Friday, 3 November 2023

ಕಲ್ಯಾಣಮುನಿಯ ಪಶ್ಚಾತ್ತಾಪ - ಕೇತಕೀವನ - ಡಿವಿಜಿ

ಪುಣ್ಯದೇಶವ ತೊರೆದು ಧನ್ಯಚರಿತೆಯ ಮರೆತು
ದೂರ ಬಂದೆ
ವೇದಬಾಹಿರನಾಗಿ ಸಾಧುವರ್ಜಿತನಾಗಿ
ಜಾರಿ ನಿಂದೆ

ಸ್ವಜನದೆಡೆ ಸೊಗಮೆಂದು ನಿಜಧರುಮ ಲೇಸೆಂದು
ಗೆಳೆಯರೆಲ್ಲರ್
ಯವನನೃಪನೇಕೆಂದು ಅವನೊಲಿವದೇಕೆಂದು
ಪಳಿದು ನಿಂತರ್‍

ಶ್ರುತಿಮತವ ಪರಪಿ ಸಂಸ್ಕೃತಕಲೆಯ ಕಲಿಸಿ ನಾಂ
ತಿಳಿವಿನಿಂದೆ
ಎನ್ನ ನಾಡನು ರಣದಿ ಬನ್ನವಡಿಸಿದ ಜನರ
ಗೆಲುವೆನೆಂದೆ

ವ್ರತವನದ ಸಾಧಿಸಲು ಹಿತಗತಿಯ ಬೋಧಿಸಲು
ಇತ್ತ ಸಾರ್ದೆ
ಸಾಧಿಪ್ಪುದರಿದಾಗೆ ಮೂದಲಿಕೆಗೀಡಾಗಿ
ಸತ್ತು ಬಾಳ್ದೆ
ಕಾಕಕಂಠವ ತಿರ್ದೆ ಕೋಕಿಲೆಯು ಸಾರಿ ತಾಂ
ಕುಂದುವಂತೆ
ಸ್ವಜನಧರ್ಮವ ವಿಜನಕರುಹೆ ಸಾಹಸಗೈದು
ನೊಂದು ನಿಂತೆ
ಜಾತಿಕರುಮವ ಪರಿದು ಪೂತಮಾರ್ಗಿದಿನಲೆದು
ಮರುಳನಾದೆ
ಅನ್ಯಜನದಲಿ ಬೆರೆತು ಶೂನ್ಯಪಥವನು ಹಿಡಿದು
ದುರುಳನಾದೆ
ಯೋಗವಿಧಿಗಳ ತೊರೆದೆ ಯಾಗ ಸವಗಳ ತೊರೆದೆ
ತಪವ ತೊರೆದೆ
ಯಾಜನಂಗಳ ತೊರೆದೆ ಪೂಜೆ ವ್ರತಗಳ ತೊರೆದೆ
ಜಪವ ತೊರೆದೆ
ಗತಿ ಯಾವುದಿನ್ನೆನಗೆ ಹುತವಹನೆ ಕರುಣೆಯಿಡು
ಅನಲ ನೀನು
ಉರಿಯ ಕರಗಳಿನೆನ್ನ ದುರಿತ ತತಿಯನು ನೀಗಿ
ತನುವ ತಡಹು
ಪೂತನಾಗಿಸು ಭರತ ಭೂತಲದೊಳೇ ಮಗುಳೆ
ಜನುಮ ನೀಡು
ಆರ್ಯದೇಶದಿ ವಿಪ್ರಚರ್ಯೆಯೊಳೆ ನೀನೆನ್ನ
ಮನವ ಮಾಡು
ವಾಯುದೇವನೆ, ಎನ್ನ ಕಾಯಭಸ್ಮವ ಕೊಂಡು
ಕರುಣೆಯಿಂದೆ
ಭುವನ ಪಾವನೆಯೆನಿಪ ದಿವಿಜಗಂಗೆಯೊಲಿರಿಸು
ತ್ವರಿತದಿಂದೆ
ಯಾಗದೇವನೆ, ಎನ್ನ ಬೇಗದಿಂ ಬಿಡಿಪುದೀ-
ಯೊಡಲ ಸೆರೆಯಿಂ
ಪಾಳು ಬಡಿದಿರ್ಪ ಈ ಬಾಳ ನೀಂ ಕೈಪಿಡಿದು
ನಡಸು ದಯೆಯಿಂ.

