಕಾಣುತ್ತದೆ ರಾಮನ ದೊಡ್ಡ ಮನುಷ್ಯತನ.

ಅನಂತರ ಶ್ರೀರಾಮನು ವಿಭೀಷಣನಿಗೆ ರಾಜ್ಯಾಭಿಷೇಕ ಮಾಡಿಸಬೇಕೆಂದು ಲಕ್ಷ್ಮಣನಿಗೆ ಆಜ್ಞೆ ಮಾಡಿದ. ವಿಭೀಷಣನಿಗೆ ಲಂಕೆಯಲ್ಲಿ ಕ್ರಮವಾಗಿ ಪಟ್ಟಾಭಿಷೇಕ ನಡೆಯಿತು.

ವಿಜಯವಾರ್ತೆಯ ನಿವೇದನೆ

ಆಮೇಲೆ ವಿಜಯವಾರ್ತೆಯನ್ನು ಸೀತಾದೇವಿಗೆ ತಿಳಿಸಬೇಕೆಂದು ಆಂಜನೇಯನನ್ನು ಶ್ರೀರಾಮನು ಬೇಡಿದ. ಆಂಜನೇಯನು ಆಕೆಯನ್ನು ನೋಡಿದಾಗ ಆಕೆಯ ಮುಖ ಸೌಮ್ಯದಿಂದ ಕೂಡಿತ್ತಂತೆ. ಆಂಜನೇಯನಿಂದ ಎಲ್ಲ ಸಂಗತಿಯನ್ನೂ ಕೇಳಿದಾಗ ಆಕೆಯ ಪ್ರತಿವರ್ತನೆ ಹೇಗಿತ್ತು? ಒಬ್ಬ ಸಾಧ್ವಿಯೂ ಆಕೆಯ ಪತಿಯೂ ಹದಿನಾಲ್ಕು ವರ್ಷ ಒಬ್ಬರಿಂದೊಬ್ಬರು ಅಗಲಿದ್ದು, ಅನಿರೀಕ್ಷಿತವಾಗಿದ್ದ ನಾನಾ ವಿಪತ್ತುಗಳನ್ನೂ ಸಂಕಟಗಳನ್ನೂ ಸಹಿಸಿ, ಆ ಬಳಿಕ, ದೈವಾನುಗ್ರಹದಿಂದ ಒಬ್ಬರನ್ನೊಬ್ಬರು ಮತ್ತೆ ಸೇರುವ ಅನುಕೂಲದಶೆ ಬಂದಾಗ, ಅವರಿಬ್ಬರ ಪರಸ್ಪರ ಚರ್ಯೆ ಹೇಗಿದ್ದೀತು? ನಮ್ಮ ಜೀವನದಲ್ಲಿ ಇಂಥ ಸಂದರ್ಭ ದಿನದಿನವೂ ಬರುವುದಿಲ್ಲ; ಬಹು ವಿರಳ. ಅಂಥ ಸಂದರ್ಭದಲ್ಲಿ ಮುಖ್ಯಪಾತ್ರಗಳ ಮನಸ್ಥಿತಿ ಎಂಥಾದ್ದು, ವರ್ತನೆ ಎಂಥಾದ್ದು–ಇದು ನಾವು ನೋಡಬೇಕೆನಿಸುವ ಸಂಗತಿ. ಸೀತಾದೇವಿಯಾದರೋ ಆಂಜನೇಯ ವಾಕ್ಯವನ್ನು ಕೇಳಿ ಏನ್ನನ್ನೂ ನುಡಿಯಲಿಲ್ಲವಂತೆ: “ವ್ಯಾಜಹಾರ ನ ಕಿಂಚನ.”

ಹೃದಯದಲ್ಲಿ ಭಾವದ ಒತ್ತಡ ಅತಿಶಯವಾದಾಗ ಮಾತು ಹೊರಡುವುದಿಲ್ಲ.

ಆಂಜನೇಯಸ್ವಾಮಿ– ಕಿಂ ನು ಚಿಂತಯಸೇ ದೇವಿ
ಕಿಂ ನು ಮಾಂ ನಾಭಿಭಾಷಸೇ ॥ ಸರ್ಗ ೧೧೬, ಶ್ಲೋಕ ೧೬

ಎಂದು ಕೇಳುತ್ತಾನೆ. ಆಕೆ ಹೇಳುತ್ತಾಳೆ:

ಪ್ರಹರ್ಷವಶಮಾಪನ್ನಾ
ನಿರ್ವಾಕ್ಯಾಸ್ಮಿಕ್ಷಣಾಂತರಮ್‍ ॥ಸರ್ಗ ೧೧೬, ಶ್ಲೋಕ ೧೮
 
ಸಂತೋಷ ಉಕ್ಕುಕ್ಕಿ ಬಂದಾಗ ಮಾತು ಹೊರಡಲಾರದು.

ಸೀತೆಯ ಔಚಿತ್ಯ ಪರಿಜ್ಞಾನ

ಆಗ ಆಂಜನೇಯಸ್ವಾಮಿ ಅಲ್ಲಿದ್ದ ರಾಕ್ಷಸಿಯರನ್ನು ನೋಡಿ ಅವರಿಂದ ಸೀತಾದೇವಿಗೆ ಹಿಂಸೆಯಾದದ್ದನ್ನು ನೆನೆಸಿಕೊಂಡು ಅವರನ್ನು ಒದೆದು ಕೊಲ್ಲುವೆನೆಂದು ಹೊರಟ,

ಇಚ್ಛಾಮಿ ವಿವಿಧೈರ್ಘಾತೈಃ
ಹಂತುಮೇತಾಸ್ಸುದಾರುಣಾಃ ।
ಘಾತೈರ್ಜಾನುಪ್ರಹಾರೈಶ್ಚ
ದಶನಾನಾಂ ಚ ಪಾತನೈಃ ।

ಭಕ್ಷಣೈಃ ಕರ್ಣನಾಸಾನಾಂ
ಕೇಶಾನಾಂ ಲುಂಛನೈಸ್ತಥಾ । ಸರ್ಗ ೧೧೬, ಶ್ಲೋಕಗಳು ೩೩–೩೪


ಸೀತಾದೇವಿ ಅದು ಕೂಡದೆನ್ನುತ್ತಾಳೆ. “ಆ ರಾಕ್ಷಸಿಯರು ತಮ್ಮ ಸ್ವಾಮಿಯ ಆಜ್ಞೆಯಂತೆ ನಡೆದರು. ಅದು ಅವರಿಗೆ ಯುಕ್ತವೇ ತಾನೆ?”

ರಾಜಸಂಶ್ರಯವಶ್ಯಾನಾಂ
ಕುರ್ವತೀನಾಂ ಪರಾಜ್ಞಯಾ ।
ವಿಧೇಯಾನಾಂ ಚ ದಾಸೀನಾಂ
ಕಃ ಕುಪ್ಯೇದ್ವಾನರೋತ್ತಮ । ಸರ್ಗ ೧೧೬, ಶ್ಲೋಕ ೩೮

ಇಲ್ಲಿ ನೋಡಿರಿ ದೊಡ್ಡತನವನ್ನ. ಎಂಥ ವಿವೇಕ! ಮತ್ತು ಎಷ್ಟು ಜಾಗರೂಕವಾದ ವಿವೇಕ!

ಆಂಜನೇಯಸ್ವಾಮಿ ಸೀತೆಯನ್ನು ಕುರಿತು “ನಿನ್ನಿಂದ ಶ್ರೀರಾಮನಿಗೆ ನಾನು ಹೇಳಬೇಕಾದ ಪ್ರತಿಸಂದೇಶವೇನು?” ಎಂದು ಕೇಳುತ್ತಾನೆ. ಆಕೆ “ದ್ರುಷ್ಟುಮಿಚ್ಛಾಮಿ ಭರ್ತಾರಮ್‍” ಎಂದು ಹೇಳುತ್ತಾಳೆ. ಹನುಮಂತನಿಂದ ಈ ವಾರ್ತೆಯನ್ನು ಶ್ರೀರಾಮನು ಕೇಳಿದ.

ಅಗಚ್ಛತ್‍ ಸಹಸಾ ಧ್ಯಾನಂ
ಈಷದ್ಬಾಷ್ಪಪರಿಪ್ಲುತಃ ।
ದೀರ್ಘಮುಷ್ಣಂ ವಿನಿಃಶ್ವಸ್ಯ
ಮೇದಿನೀಮವಲೋಕಯನ್‍ । ಸರ್ಗ ೧೧೭, ಶ್ಲೋಕಗಳು ೫–೬

ಕಣ್ಣಿನಲ್ಲಿ ಕಂಬನಿ ತುಂಬಿ ಬಂದಿತು. ಕಂಠ ಗದ್ಗದಿತವಾಯಿತು. ಉಸಿರು ಬಿಸಿಯಾಯಿತು. ನೆಲವನ್ನು ದಿಟ್ಟಿಸಿಕೊಂಡು ರಾಮಚಂದ್ರನು ಹೇಳಿದ, ಆಗ ಪಕ್ಕದಲ್ಲಿದ್ದ ವಿಭೀಷಣನಿಗೆ:

ದಿವ್ಯಾಂಗರಾಗಾಂ ವೈದೇಹೀಂ
ದಿವ್ಯಾಭರಣಭೂಷಿತಾಮ್‍ ।
ಇಹ ಸೀತಾಂ ಶಿರಃಸ್ನಾತಾಂ
ಉಪಸ್ಥಾಪಯ ಮಾ ಚಿರಮ್‍ । ಸರ್ಗ ೧೧೭, ಶ್ಲೋಕ ೭

“ಸೀತೆಯು ಅಭ್ಯಂಜನಸ್ನಾನ ಮಾಡಿ ಅಲಂಕೃತಳಾಗಿ ಬರಲಿ; ಬೇಗ ಕರೆದುಕೊಂಡು ಬಾ.” ಈ ಮಾತನ್ನು ವಿಭೀಷಣನು ಸೀತೆಗೆ ತಿಳಿಸಿದಾಗ ಆಕೆ ಏನೆನ್ನುತ್ತಾಳೆ?

ಅಸ್ನಾತಾ ದ್ರಷ್ಟುಮಿಚ್ಛಾಮಿ
ಭರ್ತಾರಂ ರಾಕ್ಷಸಾಧಿಪ । ಸರ್ಗ ೧೧೭, ಶ್ಲೋಕ ೧೧

ಈ ಮಾತಿಗೆ ವಿಭೀಷಣನು

ಯದಾಹ ರಾಜಾ ಭರ್ತಾ ತೇ
ತತ್ತಥಾ ಕರ್ತುಮರ್ಹಸಿ । ಸರ್ಗ ೧೧೭, ಶ್ಲೋಕ ೧೧

“ಸ್ವಾಮಿಯೂ ಪತಿಯೂ ಆದಾತನು ಏನು ಹೇಳಿದ್ದಾನೋ ಅದನ್ನು ನೀನು ಮಾಡಬೇಕಾದದ್ದು” ಎನ್ನುತ್ತಾನೆ. ಆಗ ಸೀತಾದೇವಿ ಒಪ್ಪಿಕೊಂಡಳು.

ತತಸ್ಸೀತಾಂ ಶಿರಃಸ್ನಾತಾಂ
ಯುವತೀಭಿರಲಂಕೃತಾಮ್‍ ।... ಸರ್ಗ ೧೧೭, ಶ್ಲೋಕ ೧೩

ಸ್ನಾನಮಾಡಿ ಅಲಂಕೃತಳಾಗಿ ಬರುತ್ತಾಳೆ.

ಒಂದು ವಿಚಾರಘಟ್ಟ

ಇಲ್ಲಿ ಕಾಣುತ್ತದೆ ವಿಚಾರಘಟ್ಟ. ಮೊದಲು ರಾಮನು, ಸೀತೆಯು ಸ್ನಾತಳಾಗಿ ಅಲಂಕೃತಳಾಗಿ ಬರಬೇಕೆಂದು ಹೇಳಿದಾಗ ಆತನ ಮನಸ್ಸಿನಲ್ಲೇನಿತ್ತು? ಸೀತೆ ಅಸ್ನಾತಳಾಗಿಯೇ ಪತಿದರ್ಶನ ಮಾಡುವೆನೆಂದಾಗ ಆಕೆಯ ಮನಸ್ಸಿನಲ್ಲೇನಿತ್ತು? ಇದನ್ನು ನಾವು ಮನುಷ್ಯನೈಜದ ದೃಷ್ಟಿಯಿಂದ ನೋಡಬೇಕೆಂದು ನನಗನ್ನಿಸುತ್ತದೆ. ಒಂದೇ ಸಂದರ್ಭದಿಂದ ಬೇರೆಬೇರೆ ಮನಸ್ಸುಗಳು ಬೇರೆಬೇರೆ ಪ್ರತಿವರ್ತನೆಗಳನ್ನು ಮಾಡಿಸುತ್ತವೆ. ಆ ಪ್ರತಿವರ್ತನೆಗಳು ಬಹುಶಃ ಸಮ್ಮಿಶ್ರಿತಗಳು. ಕರುಣೆ, ಜುಗುಪ್ಸೆ, ಪ್ರೀತಿ, ಕ್ರೋಧ, ಸಮಾಧಾನ, ಅತೃಪ್ತಿ–ಹೀಗೆ ನಾನಾ ಭಾವಗಳು ಬೆರೆತುಕೊಂಡಿರುತ್ತವೆ, ಒಂದಾನೊಂದು ಸಂದರ್ಭವಿಶೇಷದ ಕಾರಣದಿಂದ. ಮೇಲೆ ನೋಡಿದ್ದೇವಲ್ಲವೆ, ಭಾವಾತಿಶಯದ ಕಾರಣದಿಂದ ರಾಮನು ಮೂಕನಾಗಿದ್ದದ್ದನ್ನು? ಸಂಧಿಕ್ಷಣಗಳಲ್ಲಿ ಮಾತು ಹೊರಡಲಾರದು. ಹೃದಯವೇನೋ ಶೂನ್ಯನಲ್ಲ. ಅಲ್ಲಿ ಸಂವೇದನೆ ನಷ್ಟವಾಗಿರುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಂವೇದನೆ ಬಹುವಾಗಿರುತ್ತದೆ, ಜಡೆಜಡೆಯಾಗಿರುತ್ತದೆ, ಭರ್ತಿಯಾಗಿರುತ್ತದೆ. ಆಗ ಯಾವುದನ್ನು ಮೊದಲು ಹೇಳಬೇಕು? ಇದನ್ನು ನಮ್ಮ ವಾಕ್ಶಕ್ತಿ ಗೊತ್ತುಮಾಡಲಾರದು. ಯಾವುದೋ ಒಂದು ಭಾವವನ್ನು ನುಡಿಯಲು ಮೊದಲು ಮಾಡುತ್ತದೆ. ಆ ನುಡಿತ ಕೂಡ ಭಾವನೆಗಳ ಒತ್ತಡದಿಂದ ನಮ್ಮ ಎದೆಯೊತ್ತಿ ತಮ್ಮ ಭಾರವನ್ನು ಕೊಂಚವಾದರೂ ಹಗುರ ಮಾಡಿಕೊಂಡ ಹೊರತು ತಾನು ಅದನ್ನು ಸಹಿಸುವುದು ಇನ್ನು ಅಸಾಧ್ಯವೆಂದು ತೋರಿದಾಗ, ಆ ಒತ್ತಡದ ನಿರ್ಬಂಧದಲ್ಲಿ ತುಟಿಯಿಂದ ಒಂದು ಮಾತು ಹೊರಡುತ್ತದೆ. ಆ ಒಂದು ಮಾತೇ ನಮ್ಮ ಹೃದಯದ ಸರ್ವಸ್ವವಲ್ಲ. ನಮ್ಮ ಹೃದಯಭಾವ ಏಕೈಕವಲ್ಲ, ಅದು ಸಂಕೀರ್ಣವಾದದ್ದು. ಆದದ್ದರಿಂದ ಬಾಯಿನಿಂದ ಆಡಿದ ಒಂದು ಮಾತಿನಿಂದ ನಮ್ಮ ಅಂತರಂಗವೆಲ್ಲವೂ ಹೊರಪಟ್ಟಿತೆಂದು ತಿಳಿಯಲಾಗದು.

ಈಗ ಶ್ರೀರಾಮನ ಅಭಿಪ್ರಾಯವನ್ನು ಊಹಿಸೋಣ. ಅದು ಹೀಗಿರಕೂಡದೆ?:

“ಸೀತೆ ಬಹು ಖಿನ್ನಳಾಗಿರಬೇಕು. ಬಹು ದೀನಳಾಗಿರಬೇಕು. ಆ ಸ್ಥಿತಿಯಲ್ಲಿ ಆಕೆ ಇರುವಾಗ ನಾನು ಆಕೆಯನ್ನು ಏಕೆ ನೋಡಬೇಕು? ಆಕೆ ಗೆಲುಮುಖವನ್ನು ತೊಟ್ಟಿರುವಾಗ ನಾನು ಆಕೆಯನ್ನು ನೋಡುವುದು ಉಚಿತ.”

“ಸೀತೆ ರಾಕ್ಷಸಿಯರ ಮಧ್ಯದಲ್ಲಿದ್ದು ಬೇಸರಪಟ್ಟು ಮೈಲಿಗೆಯಲ್ಲಿದ್ದವಳು. ಈಗ ಆಕೆಯನ್ನು ನೋಡಿದರೆ ಆಕೆಯ ರೂಪಲಾವಣ್ಯಕ್ಕೆ ನ್ಯಾಯ ಮಾಡಿದಂತಾದೀತೆ? ಆಕೆ ಸುಸ್ನಾತಳಾಗಿ ತನಗೆ ಸ್ವಾಭಾವಿಕವಾದ ದಶೆಯಲ್ಲಿ ಬರಲಿ. ಆಕೆಗೆ ಸಮಾಧಾನವಾಗುತ್ತದೆ. ಅದು ನನಗೂ ಸಮಾಧಾನ.”

“ಸೀತೆ ಇಷ್ಟು ದಿನವೂ ಅಶೌಚದಲ್ಲಿದ್ದಂತಿದ್ದಾಳೆ. ಈಗ ಆ ಮಾಲಿನ್ಯವನ್ನು ಕಳೆದು ಸ್ವೀಕೃತಶುಭಳಾಗಿ ಬರಲಿ. ಅದು ನಮ್ಮಿಬ್ಬರಿಗೂ ಶುಭವಾಗುತ್ತದೆ,”

ಶ್ರೀರಾಮನ ಮನಸ್ಸಿನಲ್ಲಿ ಹೀಗೆ ಆಲೋಚನೆಗಳು ಪರಂಪರೆಯಾಗಿ, ತರಂಗ–ತರಂಗವಾಗಿ ಏಳುತ್ತಿದ್ದವೆಂದು ನಾವು ಭಾವಿಸಬಹುದು. ಆತನು ಆಲೋಚನೆಮಾಡಿ ಸೀತೆ ತನ್ನಲ್ಲಿಗೆ ಶುಭಲಕ್ಷಣಸಂಪನ್ನಳಾಗಿ ಬರುವುದು ಯುಕ್ತವೆಂದು ಸಿದ್ಧಾಂತ ಮಾಡಿರಬಹುದು.

ಇನ್ನು ಸೀತಮ್ಮನ ಮಾತು. ಆಕೆಯ ಮನಸ್ಸು ರೋಸಿಹೋಗಿತ್ತು. ಉತ್ಸಾಹ ಹಾರಿಹೋಗಿ ಎಷ್ಟೋ ದಿನವಾಗಿದ್ದಿರಬೇಕು. ಅಂಥಾದ್ದರಲ್ಲಿ ಹೀಗೆ ಯೋಚಿಸಿರಬಹುದು:

“ಈಗ ನನಗೇಕೆ ಸ್ನಾನಾಲಂಕಾರಗಳು? ಹೀಗೆಯೇ ಅವತಾರ ಮುಗಿಸಿಕೊಂಡೇನು. ನಾನು ಹೇಗಿದ್ದರೂ ನನ್ನ ತಾಯಿ ಭೂದೇವಿ ನನ್ನ ಕೈ ಬಿಡಲಾರಳು.”

“ಪತಿಯ ಮನಸ್ಸು ಹೇಗಿದೆಯೋ! ಅದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆಯೇ ನಾನು ಸ್ನಾನಾಲಂಕಾರಗಳಿಗೆ ಆತುರಪಡಲೇ?”

“ಶ್ರೀರಾಮನು ಇಂಗಿತಜ್ಞನಲ್ಲವೆ? ನಾನು ಆತನಿಗೆ ನನ್ನ ಸ್ನಾನಾಲಂಕಾರಗಳಿಂದ ಪ್ರಿಯಳಾಗಬೇಕೋ, ಅಥವಾ ನನ್ನ ನೈಜದಿಂದಲೇ ನಾನು ಆತನಿಗೆ ಪ್ರಿಯಳೊ? ಆತನನ್ನು ನೋಡಿದ ಮೇಲೆ ಆತನ ಮನಸ್ಸೆಂಥಾದ್ದೆಂದು ತಿಳಿದು ಬಂದೀತು.”

ಸೀತಾದೇವಿ ಬಾಹ್ಯಾಲಂಕಾರಗಳಿಗಿಂತ ಆತ್ಮಗುಣಕ್ಕೆ ಹೆಚ್ಚು ಬೆಲೆ ಸಲ್ಲುತ್ತದೆಂದು ನಿಶ್ಚಯಮಾಡಿಕೊಂಡಿದ್ದವಳು. ಈಗ ತಾನಿದ್ದ ಸ್ಥಿತಿಯಲ್ಲಿ ಸ್ನಾನಭೂಷಣಗಳಿಂದ ತನಗೆ ಆಗಬೇಕಾದದ್ದೇನು ಎಂದು ನಿರ್ವಿಣ್ಣಳಾಗಿದ್ದಿರಬಹುದು.

ಹೀಗೆ ಸೀತಾರಾಮರಿಗೆ ಹೃದಯಭಾವನೆಗಳ ದಾರಿ ಬೇರೆ ಬೇರೆಯಾಯಿತು. ಆದರೂ ಸಾಧ್ವಿಗೆ ಸಹಜವಾದಂತೆ ಸೀತೆ ನಡೆದುಕೊಂಡಳು.

ರಾಮನ ಮನಃಪ್ರತಿವರ್ತನೆ

ಸೀತೆಯನ್ನು ನೋಡಿದಾಗ ಶ್ರೀರಾಮನು ಧ್ಯಾನಾರೂಢನಾಗಿದ್ದನಂತೆ. ಏನೇನನ್ನೋ ಯೋಚಿಸುತ್ತಿದ್ದ. ಸೀತೆಯು ಬಂದದ್ದನ್ನು ಕೇಳಿದಾಗ ರಾಮನ ಮನಸ್ಸಿನಲ್ಲಿ ಏನಾಯಿತು? ವಾಲ್ಮೀಕಿಗಳು ಹೇಳುತ್ತಾರೆ:

ಹರ್ಷೋ ದೈನ್ಯಂ ಚ ರೋಷಶ್ಚ
ತ್ರಯಂ ರಾಘವಮಾವಿಷತ್‍ । ಸರ್ಗ ೧೧೭, ಶ್ಲೋಕ ೧೬

ರಾಮನ ಪ್ರತಿಭಾವನೆ ಒಂದಲ್ಲ; ಎರಡಲ್ಲ; ಮೂರು. ಹರ್ಷ, ದೈನ್ಯ, ರೋಷ.

ಹರ್ಷ ಬಂತು, ಸರಿ. ಸೀತೆಯನ್ನು ಕಂಡದ್ದಾಯಿತು. ರಾವಣನನ್ನು ವಧಿಸಿದ್ದಾಯಿತು. ಋಷಿಗಳಿಗೆ ಕೊಟ್ಟಿದ್ದ ವಚನವನ್ನು ನಡೆಸಿದ್ದಾಗಿತ್ತು.

ದೈನ್ಯವೇಕೆ? ವಂಚನೆಗೆ ತುತ್ತಾದೆನಲ್ಲ! ದೈವದ ಎದುರಿನಲ್ಲಿ ದುರ್ಬಲನಾದೆನಲ್ಲ! ಮತ್ತೊಬ್ಬರ ಸಹಾಯವನ್ನು ಅಪೇಕ್ಷಿಸಬೇಕಾಯಿತಲ್ಲ! ಬಹುಕಾಲ ತನ್ನ ಕೈ ಸಾಗದೆಹೋಯಿತಲ್ಲ! ಹೀಗೆ.

ರೋಷ. ಯಾರ ಮೇಲೆ? ದೈವದ ಮೇಲೆ. ವಿಧಿಯ ಮೇಲೆ. ಯಾರ ಮೇಲೆಂದು ಈಗ ನಿಷ್ಕರ್ಷೆಯಾಗಿ ಹೇಳುವಂತಿಲ್ಲ. ಅದು ಮೂಕರೋಷ. ಹೆಸರಿಲ್ಲದ ರೋಷ. ಲೋಕಾನುಭವವುಳ್ಳವರು ಅದರ ಸ್ವಭಾವವನ್ನು ಗುರುತಿಸಬಲ್ಲರು. ಅನುಭವ ಇಲ್ಲದವರಿಗೆ ಅದನ್ನು ತಿಳಿಸಲಾಗದು.

ಮನೆಯಲ್ಲಿ ಯಾವುದೋ ಪ್ರಮಾದ ನಡೆದಾಗ, ತಲೆನೋವು ಬಂದು ಸಹನೆ ಮೀರಿದಾಗ, ನಮಗೆ ಪ್ರಿಯರಾದವರನ್ನು ಮೃತ್ಯು ಕೊಂಡೊಯ್ದಾಗ, ವಿಧೇಯರಾಗಿರಬೇಕಾದವರು ಎದುರುನುಡಿ ನುಡಿದಾಗ ನಾವು ತಲೆತಲೆ ಚಚ್ಚಿಕೊಳ್ಳುತ್ತೇವೆ. ರೇಗಾಡುತ್ತೇವೆ. ಹುಚ್ಚುಹುಚ್ಚಾಗಿ ಕೂಗಾಡುತ್ತೇವೆ. ಯಾರ ಮೇಲೆ ರೇಗಾಟ? ಗೊತ್ತಿಲ್ಲ. ಗೊತ್ತಿಲ್ಲದ್ದನ್ನು ದೈವವೆನ್ನುತ್ತೇವೆ.

ಇದು ಸಾಮಾನ್ಯ ಮನುಷ್ಯನ ರೀತಿ. ಶ್ರೀರಾಮನದೂ ಒಂದು ಪರೀಕ್ಷೆಯ ನಿಮಿಷದಲ್ಲಿ ಅಂಥಾದಾಗಿತ್ತು, ಅದರಿಂದ ಆತ ಚೇತರಿಸಿಕೊಂಡ. ಸಾಮಾನ್ಯನು ಅದರಿಂದ ಇನ್ನೂ ಕೆಳಕ್ಕೆ ಬೀಳುತ್ತಾನೆ.

ಸೀತಾತಿರಸ್ಕಾರ

ಆದರೂ ರಾಮನ ಮಾತಿನಲ್ಲಿ ಉತ್ಸಾಹವಿಲ್ಲ. ಲಕ್ಷ್ಮಣ ಸುಗ್ರೀವ ಹನುಮಂತರು ಹೀಗೆ ಯೋಚಿಸಿದರು:

ಕಲತ್ರ ನಿರಪೇಕ್ಷೈಶ್ಚ
ಇಂಗಿತೈರಸ್ಯ ದಾರುಣೈಃ ।
ಅಪ್ರೀತಮಿತ ಸೀತಾಯಾಂ
ತರ್ಕಯಂತಿ ಸ್ಮ ರಾಘವಮ್‍ ॥ ಸರ್ಗ ೧೧೭, ಶ್ಲೋಕ ೩೨

ಸೀತೆಯಾದರೋ–

ಸಾ ವಸ್ತ್ರಸಂರುದ್ಧಮುಖೀ
ಲಜ್ಜಯಾ ಜನಸಂಸದಿ ।
ರುರೋದಾಸಾದ್ಯ ಭರ್ತಾರಂ
ಆರ್ಯಪುತ್ರೇತಿ ಭಾಷಿಣೀ । ಸರ್ಗ ೧೧೭, ಶ್ಲೋಕ ೩೪

ಎಂಥ ಹೃದಯವಿದ್ರಾವಕವಾದ ಸನ್ನಿವೇಶ! ಬಳಿಕ ರಾಮನು–

ಹೃದಯಾಂತರ್ಗತಕ್ರೋಧಃ
ವ್ಯಾಹರ್ತುಮುಪಚಕ್ರಮೇ ॥
ಪೌರುಷಾದ್ಯದನುಷ್ಠೇಯಂ
ತದೇತದುಪಪಾದಿತಮ್‍ ॥
ದೈವಸಂಪಾದಿತೋ ದೋಷಃ
ಮಾನುಷೇಣ ಮಯಾ ಜಿತಃ ॥ ಸರ್ಗ ೧೧೮, ಶ್ಲೋಕಗಳು ೧, ೨, ೫

ಈ ಮಾತುಗಳನ್ನು ಕೇಳಿ ಸೀತೆಯು ಕಂಬನಿತುಂಬಿದವಳಾದಳು. ರಾಮನ ಕೋಪವು ಇನ್ನೂ ಇಳಿಯಲಿಲ್ಲ.

ಪಶ್ಯತಸ್ತಾಂ ತು ರಾಮಸ್ಯ
ಭೂಯಃ ಕ್ರೋಧೋ ವ್ಯವರ್ಧತ । ಸರ್ಗ ೧೧೮, ಶ್ಲೋಕ ೧೧

ಯಾರಮೇಲೆ ಕ್ರೋಧ? ಸೀತೆಯಮೇಲೆಯೆ? ಹಾಗೆಂದು ಆಕೆಯನ್ನು ಬಾಯಿಬಿಟ್ಟು ಆಕ್ಷೇಪಿಸಲು ರಾಮನಿಗೆ ಕಾರಣವಿಲ್ಲ. ಹಾಗೆ ಮಾಡಲು ಆತನಿಗೆ ಬಾಯಿಲ್ಲ. ಆದರೂ ಏನೋ ಕೋಪ. ನಿಷ್ಠುರವಾದ ಮಾತನ್ನಾಡುತ್ತಾನೆ.

ವಿದಿತಶ್ಚಾಸ್ತು ತೇ ಭದ್ರೇ
ಯೋಽಯಂ ರಣಪರಿಶ್ರಮಃ ।
ಸ ತೀರ್ಣಃ ಸುಹೃದಾಂ ವೀರ್ಯಾತ್‍
ನ ತ್ವದರ್ಥಂ ಮಯಾ ಕೃತಃ । ಸರ್ಗ ೧೧೮, ಶ್ಲೋಕ ೧೫

ಏನು ನಿಷ್ಠುರ ಇದು! ಅಲ್ಲಿಗೆ ಮುಗಿಯಲಿಲ್ಲ ರಾಮನ ರೇಗಾಟ. ಆ ರೋಷ ತನ್ನಷ್ಟಕ್ಕೆ ತಾನೇ ಬೆಳೆಯಿತು. ಬೆಳೆಯುತ್ತ ಬೆಳೆಯುತ್ತ ಕಠೋರವಾಯಿತು. ಮೈಮೇಲೆ ಸ್ಮೃತಿ ತಪ್ಪಿತಂದೆನಿಸುವಷ್ಟು ಬೆಳೆಯಿತು. ಆಗ ಹೊರಟಿತು ರಾಮಮುಖದಿಂದ ಇಂಥ ಕ್ರೂರವಾದ ವಾಗ್ಬಾಣ ಪರಂಪರೆ!

ಪ್ರಾಪ್ತಚಾರಿತ್ರಸಂದೇಹಾ ॥
ಪ್ರತಿಕೂಲಾಸಿ ಮೇ ॥
ಗಚ್ಛ ಯಥೇಷ್ಟಂ ॥
ಪರಗೃಹೋಷಿತಾ ॥
ರಾವಣಾಂಕಪರಿಭ್ರಷ್ಟಾ ॥
ದೃಷ್ಟಾ ದುಷ್ಟೇನ ಚಕ್ಷುಷಾ ॥

ನಾಸ್ತಿ ಮೇ ತ್ವಯ್ಯಭಿಷ್ವಂಗಃ ॥ ಸರ್ಗ ೧೧೮, ಶ್ಲೋಕಗಳು ೧೭–೨೧

ಲಕ್ಷ್ಮಣೇ ಭರತೇ ವಾ ತ್ವಂ
ಕುರು ಬುದ್ಧಿಂ ಯಥಾಸುಖಮ್‍ ॥
ಸುಗ್ರೀವೇ ವಾನರೇಂದ್ರೇ ವಾ
ರಾಕ್ಷಸೇಂದ್ರೇ ವಿಭೀಷಣೇ ॥ ಸರ್ಗ ೧೧೮, ಶ್ಲೋಕಗಳು ೨೨–೨೩

ಒಂದು ನೆನಪು

ಈ ಸಂದರ್ಭದಲ್ಲಿ ಒಬ್ಬ ಹಳೆಯ ಸ್ನೇಹಿತನ ನೆನಪು ಬರುತ್ತದೆ. ಆತನ ಹೆಸರು ನರಸಿಂಹಾಚಾರಿ ಎಂದು. ಆತ ಸ್ಕೂಲ್‍ಮೇಷ್ಟರು. ತುಂಬ ಒಳ್ಳೆಯ ಮನುಷ್ಯ. ಒಂದು ಕಳಂಕವೂ ಇಲ್ಲದ ನಡತೆ ಆತನದು. ಆದರೆ ಒಂದು ವಿಶೇಷ. ಕಥೆಯನ್ನು ಕೇಳಿದರೆ ಅದು ಸ್ಪಷ್ಟವಾಗುತ್ತದೆ. ನರಸಿಂಹಾಚಾರಿ ಶ್ರೀವೈಷ್ಣವ. ಕೊಂಚ ಸಂಸ್ಕೃತ ತಿಳಿದಿತ್ತು. ವಿದ್ವಾಂಸರ ಮಗ. ಆಚಾರಸಂಪನ್ನ.

ಆತ ಒಂದು ದಿನ ಹನ್ನೊಂದು ಘಂಟೆಯ ಹೊತ್ತಿಗೆ ಮಾಮೂಲಿನಂತೆ ಮನೆಗೆ ಬಂದ. ತಲೆಬಾಗಿಲು ದಾಟಿ ಒಳಗೆ ಬರುತ್ತಲೇ ಹೆಂಡತಿ ಹೊರಗಾಗಿದ್ದಾಳೆಂದು ತೋರಿತು. ಅಡಿಗೆಮನೆಯೊಳಗೆ ನೋಡಿದ. ಆಕೆ ಒಲೆಯಮೇಲೆ ಪಾತ್ರೆಯಿಟ್ಟು ತಾನು ಹೊರಗಿದ್ದಳು. ಮನೆಯಲ್ಲಿದ್ದವರು ಅವರಿಬ್ಬರೇ. ಆದದ್ದರಿಂದ ಬೇರೆ ಯಾರೂ ಅಡಿಗೆ ಮಾಡುವವರಿರಲಿಲ್ಲ. ನರಸಿಂಹಾಚಾರಿಗೆ ಬಲು ಕೋಪ ಬಂತು. ಅಡಿಗೆಮನೆಯ ಬಾಗಿಲ ಹಿಂದಿದ್ದ ಪೊರಕೆ ಕಟ್ಟನ್ನು ತೆಗೆದುಕೊಂಡು ‘ಛೆ! ಕತ್ತೆ!’ ಎಂದು ಹೇಳುತ್ತ ಪೊರಕೆಯನ್ನು ಹೆಂಡತಿಯಮೇಲೆ ಜೋರಾಗಿ ಎಸೆದ. ಮತ್ತು ಅದರೊಡನೆ ಬಾಳೆನಾರನ್ನು ಆಕೆಯಮೇಲೆ ಎಸೆದು, ಪೊರಕೆಯಮೇಲಿನ ದಾರವನ್ನು ಬಿಚ್ಚಿ ಬಾಳೆನಾರನ್ನು ಸುತ್ತುವಂತೆ ಹೇಳಿದ. ಆಕೆ ಹಾಗೆ ಮಾಡಿ ಪೊರಕೆಯನ್ನು ಹಿಂದಕ್ಕೆಸೆದಳು. ಈತ ಮತ್ತೆ ಅದನ್ನು ಅವಳಮೇಲೆಸೆದ. ಮತ್ತೆ ಅವಳು ಹಿಂದಕ್ಕೆಸೆಯಬೇಕಾಯಿತು. ಮರಳಿ ಆಕೆಯ ಮೇಲೆಸೆದು ತನ್ನ ಕಡೆಗೆ ತರಿಸಿಕೊಂಡ. ಹೀಗೆ ನಾಲ್ಕೈದುಸಾರಿ ಬಾಳೆನಾರಿನಿಂದ ಸುತ್ತಿದ ಪೊರಕೆಯನ್ನು ಆಕೆಯಮೇಲೆ ಪ್ರಯೋಗಿಸಿದ. ಬಾಳೆನಾರು ಮಡಿ; ನೂಲು ಮೈಲಿಗೆ! ಹೀಗೆ ಮಡಿಯ ಪೊರಕೆಯನ್ನು ತನ್ನ ಕೈ ಸೋಲುವವರೆಗೂ ದಂಡಿಸಿದ್ದಾಯಿತು. ಇದು ನಡೆಯುತ್ತಿದ್ದಾಗ ಆಕೆ ಕೊಂಚ ಕೊಂಚ ನಗುತ್ತಿದ್ದಳು. ಇದು ನಾನು ಚೆನ್ನಾಗಿ ಬಲ್ಲ ಸಂಗತಿ. ನರಸಿಂಹಾಚಾರಿಗೆ ಹೆಂಡತಿಯ ಮೇಲಿದ್ದ ಪ್ರೀತಿಯೋ–ಮಾತುಗಳಿಂದ ಹೇಳಲಾಗದು. ಆಕೆಗೂ ಕೊಂಚವೂ ಆಯಾಸವಾಗಬಾರದು, ನೋವಾಗಬಾರದು, ಯಾವುದಕ್ಕೂ ಕೊರತೆಯಾಗಬಾರದು. ಆದರೆ ಕೋಪ ಬಂದಿದೆಯಲ್ಲ, ಹೊಟ್ಟೆ ಹಸಿವಿನ ಕಾರಣದಿಂದ.

ಇಂಥದು ಕೋಪದ ಸ್ವಭಾವ. ಅದು ಬಂದಾಗ ಕಾರ್ಯಕಾರಣವಿವೇಕ ನುಣುಚಿಕೊಂಡು ಹೋಗಿಬಿಡುತ್ತದೆ. ಆದದ್ದರಿಂದಲೇ ಮಹರ್ಷಿಗಳು ಕೋಪವನ್ನು ಒಂದು ದೈವವೆಂದೆಣಿಸಿದರು.

ನಮಸ್ತೇ ರುದ್ರ ಮನ್ಯವ
ಉತೋ ತ ಇಷವೇ ನಮಃ ।
ನಮಸ್ತೇ ಅಸ್ತು ಧನ್ವನೇ
ಬಾಹುಭ್ಯಾಮುತ ತೇ ನಮಃ ॥

“ಎಲೈ ರುದ್ರನೆ, ನಿನ್ನ ಕೋಪಕ್ಕೆ ನಮಸ್ಕಾರ, ನಿನ್ನ ಬಾಣಕ್ಕೆ ನಮಸ್ಕಾರ, ಧನುಸ್ಸಿಗೆ ನಮಸ್ಕಾರ, ನಿನ್ನ ಸರ್ವಾಂಗಗಳಿಗೂ ನಮಸ್ಕಾರ. ಯಾವ ಕ್ಷಣದಲ್ಲಿ ನೀನು ನಮ್ಮನ್ನು ಹೇಗೆ ನಡೆಸುತ್ತೀಯೋ!” ಎಂದು ಋಷಿಗಳು ಉದ್ಗರಿಸುತ್ತಾರೆ.

ಮನ್ಯುವು ಶ್ರೀರಾಮನನ್ನು ಬಿಡಲಿಲ್ಲ. ಆತನ ಬಾಯಿಂದ ಆಡಬಾರದ್ದನ್ನು ಆಡಿಸಿತು.

