Sunday, 25 February 2024

ದೇವರೆಲ್ಲಿ? - ವಸಂತ ಕುಸುಮಾಂಜಲಿ - ಡಿವಿಜಿ

ದೇವರೆಲ್ಲಿ? - ವಸಂತ ಕುಸುಮಾಂಜಲಿ - ಡಿವಿಜಿ
 
ಮೀನೊಂದು ವಾರಿಧಿಯೊ । 
ಳಾನಂದದಿಂದಿರುತ । 
ತಾನೊಂದುದಿನಮೆಂದಿತಚ್ಚರಿಯೊಳು ॥ 
ನಾನಂಬುಧಿಯ ವರ್ತ । 
ಮಾನವನು ಕೇಳಿರ್ಪೆ । 
ನಾ ನೀರ ರಾಶಿಯನು ಕಾಣ್ಬುದೆಂತು ॥ ೧ 

ಖಗಮೊಂದದೊಂದು ದಿನ । 
ಗಗನದೊಳ್‍ ಪಾರುತಲಿ । 
ಮಿಗೆ ಸಂತಸಂದಳೆದು ಪೇಳ್ದುದಿಂತು ॥ 
ಜಗದಿ ಮಾರುತನೆ ಜೀ ।
ವಿಗಳ ಬದುಕಿಪನೆಂದು । 
ಬಗೆದಿರ್ಪರವನನಾಂ ಕಾಣ್ಬುದೆಂತು ॥ ೨ 

ನರನುಮಂತೆಯೆ ಸತತ । 
ಮಿರುತಲಾ ಪರಮನೊಳೆ । 
ಪರಮಾತ್ಮನಿರ್ಪೆಡೆಯ ತಿಳಿಯದಿಹನು ॥ 
ಪರಿಕಿಸಿದೊಡಾ ಪರಾ । 
ತ್ಪರನೆತ್ತಲೆತ್ತಲುಂ । 
ಮರೆಯುತಿಹನೆನಿತೆನಿತೊ ರೂಪಗಳೊಳು ॥ ೩ 

ಮೂಲ, ವಿಸ್ಮೃತ

Saturday, 24 February 2024

ಆತ್ಮಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

ಆತ್ಮಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

‘ಆತ್ಮಗೀತೆ’ ಯ ಪ್ರಸ್ತಾವನೆ

ಆತ್ಮಗೀತೆಯು ವಾಲ್ಟ್ ‍ವ್ಹಿಟ್‍ಮನ್‍ (Walt Whitman) ಎಂಬ ಆಂಗ್ಲ ಭಾಷಾ ಕವಿಯ “ಸಾಂಗ್‍ ಆಫ್‍ ಮೈ-ಸೆಲ್ಫ್‍” (ಸ್ವಾತ್ಮವಿಷಯಕವಾದ ಹಾಡು) ಎಂಬ ಕೃತಿಯ ಕೆಲವು ವಾಕ್ಯಗಳ ಅನುವಾದ.

ವ್ಹಿಟ್‍ಮನ್‍ ಕವಿ ಅಮೆರಿಕದವನು. ಆತನು ಕ್ರಿ.ಶ. ೧೮೧೯ ರಿಂದ ೧೮೯೨ರ ವರೆಗೆ ಬಾಳಿದನು. ಆತನು ವಿರಕ್ತನಾಗಿದ್ದುಕೊಂಡು ಬಡವರೂ ಸಾಮಾನ್ಯ ವೃತ್ತಿಗಳಲ್ಲಿರತಕ್ಕವರೂ ದೀನರೂ ಆದ ಜನರಿಗೆ ಆಪ್ತ ಮಿತ್ರನಾಗಿ, ಪರತತ್ತ್ವ ವಿಚಾರಕನಾಗಿ, ತನ್ನ ಅಂತರಾತ್ಮನಿಗೆ ತೋರಿಬಂದ ತತ್ತ್ವಗಳನ್ನು ಉಪಪಾದಿಸುವುದರಲ್ಲಿ ಯಾರಿಗೂ ಹೆದರದವನಾಗಿ, ಯಾವ ನಿರ್ಬಂಧಕ್ಕೂ ಸಿಕ್ಕದವನಾಗಿ ಆಯುಷ್ಯವನ್ನು ಕಳೆದನು.

