Saturday, 21 October 2023

ಜೀವವೀಣೆ - ಕೇತಕೀವನ - ಡಿವಿಜಿ

ಸಿಟ್ಟಿನಲಿ ವೀಣೆಯನು
ಮುಟ್ಟದಿರು ತಂಗಿ
ಮೆಲನೆ ಗಾಳಿಯು ಸುಳಿಯೆ
ಉಲಿಯುವಾ ತಂತಿಯದು
ಒರಟು ಹೊಡೆತವ ತಾಳಿ
ಕೊರಗದಿರಲಹುದೆ?

ಆಯವರಿಯದೆ ದುಡುಕೆ
ಗಾಯಗೊಂಡೆಡೆಯಂತೆ
ಜಾಣುಳ್ಳನೆದೆಯಂತೆ
ವೀಣೆಯಳಲುವುದು.

ನುಡಿಸದನು ನಲವಿಂದ
ನಯದ ಕಿರುಬೆರಲಿನಿಂದ
ನುಡಿವುದದು ಮನವೊಲಿದ
ಪ್ರಿಯದ ದನಿಯಿಂದ

Thursday, 19 October 2023

ಸದಾಸಂಜೆ - ಕೇತಕೀವನ - ಡಿವಿಜಿ

ನೇಸರಿದ್ದೊಡದೇನು?
ಪಗಲುಮೆನಗಲ್ಲ;
ಮಬ್ಬು ಕವಿದೊಡದೇನು?
ಇರುಳುಮೆನಗಲ್ಲ;
ಎಲ್ಲ ವೇಳೆಗಳೆನಗೆ
ಸಂಜೆಯಾಗಿಹುವು.

ಅರಿತೆನೆಂದೆನಲಾರೆ
ಬಾಳಿಕೆಯ ತಿರುಳ;
ಅರಿಯೆನೆಂದೆನಲಾರೆ
ಬೇಡ ಬೇಕುಗಳ;
ಅರೆಕುರುಡನಂತಿಹೆನು
ಕಂಡು ಕಾಣದಿಹೆಂ.

ಬೆಳಕು ಮಸಕುಗಳೆರಡು
ಬೆರೆತು ಸಂಜೆಯೊಳು,
ಅರಿವು ಮರೆವುಗಳೆರಡು
ಬೆರೆತು ಬದುಕಿನೊಳು,
ತೆರೆಯುತಂ ದಾರಿಯನು
ಮರೆಮಾಡುತಿಹುವು.

ಸರಿಯಿದೆಂದೆನಲಾರೆ
ದಿಟವ ನಾನರಿಯೆ
ಸರಿಯಲ್ಲವೆನಲಾರೆ
ಸಟೆ ತೋರಲಾರೆ.

ಈ ತೆರದಿ ದಿಟ ಸಟೆಗ-
ಳೊಂದಾಗಿ ಬೆರೆಯೆ
ಕಾತರತೆಯಲಿ ನಾನು
ಕಂದಿರುವೆ, ದೊರೆಯೆ.

Wednesday, 18 October 2023

ಸ್ಫಿಂಕ್ಸ್ - II - ಕೇತಕೀವನ - ಡಿವಿಜಿ



ಯವನದೇಶದೊಳೊರ್ವ
ದೇವತೆಯು ಜನರ
ಕೇಳುತಿರ್ದಳದೊಂದು
ಕಣಿಯನೀ ತೆರದಿ :-

“ನಾಲ್ಕು ಕಾಲುಗಳಿಂದೆ
ಪದವೆರಡರಿಂದೆ
ಬಳಿಕ ಮೂರಡಿಯಿಂದೆ
ನಡೆವ ಜೀವಿಯದು
ಚರಣ ಮಿಗಿಲಾದಂತೆ
ಬಲವಳಿಯುತಿಹುದು.
ಪೇಳದಾವುದು, ಜಾಣ,
ಬಗೆದು ಪೇಳದನು.”

ಅದ ಪೇಳಲಾರದರ
ಪಿಡಿಯುತಾ ದೇವಿ
ಮೂದಲಿಸಿ ನಗುನಗುತ
ಕವಳಿಸುತಲಿದ್ದಳ್‍.

ಒಂದು ದಿನದೊಳದೊರ್ವ-
ನವಳ ಬಳಿಗೈದಿ
ಒಗಟುನುಡಿಯನು ಕೇಳಿ
ತಾನುಲಿದನಿಂತು :-
“ಪಸುಳೆತನದಲಿ ನಾಲ್ಕು
ಬೆಳೆದ ಬಳಿಕೆರಡು
ಮುಪ್ಪಿನಲಿ ಕೋಲೂರೆ
ಮೂರು ಕಾಲಾಗಿ
ನರನಿಗಿಂತಿರುವುದನು
ತಿಳಿಯದವರಾರು?
ಏನು ಮರುಮವಿದೆಂದು
ಕೇಳುತಿಹೆ, ಮರುಳೆ?"

ಇಂತೆಂದು ಈಡಿಪನು
ಧೈರ್ಯದಿಂದಾಡೆ

ಸ್ಫಿಂಕ್ಸೆನಿಪ್ಪಾ ದೇವಿ
ಮೋರೆಗೆಟ್ಟಳುತಾ
ತನ್ನಿರವು ಸಾಕೆಂದು
ತನುವನೇ ತೊರೆದಳ್‍.