ಮನ್ಯುರಕಾರ್ಷೀನ್ನಮೋ ನಮಃ ॥

ಅಗ್ನಿಪ್ರವೇಶ

ಸೀತೆ ಈಗ ಏನು ಮಾಡಿಯಾಳು? ಕಣ್ಣೀರಿಟ್ಟಳು.

ಕಾಮಕಾರೋ ನ ಮೇ ತತ್ರ
ದೈವಂ ತತ್ರಾಪರಾಧ್ಯತಿ ॥
ಪರಾಧೀನೇಷು ಗಾತ್ರೇಷು
ಕಿಂ ಕರಿಷ್ಯಾಮ್ಯನೀಶ್ವರಾ ॥

ಮಮ ಭಕ್ತಿಶ್ಚ ಶೀಲಂ ಚ
ಸರ್ವಂ ತೇ ಪೃಷ್ಠತಃ ಕೃತಮ್‍ ॥ ಸರ್ಗ ೧೧೯, ಶ್ಲೋಕಗಳು ೮–೯–೧೬

ಹೀಗೆ ಹೇಳಿ ಲಕ್ಷ್ಮಣನನ್ನು ಕುರಿತು–

ಚಿತಾಂ ಮೇ ಕುರು ಸೌಮಿತ್ರೇ
ವ್ಯಸನಸ್ಯಾಸ್ಯ ಭೇಷಜಮ್‍ ।
ಮಿಥ್ಯಾಪವಾದೋಪಹತಾ
ನಾಹಂ ಜೀವಿತುಮುತ್ಸಹೇ ॥ ಸರ್ಗ ೧೧೯, ಶ್ಲೋಕ ೧೮

ಅನಂತರ ಅಗ್ನಿಪರೀಕ್ಷೆ ನಡೆಯಿತು. ಆ ಮಹಾತಾಯಿ ಅಗ್ನಿಪ್ರವೇಶ ಮಾಡುವಾಗ ಹೇಳುವ ಪ್ರಾರ್ಥನೆಯ ಮಾತುಗಳು ಕರುಣಾಜನಕಗಳಾಗಿವೆ. ಆ ಮಾತುಗಳನ್ನು ಶ್ರೀರಾಮ ಕೇಳಿ–

ದಧ್ಯೌ ಮುಹೂರ್ತಂ ಧರ್ಮಾತ್ಮಾ ಬಾಷ್ಪವ್ಯಾಕುಲಲೋಚನಃ ॥ ಸರ್ಗ ೧೨೦, ಶ್ಲೋಕ ೧

ಮಹಾದೇವನೂ ದೇವಾಧಿದೇವತೆಗಳೂ ಆ ಅದ್ಭುತವನ್ನು ನೋಡಿದರು. ಅವರೆಲ್ಲ ರಾಮನ ನಡವಳಿಕೆಯ ವಿಷಯದಲ್ಲಿ ಅಸಮಾಧಾನ ಸೂಚಿಸಿದರು.

ಉಪೇಕ್ಷಸೇ ಚ ವೈದೇಹೀಂ
ಮಾನುಷಃ ಪ್ರಾಕೃತೋ ಯಥಾ ॥ ಸರ್ಗ ೧೨೦, ಶ್ಲೋಕ ೧೦

ಇಷ್ಟೆಲ್ಲ ಆದಮೇಲೆ ರಾಮನು ಹೇಳುತ್ತಾನೆ:

ಪ್ರತ್ಯಯಾರ್ಥಂ ತು ಲೋಕಾನಾಮ್‍ ॥ ಸರ್ಗ ೧೨೧, ಶ್ಲೋಕ ೧೫

ಲೋಕಕ್ಕೆ ನಂಬಿಕೆಯುಂಟಾಗಬೇಕೆಂದು ಹಾಗೆ ಮಾಡಿದನಂತೆ!

ಈ ಸಬೂಬು ನನ್ನ ಮನಸ್ಸಿಗೆ ಕುಂಟುಸಬೂಬಾಗಿ ಕಾಣುತ್ತದೆ. ಶ್ರೀರಾಮನ ಬಾಯಿಂದ ಹೀಗೆ ಆಡಿಸಿದವರು ವಾಲ್ಮೀಕಿ ಮಹರ್ಷಿಗಳೋ, ಅಥವಾ ಬೇರೊಬ್ಬ ರಾಮ ಭಕ್ತರಾದ ಕವಿಗಳೋ ಎಂದು ನನ್ನ ಮನಸ್ಸಿನಲ್ಲಿ ಶಂಕೆ ಹುಟ್ಟುತ್ತದೆ.

ಅದು ಹೇಗಾದರಿರಲಿ. ಕಥೆಯ ಸಮಾಪ್ತಿಯೇನೋ ಚೆನ್ನಾಗಿದೆ.

ಸ್ವದೇಶಪ್ರೀತಿ

ಶ್ರೀ ಸೀತಾರಾಮರು ಲಂಕೆಯಿಂದ ಪುಷ್ಪಕವಿಮಾನದಲ್ಲಿ ಪ್ರಯಾಣ ಬೆಳೆಸಿ ಬರುತ್ತಿದ್ದಾಗ ಅಯೋಧ್ಯೆ ಕಣ್ಣಿಗೆ ಕಾಣಿಸಿದ ಕೂಡಲೇ ಶ್ರೀರಾಮನು ಹೀಗೆಂದನು:

ಏಷಾ ಸಾ ದೃಶ್ಯತೇ ಸೀತೇ ಸರಯೂರ್ಯೂಪಮಾಲಿನೀ ।
ನಾನಾತರುಲತಾಕೀರ್ಣಾ ಸಂಪ್ರಪುಷ್ಪಿತಕಾನನಾ ॥
ಏಷಾ ಸಾ ದೃಶ್ಯತೇಽಯೋಧ್ಯಾ ರಾಜಧಾನೀ ಪಿತುರ್ಮಮ ।
ಅಯೋಧ್ಯಾಂ ಕುರು ವೈದೇಹಿ ಪ್ರಣಾಮಂ ಪುನರಾಗತಾ ॥ ಸರ್ಗ ೧೨೬, ಶ್ಲೋಕಗಳು ೪೯–೫೧

ಇದು ಸ್ವದೇಶಪ್ರೀತಿಯ ಮಾತು.

ಭರತಸಮಾಗಮ

ಈ ಹೃದಯಮಂಥಿಯಾದ ಪ್ರಕರಣವಾದ ಬಳಿಕ ಅಯೋಧ್ಯೆಗೆ ಪುನರಾಗಮನ; ಭರತನೊಡನೆ ಪುನಸ್ಸಮಾಗಮ. ಭರತನು ನಂದಿಗ್ರಾಮದಲ್ಲಿ ತಪಸ್ವಿಯಾಗಿದ್ದನಷ್ಟೆ.

ಚೀರಕೃಷ್ಣಾಜಿನಾಂಬರಮ್‍ ॥
ಕೃಶಮಾಶ್ರಮವಾಸಿನಮ್‍ ॥
ಜಟಿಲಂ ಮಲದಿಗ್ಧಾಂಗಂ
ಭ್ರಾತೃವ್ಯಸನಕರ್ಶಿತಮ್‍ ।
ನಿಯತಂ ಭಾವಿತಾತ್ಮಾನಂ
ಬ್ರಹ್ಮರ್ಷಿಸಮತೇಜಸಮ್‍ ॥
ಪಾದುಕೇ ತೇ ಪುರಸ್ಕೃತ್ಯ

ಶಾಸತಂ ವೈ ವಸುಂಧರಾಮ್‍ ॥ ಸರ್ಗ ೧೨೮, ಶ್ಲೋಕಗಳು ೨೮–೨೯–೩೦

ಅನಂತರ ಅಣ್ಣತಮ್ಮಂದಿರ ಕುಶಲಸಂಭಾಷಣೆ. ಈ ಪ್ರಸಂಗದಲ್ಲಿ ಭರತನು ತನ್ನ ಅಣ್ಣನಿಗೆ ಸ್ವಾಗತ ನೀಡುವುದಕ್ಕಾಗಿ ಅಯೋಧ್ಯಾಪುರದ ರಸ್ತೆಗಳನ್ನು ಹೇಗೆ ಅಲಂಕಾರ ಮಾಡಿಸಿದ್ದನೆಂಬುದರ ವರ್ಣನೆ ಸೊಗಸಾಗಿದೆ.

ರಾಮನ ವಿಮಾನ ಕಾಣಿಸಿದ ಕೂಡಲೇ ಅಯೋಧ್ಯಾಪಟ್ಟಣದ ಜನ ಉತ್ಸಾಹಭರಿತರಾಗಿ ಜಯಘೋಷಣೆಗಳೊಡನೆ ಕೈಮುಗಿದರು. ಭರತನು ಅಣ್ಣನನ್ನು ಗೌರವಿಸಿದ್ದುದು ಹಾಗಿರಲಿ; ಸುಗ್ರೀವನನ್ನು ಕುರಿತು ಅವನು ಹೇಳಿದ್ದನ್ನು ನೋಡಿರಿ:

ತ್ವಮಸ್ಮಾಕಂ ಚತುರ್ಣಾಂತು
ಭ್ರಾತಾ ಸುಗ್ರೀವ ಪಂಚಮಃ । ಸರ್ಗ ೧೩೦, ಶ್ಲೋಕ ೪೩

ಆಮೇಲೆ ಭರತನು ಹೀಗೆ ಹೇಳಿದನಂತೆ:

ಅದ್ಯ ಜನ್ಮ ಕೃತಾರ್ಥಂ ಮೇ
ಸಂವೃತ್ತಶ್ಚ ಮನೋರಥಃ । ಸರ್ಗ ೧೩೦, ಶ್ಲೋಕ ೫೪

ಪೂಜಿತಾ ಮಾಮಿಕಾ ಮಾತಾ

ದತ್ತಂ ರಾಜ್ಯಮಿದಂ ಮಮ ।
ತದ್ದದಾಮಿ ಪುನಸ್ತುಭ್ಯಂ ಯಥಾ ತ್ವಮದದಾ ಮಮ ॥ ಸರ್ಗ ೧೩೧, ಶ್ಲೋಕ ೨

ರಾಜ್ಯಾಭಿಷೇಕ

ಈಗ ಸಮಾಪ್ತಿ. ಶ್ರೀ ಸೀತಾರಾಮರಿಗೆ ರಾಜ್ಯಾಭಿಷೇಕ. ಇತರ ಕವಿಗಳು ಇಂಥ ಪ್ರಸಂಗದಲ್ಲಿ “ಭೇರೀ ದುಂದುಭಿ ಶಂಖ ಢಕ್ಕಿಕಾ” ಹೀಗೆ ಒಂದು ನೂರು ವಾದ್ಯಗಳ ಘೋಷಣೆಯನ್ನು ಅನುಕರಿಸುವಂತೆ ನಾಲ್ಕು ಶಾರ್ದೂಲವೃತ್ತಗಳನ್ನೂ, ನಾಲ್ಕು ಮಹಾಸ್ರಗ್ಧರೆಗಳನ್ನೂ ಹೊಸೆದು ಆರ್ಭಟ ಮಾಡುತ್ತಿದ್ದರು. ವಾಲ್ಮೀಕಿಗಳು ನಿರಾಡಂಬರವಾಗಿ, ಬಹು ಸಾಮಾನ್ಯವಾದ ಪ್ರಸಂಗವೆಂಬಂತೆ ಸರಳವಾಗಿ ಮುಗಿಸಿದ್ದಾರೆ.

ಅಭ್ಯಷಿಂಚನ್ನ ರವ್ಯಾಘ್ರಂ
ಪ್ರಸನ್ನೇನ ಸುಗಂಧಿನಾ ।
ಸಲಿಲೇನ ಸಹಸ್ರಾಕ್ಷಂ
ವಸವೋ ವಾಸವಂ ಯಥಾ । ಸರ್ಗ ೧೩೧, ಶ್ಲೋಕ ೬೧

ಇದು ಸಾಲದೆನ್ನಿಸುತ್ತದೆ ನಮ್ಮ ಮನಸ್ಸಿಗೆ. ಇಂಥ ಮಹಾಕಥೆಗೆ ಇಂಥ ಸಾಮಾನ್ಯವಾದ ಸಮಾಪ್ತಿಯೆ? ಆಡಂಬರವೇ ಇಲ್ಲವಲ್ಲ!

ಮಾತಿನ ಆಡಂಬರ ಬೇಕಿಲ್ಲ. ಪರ್ಯವಸಾನದಲ್ಲಿ ಕಥೆ ಗದ್ದಲವನ್ನೆಬ್ಬಿಸತಕ್ಕದ್ದಲ್ಲ. ಶಾಂತಿಯನ್ನು ತಂದುಕೊಡಬೇಕಾದದ್ದು. ಮುಖ್ಯ ಮೂರ್ತಿಗಳು ತಪಸ್ವಿಗಳು. ನಿರಹಂಕಾರಿಗಳು. ನಾನು ಗೆದ್ದೆ, ನಾನು ಸಾಧಿಸಿದೆ–ಎಂಬ ರೀತಿಯ ಅಹಂತೆ ಅವರಲ್ಲಿರಲಿಲ್ಲ. ಅಂಥವರಿಗೆ ಗದ್ದಲವೇಕೆ? ನಡಸಬೇಕಾಗಿದ್ದ ಧರ್ಮವನ್ನು ನಡಸಿದ್ದಾಯಿತು. ಧರ್ಮಾಚರಣೆಯಿಂದ ಏನು ಫಲ? ಧರ್ಮ ಸಮಾಧಾನಫಲ. ಲೋಕಕ್ಕೆ ಬೇಕಾದ ಉಪದೇಶ ಅದು.

ಏವಮೇತತ್‍ ಪುರಾವೃತ್ತಂ
ಆಖ್ಯಾನಂ ಭದ್ರಮಸ್ತು ವಃ ।
ಪ್ರವ್ಯಾಹರತ ವಿಸ್ರಬ್ಧಂ
ಬಲಂ ವಿಷ್ಣೋಃ ಪ್ರವರ್ಧತಾಮ್‍ ॥ ಸರ್ಗ ೧೩೧, ಶ್ಲೋಕ ೧೨೨

ಈಗ ಫಲಶ್ರುತಿ.

ಕಾವ್ಯಪ್ರಯೋಜನ

ಶ್ರೀಮದ್ರಾಮಾಯಣವನ್ನು ಪುಣ್ಯಗ್ರಂಥವೆಂಬ ನಂಬಿಕೆಯಿಂದ ಪಾರಾಯಣ ಮಾಡುವುದು ಬಹುಕಾಲದಿಂದ ಬಂದಿರುವ ಪದ್ಧತಿ. ಅದು ಕಾಲವಶದಿಂದ ಕುಂದದೆ ಬೆಳೆಯುತ್ತಿರಲಿ. ನಮ್ಮ ಕಾಲದ ಅತಿಬುದ್ಧಿವಂತಿಕೆಯಿಂದ ಆ ಪವಿತ್ರ ಸಂಪ್ರದಾಯಕ್ಕೆ ನ್ಯೂನತೆ ಬಾರದಿರಲಿ. ಪಾರಾಯಣ ಮಾಡುವ ಭಕ್ತರಿಗೆ “ಐಶ್ವರ್ಯಂ ಪುತ್ರಲಾಭಶ್ಚ”, “ಕುಟುಂಬವೃದ್ಧಿರ್ಧನಧಾನ್ಯವೃದ್ಧಿಃ” –ದೀರ್ಘಾಯುಸ್ಸು, ಆರೋಗ್ಯ, ಕೀರ್ತಿ–ಇವು ಲಭ್ಯಗಳೆಂದು ಪ್ರಾಚೀನರ ನಂಬಿಕೆ. ಶ್ರೀ ಸೀತಾರಾಮರ ಕೃಪಾಮಹಿಮೆಯಿಂದ ಭಕ್ತರಿಗೆ ಈ ಬಹುವಿಧವಾದ ಭೋಗಭಾಗ್ಯಸಂಪತ್ತು ಲಭ್ಯವಾಗಲಿ.

ಆದರೆ ರಾಮಾಯಣ ಭಕ್ತರಲ್ಲಿ ಇನ್ನೊಂದು ವರ್ಗವುಂಟು. ಅದು ಕಾವ್ಯೋಪಾಸಕರದು. ಅವರು ಐಶ್ವರ್ಯ ಪುತ್ರಲಾಭಾದಿಗಳು ಬೇಡವೆನ್ನುವವರಲ್ಲ. ಆದರೆ ಅವರ ಮನಸ್ಸಿನಲ್ಲಿ ಬೇರೊಂದು ಉದ್ದೇಶವೂ ಇರುತ್ತದೆ. ಅದು ಎರಡು ಭಾಗಗಳುಳ್ಳದ್ದು:

(೧) ಮನೋರಂಜನೆ;(೨) ಜೀವನೋನ್ನತಿಯ ದರ್ಶನ.

ರಾಮಾಯಣಕಾವ್ಯದಿಂದ ಎಲ್ಲರಿಗೂ ಅವರವರ ಸಂಸ್ಕಾರಾನುಸಾರವಾಗಿ ಮನೋರಂಜನೆಯಾದೀತೆಂದು ನಾನು ತಿಳಿದುಕೊಂಡಿದ್ದೇನೆ. ಕಥನ ಚಮತ್ಕಾರದಲ್ಲಿ ವಾಲ್ಮೀಕಿಗಳು ಅಪ್ರತಿಮರು. ಆದರೂ ನಮ್ಮದು ಸಿನೆಮಾ ಯುಗ; ಪತ್ತೆದಾರಿ ಕಾದಂಬರಿಗಳ ಯುಗ; ಪ್ರಣಯ ಸಾಹಸಗಳ ಅಪೂರ್ವ ವಿನ್ಯಾಸಗಳ ಯುಗ. ಇಂಥ ನವೀನ ಸಾಹಿತ್ಯದಲ್ಲಿ ರುಚಿ ಕಂಡವರಿಗೆ ಈ ಹಳೆಯ ಕಂದಾಚಾರದ ಕಥೆ ಎಷ್ಟು ಮಾತ್ರ ರುಚಿಸೀತೋ ಅದನ್ನು ತಿಳಿಯುವುದು ನನ್ನಂಥ ಸಂಪ್ರದಾಯ ಜಡನಿಗೆ ಸುಲಭವಲ್ಲ. ಇದು “ಏವಮೇ ತತ್‍ ಪುರಾವೃತಂ.” ಪುರಾತನದಲ್ಲಿಯೂ ಸ್ವಾರಸ್ಯವಿರಬಹುದೆಂದು ಯಾರು ಒಪ್ಪಿಯಾರೋ ಅಂಥವರಿಗೆ ಕುತೂಹಲಕರವಾದ ಸಂದರ್ಭಗಳೂ, ಉಲ್ಲಾಸಕರಗಳಾದ ವರ್ಣನೆ ಸಂಭಾಷಣೆಗಳೂ, ರೋಮಾಂಚನಕಾರಿಗಳಾದ ಸನ್ನಿವೇಶಗಳೂ, ಹೃದಯವಿದ್ರಾವಕ ಘಟನೆಗಳೂ ಈ ಕಾವ್ಯದಲ್ಲಿ ಅಡಿಗಡಿಗೂ ಬರುತ್ತವೆ. ವಾಲ್ಮೀಕಿಗಳ ಮಾತೇ ಸೊಗಸು. ಅವರ ವಾಕ್ಯರಚನೆಯೇ ಸೊಗಸು. ನಮ್ಮ ಜನ ಈ ಅಮೇಯವಾದ ಸೊಗಸನ್ನು ಅನುಭವಿಸುವ ಶಕ್ತಿಯುಳ್ಳವರಾಗಲಿ.

ಇನ್ನು ಕಾವ್ಯದಿಂದಾಗುವ ಎರಡನೆಯ ಪ್ರಯೋಜನ. ಅದು ಜೀವನೌನ್ನತ್ಯದರ್ಶನ; ಸಮ್ಯಗ್ಜೀವನದರ್ಶನ ಜೀವನಸೌಂದರ್ಯದರ್ಶನ. ಮನುಷ್ಯಪ್ರಾಣಿ ತಾನು ಧರ್ಮವೆಂದು ನಂಬಿದ ಒಂದು ಧ್ಯೇಯಕ್ಕಾಗಿ ಎಷ್ಟನ್ನು ಎದುರಿಸಬಲ್ಲ? ಎಷ್ಟನ್ನು ತ್ಯಜಿಸಬಲ್ಲ? ಎಷ್ಟನ್ನು ಸಹಿಸಬಲ್ಲ? ಅವನ ಧೈರ್ಯ ಎಷ್ಟು ಮೇಲಕ್ಕೆ ಹೋಗಬಲ್ಲದ್ದು? ಅವನ ಸಹನೆ ಎಷ್ಟು ನಿರಂತರವಾದದ್ದು! ಅವನ ಶ್ರದ್ಧೆ ಎಷ್ಟು ದೃಢವಾದದ್ದು! ಇದನ್ನು ನಾವು ಶ್ರೀರಾಮಪ್ರಪಂಚದಲ್ಲಿ ಕಾಣಲಾಗುತ್ತದೆ. ಅದು ಮಾನುಷಸತ್ತ್ವದ ವಿಕಾಸ. ಈ ಕಥೆ ಈ ಸತ್ತ್ವೋದ್ರೇಕದರ್ಶನಕ್ಕೆ ಅವಕಾಶ ಕಲ್ಪಿಸುತ್ತದೆ. ರಾಮ, ಸೀತೆ, ಲಕ್ಷ್ಮಣ, ಭರತ, ಆಂಜನೇಯ–ಈ ನಾನಾ ವ್ಯಕ್ತಿಗಳು ಅವರವರಿಗೆ ಸೇರಿದ ಬೇರೆಬೇರೆ ದಾರಿಗಳಲ್ಲಿ ಧರ್ಮಪೋಷಣೆಗಾಗಿ ಎಷ್ಟೆಷ್ಟನ್ನು ತ್ಯಾಗಮಾಡಿದ್ದಾರೆ! ಎಷ್ಟೆಷ್ಟನ್ನು ಪಟ್ಟಿದ್ದಾರೆ! ಎಷ್ಟೆಷ್ಟನ್ನು ಸಾಧಿಸಿದ್ದಾರೆ!

ಈ ಭೋಗವಿರಕ್ತ ಲೋಕಕ್ಕೆ ಪ್ರತಿದ್ವಂದ್ವಿಯಾದದ್ದು ರಾವಣನ ಭೋಗ ಸಂಸಕ್ತ ಲೋಕ. ಸತ್ಯವೋ ಮಿಥ್ಯೆಯೋ, ಮರ್ಯಾದೆಯೋ ಉತ್ಕ್ರಾಂತಿಯೋ, ಹೇಗೋ ಸೇಡು ತೀರಿಸಿಕೊಂಡರೆ ಸರಿ; ಬೇಕೆನಿಸಿದ್ದನ್ನು ಗಿಟ್ಟಿಸಿಕೊಂಡರೆ ಸರಿ. ಹೀಗೆ ಭೋಗೈಶ್ವರ್ಯಪ್ರಸಕ್ತವಾದದ್ದು ರಾವಣಲೋಕ. ದೈವವೈಪರೀತ್ಯನಿರೂಪಣೆ

ಈ ಎರಡು ಲೋಕಗಳ ಘರ್ಷಣೆಯನ್ನು ನಾವು ನೋಡುವುದಾಗುತ್ತದೆ. ಈ ವ್ಯಾಜದಲ್ಲಿ ದೈವವು ತಂದೊಡ್ಡುವ ವಿಷಮ ಪರೀಕ್ಷೆಗಳು ನಮ್ಮ ಅನುಭವಕ್ಕೆ ಗೋಚರಿಸುತ್ತವೆ. ಶ್ರೀರಾಮಚಂದ್ರನು ಹೇಳುವಂತೆ

ಪೌರುಷಾದ್ಯದನುಷ್ಠೇಯಂ

ತದೇತದುಪಪಾದಿತಮ್‍ । ಸರ್ಗ ೧೧೮, ಶ್ಲೋಕ ೨

ಈ ಪರಮತತ್ವದ ನಿರೂಪಣೆಯೇ ನಮಗೆ ದೊರೆಯುವ ಮಹಾಫಲ. ಪಾಶ್ಚಾತ್ಯರಲ್ಲಿ ‘ಟ್ರ್ಯಾಜೆಡಿ’ (Tragedy) ಎಂಬ ಕಾವ್ಯಪ್ರಭೇದವು ಸರ್ವೋತ್ಕೃಷ್ಟವಾದದ್ದೆಂದು ಒಂದು ಮತವುಂಟು. ಒಬ್ಬ ಮನುಷ್ಯನು ಬಹುಸತ್ತ್ವ ಸಂಪನ್ನನಾಗಿ ಬಹುಪರಾಕ್ರಮಿಯಾಗಿ ತನ್ನ ಉದ್ದೇಶಸಾಧನೆಯಲ್ಲಿ ಶಿಖರಾಗ್ರಕ್ಕೇರುತ್ತಿರುವನೆಂದು ಜನ ನಿರೀಕ್ಷಿಸಿಕೊಂಡಿರುವಾಗ, ಅವನಲ್ಲಿ ಗೂಢವಾಗಿ ಅಡಗಿರುವ ಒಂದಾನೊಂದು ದೌರ್ಬಲ್ಯದ ಕಾರಣದಿಂದ, ಅವನು ಉನ್ನತ ಸ್ಥಾನದಿಂದ ಉರುಳಿ ಅಧಃಪಾತಾಳಕ್ಕೆ ಬಿದ್ದರೆ ಅದನ್ನು ‘ಟ್ರ್ಯಾಜೆಡಿ’ ಎಂದು ಪಾಶ್ಚಾತ್ಯರು ಕರೆಯುತ್ತಾರೆ. ಈ ಬಗೆಯ ಕಾವ್ಯನಾಟಕಗಳು ೨೫೦೦ ವರ್ಷಗಳ ಹಿಂದೆ ಗ್ರೀಸ್‍ ದೇಶದಲ್ಲಿ ಪ್ರಚಾರದಲ್ಲಿದ್ದವು. ಐಸ್ಕಿಲಸ್‍, ಸೋಫೊಕ್ಲೀಸ್‍, ಯೂರಿಪಿಡೀಸ್‍–ಇವರು ‘ಟ್ರ್ಯಾಜೆಡಿ’ ನಾಟಕಗಳ ರಚನೆಯಿಂದ ಪ್ರಸಿದ್ಧರಾದವರು. ಅನೇಕ ಮಂದಿ ಇಂಗ್ಲಿಷ್‍ ಕವಿಗಳು ಷೇಕ್‍ಸ್ಪಿಯರ್‍ ಮೊದಲುಗೊಂಡು–ಇಂಗ್ಲಿಷಿನಲ್ಲಿ ‘ಹ್ಯಾಮ್ಲೆಟ್‍’ ‘ಮ್ಯಾಕ್ಬೆತ್‍’ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಬಿ.ಎಂ. ಶ್ರೀಕಂಠಯ್ಯನವರು ಸೋಫೊಕ್ಲೀಸನ ‘ಏಜಾಕ್ಸ್‍’ ನಾಟಕದ ಆಧಾರದ ಮೇಲೆ ‘ಅಶ್ವತ್ತಾಮನ್‍’ ಎಂಬ ಶ್ರೇಷ್ಠವಾದ ಕೃತಿಯನ್ನು ರಚಿಸಿದ್ದಾರೆ.

ಶ್ರೀಕಂಠಯ್ಯನವರು ‘ಟ್ರ್ಯಾಜೆಡಿ’ ಎಂಬ ಮಾತಿಗೆ ‘ರುದ್ರನಾಟಕ’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಕೆಲವರು ಅದನ್ನು ‘ದುರಂತನಾಟಕ’ ಎಂದೂ ಕರೆದಿದ್ದಾರೆ. ನನ್ನ ಮನಸ್ಸಿಗೆ ಅದು ‘ವಿಧಿವೈಕಟ್ಯನಾಟಕ’, ‘ದೈವವೈಪರೀತ್ಯನಾಟಕ’ ಎಂದೆನಿಸುತ್ತದೆ. ವಿಧಿ ಒಬ್ಬ ಮನುಷ್ಯನಿಗೆ ತೊಂಭತ್ತೊಂಭತ್ತು ವರಗಳನ್ನು ಅನುಗ್ರಹಿಸಿ ಇನ್ನೊಂದು ವರವನ್ನು ಮಾತ್ರ ಕೊಡಲೊಲ್ಲದೆ, ಆ ತೊಂಭತ್ತೊಂಭತ್ತು ವರಗಳೂ ಅನರ್ಥಕಾರಿಯಾಗುವಂತೆ ಕೃತ್ರಿಮ ಮಾಡುತ್ತದೆ. ಸರ್ವಲಕ್ಷಣಸಂಪನ್ನರಾದ ಯುವಕ ಯುವತಿಯರನ್ನನುಗೂಡಿಸಿ ಮಾಂಗಲ್ಯ ಕಟ್ಟುವ ವೇಳೆಗೆ ವರನ ಕೈಬೆರಳು ಉಳುಕಿಯೋ ವಧುವಿನ ಕೊರಳು ಸೊಟ್ಟಾಗಿಯೋ ಮಾಂಗಲ್ಯದ ದಾರ ತುಂಡು ತುಂಡಾಗುವಂತೆ ಮಾಡುತ್ತದೆ. ಶುಭವಾಗಬೇಕಾಗಿದ್ದದ್ದು ಅಶುಭದಲ್ಲಿ ಪರ್ಯವಸಾನವಾಗುತ್ತದೆ. ಇದು ಟ್ರ್ಯಾಜೆಡಿ. ಅದರಲ್ಲಿ ಕಾರ್ಯಕಾರಿಯಾದದ್ದು ಅನಿರೀಕ್ಷಿತವಾದ ಯಾವುದೋ ಒಂದೇ ವಿಧಿಕೌಟಿಲ್ಯ. ಇದು ಟ್ರ್ಯಾಜೆಡಿಯ ಲಕ್ಷಣ. ರಾವಣನು ಈ ವಿಧಿಕೌಟಿಲ್ಯಕ್ಕೆ ಬಲಿಯಾದವನು.

ಜನ್ಮಬ್ರಹ್ಮಕುಲೇಽಗ್ರಜೋ ಧನಪತಿ-

ರ್ಯಃ ಕುಂಭಕರ್ಣಾಗ್ರಜಃ ।
ಸೂನುರ್ವಾಸವಜಿತ್ಸ್ವಯಂ ದಶಶಿರಾ
ದೋರ್ದಂಡಕಾ ವಿಂಶತಿಃ ।
ಅಸ್ತ್ರಂ ಕಾಮಗಮಂ ವಿಮಾನಮಜಯಂ
ಮಧ್ಯೇ ಸಮುದ್ರಂ ಪುರೀ ।
ಸರ್ವಂ ನಿಷ್ಛಲಮೇತದೇವ ನಿಯತಂ
ದೈವಂ ಪರಂ ದುರ್ಜಯಮ್‍ ॥

ಇಂಥ ಸನ್ನಿವೇಶಗಳನ್ನು ನಮ್ಮ ಮನಸ್ಸು ಚಿಂತಿಸಿ ಚಿಂತಿಸಿ ಅಂತರಂಗಕ್ಕೆ ಶೋಧನೆ ನಡೆದಂತೆಲ್ಲ ತತ್ತ್ವ ಮನದಟ್ಟುವಂತೆ ತಿಳಿದುಬರುತ್ತದೆ:

ಐಶ್ವರ್ಯಕ್ಕಿಂತ ದೊಡ್ಡದು ಧರ್ಮ. ದೈವದ ಮೇಲೆ ಎದ್ದುನಿಲ್ಲಬೇಕಾದದ್ದು ಪೌರುಷ. ಭೋಗಕ್ಕಿಂತ ಹೆಚ್ಚಿನದು ಶಾಂತಿ.

ಕುಂಭೋದ್ಭವಾದಿಸ್ತುತ್ಯಾಯ
ಕ್ಷೇಮಾಭ್ಯುದಯದಾಯಿನೇ ।
ಜೀವತಾರಕನಾಮ್ನೇಽಸ್ತು
ಜಗದೀಶಾಯ ಮಂಗಲಮ್‍ ॥

ಅಭಿನಂದನೆ

ಈಗ ನಮ್ಮ ಉಪಕಾರಿಗಳಿಗೆ ಅಭಿನಂದನೆ. ೧೯೬೪ರಲ್ಲಿ ಈ ಕಾರ್ಯವನ್ನು ಉಪಕ್ರಮಿಸಿದಾಗ ನಮ್ಮ ಮನಸ್ಸುಗಳಲ್ಲಿ ಉತ್ಸಾಹ ತುಂಬಿತ್ತು. ಚಿಂತೆಯೂ ತುಂಬಿತ್ತು. ನಾವು ಕೈಹಚ್ಚಿದ್ದ ಪ್ರಯತ್ನ ಮಹತ್ತರವಾದದ್ದು. ಇಂಥ ದೊಡ್ಡ ಕಾರ್ಯವನ್ನು ಸಾಧಿಸಲು ನಮ್ಮಿಂದ ಆದೀತೇ? ಇಷ್ಟಕ್ಕೆ ಬೇಕಾದ ಶಕ್ತಿ ಸಂಪತ್ತುಗಳನ್ನು ದೇವರು ನಮಗೆ ಅನುಗ್ರಹಿಸಿಯಾನೆ? ನಾವು ಅಷ್ಟು ಪುಣ್ಯವಂತರೆ? ಎಂದು ಆಗ ಪೇಚಾಡಿಕೊಂಡಿದ್ದೆವು. ಕೆಲವು ವಿಘ್ನಗಳೂ ಬಂದವು. ಭಗವಂತನ ಕಟಾಕ್ಷದಿಂದ ಆ ವಿಘ್ನಗಳು ಹೇಗೋ ನಿವಾರಣೆಯಾಗಿ ಹಿಡಿದ ಕೆಲಸ ಈಗ ಸಮಾಪ್ತಿಯ ಸಮೀಪಕ್ಕೆ ಬಂದಿದೆ. ಇದಕ್ಕಾಗಿ ಭಗವಂತನಿಗೆ ಸಹಸ್ರ ನಮಸ್ಕಾರಗಳು. ವಾಲ್ಮೀಕಿ ಸಮುದ್ರದಿಂದ ಭಗವದನುಗ್ರಹರೂಪವಾದ ಅಮೃತ ಹರಿದುಬರಲು ನಾಳಗಳಂತಿರುವ ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರಿಗೂ ಅವರ ಮಿತ್ರವರ್ಗಕ್ಕೂ ಕನ್ನಡ ಜನರಿಂದ ಅಭಿನಂದನೆ ಸಲ್ಲುತ್ತದೆ. ಶ್ರೀ ಸೀತಾರಾಮ ಭಗವಂತರ ಅನುಗ್ರಹ ಅವರಿಗೆ ಸರ್ವದಾ ಸಿದ್ಧವಾಗಿರುತ್ತದೆ.

ಇನ್ನು ವಿದ್ವಾನ್‍ ಶ್ರೀ ರಂಗನಾಥಶರ್ಮರವರ ಲೇಖನಿಗೆ ಅಭಿನಂದನೆ. ಗ್ರಂಥದ ಈ ಭಾಗವನ್ನೂ ನಾನು ಬಹು ಕಡೆ ಓದಿ ನೋಡಿದ್ದೇನೆ. ಇದು ಭಾಷಾಂತರವಲ್ಲ, ಸ್ವತಂತ್ರ ಕೃತಿ ಎನ್ನಿಸುವಷ್ಟು ಅಕೃತವಾಗಿ, ಗಂಭೀರವಾಗಿ, ಸಹಜಸುಂದರವಾಗಿ ಪ್ರವಹಿಸಿದೆ ಅವರ ಶೈಲಿ. ಅವರ ಬರವಣಿಗೆಯನ್ನು ಅದರ ಸೊಗಸಿಗಾಗಿಯೇ ನಮ್ಮ ಜನ ಓದಬೇಕೆಂದು ಬಿನ್ನಯಿಸುತ್ತೇನೆ. ರಂಗನಾಥಶರ್ಮರವರು ಪದವೈವಿಧ್ಯವನ್ನು ತೋರಿಸುವುದರಲ್ಲಿಯೂ ಮೂಲದ ನವುರುಗಳನ್ನು ಕನ್ನಡಕ್ಕಿಳಿಸುವುದರಲ್ಲಿಯೂ ಪರಿಣತರಾಗಿದ್ದಾರೆ. ಕನ್ನಡ ಮಹಾಜನರು ಅವರ ಈ ರಸವತ್ಪಾಂಡಿತ್ಯದ ಪ್ರಯೋಜನವನ್ನು ಪಡೆದು ಅವರಿಂದ ಸಂಸ್ಕೃತದ ಇತರ ಸಾಹಿತ್ಯ ರತ್ನಗಳನ್ನು ಕನ್ನಡಕ್ಕೆ ರೂಪಾಂತರ ಮಾಡಿಸಿ ಸಂತೋಷಿಸಲಿ ಎಂದು ಹಾರೈಸುತ್ತೇನೆ. ಪರಮಾತ್ಮನು ಅವರಿಗೆ ಸಮಸ್ತ ಶುಭಗಳನ್ನೂ ಕರುಣಿಸಲಿ.

ವಾಲ್ಮೀಕಿಗಿರಿಸಂಭೂತಾ
ರಾಮಸಾಗರಗಾಮಿನೀ ।
ಪುನಾತು ಭುವನಂ ಪುಣ್ಯಾ
ರಾಮಾಯಣಮಹಾನದೀ ॥ (೧೯೭೦)

Tuesday, 16 January 2024

ಭಾಗ 10 - ಯುದ್ಧಕಾಂಡ–ಪೂರ್ವಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಅಭಿನಂದಾಮ ವೈದೇಹೀಂ
ಕಾರಾವಾಸತಪಸ್ವಿನೀಮ್‍ ।
ಯಾಂ ವಿಮೋಚಯಿತುಂ ಸೇತುಂ
ಕಾರಯಾಮಾಸ ರಾಘವಃ ॥

ಯುದ್ಧಕಾಂಡಗ್ರಂಥದ ಈ ಪ್ರಥಮ ಸಂಪುಟದಲ್ಲಿ ಸೇತು ನಿರ್ಮಾಣದಿಂದ ಕುಂಭಕರ್ಣವಧೆಯವರೆಗಿನ ಕಥಾಭಾಗ ಸೇರಿದೆ.

ಶ್ರೀಮದ್ರಾಮಾಯಣದ ಏಳು ಕಾಂಡಗಳಲ್ಲಿ ಯುದ್ಧಕಾಂಡ ಬಹು ದೊಡ್ಡದು. ಅಯೋಧ್ಯಾಕಾಂಡ ಕೂಡ ಗಾತ್ರದಲ್ಲಿ ಇಷ್ಟಿಲ್ಲ. ಬರಿಯ ಯುದ್ಧ ಕಥೆಗೆ ಇಷ್ಟು ದೊಡ್ಡ ಗ್ರಂಥವೆ? ಯುದ್ಧವೆಂದರೆ ಹೊಡೆತ, ಬಡಿತ, ಕಡಿಯೋಣ, ಕೊಲ್ಲೋಣ–ಇಷ್ಟು ತಾನೆ? ಆಗ್ನೇಯಾಸ್ತ್ರ, ಐಂದ್ರಾಸ್ತ್ರ, ವಾರುಣಾಸ್ತ್ರ, ವಾಯವ್ಯಾಸ್ತ್ರ; ಇವನು ಬಿದ್ದ, ಅವನು ಸತ್ತ, ಮತ್ತೊಬ್ಬ ಮಡಿದ, ಇನ್ನೊಬ್ಬ ಓಡಿಹೋದ–ಇಷ್ಟು ತಾನೆ ವಿಷಯ? ಇಷ್ಟಲ್ಲದೆ ಬೇರೆ ಸಂಗತಿ ಏನಿದ್ದೀತು? ಇದು ಯಾರ ಮನಸ್ಸಿಗಾದರೂ ಮೊದಲು ಹೊಳೆಯುವ ಪ್ರಶ್ನೆ.