Thursday, 2 November 2023

ಒಬ್ಬ ತರುಣ ಕವಿಗೆ - ಕೇತಕೀವನ - ಡಿವಿಜಿ

(ಆತನ ಮದುವೆಯ ಸಂದರ್ಭದಲ್ಲಿ)

ಸಿರಿವಂತ ತರುಣ ಕವಿ ಮದುವಣಿಗ ಕೇಳಿದನು,
ಸಿರಿಸೊಂಪದೊಂದುಮಿಲ್ಲದ ಗುಂಡು ರಗಳೆಯನು-

ಗೆಳೆಯ, ನೀಂ ಸ್ವೀಕರಿಪುದೆನ್ನ ಅಭಿನಂದನೆಯ
ನಿನ್ನಯಾಹ್ವಾನವೆನ್ನಯ ಹಸ್ತಚಿತ್ತಗಳ
ಮುಟ್ಟಿಹುದು; ಸಂತಸಂಬಟ್ಟು ನಾಂ ವಂದಿಪೆನು.

ಪರಿಶೆಯ ವಿಶೇಷ ಸಾಹಿತ್ಯೋತ್ಸವದ ದುಡಿತ-
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಾಯ್ತಾಗ.

ನೀನೀಗಳಾನುಮೀ ಹರಕೆಯನು ಕೊಳ್ಳುವೆಯ?
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು,
ಅದರ ತಳಿರಲರುಗಳ ಸವಿ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ.
ಅದರ ಮೆಲ್ಲುಲಿಯ ನಸುನಗೆಯ ಸೆಲೆಸೊಲ್ಲುಗಳು

ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ತಂದಿಡಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರ್ಮಗಳ
ಕಾಣುತ್ತೆ ಕೇಳುತ್ತೆ ಪೇಳುತ್ತಲಿಹುದೆಮಗೆ
ಆಲಿಸುತೆ ಬಾಳೊಳ್ಳಿತೆನುತೆ ನಾಂ ನಲಿಯುವೆವು.
ನಿನ್ನ ಕೊಳಲೊಡನೆ ಕೊರಲಿನ್ನೊಂದು ಸೇರಿಹುದು
ಅಂತಿನ್ನು ಹೊಸ ರಾಗದಿಂಬೊಂದು ಹೊಮ್ಮುವುದು
ಅದು ನಮ್ಮ ಕನ್ನಡದ ಬಾಳನ್ನು ತಣಿಸುವುದು.

Wednesday, 1 November 2023

ಪೌರವ - ಕೇತಕೀವನ - ಡಿವಿಜಿ

ಮಾಹುತ- ದೊರೆಯೆ ನೋಡುವುದಿತ್ತ ತಕ್ಷಶಿಲೆಯರಸು ಬರುತಿಹರು ಭರದಿಂದಲೋಡಿ ಬರುತಿಹನು.
ಪೌರವ- ಯವನರೂಳಿಗದವನೆ? ತನ್ನವರ ಹಗೆಯೆ?

ಮಾಹುತ- ಬವರದೀ ನಡುವಿನಲಿ ಬಹನೇಕೊ, ತಿಳಿಯೆಂ.

ಪೌರವ- ಬರಲಿ; ಹೇಡಿಗೆ ಸಲುವ ಮನ್ನಣೆಯ ಪಡೆದು ಮರುಗಲಿನಿಸಾದೊಡಂ ತನ್ನ ದುಷ್ಕೃತಿಗೆ.

[ತಕ್ಷಶಿಲೆಯರಸನಾದ ಶಾಂಬರಿಯು ಪ್ರವೇಶಿಸುವನು]

ಶಾಂಬರಿ- ಭಳಿರೆ! ಮೆಚ್ಚಿದೆ ಸಖನೆ ನಿನ್ನ ಸಾಹಸವ. ನಿಲಿಸಿನ್ನು ರಣವ; ಬಲವಂತರೊಳ್‍ ಹಟವೆ?