ಅಂದಿನಿಂದಾ ನಾಡ
ಜನರು ಈಡಿಪನ
ಕೊಂಡಾಡಿ ಮನ್ನಿಸುತ
ನೆನೆಯುತ್ತಲಿರುವರ್‍.

Tuesday, 17 October 2023

ಸ್ಫಿಂಕ್ಸ್ - I - ಕೇತಕೀವನ - ಡಿವಿಜಿ

ಐಗುಪ್ತ ದೇಶದಲಿ
ಮರಳ ಕಾಡಿನಲಿ
ಸ್ಫಿಂಕ್ಸೆನಿಪ ರೂಪೊಂದು
ಮೆರೆಯುತಿಹುದೆಂದುಂ-

ಅನುಭವಿಸಿ ಬಗೆವ ತಲೆ
ತುಟಿಬಿಗಿದ ಬಾಯಿ
ಬಲತೀವಿದಗಲದೆದೆ
ಪಟು ಶಾಂತ ಕಾಯ-

ಈ ನಯವ ತೋರ್ಪುದಾ
ನರ-ಸಿಂಹ ರೂಪು
ಅದ ಕಲಿಯಲಾರ್ಪನಾರ್‍?
ಕಲಿತರದೆ ಸಾಕು.

Monday, 16 October 2023

ಸಾಕು ಶಾಸ್ತ್ರ - ಕೇತಕೀವನ - ಡಿವಿಜಿ

ಸಾಕು ಶಾಸ್ತ್ರದ ರಗಳೆ
ಸಾಕು ಪೌರಾಣ
ನೂಕು ವಿರತಿಯ ಹರಟೆ
ನೂಕು ವ್ಯಾಖ್ಯಾನ

ಮತಿಯ ಚೇಷ್ಟೆಗಳೆಲ್ಲ
ಮನಕೆ ಬೇಕಿಲ್ಲ
ಅತಿವಿರಕ್ತಿಗಳೆಲ್ಲ
ಅನುಭವದೊಳಿಲ್ಲ

ಒಲವು ಬೇಡಿದೊಡೊಲವು
ಗೆಳೆತನದೊಳರುಮೆ
ನಲವ ತೋರ್ದೊಡೆ ನಲವು
ಒಳಿತರೊಳ್ಬಯಕೆ

ಇನಿತಿರಲು ಮನುಜಂಗೆ
ನೈರಾಶ್ಯವೇಕೆ?
ಮನಕೆ ನೋವಿಲ್ಲದಿರೆ
ವೈರಾಗ್ಯವೇಕೆ?

Sunday, 15 October 2023

ಕೃತ್ರಿಮಿ - ಕೇತಕೀವನ - ಡಿವಿಜಿ

ಎನ್ನೆದೆಯನಿರಿಯುತಿಹ ಬಾಣಗಳ ನಿನ್ನ
ಕಣ್ಣುಗಳೊಡಗಿಸಿಹ ಕೃತ್ರಿಮಿಯದಾರು?
ಎನ್ನಸುವನೆಳೆಯುತಿಹ ಪಾಶಗಳ ನಿನ್ನ
ಕೆನ್ನೆಗೆಳೊಳೊಟ್ಟಿರುವ ಮರ್ಮಿಗನದಾರು?
ಎನ್ನ ಮೈಮರೆಯಿಸುವ ಸಂಮೋಹನಾಸ್ತಗಳ
ನಿನ್ನ ನಾಸಾಪುಟದೊಳಾವನಿರಿಸಿಹನು?
ಇನಿತನೆಸಗಿದ ಮಾಟಗಾರನೇತಕೆ ನಿನ್ನ
ಮನಸನೆನ್ನಯ ಮನಸಿಗನುಗೊಳಿಸದಿಹನು?

Saturday, 14 October 2023

ಭೂಮಾತೆ - ಕೇತಕೀವನ - ಡಿವಿಜಿ

ಭೂಮಾತೆಯೆಂದೆನ್ನನಂಕದೊಳಗಿರಿಸಿ
ಪ್ರೇಮದಿಂ ಜೋಗುಟ್ಟಿ ನಿದ್ದೆ ಮಾಡಿಸುವೆ?

ಕಾಣಲಾರೆನು ಒಪ್ಪುತಪ್ಪುಗಳ ದಿಟವ
ಮಾಣಲಾರೆನು ನಂಟು ನೇಹಗಳ ಸೊಗವ
ಬಾಳಲಾರೆನು ತಳೆದು ಜಗದ ಹೇರುಗಳ
ತಾಳಲಾರೆನು ಧರುಮದೊಗಟುಗಳ ನೊಗವ.

ಅರಿಯಲಾರೆನು ಇಹಪರಂಗಳಂತರವ
ಮರೆಯಲಾರೆನು ಹೃದಯಗುಹೆಯೊಳಸ್ವರವ
ತೊರೆಯಲಾರೆನು ಪ್ರೀಯ ಜನದ ಮಮತೆಯನು
ಹರಿಸಲಾರೆನು ಪ್ರೀತಿಗಿರುವ ಕೊರತೆಯನು.

ಭೂಮಾತೆಯೆಂದೆನ್ನನಂಕದೊಳಗಿರಿಸಿ
ಪ್ರೇಮದಿಂ ಜೋಗುಟ್ಟಿ ನಿದ್ದೆ ಮಾಡಿಸುವೆ?