ಆದರೆ ಗ್ರಂಥದ ಒಳಹೊಕ್ಕ ಮೇಲೆ ಆ ಪ್ರಶ್ನೆಯ ಸುಳಿವಿರದು. ಗ್ರಂಥದಲ್ಲಿರುವುದೆಲ್ಲ ಅವಶ್ಯವಾದದ್ದೇ, ಎಲ್ಲ ಉಚಿತವಾದದ್ದೇ, ಎಲ್ಲ ಸ್ವಾರಸ್ಯವೇ–ಎಂದು ಆಗ ಮನದಟ್ಟು ಆಗುತ್ತದೆ. ವಾಲ್ಮೀಕಿಗಳು ಯಾವ ಸಂದರ್ಭವನ್ನೂ ಅನವಶ್ಯವಾಗಿ ಬೆಳಸಿಲ್ಲ; ಎಲ್ಲಿಯೂ ಕೃತಕವಾಗಿಲ್ಲ. ಎಲ್ಲಿ ಎಷ್ಟಿದ್ದರೆ ಪರಿಣಾಮಕಾರಿಯಾದೀತೋ ಅಷ್ಟು ಇದೆ; ಎಲ್ಲ ಸಮಂಜಸವಾಗಿದೆ.

ಆಂಗ್ಲ ಸಾಹಿತ್ಯ ವಿಮರ್ಶಕರಲ್ಲಿ ಹೆಸರಾದ ಕ್ವಿಲ್ಲರ್‍–ಕೌಚ್‍ (Quiller-Couch) ಎಂಬಾತನು ಕಾವ್ಯಕರ್ತನಿಗಿರುವ ಕಷ್ಟಗಳು ಎರಡು ಜಾತಿಯವೆನ್ನುತ್ತಾನೆ: (೧) ಪದ್ಯ ಲೇಖಕನಿಗೆ ಸಾಮಾನ್ಯ ಸಂದರ್ಭ; (೨) ಗದ್ಯ (ವಚನ) ಲೇಖಕನಿಗೆ ವಿಶೇಷ ಸಂದರ್ಭ–ಇರುವ ಕಷ್ಟ.

ನಮ್ಮ ದಿನಚರಿಯ ಸಾಮಾನ್ಯ ಸಂಗತಿಗಳು-ಊಟ, ನಿದ್ದೆ, ಹರಟೆ, ಪೇಟೆಯ ವ್ಯಾಪಾರ, ಲೇವಾದೇವಿ, ಕೊಂಡದ್ದು, ಮಾರಿದ್ದು, ಬೆಳಗಾದದ್ದು, ರಾತ್ರಿಯಾದದ್ದು, ಊರು ತಲಪಿದ್ದು, ಊರು ಬಿಟ್ಟಿದ್ದು – ಇಂಥ ಸಂಗತಿಗಳನ್ನು ರಸವತ್ತಾದ ಪದ್ಯಗಳಿಂದ ಹೇಳುವುದು ಕಷ್ಟ. ಅವು ಜನದ ಬಳಕೆಯ ಮಾತಿನ ವಿಷಯಗಳು, ವಚನಕ್ಕೆ ಸುಲಭವಾಗುತ್ತವೆ.

ಇಂಥ ಸಾಮಾನ್ಯ ಬಾಹ್ಯವ್ಯಾಪಾರಗಳಾಗದೆ, ವಿಶೇಷವಾಗಿ ಹೃದಯವನ್ನು ಮುಟ್ಟುವ ಸನ್ನಿವೇಶಗಳಾದರೋ–ರೋಷ, ಅಸೂಯೆ, ಪ್ರಣಯ, ಉತ್ಸಾಹ, ಭಯ–ಇಂಥ ಮನೋವಿಕಾರಾವೇಶಗಳು ಪದ್ಯಕ್ಕೆ ಸುಲಭ. ವಚನಲೇಖಕನಿಗೆ ಅವು ಅಷ್ಟು ಸುಲಭವಲ್ಲ.

ಯುದ್ಧ ಕಥೆಯ ಕಾವ್ಯಾರ್ಹತೆ

ಕಾವ್ಯವು ಮುಖ್ಯವಾಗಿ ರಸೋತ್ಪಾದಕವಾದ ವಾಕ್ಯ ರಚನೆ. ಅದನ್ನೋದಿದಾಗ ಓದುಗನ ಅಂತರಂಗದಲ್ಲಿ ಭಾವಗಳು ತರಂಗತರಂಗವಾಗಿ ಎದ್ದು ಚಲಿಸಬೇಕು. ಯುದ್ಧದ ವರದಿ ಹಾಗಿದ್ದೀತೆ? ಅದರಲ್ಲೆಲ್ಲಿದೆ ಭಾವೋದ್ದೀಪಕ ವಸ್ತು?

ವಾಲ್ಮೀಕಿಗಳ ರಚನೆಯನ್ನು ನೋಡೋಣವಾಗಲಿ. ಕ್ವಿಲ್ಲರ್‍–ಕೌಚನು ಹೇಳಿರುವ ಕಷ್ಟ ವಾಲ್ಮೀಕಿಗಳಿಗೆ ಇದ್ದಂತೆ ತೋರುವುದಿಲ್ಲ. ಅವರ ಆಖ್ಯಾಯಿಕೆಯಲ್ಲಿ ಎಲ್ಲಿ ನೋಡಿದರೂ ಗಲಭೆ, ಉದ್ರೇಕ, ಗುಡುಗಾಟ, ಗದ್ದಲ, ಉಭಯ–ಪಕ್ಷಗಳ ಸನ್ನಾಹಗಳು, ಉಪಾಯ ಚಿಂತನೆಗಳು, ಹಾರಾಟ ಓಡಾಟಗಳು. ಇದರಲ್ಲಿ ನಮ್ಮ ಮನಸ್ಸು ತೂಕಡಿಸುವುದಕ್ಕೆ ಅವಕಾಶವೇ ಇಲ್ಲ. ಮೊದಲಿನಿಂದ ಕಡೆಯವರೆಗೂ ಮನಸ್ಸಿನ ಹುರಿ ಸಡಿಲ ಬೀಳದೆ ಒಂದೇ ಬಿಕ್ಕಟ್ಟಿನಲ್ಲಿರುತ್ತದೆ. ಅಷ್ಟು ಸ್ವಾರಸ್ಯವನ್ನು ತುಂಬಿದ್ದಾರೆ ಬರಿಯ (Prosaic) ವಚನಮಾತ್ರಕ್ಕೆ ತಕ್ಕ ಒಣ ವಿಷಯವೆನಿಸಿದ ಯುದ್ಧರಂಗ ಪ್ರಕರಣದಲ್ಲಿ. ವಾಚಕರು ಶಬ್ದಶಬ್ದದ ಮೇಲೂ ಅಲ್ಲ, ಅಕ್ಷರ ಅಕ್ಷರದ ಮೇಲೂ ಗಮನವಿರಿಸಬೇಕು. ಭೋಜನಸುಖಿ ಕವಳವನ್ನು ಉಂಡುಂಡೆಯಾಗಿ ನುಂಗುವುದಿಲ್ಲ. ಅಗಳಗಳನ್ನೂ ಅಗಿದು ಸವಿಯುತ್ತಾನೆ. ಒಗ್ಗರಣೆಗೆ ಹಾಕಿದ ಕಡಲೆಯ ಬೇಳೆ ಉದ್ದಿನ ಬೇಳೆಯ ಕಾಳುಗಳನ್ನೂ ಅಗಿದು ಆ ಘಮಲನ್ನನುಭವಿಸುತ್ತಾನೆ. ಮಹಾಕಾವ್ಯವ್ಯಾಸಂಗಿ ಹಾಗೆ ಮಾತುಮಾತಿನಲ್ಲಿಯೂ ಭಾವಪುಷ್ಟಿಯನ್ನು ಸಂಪಾದಿಸುತ್ತಾನೆ.

ವಾಲ್ಮೀಕಿಗಳ ಸಮುದ್ರ ವರ್ಣನೆಯನ್ನು ನೋಡಿರಿ:

ಸಾಗರಂ ಚಾಂಬರಪ್ರಖ್ಯಂ
ಅಂಬರಂ ಸಾಗರೋಪಮಮ್‍ ।
ಸಾಗರಂ ಚಾಂಬರಂ ಚೇತಿ
ನಿರ್ವಿಶೇಷಮದೃಶ್ಯತ ॥ ಸ. ೪, ಶ್ಲೋ. ೧೨೦

ಸಮುದ್ರತೀರವರ್ಣನೆಯಲ್ಲಿ ನಾನಾ ತರುಲತೆಗಳ ಹೆಸರುಗಳು, ನಾನಾ ಜೀವಜಂತುಗಳ ಹೆಸರುಗಳು ಪಟ್ಟಿಪಟ್ಟಿಯಾಗಿ ಬರುತ್ತವೆ. ಸಮುದ್ರದ ಹೆಸರು ನಾಲ್ಕಾರು ಸಲ ಬರುತ್ತದೆ: ಅರ್ಣವಃ, ಮಹಾರ್ಣವಃ, ವರುಣಾಲಯಂ, ಮಕರಾಲಯಂ, ಸಲಿಲಾಶಯಃ ಜಲರಾಶಯಃ–ಹೀಗೆ ಪುನರುಕ್ತಿಗಳು ಬಂಡಿಬಂಡಿಯಾಗಿ ಬರುತ್ತವೆ. ಇದರ ಮರ್ಮವೇನು? ನನಗೆ ಎರಡು ಉತ್ತರಗಳು ತೋರುತ್ತವೆ:

ವಾಗ್ಧೋರಣೆ, ಆವರಣಕಲ್ಪನೆ

1) ಕವಿಯು ಪುಸ್ತಕದಿಂದ ಓದುತ್ತಿಲ್ಲ; ಸ್ವತಂತ್ರ ಮನಸ್ಸಿನಿಂದ ಹಾಡುತ್ತಿದ್ದಾನೆ. ಆಗಾಗ ಸಭೆಯ ಕಡೆ ನೋಡುತ್ತಾನೆ. ಅವರು ಕುತೂಹಲದಿಂದ ಕೇಳುತ್ತಿದ್ದಾರೆ. ಅವನಲ್ಲಿ ಕಾವೇರುತ್ತದೆ. ಆ ಆವೇಶದಲ್ಲಿ ಅವನ ಬಾಯಿಗೆ ಶಬ್ದಭಂಡಾರ ನುಗ್ಗಿಕೊಂಡು ಒದಗಿಬರುತ್ತದೆ. ಆತನು ವಿದ್ವಾಂಸ. ಆದದ್ದರಿಂದ ಅವನಿಗೆ ವಾಕ್ಯರಚನೆ ಒಂದು ಕಷ್ಟವಲ್ಲ. ಸನ್ನಿವೇಶಕ್ಕೆ ತಕ್ಕ ಶಬ್ದ ಸಂಚಯ ತಾನಾಗಿ ಮುನ್ನುಗ್ಗಿಕೊಂಡು ಬರುತ್ತದೆ. ಅವನು ಆ ವಾಕ್ಸಂಪತ್ತನ್ನು ಧೋರಣೆಯಿಂದ ಧಾರಾಳವಾಗಿ ಎಸೆದಾಡುತ್ತಾನೆ. ಹೀಗೆ ಪದವರ್ಷಣ, ಪುನರುಕ್ತಿ, ಮಹಾಪ್ರವಾಹ.

2) ಇದಕ್ಕೆ ಸಾರ್ಥಕ್ಯವುಂಟು. ರಾಶೀಕರಣದಿಂದ ವಾತಾವರಣವುಂಟಾಗುತ್ತದೆ. ಈ “ವಾತಾವರಣ” ಎಂಬ ರೂಪಕಪದವನ್ನು ನಾವು ಇಂಗ್ಲಿಷಿನಿಂದ ತೆಗೆದುಕೊಂಡಿದ್ದೇವೆ. “ಅಟ್ಮೊಸ್ಫಿಯರ್‍” (Atmosphere) ಎಂದರೆ ನಮ್ಮ ದೇಹವನ್ನು ಹತ್ತು ದಿಕ್ಕುಗಳಿಂದಲೂ ಸುತ್ತುಗಟ್ಟಿರುವ ಹವೆ ಅಥವಾ ವಾಯುಮಂಡಲ. ನಮ್ಮ ಮನಸ್ಸಿಗೂ ಇಂಥ ಸಂದರ್ಭ ಪರಿಸರವುಂಟು. ಅದೇ ವಾತಾವರಣ. ಈ ವಾತಾವರಣವನ್ನು ಕಟ್ಟುವುದು ಮಹಾಕವಿಯ ಮೊದಲ ಕೆಲಸ. ವಾತಾವರಣದಿಂದ ಭಾವೋದ್ದೀಪನ; ಅದರಿಂದ ರಸೋತ್ಪತ್ತಿ.

ಕಾದ ಲೋಹದ ಮೇಲೆ ಸುತ್ತಿಗೆಯ ಪೆಟ್ಟು ಬಿದ್ದು, ಪೆಟ್ಟಿನ ಮೇಲೆ ಪೆಟ್ಟು, ಇನ್ನೂ ಪೆಟ್ಟು, ಮತ್ತೂ ಪೆಟ್ಟು ಬಿದ್ದದ್ದಾದರೆ ಆಗ ಆ ಲೋಹದ ತುಂಡು ನಾವು ಬಯಸಿದ ರೂಪವನ್ನು ತಾಳುತ್ತದೆ. ಇಂಥ ಸಂಸ್ಕಾರವು ಮನಸ್ಸಿಗೂ ಅವಶ್ಯವಾಗುತ್ತದೆ. ಆದದ್ದರಿಂದ ಕವಿ ಯಾವುದೋ ಒಂದು ಶಬ್ದವನ್ನು ಅಥವಾ ಒಂದು ಭಾವವನ್ನು ಪುನಃ ಪುನಃ ಪದೇ ಪದೇ ನಮ್ಮ ಕಿವಿಗಳಲ್ಲಿ ತುಂಬುತ್ತಾನೆ. “ರಾಮಸ್ಸತ್ಯಪರಾಕ್ರಮಃ”, “ರಾಮೋರಾಜೀವಲೋಚನಃ”, “ರಾಮಶ್ಶಸ್ತ್ರಭೃತಾಂವರಃ”, “ಕೌಸಲ್ಯಾನಂದವರ್ಧನಃ”, “ಧರ್ಮಜ್ಞೋ ಧರ್ಮವತ್ಸಲಃ” -ಎಷ್ಟು ಸಾರಿ ಇದು, ಎಷ್ಟು ನೂರುಸಾರಿ! ಅದರ ಉದ್ದೇಶವು ವಾತಾವರಣಕಲ್ಪನೆ. ಒಂದೇ ಭಾವ ಮನಸ್ಸಿನ ಮೇಲೆ ಬಿದ್ದೂ ಬಿದ್ದೂ ಪರಿಣಾಮ ಮಾಡಬೇಕು. ಒಂದೇ ಒಂದು ಮರದಿಂದ ಕಾಡಾಗುವುದಿಲ್ಲ. ಕಾಡಿನ ಕಲ್ಪನೆ ನಮ್ಮ ಮನಸ್ಸಿನಲ್ಲಿ ಬರಬೇಕಾದರೆ ಹತ್ತಾರು ಜಾತಿಯ ಮರಗಳ ಹೆಸರುಗಳು, ಆ ಮರಗಳ ಹತ್ತಾರು ಗುಂಪುಗಳು ನಮ್ಮ ಮನಸ್ಸಿನಲ್ಲಿ ಕಲ್ಪಿತವಾಗಬೇಕು. ಭಗವನ್ನಾಮ ಸಂಕೀರ್ತನೆ ಭಜನೆಗಳ ಮರ್ಮವೂ ಇದೇ–ಮನಸ್ಸಿನ ಮೃದೂಕರಣ, ಮನಸ್ಸಿನ ರೂಪಾಂತರಗ್ರಹಣ ಸಿದ್ಧತೆ.

ಪೌನಃಪುನ್ಯದ ಔಚಿತ್ಯ

ಕಾವ್ಯವು ಸೂತ್ರ ಗ್ರಂಥವಲ್ಲ. ಶಾಸ್ತ್ರವ್ಯಾಸಂಗಿಗೆ ಒಂದು ವಿಷಯವನ್ನು ಒಂದುಸಾರಿ ಹೇಳಿದರೆ ಸಾಕು. ಅದೂ ಅಡಕವಾದ ಸಣ್ಣ ಮಾತಿನಲ್ಲಿ ಹೇಳಿದರೆ ಸಾಕು. ಅದೇ ಸೂತ್ರ. ಕಾವ್ಯಶ್ರೋತನಿಗೆ-ಕಿವಿಯಿಂದ ಕೇಳುವವನಿಗೆ ಹಾಗಾಗದು. ಅವನಿಗೆ ಅನ್ಯಮನಸ್ಕತೆ, ಅನವಧಾನ ಮೊದಲಾದ ಎಷ್ಟೋ ಅಪಾಯಗಳಿರುವುದರಿಂದ ಅವನ ವಿಷಯದಲ್ಲಿ ಪೌನಃಪುನ್ಯವು ಎಷ್ಟೋ ಸಂದರ್ಭಗಳಲ್ಲಿ ದೋಷವಾಗದೆ ಗುಣವೇ ಆದೀತು.

ಆದರೆ ಪೌನಃಪುನ್ಯದಿಂದ ಬೇಸರವಾಗದೆ? ಅದು ಅತಿಯಾಗದೆ? ಅದಕ್ಕೆ ಒಂದು ಮಿತಿ ಇರಬೇಡವೆ?

ಹೌದು. ಅತಿಯಾದರೆ ಬೇಸರವುಂಟು ಮಾಡೀತು. ಇಲ್ಲಿ ಎರಡು ಸಂಗತಿ:

1) ಸನ್ನಿವೇಶದ ಸ್ವಾರಸ್ಯವು ಮಾತಿನ ಅತಿಯನ್ನು ದೃಷ್ಟಿಗೆ ತಾರದೆ ಮರೆಯಿಸೀತು.

2) ಔಚಿತ್ಯ ವಿವೇಕವು ಕವಿಗಿರುವ ಕರ್ತವ್ಯಗಳಲ್ಲಿ ಮುಖ್ಯವಾದದ್ದು. ಎಲ್ಲಿ ಅತಿಯಾಯಿತು, ಎಲ್ಲಿ ತಕ್ಕಷ್ಟು ಆಗಿದೆ–ಎಂಬುದನ್ನು ಗೊತ್ತು ಮಾಡುವುದರಲ್ಲಿರುತ್ತದೆ ಅವನ ವಿವೇಕ.

ನನ್ನಂಥ ಅಲ್ಪನ ಅನುಭವಕ್ಕೆ ವಾಚಕರು ಬೆಲೆ ಕೊಡುವುದಾದರೆ ಇದು ನಿಜ:- ನಾನು ವಾಲ್ಮೀಕಿ ರಾಮಾಯಣವನ್ನು ಆಗಾಗ ನೋಡುವುದುಂಟು. ನಾಲ್ಕು ಸಾರಿ ಐದುಸಾರಿ ಓದಿದ ಭಾಗವನ್ನೇ ಆರನೆಯ ಸಾರಿ ಏಳನೆಯಸಾರಿ ಓದುತ್ತೇನೆ. ಒಂದೊಂದು ಸಾರಿಯೂ ನನಗೆ ಸ್ವಾರಸ್ಯ ಕಾಣುತ್ತದೆಯೇ ಅಲ್ಲದೆ, –ಬೇಸರವೆಷ್ಟು ಮಾತ್ರವೂ ತೋರಿಲ್ಲ.

ಇನ್ನೊಂದು ವಿಚಾರಕ್ಕೆ ಹೋಗುವ ಮುನ್ನ ವಾಲ್ಮೀಕಿಗಳು ಸ್ವಾರಸ್ಯ ಹುದುಗಿಸಿರುವುದರ ರೀತಿಯ ಉದಾಹರಣೆಯೊಂದನ್ನು ನೋಡೋಣ. ಚೆಲುವೆಯ ಅಗಲವಾದ ಹಣೆಯ ನಡುವೆ ಇಟ್ಟ ಕುಂಕುಮದ ಬೊಟ್ಟಿನಂತೆ, ಅವಳ ಭಾರೀ ಕರಿತುರುಬಿನ ನಡುವಣ ಏಳುಸುತ್ತಿನ ಮಲ್ಲಿಗೆಯ ಒಂದು ಹೂವಿನಂತೆ, ಮಹಾಸಮುದ್ರದ ತೆರೆಗಳ ಚಲನ ವಲನಗಳ ವರ್ಣನೆಯ ಮಧ್ಯೆ ಈ ಸೌಂದರ್ಯ ಕಂಗೊಳಿಸುತ್ತದೆ.

ಚಂಡನಕ್ರಗ್ರಹಂ ಘೋರಂ
ಕ್ಷಪಾದೌ ದಿವಸಕ್ಷಯೇ ।
ಹಸನ್ತಮಿವ ಫೇನೌಘೈಃ
ನೃತ್ಯನ್ತಮಿವ ಚೋರ್ಮಿಭಿಃ॥
ಚಂದ್ರೋದಯಸಮುದ್ಧೂತಂ
ಪ್ರತಿಚಂದ್ರಸಮಾಕುಲಮ್‍ ।
ಪಿನಷ್ಟೀವ ತರಂಗಾಗ್ರೈಃ
ಅರ್ಣವಃ ಫೇನಚಂದನಮ್‍ ॥
ತದಾದಾಯ ಕರೈರಿಂದುಃ
ಲಿಂಪತೀವ ದಿಗಂಗನಾಃ ॥ ಸರ್ಗ ೪, ಶ್ಲೋಕ ೧೧೩, ೧೧೫

ವಾಲ್ಮೀಕಿಗಳು ಋಷಿಗಳು, ಹಾಗೆಯೇ ಸರಸಿಗಳು. ಮಡಿಯುಟ್ಟಿದ್ದಾಗಲೂ ಅವರು ಅರಳುತ್ತಿರುವ ಹೂಮೊಗ್ಗನ್ನು ನೋಡೆನೆನ್ನರು.

ಇಲ್ಲಿ ಹೀಗೆ ಸೊಗಯಿಸುವ ರೂಪಕವು ಕ್ಷುದ್ರಕವಿಯ ಪ್ರಯೋಗದಲ್ಲಿ ಕೃತಕಸೃಷ್ಟಿ (Conceit) ಆದೀತು. ಶ್ರೀರಾಮನ ಕೈಯಲ್ಲಿ ಕೋದಂಡವಾದದ್ದನ್ನು ಸಣ್ಣಪ್ಪಣ್ಣನು ಕೈಗೆ ತೆಗೆದುಕೊಂಡಾಗ ಅದು ಸೊಟ್ಟ ಕಟ್ಟಿಗೆಯಾಗಬಹುದು. ಯಾವುದಕ್ಕೂ ಅಧಿಕಾರ ಯೋಗ್ಯತೆ ಇರಬೇಕಲ್ಲವೆ?

ಈಗ ಕಥೆಗೆ ತಿರುಗೋಣ.

ಶ್ರೀರಾಮನ ಚಿಂತಾಕುಲತೆ

ಶ್ರೀರಾಮಚಂದ್ರನು ಸಮುದ್ರವನ್ನು ನೋಡಿ ಚಿಂತಾಕ್ರಾಂತನಾದ. ಸೀತೆಯನ್ನು ರಾವಣನು ಸೆರೆಯಲ್ಲಿಟ್ಟಿದ್ದನ್ನು ಹನುಮಂತನು ಪತ್ತೆ ಮಾಡಿದ್ದೇನೋ ಆಯಿತು. ರಾಮನ ಗುರುತನ್ನು ಆಕೆಗೂ ಆಕೆಯ ಗುರುತನ್ನು ಆತನಿಗೂ ತಂದುಕೊಟ್ಟಿದ್ದ. ಅಷ್ಟರಿಂದ ಏನು ಸಾಧಿಸಿದ ಹಾಗಾಯಿತು? ಮಹಾಸಮುದ್ರವಿದೆಯಲ್ಲ ಅಡ್ಡವಾಗಿ! ಅದನ್ನು ದಾಟುವವರಾರು? ಇದು ಅಸಾಧ್ಯವಾದ ಸಾಹಸ.

ಸಾಗರಂ ತು ಸಮಾಸಾದ್ಯ

ಭೂಯೋ ನಷ್ಟಂ ಮನೋ ಮಮ ॥ ಸ. ೧, ಶ್ಲೋ. ೧೭

ಇಂಥ ನಿರಾಸೆಯ ಸಮಯದಲ್ಲಿ ರಾಮನು ಆಂಜನೇಯನನ್ನು ನೆನಸಿಕೊಂಡ. ಆಗ ಸುಗ್ರೀವಾಂಜನೇಯರು ಧೈರ್ಯ ಹೇಳಿ ಭರವಸೆ ಕೊಟ್ಟ ಬಳಿಕ ಮುಂದಿನ ಕಾರ್ಯ.

ವಾನರಸೈನ್ಯ ಸಮುದ್ರ ತೀರಕ್ಕೆ ಬಂದಿದೆ. ತೆರೆಗಳ ಹೊಡೆತವನ್ನೂ ಮೊರೆತವನ್ನೂ ನೋಡಿ ಕಪಿಗಳು ವಿಸ್ಮಯಗೊಂಡಿದ್ದಾರೆ. ಶ್ರೀರಾಮನಿಗಾದರೋ ಕ್ಷಣೇ ಕ್ಷಣೇ ತವಕ ಹೆಚ್ಚುತ್ತಿದೆ.

ವಾಹಿ ವಾತ ಯತಃ ಕಾಂತಾ
ತಾಂ ಸ್ಪೃಷ್ಟ್ವಾ ಮಾಮಪಿ ಸ್ಪೃಶ ॥ ಸ. ೫, ಶ್ಲೋ. ೬

“ಎಲೆ ಗಾಳಿಯೆ, ನನ್ನ ಪ್ರಾಣಕಾಂತೆಯೆಲ್ಲಿದ್ದಾಳೋ ಅಲ್ಲಿಂದ ಬೀಸಿಕೊಂಡು ಬಾ; ಆಕೆಯನ್ನು ಸೋಕಿ ಬಂದು ನನ್ನನ್ನು ಸೋಕು.”

ಹೀಗಿತ್ತು ರಾಮಚಂದ್ರನ ಕಾತರ. ತಾನೂ ತನ್ನ ಸೈನ್ಯವೂ ಲಂಕೆಗೆ ಹೋಗಲು ದಾರಿ ಬಿಟ್ಟುಕೊಡೆಂದು ಸಮುದ್ರನನ್ನೇ ತಾನು ಬೇಡತಕ್ಕದ್ದೆಂದು ನಿಶ್ಚಯಿಸಿ, ಸಮುದ್ರತೀರದಲ್ಲಿ ದರ್ಭೆಯ ಹಾಸುಗೆಯ ಮೇಲೆ ಮಲಗಿ ಶಪಥ ಮಾಡಿದನು:

ಅದ್ಯ ಮೇ ಮರಣಂ ವಾಽಥ
ತರಣಂ ಸಾಗರಸ್ಯ ವಾ ॥ ಸ. ೨೧, ಶ್ಲೋ. ೮

ಸೇತು ನಿರ್ಮಾಣ

ಮೂರು ರಾತ್ರಿ ಕಳೆಯಿತು. ಉತ್ತರ ಬರಲಿಲ್ಲ. ಆಗ ರೋಷಾವೇಶದಲ್ಲಿ–

ಸಮುದ್ರಂ ಶೋಷಯಿಷ್ಯಾಮಿ
ಪದ್ಭ್ಯಾಂ ಯಾಂತು ಪ್ಲವಂಗಮಾಃ ॥ ಸ. ೨೧, ಶ್ಲೋ.೨೨

“ಈ ಸಮುದ್ರವನ್ನು ಬತ್ತಿಸಿಬಿಡುತ್ತೇನೆ. ಕಪಿಗಳು ಲಂಕೆಗೆ ಕಾಲಿನಿಂದ ನಡೆದು ಹೋಗಲಿ” –ಎಂದು ಗರ್ಜಿಸಿ ಸಮುದ್ರದ ಮೇಲೆ ಬಾಣವನ್ನು ಪ್ರಯೋಗಿಸಿದ. ಸಮುದ್ರ ಅದಿರಿತು; ಅದರಲ್ಲಿಯ ಮಕರ ಮೀನ ನಾಗಾದಿಗಳು ತಲ್ಲಣಿಸಿ ಕಂಗೆಟ್ಟವು. ಸಮುದ್ರ ರಾಜನು ಶ್ರೀರಾಮನ ಮುಂದೆ ಬಂದು ನಿಂತು, “ದೇವಾ, ಸೈರಿಸಬೇಕು. ನನ್ನನ್ನು ನೀನು ಶೋಷಣೆ ಮಾಡಿದರೆ ನನ್ನಲ್ಲಿರುವ ಅಸಂಖ್ಯಾತಗಳಾದ ಜಲಜಂತುಗಳ ಗತಿಯೇನು? ಲಂಕೆಗೆ ಹೋಗಲು ಸೇತುವೆಯನ್ನು ಕಟ್ಟು. ನಲನೆಂಬ ವಾನರನು ಹಾಕಿದ ಕಲ್ಲು ನೀರಿನಲ್ಲಿ ಮುಳುಗಲಾರದೆಂದು ಅವನಿಗೆ ವರವಿದೆ. ಅವನ ಮೂಲಕ ಸೇತುವೆಯ ನಿರ್ಮಾಣವಾಗಲಿ” ಎಂದು ಉಪಾಯ ಸೂಚನೆ ಮಾಡಿದ. ಆ ಮೇರೆಗೆ ಸೇತುವೆಯ ನಿರ್ಮಾಣವಾಯಿತು. ಕಪಿಸೈನ್ಯವು ಬೆಟ್ಟಗಳನ್ನೂ ಬಂಡೆಗಳನ್ನೂ ಮರಗಳನ್ನೂ ಕೊಂಬೆರೆಂಬೆಗಳನ್ನೂ ತಂದು ತಂದು ತುಂಬಿದವು. ಸೇತುವೆ ಸಿದ್ಧವಾಯಿತು.

ವಿಭೀಷಣ ಶರಣಾಗತಿ

ಈ ಸಮಾಚಾರವನ್ನು ರಾವಣಾಸುರನು ತನ್ನ ಚಾರರಿಂದ ತಿಳಿದುಕೊಂಡು, ತನ್ನ ಸಿದ್ಧತೆಯನ್ನು ಆಲೋಚಿಸಿದ. ಅಲ್ಲಿಯೂ “ಡೆಮಾಕ್ರೆಸಿ” ತಾನೆ? ಮಂತ್ರಿ ಮಿತ್ರರುಗಳ ಸಭೆ, ಭಾಷಣಗಳು, ಚರ್ಚೆಗಳು, ಅಭಿಪ್ರಾಯ ವಿನಿಮಯ; ಆಮೇಲೆ ನಿರ್ಣಯ. ರಾವಣನ ಮೂಗಿಗೆ ನೇರವಾಗಿ ಮಾತನಾಡಿದವರು ಬಹುಮಂದಿ. ಅಡ್ಡ ಮಾತಾಡಿದವರಲ್ಲಿ ಮುಖ್ಯನು ವಿಭೀಷಣ-ರಾವಣನ ತಮ್ಮ.

ಪ್ರದೀಯತಾಂ ದಾಶರಥಾಯ ಮೈಥಿಲೀ ॥

ಇದೊಂದೇ ಅವನ ಪಲ್ಲವಿ. ಇದನ್ನು ಹತ್ತಾರು ಕಾರಣಗಳೊಡನೆ ಹತ್ತಾರು ರೀತಿಗಳಲ್ಲಿ ಹೇಳಿದ. ರಾವಣನು ಒಪ್ಪಿಯಾನೆ? ಒಪ್ಪಿಕೊಂಡಿದ್ದಿದ್ದರೆ ಅವನು ರಾವಣನಾಗುತ್ತಿದ್ದನೆ? ಅವನಿಗೆ ತನ್ನ ಮಗ ಇಂದ್ರಜಿತ್ತು ಮೊದಲಾದ ಕ್ರೋಧಪರವಶರಾದವರು ಹೇಳಿದ್ದೇ ದೊಡ್ಡದಾಯಿತು. ಆಗ ವಿಭೀಷಣನು ತನಗೆ ಇನ್ನು ಮುಂದೆ ಲಂಕೆಯಲ್ಲಿ ಸ್ಥಳವಿರಲಾರದೆಂದು ಕಂಡುಕೊಂಡು ರಾವಣಸಹವಾಸವನ್ನು ಪರಿತ್ಯಜಿಸಿ ರಾಮನಲ್ಲಿ ಮೊರೆಹೊಕ್ಕ.

ಇಲ್ಲಿಯೂ–ಶ್ರೀರಾಮನ ಶಿಬಿರದಲ್ಲಿಯೂ ಒಂದಷ್ಟು “ಡೆಮಾಕ್ರೆಸಿ.” ಸುಗ್ರೀವ ಮೊದಲಾದವರ ಸಂಗಡ “ಕುಂಸಲ್ಲು” (Council) ನಡೆಯಿತು. ಕಡೆಗೆ ಶ್ರೀರಾಮನು ವಿಭೀಷಣನನ್ನು ಅಂಗೀಕರಿಸತಕ್ಕದ್ದೆಂದು ನಿಶ್ಚಯಿಸಿದನು.

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ:

1) ವಿಭೀಷಣನ ಮನಸ್ಸಿನಲ್ಲಿದ್ದುದೇನು?
a) ಪಾಪವಿರೋಧವೆ?
b)ಪ್ರಾಣಭೀತಿಯೆ?
c)ಧರ್ಮಸಹಾಯಬುದ್ಧಿಯೆ?

2) ಶ್ರೀರಾಮನ ಮುಖ್ಯತಾತ್ಪರ್ಯವೇನು?
a) ಉಪಾಯಚಿಂತನೆಯೆ?
b) ಆರ್ತರಕ್ಷಣೆಯೇ?

ವಿಭೀಷಣನ ಇಂಗಿತ

ವಿಭೀಷಣನು ಪಾಪವಿರೋಧಿಯೆಂದು ಅವನಾಡಿದ ಮಾತುಗಳಿಂದ ವ್ಯಕ್ತಪಡುತ್ತದೆ. ಅವನಿಗೆ ದುಷ್ಟಾಲೋಚನೆಯ ವಿಷಯದಲ್ಲಿ ಅಸಮ್ಮತಿ ಮಾತ್ರವಲ್ಲದೆ ಕುಲಗೌರವದ ಮೇಲೆಯೂ ದೃಷ್ಟಿಯಿತ್ತು. ಆದದ್ದರಿಂದ ಅವನು ರಾವಣನನ್ನು ತ್ಯಜಿಸುವುದು ಅನಿವಾರ್ಯವಾಯಿತು.

ಹಾಗೆ ಮಾಡಿದರೂ ರಾಮನಲ್ಲಿ ಮರೆಹೋಗಬೇಕಾದದ್ದೇಕೆ? ತಟಸ್ಥನಾಗಿರಬಹುದಾಗಿತ್ತಲ್ಲ? ಮತ್ತೆಲ್ಲಾದರೂ ಹೋಗಬಹುದಾಗಿತ್ತಲ್ಲ?

ರಾವಣನು ಛಲವಂತ. ತನ್ನನ್ನು ಅನುಮೋದಿಸದೆ ವಿರೋಧಿಸಿದವರನ್ನು ಅವನು ಸುಮ್ಮನೆ ಬಿಡುತ್ತಿರಲಿಲ್ಲ. ಸೇಡು ತೀರಿಸಿಯೇ ತೀರಿಸಿಕೊಳ್ಳುತ್ತಿದ್ದ. ಈ ಭಯವಿದ್ದದ್ದರಿಂದ ವಿಭೀಷಣನಿಗೆ ಬಲವತ್ತರವಾದ ಆಶ್ರಯ ಬೇಕೆನಿಸಿತು.

ಅದಕ್ಕಾಗಿ ರಾಮನಲ್ಲಿ ಬಂದ.

ಪಾಪಕ್ಕೆ ಪ್ರತೀಕಾರಮಾಡಿಸುವುದೂ ವಿಭೀಷಣನ ಉದ್ದೇಶದಲ್ಲಿದ್ದಿರಬೇಕು. ಅಧರ್ಮ–ಅಸಹನೆಯ ಜೊತೆಗೆ ಧರ್ಮಸಂರಕ್ಷಣೆ ಸೇರಿರಬೇಕು. ರಾವಣನ ಬಲವನ್ನು ತಗ್ಗಿಸುವುದರ ಜೊತೆಗೆ ರಾವಣಪ್ರತ್ಯರ್ಥಿಯನ್ನು ಬಲಪಡಿಸಬೇಕು. ಇದು ವಿಭೀಷಣನ ಮನೋಗತ.

ಶ್ರೀರಾಮನ ಇಂಗಿತ

ಇನ್ನು ಶ್ರೀರಾಮನ ಇಂಗಿತವೇನಿದ್ದಿರಬಹುದು?

1) ಆರ್ತತ್ರಾಣ: ಮರೆಹೊಕ್ಕು ಬಂದವರನ್ನು ಕಾಪಾಡುವುದು. ಇದು ಕ್ಷತ್ರಿಯನಿಗೆ ಆರ್ಷೇಯವಾಗಿ ಬಂದಿರುವ ಧರ್ಮ. ಇದನ್ನು ಅನುಸರಿಸಿಯೇ ಶ್ರೀರಾಮನು “ಯದಿ ವಾ ರಾವಣಃ ಸ್ವಯಂ” ಎಂದು ಹೇಳಿದ್ದು. ಯಾರು “ನೀನೇ ನನಗೆ ಗತಿ, ಬೇರೆ ದಿಕ್ಕಿಲ್ಲ” ಎಂದು ಶರಣಾಗತನಾಗಿ ಬರುತ್ತಾನೋ ಅವನನ್ನು ಕಾಪಾಡುವುದು ಧರ್ಮ. ಇದು ವಿಭೀಷಣನೊಬ್ಬನಿಗೆ ಮಾತ್ರವೇ ಅನ್ವಯಿಸಿದ್ದೇನೂ ಅಲ್ಲ. ಯಾರು ಹಾಗೆ ಬಂದಿದ್ದರೂ ಅವರಿಗೆ ಅಭಯಕೊಡತಕ್ಕವನು ರಾಮ.

2) ಲೌಕಿಕೋಪಾಯ: ಆರ್ತತ್ರಾಣ ಧರ್ಮದ ಜೊತೆಗೆ ಲೌಕಿಕೋಪಾಯ ಸೇರಿರಲಿಲ್ಲವೆ? ಸುಗ್ರೀವಸಖ್ಯದಲ್ಲಿ ಸ್ವಕಾರ್ಯೋಪಾಯ ಚಿಂತನೆ ಸೇರಿದ್ದದ್ದು ಸ್ಪಷ್ಟವಾಗಿದೆ. ತಾನು ಯುದ್ಧಕ್ಕೆ ಹೊರಟವನು. ಶತ್ರುಪಕ್ಷದ ಕಡೆಯಿಂದ ತನ್ನ ಕಡೆಗೆ ಯಾರಾದರೂ ಬಂದರೆ ಅದರಿಂದ ಶತ್ರುಬಲ ಕೊಂಚ ಕಡಮೆಯಾಗುವುದೂ ತನ್ನ ಬಲ ಹೆಚ್ಚುವುದೂ ಸ್ಪಷ್ಟವಾಗಿಯೇ ಇದೆ. ಶ್ರೀರಾಮನ ಮನಸ್ಸಿನಲ್ಲಿ ಇಂಥ ಯೋಚನೆ ಇದ್ದಿದ್ದರೆ ಅದನ್ನು ಯಾರೂ ಅಸಂಗತವೆನ್ನಲಾರರು. ಈ ಕಾರಣದಿಂದಲೂ ಶ್ರೀರಾಮನು ವಿಭೀಷಣನಿಗೆ ಆಶ್ರಯ ಕೊಟ್ಟಿರಬಹುದು.