ಈ ಆತ್ಮಗೀತೆಯ ವಚನಗಳಿಗೆ ಸಮಾನಗಳಾದ ವಚನಗಳನ್ನು ಈಶಾವಾಸ್ಯಾದ್ಯುಪನಿಷತ್ತುಗಳಲ್ಲಿಯೂ ಭಗವದ್ಗೀತಾದಿ ಶಾಸ್ತ್ರಗಳಲ್ಲಿಯೂ ಹೇರಳವಾಗಿ ಕಾಣಬಹುದು. ಇದರ ಮೊದಲನೆಯ ವಿಭಾಗದಲ್ಲಿ ಪರಮಾತ್ಮನ ಸರ್ವವ್ಯಾಪಕತೆಯೂ ಅದರಿಂದ ಬೋಧಿತವಾಗುವ ಸರ್ವ ಸಮತಾ ನೀತಿಯೂ ಸೂಚಿತವಾಗಿವೆ. ಎರಡನೆಯ ವಿಭಾಗದಲ್ಲಿ ಮಾನವ ವ್ಯಕ್ತಿಯು ಅವನ ಸುತ್ತಲೂ ಇರುವ ಸಮಸ್ತ ಪ್ರಪಂಚಕ್ಕೆ ಎಷ್ಟು ಮಹಾ ಋಣಿಯಾಗಿದ್ದಾನೆ. ಹೇಗೆ ಅದರ ಅಂಶಮಾತ್ರನಾಗಿದ್ದಾನೆ, ಎಂಬುದು ಸೂಚಿತವಾಗಿದೆ. ಮೂರನೆಯ ಮತ್ತು ನಾಲ್ಕನೆಯ ವಿಭಾಗಗಳಲ್ಲಿ ಕ್ರಮವಾಗಿ ಸ್ಥಲಚರಗಳಾದ ಮತ್ತು ಜಲಚರಗಳಾದ ಜೀವರಾಶಿಗಳೊಡನೆ ಮನುಷ್ಯನು ಐಕ್ಯವನ್ನು ಅನುಸಂಧಾನ ಮಾಡಬೇಕೆಂದು ಸೂಚಿತವಾಗಿದೆ.

ಆತ್ಮಗೀತೆ



ನಾನವಿದಿತಾಖಂಡ ಪರಸತ್ತ್ವದೊಳಕೆ । 
ಮಾನವರನೆಲ್ಲರಂ ಕರೆವೆ ಸುಖಿಪುದಕೆ ॥ 
ಆತ್ಮತಾನಮಿತಬಲನಾತ್ಮ ತಾಂ ಪರಮಂ । 
ಆತ್ಮ ತಾಂ ಮೃತಿರಹಿತನಾತ್ಮ ತಾಂ ಪೂರ್ಣಂ ॥ 
ಎನ್ನಾತ್ಮವನೆ ನಿಖಿಲರಲ್ಲಿ ಕಾಣುತಿಹೆಂ । 
ಎನ್ನ ಗುಣದೋಷಗಳನವರೊಳೆಣಿಸುತಿಹೆಂ ॥ 
ಪಿರಿಯರುಂ ಕಿರಿಯರುಂ ಸಮರೆನ್ನ ಮನದೊಳ್‍ । 
ಸರಿಯೆಲ್ಲರವರವರ ಕಾಲ ತಾಣಗಳೊಳ್‍ ॥ 
ನರನವೊಲು ನಾರಿಯುಂ ಸಂಭಾವ್ಯಳಲ್ತೆ । 
ಪುರುಷನಂ ಪೆತ್ತವಳೆ ಸಂಮಾನ್ಯಳಲ್ತೆ ॥ 