ಪೌರವ- ತೊಲಗೆಲವೊ ಶಾಂಬರಿಯೆ; ಸಖನಾರು ನಿನಗೆ? ಕುಲವಂಚಕನ ಕೂಡೆ ಸಖ್ಯವೇನೆನಗೆ?

ಶಾಂಬರಿ- ಸೈರಿಸೆಲೆ ಪೌರವೇಂದ್ರನೆ; ನೀಗು ಚಲವ.

ಸಾರಿರುವೆ ಶೂರತನದೆಲ್ಲೆಗದು ಬರಿದೆ.
ಪ್ರತಿಕೂಲನಿರೆ ಕಾಲನವನನೆದುರಿಸುವಚ
ತುರೆಯ ಫಲವೇನು? ಕಷ್ಟವದು ಬಗೆಯೆ.
ತೊರೆಯಿನ್ನು ಸಾಹಸವ; ಬಿಡು ನಿನ್ನ ಹಟವ
ಅರಿಬಲವ ಮರೆತು ನೀನೆನಿತು ಹೋರಿದಡೇಂ?

ಪೌರವ- ತೆರಳು, ತೆರಳೆಲೆ ನೀಚ, ನಿನ್ನೊಡನೆ ನುಡಿಯೇಂ?
ಗರುವ ಬಿಟ್ಟಿಹ ನಿನ್ನ ಬದುಕೊಂದು ಬದುಕೇಂ?
ಕರೆದು ಯವನನ ನಿನ್ನ ಮನೆಗೆ ಬಾರೆಂದು
ತೆರೆದು ಬಾಗಿಲನವನ ಕರೆದಿತ್ತ ತಂದು
ಸೈರಣೆಯ ಬೋಧಿಪೆಯ-ವಂಶಘಾತಕನೆ?
ಸಾರು ಯವನನ ಬಳಿಗೆ, ಸೇರವನ ಪದವಂ.

ಶಾಂಬರಿ- ಲಾಲಿಸೆಲೆ ಧೀರ ನೀಂಮೇಲುಮೆಯ
ಮಾತ-ಸೋಲುಗೆಲುವುಗಳೆಮ್ಮ ಕೈಯೊಳಿಹುವಲ್ಲ;
ಮೆಚ್ಚಿಹನು ಯವನಪತಿ ನಿನ್ನ ಸಾಹಸವ,
ನಚ್ಚಿ ನೀನವನೊಡನೆ ಸಂಧಿಯನು ಬೇಡು;
ನೀಡುವನು ಮನ್ನಣೆಯ; ನೀಡುವನು ಹಿತವ;
ಮಾಡಿಪೆನು ಸಖ್ಯವನು; ಬಿಡು ನಿನ್ನ ಚಲವ.

ಪೌರವ- ಎಲವೆಲವೊ! ಸಾಕು ನಾಣ್ಚಿಲ್ಲದೀ ಜಾಣ್ಮೆ
ಕುಲಗೇಡಿಗಾವ ಹಟ? ನರಿಗಾವ ನಿಯಮ?
ನಾಡಳಿದು ನಾಡಾಣ್ಮನುಳಿದೊಡೇಂ ಸೊಗಮೋ?
ಬೇಡಿ ರಿಪುಭಿಕ್ಷದಿಂ ಬಾಳ್ದೊಡೇಂ ಜಸಮೋ!
ಹರಿಚಿತ್ತದಂತಕ್ಕೆ! ಪುರುಕುಲದ ರಾಜಂಶಿರವ
ಬಾಗಿದನೆಂಬ ಸೊಲ್ಲಿಲ್ಲದಿರ್ಕೆ.
ಲೇಸ ನೀನೆಳಸುವೊಡೆ ಸಾಕು ಪೋಗಿನ್ನು,
ಸೈಸಲಾರೆನು ಧೂರ್ತದರ್ಶನವನಿನ್ನು,
ಸಾರು ಯವನನ ಬಳಿಗೆ; ಸೇರವನ ಮರೆಯಂ
ತೋರದಿರು ವಂಶವಂಚನೆಯನಿನ್ನಾನುಂ.