“ವಿಭೀಷಣ ನೀತಿ”

ಈಗಿಗೆ ಅರವತ್ತೈದು ವರ್ಷಗಳ ಹಿಂದೆ–ಬಹುಶಃ ೧೯೦೫–೬ ರಲ್ಲಿ–ವಿಭೀಷಣನ ಹೆಸರು ಇಂಡಿಯಾದ ರಾಜಕೀಯದಲ್ಲಿ ಒಂದು ಪಕ್ಷಕ್ಕೆ ಅವಹೇಳನದ ಮಾತಾಗಿತ್ತು. ಆ ಕಾಲದಲ್ಲಿ ಎರಡು ಪಕ್ಷಗಳಿದ್ದವಷ್ಟೆ? ಒಂದು ಅತಿವಾದಿಗಳ (Extremists) ಪಕ್ಷ. ಇನ್ನೊಂದು ಮಿತವಾದಿಗಳ (Moderates) ಪಕ್ಷ. ಎರಡು ಪಕ್ಷಗಳ ಉದ್ದೇಶವೂ ದೇಶ ಸ್ವಾತಂತ್ರ್ಯವೇ ಆಗಿದ್ದರೂ, ಕಾರ್ಯೋಪಾಯಗಳ ವಿಷಯದಲ್ಲಿ ಭೇದವಿತ್ತು.

ಅತಿವಾದ ಪಕ್ಷದವರು ಜನರಲ್ಲಿ ಚಳವಳಿ ಹೂಡಿ ದೊಂಬಿ ಧಾಳಿಯನ್ನೆಬ್ಬಿಸಿ ಬ್ರಿಟಿಷರು ಇಲ್ಲಿರುವುದು ಅಸಾಧ್ಯವಾಗುವಂತೆ ಮಾಡಬೇಕೆಂದರು. ಈ ಪಕ್ಷದ ಮುಖ್ಯ ನಾಯಕರು ಬಾಲಗಂಗಾಧರ ತಿಲಕರು.

ಮಿತವಾದಿಗಳು ಈ ದಾರಿ ಸರಿಯಲ್ಲವೆಂದರು. ದೊಂಬಿ ಧಾಳಿಗಳನ್ನು ಬ್ರಿಟಿಷರು ಆಗಗೊಡರು. ಅವರು ಪ್ರತಿಬಂಧಕ ಒಡ್ಡುವುದು ಮಾತ್ರವಲ್ಲದೆ ದೊಂಬಿಯನ್ನು ನೆವ ಮಾಡಿಕೊಂಡು ಜನರನ್ನು ತುಳಿದು ಹಾಕಿಯಾರು. ದೇಶದ ಸ್ಥಿತಿ ಇನ್ನೂ ಕೆಟ್ಟೀತು. ನಿಷ್ಠುರ ಮಾರ್ಗಕ್ಕೆ ಹೋಗದೆ, ಈಗ ಬ್ರಿಟಿಷರು ಒದಗಿಸಿರುವ ಅಲ್ಪಸ್ವಲ್ಪದ ಅವಕಾಶಗಳನ್ನು ಉಪಯೋಗಿಸಿಕೊಂಡು ಇನ್ನೂ ಹೊಸ ಹೊಸ ಅವಕಾಶಗಳನ್ನು ಸಂಪಾದಿಸಿಕೊಂಡು ನಮ್ಮ ಶಕ್ತಿ ಸಂಪತ್ತುಗಳನ್ನು ಬೆಳಸಿಕೊಳ್ಳೋಣ. ನಮ್ಮ ಸ್ವಂತದ ಬಲ ಬೆಳೆದಂತೆ ಬ್ರಿಟಿಷರಿಗೆ ಇಲ್ಲಿ ನಿಲ್ಲಲು ಕಾರಣವಿಲ್ಲದೆ ಹೋಗುತ್ತದೆ. ಅವರ ಹಿಡಿತ ಸಡಿಲುತ್ತದೆ. ನಾವು ಅವರನ್ನು ಹೊರಟು ಹೋಗಿರೆಂದು ಹೇಳುವುದಕ್ಕಿಂತ, ಅವರು ತಾವಾಗಿಯೇ ಹೊರಟು ಹೋಗುವಂತೆ ಮಾಡುವುದು ಮೇಲು. ಸಾಮೋಪಾಯವೇ ನಮಗೆ ಉಪಾಯ. ಇದು ಮಿತವಾದಿಗಳ ಪಕ್ಷ. ಈ ಪಕ್ಷದ ನಾಯಕರಲ್ಲೊಬ್ಬರು ಗೋಪಾಲಕೃಷ್ಣ ಗೋಖಲೆಯವರು.

ಗೋಖಲೆಯವರು ಹೀಗೆ ಸ್ನೇಹ ಮಾರ್ಗವನ್ನೂ ಸೌಮ್ಯ ನೀತಿಯನ್ನೂ ಎತ್ತಿ ಹಿಡಿದಿದ್ದ ಕಾರಣದಿಂದ ಅವರನ್ನು ಪ್ರತಿಪಕ್ಷದವರು ವಿಭೀಷಣಪಂಥಿಯೆಂದು ಕರೆದರು. ವಿಭೀಷಣನು ಸ್ವಪಕ್ಷವನ್ನು ತೊರೆದು ಶತ್ರುಪಕ್ಷದಲ್ಲಿ ಸೇರಿಕೊಂಡವನಷ್ಟೆ? ಗೋಖಲೆಯವರು ಅದೇ ರೀತಿ ಸ್ವದೇಶಾಭಿಮಾನವನ್ನು ತೊರೆದು ಸ್ವದೇಶ ವಿರೋಧಿಗಳಲ್ಲಿ ಸ್ನೇಹದಿಂದ ವರ್ತಿಸಬೇಕೆನ್ನುತ್ತಾರೆ. ಅದು ವಿಭೀಷಣನೀತಿ. ಹೀಗೆ ಅತಿವಾದಿ ಪಕ್ಷದವರ ಅವಹೇಳನೆ. ಈ ಅಪವಾದಕರ್ತರಲ್ಲಿ ತಿಲಕರು ಮುಖ್ಯರೆಂದು ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ. ರಾಜಕೀಯದಲ್ಲಿ ಪಕ್ಷ–ಪ್ರತಿಪಕ್ಷಗಳ ಉದ್ವೇಗಾವೇಶಗಳು ಎಂಥವರ ಬಾಯಿಂದಲೂ ಆಡಬಾರದ್ದನ್ನು ಆಡಿಸುವುದುಂಟು. ಅಂಥ ಮಾತನ್ನು ಹೆಚ್ಚು ಗಮನಿಸತಕ್ಕದ್ದಲ್ಲ. ಗೋಖಲೆಯವರ ನೀತಿ ವಿಭೀಷಣ ನೀತಿಯೆಂಬುದಾದರೆ, ಗೋಖಲೆಯವರು ತ್ಯಜಿಸಿದ ಪಕ್ಷ ರಾವಣಪಕ್ಷವೆನ್ನಬೇಕಾದೀತು.

ಅತಿವಾದಿಗಳು ಮಾಡಿದ ಅವಹೇಳನದಿಂದ ಗೋಖಲೆಯವರಿಗೂ ಅವರ ಸ್ನೇಹಿತರಿಗೂ ಕೊಂಚ ಬೇಸರವಾದದ್ದರ ಹೊರತು ಬೇರೆ ಯಾವ ಲಾಭವೂ ಯಾರಿಗೂ ಆಗಲ್ಲಿ.

ಅದು ಹಾಗಿರಲಿ.

ಈಗ ವಿಭೀಷಣ ನೀತಿಯ ಯುಕ್ತಾಯುಕ್ತಗಳನ್ನು ಸ್ವತಂತ್ರವಾಗಿ ವಿಚಾರ ಮಾಡೋಣ–ಸಾಧ್ಯವಿರುವ ಮಟ್ಟಿಗೆ.

ವಿಭೀಷಣ–ಭೀಷ್ಮ

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ವಿಭೀಷಣನ ಪಕ್ಕದಲ್ಲಿ ನಿಂತು ಹೋಲಿಸಿಕೊಳ್ಳಲು ಅರ್ಹನಾದ ಇನ್ನೊಬ್ಬ ಮಹಾಪುರುಷನು ಭೀಷ್ಮಾಚಾರ್ಯ.

ವಿಭೀಷಣ, ಭೀಷ್ಮ–ಶಬ್ದಾರ್ಥದಲ್ಲಿ ಎರಡೂ ಒಂದೇ. ಇಬ್ಬರನ್ನೂ ಭಗವದ್ಭಕ್ತ ಶ್ರೇಣಿಯಲ್ಲಿ ಎಣಿಸಿದ್ದಾರೆ. ಇಬ್ಬರ ಎದುರಿಗೂ ಒಂದೇ ಬಗೆಯ ಧರ್ಮಸೂಕ್ಷ್ಮದ ಪ್ರಶ್ನೆ ಎದ್ದು ಕಾಣಿಸಿತು. ಆದರೆ ಅವರು ಕೊಟ್ಟ ಉತ್ತರಗಳು ಬೇರೆ ಬೇರೆ ಬಗೆಯಾಯಿತು. ಪ್ರಶ್ನೆ ಹೀಗೆ:

(೧) ಸ್ವಾಮಿಯು ದುಷ್ಟನಾದರೆ ಸಾತ್ತ್ವಿಕ ಸೇವಕನು ಏನು ಮಾಡಬೇಕಾದದ್ದು?

(೨) ರಾಜ " ಮಂತ್ರಿ " (೩) ಪತಿ " ಪತ್ನಿ

(೪) ಪತ್ನಿ ದುಷ್ಟಳಾದರೆ ಪತಿ "

ಮೂರು ದಾರಿಗಳು ಸಾಧ್ಯ ತೋರುತ್ತವೆ:

1) ಪರಿತ್ಯಜಿಸುವುದು; ತ್ಯಜಿಸಿ ತಟಸ್ಥನಾಗಿರುವುದು.

2) ತ್ಯಜಿಸಿ ವಿರೋಧಿಸುವುದು.

3) ತ್ಯಜಿಸದೆ ಸಹಿಸಿಕೊಂಡು ನಿಯತ ಕರ್ತವ್ಯವನ್ನು ಮಾಡುವುದು.

ವಿಭೀಷಣನು ಎರಡನೆಯ ದಾರಿ ಹಿಡಿದ; ಭೀಷ್ಮನದು ಮೂರನೆಯ ದಾರಿ.

ಶಾಶ್ವತ ವಿಶ್ವಧರ್ಮ ನಿಷ್ಠೆಯೇ ದೊಡ್ಡದೆನಿಸಿತು ವಿಭೀಷಣನಿಗೆ.

ಸ್ವಾಮಿ–ಭೃತ್ಯ ಋಣವೇ ದೊಡ್ಡದಾಯಿತು ಭೀಷ್ಮದ್ರೋಣರಿಗೆ.

ಈ ಧರ್ಮತಾರತಮ್ಯನಿರ್ಣಯ ಅವರವರ ಅಂತಃಪ್ರೇರಣೆಯಿಂದ. ಮನುಗಳು “ಹೃದಯೇನಾಭ್ಯನುಜ್ಞಾತಃ” ಎಂದು ಹೇಳಿದ್ದಾರೆ. ಧರ್ಮಸೂಕ್ಷ್ಮ ಪ್ರಶ್ನೆಗಳಿಗೆ ಬಾಹ್ಯ ನಿರ್ಣಯವಿಲ್ಲ. ಅಂತರಂಗ ನಿರ್ಣಯವೇ ನಿರ್ಣಯ; “ಮನೋಜಯಂ ತು ಮಾಂಡವ್ಯಃ” ಎಂದಹಾಗೆ. ಆಳವಾಗಿ ನೋಡಿದರೆ ಸ್ವಾಮಿ–ಭೃತ್ಯ ಋಣಸೂತ್ರವೂ ಶಾಶ್ವತ ವಿಶ್ವಧರ್ಮದ ಒಂದು ಅಂಶವೇ ಅಲ್ಲವೆ? ವಿಭೀಷಣ–ಭೀಷ್ಮರಿಬ್ಬರೂ ಒಂದೇ ವಿಶ್ವಧರ್ಮವನ್ನು ಬೇರೆಬೇರೆ ಕೋನಗಳಿಂದ ನೋಡಿದರು. ವಿಭೀಷಣನು ಸಮಗ್ರದ ದೃಷ್ಟಿಯಿಂದ; ಭೀಷ್ಮರು ವ್ಯಕ್ತಿ ದೃಷ್ಟಿಯಿಂದ.

ಪ್ರಪತ್ತಿಯ ಘೋಷಣೆ

ವಿಭೀಷಣಪ್ರಕರಣವನ್ನು ಭಕ್ತಿ ಪಂಥಿಗಳು ಶರಣಾಗತಿಶಾಸ್ತ್ರವೆಂದು ಕರೆಯುವುದುಂಟು. ಭಗವಂತನ ಅಪಾರವಾದ ಶರಣಾಗತ ವಾತ್ಸಲ್ಯಕ್ಕೆ ವಿಭೀಷಣಚರಿತ್ರೆ ನಿದರ್ಶನವೆಂದು ಅವರ ಭಾವನೆ.

ಸಕೃದೇವ ಪ್ರಪನ್ನಾಯ
ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯಃ
ದದಾಮ್ಯೇತದ್ವ್ರತಂ ಮಮ ॥

ಆನಯೈನಂ ಹರಿಶ್ರೇಷ್ಠ
ದತ್ತಮಸ್ಯಾಭಯಂ ಮಯಾ ।
ವಿಭೀಷಣೋ ವಾ ಸುಗ್ರೀವ
ಯದಿ ವಾ ರಾವಣಃ ಸ್ವಯಮ್‍ ॥ ಸರ್ಗ ೧೮, ಶ್ಲೋಕ ೩೩–೩೫

ಇದು ಪ್ರಪತ್ತಿಮತದ ಜಯಘೋಷಣೆ.

ಇದರ ಮೇಲೂ ಒಂದು ಕೋಟಿಯುಂಟು. ಪ್ರಹ್ಲಾದಕಥೆ, ಗಜೇಂದ್ರಕಥೆ ಮೊದಲಾದ ಪುರಾಣ ಪ್ರಕರಣಗಳು ಶರಣಾಗತಿಯ ಮಹಿಮೆಯನ್ನು ಹೇಳುತ್ತವಲ್ಲವೆ? ಮೇಲಾಗಿ, ಯುದ್ಧ ಪ್ರವೃತ್ತನಾಗಿರುವಾತನು ಶತ್ರುಪಕ್ಷದಿಂದೊಬ್ಬನು ತನ್ನ ಪಕ್ಷಕ್ಕೆ ಬಂದರೆ ಅವನನ್ನು ಸ್ವಾಗತಿಸಿ ಪ್ರೋತ್ಸಾಹಿಸುವುದು ಸ್ವಕಾರ್ಯ ಸಾಧನೆಯ ನೀತಿಯೇ ಅಲ್ಲವೆ? ಅದರಲ್ಲಿ ಶರಣಾಗತ ರಕ್ಷಣೆಯೆಂಬ ವಿಶೇಷವೆಲ್ಲಿದೆ? ಎಲ್ಲ ಲೌಕಿಕರೂ ಅನುಸರಿಸುವ ಕಾರ್ಯೋಪಾಯವೇ ಅದಲ್ಲವೆ?

ಹೀಗೆ ಅಭಿಪ್ರಾಯವುಳ್ಳವರು ಶರಣಾಗತಿಯಲ್ಲಿ ನಂಬಿಕೆಯಿಲ್ಲದವರೆಂದಾಗಲಿ, ಶ್ರೀರಾಮನ ಶರಣಾಗತರಕ್ಷಣೆಯಲ್ಲಿ ನಂಬಿಕೆಯಿಲ್ಲದವರೆಂದಾಗಲಿ ಅನುಮಾನಿಸಲಾಗದು. ಅವರೂ ಪೂರ್ಣವಾಗಿ ರಾಮಭಕ್ತರೇ. ಆದರೆ ವಿಭೀಷಣ ಪ್ರಕರಣವು ಸುಗ್ರೀವ ಪ್ರಕರಣದಂತೆ, ಶ್ರೀರಾಮನ ನಯಕುಶಲತೆಯನ್ನೂ ಉಪಾಯಜ್ಞತೆಯನ್ನೂ ತೋರಿಸುತ್ತದೆ ಎಂಬುದು ಅವರ ಮನೋಗತ.

ಧರ್ಮಸೂಕ್ಷ್ಮ ವಿಚಾರದಲ್ಲಿ ನಿರ್ಣಯ ಹೇಗೋ ಕಾವ್ಯ ಸಂದರ್ಭದ ಆಶಯ–ನಿರ್ಧಾರವೂ ಹಾಗೆ ಬಹುಮಟ್ಟಿಗೆ ನಮ್ಮ ನಮ್ಮ ಅಂತರಂಗ ಪ್ರವೃತ್ತಿಗಳನ್ನವಲಂಬಿಸಿಕೊಂಡಿರುತ್ತದೆ.

ಕಪಿಲೋಕ

ರಾಮಾಯಣ ಪ್ರಪಂಚದೊಳಕ್ಕೆ ಕವಿಯು ಕಪಿಗಳನ್ನೇಕೆ ತಂದಿದ್ದಾನೆ? ಈ ಪ್ರಶ್ನೆಯನ್ನು ಸುಂದರಕಾಂಡದ ಮುನ್ನುಡಿಯಲ್ಲೆತ್ತಿದ್ದೇನೆ. ಆ ಪ್ರಶ್ನೆಗೆ ಸಮಾಧಾನವು ಯುದ್ಧಕಾಂಡದ ಸೇತುಬಂಧಪ್ರಕರಣದಲ್ಲಿ ದೊರೆಯುತ್ತದೆ. ಇಲ್ಲಿ ಸೇತುವೆಯಾಗಬೇಕಾಗಿದ್ದದ್ದು ಕಾಲುವೆಗಲ್ಲ, ಹೊಳೆಗಲ್ಲ, ನದಿಗಲ್ಲ; ಮಹಾಸಮುದ್ರಕ್ಕೆ. ಈ ಸೇತುವೆಗೆ ಬೇಕಾಗಿದ್ದ ಸಾಮಗ್ರಿ ಒಡೆದ ಕಲ್ಲಲ್ಲ, ಇಟ್ಟಿಗೆಯಲ್ಲ, ಮರಳೂ ಮಣ್ಣೂ ಅಲ್ಲ. ಇಲ್ಲಿ ಬೆಟ್ಟ ಗುಡ್ಡಗಳನ್ನೂ ಬಂಡೆ ಗುಂಡುಗಳನ್ನೂ ರಾಶಿರಾಶಿಯಾಗಿ ತಂದು ತುಂಬಬೇಕು. ಮತ್ತು ಬೇಗಬೇಗ ತುಂಬಬೇಕು. ಅದು ಮನುಷ್ಯರಿಂದ ಆಗುವ ಕೆಲಸವೆ? ಸಾವಿರ ಮಂದಿ ಮನುಷ್ಯರನ್ನು ತಂದಿಟ್ಟರೆ ಎಷ್ಟು ಕಾಲ ಬೇಕಾಗುತ್ತಿತ್ತು? ಆ ಮನುಷ್ಯರಿಗೆ ಅನ್ನವಸತಿಗಳ ಏರ್ಪಾಟು ಮಾಡುವವರಾರು? ಶಾಖಾಮೃಗಗಳಿಗಾದರೆ ಆ ಭೋಜನ ವಸತಿಗಳ ಚಿಂತೆಯಿಲ್ಲ. ಅವು ತಮ್ಮ ಜೀವನವನ್ನು ತಾವೇ ಹೇಗೆಹೇಗೋ ನಡೆಸಿಕೊಂಡು, ಸೇತು ಕಾರ್ಯಕ್ಕೆ ಸಿದ್ಧವಾಗಿಬರುತ್ತವೆ. ಬೆಟ್ಟ ಬೆಟ್ಟಗಳನ್ನೇ ಹೊತ್ತು ತಂದು ಸಮುದ್ರದಲ್ಲಿ ಉರುಳಿಸಿ ಬಿಡುತ್ತವೆ; ಎಲೆ ಕೊಂಬೆ ಕಲ್ಲು ಮರಳುಗಳನ್ನು ಹಾಕಿ ಗಟ್ಟಿ ಮಾಡುತ್ತವೆ. ಈ ಅವಶ್ಯಕತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ವಾಲ್ಮೀಕಿಗಳು ಕಪಿ ಲೋಕವನ್ನು ಬರ ಮಾಡಿಕೊಂಡಿದ್ದಾರೆ.

ವಿನೋದಾವಕಾಶ

ಒಂದಿಷ್ಟು ವಿನೋದಾವಕಾಶ ಕಲ್ಪನೆಯೂ ವಾಲ್ಮೀಕಿಗಳ ಉದ್ದೇಶದಲ್ಲಿದ್ದಿರಬೇಕು. ಅವರು ಋಷಿಗಳಾದರೂ ಹುಬ್ಬು ಗಂಟಿಕ್ಕಿ ಗುರುಗುರ್ರೆಂದು ಗದ್ದರಿಸುತ್ತಿದ್ದವರಲ್ಲ; ಮನಸಾರ ನಗುತ್ತಿದ್ದವರು. ಕಾವ್ಯದ ಗಂಭೀರ ಸಂದರ್ಭಗಳು ಮನಸ್ಸಿಗೆ ಉಂಟು ಮಾಡಿದ ಚಿತ್ರಕಥಾ ಸಂಕಲಿತಂ

ಮಾಣವಕಾಮೋದಯುತಮ್‍ ॥

ಹೀಗೆ ಇನ್ನೆಷ್ಟೋ ಮಂದಿ ಕಲ್ಪನಾಚತುರರು ಕುಂಭಕರ್ಣನನ್ನು ಚಿತ್ರಿಸಿದ್ದಾರೆ.

ಕುಂಭಕರ್ಣನ ಧರ್ಮಪ್ರಜ್ಞೆ

ಆಕಾರಚರ್ಯೆಗಳಲ್ಲಿ ಕುಂಭಕರ್ಣನು ಇಷ್ಟು ವಿಪರೀತನಾಗಿದ್ದರೂ ವಿವೇಕಶಕ್ತಿಯಲ್ಲಿ ಅವನು ಸರ್ವಶೂನ್ಯನಾಗಿರಲಿಲ್ಲ. ಅವನು ಮೊದಲು ಯುದ್ಧೋತ್ಸಾಹಿಯಾಗಿರಲಿಲ್ಲ. ರಾವಣನು ವಿಚಾರ ಮಾಡದೆ ದುಡುಕಿದನೆಂದೇ ಅವನ ಅಭಿಪ್ರಾಯ. “ಅಹಿತಂ ಚ ಹಿತಾಕಾರಂ” –ಉಪದೇಶಿಸುವವರ ಮಾತನ್ನು ರಾವಣನು ಗೌರವಿಸಿದನೆಂದು ಆಕ್ಷೇಪಣೆ ಮಾಡಿದ. ಆದರೆ ರಾವಣನು ಒಪ್ಪಿಯಾನೆ? ಇಲ್ಲ, ಸರ್ವಥಾ ಇಲ್ಲ. ಮತ್ತಷ್ಟು ರೋಷಾವಿಷ್ಟನಾದ. ಅದರ ಅರ್ಥವನ್ನು ಕುಂಭಕರ್ಣನು ಗ್ರಹಿಸಿದ. ಋಷಿಶಾಪ ಸುಳ್ಳಾಗದು; ಪಾಪದ ಫಲವನ್ನು ತಪ್ಪಿಸಿಕೊಳ್ಳಲಾಗದು; ಅಣ್ಣನು ಆಪತ್ತಿಗೆ ಸಿಕ್ಕಿದ್ದಾನೆ, ತನ್ನಿಂದಾದಷ್ಟು ಸಹಾಯವನ್ನು ತಾನು ಮಾಡಿದರಾಯಿತು–ಎಂದು ಚಿಂತಿಸಿ ಗತ್ಯಂತರ ಕಾಣದ ಹತಾಶೆಯಿಂದ (desperate) ಯುದ್ಧಕ್ಕೆ ನಿಂತ. ತಕ್ಕದ್ದು ಆಯಿತು. ಅದರಲ್ಲೊಂದು ಸುಯೋಗ: ರಾಮಬಾಣದಿಂದ ಸಾವು; ಸಣ್ಣದ್ದರಿಂದ ಅಲ್ಲ.

ತಸ್ಮಿನ್‍ ಹತೇ ಬ್ರಾಹ್ಮಣದೇವಶತ್ರೌ
ಗುಹಾಬಲೇ ಸಂಯತಿ ಕುಂಭಕರ್ಣೇ ।
ಚಚಾಲ ಭೂರ್ಭೂಮಿಧರಾಶ್ಚ ಸರ್ವೇ
ಹರ್ಷಾಚ್ಚ ದೇವಾಸ್ತುಮುಲಂ ಪ್ರಣೇದುಃ ॥ ಸರ್ಗ ೬೭, ಶ್ಲೋಕ ೧೮೬

ಶ್ರೀ ಡಿ. ಸಿ. ಅನಂತರಾಮಯ್ಯನವರು ರಾಮಾಯಣ ಪ್ರಕಟನೆಯ ಸಂಕಲ್ಪವನ್ನು ಮನಸ್ಸಿನಲ್ಲಿ ಮಾಡಿಕೊಂಡಾಗ ಅದು ಸಾಹಸವೆಂದು ಬಹುಮಂದಿಗೆ ತೋರಿತು. ಭಗವಂತನ ಕೃಪೆಯಿಂದ ಒಳ್ಳೊಳ್ಳೆಯ ಸ್ನೇಹಿತರು ಅವರೊಡನೆ ಏಕೀಭವಿಸಿ ಸಹಕಾರ ಕೊಡುವವರಾದರು. ಶ್ರೀ ಸೀತಾರಾಮರ ಕಟಾಕ್ಷದಿಂದ ಆ ಕೆಲಸ ಈಗ ಮುಪ್ಪಾಗಪಾಲು ನಡೆದಂತಾಯಿತು. ಈಗ ಮಿಕ್ಕಿರುವುದು ಯುದ್ಧಕಾಂಡದ ದ್ವಿತೀಯ ಭಾಗ ಮತ್ತು ಉತ್ತರಕಾಂಡ. ಈಶ್ವರಾನುಗ್ರಹದಿಂದ ಈ ಭಾಗವೂ ತೃಪ್ತಿಕರವಾಗಿ ಮುಗಿದು ಪೂರ್ಣಗ್ರಂಥ ಮಹಾಜನರ ಕೈಸೇರಲಾದೀತೆಂದು ನಾನು ನಿರೀಕ್ಷಿಸಿಕೊಂಡಿದ್ದೇನೆ.

ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾರವರ ಪಾಂಡಿತ್ಯವೂ ರಸಸೂಕ್ಷ್ಮಜ್ಞತೆಯೂ ಭಾಷಾಂತರ ಲೇಖನದಲ್ಲಿ ಪ್ರತಿಬಿಂಬಿತವಾಗಿವೆ. ಅವರು ಈ ಕಾರ್ಯದಲ್ಲಿ ಎಂಥ ಶ್ರದ್ಧೆ, ಎಂಥ ಉತ್ಸಾಹವನ್ನು ತೋರಿಸಿದ್ದಾರೆ, ಮತ್ತು ಎಷ್ಟು ಶ್ರಮಪಟ್ಟಿದ್ದಾರೆ, ನಾನಾ ವ್ಯಾಖ್ಯಾನಗಳನ್ನು ಪರಿಶೀಲಿಸಿ ಅರ್ಥವಿವೇಚನೆ ಮಾಡಿದ್ದಾರೆ–ಎಂಬುದನ್ನು ನಾನು ಅಷ್ಟಿಷ್ಟು ಕಂಡುಕೊಂಡಿದ್ದೇನೆ. ಅವರು ಮಾಡಿರುವ ಸಾಹಿತ್ಯ ಸೇವೆಗಾಗಿ ಕನ್ನಡ ಮಹಾಜನರು ಕೃತಜ್ಞರಾಗಿರುವರೆಂದು ನಂಬಿದ್ದೇನೆ.

ಗ್ರಂಥ ಪ್ರಕಟನ ಸಮಿತಿಗೂ ಭಾಷಾಂತರಕರ್ತರಿಗೂ ವಾಚಕ ಮಹಾಶಯರಿಗೂ ಶ್ರೀ ಸೀತಾರಾಮರ ಕರುಣೆ ಸರ್ವದಾ ದೊರೆತಿರಲಿ ಎಂದು ಹಾರೈಸುತ್ತೇನೆ. ಇತಿ ಶಿವಂ.

ಇಂತು ಸಜ್ಜನವಿಧೇಯ (೧೯೬೯)

Monday, 15 January 2024

ಭಾಗ 9 - ಸುಂದರಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


*ಭಾಗ 9 - ಸುಂದರಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)*

ಶ್ರೀರಾಮಾಯಣಮೇರುರ್ಹಿ ಧರ್ಮರತ್ನೌಘಸುಂದರಃ ।
ಸುಂದರೇ ಸುಂದರಸ್ಸೊಽಯಮಂಜನಾನಂದನೋತ್ಸವಃ ॥

ಸಂದರ್ಭ ಸೌಂದರ್ಯ

ಸುಂದರಕಾಂಡವು ಕಥಾಸಂದರ್ಭದಿಂದ ಸುಂದರ.

ಪರಮಸುಂದರರಾದ ರಾಮಸೀತೆಯರ ವಿಯೋಗದುಃಖದಲ್ಲಿದ್ದಾಗ ಪರಸ್ಪರ ಪ್ರಿಯವಾರ್ತಾಸಂಧಾನದಿಂದ ಅವರಿಗೆ ಮಾನಸಿಕ ಸಮಾಗಮವಾದದ್ದು ಇಲ್ಲಿಯ ಕಥೆ. ಆ ಸುಂದರಸಂಧಾನಕ್ಕೆ ಸಾಧನಭೂತನಾದವನು ಆಂಜನೇಯಸ್ವಾಮಿ. ಆತನ ಸೌಂದರ್ಯದೌತ್ಯವೂ ದೌತ್ಯಸೌಂದರ್ಯವೂ ಇಲ್ಲಿಯ ವಸ್ತು.

ಸೌಂದರ್ಯವು ಒಂದು ರುಚಿಶಕ್ತಿ. ಒಂದಾನೊಂದು ವಸ್ತುವನ್ನು ಅಥವಾ ಸಂಗತಿಯನ್ನು ನಾವು ಕಂಡಾಗ ಅಥವಾ ನೆನಸಿಕೊಂಡಾಗ ಅದರ ಯಾವ ಸ್ವಾರಸ್ಯವು ನಮ್ಮ ಮನಸ್ಸನ್ನು ಮೃದುಮಾಡಿ ತನ್ನ ಕಡೆಗೆ ಸೆಳೆದುಕೊಂಡು ಸ್ವಾಧೀನಮಾಡಿಕೊಳ್ಳುತ್ತದೆಯೋ–ಯಾವ ರಸಕಾಂತಿಯ ಕಾರಣದಿಂದ ನಮ್ಮ ಮನಸ್ಸು ಆ ಪದಾರ್ಥದಿಂದ ಹಿಂತಿರುಗದೆ ಅದರಲ್ಲಿ ತಾನು ಸೇರಿಕೊಳ್ಳಲಿಚ್ಛಿಸುತ್ತದೆಯೋ–ಆ ರುಚಿಗುಣವೇ ಅದರ ಸೌಂದರ್ಯ.

ನಾನಾ ಸೌಂದರ್ಯಗಳ ಸಮ್ಮೇಳನಸ್ಥಾನ ಸುಂದರಕಾಂಡ.

ರಾಮಾಯಣದಲ್ಲಿ ಗ್ರಂಥಿಸ್ಥಾನಗಳು ಮೂರು.

1. ಮೊದಲನೆಯದು ಅಯೋಧ್ಯಾಕಾಂಡದ್ದು. ರಾಮಾವತಾರ ಕಾಲದಿಂದ ಸಹಜವಾಗಿ ಸರಳವಾಗಿ ಸಾಗಿಬಂದ ಕಥಾತಂತುವಿಗೆ ಅಲ್ಲಿ ಕೈಕೇಯಿ ಕೈಹಾಕಿ ಗಂಟಿಕ್ಕಿ, ಅದು ನಿರೀಕ್ಷಿತವಾಗಿದ್ದಂತೆ ಸಾಗಗೊಡದೆ ಅದನ್ನು ಬೇರೆ ಕಡೆಗೆ ತಿರುಗಿಸುತ್ತಾಳೆ. ಈ ಘಟನೆ ಸುಂದರವಲ್ಲ; ಅಸುಂದರ, ವಿಷಾದಕರ.

2.ಎರಡನೆಯ ಗ್ರಂಥಿ ಅರಣ್ಯಕಾಂಡದ್ದು. ಇಲ್ಲಿ ಕಥಾತಂತುವು ನೈಜಕ್ರಮದಲ್ಲಿ ಸಾಗದಂತೆ ಅಡ್ಡಿಹಾಕಿ ಅದನ್ನು ಬೇರೆಕಡೆಗೆ ತಿರುಗಿಸಿದವರು ರಾವಣಾಸುರ. ಅವನು ಹಾಗೆ ಮಾಡದೆಹೋಗಿದ್ದಿದ್ದರೆ ಸೀತಾರಾಮರು ಹದಿನಾಲ್ಕು ವರ್ಷಗಳ ವನವಾಸವನ್ನು ನಿರೀಕ್ಷಿಸಿಕೊಂಡಿದ್ದಂತೆ ನಿರುಪಾಧಿಕವಾಗಿ ಮುಗಿಸಿ ಅಯೋದ್ಯೆಗೆ ಹಿಂತಿರುಗಬಹುದಾಗಿತ್ತು. ಅದು ತಪ್ಪಿಹೋಗುವಂತೆ ಆದದ್ದು ಸುಂದರವಲ್ಲ; ಅಸುಂದರ, ಅಮಂಗಲ.

3. ಮೂರನೆಯ ಗ್ರಂಥಿ ಸುಂದರಕಾಂಡದ್ದು. ಅನ್ಯೋನ್ಯವಿರಹಿತರಾಗಿ, ಅನ್ಯೋನ್ಯ ಚಿಂತಾಕ್ರಾಂತರಾಗಿ, ಅನ್ಯೋನ್ಯ ಅಜ್ಞಾತವಾಸಿಗಳಾಗಿದ್ದ ಸೀತಾರಾಮರಿಗೆ ಅನ್ಯೋನ್ಯ ಪ್ರಿಯವಾರ್ತೆಯಿಂದ ಮಾನಸಿಕ ಸಮಾಗಮವನ್ನುಂಟುಮಾಡಿ ಸಾಕ್ಷಾತ್ಸಮಾಗಮಕ್ಕೆ ದಾರಿತೋರಿದ ಮಹಾನುಭಾವ ಹನುಮಂತ. ಈ ಸಂಘಟನೆ ಪರಮಸುಂದರವಾದದ್ದು.

ಆಂಜನೇಯನಿಗಿದ್ದ ಕೆಲಸ ಸುಲಭವಾದದ್ದೆ? ಅದು ಅಸಾಧ್ಯವೆನಿಸುವ ಮಟ್ಟಿಗೆ ಕಷ್ಟವಾಗಿತ್ತು. ತನ್ನ ಕಾರ್ಯಕ್ಕೆ ಬಂದ ವಿಘ್ನಗಳಿಂದ ಆಂಜನೇಯನು ಎದೆಗುಂದಿ ಹಿಂತಿರುಗಿದ್ದಿದ್ದರೆ ರಾಮಲಕ್ಷ್ಮಣರ ಶೌರ್ಯಪ್ರತಾಪಗಳು ಸಾರ್ಥಕ ಪಡಲು ಅವಕಾಶ ಎಲ್ಲಿರುತ್ತಿತ್ತು? ಆಂಜನೇಯಮೂರ್ತಿಯ ಸ್ಥೈರ್ಯವಿಕ್ರಮಗಳಿಂದ ರಾಮಾವತಾರ ಕಾರ್ಯವು ಸಂಪೂರ್ಣವಾಗುವುದಾಯಿತು. ಲಂಕಾಪಟ್ಟಣದ ಕೋಟೆಯನ್ನು ಮೊದಲು ಭೇದಿಸಿದವನು ಹನುಮಂತ. ಯುದ್ಧಕಾಂಡದ ವಿಜಯಕ್ಕೆ ದಾರಿತೋರಿದ್ದು ಸುಂದರ ಕಾಂಡದಲ್ಲಿಯ ಸೌಂದರ್ಯ.

ಇದನ್ನು ಹನುಮತ್ಕಾಂಡವೆಂದೇ ಕರೆಯಬಹುದಾಗಿತ್ತಲ್ಲ!–ಎಂದರೆ ಅಲ್ಲ; ಅದಾಗಲಾರದು. ಏಕೆಂದರೆ ಅದು ಹನುಮಂತನ ಸ್ವಭಾವಕ್ಕೆ ಒಪ್ಪದು. ಆತ ತನ್ನ ಸ್ಥಾನ ಯಾವುದೆಂಬುದನ್ನು ತಾನೇ ಗೊತ್ತು ಮಾಡಿಕೊಂಡಿದ್ದವನು. ತನ್ನ ಸ್ವಾಮಿಯೊಡನೆ ತಾನು ಸಮಾನಸ್ಕಂಧನಾಗಿ ಕುಳ್ಳಿರಲು ಸಮ್ಮತಿಸಿಯಾನೆ? ಸ್ವಾಮಿಯ ಉನ್ನತಿಯ ಅಂಗೀಕಾರವೂ ತನ್ನ ನೈಚ್ಯದ ಅಂಗೀಕಾರವೂ ಆಂಜನೇಯನ ಅಂತರಂಗದ ಸೌಂದರ್ಯದ ನೈಜಾಂಶಗಳು. ಸ್ವಾಮಿಯ ಸ್ವಾಮಿತ್ವದ ಅಂಗೀಕಾರವೇ ದಾಸನಿಗೆ ದಾಸ್ಯದಿಂದ ಉದ್ದಾರಸಾಧನ.

ಒಂದು ಕಥೆಯುಂಟು. ಒಬ್ಬಾನೊಬ್ಬ ಮನುಷ್ಯ ಬಹುಕಾಲ ಹೊಟ್ಟೆನೋವಿನಿಂದ ನರಳುತ್ತಿದ್ದ. ಅವನಿಗೆ ಒಂದು ದಿನ ಒಬ್ಬ ವೈದ್ಯ ಕೊಟ್ಟ ಔಷಧದ ಪ್ರಭಾವದಿಂದ ಜಠರಶುದ್ಧಿಯಾಗಿ ನೋವಿಳಿಯಿತು. ಆಗ ಅವನು ಕೃತಜ್ಞತೆಯಿಂದ “ಉಸ್ಸಪ್ಪ! ರಾಮ ರಾಮ–ರಾಮ!” ಎಂದು ದೇವರನ್ನು ನೆನೆದ ಕೂಡಲೆ “ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್‍” –ಆಂಜನೇಯ ಅಲ್ಲಿ ಕಾಣಿಸಿಕೊಂಡು, ಆ ಮನುಷ್ಯನ ಕೆನ್ನೆಗೆ ಕೈ ಅಪ್ಪಳಿಸಿದ. ಆ ಮನುಷ್ಯನಿಗೆ ನೋವಾಗಲಿಲ್ಲ. ಹನುಮಂತನು ಆಶ್ಚರ್ಯಗೊಂಡು ಸಂದರ್ಭವೇನಿರಬಹುದೆಂದು ತಿಳಿಯಲು ರಾಮಸನ್ನಿಧಾನಕ್ಕೆ ಹೋದ. ಅಲ್ಲಿ ಸ್ವಾಮಿ ತನ್ನ ಕೆನ್ನೆಯ ಮೇಲೆ ಕೈಯಿಟ್ಟುಕೊಂಡು ಕುಳಿತಿದ್ದ.

ಹನುಮಂತ: ನನ್ನ ಸ್ವಾಮಿಗೆ ಏನಾಯಿತು? ಕೆನ್ನೆಯ ಮೇಲೆ ಗಾಯವೆ? ಹುಣ್ಣೆ?

ರಾಮ: ನೀನು ಕೊಟ್ಟ ಪೆಟ್ಟು.

