Monday, 12 February 2024

ಬೇಲೂರಿನ ಶಿಲಾ ಬಾಲಿಕೆಯರು - ನಿವೇದನ - ಡಿವಿಜಿ

*ಬೇಲೂರಿನ ಶಿಲಾ ಬಾಲಿಕೆಯರು - ನಿವೇದನ - ಡಿವಿಜಿ*

ಶ್ರವಣಕೆ ಸಿಲುಕದ ಲಲಿತಾ । 
ರವ ಸುಖಮಂ ರಸನೆಗೊದವದಮೃತ ದ್ರವಮಂ ॥ 
ಎವೆಯಿಕ್ಕದ ನಯನಗಳಿಂ । 
ಸವಿವುದು ನೀಮೆಂಬ ಮಾಯಗಾತಿಯರಿವರಾರ್‍ ॥ ೧ ॥ 

ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀಂ 
ನೃತ್ಯ ಲಾಸ್ಯದಿನಾರನೊಲಿಸುತಿರುವೆ । 
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ 
ದಾರ ಚರಿತೆಗಳ ಶುಕಿಗುಸಿರುತಿರುವೆ । 
ಮುಗ್ಧ ಮೋಹನ ವದನೆ ಮುಕುರದೊಳ್‍ ನೋಡಿ ನೀ 
ನಾರ ನೆನೆದಿಂತು ನಸುನಗುತಲಿರುವೆ ॥ 
ಪ್ರಣಯ ಪ್ರರೋಹೆ ನೀಂ ಪ್ರಿಯತರಾಕೃತಿಯಿಂದೆ 
ರುಷೆಯನಿಂತಾರೊಳಭಿನಯಿಸುತಿರುವೆ ॥ 
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ । 
ದೇವದೇವನ ಸೇವೆಗೈತರ್ಪ ಸಾಧುಕುಲಮಂ । 
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ 
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ ॥ ೨ ॥ 

ಇನ್ನೆವರಮೊಲಿದು ಬಾರದ ನಿಮ್ಮ ಮನದಿನಿಯ 
ನಿನ್ನು ಬಹನೆಂದು ನೀಂ ತಿಳಿವುದೆಂತು । 
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯೀ 
ವಿಷಮ ಸಮಯದಿ ನಿಮಗೆ ದೊರೆವುದೆಂತು । 
ನಿಮ್ಮ ವದನದ್ಯುತಿಗೆ ಮರುಳಾಗಿ ಸೋಲದನ 
ರಸಜೀವಿಯೆನ್ನುತಾದರಿಪುದೆಂತು । 
ನಿಮ್ಮ ನೂಪುರ ರವಕೆ ಬೆರಗಾಗಿ ನಿಲ್ಲದನ 
ಭಾವಜ್ಞನೆಂದು ನೀಂ ಬಗೆವುದೆಂತು ॥ 
ರೂಪಮಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ । 
ರೂಪ ವಿಭವದಿನಿತ್ತಲೈತಂದು ಮೆರೆಯೆ ನಿಮ್ಮ । 
ಲಾಸ ಲಾವಣ್ಯಗಳ್‍ ಧರೆಯಿಂದೆ ಪಾರ್ವುವೆನುತೆ । 
ಮರೆಯಿಂದೆ ಕಂಡು ನಿಮ್ಮೊಲವಿಂದೆ ನಲಿವನೇನೋ ॥ ೩ ॥ 

ಶ್ರುತ ಗಾನಮಭಿರಾಮಮಾದೊಡಶ್ರುತಗಾನ 
ಮಭಿರಾಮತರಮೆನುತೆ ರಸಿಕರೊಸೆವರ್‍ ।
ರಾಮಣೀಯಕ ಕುಲುಮೆ ನಿಮ್ಮೆದೆಯ ನುಡಿ ಕಿವಿಯ 
ನಾನದೊಡಮೆಮ್ಮೆದೆಯ ಸೇರಲರಿಗುಂ । 
ಅದರಿಂದಮಲ್ತೆ ನಿಮ್ಮಭಿಮತಂಗಳನರಿತು 
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್‍ । 
ವರ್ಷಶತಕಗಳಿಂದೆ ಕುಂದದಿಹ ಲಾವಣ್ಯ 
ದಂತರಂಗವನಿಂತು ಬಗೆವೆನೀಗಳ್‍ ॥ 
ಬಿದಿಯ ಕರ ಚಾತುರಿಯೊಳನಿತಿನಿತು ಸುಳಿದು ಸರಿವ । 
ಮನುಜ ಮಾನಸದೊಳತಿ ಚಿತ್ರದಿಂ ಚಲಿಸಿ ಮೆರೆವ । 
ಭುವನ ಜೀವನ ಸಸ್ಯಕಮೃತ ಬಿಂದುಗಳನೆರೆವ । 
ಪರತತ್ತ್ವ ಮಾಧುರಿಯನಿನಿಸು ನೀಂ ತೋರ್ಪಿರಲ್ತೆ ॥ ೪ ॥ 

ಆನಂದನಿಧಿಯಾ ಪರಾತ್ಪರನೆನಲ್‍ 
ಜಗದೊ ಳಾನಂದವೀವರಂ ಕಳೆಯಲಹುದೇಂ । 
ಪ್ರೇಮಮಯ ಮೂರ್ತಿಯಾ ಪರದೇವನೆನುತಿರಲ್‍
ಪ್ರೇಮಾಂಕುರಂಗಳಂ ಮುರಿಯಲಹುದೇಂ । 
ಸೌಂದರ್ಯ ಸರ್ವಸ್ವ ನಿಧಿಯಾತನೆನುತಿರಲ್‍ 
ಸುಂದರಾಕಾರರೊಳ್‍ ಮುಳಿಯಲಹುದೇಂ ॥ 
ಜೀವನಾಧಾರನವನೆನುತೆ ಪೊಗಳುತ್ತಿರಲ್‍ 
ಜೀವನೋಜ್ಜ್ವಲೆಯರಂ ಪಳಿಯಲಹುದೇಂ ॥ 
ಜಗದುದಯಕಾರಣನ ಮೈಮೆಗಳನರಿತು ನೆನೆದು । 
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ । 
ಸೊಗಮಿನಿಸು ತೋರಿ ಸಂಸೃತಿಪಥಂ ಸುಗಮಮೆನಿಸಲ್‍ । 
ಅದುವೆ ದೇವಂಗೆ ನೀಮೆಸಗುವಾ ಸೇವೆಯಲ್ತೆ ॥ ೫ ॥ 

ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು 
ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ । 
ವಿಗತ ಸೌಮನಸರುಂ ವಿಪರೀತ ಚರಿತರುಂ 
ವಿಮುಖತೆಯನಾನಲದರಿಂದೆ ನಿಮಗೇಂ । 
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು 
ಪದವನನು ಕರಿಪ ವಾದಿತ್ರಗಳ್‍ ಸೂಕ್ಷ್ಮದಿಂದೆ । 
ನೆಳಲನಿತ್ತೀ ಲತಾವಳಿ ನಿಮ್ಮನಾದರಿಸು 
ಗೆಂದಿಗುಂ ತಂಬೆಲರ ಸುರಭಿಯಿಂದೆ ॥ 
ನಗುತ ನಲಿಯುತ ಮೆರೆದು ಹಾವ ಭಾವಗಳಿನೆಸೆದು । 
ಮಂಜು ಜಲ್ಪವ ತೋರಿ ಮುಗ್ಧ ವೀಕ್ಷಣವ ಬೀರಿ । 
ಕಠಿನರಾಗದೆ ಕಾಲ ದೌಷ್ಟ್ಯದಿಂ ಕುಂದುವಡದೆ । 
ಶುಷ್ಕ ಹೃದಯರ್ಗೆ ನೀಂ ಸೌಹೃದವ ನೀಡುತಿಹುದೌ ॥ ೬ ॥ 

ಅವ್ಯಕ್ತ ನಿನದದಿಂದಕಲಂಕಿತಾಂಗದಿಂ 
ದನ್ಯೂನ ತರುಣತೆಯಿನಮಿತಯಶದಿಂ । 
ಚಿರ ಕಾಲಮೆಸೆವುದೌ ಚಿತ್ತವೇಧನಿಯರಿರ 
ಕುದಿವ ಲೋಕಕೆ ಮುದದ ತಣಿವ ಬೀರಿ । 
ಸೌಂದರ್ಯಮೇ ವಿಶ್ವತತ್ತ್ವಮಾ ಪರತತ್ತ್ವ 
ಭಾಸಮೇ ಸೌಂದರ್ಯಮೆನುತ ಸಾರಿ । 
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ 
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ ॥ 
ಪೊಳೆಯಿರೌ ಸರಸ ಜೀವನ ಮಂತ್ರ ಗುರುಗಳೆನಿಸಿ । 
ಪಳಿಯಿರೌ ಮಧುರ ಭಾವವ ಪಳಿವ ವಿಕೃತ ಮತಿಯಂ । 
ಕಳೆಯಿರೌ ರಸಕಲಾವಿಮುಖತೆಯ ಜನದ ಮನದಿಂ । 
ಬೆಳೆಯಿರೌ ಪ್ರೇಮ ಧರ್ಮೋದ್ಧರಣ ವಿಧಿಯೊಳೆಂದುಂ ॥ ೭ ॥ 

೧೧ನೆಯ ಡಿಸೆಂಬರ್‍ ೧೯೨೩

ಪದ್ಯ ೧ : ಶ್ರವಣ-ಕಿವಿ; ಆರವ (ರವ) ಧ್ವನಿ, ನಾದ; ರಸನೆ-ನಾಲಗೆ. ಕಿವಿಗೂ ನಾಲಗೆಗೂ ದೊರೆಯಲಾರದ ಒಂದು ಇಂಪು ಇಲ್ಲಿ ಕಣ್ಣಿನ ಮೂಲಕ ದೊರೆಯುವುದಾಗಿದೆ. 
ಪದ್ಯ ೨ : ವಲ್ಲರಿ-ಹಬ್ಬಿದ ಬಳ್ಳಿ; ಲಾಸ್ಯ-ಗೀತಾಭಿನಯ ಸಮೇತ ನರ್ತನ. ಮಂಜೂಷಾ-ಕೈಪೆಟ್ಟಿಗೆ, ಡಬ್ಬಿ. ಪ್ರರೋಹ-ಮೊಳಕೆ; ರುಷೆ-ರೋಷ. 
ಪದ್ಯ ೩ : ನೂಪುರ-ಕಾಲಂದುಗೆ, ಗೆಜ್ಜೆ. 
ಪದ್ಯ ೪ : ಶ್ರುತ-ಕೇಳಿಸಿದ, ಕಿವಿಮುಟ್ಟಿದ; ಅಶ್ರುತ-ಕೇಳಿಸದ, ಕಿವಿತಾಕದ; ಅಭಿರಾಮತರಮ್‍-ಹೆಚ್ಚು (More) ಮನೋಹರವಾದದ್ದು. “Heard melodies are sweet, but those unheard Are sweeter”. –Keats, Ode on A Grecian Urn. ಎದೆಯ ನುಡಿ–ಅಂತರಂಗದ ಮಾತು, ಹೃದಯವಾಣಿ; ಬಿದಿಯ–ವಿಧಿಯ, ಸೃಷ್ಟಿಕರ್ತನ; ಕರಚಾತುರಿ-ಕೈಚಳಕ. 
ಪದ್ಯ ೫ : ಆನಂದನಿಧಿ... ಪ್ರೇಮಮಯಮೂರ್ತಿ... 
“ತಸ್ಯ ಪ್ರಿಯಮೇವ ಶಿರಃ । ಮೋದೋ ದಕ್ಷಿಣಃ ಪಕ್ಷಃ । ಪ್ರಮೋದ ಉತ್ತರಃ ಪಕ್ಷಃ । ಆನನ್ದ ಆತ್ಮಾ ॥ –ತೈತ್ತಿರೀಯ ಉಪನಿಷತ್ತು II - ೫.

Saturday, 10 February 2024

ಬಲಿ ಚಕ್ರವರ್ತಿ - ನಿವೇದನ - ಡಿವಿಜಿ















ಬಲಿ ಚಕ್ರವರ್ತಿ ಭೂಸ್ವ । 
ರ್ವಲಯಗಳಂ ಭುಜದ ಬಲದೆ ನೀಂ ಗೆಲ್ದೊಡದೇ ॥ 
ನೊಲಿದಾ ವಟುವಿಂಗೆಲ್ಲವ । 
ಬಲಿಗೈಯುತೆ ತೋರ್ದ ಬಲಮೆ ಬಲುಮೆಯೆನಿಕ್ಕುಂ ॥ ೧ ॥ 

ಛಲದಿಂ ಮೂರಡಿಯುರ್ವಿಯಂ ಬಯಸಿದಂ ದೈತ್ಯಾರಿಯೆಂದೆಂಬುದೇಂ । 
ಬಲಿ ನಿನ್ನಂದದಿ ಭೂ ದಿವಂಗಳೊಳದಾರುಂ ಚಾಗಿಯಿಲ್ಲೆಂದೆನು ॥ 
ತ್ತೊಲಿದಿನ್ನಾರ್ಗಮಲಭ್ಯಮಾದ ಚರಣ ಶ್ರೀ ರಾಶಿಯಂ ನಿನ್ನಯಾ । 
ತಲೆಯೊಳ್‍ ಸೂಸಿದನಾ ತ್ರಿವಿಕ್ರಮನಲೈ ನಿನ್ನಂತದಾರ್‍ ಧನ್ಯರೋ ॥ ೨ ॥

