Tuesday, 31 October 2023

ವಿಚಿತ್ರ ಮುತ್ತು - ಕೇತಕೀವನ - ಡಿವಿಜಿ

ನಸೀರ್‍ ಕವಿ-

ಅರಲೊಂದರಿಂ ಪುಟ್ಟಿ
ಬಿರಿದೊಂದು ವಜ್ರವನು
ಎರಗುವುದು ಮಗುಳ್ದೊಂದು ಕುಸುಮದೊಳು ತಾಂ ॥
ಮಿರುಗುವಾ ಮುತ್ತು ತಾ-
ನರೆ ಕರಿಯದಾಗಿರ್ಪು-
ದೊರೆ ನೀನದಾವುದೋ ಜೇಬ ಉನ್ನಿಸಳೇ ॥

ಜೇಬ ಉನ್ನೀಸಾ-

ನಳಿನ ನಯನದಿನೊಗೆದು
ತೊಳಸಿ ನೋಡುವನೆದೆಯ-
ನಿಳಿದ ಕೈಯ ಗುಲಾಬಿಯೊಳಕೆ ಬೀಳ್ವಾ ॥
ಜಳ ಬಿಂದು ಸುಂದರಿಯ-
ಳಳುಗಣ್ಣ ಕಾಡಿಗೆಯ
ತಳೆದಿಹುದನರಿಯೆಯಾ ಪ್ರಿಯ ನಸೀರ್‍ ಕವಿಯೆ? ॥

Monday, 30 October 2023

ಜ್ಞಾಪಕ - ಕೇತಕೀವನ - ಡಿವಿಜಿ

(೧)

ಬಿಸುಸುಯ್ಯುತಿದೆ ಗಾಳಿ
ಮರಮರಕೆ ಸಾರಿ.
ಸಸಿ ಮೊಗವ ಮುಚ್ಚಿಹನು
ಮುಗಿಲ ಮರೆ ಸೇರಿ.
ಏತಕೋ ತಪಿಪುದೆದೆ; ಕೊರಲನೊತ್ತುತಿದೆ.

ಕೈಯೊಳೆತ್ತಿದುದಿಲ್ಲ;
ಒಡನಾಟವಿಲ್ಲ;
ದನಿಯ ಕೇಳಿದುದಿಲ್ಲ;
ನೋಡಿದುದುಮಿಲ್ಲ.
ಆರೊ ಅವನೆಂದಿರ್ದೆನೆನ್ನ ಶಿಶುವೆನದೆ

ಅಂದೆನ್ನ ಮನೆಯೊಳಗೆ
ನೊಂದಿದಾ ಬೆಳಕು
ಸಂದಿರ್ಪುದಿನಿಸಾನು-
ಮಿಂದಿವನೊಳೆನುತೆ
ಬಗೆದು ದುಗುಡವನಿನಿತು ಮರೆತು ನಾನಿರ್ದೆ.

ಬಾಳ ತೊಳೆವಶ್ರುವಿನ
ಕಲಶವಿವನೆನಗೆ;
ಕಾಲನವನನು ಸೆಳೆದು
ಗಳಿಸುವುದದೇನು?
ಆದೊಡಂ ಪ್ರಾಕ್ತನದ ಬಿದಿಯದೆಂತಿಹುದೋ!

ಎತ್ತಲಾನುಂ ಬಾಳ್ಗೆ
ಅಳಲ ಪಸುಳೆಯವಂ;
ಎತ್ತಿ ಕಾಪಿಡಲವನ-
ನಾರಾನುಮೊಲವಿಂ
ಎನುತ ಪರಸುತ್ತಿರ್ದೆ ಭಯದ ಮೌನದಲಿ.

(೨)

ಎಂತಿಹುದೊ ಎಂದೆನಿಪ
ಚಿಂತೆಯಿನ್ನಿಲ್ಲ;
ಅಳಲ ಶಿಶುಗಿನ್ನಿನಿಸು-
ಮಳಲೆನಿಪುದಿಲ್ಲ;
ಆದೊಡಂ ತಪಿಪುದೆದೆ; ಕೊರಲನೊತ್ತುತಿದೆ.