ಹನುಮಂತ: ನಾನು ಸ್ವಾಮಿಯನ್ನು ಹೊಡೆದೆನೆ? ಅಂಥ ಪಾಪಿಯೆ?

ರಾಮ: ಈಗ ನೀನು ನನ್ನ ಹೆಸರು ನೆನೆದವನನ್ನು ಹೊಡೆಯಲಿಲ್ಲವೆ?

ಹನುಮಂತ: ಅಯ್ಯೋ ಅವನು ಅಶುದ್ಧ ಸ್ಥಳದಲ್ಲಿದ್ದಾಗ ನನ್ನ ಸ್ವಾಮಿಯ ಪವಿತ್ರನಾಮವನ್ನು ಉಚ್ಚರಿಸಬಹುದೆ?

ರಾಮ: ಆ ಹೆಸರು ಪವಿತ್ರವಾಗಿದ್ದರೆ ಅದು ಎಲ್ಲ ಅಶುದ್ಧಿಗಳನ್ನೂ ಶುದ್ಧಪಡಿಸಲಾರದೆ?

ಹನುಮಂತ: ಅಯ್ಯೋ ನಾನು ಕಪಿಯಲ್ಲವೆ? ಕಪಿಬುದ್ಧಿ ಆ ಕ್ಷಣ ಪ್ರಬಲಿಸಿತು.

ರಾಮನು ನಕ್ಕನಂತೆ. ಹನುಮಂತನು ಅದರಲ್ಲಿ ಸೇರಿಕೊಂಡನಂತೆ.

ಇದು ಹನುಮಂತನ ಭಕ್ತಿ ಎಷ್ಟು ಆಳವಾದದ್ದು, ಎಷ್ಟು ಗಾಢವಾದದ್ದು ಎಂದು ತೋರಿಸುತ್ತದೆ. ಇಂಥವನು, ಸುಂದರಕಾಂಡವನ್ನು ವಾಲ್ಮೀಕಿಗಳು ಹನುಮತ್ಕಾಂಡವೆಂದು ಕರೆದಿದ್ದರೆ ಅವರನ್ನು ಸುಮ್ಮನೆ ಬಿಡುತ್ತಿದ್ದನೆ? ಅದನ್ನು ಬಲ್ಲ ಜಾಗರೂಕರು ವಾಲ್ಮೀಕಿಮಹರ್ಷಿಗಳು. ಕಾವ್ಯದ ಈ ಭಾಗವನ್ನು ನಾಯಕಾಂಕಿತ ಮಾಡುವುದಕ್ಕಿಂತ ಸಂದರ್ಭಾಂಕಿತ ಮಾಡುವುದು ಲೇಸೆಂದು ಅವರಿಗನ್ನಿಸಿರಬೇಕು.

ವ್ಯಕ್ತಿ ಸೌಂದರ್ಯ

ಆದರೆ ಆಂಜನೇಯ ವ್ಯಕ್ತಿಸೌಂದರ್ಯವು ವಾಲ್ಮೀಕಿಗಳ ದೃಷ್ಟಿಯಲ್ಲಿರಲೇ ಇಲ್ಲವೆಂದು ನಾವು ವಾದಿಸಬೇಕಾದದ್ದಿಲ್ಲ. ವ್ಯಕ್ತಿಯು ಅವರ ಗಣನೆಯಲ್ಲಿ ಮುಖ್ಯವಾಗಲ್ಲದಿದ್ದರೂ ಗೌಣವಾಗಿ ಇದ್ದಿರಬಹುದು.

ಸೌಂದರ್ಯವು ದ್ವಿವಿಧವಷ್ಟೆ? ಬಹಿರಂಗದ್ದೊಂದು ಅಂತರಂಗದ್ದೊಂದು. ಆಂಜನೇಯನ ಬಹಿರಾಕಾರದಲ್ಲಿ ಅದು ಇರಲಿಲ್ಲವೆನ್ನಲಾಗದು.

ಕಾಂಚನಾದ್ರಿಕಮನೀಯವಿಗ್ರಹಮ್‍ ॥

–ಎಂದು ಆತನನ್ನು ವರ್ಣಿಸಿದ್ದಾರೆ. ಆತನು ಕಾಮರೂಪಿ; ತನ್ನಿಚ್ಛೆಯಂತೆ ಅಣುವಾಗಬಲ್ಲವನು, ಬೃಹತ್ತಾಗಬಲ್ಲವನು; ಸೌಮ್ಯತಾಳಬಲ್ಲವನು, ಘೋರತಾಳಬಲ್ಲವನು. ಅವನಿಗೆ ಸುಂದರಾಕಾರವು ದುರ್ಲಭವಾಗಿರಲಿಲ್ಲ.

ಆದರೆ “ಪುಂಸಾಂ ಮೋಹನರೂಪಾಯ” ಎನ್ನಿಸಿಕೊಂಡ ಶ್ರೀರಾಮನ ಪಕ್ಕದಲ್ಲಿ ಹನುಮಂತನ ರೂಪಾತಿಶಯದ ಪ್ರಶಂಸೆ ಯುಕ್ತವೆನಿಸದು.

ಹನುಮಂತನ ಬಲಪರಾಕ್ರಮಗಳ ವಿಷಯದಲ್ಲಿಯೂ ಪ್ರಶಂಸೆ ನ್ಯಾಯವಾದದ್ದೇ.

ಮನೋಜವಂ ಮಾರುತತುಲ್ಯವೇಗಮ್‍ ॥

ಈ ವೀರಸಂಪತ್ತು ಮಹತ್ತರವೇ ಆದರೂ ಅದಕ್ಕಿಂತ ಪ್ರಶಂಸನೀಯವಾದದ್ದು ಆಂಜನೇಯನ ಅಂತರಂಗಸಂಪತ್ತು:

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್‍ ॥

ಜಿತೇಂದ್ರಿಯತ್ವವೇ ಆತ್ಮಸಂಯಮ. ಆತ್ಮಸಂಯಮವೆಂದರೆ ತನ್ನನ್ನು ತಾನು ಹತೋಟಿಯಲ್ಲಿರಿಸಿಕೊಂಡಿರುವುದು; ತನ್ನ ಮನಸ್ಸನ್ನು ಸ್ವೇಚ್ಛೆಗೆ ಹೋಗದಂತೆ ಹದ್ದಿನಲ್ಲಿಡುವುದು. ಈ ಗುಣವು ಮಾರುತಿಯಲ್ಲಿ ಎರಡು ರೂಪಗಳಲ್ಲಿ ಫಲಿಸಿತು:

1. ಕರ್ತವ್ಯೈಕನಿಷ್ಠೆ;
2. ಯುಕ್ತಾಯುಕ್ತವಿವೇಕಕ್ಕೆ ಅವಶ್ಯವಾದ ಸಮಚಿತ್ತತೆ.

ಯಾರು ಇಂದ್ರಿಯಪರವಶನೋ ಅವನಿಗೆ ಚಿತ್ತೈಕಾಗ್ರತೆ ಸಾಧ್ಯವಾಗದು, ವಿಮರ್ಶನ ವಿಶದತೆಯಿಂದಲೂ ಸಾಧ್ಯವಾಗದು. ಈ ಎರಡೂ ಆಂಜನೇಯನ ಅಂತರಂಗಸಂಪತ್ತಿನ ಮುಖ್ಯಾಂಶಗಳು. ಇವೆರಡರ ಜೊತೆಗೆ ಸೇರಿದ್ದ ಮತ್ತೊಂದು ಮಹಾಗುಣವು ಔಚಿತ್ಯ ಪರಿಜ್ಞಾನ. ಇದು ಸಂದರ್ಭದ ಆಳವಾದ ವಿಮರ್ಶನೆಯಿಲ್ಲದೆ ಬರತಕ್ಕದ್ದಲ್ಲ. ಈ ಔಚಿತ್ಯ ವಿವೇಕವು ಆಂಜನೇಯಮೂರ್ತಿಯ ವಾಕ್ಪ್ರಕಾರದಲ್ಲಿಯೂ ಆಕಾರಭಂಗಿಯಲ್ಲಿಯೂ ಎಲ್ಲೆಡೆಯೂ ಎದ್ದು ಕಾಣುತ್ತದೆ. ಇದು ಭಾವಸೌಂದರ್ಯ.

ಅಂತಸ್ಸೌಂದರ್ಯ ಬಹಿಸ್ಸೌಂದರ್ಯಗಳು

ಸೌಂದರ್ಯಭೂಯಿಷ್ಠವಾದ ತನ್ನ ಕಾವ್ಯಪ್ರಪಂಚದಲ್ಲಿ ವಾಲ್ಮೀಕಿಯು ಸೌಂದರ್ಯದೌತ್ಯಕ್ಕಾಗಿ ಮನುಷ್ಯನನ್ನು ಬಿಟ್ಟು ಕಪಿಯನ್ನಾರಿಸಿಕೊಂಡದ್ದೇಕೆ? ಆತನಿಗೆ ಮನುಷ್ಯ ಜಾತಿಯಲ್ಲಿ ಅಷ್ಟು ಅಸಹನೆಯೆ? ಇದು ಸೋಜಿಗದ ಪ್ರಶ್ನೆ.

ಈಗ ಕಥಾಸಂದರ್ಭವನ್ನು ಜ್ಞಾಪಕಕ್ಕೆ ತಂದುಕೊಳ್ಳೋಣ.

ಇದು ಸೀತಾನ್ವೇಷಣದ ಪ್ರಕರಣ. ಆ ಅನ್ವೇಷಣೆ ನಾಲ್ಕು ದಿಕ್ಕುಗಳಲ್ಲಿಯೂ ನಡೆಯಬೇಕಾಗಿತ್ತು. ದಕ್ಷಿಣ ಪ್ರಾಂತದಲ್ಲಿ ಅನ್ವೇಷಣ ಮಾಡುವವರು ಸಮುದ್ರವನ್ನು ದಾಟಬೇಕಾದದ್ದು ಅನಿವಾರ್ಯವಾಗಿತ್ತು. ಹೀಗೆ ಅವಶ್ಯಕರ್ತವ್ಯವಾದ ಸಮುದ್ರಲಂಘನ ಕಾರ್ಯಕ್ಕೆ ಅರ್ಹವಾದ ಪ್ರಾಣಿ ಯಾವುದು? ಮನುಷ್ಯನಂತೂ ಅಲ್ಲ.

ಶ್ರೀರಾಮನು ಮಹಾವಿಷ್ಣುವಲ್ಲವೆ? ಆತನು ಆಂಜನೇಯನಿಗಿಂತ ಹೆಚ್ಚು ಪರಾಕ್ರಮಿಯಲ್ಲವೆ? ಆತನು ತಾನೇ ಸಾಗರೋಲ್ಲಂಘನ ಮಾಡಲು ಆಗುತ್ತಿರಲಿಲ್ಲವೆ?

ಇಂಥ ಪ್ರಶ್ನೆಗಳು ಸಂಪೂರ್ಣವಾಗಿ ಅಸಂಗತಗಳು. ಮಹಾವಿಷ್ಣುವು ರಾವಣಾಸುರನು ಹುಟ್ಟದಂತೆಯೇ ಮಾಡಬಹುದಾಗಿತ್ತು. ಸೀತೆ ಎಲ್ಲಿದ್ದಾಳೆಂದು ಆ ಸರ್ವಜ್ಞನು ಯಾವ ಅನ್ವೇಷಣೆಯೂ ಇಲ್ಲದೆಯೇ ಕಂಡುಕೊಳ್ಳಬಹುದಾಗಿತ್ತು. ಇಂತ ಬಹುದುಬಾರದುಗಳು ಇಲ್ಲಿ ಯುಕ್ತವಾಗಲಾರವು. ಇಲ್ಲಿಯದು ಒಂದು ಮಾನವಕಥಾಪ್ರಸಂಗ. ದೈವಿಕವನ್ನು ಕೂಡಿದಮಟ್ಟಿಗೂ ದೂರವಿಟ್ಟು ಮಾನವ ಸ್ವಭಾವವನ್ನು ಹೊರಕ್ಕೆ ತರಬೇಕೆಂಬುದು ಕವಿಯ ಆಶಯ. ಮಾನುಷ್ಯವೇ ಎಲ್ಲಿಯಾದರೂ ಕಾವ್ಯವಸ್ತು. ಕಾವ್ಯದಲ್ಲಿ ಮಾನುಷವು ಮುಖ್ಯ, ದೈವವು ಪ್ರಾಸಂಗಿಕ.

ಪ್ರಕೃತದಲ್ಲಿ ಮನುಷ್ಯನನ್ನು ಬಿಟ್ಟ ಮೇಲೆ ಸಮುದ್ರವನ್ನು ದಾಟಬಲ್ಲವು ಸಿಂಹ, ಗಜ, ವ್ಯಾಘ್ರ ಮೊದಲಾದ ಮೃಗಪ್ರಾಣಿಗಳಾಗಲಿ ಸರ್ಪ ಮೊದಲಾದ ಸರೀಸೃಪಗಳಾಗಲಿ ಅಲ್ಲ. ಶುಕಪಿಕಾದಿ ಪಕ್ಷಿಗಳೂ ಮಶಕಕೀಟಗಳೂ ಹಾರಬಲ್ಲವಾದರೂ ಅವುಗಳ ಸಂಚಾರ ಪ್ರದೇಶವು ಬಹು ಮಿತವಾದದ್ದು. ಮಹಾಸಮುದ್ರವನ್ನು ಹಾರುವ ಶಕ್ತಿ ಅವಕ್ಕೆ ಇಲ್ಲ. ಹೀಗೆ ಮನುಷ್ಯನಿಗೆ ತಿಳಿದಿರುವ ಪ್ರಾಣಿ ವರ್ಗದಲ್ಲಿ ಹಾರುವ ಸಾಮರ್ಥ್ಯಕ್ಕೇ ಪ್ರಸಿದ್ಧವಾದುದು ವಾನರವೊಂದೇ. ಆದದ್ದರಿಂದಲೇ ಅದಕ್ಕೆ ಪ್ಲವಗ, ಪ್ಲವಂಗ, ಪ್ಲವಂಗಮ ಇತ್ಯಾದಿ ಲಂಘನಸಾಮರ್ಥ್ಯಸೂಚಕಗಳಾದ ಹೆಸರುಗಳು. ಈ ಕಾರಣದಿಂದ ವಾಲ್ಮೀಕಿಗಳು ಸೃಷ್ಟಿಯಲ್ಲೆಲ್ಲ ವಾನರಜಾತಿಯನ್ನು ತಮ್ಮ ಸಂದರ್ಭಕ್ಕಾಗಿ ಆರಿಸಿಕೊಂಡಿರಬೇಕು.

ಹೀಗೆ ಕಥೆಗೆ ಕಪಿಪ್ರಸ್ತಾವವು ನಿರ್ಬಂಧವಾಗಿ ಒದಗಿಬಂದ ಬಳಿಕ ಅದನ್ನು ಒಂದು ಸುಂದರ ಪ್ರಕರಣಕ್ಕೆ ಜೋಡಿಸುವುದರಲ್ಲಿ ವಾಲ್ಮೀಕಿಗಳಿಗೆ ಅನೌಚಿತ್ಯದ ಶಂಕೆ ತೋರಿದ್ದಿರಬಹುದೆ? ಸಾಮಾನ್ಯಜನಕ್ಕೆ ಅಂಥ ಶಂಕೆ ತೋರುತ್ತದೆ. ಸೊಗಸಾದ ಔತಣದ ಊಟ ಬಡಿಸಲಿಕ್ಕೆ ಸೊಟ್ಟುಸೊಟ್ಟೂ ಕೊಳಕುಕೊಳಕೂ ಆದ ಪರಿಚಾರಕನೆ? ಪ್ರಣಯಪತ್ರವನ್ನು ಬರೆಯುವುದಕ್ಕೆ ಒರಟಾದ ಕರಡು ಕಾಗದವೆ? ನಳದಮಯಂತಿಯರಿಗೆ ಪರಸ್ಪರ ವಾರ್ತಾವಾಹಿಗಳು ಕೆಟ್ಟ ಕುರೂಪಿಗಳಲ್ಲ; ಸುಂದರವಾದ ಹಂಸೆಗಳು. ಕಪಿಯನ್ನು ನೋಡಿ ಸೀತಾದೇವಿ ಭಯಭ್ರಾಂತಳಾದಾಳೆಂದು ಶ್ರೀರಾಮನು ಶಂಕೆಪಡುವುದು ಅಸಹಜವಲ್ಲ. ಆಕೆ ಭಯಪಟ್ಟಳೆಂದು ರಾಮಾಯಣದಲ್ಲಿಯೇ ಇದೆ. ಹೀಗೆ ವಾನರಾಕಾರದ ಅನುಚಿತತೆಯು ವಾಲ್ಮೀಕಿಗಳ ಮನಸ್ಸಿಗೆ ತೋರಿರಬೇಕೆಂದು ನಾವು ಭಾವಿಸಿದರೂ ಆ ಶಂಕೆಯನ್ನು ವಾಲ್ಮೀಕಿಗಳು ಬದಿಗಿರಿಸುವಂತೆ ಮಾಡುವ ಇನ್ನೊಂದು ಆಲೋಚನೆಯೂ ಅವರ ಮನಸ್ಸಿನಲ್ಲಿ ಇದ್ದಿರಬೇಕೆಂದು ನಾವು ಭಾವಿಸಿಕೊಳ್ಳಬೇಕಾಗುತ್ತದೆ. ಆ ಆಲೋಚನೆಯ ಮುಖ್ಯಾಂಶಗಳು ಎರಡು:

ನರಜಾತಿಯ ಯಾವ ಗುಣಗಳನ್ನು ಉತ್ಕೃಷ್ಟವೆಂದು ಎಣಿಸಿಕೊಂಡಿದೆಯೋ ಆ ಗುಣಗಳು ವಾನರಜಾತಿಯಲ್ಲಿ ಅಸಂಭವವಲ್ಲ–ಎಂಬುದು ವಾಲ್ಮೀಕಿಗಳ ಮೊದಲನೆಯ ಆಲೋಚನೆ.

ರೂಪ ಉತ್ಕೃಷ್ಟವಲ್ಲದಿದ್ದರೂ ಗುಣ ಉತ್ಕೃಷ್ಟವಾಗಿರುವಲ್ಲಿ ನಾವು ಆ ಗುಣವನ್ನು ನೋಡಿದಷ್ಟೂ ಆ ಕುರೂಪವು ಅಳಿಸಿಹೋಗಿ ಇಲ್ಲವಾಗುತ್ತದೆ–ಎಂಬುದು ವಾಲ್ಮೀಕಿಗಳ ಎರಡನೆಯ ಅಲೋಚನೆ.

ಇದನ್ನೇ ಬೇರೆ ಮಾತುಗಳಲ್ಲಿ ಸ್ಪಷ್ಟಪಡಿಸಲು ಹೀಗೆ ಹೇಳಬಹುದು: ನೀತಿಯ ಗುಣವೂ ರೂಪದ ಗುಣವೂ ಒಂದಕ್ಕೊಂದು ಹೊಂದಿಕೊಳ್ಳದಿದ್ದರೂ ನೀತಿಗುಣವು ಪ್ರಬಲಿಸಿದಂತೆಲ್ಲ ರೂಪಗುಣದ ಗಣನೆ ಇಳಿದುಹೋಗುತ್ತದೆ. ರೂಪವನ್ನು ಮಾತ್ರ ನೋಡಿ ನೀತಿಯನ್ನು ನೋಡದೆ ಒಬ್ಬ ಹೆಣ್ಣನ್ನು ಮದುವೆ ಮಾಡಿಕೊಂಡವನಿಗೆ ಆ ರೂಪದ ಮೋಹ ಬಹುಕಾಲ ಉಳಿಯಲಾರದು. ಪೂರ್ವಕಾಲದಲ್ಲಿ ಗಂಡುಹೆಣ್ಣುಗಳು ಕಿರಿಯವರಾಗಿದ್ದಾಗಲೇ ಅವರ ತಾಯಿತಂದೆಯವರು ಅವರಿಗೆ ಮದುವೆಮಾಡಿಸುತ್ತಿದ್ದರು. ಆ ವಧೂವರರು ರೂಪಕ್ಕಾಗಿ ಮೋಹಬಿದ್ದವರೂ ಅಲ್ಲ, ನೀತಿವಿಚಾರ ನಡೆಸಿದವರೂ ಅಲ್ಲ. ಆದರೆ ಅವರು ಬೆಳೆದ ಮೇಲೆ ಆ ದಂಪತಿಗಳಲ್ಲಿ ರೂಪಸಂಪತ್ತಿಲ್ಲದಿದ್ದರೂ ಅವರಲ್ಲಿದ್ದ ನೀತಿಸಂಪತ್ತು ಅವರ ಅನ್ಯೋನ್ಯಪ್ರೇಮವನ್ನು ವೃದ್ಧಿಪಡಿಸುತ್ತಿತ್ತು.

ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಕಾಣಲು ಕಲಿತವನು ಜ್ಞಾನಿಯೆಂದು ಗೀತೆಯಲ್ಲಿ ಉಪದೇಶವಿದೆಯಷ್ಟೆ? ಅವರಂತೆಯೇ ಸೌಂದರ್ಯದಲ್ಲಿ ಅಸೌಂದರ್ಯವನ್ನೂ ಅಸೌಂದರ್ಯದಲ್ಲಿ ಸೌಂದರ್ಯವನ್ನೂ ಕಾಣುವ ಅಭ್ಯಾಸವು ಒಂದು ತತ್ತ್ವಜ್ಞಾನಸಾಧನ. ಹಾಗೆಯೇ ಅಂತಸ್ಸೌಂದರ್ಯಕ್ಕೂ ಬಹಿಸ್ಸೌಂದರ್ಯಕ್ಕೂ ಇರುವ ವ್ಯತ್ಯಾಸವನ್ನು ಲಕ್ಷಿಸದೆ ಎರಡನ್ನೂ ಒಂದಾಗಿ ಪರಿಗಣಿಸುವುದನ್ನು ಅಭ್ಯಾಸ ಮಾಡಬೇಕು. ಅದೇ ದ್ವಂದ್ವಾತೀತನ ಲಕ್ಷಣ. ಭಗವತ್ಸ್ವರೂಪವನ್ನು ವರ್ಣಿಸುವಲ್ಲಿ ಅನೇಕ ಅಸುಂದರಭಾವಗಳನ್ನು ಸೂಚಿಸುವುದರ ತಾತ್ಪರ್ಯ ಇದು. ಗಣಪತಿ ದೇವತೆಯು ಪ್ರಣವದ ಪ್ರತೀಕ. ಪ್ರಣವಾಕ್ಷರವು ಪರಬ್ರಹ್ಮಸಂಜ್ಞೆ. ಪರಬ್ರಹ್ಮವು ಆನಂದ ಸ್ವರೂಪಿ. ಆನಂದವು ಸೌಂದರ್ಯಬೀಜ. ಹೀಗೆ ಸಕಲ ಸೌಂದರ್ಯಮೂಲವಾದ ಬ್ರಹ್ಮ ವಸ್ತುವಿನ ಪ್ರತೀಕಕ್ಕೆ ಕೊಟ್ಟಿರುವ ಹೆಸರುಗಳೆಂಥವು?

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ ।
ಲಂಬೋದರಶ್ಚ ವಿಕಟಃ.... ॥

ಇದೇ ಬೋಧನೋಪಾಯವನ್ನು ರುದ್ರಾಧ್ಯಾಯ ಮೊದಲಾದ ಶ್ರುತಿ ಪ್ರಕರಣಗಳಲ್ಲಿಯೂ ಕಾಣಬಹುದು.

ಈ ತತ್ತ್ವದಿಂದ ನಾವು ಆಂಜನೇಯಾವತಾರದ ಮರ್ಮವನ್ನು ಗ್ರಹಿಸಬೇಕಾದದ್ದು. ಅಂತಸ್ಸೌಂದರ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಬಹುರಾಕೃತಿಯನ್ನು ಮರೆಯಬೇಕಾದದ್ದು.

ಒಂದು ಅನುಭವ

ಗುಣಸ್ವಾರಸ್ಯವೂ ರೂಪದೋಷವೂ ಎರಡೂ ಒಂದೆಡೆಯಿದ್ದಲ್ಲಿ ಆ ಗುಣವು ಆ ದೋಷವನ್ನು ಮರೆಯಿಸುತ್ತದೆಂಬುದಕ್ಕೆ ನಿದರ್ಶನವಾಗಿ ಶ್ರೀ ವಿ.ಎಸ್‍. ಶ್ರೀನಿವಾಸಶಾಸ್ತ್ರಿಗಳವರು ನನಗೆ ವರ್ಣಿಸಿದ ಒಂದು ಅನುಭವ ಜ್ಞಾಪಕಕ್ಕೆ ಬರುತ್ತದೆ. ಶಾಸ್ತ್ರಿಗಳವರು ಚಿಕ್ಕವಯಸ್ಸಿನಲ್ಲಿದ್ದಾಗ ತಂಜಾವೂರಿನಲ್ಲಿ ಒಬ್ಬ ದೊಡ್ಡ ಮನುಷ್ಯರ ಮನೆಯಲ್ಲಿ–ಬಹುಶಃ ಸರ್‍.ಟಿ. ಮುತ್ತುಸ್ವಾಮಿ ಅಯ್ಯರವರ ಮನೆಯಲ್ಲಿ–ಮದುವೆ ನಡೆಯಿತಂತೆ. ಆ ಕಾಲದಲ್ಲಿ ಮದುವೆ ನಾಲ್ಕೈದು ದಿವಸಗಳ ಉತ್ಸವ. ಅದರಲ್ಲೊಂದು ದಿವಸ ಸಭಾಪೂಜೆ. ಅಂದು ನರ್ತಕಿಯರಿಂದ ನರ್ತನ (ತಾಫಾ) ಮಾಡಿಸುವುದು ಆಗಿನ ವಾಡಿಕೆ. ಆ ದಿನದ ಸದಸ್ಸಿಗೆ ಶ್ರೀನಿವಾಸಶಾಸ್ತ್ರಿಗಳೂ ನಾಲ್ವರೈವರು ಸ್ನೇಹಿತರೂ ಹೋಗಿ ಕುಳಿತರು. ಗೊತ್ತಾಗಿದ್ದ ನರ್ತಕಿ ಅವರ ಕಣ್ಣಿಗೆ ಕಾಣಿಸಿದಳು. ಆಕೆ ಮುದುಕಿ. ರೂಪವತಿಯಲ್ಲ. ಆ ಯುವಕರು ತಮ್ಮತಮ್ಮೊಳಗೆ “ಈ ಮುದಿಕುಣಿತವನ್ನೇನು ನೋಡುವುದು! ನಡೀರಿ, ಹೋಗೋಣ” ಎಂದು ಮಾತನಾಡಿಕೊಂಡರಂತೆ. ಅದನ್ನು ಕೇಳಿದ ಹಿರಿಯರೊಬ್ಬರು “ಇನ್ನೂ ಸಭೆ ಪ್ರಾರಂಭವಾಗಿಲ್ಲ; ಈಗ ಎದ್ದುಹೋಗುವುದು ಮರ್ಯಾದೆಯಲ್ಲ, ಹತ್ತು ನಿಮಿಷವಾದಮೇಲೆ ಹೋಗಬಹುದು” –ಎಂದರಂತೆ. ಆದರಂತೆ ಯುವಕರು ಕುಳಿತಿದ್ದರು. ನಾಟ್ಯ ಪ್ರಾರಂಭವಾಯಿತು. ಆಕೆ ಸಭಾವಂದನೆ ಮಾಡಿ ಬಳಿಕ ರಾಧಾಕೃಷ್ಣಲೀಲೆಯಲ್ಲಿ ರಾಧೆ ತನ್ನ ಬಳಿಗೆ ಕೃಷ್ಣ ಇನ್ನೂ ಬರಲಿಲ್ಲವಲ್ಲ!–ಎಂದು ಕಳವಳಪಟ್ಟ ಹಾಡನ್ನು ಹಾಡಿಕೊಂಡು ಅಭಿನಯ ಹಿಡಿಯಲಾರಂಬಿಸಿದಳು. ಹತ್ತು ನಿಮಿಷ ಕಳೆಯಿತು. ಇಪ್ಪತ್ತು ನಿಮಿಷವಾಯಿತು. ನಮ್ಮ ಯುವಕರು ಕದಲಲಿಲ್ಲ. ಆ ಹಿರಿಯರು “ಈಗ ಬೇಕಾದರೆ ಹೋಗಬಹುದು” –ಎಂದರು. ಆಕೆಯ ನೇತ್ರಾಭಿನಯ, ಆಕೆಯ ನಾನಾ ಮುಖಭಾವಗಳು, ಆಕೆಯ ಅಂಗಾಂಗಭಂಗಿಗಳು ಹಾಗೆ ಚಿತ್ತಗ್ರಾಹಿಯಾಗಿದ್ದವು.

ಗುಣವು ಅತಿಶಯವಾದಾಗ ರೂಪದ ಲೋಪವು ಲೆಕ್ಕಕ್ಕಿಲ್ಲದೆ ಹೋಗುತ್ತದೆ, ಆಂಜನೇಯನ ವಾನರತ್ವವು ಮಾಯವಾಗಿ ಆತನು “ಕಾಂಚನಾದ್ರಿ ಕಮನೀಯ ವಿಗ್ರಹ” ನಾಗುತ್ತಾನೆ. ರೂಪನ್ಯೂನತೆಯನ್ನು ಗುಣಬಾಹುಳ್ಯವು ಜಯಿಸುತ್ತದೆ. ಕೆಲವು ದೃಷ್ಟಾಂತಗಳನ್ನು ನೋಡೋಣ.

ಕಥಾಸಂಕ್ಷೇಪ

ಆಂಜನೇಯಮೂರ್ತಿಯ ದರ್ಶನ ನಮಗೆ ಮೊದಲು ಆಗುವುದು ಕಿಷ್ಕಿಂಧಾಪ್ರದೇಶದಲ್ಲಿ. ರಾಮಲಕ್ಷ್ಮಣರು ಸೀತಾದೇವಿಯನ್ನು ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುತ್ತ ಅಲ್ಲಿಗೆ ಬರುತ್ತಿದ್ದಾರೆ. ಸುಗ್ರೀವನು ಅವರನ್ನು ದೂರದಿಂದ ಕಂಡು, ಅವರು ತನ್ನ ಶತ್ರುವಾದ ವಾಲಿಯ ಗುಪ್ತಭಟರಿರಬೇಕೆಂದು ಊಹಿಸಿಕೊಂಡು, ಭೀತಿಪಟ್ಟು ತಲ್ಲಣಗೊಂಡಿದ್ದಾನೆ. ಆಗ ಆತನ ಪರಿವಾರದಲ್ಲಿದ್ದ ವಾಯುಪುತ್ರನು ಧೈರ್ಯಮಾಡಿ ಸುಗ್ರೀವನ ಶಂಕೆಯನ್ನು ಪರಿಹರಿಸಲು ಮುಂದೆ ಬರುತ್ತಾನೆ. ರಾಮಲಕ್ಷ್ಮಣರ ರೂಪ ಲಕ್ಷಣಗಳನ್ನೂ ಮುಖಕಾಂತಿಯನ್ನೂ ನೋಡಿದರೆ ಅವರು ವಾಲಿಯ ಕಡೆಯವರು ಎನಿಸುವುದಿಲ್ಲ; ಇವರು ಯಾರೋ ಸತ್ಪುರುಷರು, ಸ್ನೇಹಯೋಗ್ಯರಾಗಿ ಕಾಣುತ್ತಾರೆ; ಅವರ ಸ್ನೇಹದಿಂದ ನಿನಗೆ ಪ್ರಯೋಜನವೇ ಆಗಬಹುದು–ಎಂದು ಆಂಜನೇಯನು ನುಡಿದದ್ದನ್ನು ಸುಗ್ರೀವನು ಲಾಲಿಸಿ, ಆ ಆಗಂತುಕರನ್ನು ವಿಚಾರಿಸಿ ತಿಳಿದು ಕೊಳ್ಳುವಂತೆ ಆಂಜನೇಯನಿಗೆ ಅನುಜ್ಞೆ ಕೊಡುತ್ತಾನೆ. ಈ ಸಂಗತಿ ಆಂಜನೇಯನ ನೈಜಸಾತ್ತ್ವಿಕತೆಗೂ ದೂರದರ್ಶಿತ್ವಕ್ಕೂ ನಿದರ್ಶನ.

ಹನುಮಂತನು ರಾಮನ ಬಳಿಗೆ ಹೋದದ್ದಾದರೂ ಹೇಗೆ? ವಾನರರೂಪದಿಂದ ಅಲ್ಲ; ಭಿಕ್ಷುಕರೂಪದಿಂದ. ರಾಮಲಕ್ಷ್ಮಣರು ತಾಪಸರೂಪದಲ್ಲಿದ್ದರು. ಅಂಥವರಿಗೆ ಇಷ್ಟವಾದ ವೇಷದಲ್ಲಿ ತಾನು ಅವರಿಗೆ ಕಾಣಿಸಿಕೊಂಡರೆ ಅವರು ಒಡನೆಯೇ ಪ್ರಸನ್ನರಾದರು. ಇದು ಆತನ ತಾತ್ಪರ್ಯ. ಅದು ದಿಟವಾಯಿತು, ಆತನು ಮಾತನ್ನು ಪ್ರಾರಂಭಿಸಿದ ರೀತಿಯಿಂದ ಶ್ರೀರಾಮಚಂದ್ರನಿಗೆ ಸಂತೋಷವಾಯಿತು. ಆತ ತುಂಬು ಮನಸ್ಸಿನಿಂದ ಆಂಜನೇಯನನ್ನು ಕೊಂಡಾಡಿದ.

ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್‍ ॥

ಈಗ ಇನ್ನೊಂದು ದೃಶ್ಯಕ್ಕೆ ಹೋಗೋಣ.

ಆಂಜನೇಯನು ಸಮುದ್ರದ ಮೇಲೆ ಹಾರಿಹೋಗುತ್ತಿದ್ದಾನೆ. ಅವನ ತಂದೆಯಾದ ವಾಯುದೇವನ ಸ್ನೇಹಿತ ಪರ್ವತಮೂರ್ತಿ ಮೈನಾಕನು ಸಮುದ್ರದ ತಳದಲ್ಲಿ ಅಣಗಿಕೊಂಡಿದ್ದವನು ಆಂಜನೇಯನು ಕೊಂಚ ವಿಶ್ರಮಿಸಿಕೊಳ್ಳಲು ಸ್ಥಲ ಒದಗಿಸಬೇಕೆಂದು ಮೇಲಕ್ಕೆದ್ದು ಬರುತ್ತಾನೆ. ಅದನ್ನರಿಯದ ಆಂಜನೇಯನು ಅದೇನೋ ಭೂತವಿರಬೇಕೆಂದು ಭ್ರಮಿಸಿ ಮೈನಾಕಪರ್ವತದ ಮಸ್ತಕವನ್ನು ತನ್ನ ಬಾಲದಿಂದ ಅಪ್ಪಳಿಸುತ್ತಾನೆ. ಆಗ ಮೈನಾಕನು ತಾನಾರೆಂಬುದನ್ನು ತಿಳಿಸಿದ ಬಳಿಕ ವಾಯುಪುತ್ರನು ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದಾಗಿತ್ತು. ಹಾಗೆ ಮಾಡಿದನೆ? ಇಲ್ಲ. ಆತನ ಕರ್ತವ್ಯೋತ್ಸಾಹದಲ್ಲಿ ವಿರಾಮಕ್ಕೆಡೆಯಿರಲಿಲ್ಲ.

ಇಂಥ ನಾಲ್ಕಾರು ಅಡ್ಡಿ ಅಪಾಯಗಳನ್ನು ಆಂಜನೇಯನು ತನ್ನ ಪರಾಕ್ರಮದಿಂದ ಎದುರಿಸಿ ದಾಟಿ ಲಂಕಾಪಟ್ಟಣವನ್ನು ಸೇರಿದ. ಅಲ್ಲಿ ಸೀತಾಮಾತೆಗಾಗಿ ಎಲ್ಲೆಲ್ಲೂ ಹುಡುಕಿದ. ಆಕೆಯ ರೂಪಲಕ್ಷಣಗಳ ವಿಷಯದಲ್ಲಿ ತಾನು ಮನಸ್ಸಿನಲ್ಲಿ ಧರಿಸಿದ್ದ ಪ್ರತಿಕೃತಿಯನ್ನು ಎಲ್ಲಿಯೂ ಕಾಣದೆ ಕಡೆಗೆ ರಾವಣನ ಅಂತಃಪುರಕ್ಕೆ ಬಂದ. ಅಲ್ಲಿ ಸಾವಿರಾರು ಮಂದಿ ಸುರಸುಂದರಿಯರನ್ನು ಕಂಡ. ಅವರಲ್ಲಿ ಯಾವ ಒಬ್ಬಾಕೆಯನ್ನಾದರೂ ಸೀತೆಯೆಂದು ಭ್ರಾಂತಿಪಡಬಹುದಾಗಿತ್ತಲ್ಲ! ಅಂಥಾ ಭ್ರಾಂತಿಗೆ ಆತ ಸಿಕ್ಕಲಿಲ್ಲ. ಸೀತೆ ಅಂಥಾಸನ್ನಿವೇಶವನ್ನು ಸಹಿಸತಕ್ಕವಳಲ್ಲವೆಂಬ ನಂಬಿಕೆ ಅವನ ಮನಸ್ಸಿನಲ್ಲಿ ಬೇರೂರಿತ್ತು. ಮಂಡೋದರಿಯನ್ನು ನೋಡಿದ. ಒಂದು ಕ್ಷಣ ಭ್ರಾಂತಿಪರವಶನಾದ.

ತರ್ಕಯಾಮಾಸ ಸೀತೇತಿ ರೂಪಯೌವನಸಂಪದಾ ॥

ಆದರೆ ಉತ್ತರಕ್ಷಣದಲ್ಲಿಯೇ ಆ ಭ್ರಾಂತಿ ಬಿಟ್ಟಿತು;

ನ ರಾಮೇಣ ವಿಯುಕ್ತಾ ಸಾ ಸ್ವಪ್ತುಮರ್ಹತಿ ಭಾಮಿನೀ ॥

ಪರಪುರುಷನೆಡೆಯಲ್ಲಿ ಮಲಗಿ ನಿದ್ದೆಹೋಗುವಂಥವಳೆ ರಾಮಪತ್ನಿ? ಎಂದಿಗೂ ಹಾಗಾಗಲಾರದು.

ಮತ್ತೆ ಹುಡುಕಲಾರಂಭಿಸಿ ಕಡೆಗೆ ಅಶೋಕವನದತ್ತ ಬಂದ. ಅಲ್ಲಿ ಕಂಡ ಕಾಣಬಯಸಿದ್ದದ್ದನ್ನು.