[ಮಾಹುತನ ಕಡೆ ತಿರುಗಿ-]

ನಡೆ ಮುಂದೆ, ಮಾಹುತನೆ; ಬಿಡು ಕರಿಯ ಭರದಿ.

ಶಾಂಬರಿ- ಸುಡುವೆನೀ ಗರ್ವವನು; ನೋಡೆನ್ನ ಬಿರುಬ.

[ಹೋಗುವನು]

ಮಾಹುತ- ಅತ್ತ ಬರುತಿದೆ ದೇವ ಪಿರಿಯದೊಂದು ಪಡೆ
ಮುತ್ತುತಿಹುವಾಗಸವ ಕರಿಯ ಮೋಡಗಳು
ವಿಷಮ ವೇಳೆಯೊಳೀಗ ಮಾಳ್ಪುದೇಂ, ದೊರೆಯೆ?


ಪೌರವ- ಅಸುವನರ್ಪಿಸುವಂಗೆ ವಿಷಮವೇಂ, ಸಮವೇಂ?
ತ್ವರಿತದಿಂ ನಡಸು ಹಸ್ತಿಯನತ್ತ ನಿಂತು
ಧುರದ ಮಧ್ಯದಿ ಹೋರಿ ಹರಣಗಳ ಕುಡುವಾ.

[ಸಿಡಿಲು ಮಿಂಚುಗಳ ಹೊಡೆತ]

(೨)

ಅಲೆಗ್ಸಾಂಡರ್‍- ವೀರ ನೀನೆಲೆ ಸಖನೆ, ಪೌರವೇಶ್ವರನೆ
ತೋರಿದೈ ಸಾಹಸವ, ಕಡುಪರಾಕ್ರಮವ,
ಈ ನಾಡೊಳಿಹರು ನಿನ್ನಂದದವರೆಂದು
ನಾನರಿಯದಾದೆನಾ ಶಾಂಬರಿಯ ನಚ್ಚಿ.

ಪೌರವ- ಆ ಮಾತದಂತಿರಲಿ, ಯವನಪತಿ ನಿನ್ನ
ಸಮರನೀತಿಯಿದೇನು? ನಿನ್ನ ಭಟರೆನ್ನ
ಗಾಯವಡಿಸೆವೆನುತ್ತಲಾಯುಧವ ಬಿಸುಟು,
ಆಯದಿಂ ಪಿಡಿದಿಲ್ಲಿಗೇಕೆ ತಂದಿಹರು?

ಬಾ, ಬಲದ ಕುರುಹಿರ್ದೊಡದನೆನಗೆ ತೋರು
ಈ ಭುಜದ ಸೋಜಿಗವನಿನಿಸು ನೀಂ ನೋಡು
ಧೀರತನವಲ್ತಿಂತು ಸೆರೆವಿಡಿವುದೆನ್ನ
ಹೋರಿ ಜೀವಕೆ ಜೀವವೀವೆನೈ ಮುನ್ನ.

ಅಲೆಗ್ಸಾಂಡರ್‍- ಎಳಸೆ ನಾಂ ನಿನ್ನಳಿವ; ಪೌರವನೆ ನಿನ್ನ
ಗೆಳೆತನವೆ ಬೇಕೆನಗೆ; ನಾನದರಿನಿವರ
ನಿಯಮಿಸಿದೆ ನಿನ್ನನೈತರಿಪುದೆಂದಿತ್ತ
ಬಯಕೆಯನು ಸಲಿಸುವೆನು; ಬೇಳ್ಬುದೇಂ ಬೆಸಸು.

ಪೌರವ- ಬೇಡುವನು ನಾನಲ್ಲ; ಬೇಳ್ಬುದೇನೆನಗೆ?
ನೀಡುವನು ನೀನಲ್ಲ; ಬೇರೆಯಿರುವನವನ್‍.
ನ್ಯಾಯದಿಂ ನಡೆವೊಡೆಲೆ ಯವನಪತಿ ಕೇಳು
ರಾಯನಂ ರಾಯನಿದಿರ್ಗೊಳುವಂತೆ ಕಾಣು.