ಹರಿಚರಣಂ ನಿನ್ನಿಂ ಬಲಿ । 
ಪಿರಿದೆನಿಪವೊಲಾದುದೊಂದು ಸೋಜಿಗಮಲ್ಲಂ ॥ 
ಗುರುತೆಯನರಿದೊಡೆಯುಂ ನೀಂ 
ಶಿರದೊಳದಂ ತಾಳ್ದುದಲ್ತೆ ಲೋಕದಿ ಚಿತ್ರಂ ॥ ೩ ॥ 

ಮೀನದಂ ಕೂರ್ಮನಾದಂ ದನುಜರನಿರಿಯಲ್‍ ಪಂದಿಯಾದಂ ಪರೇಶಂ । 
ಮೇಣಾ ಸಿಂಹಾಸ್ಯನಾದಂ ಮಗುಳೆ ಜನಿಸಿದಂ ಶೂರರಂತಾದೊಡಂ ತಾ ॥ 
ದೀನಾಲ್ಪಾಕಾರದಿಂ ಬಂದತಿಶಯ ನಯದಿಂ ಬೇಡಿದಂ ವಿಷ್ಣು ನಿನ್ನಂ । 
ದಾನೋದ್ದಾಮಾಗ್ರಣೀ ನೀಂ ಹರಿಯ ಕಿರಿಯನಂ ಗೈದನಾದೈ ಬಲೀಂದ್ರಾ ॥ ೪ ॥ 

ಶ್ರದ್ಧೆಯನರ್ಜನ ವಿಧಿಯೊಳ್‍ । 
ಸಿದ್ಧತೆಯಂ ದಾನ ದೀಕ್ಷೆಯೊಳ್‍ ಪ್ರಕಟಿಸುವಾ ॥ 
ಶುದ್ಧಾತ್ಮತೆಯಂ ಭುವನದೊ । 
ಳುದ್ದೀಪಿಪ ದೀಪಮಲ್ತೆ ಬಲಿ ನಿನ್ನ ಯಶಂ ॥ ೫ ॥

ಪದ್ಯ ೫: “ಭೂತ್ಯೈನ ಪ್ರಮದಿತವ್ಯಂ” (ಸಂಪಾದನೆಯಲ್ಲಿ ಅಜಾಗ್ರತೆ ಕೂಡದು), “ಶ್ರದ್ಧಯಾ ದೇಯಂ” (ಶ್ರದ್ಧೆಯಿಂದ ದಾನಮಾಡಬೇಕಾದದ್ದು) -ಇವೆರಡೂ ವೇದ ವಿಧಿ.

Friday, 9 February 2024

ಜ್ಞಾಪಕ, ವಿಜ್ಞಾಪನೆ ಮತ್ತು ಮುನ್ನುಡಿ - ನಿವೇದನ - ಡಿವಿಜಿ

ಜ್ಞಾಪಕ:

“ನಿವೇದನ” ಪುಸ್ತಕವು ಮೊದಲ ಸಾರಿ ಪ್ರಕಟವಾದದ್ದು ೧೯೨೪ನೆಯ ಇಸ್ವಿ ಏಪ್ರಿಲ್‍ ತಿಂಗಳಲ್ಲಿ, ಬೆಂಗಳೂರು ಸೆಂಟ್ರಲ್‍ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ.

ಆಗ ಅದರ ಪೀಠಿಕೆಯಲ್ಲಿ ಹೀಗೆ ಹೇಳಿತ್ತು:

“ತನ್ನ ದೇಶದಲ್ಲಿ ಪ್ರಕೃತಿ ನಿರ್ಮಿತಗಳಾಗಿಯೂ ಮನುಷ್ಯ ನಿರ್ಮಿತಗಳಾಗಿಯೂ ಖ್ಯಾತಿಗೊಂಡಿರುವ ದೃಶ್ಯ ವಿಶೇಷಗಳನ್ನು ಲೇಖಕನು ಮೊಟ್ಟ ಮೊದಲು ನೋಡಿದಾಗ ತನಗಾದ ಅನುಭವವು ಮರಳಿ ಆಗಾಗ ತನ್ನ ನೆನಪಿಗೆ ದೊರೆಯಲಾಗುವಂತೆ ಅದನ್ನು ಮಾತುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಮಾಡಿದ ಪ್ರಯತ್ನದ ಫಲವೇ ಈ ಪುಸ್ತಕದ ಪದ್ಯಗಳು.”... “ಬೇಲೂರಿನ ವಿಗ್ರಹಗಳು ಕೀಟ್ಸ್‍ (Keats) ಎಂಬ ಇಂಗ್ಲಿಷ್‍ ಕವಿಯ Ode on a Grecian Urn ಎಂಬ ಕಾವ್ಯದಲ್ಲಿಯ ಸೌಂದರ್ಯ ಪ್ರಶಂಸೆಯನ್ನು ಜ್ಞಾಪಕಕ್ಕೆ ತಂದವು. ಇಲ್ಲಿಯ ಒಂದೆರಡು ಪಂಕ್ತಿಗಳು ಆ ಮಹಾಕವಿಯ ಪ್ರಸಾದವಾಗಿವೆ”.

ಈ ಸಾರಿಯೂ ಕರ್ಣಾಟಕ ಸಂಘವು ಕೆಲವು ಚಿತ್ರಪಟಗಳ ಪಡಿಯಚ್ಚುಗಳನ್ನು ಕೊಟ್ಟು ಉಪಕರಿಸಿದೆ.

ಶ್ರೀಮುಖ
ಕ್ರಿ. ೧೯೩೩
ಡಿ.ವಿ.ಜಿ.

ವಿಜ್ಞಾಪನೆ:

ಈ ಪುಸ್ತಕಕ್ಕೆ ಇಂದಿನ ಪುನರ್ಮುದ್ರಣಯೋಗ ಬಂದಿರುವುದು ಬಹುಮಟ್ಟಿಗೆ ಮೈಸೂರು ವಿಶ್ವವಿದ್ಯಾಲಯದ ಕೃಪೆಯಿಂದ. ಆ ವಿದ್ಯಾಪೀಠದ ಅಧಿಕಾರಿಗಳು ಇದನ್ನು ೧೯೫೮ರ ಇಂಟರ್‍ಮೀಡಿಯೆಟ್‍ ಪರೀಕ್ಷೆಗೆ ಪಠ್ಯಗ್ರಂಥವನ್ನಾಗಿರಿಸಿದ್ದಾರೆ. ಈ ಉಪಕಾರಕ್ಕಾಗಿ ಅವರಿಗೆ ಲೇಖಕನ ಹೃದಯದಿಂದ ವಂದನೆ.