ಸೀತಮ್ಮನ ಸನ್ನಿಧಾನದಲ್ಲಿ ಆಂಜನೇಯನು ನಡೆದುಕೊಂಡ ನಡವಳಿಕೆಯ ಮರ್ಯಾದೆ, ಆ ಮಾತಿನ ಇಂಗಿತಜ್ಞತೆ, ವಿನಯ, ವಾತ್ಸಲ್ಯಗಳು ಹೃದಯಸ್ಪರ್ಶಿಗಳಾಗಿವೆ:

ಸೋಽವತೀರ್ಯ ದ್ರುಮಾತ್ತಸ್ಮಾತ್‍ ವಿದ್ರುಮಪ್ರತಿಮಾನನಃ ।
ವಿನೀತವೇಷಃ ಕೃಪಣಃ ಪ್ರಣಿಪತ್ಯೋಪಸೃತ್ಯಚ ॥
..........
ಕಾ ನು ಪದ್ಮಪಲಾಶಾಕ್ಷಿ ಕ್ಲಿಷ್ಟಕೌಶೇಯವಾಸಿನಿ ।
ದ್ರುಮಸ್ಯ ಶಾಖಾಮಾಲಂಭ್ಯ ತಿಷ್ಠಸಿ ತ್ವಮನಿಂದಿತೇ ॥
ಕಿಮರ್ಥಂ ತವ ನೇತ್ರಾಭ್ಯಾಂ ವಾರಿ ಸ್ರವತಿ ಶೋಕಜಮ್‍ ।
.........
ಸೀತಾ ತ್ವಮಸಿ ಭದ್ರಂ ತೇ ತನ್ಮಮಾಚಕ್ಷ್ವ ಪೃಚ್ಛತಃ ॥

ಇದರಿಂದ ಸಂತುಷ್ಟಳಾದ ಸೀತೆ ತನ್ನ ವೃತ್ತಾಂತವನ್ನು ಹೇಳುತ್ತಾಳೆ. ಆಂಜನೇಯನು ತನ್ನ ಮಾತಿನಲ್ಲಿ ಆಕೆಗೆ ನಂಬಿಕೆ ದೃಢಪಡಬೇಕೆಂದೂ ಆಕೆ ಧೈರ್ಯಗೊಳ್ಳಬೇಕೆಂದೂ ಉದ್ದೇಶಿಸಿ

ರಾಮನಾಮಾಂಕಿತಂ ಚೇದಂ ಪಶ್ಯ ದೇವ್ಯಂಗುಲೀಯಕಮ್‍ ।
ಪ್ರತ್ಯಯಾರ್ಥಂ ತವಾನೀತಂ ತೇನ ದತ್ತಂ ಮಹಾತ್ಮನಾ ॥

ಹೀಗೆ ಆಂಜನೇಯನು ಶ್ರೀರಾಮನ ಉಂಗುರವನ್ನು ಸೀತಾದೇವಿಗೆ ಒಪ್ಪಿಸಲು ಆಕೆ ಶ್ರೀರಾಮನಿಗೆ ಪ್ರತ್ಯುತ್ತರವಾಗಿ ಕಾಕಾಸುರವಧೆಯ ವೃತ್ತಾಂತವನ್ನು ಜ್ಞಾಪಕಕ್ಕೆ ತಂದು ಅದನ್ನು ಆಂಜನೇಯನು ರಾಮಚಂದ್ರನಿಗೆ ತಿಳಿಸತಕ್ಕದ್ದೆಂದೂ ತನ್ನ ಚೂಡಾಮಣಿಯನ್ನು ಆತನಿಗೆ ಜ್ಞಾಪಕಾರ್ಥವಾಗಿ ಕೊಡತಕ್ಕದ್ದೆಂದೂ ಹೆಳಿದಳು:

ಅಭಿಜ್ಞಾನಂ ಚ ರಾಮಸ್ಯ ದದ್ಯಾ ಹರಿಗಣೋತ್ತಮ ॥
.........
ಏಷ ಚೂಡಾಮಣಿರ್ದಿವ್ಯೋ ಮಯಾ ಸುಪರಿರಕ್ಷಿತಃ ।
ಏತಂ ದೃಷ್ಟ್ವಾ ಪ್ರಹೃಷ್ಯಾಮಿ ವ್ಯಸನೇ ತ್ವಾಮಿವಾನಘ ॥

ಆಂಜನೇಯಮೂರ್ತಿಯು ಈ ಸೀತಾಸಂದೇಶವನ್ನು ಶ್ರೀರಾಮಚಂದ್ರನಿಗೆ ಮುಟ್ಟಿಸಿ ಚೂಡಾರತ್ನವನ್ನು ಆತನಿಗೆ ಕೊಟ್ಟಾಗ ಶ್ರೀರಾಮನು ತನ್ನ ಕೃತಜ್ಞತೆಯನ್ನು ಹೀಗೆ ವ್ಯಕ್ತಪಡಿಸಿದ:

ಕೃತಂ ಹನುಮತಾ ಕಾರ್ಯಂ ಸುಮಹದ್ಭುವಿ ದುರ್ಲಭಮ್‍ ।
ಮನಸಾಽಪಿ ಯದನ್ಯೇನ ನ ಶಕ್ಯಂ ಧರಣೀತಲೇ ॥

ಎಂಥ ಸೌಭಾಗ್ಯಯೋಗ ಆಂಜನೇಯಮೂರ್ತಿಯದು! ಈ ಕಡೆಯ ರಾಘವಹಸ್ತ ಸ್ಪರ್ಶಭಾಗ್ಯವನ್ನು ಆ ಕಡೆಯ ಜಾನಕಿಗೆ ಹಸ್ತಗತವಾಗಿಸಿದ್ದು; ಆ ಕಡೆಯ ಜಾನಕೀ ಹಸ್ತಸ್ಪರ್ಶಸೌಭಾಗ್ಯವನ್ನು ಈ ಕಡೆಯ ರಾಘವನಿಗೆ ಹಸ್ತಗತ ಮಾಡಿಸಿದ್ದು–ಹೀಗೆ ಉಭಯಸೌಭಾಗ್ಯಗಳ ಸಂಧಿಸ್ಥಾನ ಆಂಜನೇಯ. ಮನುಷ್ಯ ಕಾಣಬಹುದಾದ ಸೌಂದರ್ಯಗಳ ಮಾತಿರಲಿ, ಅವನು ಊಹಿಸಬಹುದಾದ ಸೌಂದರ್ಯಗಳಲ್ಲಿ ಸಹ ಆಂಜನೇಯನ ಯೋಗಕ್ಕಿಂತ ಸುಂದರವಾದ್ದು ಏನಿದ್ದೀತು?

ಅಲ್ಲಿಂದ ಮುಂದಿನ ರಾಮಕಥೆನೀರಿಕ್ಷಿಸಬಹುದಾದದ್ದು. ಶ್ರೀರಾಮನು

ಧರ್ಮಾತ್ಮಾ ಸತ್ಯಸಂಧಶ್ಚ.... ।
ಪೌರುಷೇ ಚಾಪ್ರತಿದ್ವಂದ್ವಃ.... ॥

–ಎಂಬುದನ್ನರಿತವರಿಗೆ ಸೇತುನಿರ್ಮಾಣವೂ ರಾವಣಸಂಹಾರವೂ ಸ್ವಾಭವಿಕ ಘಟನೆಗಳೇ, ಅವಶ್ಯಸಂಭಾವ್ಯಗಳೇ ಎಂಬುದು ಸ್ವತಸ್ಸಿದ್ಧವಾಗಿರುತ್ತದೆ.

ಕಿಷ್ಕಿಂಧೆಯಲ್ಲಿ ಉದಿಸಿದ ಸೌಂದರ್ಯಯೋಗಕ್ಕೆ ಅಯೋಧ್ಯೆಯಲ್ಲಿ ಕಿರೀಟ ಪ್ರಾಪ್ತಿ. ರಾಮಚಂದ್ರನ ಪಟ್ಟಾಭಿಷೇಕಕ್ಕಾಗಿ ಒಡ್ಡೋಲಗ ನೆರೆದಿದೆ. ಪ್ರಭುವು ಸುಗ್ರೀವ ವಿಭೀಷಣಾದಿಗಳಿಗೆ ಕೃತಜ್ಞತೆಯ ಪಾರಿತೋಷಕಗಳನ್ನು ಅನುಗ್ರಹಿಸಿದ್ದಾನೆ. ಸೀತಾ ದೇವಿಗೂ ಯಥೋಚಿತವಾಗಿ ಉಡುಗೊರೆ ಕೊಟ್ಟದ್ದಾಯಿತು. ಆ ದೇವಿ ತನ್ನ ಕಂಠದಲ್ಲಿದ್ದ ಮಣಿಹಾರವನ್ನು ವಾಯುಪುತ್ರನಿಗೆ ಕೊಡಲುದ್ದೇಶಿಸಿ ಭರ್ತನ ಮುಖವನ್ನು ನೋಡುತ್ತಾಳೆ. ಆಗ ಪ್ರಭು ನುಡಿದ:

ಪ್ರದೇಹಿ ಸುಭಗೇ ಹಾರಂ ಯಸ್ಯ ತುಷ್ಟಾಸಿ ಭಾಮಿನಿ ।
ತೇಜೋ ಧೃತಿರ್ಯಶೋ ದಾಕ್ಷ್ಯಂ ಸಾಮರ್ಥ್ಯಂ ವಿನಯೋ ನಮಃ ॥
ಪೌರುಷಂ ವಿಕ್ರಮೋ ಬುದ್ಧಿಃ ಯಸ್ಮಿನ್ನೇತಾನಿ ನಿತ್ಯದಾ ।
ದದೌ ಸಾ ವಾಯುಪುತ್ರಾಯ ತಂ ಹಾರಮಸೀತೇಕ್ಷಣಾ ॥

ಇಂಥಾ ಬಹುಮಾನವನ್ನು ಪಡೆದದ್ದಲ್ಲವೆ ಸುಂದರ–ಸುಂದರದಲ್ಲಿ ಸುಂದರ!

ನಿಃಸ್ವಾರ್ಥತೆ

ಆಂಜನೇಯನ ತಂದೆಯ ಸ್ವಭಾವವನ್ನು ಛಾಂದೋಗ್ಯೋಪನಿಷತ್ತಿನ ಒಂದು ಕಥೆ ತಿಳಿಸುತ್ತದೆ. ದೇವತೆಗಳಿಗೂ ಅಸುರರಿಗೂ ಆಗಾಗ ಯುದ್ಧವಾಗುತ್ತಿತ್ತಷ್ಟೆ? ಸಲಸಲವೂ ದೇವತೆಗಳು ಪೆಟ್ಟುತಿಂದು ಸೋಲುತ್ತಿದ್ದರು. ಅವರು ಹಾಗೆ ಕುಗ್ಗಿದ್ದಾಗ ಒಂದು ಸಾರಿ ತಮ್ಮ ತಂದೆ ಪ್ರಜಾಪತಿಯಲ್ಲಿ ಮೊರೆಯಿಟ್ಟುಕೊಂಡು ಉಪಾಯವನ್ನು ಬೇಡಿದರು. ಪ್ರಜಾಪತಿಯು ಅವರಿಗೆ ಉದ್ಗೀಥದ ಉಪಾಸನೆಯು ಜಯಕಾರವೆಂದು ಉಪದೇಶಿಸಿದ. ಉದ್ಗೀಥವೆಂದರೆ ಪರಬ್ರಹ್ಮ ಧ್ಯಾನ. ಆ ಉಪದೇಶವನ್ನು ದೇವತೆಗಳು ಅಂಗೀಕರಿಸಿ, ತಮ್ಮಲ್ಲಿ ಮುಖ್ಯರಾದ ಇಂದ್ರಿಯ ದೇವತೆಗಳನ್ನು ಒಬ್ಬರಾದ ಬಳಿಕ ಒಬ್ಬರಂತೆ ಉಪಾಸನೆಗೆ ನಿಯಮಿಸಿದರು. ವಾಗಿಂದ್ರಿಯವನ್ನು ಬೇಡಿದರು. ಆ ದೇವತೆ ಉದ್ಗೀಥದಿಂದ ಮಹಿಮೆ ಪಡೆಯಿತು. ಅದರಿಂದ ಶುಭಶಬ್ದಗಳು ಹೊರಟವು. ಎಲ್ಲರೂ ಸಂತೋಷಿಸಿದರು. ವಾಕ್ಕು ಆಗ “ಆಹಾ! ನಾನು ಎಂಥಾ ಮಹಾಕಾರ್ಯವನ್ನು ಮಾಡಿದೆ!” ಎಂದುಕೊಂಡಿತು. ಆ ಕ್ಷಣದಲ್ಲಿ ಪಾಪ ಅದನ್ನು ಹೊಕ್ಕಿತು. ಅದು ರಾಕ್ಷಸರ ಹೊಡೆತಕ್ಕೆ ಅವಕಾಶವಾಯಿತು. ದೇವತೆಗಳು ಚಕ್ಷುರಿಂದ್ರಿಯವನ್ನು ಉದ್ಗೀಥಕ್ಕೆ ನಿಯಮಿಸಿದರು. ಅದು ನಾನಾ ಶೋಭನರೂಪಗಳನ್ನು ತೋರಿಸಿತು. ಎಲ್ಲರೂ ಸಂತೋಷಪಟ್ಟರು. ಚಕ್ಷುಸ್ಸು “ಆಹಾ! ನಾನು ಎಂಥಾ ಮಹಾಕಾರ್ಯವನ್ನು ಮಾಡಿದೆ!" ಎಂದುಕೊಂಡಿತು. ಆಗ ಪಾಪ ಪ್ರವೇಶಿಸಿತು. ಮತ್ತೆ ಅಸುರರು ಪ್ರಬಲಿಸಿ ಬಂದರು. ಹೀಗೆಯೇ ಮಿಕ್ಕ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳ ಪಾಡೂ ಆಯಿತು. ಕಡೆಗೆ ದೇವತೆಗಳು ವಾಯುವನ್ನು ಕುರಿತು “ನೀನು ಉದ್ಗೀಥೋಪಾಸನೆ ಮಾಡು" ಎಂದು ಬೇಡಿಕೊಂಡರು. ವಾಯುದೇವನಾದರೋ ಯಾವ ಇಂದ್ರಿಯಕ್ಕೂ ಅಂಟಿಕೊಳ್ಳದೆ ಕೇವಲ ಪ್ರಾಣರೂಪದಲ್ಲಿರುವವನು. ಅವನನ್ನು ಅಹಂತಾಪಾಪವು ಸೋಕದು. ಇಂದ್ರಿಯಗಳಿಗೆ ಸ್ವಸುಖ ಸ್ವಲಾಭಗಳ ಚಿಂತೆ ಇರುವಂತೆ ವಾಯುದೇವನಿಗಿಲ್ಲ. ಆತನು ನಿಃಸ್ವಾರ್ಥಿ; ಕೇವಲ ಕರ್ತವ್ಯತಾಭಾವದಿಂದ ಕೆಲಸ ಮಾಡತಕ್ಕವನು. ಆದದ್ದರಿಂದ ವಾಯುದೇವನು ಮಾಡಿದ ಉದ್ಗೀಥೋಪಾಸನೆ ಪಾಪಸ್ಪರ್ಶವಿಲ್ಲದೆ ನಡೆದು ರಾಕ್ಷಸರನ್ನು ಜಯಿಸಲು ಸಮರ್ಥವಾಯಿತು. ಈ ವಾಯುದೇವಸ್ವಭಾವವು ವಾಯುಪುತ್ರನಿಗೂ ಬಂದಿತ್ತು.

ಈಗ ಪರಿಸಮಾಪನದೃಶ್ಯ. ಶ್ರೀರಾಮಚಂದ್ರನು ಪಟ್ಟಾಭಿಷೇಕಾನಂತರ ಅಯೋಧ್ಯೆಯಲ್ಲಿ ರಾಜ್ಯ ನಡೆಸುತ್ತಿದ್ದಾನೆ: ಹತಶತ್ರುವಾಗಿ, ಕೃತಕೃತ್ಯನಾಗಿ, ನಿಶ್ಚಿಂತನಾಗಿ ಉಪಶಾಂತನಾಗಿದ್ದಾನೆ. ರಾಜ್ಯವು ಸುಖಶಾಂತಿ ಸೌಭಾಗ್ಯಗಳಿಂದ ಸಮೃದ್ಧವಾಗಿದೆ. ಈಗ ಶ್ರೀರಾಮನು ಕಾಲ ಕಳೆಯುವುದು ಹೇಗೆ? ಅದು ಹೀಗೆ: ಮಹರ್ಷಿಗಳು ಸಭೆನೆರೆದಿದ್ದಾರೆ. ಅವರ ನಡುವೆ ಶ್ರೀರಾಮಚಂದ್ರನು ಸೀತಾಸಹಿತನಾಗಿ ಭದ್ರಾಸೀನದಲ್ಲಿ ಸುಖಾಸೀನನಾಗಿದ್ದಾನೆ. ಎಡಬಲಗಳಲ್ಲಿ ತಮ್ಮಂದಿರೂ ಬಂಧುಮಿತ್ರರೂ ಕುಳಿತಿದ್ದಾರೆ. ಋಷಿಮುನಿಗಳು ರಾಮಮುಖದಿಂದ ಪರತತ್ವವನ್ನು ತಿಳಿದುಕೊಳ್ಳಬೇಕೆಂದು ಕುತೂಹಲಿಗಳಾಗಿದ್ದಾರೆ. ಮುಂದುಗಡೆ ಆಂಜನೇಯನು ಕುಳಿತು ಶ್ರುತಿವಾಕ್ಯಗಳನ್ನು ಹೇಳುತ್ತಿದ್ದಾನೆ. ಸ್ವಾಮಿ ವ್ಯಾಖ್ಯಾನ ಮಾಡುತ್ತಿದ್ದಾನೆ.

ಅಗ್ರೇ ವಾಚಯತಿ ಪ್ರಭಂಜನಸುತೇ
ತತ್ತ್ವಂ ಮುನಿಭ್ಯಃ ಪರಮ್‍ ।
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ
ರಾಮಂ ಭಜೇ ಶ್ಯಾಮಲಮ್‍ ॥

ಎಂಥ ಮನೋಹರವಾದ ಸನ್ನಿವೇಶ ! ಇದಲ್ಲವೇ ಜೀವನ ಸೌಂದರ್ಯದ ಶಿಖರಾಗ್ರ!

ಈ ಚಿತ್ರದ ಸೌಂದರ್ಯವನ್ನು ಕಾಣಬಲ್ಲ ಜನ ನಮ್ಮಲ್ಲಿ ಇನ್ನೂ ಇದ್ದಾರೆಂದು ನಾನು ನಂಬಿದ್ದೇನೆ. ಅಂಥವರು ಈ ಸುಂದರಕಾಂಡ ಗ್ರಂಥವನ್ನು ಆದರದಿಂದ ಬರಮಾಡಿಕೊಳ್ಳುವರು.

ಸುಂದರಕಾಂಡದ ನಿತ್ಯಪಾರಾಯಣ ಸಂಪ್ರದಾಯವು ನಮ್ಮ ದೇಶದಲ್ಲಿ ಬಹುಕಾಲದಿಂದ ಬಂದದ್ದು. ಮನಸ್ಸನ್ನು ದಿಕ್ಕುಗೆಡಿಸಿರುವ ಈ ನಮ್ಮ ಕಾಲದಲ್ಲಿಯೂ ಸುಂದರಕಾಂಡಪಾರಾಯಣನಿಷ್ಠರು ಇದ್ದಾರೆಂಬುದು ನಮ್ಮ ದೇಶದ ಭವಿಷ್ಯಚ್ಛುಭಕ್ಕೆ ಭರವಸೆಯಾಗಿದೆ.

ಹನುಮದ್ವಿಲಾಸ

ಕನ್ನಡದಲ್ಲಿ ತಿಪ್ಪಣಾರ್ಯನೆಂಬ ಕವಿ ಸುಂದರಕಾಂಡ ಕಥಾಸಾರವನ್ನು ಹನುಮದ್ವಿಲಾಸವೆಂಬ ಕಾವ್ಯದಲ್ಲಿ ಮನೋಹರವಾಗಿ ರೂಪಗೊಳಿಸಿದ್ದಾನೆ. ಆದರಲ್ಲಿಯ ಪದ್ಯಗಳೂ ಹಾಡುಗಳೂ ಹೃದಯಸ್ಪರ್ಶಿಯಾಗಿವೆ. ಆನಂದಭೈರವಿ, ಮಧ್ಯಮಾವತಿ, ಮೋಹನ ಮೊದಲಾದ ಸುಂದರ ರಾಗಗಳಲ್ಲಿ ಆ ಗೀತಗಳು ಹಾಡತಕ್ಕುವಾಗಿವೆ. ಕನ್ನಡ ಜನದ ಗಾನಾಭಿರುಚಿ ಅನ್ಯಾನುಕರಣ ವ್ಯಾಮೋಹಕ್ಕೆ ಸಿಕ್ಕುವ ಮುನ್ನ–ಐವತ್ತರವತ್ತು ವರ್ಷಗಳ ಹಿಂದಿನವರೆಗೆ–ಹನುಮದ್ವಿಲಾಸವನ್ನು ಹಾಡುವವರು ವಿರಳರಾಗಿರಲಿಲ್ಲ. ನನ್ನ ಬಂಧುವರ್ಗದಲ್ಲಿ ಕೆಲವು ವರ್ಷಗಳ ಹಿಂದಿನವರೆಗೆ ಹನುಮದ್ವಿಲಾಸವು ಪಾರಾಯಣ ಗ್ರಂಥವಾಗಿತ್ತು. ಶನಿವಾರ ಸಂಜೆ ದೇವರಿಗೆ ಮಂಗಳಾರತಿ ಮಾಡಿ ಹನುಮದ್ವಿಲಾಸವನ್ನು ಹಾಡಿ, ಕೇಳಿ, ನೈವೇದ್ಯ ಫಲಾಹಾರದಿಂದ ತೃಪ್ತರಾಗಿ ನೇಮದಿಂದಿರುತ್ತಿದ್ದರು. ಅಂಥಾ ಜನ ಈಗ ಕಡಮೆಯಾಗುತ್ತಿದ್ದಾರೆ–ನಮ್ಮ ನವ ನಾಗರಿಕತೆಯ ಮಹಿಮೆಯಿಂದ. ಇದು ಸುಂದರವಲ್ಲ. ಆ ಭಕ್ತಿಶ್ರದ್ಧೆಗಳು ಜೀವನದಲ್ಲಿ ಸುಂದರ.

ಕೃತಜ್ಞತೆ

ಇನ್ನು ನಾನು ಹೇಳಲು ಉಳಿದಿರುವ ಮಾತು ಸಂತೃಪ್ತಿ ಕೃತಜ್ಞತೆಗಳದು. ಸುಂದರಕಾಂಡವನ್ನು ಸುಂದರವಾಗಿ–ಬೆಲೆಕೊಟ್ಟು ಕೊಳ್ಳುವ ದೃಷ್ಟಿಯಿಂದಲೂ ಸುಂದರವಾಗಿ–ಪ್ರಕಟಪಡಿಸಬೇಕೆಂಬ ಉದ್ದೇಶವನ್ನು ಬೆಂಗಳೂರು ನರಸಿಂಹರಾಜ ಕಾಲೋನಿಯ ಶ್ರೀರಾಮಮಂದಿರ ಸಂಘದ ಪರವಾಗಿ ಮಿತ್ರರು ಶ್ರೀ ಡಿ. ಸಿ. ಅನಂತರಾಮಯ್ಯನವರು ತಿಳಿಸಿದಾಗ ನನಗೆ ತುಂಬ ಆನಂದವಾಯಿತು. ಇಂಥಾ ಗ್ರಂಥದ ಆವಶ್ಯಕತೆ ಕನ್ನಡ ಜನಕ್ಕೆ ತೀವ್ರವಾಗಿದೆ. ಶ್ರೀರಾಮಮಂದಿರದವರು ಇದಕ್ಕೆ ಮನಸ್ಸು ಕೊಟ್ಟಿದ್ದು ಅಭಿನಂದನೀಯವಾಗಿದೆ. ಶ್ರೀ ಅನಂತರಾಮಯ್ಯನವರು ಗ್ರಂಥದ ಬರಹದ ಪ್ರತಿಯನ್ನು ತಯಾರು ಮಾಡುವುದು, ಕರಡು ಪ್ರತಿಗಳನ್ನು ತಿದ್ದುವುದು–ಮೊದಲಾದ ಎಲ್ಲ ಕಾರ್ಯಾಂಶಗಳಲ್ಲಿಯೂ ಶ್ರದ್ಧಾ ಭಕ್ತಿಗಳಿಂದ ಶ್ರಮಪಟ್ಟಿದ್ದಾರೆ.

ಈ ದಿವ್ಯಗ್ರಂಥಕ್ಕೆ ಕನ್ನಡದಲ್ಲಿ ಭಾವಾನುವಾದ ಬರೆದು ಗ್ರಂಥವನ್ನು ಸಂಪಾದಿಸಿಕೊಡುವ ಕಾರ್ಯವನ್ನು ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾ ಅವರು ವಹಿಸಿಕೊಳ್ಳಬೇಕೆಂದು ಅವರನ್ನು ನಾನು ಬೇಡಿದಾಗ ಅವರು ಒಪ್ಪಿಕೊಂಡದ್ದು ನನಗೆ ಮತ್ತೊಂದು ಆನಂದ. ಶ್ರೀ ರಂಗನಾಥಶರ್ಮರವರು ಸಂಸ್ಕೃತ ವ್ಯಾಕರಣಶಾಸ್ತ್ರದಲ್ಲಿ ಆಳವೂ ವಿಶಾಲವು ಆಗಿ ಪ್ರಮಾಣವತ್ತಾಗಿರುವ ಪಾಂಡಿತ್ಯವನ್ನು ಸಂಪಾದಿಸಿರುವವರು. ಅವರ ಕನ್ನಡಭಾಷಾವಿದ್ವತ್ತೂ ಅಂಥಾದ್ದು. ಸಾಹಿತ್ಯದಲ್ಲಿ ಅವರು ಸಹೃದಯರಾಗಿ ಶೋಧನಶೀಲರಾಗಿ ಕಾವ್ಯಮರ್ಮವನ್ನು ಕಂಡು ತೋರಿಸಬಲ್ಲವರು. ಅವರು ಸದಾಚಾರನಿಷ್ಠರು, ಸರಳರು. ಒಂದು ಮಹಾಕಾವ್ಯದ ಅಂತರಂಗವನ್ನು ಅನುಭವದಿಂದ ತಿಳಿಸಬೇಕಾದರೆ ಯಾವ ಮನಃಪ್ರಸಾದವೂ ತತ್ತ್ವನಿಷ್ಠೆಯೂ ಪ್ರಥಮಸಿದ್ಧತೆಗಳೋ ಅವೆರಡನ್ನೂ ಅವರಲ್ಲಿ ನಾನು ಕಂಡಿದ್ದೇನೆ. ಅವರು ತಮಗೊಪ್ಪಿಸಿದ ಕಾರ್ಯವನ್ನು ಸೊಗಸಾಗುವಂತೆ ನಿರ್ವಹಿಸಿದ್ದಾರೆಂದು ನಾನು ಕೃತಜ್ಞನಾಗಿದ್ದೇನೆ. ಅವರ ಅನುವಾದವನ್ನು ಅನೇಕ ಭಾಗಗಳಲ್ಲಿ ನೋಡಿದ್ದೇನೆ. ಪದಶೈಲಿ ಲಲಿತವಾಗಿ ಕಾಂತಿವೀರ್ಯವಿಶಿಷ್ಟವಾಗಿ ಸುಂದರಕಾಂಡಕ್ಕೆ ಒಪ್ಪುವಂಥ ಶೈಲಿಯಿಂದ ಸುಂದರವಾಗಿದೆ. ಮೂಲದ ಸ್ವಾರಸ್ಯವು ಸಾಧ್ಯವಾದಷ್ಟು ಪೂರ್ಣವಾಗಿ ಕನ್ನಡಕ್ಕೆ ಬಂದಿದೆ. ಸಂಸ್ಕೃತ ಮೂಲದ ಕಡೆಗೆ ಕಣ್ಣು ತಿರುಗಿಸದೆ ಬರಿಯ ಕನ್ನಡ ವಚನ ಗ್ರಂಥವನ್ನೇ ಧಾರೆಯಾಗಿ ಓದಿದರೂ ಓದುಗರಿಗೆ ಸಂತೃಪ್ತಿಯಾಗುವಂತಿದೆ. ಕನ್ನಡವನ್ನೋದುತ್ತ ಓದುತ್ತ ನಡುನಡುವೆ ಮೂಲವನ್ನೂ ಅಷ್ಟಿಷ್ಟು ನೋಡುವವರು ಸಂಸ್ಕೃತದ ಪರಿಚಯವನ್ನೂ ಸಂಪಾದಿಸಿಕೊಂಡಂತೆ ಆಗುತ್ತದೆ.

ರಾಮಾಯಣ ಪ್ರಚಾರ ಒಂದು ಪುಣ್ಯಕಾರ್ಯ. ಆ ಪುಣ್ಯವನ್ನು ಶ್ರೀರಾಮಮಂದಿರದ ಅಧಿಕಾರಿಗಳು ಸಂಪಾದಿಸಿಕೊಂಡಿದ್ದಾರೆ. ಅವರೊಡನೆ ಹೀಗೆ ಲವಲೇಶವಾಗಿ ಸೇರಿಕೊಳ್ಳುವ ಅವಕಾಶವನ್ನು ಅವರು ನನ್ನ ಮಿತ್ರರು ಶ್ರೀ ಡಿ. ಸಿ. ಅನಂತರಾಮಯ್ಯನವರ ಮುಖಾಂತರ ನನಗೆ ಒದಗಿಸಿಕೊಟ್ಟಿದ್ದಾರೆ. ಶ್ರೀರಾಮಕೀರ್ತಿ ವಿಸ್ತರಕಾರ್ಯದಲ್ಲಿ ಸೇರಿದವರಿಗೆಲ್ಲ ಶ್ರೀಮದಾಂಜನೇಯಸ್ವಾಮಿಯ ಅನುಗ್ರಹವುಂಟೆಂದು ನಾನು ನಂಬಿದ್ದೇನೆ.

ಸರ್ವಲೋಕಶರಣ್ಯಾಯ
ಸತ್ಯಧರ್ಮೈಕಮೂರ್ತಯೇ ।
ಹನೂಮದ್ದೌತ್ಯತೃಪ್ತಾಯ
ಸೀತಾರಾಮಾಯ ಮಂಗಲಮ್‍ ॥ (೧೯೬೯)

Sunday, 14 January 2024

ಭಾಗ 8 - ಕಿಷ್ಕಿಂಧಾಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಸೀತಾನ್ವೇಷಪರಿಶ್ರಾಂತಂ
ಪಂಪಾಕ್ಷೇತ್ರಪ್ರಸಾದಿತಂ ।
ಹನೂಮತ್ಸಾಂತ್ವಿತಂ ಧ್ಯಾಯೇತ್‍
ಪ್ರಾಪ್ತಸುಗ್ರೀವಸೌಹೃದಮ್‍ ॥

ಕಿಷ್ಕಿಂಧಾಕಾಂಡ ಶ್ರೀಮದ್ರಾಮಾಯಣದ ಕಂಠಭಾಗ. ಅದರ ಶಿರೋಭಾಗವು ಯುದ್ಧಕಾಂಡ. ಅದು ರಾವಣಹನನರೂಪವಾದ ಶ್ರೀರಾಮ ವಿಜಯದ ಕಥೆ. ಅದರ ಭುಜಪರ್ಯಂತದ ಭಾಗ ಅರಣ್ಯಕಾಂಡ. ರಾವಣನ ಅಪರಾಧವಾದ ಸೀತಾಪಹರಣ ಪ್ರಕರಣಕ್ಕೆ ಅಲ್ಲಿಯವರೆಗೆ ಸನ್ನಿವೇಶಸಿದ್ಧತೆಯಾಯಿತು. ಆದರೆ ಸೀತಾಪಹಾರಕನಾರು? ಅವನೆಲ್ಲಿಯವನು? ಅವನೆಂಥವನು?–ಇದು ತಿಳಿಯದೆ ಶ್ರೀರಾಮಚಂದ್ರನ ಕಾರ್ಯ ಮುಂದಕ್ಕೆ ಸಾಗಲಾರದು. ಈ ಅವಶ್ಯಾಂಶಗಳನ್ನು ಒದಗಿಸುವುದು ಕಿಷ್ಕಿಂಧಾಕಾಂಡ.

ಕಿಷ್ಕಿಂಧಾ ಎಂದರೆ ಕನ್ನಡದಲ್ಲಿ “ಇಕ್ಕಟ್ಟಾದದ್ದು” ಎಂಬ ರೂಢಿಯ ಅರ್ಥವಿದೆ. ಬಹುಶಃ ಈ ಮಾತು ಸಂಸ್ಕೃತದ “ಕಿಷ್ಕು” ಎಂಬುದರಿಂದ ಬಂದಿರಬಹುದು. ಕಿಷ್ಕು ಎಂದರೆ ಗೇಣು. ಅಥವಾ ಚೋಟು. ಸಣ್ಣ ಪ್ರದೇಶ ಎಂದು ತಾತ್ಪರ್ಯ.

ಈ ಕಾಂಡದಲ್ಲಿ ಕಾವ್ಯಧಾರೆ ಎಂದಿನಂತೆ ಮನೋಹರವಾಗಿ ಹರಿಯುತ್ತದೆ. ಇದರಲ್ಲಿಯ ದೃಶ್ಯಗಳು ರಮಣೀಯವಾಗಿ ಸನ್ನಿವೇಶಗಳು ಕುತೂಹಲಕಾರಿಗಳಾಗಿವೆ. ಜಟಾಯು ಸಂಪಾತಿಗಳಿಗೆ ಸಂಭಂಧಪಟ್ಟ ಕಥಾಭಾಗ ಅತ್ಯಂತ ಸುಂದರವಾದದ್ದು. ಪಂಪಾಪ್ರದೇಶದ ವರ್ಣನೆ ಪ್ರಕೃತಿ ಸೌಭಾಗ್ಯವನ್ನು ಅನುಭವಕ್ಕೆ ತಂದುಕೊಡುತ್ತದೆ. ಕೇಶಿರಾಜನು

..... ಶಬ್ದದಿ– ।
ನಾವಾವಿಂದ್ರಿಯದ ವಿಷಯಮಂ ಶ್ರೋತದೊಳು– ।
ದ್ಭಾವಿಪ....

ಎಂದು ಹೇಳಿ ವಾಕ್ಕಿನ ಸಾಮರ್ಥ್ಯವನ್ನು ನಿರೂಪಿಸಿದ್ದಾನೆ. ಕಣ್ಣಿನೆದುರಿಗೆ ಇಲ್ಲದ್ದನ್ನು ಕಣ್ಣು ಸ್ವಯಂ ಅನುಭವಿಸುವಂತೆ ಮಾಡಬಲ್ಲದ್ದು ಕವಿಯ ವಾಕ್ಪ್ರಭಾವ. ಇದಕ್ಕೆ ದೃಷ್ಟಾಂತ ಶ್ರೀಮದ್ರಾಮಾಯಣದಲ್ಲಿ ಹೇರಳವಾಗಿ ದೊರೆಯುತ್ತದೆ. ಕಿಷ್ಕಂಧಾ ಕಾಂಡದಲ್ಲಿ ಅಂಥ ವರ್ಣನೆಗೆ ಅವಕಾಶ ಅಪಾರವಾಗಿ ದೊರೆಯಿತು ವಾಲ್ಮೀಕಿ ಮಹರ್ಷಿಗಳಿಗೆ. ಕಥಾಸನ್ನಿವೇಶದ ಕಲ್ಪನೆಯಲ್ಲಿಯೂ ಪಾತ್ರಾಭಿವ್ಯಕ್ತಿಯಲ್ಲಿಯೂ ಮಹಾಕವಿಯ ನೈಪುಣಿ ಎದ್ದು ಕಾಣುತ್ತದೆ.

ಕಾವ್ಯ ವ್ಯಾಸಂಗದ ಮೂಲಸೂತ್ರಗಳು

ಶ್ರೀಮದ್ರಾಮಾಯಣದಂಥ ಕಾವ್ಯವನ್ನು ಅನುಭವಿಸಬೇಕಾದರೆ ವಾಚಕನು ಸಮಾಹಿತಚಿತ್ತನಾಗಿ, ಅವಧಾನವುಳ್ಳವನಾಗಿ ವ್ಯಾಸಂಗ ಮಾಡಬೇಕು. ಅವಸರವಸರವಾಗಿ ಸರ್ಗ ಮುಗಿಸಬೇಕೆಂಬ ಆತುರದಲ್ಲಿರುವವನಿಗೆ ಕಾವ್ಯರಸ ದೊರೆಯಲಾರದು. ವಾಚಕನು ಸರ್ವದಾ ಮನಸ್ಸಿನಲ್ಲಿ ಧರಿಸಿರಬೇಕಾದ ಕೆಲವು ಮೂಲಸೂತ್ರಗಳನ್ನು ನಾನು ಪದೇ ಪದೇ ಅರಿಕೆಮಾಡಿದ್ದೇನೆ. ಈಗ ಅದನ್ನು ಮತ್ತೊಮ್ಮೆ ಜ್ಞಾಪಕಕ್ಕೆ ತರಬಹುದೆಂದು ತೋರುತ್ತದೆ.

1) ಕಾವ್ಯದೃಷ್ಟಿ: ಶ್ರೀಮದ್ರಾಮಾಯಣವು ಕಾವ್ಯ. ಮಹಾಕಾವ್ಯ. ಅದು ಬರಿಯ ಕಥೆಯಲ್ಲ, ಚರಿತ್ರೆಯ ಪುಸ್ತಕವಲ್ಲ, ಶಾಸ್ತ್ರಗ್ರಂಥವೂ ಅಲ್ಲ. ಕಾವ್ಯವನ್ನೋದುವ ಮನಸ್ಸಿನಿಂದ ಅದನ್ನು ಓದುಬೇಕು.

2) ಜೀವಸಂಸ್ಕಾರ: ಕಾವ್ಯದಲ್ಲಿ ಕಥೆಯುಂಟೆಂಬುದು ನಿಜ. ಆದರೆ ಕಾವ್ಯದ ಕಥೆ ಬರಿಯ ಕಥೆಯಲ್ಲ. ಮಹಾಕಾವ್ಯದ ಕಥೆ ಮನೋರಂಜಕ ಮಾತ್ರವಲ್ಲ. ಮಹಾಕಾವ್ಯದಲ್ಲಿ ಕಥೆಯು ಜೀವಸ್ಪರ್ಶಿಯಾದ ರಸನಾಳಿಕೆಗಳಲ್ಲಿ ಹರಿದುಬರುತ್ತದೆ. ಇಲ್ಲಿ ಮುಖ್ಯವಾದದ್ದು ಕಥೆಯ ಘಟನೆಗಿಂತ ಅದರಲ್ಲಡಗಿರುವ ರಸದ್ರವ್ಯ. ರಸಸಾಮಾಗ್ರಿಯಲ್ಲಿ ವಿನೋದಕ್ಕಿಂತ ಸಂಸ್ಕಾರಕಾರಕವಾದ ಗುಣ ಮುಖ್ಯ.

3) ಆತ್ಮಾರ್ಪಣಬುದ್ಧಿ: ರಸ ಮುಖ್ಯ, ಜೀವಸಂಸ್ಕಾರ ಮುಖ್ಯ–ಎಂದು ಹೇಳಿದ ಮೇಲೆ ಮಹಾಕಾವ್ಯವ್ಯಾಸಂಗ ಒಂದು ಮಹಾ ಅನುಷ್ಠಾನವೆಂದು ಸಿದ್ಧವಾಗುತ್ತದೆ. ಅನುಷ್ಠಾನಕ್ಕೆ ಅವಶ್ಯವಾದದ್ದು ಆತ್ಮಾರ್ಪಣಬುದ್ಧಿ: ಎಂದರೆ, ವಾಚಕನು ತನ್ನ ಸ್ವಂತ ಪ್ರಜ್ಞೆ, ತನ್ನ ಸ್ವಂತ ಪಾಂಡಿತ್ಯ, ಸ್ವಂತ ಚಾಲಾಕುತನ–ಇವನ್ನು ವರ್ಜಿಸಬೇಕು. ಈ ಅಹಂಕಾರವರ್ಜನೆಯಿಲ್ಲದಿದ್ದರೆ ಶರಣಾಗತಭಾವವಿಲ್ಲ. ಶರಣಾಗತಭಾವವಿಲ್ಲದಿದ್ದರೆ ವಾಚಾಕನು ಗ್ರಂಥವನ್ನು ಅನುಭವಿಸಲಾರ. ಈ ಮಾತು ಎಲ್ಲ ಕಲಾಭ್ಯಾಸಕ್ಕೂ, ಎಲ್ಲ ಆತ್ಮೋಪಾಸನೆಗೂ ಅನ್ವಯಿಸುವುದಾಗಿದೆ. ಒಂದಾನೊಂದು ಮಹಾವಿಷಯದ ಪೂರ್ಣಜ್ಞಾನ ನಮಗೆ ಉಂಟಾಗಬೇಕಾದರೆ ನಾವು ಆ ವಸ್ತುವಿನಲ್ಲಿ ಸೇರಿಕೊಳ್ಳಬೇಕು, ನಾವು ಆ ವಸ್ತುವಾಗಬೇಕು. ಇದೆ ತಲ್ಲೀನತೆ. ಈ ತಲ್ಲೀನತೆಯುಂಟಾಗುವುದು ಸ್ವಾಹಂಕಾರ ವರ್ಜನೆಯಿಂದ, ಸ್ವತಾವಿಸ್ಮೃತಿಯಿಂದ. ಸ್ವತಾವಿಸ್ಮೃತಿಯನ್ನುಂಟುಮಾಡುವ ಶಕ್ತಿ ಮಾಹಾಕಾವ್ಯದಲ್ಲಿಯೇ ಇರುತ್ತದೆ. ಆದರೆ ಅದರೊಡನೆ ಸಹಕರಿಸುವ ಯೋಗ್ಯತೆ ವಾಚಕನಲ್ಲಿರಬೇಕು.