ಬಿಸುಸುಯ್ಯುತಿದೆ ಗಾಳಿ
ಮರಮರಕೆ ಸಾರಿ;
ಸಸಿಮೊಗವ ಮುಚ್ಚಿಹನು
ಮುಗಿಲ ಮರೆ ಸೇರಿ;
ಕಣ್ಗಳಲಿ ಮಂಜೇನೊ; ಮನದಿ ಧಗೆಯೇನೋ!

Sunday, 29 October 2023

ಹೂ - ಕೇತಕೀವನ - ಡಿವಿಜಿ

ಹೂ - ಕೇತಕೀವನ - ಡಿವಿಜಿ

ಬೆಟ್ಟಗಳ ಕಟ್ಟಿದನು
ಕಡಲುಗಳ ನೆರಚಿದನು
ಮೆಚ್ಚಲಿಲ್ಲ-ತುಟಿಯ ಬಿಚ್ಚಲಿಲ್ಲ.

ಕಾಡುಗಳ ನೆಡಿಸಿದನು
ಮೋಡಗಳ ನಡಸಿದನು
ಮೆಚ್ಚಲಿಲ್ಲ-ತುಟಿಯಬಿಚ್ಚಲಿಲ್ಲ.

ಮಿಗಗಳೋಡಾಡಿದುವು
ಖಗ ಕೀಟ ಪಾಡಿದುವು
ಮೆಚ್ಚಲಿಲ್ಲ-ತುಟಿಯ ಬಿಚ್ಚಲಿಲ್ಲ.

ನರರು ಕುಣಿದಾಡಿದರು
ಚೀರಿದರು ಹೋರಿದರು
ಮೆಚ್ಚಲಿಲ್ಲ-ತುಟಿಯ ಬಿಚ್ಚಲಿಲ್ಲ.

ಕಡೆಗೊಂದು ದಿನ ತಂದೆ
ಕಡುಚಿಂತೆಯಲಿ ನಿಂದು
ನಿರುಕಿಸಿದನು-ಕೃತಿಯ ಪರಿಕಿಸಿದನು.

ಆಗಳೊಂದೆಳೆ ಬಳ್ಳಿ
ತೂಗೆ ತಲೆಯನು ನಯದಿ
ಮೆರೆಯಿತೊಂದು-ನನೆಯು ಬಿರಿಯಿತಂದು.

ಕಂಡನದ ಜಗದ ದೊರೆ
ಕೊಂಡಾಡಿದನು ಮಲರ
ಬಗ್ಗಿ ತೆಗೆದಂ-ಮೂಸಿ ಹಿಗ್ಗಿ ನಲಿದಂ.

ದೋಷವರಿಯದ ಮೊಗ್ಗು
ಆಶೆಯಿರಿಯದ ಹಿಗ್ಗು
ವಿಮಲ ಹಸಿತ-ಅದುವೆ ವಿಪುಲ ಸುಕೃತ.

Saturday, 28 October 2023

ನನ್ನ ಹರ್ಷ - ಕೇತಕೀವನ - ಡಿವಿಜಿ

ಇರುಳಿನಲಿ ನನೆಯಾಗಿ
ಪಾರಿಜಾತವದು
ಬಿರಿದು ಮುಂಜಾವದಲಿ
ಬೀರಿ ಪರಿಮಳವ
ಸೊರಗಿ ಬಿಸಿಲೇಳುತಿರೆ
ಸೇರುವುದು ತಿರೆಯ.

ಅರೆದಿನದ ಬದುಕಿಂತು
ಪೂರಯಿಪುದದಕೆ
ಹರುಷವೆನಗಂತೆಯೇ
ತೋರಿ ತನ್ನಿರವ
ಅರೆಗಳಿಗೆಯೊಳೆ ಕುಂದಿ
ಜಾರುವುದು ಜವದಿಂ.