ಇದರಲ್ಲಿಯ ಪದ್ಯಗಳು ಈಗ್ಗೆ ಮೂವತ್ತುಮೂರು ವರ್ಷಗಳಷ್ಟು, –ಇನ್ನೂ ಹೆಚ್ಚು, –ಹಳೆಯವು. ಈ ಕಾಲಧಾವಿತದಲ್ಲಿ ಭೂಮುಖ ಬಹುಮಟ್ಟಿಗೆ ಬದಲಾಯಿಸಿದೆ. ೧೯೨೩ರ ಕಣ್ಣಿಗೆ ಕಾಣಿಸಿದ್ದು ೧೯೫೬ರ ಕಣ್ಣಿಗೆ ಕಾಣಬಂದೀತೋ, ಬಾರದೋ! ಪ್ರಕೃತಿಯ ಪ್ರೇಕ್ಷಣೀಯ ಕ್ಷೇತ್ರಗಳಲ್ಲಿ ಉಳಿದು ನಿಲ್ಲದೆ ಇಮಿರಿಹೋಗಬಹುದಾದ ಸೌಂದರ್ಯಾಂಶವನ್ನು ಬಹುದಿನದ ಪುನರ್ದರ್ಶನಕ್ಕಾಗಿ ಹಿಡಿದಿರಿಸುವ ಸಾಧನ (ಫೊಟೋ) ಛಾಯಾಗ್ರಹಣ ಯಂತ್ರಕಲೆಯದು. ಅಂಥ ಸೌಂದರ್ಯದರ್ಶನದಿಂದ ಮನಸ್ಸಿಗಾದ ಒಂದು ಕ್ಷಣದ ಅನುಭವವನ್ನು ಸ್ಥಿರರೂಪದಲ್ಲಿ ಹಿಡಿದಿರಿಸುವ ಪ್ರಯತ್ನ ಕವನ ಕಲೆಯದು. ಪದ್ಯದಲ್ಲಿ ಹುದುಗಿಸಿದ ಭಾವವನ್ನು ಮತ್ತಷ್ಟು ವಿಶದಪಡಿಸಲು ಅದನ್ನು ಪ್ರೇರಿಸಿದ ಕ್ಷೇತ್ರದ ಪ್ರತ್ಯಕ್ಷ ದರ್ಶನ ಸಹಾಯವಾಗುತ್ತದೆ. ಆ ಕ್ಷೇತ್ರಗಳ ಮೇಲ್ಗುರುತುಗಳು ಕೆಲವು ಬದಲಾಯಿಸಿದ್ದರೂ ಹೆಗ್ಗುರುತುಗಳು ಕೆಲವಾದರೂ ಉಳಿದುಕೊಂಡಿರುತ್ತವೆ. ಇವು ಪುನರನುಭವಕ್ಕೆ ಸ್ಫೂರ್ತಿಕಾರಣಗಳಾಗುತ್ತವೆ. ಆದದ್ದರಿಂದ ಕುತೂಹಲಿಗಳಾದ ವಾಚಕ ಮಿತ್ರರು ಪ್ರಸಕ್ತ ಕ್ಷೇತ್ರಗಳಿಗೆ ಹೋಗಿ ಕಣ್ಣಾರ ನೋಡಬೇಕೆಂಬುದು ಲೇಖಕನ ಬೇಡಿಕೆ. ಅವೇನೂ ದೂರದೇಶಗಳಲ್ಲ,

ಇನ್ನೊಂದು ಮಾತು: ಬೇಲೂರಿನ ಶಿಲ್ಪ ಬೈಭವವನ್ನು ಕುರಿತು ಇಲ್ಲಿರುವ ಪದ್ಯಾವಳಿಯ ಜೊತೆಗೆ ನೋಡಬಹುದಾದ ಇನ್ನೊಂದು ಪ್ರಬಂಧ–ಅದೇ ವಸ್ತುವನ್ನು ಕುರಿತದ್ದು– “ಶ್ರೀ ಚೆನ್ನಕೇಶವ ಅನ್ತಃಪುರ ಗೀತೆ” (೧೯೫೦). ಸೌಂದರ್ಯ ತತ್ತ್ವದ ವಿಚಾರ ಅದರಲ್ಲಿ ಒಂದಷ್ಟಿದೆ.

ಈ ಪದ್ಯಗೀತೆಗಳಿಗೆ ಹಿನ್ನೆಲೆಯನ್ನೂ “ಬೇಲೂರುಗುಡಿ” ಎಂಬ ಎ.ಐ.ಆರ್‍. ಭಾಷಣದಲ್ಲಿ ಕಾಣಬಹುದು. ಸೌಂದರ್ಯಕ್ಕೂ ಧರ್ಮಕ್ಕೂ ಇರುವ ಸಂಬಂಧವನ್ನು ಅಲ್ಲಿಯೂ ಸಂಕ್ಷೇಪವಾಗಿ ಪ್ರಸ್ತಾವಿಸಿದೆ. (“ಅನ್ತಃಪುರಗೀತೆ”, “ಬೇಲೂರುಗುಡಿ” –ಇವೆರೆಡೂ ಮೈಸೂರು ಕಾವ್ಯಾಲಯದ ಪ್ರಕಟನೆಗಳು.)

ಈಚೆಗೆ (೨೬-೧-೧೯೫೬) ಬೆಂಗಳೂರು ಸೆಂಟ್ರಲ್‍ ಕಾಲೇಜಿನ ಕರ್ಣಾಟಕ ಸಂಘದಿಂದ ಪ್ರಕಟವಾದ “ಅರೆಮೂಕ” ಎಂಬ ಹೆಸರಿನ ಲೇಖನ ಸಂಗ್ರಹದಲ್ಲಿ (ಕಾಲೆಜ್‍ ಬರವಣಿಗೆ–೧೦), ಆ ಹೆಸರಿನ ಹಾಡನ್ನು ಕುರಿತ ವ್ಯಾಖ್ಯಾನವೊಂದು ಸೇರಿದೆ. ಹೀಗೆ ವಿದ್ಯಾರ್ಥಿಗಳಿಗೆ ಒಪ್ಪಿಗೆಯಾದ ಹಾಡು ಪುಸ್ತಕದಲ್ಲಿದ್ದರೆ ಉಪಯೋಗವಾದೀತೆಂದು ಅದನ್ನಿಲ್ಲಿ ಸೇರಿಸಿದೆ. ಅದು ಮೊದಲು ಪ್ರಕಟವಾದದ್ದು “ಪ್ರಬುದ್ಧ ಕರ್ಣಾಟಕ” ಪತ್ರಿಕೆಯ ೧೯೨೬ರ ವಿನಾಯಕನ ಸಂಚಿಕೆಯಲ್ಲಿ (VIII-1).