4) ಯಥಾರ್ಥಗ್ರಹಣ: ಮೂರನೆಯ ಸೂತ್ರದಿಂದಲೇ ಸಿದ್ಧವಾಗುತ್ತದೆ ಮತ್ತೊಂದು ಸೂತ್ರ. ವಾಚಕನು ಕವಿಯ ವಾಕ್ಕನ್ನು ಯಥಾರ್ಥಬುದ್ಧಿಯಿಂದ ಗ್ರಹಿಸಬೇಕು. ಕಾವ್ಯವ್ಯಾಸಂಗಕಾಲದಲ್ಲಿ, ಆ ವ್ಯಾಸಂಗದ ಮಟ್ಟಿಗೆ, ಅವನು ತನ್ನ ಅಪನಂಬಿಕೆಗಳನ್ನೂ ಶಂಕೆಗಳನ್ನೂ ಬದಿಗಿರಿಸಬೇಕು. ಎಳೆಯ ಮಕ್ಕಳು ಅಜ್ಜಿ ಹೇಳುವ ಕಥೆಯನ್ನು ಅಕ್ಷರಕ್ಷರವೂ ಯಥಾರ್ಥವೆಂದು ಗ್ರಹಿಸಿ ಹೂಂಗುಟ್ಟುವಂತೆ ನಾವು ವಾಲ್ಮೀಕಿಯ ಸನ್ನಿಧಿಯಲ್ಲಿ ನಡೆದುಕೊಳ್ಳಬೇಕು. ಶ್ರದ್ಧೆ ವಿಶ್ವಾಸಗಳಿಲ್ಲದಿದ್ದರೆ ಕಾವ್ಯದ ಕಾವ್ಯಾಂಶ ಹಾರಿ ಹೋಗುತ್ತದೆ. ಬೆಂಕಿಯಮೇಲಿನ ಕಾವಲಿಯಲ್ಲಿ ಹಾಕಿದ ಹೂವಿನ ಸುವಾಸನೆಯಂತೆ.

5) ಪ್ರವಾಹಾರ್ಥದೋರಣೆ: ಕಾವ್ಯಪದಗಳ ಧೋರಣೆಯ ಅರ್ಥವನ್ನು ದೃಷ್ಟಿಯಲ್ಲಿರಿಸಿಕೊಳ್ಳಬೇಕು. ಪದಪದವನ್ನೂ ಅಕ್ಷರಕ್ಷರವನ್ನೂ ವಿಂಗಡಿಸಿ ನೋಡಬಾರದು. ಕಮಲದ ಹೂವಿನಲ್ಲಿ ಸಾವಿರ ರೇಕು ಇರುತ್ತದೆ. ಒಂದೊಂದು ರೇಕಿಗೂ ಏನು ಅರ್ಥ? ಏನು ತಾತ್ಪರ್ಯ?–ಎಂದು ಬಿಡಿಸಿ ನೋಡಿದರೆ ಹೂವಿನ ಸಮಗ್ರಸ್ವಾರಸ್ಯ ಹೋಯಿತು; ಪ್ರತ್ಯೇಕಾಂಶದಲ್ಲಿ ಸೌಂದರ್ಯವಿಲ್ಲ. ಮಹಾಕವಿಯ ವಾಗ್ಧೋರಣೆಯೇ ಒಂದು ಸೊಗಸು. ಆದರೆ ಮಳೆಗಾಲದಲ್ಲಿ ನದಿಯಲ್ಲಿ ಬಂದ ಮಹಾಪ್ರವಾಹದಂತಿರುತ್ತವೆ. ಅದರ ಒಟ್ಟನ್ನು ನೋಡಿ ಅದರ ಸೊಗಸನ್ನು ನಾವು ಅನುಭವಿಸಬೇಕು.

ಈಗ ಒಂದೆರಡು ಪ್ರಶ್ನೆಗಳ ವಿಚಾರ.

ಅಸಂಗತ ತರ್ಕ

ಕೆಲವು ವರ್ಷಗಳ ಕೆಳಗೆ ಒಬ್ಬ ಸ್ನೇಹಿತರಿಗೂ ನನಗೂ ನಡೆದ ಒಂದು ಚರ್ಚೆಯ ಭಾಗವನ್ನು ಇಲ್ಲಿ ಉದಾಹರಿಸುತ್ತೇನೆ. ಪ್ರ: ರಾಮನೂ ಆಂಜನೇಯನೂ ಮಾತನಾಡಿದರಂತಲ್ಲ. ಅದು ಯಾವ ಭಾಷೆಯಲ್ಲಿ?

ಉ: ಕನ್ನಡದಲ್ಲಿ.

ಪ್ರ: ನೀವು ಹಾಗೆ ಹೇಳಲು ಏನು ಆಧಾರ?

ಉ: ರಾಮಾಯಣ ಗ್ರಂಥವೇ ಆಧಾರ. ಅದರಲ್ಲಿ ಹೇಳಿದೆ, ರಾಮ ಆಂಜನೇಯರು ಸೇರಿದುದು ಕಿಷ್ಕಿಂಧೆಯಲ್ಲಿ ಎಂದು. ಕಿಷ್ಕಿಂಧೆಯಿರುವುದು ಕನ್ನಡ ದೇಶದಲ್ಲಿ. ಆದದ್ದರಿಂದ ಅವರು ಕನ್ನಡದಲ್ಲಿಯೇ ಮಾತನಾಡಿರಬೇಕು.

ಪ್ರ: ಹಾಗಾದರೆ ರಾಮನಿಗೆ ಕನ್ನಡ ಬರುತ್ತಿತ್ತು ಎನ್ನುತ್ತೀರಾ?

ಉ: ಹಾಗೆನ್ನುತ್ತೇನೆ.

ಪ್ರ: ಅಲ್ಲ ಸ್ವಾಮಿ, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಲ್ಲಿ ಕನ್ನಡ ಇತ್ತೆ?

ಉ: ಅಯೋಧ್ಯೆಯಲ್ಲಿ ಕನ್ನಡ ಇಲ್ಲದಿದ್ದರೂ ರಾಮನು ಕನ್ನಡ ಕಲಿತುಕೊಂಡಿರಬೇಕು. ನಿಮ್ಮ ಅಭಿಪ್ರಾಯವೇನು?

ಪ್ರ: ರಾಮನಿಗೆ ಸಂಸ್ಕೃತ ಬರುತ್ತಿತ್ತೆಂದು ಊಹಿಸುವುದು ಯುಕ್ತವಾಗಿದೆ. ಅವರಿಬ್ಬರೂ ಸಂಸ್ಕೃತದಲ್ಲಿಯೇ ಮಾತನಾಡಿದರೆಂದು ಹೇಳುವುದಾದರೆ ಆಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆಂದು ಹೇಳಬೇಕಾಗುತ್ತದಲ್ಲ?

ಉ: ಹಾಗೆಯೇ ಹೇಳೋಣ. ಆಂಜನೇಯನಿಗೆ ಸಂಸ್ಕೃತ ಬರುತಿತ್ತೆನ್ನಲು ನಾನು ಯಾವಾಗಲೂ ಸಿದ್ಧನಾಗಿದ್ದೇನೆ!

ಪ್ರ: ಏನು ಸ್ವಾಮಿ, ಇದು ಹೇಗೆ ಹೊಂದಾವಣೆಯಾಗುತ್ತದೆ? ರಾಮನಿಗೆ ಸಂಸ್ಕೃತ ಬರುತ್ತಿರಬಹುದು. ಆಂಜನೇಯ ಶುದ್ಧ ಕಪಿ. ಅದಕ್ಕೆ ಸಂಸ್ಕೃತ ಬರೋಣವೆಂದರೇನು?

ಉ: ಸ್ವಾಮಿ, ನೀವು ಆಂಜನೇಯನು ಸಮುದ್ರ ಹಾರಿದ ಕಪಿ ಎಂಬುದನ್ನು ಮರೆತು ಬಿಟ್ಟಿದ್ದೀರಿ. ನಿಮ್ಮಂಥವರ ದೃಷ್ಟಿ ಒಂದು. ಬೇರೆ ಇನ್ನೊಂದು ದೃಷ್ಟಿಯುಂಟು. ರಾಮನೂ ಹನುಮಂತನೂ ದೈವಾಂಶದಿಂದುಂಟಾದವರು. ಅವರಿಗೆ ಭಾಷೆ ಕಲಿತು ಕೊಳ್ಳುವುದು ಅಸಾಧ್ಯವೆ? ಅವರಿಬ್ಬರೂ ಸಂಸ್ಕೃತ ಕನ್ನಡ ಮಾತ್ರವೇ ಅಲ್ಲ, ಹಿಂದಿ ಇಂಗ್ಲಿಷುಗಳನ್ನೂ ಕಲಿತುಕೊಳ್ಳುವ ಶಕ್ತಿಯಿದ್ದವರು. ತಮಿಳು, ತೆಲುಗು, ಮರಾಠಿ, ಗುಜರಾತಿಗಳನ್ನೂ ಕಲಿತುಕೊಳ್ಳಬಲ್ಲವರು.

ಪ್ರ: ಹಾಗದರೆ ಏನು ನಿಷ್ಕರ್ಷೆ?

ಉ: ನಿಷ್ಕರ್ಷೆ ಇಷ್ಟು: ಅವರಿಬ್ಬರೂ ತಮಗಿಬ್ಬರಿಗೂ ಬರುತ್ತಿದ್ದ ಯಾವುದೋ ಭಾಷೆಯಲ್ಲಿ ಮಾತನಾಡಿದರು. ಇಲ್ಲಿ ನಮಗೆ ಮುಖ್ಯವಾದದ್ದು ಅವರು ಯಾವ ಭಾಷೆಯಲ್ಲಿ ಮಾತನಾಡಿದರೆಂಬುದಲ್ಲ; ಏನನ್ನು ಮಾತನಾಡಿದರೆಂಬುದು. ಅವರು ಪರಸ್ಪರ ತಿಳಿಸಬೇಕಾಗಿದ್ದ ಸಂಗತಿ ಯಾವುದು? ಅದನ್ನು ಯಾವ ಮರ್ಯಾದೆಯಿಂದ, ಎಂಥ ನವುರಿನಿಂದ ತಿಳಿಸಿದರು?–ಇದು ನಮಗೆ ಮುಖ್ಯ. ಭಾಷೆಯ ಪ್ರಶ್ನೆ ಇಲ್ಲಿ ಸಂಪೂರ್ಣವಾಗಿ ಅಸಂಗತ.

ರಸಭಂಗ

ಈಗ ವ್ಯಾಸಂಗಿಗಳಲ್ಲಿ ಒಂದು ಬಿನ್ನಹ ಮಾಡಬೇಕಾಗಿದೆ: ಕಾವ್ಯೋಪಾಸನೆಯ ನಡುವೆ ಇಂಥ ತರ್ಕಗಳನೆತ್ತಬಾರದೆಂಬುದು. ನಮ್ಮ ವ್ಯಾಖ್ಯಾನಕರ್ತರೇ ಈ ನಿಯಮವನ್ನು ಉಲ್ಲಂಘಿಸಿ ರಸಭಂಗಕ್ಕೆ ಅವಕಾಶಮಾಡಿದ್ದಾರೆ. ಹೀಗೆ ತರ್ಕದಿಂದ ರಸಭಂಗಮಾಡುವುದು ಕವಿಯ ಅಪರಾಧವೆಂದು ನಾನೆಣಿಸಿದ್ದೇನೆ.

ಕಾವ್ಯವು ಮನುಷ್ಯ ಜೀವನದ ರಸಸನ್ನಿವೇಶದರ್ಶನ. ಮಹಾಕಾವ್ಯವು ಒಂದು ಮಹಾ ಜೀವನದ ಒಂದು ಮಹಾರಸಸನ್ನಿವೇಶದ ದರ್ಶನ. ಶಕುಂತಲೆ ಋಷ್ಯಾಶ್ರಮದಿಂದ ಗಂಡನ ಮನೆಗ ಹೋಗುವ ಸಂದರ್ಭದಲ್ಲಿ ಕಣ್ವರು ಆಶ್ರಮದ ಗಿಡಬಳ್ಳಿಗಳು ಆಕೆಗೆ ಅನುಜ್ಞೆಕೊಡಬೇಕೆಂದು ಬೇಡಿದರಂತೆ. ಗಿಡಬಳ್ಳಿಗಳು ದುಃಖಿಸುವುದೆಂದರೇನು? ಅನುಜ್ಞೆ ಕೊಡುವುದೆಂದರೇನು? ಯಕ್ಷನು ಮೇಘವನ್ನು ದೂತನಾಗೆಂದು ಹೇಳುವುದೆಂದರೇನು? ಮೇಘಕ್ಕೆ ಹೃದಯಭಾವಗಳುಂಟೆ? ಇಂಥ ಪ್ರಶ್ನೆಗಳನ್ನು ಚರ್ಚಿಸುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು, ಕಾವ್ಯವ್ಯಾಸಂಗಕ್ಕಲ್ಲ. ಅಚೇತನದಲ್ಲಿ ಚೈತನ್ಯವನ್ನು ಆರೋಪಿಸಿ ಅದು ಸಚೇತನವಾಗಿದ್ದಿದ್ದರೆ ಹೇಗೆ ನಡೆದಿದ್ದಿರಬಹುದೋ ಹಾಗೆ ನಡೆಯಿತೆಂದು ಭಾವಿಸಿಕೊಳ್ಳುವುದು ಕವಿಪ್ರಪಂಚಕ್ಕೆ ಸಹಜವಾದ ರೀತಿ.

ಕಪಿಲೋಕಸೃಷ್ಟಿ ಏಕೆ?

ಇದಕ್ಕಿಂತ ಹೆಚ್ಚು ಕಚಕುಳಿಯಿಡುವ ಪ್ರಶ್ನೆ ಬೇರೆ ಇದೆ. ವಾಲ್ಮೀಕಿಗಳು ತಮ್ಮ ಪ್ರಪಂಚದೊಳಕ್ಕೆ ಕಪಿಲೋಕವನ್ನು ಏಕೆ ತಂದುಕೊಂಡರು? ಆ ಕಡೆ ಅಯೋಧ್ಯೆಯಲ್ಲಿಯೂ ಮಿಥಿಲೆಯಲ್ಲಿಯೂ ಮನುಷ್ಯಲೋಕ. ಅದು ಸಹಜವಾದದ್ದು. ನಾವೆಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಇತ್ತಕಡೆ ದಂಡಕಾರಣ್ಯದಲ್ಲಿಯೂ ಲಂಕೆಯಲ್ಲಿಯೂ ರಾಕ್ಷಸಲೋಕ. ರಾಕ್ಷಸರೆಂಬ ಪ್ರಾಣಿವರ್ಗವಿದ್ದದ್ದನ್ನು ವೇದದಲ್ಲಿ ಹೇಳಿದೆ. ಮತ್ತು ಗುಣದಲ್ಲಿ ರಾಕ್ಷಸರನ್ನು ಹೋಲುವಂಥ ಮನುಷ್ಯಜಾತಿ ಇರುವುದನ್ನು ನಾವು ಕಣ್ಣಾರ ಕಾಣುತ್ತಿದ್ದೇವೆ. ಆದದ್ದರಿಂದ ರಾಕ್ಷಸಲೋಕವನ್ನು ಒಪ್ಪಿಕೊಳ್ಳೋಣ. ಆದರೆ ಮನುಷ್ಯರಿಗೂ ರಾಕ್ಷಸರಿಗೂ ನಡುವಣ ವಾನರಲೋಕ ಮಿಕ್ಕೆರಡು ಲೋಕಗಳ ವ್ಯಾಪಾರಗಳನ್ನೂ ಪ್ರವೇಶಿಸಿ ಅವಾಂತರ ಮಾಡಿದ್ದು ಎಲ್ಲಿಯ ಯೋಜನೆ! ವ್ಯಾಸರ ಕಲ್ಪನೆಯಲ್ಲಿ ಇಂಥಾದ್ದಿಲ್ಲ. ಈ ವಿಲಕ್ಷಣ ಲೋಕವನ್ನು ವಾಲ್ಮೀಕಿಗಳು ಏಕೆ ಸೃಷ್ಟಿಮಾಡಿದರು? ಕಪಿಗಳೆಲ್ಲಿಯಾದರೂ ಮನಷ್ಯರ ಸಂತೋಷದಲ್ಲಿಯಾಗಲಿ ದುಃಖದಲ್ಲಿಯಾಗಲಿ ಪಾಲುದಾರರಾಗುವುದುಂಟೆ? ವಾನರನು ನರನೊಡನೆ ಸುಖದುಃಖ ಸಹಭಾಗಿಯಾದದ್ದುಂಟೆಂಬುದನ್ನು ನಾವು ಒಪ್ಪಿದ ಮೇಲೆ ನರಭಾಷೆಯನ್ನು ವಾನರನು ಕಲಿತನೆಂಬುದು ಅಸಾಧ್ಯದ ಮಾತಾಗಲಾರದು. ಆದರೆ ಮನುಷ್ಯರ ನೀತಿನಿಯಮಗಳನ್ನೂ ಉತ್ಸಾಹ ವಿಷಾದಗಳನ್ನೂ ಅನುಭವಿಸಿ ನಡೆದುಕೊಂಡ ವಾನರರು ಆಂಜನೇಯ ಸುಗ್ರೀವಾದಿಗಳು. ಇದು ಚೋದ್ಯದ ಸಂಗತಿ.

ಇಲ್ಲಿ ಉತ್ತರ ಕೊಡಲು ನಮಗೆ ಸಹಾಯಮಾಡುವ ಶಕ್ತಿ ಉಹಾಪೋಹನವೊಂದೇ, ಗ್ರಂಥ ಪ್ರಮಾಣವೇನೂ ಕಾಣುವುದಿಲ್ಲ. ವಾಲ್ಮೀಕಿಗಳು ಸ್ವೋಪಜ್ಞತೆಯಿಂದ ಮಾಡಿದ ಸೃಷ್ಟಿ ಕಪಿರಾಜ್ಯ. ಭಾರತ ಕಥೆಯಲ್ಲಿ ವ್ಯಾಸರು ನಾಗಲೋಕವನ್ನೂ ಪ್ರಮೀಳಾಲೋಕವನ್ನೂ ತಮ್ಮ ಪ್ರಪಂಚದೊಳಕ್ಕೆ ತಂದಿದ್ದಾರೆ. ಆ ಲೋಕಗಳ ಕ್ಷಣವುಳ್ಳ ಜನಾಂಗಗಳು ವಾಸ್ತವವಾಗಿ ಉಂಟೆಂದು ಚಾರಿತ್ರಿಕರೂ ವಂಶತತ್ವವಿಜ್ಞಾನಿಗಳೂ ಹೇಳುತ್ತಾರೆ. ಆದರೆ ಕಪಿಜನಾಂಗವು ವಾಸ್ತವಿಕವೆಂಬುದಕ್ಕೆ ಅಂಥ ಸಮರ್ಥನೆಯೇನೂ ಕಾಣುವುದಿಲ್ಲ. ವಾಲಿಸುಗ್ರೀವರ ಲೋಕವು ಸಂಪೂರ್ಣವಾಗಿ ವಾಲ್ಮೀಕಿಗಳ ನಿರ್ಮಾಣವೆಂದು ತೋರುತ್ತದೆ. ಕಿಷ್ಕಿಂದೆಯು ವಾಲ್ಮೀಕಿಗಳ ಖಯಾಲಿಯಿಂದ (Fancy) ಉತ್ಪನ್ನವಾದದ್ದು. ಮನುಷ್ಯಲೋಕವನ್ನು ಕೊಂಚ ಹೇಳನಮಾಡಬೇಕೆಂದು ವಾಲ್ಮೀಕಿಗಳಿಗೆ ಅನ್ನಿಸಿರಬೇಕು. ನಮ್ಮ ಕಾಲದಲ್ಲಿ ಸಮಾಜಶ್ರೇಷ್ಠರೆನಿಸಿಕೊಂಡವರಲ್ಲಿ ನಾಯಿಮರಿಯನ್ನು ಸಾಕುವ ಫ್ಯಾಷನ್‍ ಬೆಳೆದಿದೆಯಷ್ಟೆ? ನಾಯಿಗೆ ಇದೆಷ್ಟು ದೊಡ್ಡತನವೆಂದು ಅವರನ್ನು ಕೇಳಿದರೆ ಅವರು ಹೇಳುತ್ತಾರೆ: “ಮನುಷ್ಯನಿಗಿಂತ ಶ್ರೇಷ್ಠವಾದ ಪ್ರಾಣಿ ನಾಯಿ; ನಾಯಿ ಸತ್ಯಸಂಧವಾದದ್ದು; ನಾಯಿಯಲ್ಲಿರುವ ಕೃತಜ್ಞತೆಯ ಗುಣ ಮನುಷ್ಯನಲ್ಲೆಲ್ಲಿದೆ?” –ಎಂದು. ಹೀಗೆ ಒಂದು ದೃಷ್ಟಿಯಿಂದ ನಾಯಿ ಉತ್ತಮ ಜಂತುವೆಂದು ಹೇಗೆ ಒಪ್ಪಿಕೊಳ್ಳಲಾಗುತ್ತದೋ ಹಾಗೆಯೇ ಇನ್ನೊಂದು ದೃಷ್ಟಿಯಿಂದ ಕಪಿಯು ಮನುಷ್ಯನಿಗಿಂತ ಉತ್ತಮವಾದದ್ದೆಂದು ಕಿಷ್ಕಿಂಧಾಕಾಂಡದ ಕಥೆಯಿಂದ ತೋರುತ್ತದೆ.

ಯಾಂತಿ ನ್ಯಾಯಪ್ರವೃತ್ತಸ್ಯ
ತಿರ್ಯಂಚೋಽಪಿ ಸಹಾಯತಾಮ್‍ ।
ಅಪಂಥಾನಂ ತು ಗಚ್ಛಂತಂ
ಸೋದರೋಽಪಿ ವಿಮುಂಚತಿ ॥

ನ್ಯಾಯಕ್ಕೆ ತಿರ್ಯಗ್ಜಂತುಗಳೂ ಸಹಾಯಮಾಡುತ್ತವೆ. ಉದಾಹರಣೆ, ಕಿಷ್ಕಿಂಧೆಯ ಕಪಿಗಳು. ದುರ್ಮಾರ್ಗಿಯಾದವನನ್ನು ಒಡಹುಟ್ಟಿದವನೂ ತೊರೆದುಬಿಡುತ್ತಾನೆ. ಉದಾಹರಣೆ, ವಿಭೀಷಣ.

ಇಂಥ ಅಭಿಪ್ರಾಯವೂ ವಾಲ್ಮೀಕಿಗಳ ಮನಸ್ಸಿನಲ್ಲಿತ್ತೆಂದೂ ಅನ್ನಿಸುತ್ತದೆ. ಮನುಷ್ಯ ಜಾತಿಯವರು ತಾವು ಮಾತ್ರವೇ ಧರ್ಮಜ್ಞರು, ನ್ಯಾಯಾನ್ಯಾಯ ವಿವೇಕಿಗಳು–ಎಂದು ಜಂಬಪಟ್ಟುಕೊಳ್ಳಬೇಕಾಗಿಲ್ಲ. ಧರ್ಮವಿವೇಕವೂ ನ್ಯಾಯದೃಷ್ಟಿಯೂ ಮನುಷ್ಯರಿಗಿಂತ ಕೆಳಗಿನವರೆನಿಸಿಕೊಂಡಿರುವ ಕಪಿಗಳಲ್ಲಿಯೂ ಇರುತ್ತದಂತೆ. ಕಪಿಗಳ ನ್ಯಾಯತತ್ಪರತೆಯ ಸೂಚನೆ ರಾಮಾಂಜನೇಯರ ಪ್ರಥಮ ಸಮಾಗಮದಲ್ಲಿಯೇ ದೊರೆಯುತ್ತದೆ:

ಸುಗ್ರಿವೋ ನಾಮ ಧರ್ಮಾತ್ಮಾ
ಕಶ್ಚಿದ್ವಾನರಯೂಥಪಃ ॥ ಸರ್ಗ ೩, ಶ್ಲೋಕ ೨೦

ಇಂಥ ವಾಕ್ಯಗಳು ಪದೇ ಪದೇ ಬರುತ್ತದೆ. ಕಿಷ್ಕಿಂಧೆಯಲ್ಲಿ ಮನುಷ್ಯ ಸಮಾಜದಲ್ಲಿರುವಂತೆ ಮಾನಮರ್ಯಾದೆಗಳ ತಿಳಿವಳಿಕೆಯೂ ಸಭ್ಯ ನೀತಿಯ ಪರಿಜ್ಞಾನವೂ ಇತ್ತೆಂದು ಸ್ಪಷ್ಟವಾಗುತ್ತದೆ.

ಕವಿಯು ಇಂಥ ಮನುಷ್ಯರಾಜ್ಯ ಮತ್ತೊಂದನ್ನು ಕಲ್ಪನೆಮಾಡುವುದು ಕಷ್ಟವಾಗಿರಲಿಲ್ಲ. ದಶರಥನ ಕಾಲದಲ್ಲಿ ನಾನಾ ರಾಜ್ಯಗಳೂ ರಾಜಾಧಿರಾಜರುಗಳೂ ಬೇರೆ ಎಷ್ಟೋ ಇದ್ದರು. ಸೀತಾಸ್ವಯಂವರ ಕಾಲದಲ್ಲಿ ಮಿಥಿಲಾಪಟ್ಟಣದಲ್ಲಿ ಎಷ್ಟೋ ಮಂದಿ ರಾಜರುಗಳು ಅಹಮಹಮಿಕೆಯಿಂದ ನೆರೆದಿದ್ದರು. ಅಂಥ ಇನ್ನೊಬ್ಬ ರಾಜನನ್ನೂ ವಾಲ್ಮೀಕಿಗಳು ಸುಲಭವಾಗಿ ಕಟ್ಟಬಹುದಾಗಿತ್ತು. ಹಾಗಿಲ್ಲದೆ ಕಪಿರಾಜ್ಯವನ್ನು ಸೃಷ್ಟಿಮಾಡಿದ್ದು ವಾಲ್ಮೀಕಿಗಳ ಒಂದು ವಿಶೇಷ ಮನಃಪ್ರವೃತ್ತಿಯೆಂದು, ಅಥವಾ ಒಂದು ವಿಶೇಷ ಮನೋಲೀಲೆ ಎಂದು ಬಾವಿಸಬೇಕಾಗುತ್ತದೆ. ಮನುಷ್ಯ–ರಾಕ್ಷಸರ ನಡುವೆ ಒಂದು ವಿನೋದವನ್ನು ಕಲ್ಪಿಸುವುದು ಅವರ ತಾತ್ಪರ್ಯವಾಗಿದ್ದಿರಬಹುದು.

ಅಯೋಧ್ಯೆಯ ಕಥೆ ಹೃದಯಭೇದಕವಾದದ್ದು. ಲಂಕೆಯದಂತೂ ಭಯಂಕರವಾದದ್ದು. ಎರಡರ ನಡುವೆ ಕೊಂಚ ಮನಸ್ಸಿನ ಉದ್ವೇಗವನ್ನು ಇಳಿಸುವ ಒಂದು ರಚನೆ ಯುಕ್ತವೆಂದು ವಾಲ್ಮೀಕಿಗಳಿಗನ್ನಿಸಿರಬೇಕು. ಶ್ರೀರಾಮ ಕೂಡ ಹಾಸ್ಯಪ್ರಿಯನೆಂದು ಅಲ್ಲಲ್ಲಿ ಕಾಣಬರುತ್ತದೆ. ವಾಲ್ಮೀಕಿಗಳು ಒಂದು ಉಗ್ರವಾದ ಹಠವನ್ನು ತೊಟ್ಟು ಹುಬ್ಬು ಬಿಗಿದು ಔಡುಕಚ್ಚಿ ಕುಳಿತಿದ್ದವರೆಂದು ನನಗನ್ನಿಸುವುದಿಲ್ಲ. ಅವರು ಸೌಮ್ಯವುಳ್ಳವರು ಸರಳರು ವಿನೋದಪ್ರಿಯರು. ತಾವು ನಕ್ಕು ಇತರರನ್ನು ನಗಿಸುವುದರಲ್ಲಿ ಸಂತೋಷಪಡುವವರು. ವಿನೋದಕ್ಕಾಗಿ ಒಂದು ಮನೋಲೀಲೆಯಿಂದ ಅವರು ಕಪಿರಾಜ್ಯವನ್ನು ನಿರ್ಮಿಸಿರಬೇಕೆಂದು ನನಗನ್ನಿಸುತ್ತದೆ. ಇದಕ್ಕೆ ಇತರ ನಿದರ್ಶನಗಳೂ ಇವೆ. ಸುಂದರಕಾಂಡದಲ್ಲಿ ಆಂಜನೇಯನು ಕೃತಕೃತ್ಯನಾಗಿ ಹಿಂದಿರುಗಿದ ವಾರ್ತೆಯಿಂದ ಹರ್ಷಾವೇಶದಲ್ಲಿದ್ದ ಕಪಿಗಳು ಮಧುವನವನ್ನು ಧ್ವಂಸಮಾಡಿದ ವರ್ಣನೆಯನ್ನು ನೋಡಬಹುದು (ಸರ್ಗ ೬೨). ಹೀಗೆ ವಾಲ್ಮೀಕಿಗಳ ಮನಸ್ಸು ಮನುಷ್ಯಗರ್ವಭಂಗ, ಕಿಂಚಿದುಪಹಾಸ–ಈ ಎರಡು ಉದ್ದೇಶಗಳನ್ನೊಳಗೊಂಡು ಕಲ್ಪಿಸಿದ್ದು ಕಪಿರಾಜ್ಯ.

ಚರಿತ್ರೆಯಲ್ಲ

ಮೊದಲೇ ವಿಜ್ಞಾಪಿಸಿದ್ದೇನೆ. ಮಹಾಕಾವ್ಯವ್ಯಾಸಂಗಿಯು ಕಥಾಘಟನೆಗಳ ಸಾಧ್ಯಾಸಾಧ್ಯತೆಯ ವಿಷಯದಲ್ಲಿ ಉದಿಸುವ ಸಂದೇಹಗಳನ್ನೂ ಶಂಕೆಗಳನ್ನೂ ಬದಿಗಿರಿಸಬೇಕೆಂದು. ಕಾವ್ಯವು ಚರಿತ್ರೆ (History) ಅಲ್ಲ. ಕಾವ್ಯವು ಮುಖ್ಯವಾಗಿ ಅಂತರಂಗ ಪ್ರಪಂಚವನ್ನು ಕುರಿತದ್ದು, ಚರಿತ್ರೆಯು ಮುಖ್ಯವಾಗಿ ಬಹಿರಂಗಪ್ರಪಂಚವನ್ನು ಕುರಿತದ್ದು. ಚರಿತ್ರೆಗೆ ಬೇಕಾದದ್ದು ಸಾಮಾನ್ಯವಾದ ಮನುಷ್ಯಲೋಕ; ಮತ್ತು ಸಾಮಾನ್ಯ ಲೋಕದಲ್ಲಿ ಒಪ್ಪಿಕೆಗೆ ಬರುವ ರುಜುವಾತುಗಳು: ದಾಖಲೆಗಳು, ತಾರೀಖುಗಳು, ಕೈಫಿಯತ್ತುಗಳು, ಇತ್ಯಾದಿ. ಅಂತರಂಗಲೋಕದಲ್ಲಾದರೋ ಮುಖ್ಯವಾದವು ಅನುಭವಗಳು. ಕಪಿ ಹೇಗೆ ಸಂತೋಷಪಟ್ಟಿತು, ಅದರ ಸಂತೋಷವನ್ನು ಅದು ಹೇಗೆ ವ್ಯಕ್ತಪಡಿಸಿತು, ಅದನ್ನು ನೋಡಿದಾಗ ನೋಡಿದವರ ಮನಸ್ಸಿಗೆ ಏನನ್ನಿಸಿತು–ಹೀಗೆ. ಆದದ್ದರಿಂದ ಯಾರು ಮಹಾಕಾವ್ಯವು ಚಾರಿತ್ರಿಕವಾಗಿಲ್ಲವೆಂದು ಬೊಬ್ಬೆಯಿಡುತ್ತಾರೋ ಅವರು ಮಲ್ಲಿಗೆ ಹೂವಿನ ರಾಶಿಯಲ್ಲಿ ಗೊಬ್ಬರದ ಗುಣವಿಲ್ಲವೆಂದು ಕೊರಗುವವರು.

ಆಕಾರ ವಿಕಾರಗಳಿಗಿಂತ ಅಂತರಂಗಭಾವ ಮುಖ್ಯವೆಂದು ಸೂಚಿಸುವುದೂ ವಾಲ್ಮೀಕಿಗಳ ಆಶಯವಿದ್ದಿರಬಹುದು.

ಗುಣಾಃ ಪೂಜಾಸ್ಥಾನಂ ಗುಣಿಷು
ನ ಚ ಲಿಂಗಂ ನ ಚ ವಯಃ ॥

ಕಾವ್ಯವೆಂದರೆ ಜೀವನದರ್ಶನ; ಈ ದರ್ಶನದಲ್ಲಿ ಉಂಟಾಗುವ ರಸಸನ್ನಿವೇಶಗಳ ಅನುಭವ. ಮಹಾಕಾವ್ಯವೆಂದರೆ ಮಹಾಜೀವನದರ್ಶನ; ಮಹಾಜೀವನದಲ್ಲಿ ಕಾಣಲಾಗುವ ರಸಗಳ ಅನುಭವ. ಸೀತಾ ರಾಮ ಭರತ ಲಕ್ಷ್ಮಣಾದಿಗಳ ಮಹಾ ಪರೀಕ್ಷೆಗಳ ದರ್ಶನದಿಂದಲೂ ಆ ಪರೀಕ್ಷೆಗಳಿಗೆ ಅವರು ಪ್ರತ್ಯುತ್ತರರೂಪವಾಗಿ ತೋರಿಸುವ ಮಹಾಚರ್ಯೆಗಳಿಂದಲೂ ಹೊರಹೊಮ್ಮುವ ಮಹಾರಸಗಳ ಅನುಭವ.

ರಸವೆಂದರೇನು?

ರಸವೆಂಬುದು ನಮಗೆ ಇಷ್ಟವಾದ ಹೃದಯಾನುಭವವನ್ನು ಮಾಡಿಸಿಕೊಡಬಲ್ಲ ದ್ರವ್ಯವಿಶೇಷ. ನಾವು ಒಂದಾನೊಂದು ಸಂದರ್ಭವನ್ನು ಕಂಡಾಗ ಅಥವಾ ಕೇಳಿದಾಗ ನಮ್ಮ ಅಂತರಂಗದಲ್ಲಿ “ಅಯ್ಯೊ!” ಎಂದಾಗಲಿ, “ಆಹಾ!” ಎಂದಾಗಲಿ, “ಹೊಹೊ!” ಎಂದಾಗಲಿ, “ಭೇಷ್‍!” ಎಂದಾಗಲಿ ಎನ್ನುವಂತೆ ಮಾಡಿಸುವ ಸಂಗತಿ ಯಾವುದೋ ಅದು ರಸಮೂಲ. ಆ ವಿಶೇಷಗುಣ ಆ ಸಂದರ್ಭದಲ್ಲಿರುವುದರಿಂದಲೇ ನಮ್ಮ ಅಂತರಂಗದಲ್ಲಿ ಒಂದು ಚಲನೆಯುಂಟಾಗಿ, ಒಂದು ಜೀವನಪರಾಮರ್ಶೆ ಪ್ರಚೋದಿತವಾಗುತ್ತದೆ. ಅದೇ ರಸಾನುಭವ. ಎಲ್ಲಿ ಹೀಗೆ ಅಂತರಂಗವನ್ನು ಚುಚ್ಚುವ ಅಥವಾ ಕಲಕುವ ಅಥವಾ ಕೆಣಕುವ ಪ್ರೇರಣೆಯಿಲ್ಲವೋ ಅಲ್ಲಿ ರಸವಿಲ್ಲ.

ರಸವೆಂಬುದು ಬರಿಯ ಶಬ್ದಚಮತ್ಕಾರವಲ್ಲ. ಶಬ್ದಬಾಹುಳ್ಯವೂ ಅಲ್ಲ. ಅಥವಾ ವಾಕ್ಯರಚನೆಯ ವಿಶೇಷವೂ ಅಲ್ಲ. ಅದು ಹೃದಯಸ್ಪರ್ಶನಶಕ್ತಿಯುಳ್ಳ ದ್ರವ್ಯ. ಆ ದ್ರವ್ಯದ ಮೂಲಸ್ಥಾನ ಒಂದು ಮಾನುಷಸನ್ನಿವೇಶದಲ್ಲಿರುತ್ತದೆ. ಕವಿ ಆ ಸನ್ನಿವೇಶದ ಕಡೆಗೆ ನಮ್ಮ ದೃಷ್ಟಿಯನ್ನು ತಿರುಗಿಸುತ್ತಾನೆ. ಇದೇ ಅವನಿಂದ ನಮಗಾಗುವ ಉಪಕಾರ.

ಪಾತ್ರಾಭಿವ್ಯಕ್ತಿ

ಮಹಾಕಾವ್ಯದ ಮುಖ್ಯಸ್ವಾರಸ್ಯವಿರುವುದು ಅದರ ಪಾತ್ರಾಭಿವ್ಯಕ್ತಿಯಲ್ಲಿ (character development). ಅದರ ಚಾರಿತ್ರಿಕ (Historical) ಘಟನೆಯಲ್ಲಲ್ಲ; ಅದರ ವರ್ಣನೆಗಳಲ್ಲಲ್ಲ; ಶಬ್ದಚಮತ್ಕಾರದಲ್ಲೂ ವಾಗ್ಧಾಟಿಯಲ್ಲೂ ಅಲ್ಲ; ಅದರ ಮುಖ್ಯಪಾತ್ರಗಳ ಸ್ವಭಾವವಿಕಾಸದಲ್ಲಿ.

ಒಂದಾನೊಂದು ವಿಶೇಷ ಸಂದರ್ಭದಲ್ಲಿ ಒಬ್ಬ ಮಹಾಪುರುಷನ ಮನಸ್ಸು ಅದಕ್ಕೆ ಹೇಗೆ ಪ್ರತಿಹೇಳುತ್ತದೆ? ಇದು ವ್ಯಾಸಂಗಕ್ಕೆ ತಕ್ಕ ವಿಷಯ. ಹವಾಮಾನ ಶಾಲೆಯಲ್ಲಿ (Meteorological Observatory) ಒಂದು ಎತ್ತರವಾದ ಶಿಖರದಮೇಲೆ ಒಂದು ಹುಂಜದ ಆಕಾರದ (Weathercock) ಯಂತ್ರವನ್ನಿರಿಸಿರುತ್ತಾರೆ. ಆ ಯಂತ್ರವು ಸಾಮಾನ್ಯವಾಗಿ ಯಾವಾಗಲೂ ಸುತ್ತುತ್ತಿರುತ್ತದೆ–ಗಾಳಿ ಯಾವ ದಿಕ್ಕಿಗೆ ಬೀಸುತ್ತದೆಯೋ ಆ ಕಡೆಗೆ ಎಷ್ಟು ವೇಗದಿಂದ ಬೀಸುತ್ತದೆಯೋ ಅಷ್ಟು ರಭಸದಿಂದ; ಗಿರಗಿರನೆಯೋ ಮೆಲ್ಲಮೆಲ್ಲಗೋ ಸುತ್ತುತ್ತದೆ. ಆ ಹವಾಹುಂಜದ ಗತಿವೇಗಗಳಿಂದ ವಾಯು ಚಲನೆಯ ಗತಿವೇಗಗಳನ್ನು ಗೊತ್ತು ಮಾಡಲಾಗುತ್ತದೆ. ಮಹಾಕಾವ್ಯವು ಇಂಥ ಹವಾಹುಂಜಗಳ ಪ್ರದರ್ಶನಶಾಲೆ. ಕಷ್ಟ ಬಂದಾಗ, ಸಂಕಟ ಬಂದಾಗ, ಭಯ ಬಂದಾಗ, ಸತ್ತ್ವಪರೀಕ್ಷೆ ಬಂದಾಗ. ಜಯ ಬಂದಾಗ, ಸೋಲು ಬಂದಾಗ, ಯಾವ ಯಾವ ಕಥಾ ಪಾತ್ರ ವ್ಯಕ್ತಿ ಹೇಗೆ ಹೇಗೆ ಪ್ರತಿವರ್ತನೆ ತೋರುತ್ತದೆ? ಇದು ನಮ್ಮ ಗಮನದಲ್ಲಿರಬೇಕಾದ ಸಂಗತಿ.