ಅಲೆಗ್ಸಾಂಡರ್‍- ಧೀರ ನೀನೆಲೆ ಸಖನೆ, ನೀನೆ ಗಂಡುಗಲಿ.
ಬಾರೆಲೈ ನೀಡು ನೀಂ ಕೈಯನೊಲವಿನಲಿ.

Tuesday, 31 October 2023

ವಿಚಿತ್ರ ಮುತ್ತು - ಕೇತಕೀವನ - ಡಿವಿಜಿ

ನಸೀರ್‍ ಕವಿ-

ಅರಲೊಂದರಿಂ ಪುಟ್ಟಿ
ಬಿರಿದೊಂದು ವಜ್ರವನು
ಎರಗುವುದು ಮಗುಳ್ದೊಂದು ಕುಸುಮದೊಳು ತಾಂ ॥
ಮಿರುಗುವಾ ಮುತ್ತು ತಾ-
ನರೆ ಕರಿಯದಾಗಿರ್ಪು-
ದೊರೆ ನೀನದಾವುದೋ ಜೇಬ ಉನ್ನಿಸಳೇ ॥

ಜೇಬ ಉನ್ನೀಸಾ-

ನಳಿನ ನಯನದಿನೊಗೆದು
ತೊಳಸಿ ನೋಡುವನೆದೆಯ-
ನಿಳಿದ ಕೈಯ ಗುಲಾಬಿಯೊಳಕೆ ಬೀಳ್ವಾ ॥
ಜಳ ಬಿಂದು ಸುಂದರಿಯ-
ಳಳುಗಣ್ಣ ಕಾಡಿಗೆಯ
ತಳೆದಿಹುದನರಿಯೆಯಾ ಪ್ರಿಯ ನಸೀರ್‍ ಕವಿಯೆ? ॥

Monday, 30 October 2023

ಜ್ಞಾಪಕ - ಕೇತಕೀವನ - ಡಿವಿಜಿ

(೧)

ಬಿಸುಸುಯ್ಯುತಿದೆ ಗಾಳಿ
ಮರಮರಕೆ ಸಾರಿ.
ಸಸಿ ಮೊಗವ ಮುಚ್ಚಿಹನು
ಮುಗಿಲ ಮರೆ ಸೇರಿ.
ಏತಕೋ ತಪಿಪುದೆದೆ; ಕೊರಲನೊತ್ತುತಿದೆ.

ಕೈಯೊಳೆತ್ತಿದುದಿಲ್ಲ;
ಒಡನಾಟವಿಲ್ಲ;
ದನಿಯ ಕೇಳಿದುದಿಲ್ಲ;
ನೋಡಿದುದುಮಿಲ್ಲ.
ಆರೊ ಅವನೆಂದಿರ್ದೆನೆನ್ನ ಶಿಶುವೆನದೆ

ಅಂದೆನ್ನ ಮನೆಯೊಳಗೆ
ನೊಂದಿದಾ ಬೆಳಕು
ಸಂದಿರ್ಪುದಿನಿಸಾನು-
ಮಿಂದಿವನೊಳೆನುತೆ
ಬಗೆದು ದುಗುಡವನಿನಿತು ಮರೆತು ನಾನಿರ್ದೆ.

ಬಾಳ ತೊಳೆವಶ್ರುವಿನ
ಕಲಶವಿವನೆನಗೆ;
ಕಾಲನವನನು ಸೆಳೆದು
ಗಳಿಸುವುದದೇನು?
ಆದೊಡಂ ಪ್ರಾಕ್ತನದ ಬಿದಿಯದೆಂತಿಹುದೋ!

ಎತ್ತಲಾನುಂ ಬಾಳ್ಗೆ
ಅಳಲ ಪಸುಳೆಯವಂ;
ಎತ್ತಿ ಕಾಪಿಡಲವನ-
ನಾರಾನುಮೊಲವಿಂ
ಎನುತ ಪರಸುತ್ತಿರ್ದೆ ಭಯದ ಮೌನದಲಿ.