ಈ ಪುಸ್ತಕದ ವಿಷಯ ಲೇಖಕನ ಮನಸ್ಸಿಗೆ ಬಂದಾಗಲೆಲ್ಲ ಒಡಗೂಡಿ ಜ್ಞಾಪಕಕ್ಕೆ ಬರುವ ಹೆಸರುಗಳು ಬೆಳ್ಳಾವೆಯ ವೆಂಕಟನಾರಣಪ್ಪನವರು, ಟಿ.ಎಸ್‍.ವೆಂಕಣ್ಣಯ್ಯ–ಇವರವು. ಅವರು ಇಲ್ಲಿಯ ಮುನ್ನುಡಿಯಲ್ಲಿ ನೆನೆದಿರುವ “ಗೆಳೆಯರ್‍”, “ಸರಳರ್‍”. ಅಂಥ ಜನ ನಮ್ಮ ನಾಡಿನಲ್ಲಿ ಈಗಲೂ ಕೆಲವರಾದರೂ ಇದ್ದಾರಲ್ಲವೆ? ಹಾಗೆಂಬ ನಂಬಿಕೆ ಲೇಖಕನಿಗೆ ಈಗ ಇರುವ ಧೈರ್ಯ.

ಆಗಸ್ಟ್ ೧೯೫೬
ಡಿ.ವಿ.ಜಿ.


ಮುನ್ನುಡಿ:

ದಿನದಿನಮುಂ ಪೊಸಪೊಸ ಕಲಿ ।
ತನದಿನಜಂ ಜಗವನೆಸಗುತಿರಲವನ ಪುರಾ ॥
ತನ ಶಿಲ್ಪಶೇಷ ಚಯನಕೆ ।
ಮನವಿತ್ತಿಹರಲ್ತೆ ಸೃಷ್ಟಿವಿಜ್ಞಾನಚಣರ್‍ ॥ ೧ ॥

ಪೊಸಕಲೆಯ ಕಲಿತು ಕುವರಂ ।
ಪೆಸರಾಂತೊಡಮಂತದಿರ್ಕೆಯೆನ್ನುತಲವನಾ ॥
ಪಸುಳೆ ನಡೆನುಡಿಯ ನೆನೆಯು ।
ತ್ತೊಸೆದದ ಬಿತ್ತರಿಪಳಲ್ತೆ ತಾಯೆಲ್ಲರ್ಗಂ ॥ ೨ ॥

ಗೆಳೆಯರ್ಗಂ ಸರಳರ್ಗಂ ।
ಪಳದರೊಳಂ ಸೊಗಸದೊಂದು ತೋರ್ಪುದು ಸಾಜಂ ॥
ಕೊಳುಗವರೊಲಿದೀ ಪದ್ಯಾ ।
ವಳಿಯಂ ಸೊಡರಿದು ಕುಟೀರಕಾಗಸಕಲ್ಲಂ ॥ ೩ ॥

ಇದು ಪಳದದು ಪೊಸತೆನಲೇಂ ।
ಬದುಕಿನರಲ್ಗಿಟ್ಟ ಸಾರಯಂತ್ರಂ ಕವನಂ ।
ಒದವೆ ರಸಂ ಕವಿಸಿದ್ಧಿಯ ।
ದೊದವದಿರಲ್‍ ತಪಸದವನದೆಂಬರ್‍ ಸರಸರ್‍ ॥ ೪ ॥

ತಳಿರನೆಳನೇಸರಪ್ಪುವ ।
ಜಳದಕುಲಂ ಗಿರಿಶಿರಂಗಳಂ ಮುದ್ದಿಸುವಾ ॥
ತಿಳಿಗಣ್‍ ಕಿರುನಗೆಗರಳುವ ।
ವಿಳಸಿತಗಳ ಪಿಡಿವ ಯಂತ್ರಮಂ ಕಂಡವರಾರ್‍ ॥ ೫ ॥

ಬಾಬಾಬುಡನ್‍ ಬೆಟ್ಟ- ನಿವೇದನ - ಡಿವಿಜಿ

(ದತ್ತಾತ್ರೇಯ ಪೀಠಕ್ಕೆ ಹೋಗುವಾಗ)

ಕುಲಪರ್ವತ ಹೃದಯಾಂಶಮೊ । 
ಇಳೆಯಾ ಕನಲಿಕೆಯ ಬುದ್ಬುದೋದ್ರೇಕಮೊ ಮೇ ॥ 
ಣೊಲವಿನ ಪುಲಕಮೊ ಎನ್ನಿಪ ।
ವೊಲು ಬೆರಗಾಗಿಸುವುದಿತ್ತ ಚಂದ್ರದ್ರೋಣಂ ॥ ೧ ॥ 

ಬಿಸಿಲಪ್ಪಿರ್ದ ಪೊಳಲ್ಗಳ್‍ । 
ಮಿಸುಗಲ್‍ ಮಳಲೊಟ್ಟಿಲಂತೆ ಮಲೆಗಳ ಸಾಲ್ಗಳ್‍ ॥ 
ಮಸಗಲ್‍ ಪೇರಲೆಗಳವೋಲ್‍ । 
ಪಸುರ ಕಡಲ್‍ ಕಣ್ಗಳೋಡುವನ್ನೆಗಮೆಸೆಗುಂ ॥ ೨ ॥ 

ಉರಮಂ ಶಿರಮಂ ಚುಂಬಿಸಿ । 
ಸರಸತೆಯಿಂ ಸುಳಿಯುತಿರ್ಪ ಗೌರಾಂಗ ಮನೋ ॥ 
ಹರೆ ಕಾದಂಬಿನಿಯ ತಿರ । 
ಸ್ಕರಿಪೀ ಶೈಲಾಧಿರಾಜನೇಂ ನೀರಸನೋ ॥ ೩ ॥ 

ಶೃಂಗಶತಂ ಮರಕತಮ । 
ಸಿಂಗರಗಳ ತೊಟ್ಟು ಮೆರೆವ ಸಾಮಂತರವೋಲ್‍ ॥ 
ಕಂಗೊಳಿಸುವುವೆತ್ತಲುಮತಿ । 
ತುಂಗಾಕೃತಿಯಾಗಿ ನೋಡುವೀತನ ಸಭೆಯೊಳ್‍ ॥ ೪ ॥ 

ಘೋರಂ ಯೋಜನ ಶತ ವಿ । 
ಸ್ತಾರಂ ತಾನಾಗಿ ವಕ್ರ ಕಂದರ ಪಥದೊಳ್‍ ॥ 
ತೋರುತ್ತಿರ್ಪುದು ಕಣ್ಗೆ ಮ । 
ಹಾರಣ್ಯಂ ಮಲಗಿ ಸುಯ್ಯುವಜಗರೆಪತಿವೋಲ್‍ ॥ ೫ ॥ 

ಗರ್ವಿತ ಸುತರಂ ನಿಂದಿಸು । 
ವುರ್ವರೆಯತ್ಯುಗ್ರ ದಂಷ್ಟ್ರ ಚೇಷ್ಟೆಯ ಪೋಲ್ವೀ ॥ 
ಪರ್ವತ ಗಹ್ವರಮೆಂದುಂ । 
ಶರ್ವರಿಯೋಲಗಕೆ ಗುಪ್ತ ಭವನಮೆನಿಕ್ಕುಂ ॥ ॥ ೬ ॥ 