ಕಾವ್ಯ–ಸತ್ಯ ಸಂಬಂಧ

ಕಾವ್ಯಕ್ಕೂ ಸತ್ಯಕ್ಕೂ ಏನು ಸಂಬಂಧ? ಇದನ್ನು ವಿಚಾರಮಾಡೋಣ. ಲೋಕ ವ್ಯವಹಾರದಲ್ಲಿ ಸತ್ಯವನ್ನು ಎರಡು ಪ್ರಕಾರಗಳಲ್ಲಿ ಕಾಣುತ್ತೇವೆ:

ಒಂದು ಬಹಿಷ್ಪ್ರಮಾಣದ್ದು: ತಾರೀಖು, ಗಂಟೆ, ಚಹರೆಯ ಪಟ್ಟಿ, ಅಳತೆ, ರುಜುವಾತು, ಸಾಕ್ಷ್ಯಗಳ ಕೈಫಿಯತ್ತು–ಇಂಥವುಗಳಿಂದ ಗೊತ್ತಾಗತಕ್ಕ ಸತ್ಯ. ಕೋರ್ಟುಗಳಲ್ಲಿ ನ್ಯಾಯನಿರ್ಣಯಕ್ಕೆ ಆಧಾರವಾದದ್ದು ಇಂಥ ಸತ್ಯ. ಕಳ್ಳತನದ ಆಪಾದನೆ ಹೊತ್ತಿರುವ ಮನುಷ್ಯನು ಕಳ್ಳ ಹೌದೊ, ಅಲ್ಲವೊ? ಆಪಾದಿತರು ಹೇಳಿದ ದಿನ ಆ ಹೊತ್ತಿನಲ್ಲಿ ಆ ಸ್ಥಳದಲ್ಲಿ ಅದೇ ಪದಾರ್ಥವನ್ನು ಅವನು ಕಳುವು ಮಾಡಿದ್ದು ರುಜುವಾತಾಗದೆ ಹೋದಲ್ಲಿ ಅವನು ಕಳ್ಳನಲ್ಲ. ಪಕ್ಕದ ಮನೆಯವರೂ ಹಿತ್ತಲುಕಡೆಯವರೂ ಅವನು ಕಳ್ಳತನ ನಡಸಿದ್ದನ್ನು ಸಾವಿರಸಲ ಕಂಡಿರಬಹುದು. ಆದರೂ ಅವನು ಸತ್ಯವಂತ. ಇದು ಒಂಬು ಬಗೆಯ ಸತ್ಯ. ನಮ್ಮ ಚರಿತ್ರೆಯ ಪುಸ್ತಕಗಳನ್ನು ಬರೆಯುವವರಿಗೆ ಬೇಕಾದದ್ದು ಈ ಸತ್ಯ. ಇದನ್ನು ವಾಸ್ತವಿಕ ಸತ್ಯವೆಂದು ಕರೆಯೋಣ.

ಎರಡನೆಯದು ಕಾಲ್ಪನಿಕ ಸತ್ಯ, ಇದು ಕವಿಕರ್ಮದ್ದು. ಹರಿಶ್ಚಂದ್ರ ಕಥೆ ವಾಸ್ತವಿಕವೋ ಅಲ್ಲವೊ. ಅದು ಕಾಲ್ಪನಿಕವೆಂದೇ ಇಟ್ಟುಕೊಳ್ಳೊಣ. ಆದರೆ ಅದರಲ್ಲಿ ನಕ್ಷತ್ರಿಕನು ಹರಿಶ್ಚಂದ್ರನನ್ನು ಹಿಂಸೆಮಾಡಿದ್ದಾಗಲಿ, ಚಂದ್ರಮತಿಯು ಮಗ ರೋಹಿತಾಶ್ವನ ಶವವನ್ನು ಹೊತ್ತು ಸ್ಮಶಾನಕ್ಕೆ ಬಂದದ್ದಾಗಲಿ ನಾಟಕಶಾಲೆಯಲ್ಲಿ ಕಣ್ಣ ಮುಂದೆ ಬಂದಾಗ ಕಣ್ಣೀರು ಬಿಡದವರು ಯಾರು? ದೃಶ್ಯ ಸಂಪೂರ್ಣ ಸತ್ಯವೆಂದು ಅನುಭವವಾದದ್ದರಿಂದಲೇ ಅಲ್ಲವೇ ಕಣ್ಣೀರು ಉಕ್ಕಿದ್ದು? ಹೀಗೆ ಕಾಲ್ಪನಿಕ ಸತ್ಯವು ಅಂತರಂಗದಲ್ಲಿ ರುಜುವಾತಿಗೆ ಬಂದರೆ ಅದು ಕಾವ್ಯದ ಸತ್ಯವಾಗುತ್ತದೆ.

ಕಾವ್ಯದಲ್ಲಿ ನಮಗೆ ಬೇಕಾದದ್ದು ವಾಸ್ತವಿಕ ಸತ್ಯವಲ್ಲ; ಪ್ರತ್ಯಕ್ಷ ಸತ್ಯವಲ್ಲ; ಆಂತರಂಗಿಕ ಸತ್ಯ, ಊಹನಲ್ಲಭ್ಯ ಸತ್ಯ. ಇದನ್ನೇ ಇಂಗ್ಲಿಷಿನಲ್ಲಿ “Verisimilitude of truth” ಎನ್ನುತ್ತಾರೆ. ಅದು ಸತ್ಯದ ಸಾದೃಶ್ಯ, ಸತ್ಯೌಪಮ್ಯ, ಸತ್ಯಪ್ರತೀತಿ.

ಇಂಥ ಸತ್ಯಪ್ರತೀತಿ ಕಾವ್ಯದಲ್ಲಿರದೆಹೋದರೆ ಅದು ಮನುಷ್ಯರಮೇಲೆ ಪ್ರಭಾವಶಾಲಿಯಾಗಲಾರದು. ಕಾವ್ಯದ ಬಲವೇ ಆ ಅಂತರ್ದೃಷ್ಟವಾದ ಸತ್ಯ. ಕಾವ್ಯಾಭ್ಯಾಸಿಗೆ ಬೇಕಾದದ್ದು ಇಂಥ ಅಂತರ್ದೃಷ್ಟಿ. ಅದರ ಒಂದು ರೂಪವೇ ಪ್ರತಿಭೆ. ಫೋಟೋ ಗ್ರಾಫ್‍ ಯಂತ್ರವು ವಸ್ತುವಿನ ಬಾಹ್ಯಾಕಾರವನ್ನು ಹೇಗೆ ಹಿಡಿಯಬಲ್ಲದೋ ಹಾಗೆ ಪ್ರತಿಭೆಯು ಒಂದು ಸಂದರ್ಭದ ಆಂತರ್ಯವನ್ನು ಗ್ರಹಿಸಬಲ್ಲದ್ದು.

ಒಂದು ವಿವಾದ

ಈಗ ಒಂದು ಪ್ರಸಿದ್ಧ ತಕರಾರಿನ ವಿಚಾರಕ್ಕೆ ಹೋಗೋಣ. ಅದು ಅನಿವಾರ್ಯವಾದ ತಕರಾರೆಂದು ನನಗನ್ನಿಸುವುದಿಲ್ಲ. ಪೌರಾಣಿಕರೂ ಹರಿಕಥಾಕಾರರೂ ಬೆಳಸಿದ ತಕರಾರು ಇದೆಂದು ನನಗನ್ನಿಸುತ್ತದೆ. ಶ್ರೀರಾಮನು ವಾಲಿಯನ್ನು ಕೊಂದದ್ದು ನೀತಿಯೇ? ಮೊದಲನೆಯದಾಗಿ, ರಾಮನು ಆ ಯುದ್ಧಕ್ಕೆ ಸಂಬಂಧಪಟ್ಟವನಲ್ಲ. ಎರಡನೆಯದಾಗಿ, ತಾನು ಅದರಲ್ಲಿ ಭಾಗವಹಿಸತಕ್ಕದ್ದೆಂಬುದನ್ನು ವಾಲಿಗೆ ತಿಳಿಯಪಡಿಸಿರಲಿಲ್ಲ. ಮೂರನೆಯದಾಗಿ, ವಾಲಿ ಬೇರೆ ಕಡೆ ಮುಖ ತಿರುಗಿಸಿದ್ದಾಗ ಅವನನ್ನು ಹೊಡೆದದ್ದು ಸರಿಯೆ? ಈ ಮೂರು ಸಂದರ್ಭಗಳೂ ಇನ್ನೂ ಎಷ್ಟೋ ಆ ಸಂದರ್ಭಗಳೂ ರಾಮನ ಮಹಾಪುರುಷತ್ವಕ್ಕೆ ಹಾನಿ ತರುತ್ತದೆ. ಆ ಹಾನಿಗಳಿಂದ ರಾಮನನ್ನು ರಕ್ಷಿಸಿ ಪಾರುಮಾಡಬೇಕೆಂಬುದು ನಮ್ಮ ಪೌರಾಣಿಕ ಕಥಕರುಗಳ ಮಹೋದ್ದೇಶ. ಕೆಲಮಂದಿ ವ್ಯಾಖ್ಯಾನಕಾರರುಗಳು ಈ ಮಹಾ ಪ್ರಯತ್ನಕ್ಕೆ ಸೇರಿದ್ದಾರೆ.

ಆದರೆ ರಾಮನಮೇಲೆ ಹೊರಿಸಬಹುದಾದ ಆಕ್ಷೇಪಣೆಗಳನ್ನು ವಾಲಿಯೇ ಹೊರಿಸಿದ್ದಾನೆ. ಅದಕ್ಕೆ ಹೇಳಬಹುದಾದ ಪ್ರತ್ಯುತ್ತರಗಳನ್ನು ರಾಮನೇ ಹೇಳಿದ್ದಾನೆ. ಈ ಸಮಾಧಾನವನ್ನು ವಾಲಿಯೂ ಅವನ ಸಂಬಂಧಿಗಳೂ ಅಂಗೀಕರಿಸಿದ್ದಾರೆ (ಸರ್ಗ ೧೮). ವಾಲಿಯೇ ರಾಮನಲ್ಲಿ ದೋಷವಿಲ್ಲವೆಂದು ಒಪ್ಪಿಕೊಂಡ ಮೇಲೆ ತಕರಾರು ಬೆಳಸುವುದಕ್ಕೆ ನಾವು ಯಾರು? ಈ ವಿಚಾರವನ್ನು ಇನ್ನೊಂದು ದೃಷ್ಟಿಯಿಂದ ನೋಡಬಹುದಾಗಿದೆ. ಪ್ರಶ್ನೆ ಕೇಳುವವರು ರಾಮನ ಮಹಾಪುರುಷತ್ವದ ದೃಷ್ಟಿಯಿಂದ ತಾನೆ ಹಾಗೆ ಕೇಳುವುದು? ಸಾಮಾನ್ಯ ಮನುಷ್ಯರು ಹಾಗೆ ನಡೆದುಕೊಂಡಿದ್ದಿದ್ದರೆ ಪ್ರಶ್ನೆಯೇಳುತ್ತಿರಲಿಲ್ಲ. ಅದು ಮನುಷ್ಯನಿಗೆ ಸ್ವಾಭಾವಿಕವಾದದ್ದೆಂದು ಉಪೇಕ್ಷೆ ಮಾಡಬಹುದಾಗಿತ್ತು. ಆದರೆ ರಾಮನು ಸಾಮಾನ್ಯ ಮನುಷ್ಯನಲ್ಲ; ಮಹಾಪುರುಷ, ಧೀರೋದಾತ್ತ. ಅಂಥವನು ಹೀಗೆ ಮಾಡಬಹುದೆ?

ಶ್ರೀರಾಮಚಂದ್ರನನ್ನು ಎರಡು ಬೇರೆ ಬೇರೆ ಪ್ರಸ್ಥಾನಗಳಿಂದ ನೋಡುವುದು ಪೂರ್ವದಿಂದ ಬಂದಿರುವ ವಾಡಿಕೆ;

1) ರಾಮನು ಮನುಷ್ಯತ್ವದಿಂದ ದೇವತ್ವಕ್ಕೆ ಹತ್ತಿದವನು. ತನ್ನ ಪ್ರಯತ್ನದಿಂದ ದೇವಸಮಾನತ್ವವನ್ನು ಸಂಪಾದಿಸಿದವನು.

2) ರಾಮನು ದೇವತ್ವದಿಂದ ಮನುಷ್ಯತ್ವಕ್ಕೆ ಇಳಿದವನು. ಮನುಷ್ಯತ್ವದ ಉಪಾಧಿಗಳನ್ನು ಮೀರಿದವನು. ಸಾಕ್ಷಾತ್‍ ಮಹಾವಿಷ್ಣು.

ಈ ಎರಡು ದೃಷ್ಟಿಗಳಲ್ಲಿ ಎರಡನೆಯ ದೃಷ್ಟಿಗೆ, ಎಂದರೆ ಸಾಕ್ಷಾತ್‍ ವಿಷ್ಣು ಎಂಬ ಅಭಿಪ್ರಾಯಕ್ಕೆ ವಾಲಿವಧೋಪಾಯಸಮರ್ಥನೆಯು ಕೊಂಚ ಕಷ್ಟವಾಗುತ್ತದೆ. ಆ ಕಷ್ಟದಿಂದ ರಾಮನನ್ನು ಪಾರುಮಾಡುವುದಕ್ಕಾಗಿ ಕೋರ್ಟಿನಲ್ಲಿ ಲಾಯರುಗಳು ವಾದಿಸುವಂತೆ ಪಾಯಿಂಟ್‍ ಒಂದು. ಪಾಯಿಂಟ್‍ ಎರಡು–ಎಂದು ಪ್ರತಿವಾದ ಹೇಳಿ ಚಮತ್ಕಾರ ವಿಜೃಂಭಣೆ ಮಾಡಬೇಕಾಗುತ್ತದೆ.

ಆದರೆ ರಾಮನು ಮೊದಮೊದಲು ಮನುಷ್ಯನಾಗಿದ್ದವನು ಎಂಬ ಕಕ್ಷಿಯವರಿಗೆ ವಾಲಿ ವಧಪ್ರಕರಣದಲ್ಲಿ ಅಸಂಗತವೇನೂ ಕಾಣುವುದಿಲ್ಲ. ಎಲ್ಲ ಸಾಮಾನ್ಯ ಮನುಷ್ಯರೂ ಎಂಥ ವಿವೇಕದಿಂದಲೂ ಎಂಥ ಉಪಾಯದಿಂದಲೂ ನಡೆದುಕೊಳ್ಳುತ್ತಿದ್ದರೋ ಅದರಂತೆಯೇ ರಾಮನು ನಡೆದ. ಸಂದರ್ಭದ ವಿವರಾಂಶಗಳನ್ನು ಮೊದಲು ಜ್ಞಾಪಕಕ್ಕೆ ತಂದು ಕೊಳ್ಳೋಣ.

ವಾಲಿವಧೆಯ ಪೌರ್ವಾಪರ್ಯ

ಆಂಜನೇಯಸ್ವಾಮಿ ಶ್ರೀರಾಮನಿಗೆ ಸುಗ್ರೀವನ ಪರಿಚಯವನ್ನು ಮಾಡಿಕೊಡುವ ಸಂದರ್ಭದಲ್ಲಿ ಹೇಳಿದ್ದು ಹೀಗೆ:

ಸ ಹಿ ರಾಜ್ಯಾತ್‍ ಪರಿಭ್ರಷ್ಟಃ
ಕೃತವೈರಶ್ಚ ವಾಲಿನಾ ।
ಹೃತದಾರೋ ವನೇ ತ್ಯಕ್ತಃ
ಭ್ರಾತ್ರಾ ವಿನಿಕೃತೋ ಭೃಶಮ್‍ ॥ ಸರ್ಗ ೪, ಶ್ಲೋಕ ೨೭

ಕರಿಷ್ಯಾತಿ ಸ ಸಾಹಾಯ್ಯಂ
ಯುವಯೋರ್ಭಾಸ್ಕರಾತ್ಮಜಃ ।
ಸುಗ್ರೀವಃ ಸಹ ಚಾಸ್ಮಾಭಿಃ
ಸೀತಾಯಾಃ ಪರಿಮಾರ್ಗಣೇ ॥ ಸರ್ಗ ೪, ಶ್ಲೋಕ ೨೮

ಶ್ರೀರಾಮನ ಸಮಸ್ತ ವರ್ತನೆಗೂ ತಳಹದಿ ಇಲ್ಲಿದೆ. ರಾಮನ ಮುಖ್ಯೋದ್ದೇಶ ಸೀತಾನ್ವೇಷಣ.

1) ಅದು ಆತನಿಗಿದ್ದ ಪ್ರಪ್ರಥಮ ಕರ್ತವ್ಯ.

2) ಅದಕ್ಕೆ ಆಗ ಬೇಕಾಗಿದ್ದ ಪ್ರಪ್ರಥಮ ಸಾಧನ ಸಮರ್ಥರಾದವರ ಸಹಾಯ.

3) ಅಂಥ ಸಹಾಯವನ್ನು ಕೊಡಲು ಪ್ರಪ್ರಥಮವಾಗಿ ಸಿದ್ಧನಾಗಿ ಬಂದವನು ಸುಗ್ರೀವ. ಆದದ್ದರಿಂದ ಸುಗ್ರೀವನನ್ನು ತೃಪ್ತಿಪಡಿಸುವುದು ಶ್ರೀರಾಮನಿಗೆ ಸ್ವಕರ್ತವ್ಯದ ಪ್ರಪ್ರಥಮಾಂಗವಾಯಿತು.

ರಾಮನು ಹೇಳಿದ ಉತ್ತರ:

ವಾಲಿನಂ ತಂ ವಧಿಷ್ಯಾಮಿ
ತವ ಭಾರ್ಯಾಪಹಾರಿಣಮ್‍ ॥ ಸರ್ಗ ೫, ಶ್ಲೋಕ ೨೭

ಹೀಗೆಂದು ಭಾಷೆಕೊಟ್ಟ. ಇದು ಅಗ್ನಿಸಾಕ್ಷಿಕವಾಗಿ ನಡೆಯಿತು. ಅವರು ಕೈಯಮೇಲೆ ಕೈಹಾಕಿ ಪ್ರಮಾಣ ಮಾಡಿಕೊಟ್ಟರು. ಈ ಒಪ್ಪಂದವೇ ರಾಮನ ಚರ್ಯೆಗೆ ಅಡಿಗಲ್ಲು.

ರಾಮನು ವಾಲಿಯ ಸಾಹಾಯ್ಯವನ್ನೇ ಪಡೆದುಕೊಳ್ಳಬಹುದಾಗಿತ್ತಲ್ಲ? ವಾಲಿಯು ತಾನು ರಾವಣನಿಗಿಂತ ಮಹಾಪರಾಕ್ರಮಿಯೆಂದೂ ಸೀತೆಯನ್ನು ತಾನೇ ತಂದು ಒಪ್ಪಿಸಬಲ್ಲೆನೆಂದೂ ಹೇಳಿದನಲ್ಲ? ಅಂಥವನನ್ನು ಬಿಟ್ಟು ರಾಮನು ಈ ದುರ್ಬಲನಾದ ಸುಗ್ರೀವನನ್ನೇ ಏಕೆ ಹಿಡಿಯಬೇಕಾಗಿತ್ತು? ಇದಕ್ಕೆ ಪ್ರತ್ಯುತ್ತರವಾದ ಮೂರು ಸಂಗತಿಗಳು ರಾಮನ ಮನಸ್ಸಿನಲ್ಲಿದ್ದಿರಬೇಕು:

1) ವಾಲಿ ಸಮರ್ಥನೇನೋ ಹೌದು. ಸೀತೆಯನ್ನು ಹುಡುಕಿ ತರುವ ಶಕ್ತಿ ಅವನಲ್ಲುಂಟು. ಆದರೆ ತನ್ನ ಶಕ್ತಿಯನ್ನು ಬೇರೆ ರೀತಿ ತಿರುಗಿಸುವ ಪ್ರವೃತ್ತಿಯೂ ಅವನಲ್ಲುಂಟು. ರಾವಣನು ಶಾಪಭೀತನಾಗಿ ಸೀತೆಯನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ. ವಾಲಿಗೆ ಅಂಥ ಭೀತಿಯೇನೂ ಇರಲಿಲ್ಲ.

2) ವಾಲಿಯಲ್ಲಿ ಚಾಪಲ್ಯವಿದ್ದದ್ದು ರುಜುವಾತಿಗೆ ಬಂದಿತ್ತು.

3) ಎಲ್ಲಕ್ಕಿಂತ ಮುಖ್ಯವಾಗಿ ಸುಗ್ರೀವನಿಗೆ ಆಗಲೇ ಮಾತು ಕೊಟ್ಟಿದ್ದಾಗಿತ್ತು. ಅವರ ಸ್ನೇಹ ಅಗ್ನಿ ಸಾಕ್ಷಿಕವಾದದ್ದು:

ಮರ್ಯಾದಾ ಬಧ್ಯತಾಂ ಧ್ರುವಾ ॥ ಸರ್ಗ ೫, ಶ್ಲೋಕ ೧೨

ಉಪಾಯವು ಗೌಣ

ಹೀಗೆ ಶ್ರೀರಾಮನು ತನ್ನ ಮಾತಿನಿಂದಲೇ ತನ್ನ ನಡವಳಿಕೆಯಿಂದಲೇ ಕಟ್ಟಿಗೊಳಪಟ್ಟಿದ್ದನು. ವಾಲಿವಧೆ ಹೀಗೆ ಅನಿವಾರ್ಯ ಕರ್ತವ್ಯವಾಯಿತು. ಇದಾದಮೇಲೆ ಉಪಾಯದ ವಿಚಾರ. ಉದ್ದೇಶವು ಮುಖ್ಯಪ್ರಶ್ನೆಯಾದ ಮೇಲೆ ಉಪಾಯವು ಗೌಣಪ್ರಶ್ನೆಯಾಗುತ್ತದೆ. ಉದ್ದೇಶವು ಅನಿವಾರ್ಯ; ಉಪಾಯವು ಐಚ್ಛಿಕ. ವಾಲಿಯ ಬಲಾಬಲಗಳನ್ನು ನಿರ್ಣಯಿಸುವುದೂ ತನ್ನ ಅನುಕೂಲಪ್ರತಿಕೂಲಗಳನ್ನು ನಿರ್ಣಯಿಸಿಕೊಳ್ಳುವುದೂ ರಾಮನ ಕರ್ತವ್ಯವಾಯಿತು. ಇಲ್ಲಿ ಸಂಗತವಾಗತಕ್ಕದ್ದು ಬೇರೊಬ್ಬರು ಮಾಡಿಟ್ಟ ನಿಯಮವಲ್ಲ; ತನ್ನ ಸ್ವಂತ ವಿವೇಚನೆ, ತನ್ನ ಸ್ವಂತ ನಯಚಿಂತನೆ, ಜಯಸಿದ್ಧಿಗೆ ಯಾವುದು ದಾರಿಯೋ, ಎಂಥ ಪ್ರಯತ್ನದಿಂದ ಬಲವ್ಯಯ ಕಡಮೆಯಾಗಿ ಲಾಭಸಂಪಾದನೆ ಹೆಚ್ಚೋ, ಎಂಥ ಉಪಾಯದಲ್ಲಿ ನಷ್ಟಭಯ ಕಡಮೆಯೋ, ಆದಾಯಸಂಭವ ಹೆಚ್ಚೋ ಅದನ್ನು ಆಲೋಚಿಸಬೇಕಾದದ್ದು ಕಾರ್ಯಮಾರ್ಗ. ಈ ವಿಚಾರ ನೀತಿತತ್ತ್ವದ್ದಲ್ಲ, ಕಾರ್ಯನಯದ್ದು. ಇದನ್ನು ಶ್ರೀರಾಮನು ಅನುಸರಿಸಿದ. ತನಗೆ ಶ್ರಮ ಕಡಮೆಯಾಗಬೇಕು. ಫಲ ಪೂರ್ಣವಾಬೇಕು. ಆಶಾಭಂಗದ ಸಂಭವ ಕಡಿಮೆಯಾಗಬೇಕು. ಉದ್ದೇಶಸಾಧನೆಯ ಸಂಭವ ಹೆಚ್ಚಾಗಬೇಕು. ಇದು ಲೋಕದಲ್ಲಿ ಎಲ್ಲ ಸಜ್ಜನರೂ ಸಂಭಾವಿತರೂ ಅಂಗೀಕರಿಸಿರುವ ಮಾರ್ಗ. ಇದನ್ನು ರಾಮನು ಅನುಸರಿಸಿದ.

ಆದದ್ದರಿಂದ ವಾಲಿವಧಪ್ರಕರಣದಲ್ಲಿ ಹೆಚ್ಚಿನ ತತ್ತ್ವಪ್ರಸಕ್ತಿಯೇನೂ ಇಲ್ಲ. ದೈವಾಂಶಪುರುಷನು ಸಾಮಾನ್ಯಪುರುಷನಂತೆ ನಡೆಯಬಹುದೆ?–ಎಂಬುದು ಒಂದು ಅತಿವಾದಿ ಪಕ್ಷದ ಪ್ರಶ್ನೆ. ನಮ್ಮ ಉತ್ತರ ಅವನು ಹಾಗೆ ನಡೆಯಬಹುದು ಮಾತ್ರವಲ್ಲ, ನಡೆಯಬೇಕು–ಎಂದು. ಶ್ರೀರಾಮನು ಸಾಮಾನ್ಯಪುರುಷರಂತೆಯೇ ಹಸಿದ; ಅವರಂತೆಯೇ ಊಟಮಾಡಿದ; ಅವರಂತೆಯೇ ನಕ್ಕ; ಅವರಂತೆಯೇ ಅತ್ತ. ಸಾಮಾನ್ಯ ಮನುಷ್ಯನು ತನ್ನ ಪ್ರಿಯೆಗಾಗಿ ಹಾತೊರೆಯುವಂತೆ ಅವನೂ ಹಾತೊರೆದ. ಅವನು ನೂರರಲ್ಲಿ ತೊಂಬತ್ತೊಂಬತ್ತು ಕಡೆ ಸಾಮಾನ್ಯನಂತೆ ನಡೆದದ್ದರಿಂದಲೇ ಅವನನ್ನು ಮಿಕ್ಕ ಒಂದು ವಿಷಯದಲ್ಲಿ ಅವನು ತಮಗಿಂತ ಉತ್ಕೃಷ್ಟೆನೆಂದು ಕಂಡುಕೊಂಡು ಅವನನ್ನು ಅನುಕರಣೀಯನೆಂದು ಅಂಗೀಕರಿಸಿದರು. ಅವನು ಮನುಷ್ಯತ್ವದಿಂದ ದೈವತ್ವಕ್ಕೆ ಹತ್ತಿದವನು.

ಅನೃತಾತ್ಸತ್ಯಮುಪೈಮಿ ।
ಮಾನುಷಾದ್ದೈವ್ಯಮುಪೈಮಿ ॥ -ತೈತ್ತಿರೀಯ ಬ್ರಾಹ್ಮಣ

ಸೀತಾರಾಮವೃತ್ತಾಂತದ ಕ್ಷೀರಪಾನದ ನಡುವೆ ವಾನರಪ್ರಕರಣವು ದ್ರಾಕ್ಷಿಯ ಕಾಳಿನಂತೆ–ಹುಳ್ಳಹುಳ್ಳಗೆ ಆದರೂ ಮಧುರದೊಡನೆ ಬೆರೆತುಕೊಳ್ಳುವ ಹುಳಿಯಾಗಿಯೂ ಮುಖ್ಯರಸ ಮಧುರವನ್ನು ಪ್ರಗುಣಿತಪಡಿಸಿ ತೋರಿಸುವುದಾಗಿಯೂ ಯಶಸ್ವಿಯಾಗಿದೆ.

ಎರಡು ಅನುಕರಣೀಯ ಗುಣಗಳು

ಕಿಷ್ಕಿಂಧಾಕಾಂಡದಲ್ಲಿ ಮನೋಹರಗಳಾದ ಪ್ರಕರಣಗಳು ಹತ್ತಾರಿವೆ. ಒಂದು ಪ್ರಕರಣವನ್ನು ಕುರಿತು ಒಂದು ಮಾತನ್ನು ವಿಶೇಷವಾಗಿ ಹೇಳಬಯಸುತ್ತೇನೆ. ಅದು ರಾಮ-ಹನುಮಂತರ ಪ್ರಥಮಪರಿಚಯ ಕಥೆ. ಆಂಜನೇಯಸ್ವಾಮಿಯು ಮಾತನಾಡಿದ ರೀತಿಯನ್ನು ಶ್ರೀರಾಮನು ಪ್ರಶಂಸೆ ಮಾಡಿರುವುದರಲ್ಲಿ ಎರಡು ಅಂಶಗಳು ನಮ್ಮ ದೃಷ್ಟಿಯಲ್ಲಿರಬೇಕಾದದ್ದು.

ಮೊದಲನೆಯದು ಆಂಜನೇಯನ ವಾಕ್ಯರೀತಿಯ ಔಚಿತ್ಯ:

ಅವಿಸ್ತರಮಸಂದಿಗ್ಧಂ
ಅವಿಲಂಬಿತಮದ್ರುತಮ್‍ ॥ ಸರ್ಗ೩, ಶ್ಲೋಕ ೩೧

ವಿಷಯವನ್ನು ಬೆಳಸಿಲ್ಲ. ಆದರೆ ಸಂಶಯಕ್ಕೆ ಅವಕಾಶ ಬಿಟ್ಟಿಲ್ಲ. ಮಾತುಗಳ ಉಚ್ಚಾರಣೆ ಬಹು ಸಾವಕಾಶವಲ್ಲ, ಬಹು ವೇಗವೂ ಅಲ್ಲ.

ಇದನ್ನು ನಮ್ಮ ಜನ ಗಮನವಿಟ್ಟು ನೋಡಬೇಕಾದದ್ದು. ನಮ್ಮಲ್ಲಿ ಕನ್ನಡದಲ್ಲಿ ಮಾತನಾಡುವವರು ಸಾಮಾನ್ಯವಾಗಿ ಮಾತಿನ ಕಡೆಯ ಅಕ್ಷರವನ್ನು, ಅದರಲ್ಲಿಯೂ ಕ್ರಿಯಾಪದದ ಕಡೆಯ ಅಕ್ಷರವನ್ನು, ನುಂಗಿಬಿಡುತ್ತಾರೆ.

ಪ್ರಶ್ನೆ: ಶಾಲೆಗೆ ಹೋಗಿದ್ದೆಯೋ?

ಉತ್ತರ: ಹೋ...

ಪ್ರಶ್ನೆ: ಆ?

ಉತ್ತರ: ಹೋಗಿ....

“ದ್ದೆ” ಎಂಬುದು ಹೊರಡುವುದೇ ಇಲ್ಲ.

ಒಂದೊಂದು ಅಕ್ಷರಕ್ಕೂ ಸಲ್ಲಬೇಕಾದ ಬೆಲೆಯುಂಟು. ಆಂಜನೇಯ ಸ್ವಾಮಿ ಹಾಗೆ ಒಂದೊಂದು ಅಕ್ಷರಕ್ಕೂ ಅದಕ್ಕೆ ತಕ್ಕ ಬೆಲೆ ಸಲ್ಲಿಸಿದವನಂತೆ. ಅಕ್ಷರಲೋಪ ಸ್ವರ ಲೋಪಗಳಿರಲಿಲ್ಲ.

ಇದು ರಾಮನಿಗೆ ಮೆಚ್ಚಿಕೆಯಾದ ಮೊದಲನೆಯ ಗುಣ.

ಎರಡನೆಯ ಗುಣ ಆಂಜನೇಯನ ವಿನಯಪೂರ್ವಕವಾದ ನಯ:

ಏವಂ ಗುಣಗಣೈರ್ಯುಕ್ತಾಃ
ಯಸ್ಯ ಸ್ಯುಃ ಕಾರ್ಯಸಾಧಕಾಃ ।
ತಸ್ಯ ಸಿಧ್ಯಂತಿ ಸರ್ವಾರ್ಥಾಃ
ದೂತವಾಕ್ಯಪ್ರಚೋದಿತಾಃ ॥ ಸರ್ಗ ೩, ಶ್ಲೋಕ ೩೫

ಇಂಡಿಯ ದೇಶದ ಪರವಾಗಿ ಹೊರದೇಶಗಳಿಗೆ ರಾಯಭಾರಿಗಳನ್ನು ನಿಯಮಿಸಿ ಕಳುಹಿಸುವ ಅಧಿಕಾರಸ್ಥರು ಈ ಪ್ರಕರಣವನ್ನು ನಾಲ್ಕಾರು ಬಾರಿ ಮನನಮಾಡಿದರೆ ಒಳ್ಳೆಯದೆನ್ನಿಸುತ್ತದೆ. ಆಂಜನೇಯನು ಉಪಾಯಜ್ಞ. ಬಿಕ್ಷುವೇಷವನ್ನು ಧರಿಸಿ ಕಾಣಿಸಿಕೊಂಡ. ಕಾರ್ಯ ಸಿದ್ಧಿಯಾದ ಬಳಿಕ ಭಿಕ್ಷುರೂಪವನ್ನು ಬಿಟ್ಟು ಮತ್ತೆ ವಾನರನಾದ. ವೀರಸತ್ಯವಾದಿಗಳು ಈ ಸಂಗತಿಯನ್ನು ಮನನ ಮಾಡಬೇಕು. ಸತ್ಯವನ್ನು ಬಿಡಬಾರದು. ಆದರೆ ಸತ್ಯವೆಂಬ ಹೆಸರಿನಿಂದ ಕಾರ್ಯೋಪಾಯವನ್ನು ಮರೆಯಬಾರದು. ಸತ್ಯಕ್ಕೆ ವಿರೋಧವಲ್ಲದ ಉಪಾಯಕ್ಕೆ ಧಾರ್ಮಿಕ ಜೀವನದಲ್ಲಿ ಒಂದು ಸ್ಥಾನ ಅವಶ್ಯವಾಗುಂಟು. ಸತ್ಯಸಹಕಾರಿಯಾದ ಉಪಾಯವನ್ನು ಇಂಗ್ಲಿಷಿನಲ್ಲಿ ‘ಟ್ಯಾಕ್ಟ್‍’ (Tact) ಎಂದು ಕರೆಯುತ್ತಾರೆ. ಈ ನಯೋಪಾಯವಿವೇಕವಲ್ಲದಿದ್ದರೆ ವ್ಯವಹಾರದಲ್ಲಿ ಸತ್ಯಸಾಧನೆ ದುರ್ಲಭವಾದೀತು.

ಇದು ಕಿಷ್ಕಿಂಧಾಕಾಂಡದಲ್ಲಿ ಬಹು ಸುಂದರವಾದ ಪ್ರಕರಣ.

**********

ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮರವರು ಮಾಡಿರುವ ಕನ್ನಡ ಅನುವಾದವನ್ನು ನಾನು ಅಲ್ಲಲ್ಲಿ ಓದಿಸಿ ಕೇಳಿ ಆನಂದಿತನಾಗಿದ್ದೇನೆ. ಅವರು ನಾಲ್ಕಾರು ವ್ಯಾಖ್ಯಾನಗಳನ್ನು ಪರಿಶೀಲನೆ ಮಾಡಿ ಅರ್ಥನಿಷ್ಕರ್ಷೆ ಮಾಡಿದ್ದಾರೆ. ಅಂಥ ಸಂದರ್ಭಗಳಲ್ಲಿ ಒಂದೆರಡನ್ನು ಕುರಿತು ನಾವಿಬ್ಬರೂ ಅಭಿಪ್ರಾಯವಿನಿಮಯ ಮಾಡಿಕೊಂಡಿದ್ದೇವೆ. ನಾನು ವ್ಯಾಖ್ಯಾನಕಾರರಿಗೆ ಶರಣುಹೊಗುವವನಲ್ಲ. ಹೀಗೆ ನಾನು ವಿಜ್ಞಾಪನೆಮಾಡಿದ್ದನ್ನು ಶರ್ಮಾರವರು ಔದ್ಧತ್ಯವೆಂದು ಭಾವಿಸಲಿಲ್ಲ. ಅದು ನನ್ನ ಸುಯೋಗ. ಶರ್ಮಾರವರು ಸ್ವತಂತ್ರ ವಿಮರ್ಶಕರು; ಅನುವಾದದ ಕಾರ್ಯದಲ್ಲಿ ಶಬ್ದಕ್ಕಿಂತ ಅರ್ಥಪುಷ್ಠಿ, ರಸಪುಷ್ಟಿ ಹೆಚ್ಚಿನದೆಂದು ನಂಬಿದವರು. ಆದದ್ದರಿಂದ ಅವರ ಅನುವಾದವು ಸರ್ವರಿಗೂ ಉಪಾದೇಯವಾಗಿದೆ. ಇಂಥ ಒಳ್ಳೆಯ ಕನ್ನಡ ವಚನಸಾಹಿತ್ಯವನ್ನು ಅವರು ನಮ್ಮ ವಾಚಕರಿಗೆ ಒದಗಿಸಿಕೊಟ್ಟಿರುವುದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ.

ಶ್ರೀಮಾನ್‍ ಡಿ. ಸಿ. ಅನಂತರಾಮಯ್ಯನವರೂ ಅವರ ಸ್ನೇಹಿತರೂ ಈ ಪವಿತ್ರವೂ ಮಂಗಳಕರವೂ ಆದ ಕಾರ್ಯದಲ್ಲಿ ಉತ್ಸಾಹಗುಂದದೆ ಪೂರ್ಣಶ್ರದ್ಧೆಯಿಂದ ದುಡಿದಿದ್ದಾರೆ. ಅವರು ಪಟ್ಟಿರುವ ಶ್ರಮವು ಮಹಾಜನರ ಕೃಪೆಯಿಂದ ಸಾರ್ಥಕವಾದೀತೆಂದು ನಾನು ನಂಬಿಕೊಂಡಿದ್ದೇನೆ.

ಯುದ್ಧಕಾಂಡದ ಅನುವಾದವೂ ಅನಂತರ ಉತ್ತರಕಾಂಡದ ಅನುವಾದವೂ ಶ್ರೀರಾಮ ಚಂದ್ರಪ್ರಭುವಿನ ಕೃಪೆಯಿಂದ ಬೇಗನೆ ವಾಚಕರಿಗೆ ದೊರೆಯುವಂತಾಗಲಿ ಎಂದು ಹಾರೈಸುತ್ತೇನೆ.

ಹನುಮತ್ಸಮವೇತಾಯ
ಹರೀಶಾಭೀಷ್ಟದಾಯಿನೇ ।
ವಾಲಿಪ್ರಮಥನಾಯಾಸ್ತು
ಮಹಾಧೀರಾಯ ಮಂಗಲಮ್‍ ॥ (ಪಾರಾಯಣ ಶ್ಲೋಕ)

(೧೯೬೯)