(೨)

ಎಂತಿಹುದೊ ಎಂದೆನಿಪ
ಚಿಂತೆಯಿನ್ನಿಲ್ಲ;
ಅಳಲ ಶಿಶುಗಿನ್ನಿನಿಸು-
ಮಳಲೆನಿಪುದಿಲ್ಲ;
ಆದೊಡಂ ತಪಿಪುದೆದೆ; ಕೊರಲನೊತ್ತುತಿದೆ.

ಬಿಸುಸುಯ್ಯುತಿದೆ ಗಾಳಿ
ಮರಮರಕೆ ಸಾರಿ;
ಸಸಿಮೊಗವ ಮುಚ್ಚಿಹನು
ಮುಗಿಲ ಮರೆ ಸೇರಿ;
ಕಣ್ಗಳಲಿ ಮಂಜೇನೊ; ಮನದಿ ಧಗೆಯೇನೋ!

Sunday, 29 October 2023

ಹೂ - ಕೇತಕೀವನ - ಡಿವಿಜಿ

ಹೂ - ಕೇತಕೀವನ - ಡಿವಿಜಿ

ಬೆಟ್ಟಗಳ ಕಟ್ಟಿದನು
ಕಡಲುಗಳ ನೆರಚಿದನು
ಮೆಚ್ಚಲಿಲ್ಲ-ತುಟಿಯ ಬಿಚ್ಚಲಿಲ್ಲ.

ಕಾಡುಗಳ ನೆಡಿಸಿದನು
ಮೋಡಗಳ ನಡಸಿದನು
ಮೆಚ್ಚಲಿಲ್ಲ-ತುಟಿಯಬಿಚ್ಚಲಿಲ್ಲ.

ಮಿಗಗಳೋಡಾಡಿದುವು
ಖಗ ಕೀಟ ಪಾಡಿದುವು
ಮೆಚ್ಚಲಿಲ್ಲ-ತುಟಿಯ ಬಿಚ್ಚಲಿಲ್ಲ.

ನರರು ಕುಣಿದಾಡಿದರು
ಚೀರಿದರು ಹೋರಿದರು
ಮೆಚ್ಚಲಿಲ್ಲ-ತುಟಿಯ ಬಿಚ್ಚಲಿಲ್ಲ.

ಕಡೆಗೊಂದು ದಿನ ತಂದೆ
ಕಡುಚಿಂತೆಯಲಿ ನಿಂದು
ನಿರುಕಿಸಿದನು-ಕೃತಿಯ ಪರಿಕಿಸಿದನು.

ಆಗಳೊಂದೆಳೆ ಬಳ್ಳಿ
ತೂಗೆ ತಲೆಯನು ನಯದಿ
ಮೆರೆಯಿತೊಂದು-ನನೆಯು ಬಿರಿಯಿತಂದು.

ಕಂಡನದ ಜಗದ ದೊರೆ
ಕೊಂಡಾಡಿದನು ಮಲರ
ಬಗ್ಗಿ ತೆಗೆದಂ-ಮೂಸಿ ಹಿಗ್ಗಿ ನಲಿದಂ.

ದೋಷವರಿಯದ ಮೊಗ್ಗು
ಆಶೆಯಿರಿಯದ ಹಿಗ್ಗು
ವಿಮಲ ಹಸಿತ-ಅದುವೆ ವಿಪುಲ ಸುಕೃತ.

Saturday, 28 October 2023

ನನ್ನ ಹರ್ಷ - ಕೇತಕೀವನ - ಡಿವಿಜಿ

ಇರುಳಿನಲಿ ನನೆಯಾಗಿ
ಪಾರಿಜಾತವದು
ಬಿರಿದು ಮುಂಜಾವದಲಿ
ಬೀರಿ ಪರಿಮಳವ
ಸೊರಗಿ ಬಿಸಿಲೇಳುತಿರೆ
ಸೇರುವುದು ತಿರೆಯ.

ಅರೆದಿನದ ಬದುಕಿಂತು
ಪೂರಯಿಪುದದಕೆ
ಹರುಷವೆನಗಂತೆಯೇ
ತೋರಿ ತನ್ನಿರವ
ಅರೆಗಳಿಗೆಯೊಳೆ ಕುಂದಿ
ಜಾರುವುದು ಜವದಿಂ.