ಆರೋ ಮಲ್ಲರ್‍ ಪಲಬರ್‍ । 
ವೀರವ್ಯಾಯಾಮಿಕಾಂಗ ವಿನ್ಯಾಸಗಳಿಂ ॥ 
ಪೋರಿದರಿತ್ತಲದಿಲ್ಲದೆ । 
ಭೂರಿಸ್ನಾಯುವನದೇಕೆ ಧರೆಯುರ್ವಿಸುಗುಂ ॥ ೭ ॥ 

ಭೈರವ ತಾಂಡವ ಭುವಿಯೇಂ । 
ಮಾರುತಿ ಲೀಲಾಪ್ರದೇಶಮೇಂ ಭೀಮಗದಾ ॥ 
ಧೋರಣಿಯಂಗಣಮೇನೀ । 
ಧಾರಿಣಿಯೇಕಲ್ಲದೀ ಕರಾಳತೆಯಾಂಪಳ್‍ ॥ ೮ ॥

ಪದ್ಯ ೧ : ಕುಲಪರ್ವತ-ಪುರಾಣ ಪ್ರಸಿದ್ಧಗಳಾದ ಮಹಾ ಪರ್ವತಗಳು ಏಳು-ಮಾಹೇಂದ್ರ ಮೊದಲಾದವು. ಅವುಗಳಲ್ಲೊಂದರ ಅಂತರಂಗ ಭಾಗವೊ ಇದು? ಪುಲಕ-ರೋಮಾಂಚ, ನವಿರ್‍-ನಿಮಿರು. 
೨ : ಆ ಹಸಿರು ಕಡಲಿನ ನಡುವೆ ಊರುಗಳು ಮರಳು ಗುಡ್ಡೆಗಳಂತೆಯೂ ಬೆಟ್ಟಗಳು ತೆರೆಯೇಳಿಕೆಯಂತೆಯೂ ಕಾಣುತ್ತವೆ. 
೩ : ಕಾದಂಬಿನಿ-ಮೋಡದ ಸಾಲು, ಮೇಘಮಾಲೆ. 
೪ : ತುಂಗ-ಎತ್ತರವಾದ (ಚಂದ್ರದ್ರೋಣರಾಜನ ಒಡ್ಡೋಲಗ). 
೫ : ಅಜಗರ-ಮಹಾಸರ್ಪ, ದೊಡ್ಡ ದೊಡ್ಡ ಜಂತುಗಳನ್ನು ನುಂಗಬಲ್ಲದ್ದು. 
೬ : ಉರ್ವರೆ-ಭೂಮಿದೇವಿ; ಶರ್ವರಿ-ರಾತ್ರಿ, ಕತ್ತಲೆ. 
೭ : ಸ್ನಾಯು-ದೊಡ್ಡ ನರ, Muscle; ಉರ್ವಿಸು=ಉಬ್ಬಿಸು.

Thursday, 8 February 2024

ಶಿವನ ಸಮುದ್ರ - ನಿವೇದನ - ಡಿವಿಜಿ

ತರುಗುಲ್ಮಾವೃತ ಶೈಲಮೆ ।
ಮರಕತ ಶಿವಲಿಂಗಮೆನುತೆ ಕಾವೇರಿಯದಂ ॥
ಪರಿಚರಿಸಿ ಲೋಕಕೆಲ್ಲಂ ।
ದೊರೆಯಿಪ ತೀರ್ಥಾಂಬುವಲ್ತೆ ಶಿವನ ಸಮುದ್ರಂ ॥ ೧ ॥

ಒಂದೆಡೆಯೊಳಾದಿಶಕ್ತಿಯ ।
ಸಂಧಾನಾದ್ಭುತ ವಿಶೇಷಮಾರ್ಭಟಿಸಲ್‍ ಮೇ ॥
ಣೊಂದೆಡೆ ಮೆರೆವುದು ಮನುಜನ ।
ಸಂಧಾನಾದ್ಭುತ ವಿಶೇಷಮಾ ಮಂಡಲದೊಳ್‍ ॥ ೨ ॥

ಮೊರೆಯುತೆ ಸರಿಯುತೆ ಭರದಿಂ ।
ಪರಿದೋಡುತೆ ಜಾರಿ ಪಾರಿ ಮುಕ್ತಾಂಜಲಿಯಂ ॥
ಎರಚುತಲೆರಗುತೆ ರಭಸದಿ ।
ಬರುತಿರ್ಪಾ ಜಲವಿಲಾಸಮೇನತಿಶಯಮೋ ॥ ೩ ॥

ಶಿವನೊಡಲ ಹಾರಮೇಂ ನಿಜ ।
ಭವನಕೆ ಸರಿವಾದಿಶೇಷ ಸಂತತಿಯೇನಾ ॥
ಧವಳತರ ಧಾರೆ ಮಾಡುವು ।
ದವಲೋಕನಕೊಂದು ಭೀಷ್ಮ ಸಂಮೋಹನಮಂ ॥ ೪ ॥

ಒಲವೇಂ ಸಂಭ್ರಮವೇಂ ಪ್ರಿಯಾಭಿಸರಮೇಂ ಲಾವಣ್ಯಮೇಂ ಲೀಲೆಯೇಂ ।
ಮುಳಿಸೇಂ ಸಾಹಸಮೇಂ ಮಹಾಗರುವಮೇಂ ಯಾತ್ರಾವ್ರತೋತ್ಸಾಹಮೇಂ ॥
ಬಲಮಂ ತೋರುವ ಠೀವಿಯೇಂ ಚಪಲಮೇಂ ಮಂದಾತ್ಮರಂ ನಿಂದಿಪಾ ।
ಚಲಮೇನೀಪರಿ ಧಾವಿಸುತ್ತಲಿಹುದೇಂ ಕಾವೇರಿ ರಾಜ್ಯೇಶ್ವರೀ ॥ ೫ ॥

ಧೂಮಸ್ತೋಮದ ಮೂಲದತ್ತ ಮೊರೆಗುಂ ಶೀತಾಂಬುಪಾತಂ ಸರಿ ।
ದ್ರಾಮಾನೇತ್ರದಪಾಂಗಮೆತ್ತಲೆನೆ ವಿದ್ಯುಜ್ಜ್ವಾಲೆಯುಜ್ಜೃಂಭಿಕುಂ ॥
ಈ ಮಾಚಿತ್ರದಿ ಕಾಣ್ಗುಮಲ್ತೆ ದಿಟಮಲ್ಲಂ ತೋರ್ಕೆಯೆಂದೆಂಬುದಾ ।
ಭೀಮಾಕಾರವ ತಾಳ್ದೊಡೇಂ ಸದಯೆ ನೀಂ ಕಾವೇರಿ ಭದ್ರಂಕರೀ ॥ ೬ ॥