Friday, 27 October 2023

ಜೀವ-ಸಾವು - ಕೇತಕೀವನ - ಡಿವಿಜಿ

ಕಡಲ ಬಳಿ ಮಣಲಂತೆ
ಒಡಲ ಬಳಿ ನೆಳಲಂತೆ
ಹೂವಿನಲಿ ಕಾಯಂತೆ
ಹುತ್ತದಲಿ ಹಾವಂತೆ
ಮೆರೆಯುತಿದೆ ಮರೆಯಲಿದೆ
ಸಾವು ಜೀವದೊಡಂ.

ಕಾಂತಿಯಲಿ ಬಿಸಿಯಂತೆ
ತಂತಿಯಲಿ ದನಿಯಂತೆ
ಹಾಲಿನಲಿ ಕೆನೆಯಂತೆ
ಹಣ್ಣಿನಲಿ ಕೃಮಿಯಂತೆ
ಮೆರೆಯುತಿದೆ ಮರೆಯಲಿದೆ
ಸಾವು ಜೀವದೊಡಂ.

ಮುಗಿಲಿನಲಿ ಸಿಡಿಲಂತೆ
ಸವಿದೆಯಲಿ ಶಿಖಿಯಂತೆ
ಇರುಳಿನಲಿ ಕಳನಂತೆ
ಬಸಿರಿನಲಿ ಶಿಶುವಂತೆ
ಮೆರೆಯುತಿದೆ ಮರೆಯಲಿದೆ
ಸಾವು ಜೀವದೊಡಂ.

Thursday, 26 October 2023

ಅದೇಕೆ? - ಕೇತಕೀವನ - ಡಿವಿಜಿ

ಅದೇಕೆ? - ಕೇತಕೀವನ - ಡಿವಿಜಿ

ತಣ್ಗದಿರನೆಸೆಯುತಿರೆ
ಗಾಳಿಯಳಲೇಕೆ?
ಕಣ್ಗಳಿಗೆ ಹಬ್ಬಮಿರೆ
ಎದೆ ಬೇವುದೇಕೆ?

ಉಡುಗಣವು ನಗುತಲಿರೆ
ಕಡಲ ಮೊರೆಯೇಕೆ?
ಒಡಲಿಗೈಸಿರಿಯಿರಲು
ಎಡರಾತ್ಮಗೇಕೆ?

ತರಣಿ ಬೆಳಕೀಯುತಿರೆ
ತಿರೆಯ ಮಬ್ಬೇಕೆ?
ಮತಿ ನಯವನುಸಿರುತಿರೆ
ಮನವಲೆವುದೇಕೆ?

ಹೊರಗಿಹುದು ಒಳಗಿಹುದ
ತಣಿಸದಿಹುದೇಕೆ?
ಒಳಗಿಹುದು ಹೊರಗಿಹುದ
ಸೈಸದಿಹುದೇಕೆ?

Wednesday, 25 October 2023

ಧ್ರುವ - ಕೇತಕೀವನ - ಡಿವಿಜಿ

ಪ್ರಶ್ನೆ:

ನೋಡುತಿರ್ಪುದದೇನು
ನಿಶಿನಿಶಿಯೊಳೆವೆಯಿಡದೆ?
ಮೂಡುತಿರ್ಪುದದೇನು
ಮಿಸುಕದೊಂದೆಡೆ ನಿಂತು?
-ಅದನುಸಿರು, ಧ್ರುವರಾಯ;
ಬದುಕದುವೆ ಜೀಯ?

ಉತ್ತರ:

ಕಾವಲಿಹುದೊಂದೆಡೆ
ಅಂದೊಂದೆ ಉಜ್ಜುಗವೆನಗೆ
ನೀವಿಡುವ ನಚ್ಚುಗೆ
ಅದೊಂದೆ ಮನ್ನಣೆಯೆನಗೆ
-ಕೇಳು ಮಗು ನೀನಿದನು-
ಬಾಳ ನೋಂಪಿಯ ಹದನು.