ಗತಿಯಿಂದದ್ಭುತಮಂ ಜನೋಪಕೃತಿಯಿಂದೌದಾರ್ಯಮಂ ನಿತ್ಯ ಶು ।
ದ್ಧತೆಯಿಂ ಶಾಂತಿಯನುಗ್ರಭಾವವ ಶಿಲಾನಿರ್ಭೇದದಿಂ ಪರ್ವತ ॥
ಚ್ಯುತಿಯಿಂ ರೌದ್ರವ ತಣ್ಪಿನಿಂ ಪ್ರಿಯತೆಯಂ ಗಾಂಭೀರ್ಯಮಂ ಘೋಷದಿಂ ।
ಸತತಂ ಬೋಧಿಸುತಿರ್ಪೆ ದೇವಿ ಸರಸೇ ಕಾವೇರಿ ಕಾವ್ಯಾಶ್ರಯೇ ॥ ೭ ॥

ಗಿರಿಯ ಕೆಲದಿ ಬನದ ನಡುವೆ ಝರಿಯ ತೆರದಿ ಸುಳಿದು ಬರುತೆ ।
ತಲದ ಶಿಲೆಯನಿರಿದು ಕೊರೆದು ಕೆಲದ ನೆಲವನರೆದು ಮುರಿದು ॥ ೮ ॥
ವಿಮಲ ಜಲದ ವಿಪುಲ ಧಾರೆಯಮೃತ ಲಹರಿಯಂತೆ ತೋರೆ ।
ದಣಿವ ಕಳೆಯುವೆಲರ ಬೀರಿ ಮೃದುಲ ರವದಿ ಮುಂದೆ ಸಾರಿ ॥ ೯ ॥

ಅತ್ತಲತ್ತ ಸುಳಿದು ಸುತ್ತಿ ಇತ್ತಲಿತ್ತ ಮೆಲ್ಲನೊತ್ತಿ ।
ಅಲ್ಲಿ ಬಳುಕುತಿಲ್ಲಿ ಬಾಗಿ ಅಲ್ಲಿ ಬಳಸುತಿಲ್ಲಿ ಸಾಗಿ ॥ ೧೦ ॥

ನೊರೆಯ ಸೇಸೆಗಳನು ಸೂಸಿ ತೆರೆಯ ಚವರಗಳನು ಬೀಸಿ ।
ಬಾಲೆಯಂತೆ ನಲಿದು ಕುಣಿದು ಕಾಳಿಯಂತೆ ಕನಲಿ ಮೊರೆದು ॥ ೧೧ ॥

ಉರಗಿಯಂತೆಯುರುಗಿ ತಿರುಗಿ ಛಲದ ಭರದಿ ಸರಿದು ಮಸಗಿ ।
ಬೆಟ್ಟದಿಂದಲುರುಳಿ ಹೊರಳಿ ದಿಟ್ಟತನದಿ ತೊಳಗಿ ಮೊಳಗಿ ॥ ೧೨ ॥

ಘೋರ ವೇಗದಿಂದ ನೆಗೆದು ಭೋರೆನುತ್ತೆ ಮಂಜನೆಸೆದು ।
ಪನಿಯ ಮುಗಿಲ ಕವಿಸಿ ಸರಿದು ಮನುಜ ಸೇವೆಯಿಂದಲೊಲಿದು ॥ ೧೩ ॥

ಬಲವ ಬೆಳಕ ನೀಡುತುಂ ನಿಲದೆ ನಾಟ್ಯವಾಡುತುಂ ।
ನುಗ್ಗಿ ಬೀಳುತೇಳುತುಂ ನೆಗೆದು ಪಾರುತೋಡುತುಂ ॥ ೧೪ ॥

ಭುವನ ರಚನೆಯೆನಿತು ಕುತುಕಮೆನುತ ಜನಕೆ ಸಾರುತುಂ ।
ಭುವನ ಜನನಿಯೆನಿತು ಚತುರಳೆನುತ ಕಣ್ಗೆ ತೋರುತುಂ ॥ ೧೫ ॥

ಪುರುಷ ಬಲವ ಬೆಳಗಿರೆನುತ ಜಡರ ಪಳಿದು ಮೊಳಗುತುಂ ।
ಪರಿವಳೀ ಕವೇರತನಯೆ ಧೀರಜನನಿಯೆನಿಸುತುಂ ॥ ೧೬ ॥

ಕನ್ನಡ ನಾಡಿನ ಕುತುಕಂ ।
ಕನ್ನಡಿಗರ ಸಾಹಸಕ್ಕೆ ಕನ್ನಡಿ ಮೇಣೀ ॥
ಕನ್ನಡಿಗರ ಭಾಗ್ಯದ ನಿಧಿ ।
ಯುನ್ನತಿಯಂ ಪಡೆದು ಬಾಳ್ಗೆ ಶಿವನ ಸಮುದ್ರಂ ॥ ೧೭ ॥

ರುಧಿರೋದ್ಗಾರಿ ಸಂ ॥
ಆಶ್ವಯುಜ ಶು ॥
೧೦೧೯ನೆಯ ಅಕ್ಟೋಬರ್‍ ೧೯೨೩

ಪದ್ಯ ೧ : ಗುಲ್ಮ-ಪೊದರು. ನದಿ ಗುಡ್ದವನ್ನು ಬಳಸಿ ಹರಿಯುವ ನೋಟ.
೨ : ಒಂದು ಕಡೆ ಜಲಪಾತ, ಒಂದು ಕಡೆ ವಿದ್ಯುದ್ಯಂತ್ರ.
೬ : ಸರಿತ್‍-ನದಿ; ರಾಮಾನೇತ್ರದಪಾಂಗ-ಚೆಲುವೆಯ ಕಣ್ಕುಡಿ ನೋಟ.
೮ : ಕೆಲದಿ-ಪಕ್ಕದಲ್ಲಿ.
೧೧-೧೨ : ಚವರ-ಚಾಮರ; ಉರಗಿ-ಹೆಣ್ಣು ಹಾವು; ಉರುಗಿ-ದುಡುಕಿ, ಮೊಂಡುತನ ಮಾಡಿ; ಭುವನಜನನಿ-ಪ್ರಕೃತಿ, Nature.
೧೬ : ಕವೇರತನಯೆ-ಕವೇರನೆಂಬ ಋಷಿಯ ಮಗಳಾದ ಕಾವೇರಿ.

Wednesday, 7 February 2024

ಚಾಮುಂಡಿಯ ದೀಪಗಳು - ನಿವೇದನ - ಡಿವಿಜಿ

(ದೀವಳಿಗೆಯ ರಾತ್ರಿ-ಲಲಿತಾದ್ರಿಗೆ ಹೋಗುವಾಗ)

ಜ್ಯೋತಿಸ್ಸಮುದ್ರಮಿತ್ತಲ್‍ ।
ಭೂತಲದಾಂಧ್ಯದ ನಿವಾಸಮತ್ತಲ್‍ ನೋಡೀ ॥
ಕೌತುಕದ ಗಿರಿಪಥಂ ಮನು ।
ಜಾತರ ಜೀವನದ ಚಿತ್ರಗತಿಯಂ ಪೋಲ್ಗುಂ ॥ ೧ ॥

ಪುರದೀಪ ಪ್ರಭೆಯವೊಲಾ ।
ಗಿರಿಕಂದರದಮಿತ ಗಾಢ ತಿಮಿರೋತ್ಕರಮುಂ ॥
ಬೆರಗಾಗಿಪುದು ಮನಕ್ಕೀ ।
ಪರಿ ಸೋಜಿಗಮಲ್ತೆ ಸೃಷ್ಟಿ ವಿಭವಮದೆಂತುಂ ॥ ೨ ॥

ಗೌರಿಯ ನಿವಾಸ ಶೈಲಮ ।
ನಾರಾಧಿಸವೇಳ್ಕುಮೆಂದು ಗಗನತಲಂ ತಾಂ ॥
ತಾರಾಸಹಿತಂ ಬಂದವೊ ।
ಲಾರಾಜಿಪುದೀ ಪ್ರದೀಪ್ತ ಪುರ ದಿಗ್ಭಾಗಂ ॥ ೩ ॥

ನೀಲಾಂಭೋಧಿಯ ತೆರೆಗಳೊ ।
ಳೋಲಾಡುವ ದೀಪ್ತ ದೇವ ಯಾನೋತ್ಸವಮಂ ॥
ಪೋಲುತ್ತಿರ್ಪುವು ವಿದ್ಯು ।
ಜ್ಜ್ವಾಲೆಗಳೀ ಗಿರಿಯ ತಳದಿ ಚಿತ್ರಾಕೃತಿಯಿಂ ॥ ೪ ॥

ಮೂಲಪ್ರಕೃತಿಯಿನೊಗೆವೀ ।
ಜ್ವಾಲಾವಳಿ ಸಲ್ಗುಮಾಕೆಗೆನ್ನುತಲೀ ಭೂ ॥
ಪಾಲಂ ಘನ ವಿದ್ಯುನ್ಮಣಿ ।
ಮಾಲೆಯಿನೀ ಶೈಲವರಕಲಂಕೃತಿಗೆಯ್ದಂ ॥ ೫ ॥

ಪದ್ಯ : ಯಾನೋತ್ಸವ-ತೆಪ್ಪೋತ್ಸವ.
೫ : ಮೂಲಪ್ರಕೃತಿ-ಸೃಷ್ಟಿಶಕ್ತಿ, Nature, ಆದಿಶಕ್ತಿ, ಆ ಆದಿಶಕ್ತಿಯೇ ಗೌರಿ, ಪಾರ್ವತಿ, ಚಾಮುಂಡಿ.

Tuesday, 6 February 2024

ಕೃಷ್ಣರಾಜ ಸಾಗರ - ನಿವೇದನ - ಡಿವಿಜಿ

ಕ್ರೀಡಾವಸ್ತು ವಿನೋದ ಪೇಟಿಕೆಯೆನಿಪ್ಪೀ ವಿಶ್ವಮಂ ಕೊಂಡು ನೀ ।
ವಾಡುತ್ತಗ್ಗದ ಜಾಣ್ಮೆಯಿಂದಮೊಲಿಸಲ್‍ ನಾಂ ಪಾರಿತೋಷಂಗಳಂ ॥
ನೀಡುತ್ತಿರ್ಪೆನೆನುತ್ತಲಾ ಪ್ರಕೃತಿ ಸಂಕೇತಗಳಿಂ ಪುತ್ರರಂ ।
ಬೇಡುತ್ತಿರ್ಪಳು ಕಾಡುತಿರ್ಪಳವಳಾ ತಂತ್ರಗಳೇಂ ಚೋದ್ಯಮೋ ॥ ೧ ॥

ಆ ವಿವಿಧ ವಸ್ತು ನಿಕರದೊ ।
ಳಾವಿಷ್ಟ ಮನಸ್ಕರಾಗಿ ತದ್ಯೋಜನೆಯೊಳ್‍ ॥
ಭಾವಿತ ಸುತಂತ್ರರಾದಾ ।
ಕೋವಿದರೀ ಭುವಿಗೆ ಮಾನ್ಯರವರೆ ವದಾನ್ಯರ್‍ ॥ ೨ ॥

ಶೀತಲ ಕಾವೇರೀ ಜಲ ।
ಪಾತದೆ ನಗರಗಳ ಬೆಳಗಿ ಕಜ್ಜಗಳೆಸಪಾ ॥
ಜ್ಯೋತಿಯ ನಿರ್ಮಿಸಿ ಭುವನ ।
ಖ್ಯಾತಿಯನೊಂದಿದನದೊರ್ವನತಿಶಯ ಚತುರಂ ॥ ೩ ॥

ಪರಿವಾ ಕಾವೇರಿಗೆ ನಾಂ ।
ಗಿರಿಯಂದದೊಳಡ್ಡವಿಟ್ಟು ಸರಸಿಯನತ್ತಲ್‍ ॥
ವಿರಚಿಸುವೆನೆಂದೊರ್ವಂ ।
ಪರಮೋತ್ಸಾಹದಿ ನೆಗಳ್ಚಿ ಮುಂದಡಿಯಿಟ್ಟಂ ॥ ೪ ॥

ಅವನಿಂದಾದುದು ನಯನೋ ।
ತ್ಸವಮಿದು ಶ್ರಿ ಕೃಷ್ಣರಾಜ ವಿಮಲ ಯಶೋ ವೈ ॥
ಭವಮಿದು ಜನಪದ ಸುಕೃತೋ ।
ದ್ಭವಮಿದು ಮೇಣ್‍ ಪುರುಷಕಾರ ಮಹಿಮಾನುಭವಂ ॥ ೫ ॥

ಪದ್ಯ ೧: ಕ್ರೀಡಾ... ಪೇಟಿಕೆ-ಆಟದ ಸಾಮಾನಿನ ಪೆಟ್ಟಿಗೆ Toy Box. ಕಾಡುತಿರ್ಪಳ್‍- Teases.
ಪದ್ಯ ೨: ವದಾನ್ಯರ್‍-ದೊಡ್ಡ ಮನಸುಳ್ಳವರು, ಉದಾರಿಗಳು.
ಪದ್ಯ ೩: ಮೈಸೂರಿನ (೧೮೮೩-೧೯೦೦) ದಿವಾನರಾಗಿದ್ದ ರಾಜ್ಯಧುರಂಧರ ಸರ್‍.ಕೆ. ಶೇಷಾದ್ರಯ್ಯರವರು.
ಪದ್ಯ ೪: ಮೈಸೂರಿನ (೧೯೧೨-೧೯೧೮) ದಿವಾನರಾಗಿದ್ದ ಸರ್‍. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.