೨ 

ಎನಿತೋ ಕಾಲದ ಫಲದಿನಿಂತು ಜನ್ಮಿಸಿಹೆಂ । 
ಎನಿಬರೋ ಉಪಕರಿಸೆ ನಾನಿಂತು ಬೆಳೆದೆಂ ॥ 
ಇಂತೆನಿತೊ ಜೀವಿಗಳುಮೆನಿತೊ ಲೋಕಗಳುಂ । 
ತಂತಮ್ಮ ನಿಯಮಗಳೊಳಿಹವು ಸಂತತಮುಂ ॥ 
ಈ ವಿಧಿಯೊಳನ್ಯೋನ್ಯ ಸಂಬದ್ಧಮಾಗಿ । 
ಈ ವಿಶ್ವದೊಳ್‍ ಸಕಲಮಿರೆ ಚಿತ್ರಮಾಗಿ ॥ 
ಇದನೆಲ್ಲ ಭೇದಿಸುತೆ ಮುತ್ತಿಕೊಂಡಿಹುವು । 
ಮೊದಲು ಕೊನೆಯಿಲ್ಲದಿಹ ಕಾಲ ದಿಕ್ಕುಗಳು ॥ 
ಕಾಲ ದೇಶಂಗಳನತಿಕ್ರಮಿಸಿ ನಿತ್ಯಂ । 
ಸ್ಥೂಲ ಸೂಕ್ಷ್ಮಂಗಳೊಳ್‍ ವ್ಯಾಪಿಸುತೆ ಸತ್ಯಂ ॥ 
ಪರಮಾತ್ಮನಿಹನು ನಿಲ್ಲಿಸುತ ಕೊಲ್ಲಿಸುತುಂ । 
ಪರಿಪೂರ್ಣನಾತನಾತನೆ ಸರ್ವಶಕ್ತಂ ॥ 
ಆತನುಚ್ಛ್ವಾಸಗಳೆ ಸಕಲ ರೂಪಗಳುಂ ।
ಆತನಿಂ ಪುಟ್ಟುವುವೆ ಸಕಲ ಶಬ್ದಗಳುಂ ॥ 
ಆತನಂ ಕಾಣಲ್ಕೆ ಕಷ್ಟವೇನಿಹುದೈ । 
ಆತನಿಂ ಬೇರೊಂದು ವಸ್ತುವೆಲ್ಲಿಹುದೈ? ॥ 

೩ 

ವನ ನದೀ ಗಿರಿ ನಿವಹದಿಂ ಮೆರೆವ ಧರೆಯೇ । 
ದಿನಪ ಶಶಿ ಕಿರಣಗಳಿನೆಸೆಯುತಿಹ ತಿರೆಯೇ ॥ 
ಎನಗೊಲವನಿತ್ತು ಸಲಪುವ ತಾಯೆ ಬಂದೆಂ । 
ನಿನಗೆನ್ನ ಸಂಪ್ರೀತಿ ಪುಷ್ಪಮಂ ತಂದೆಂ ॥ 

೪ 

ವಾರಿಧಿಯೆ ನಿನ್ನೊಳಿದೊ ಸೇರುವೆನು ಬೇಗ । 
ಬಾರೆಂದು ನಿನ್ನಲೆಗಳುಲಿಯುತಿಹುವೀಗ ॥ 
ನಿನಗೆನ್ನೊಳೆನಿತು ಸಂಪ್ರೀತಿಯಿಹುದಯ್ಯ । 
ಎನಗಮಂತೆಯೆ ನಿನ್ನೊಳನುರಾಗವಯ್ಯ ॥ 
ನಿನ್ನೊಳೈಕ್ಯವ ಪಡೆಯೆ ಕಾದಿರ್ಪೆನಯ್ಯ । 
ಎನ್ನನೀ ತೀರದಿಂದಾಕರ್ಷಿಸಯ್ಯ ॥ 
ನಿನ್ನ ವೀಚಿಗಳೊಳಾನುಯ್ಯಲಾಡುವೆನೈ । 
ನಿನ್ನೊಳಾಂ ಜಲಕೇಳಿಯಾಡಿ ನಲಿಯುವೆನೈ ॥ 
ನಿನ್ನಯ ಶ್ವಾಸಂಗಳಿನಿತು ಭೀಷಣಮೇಂ । 
ನಿನ್ನುಪ್ಪುನೀರು ಜೀವಿಗಳ ಕಣ್ಣೀರೇಂ ॥ 
ನೀನೆನಿಬರಿಗೆ ರುದ್ರಭೂಮಿಯಾಗಿಹೆಯೈ । 
ನೀನೆನಿತು ಗಂಭೀರನೆನಿತು ಚಂಚಲನೈ ॥ 
ಏಕರೂಪನನೇಕ ರೂಪನಾಂ ನಿನ್ನೊಲ್‍ । 
ಏಕಮಾನಸನಾಗಿ ಬೆರೆವೆನಾಂ ನಿನ್ನೊಳ್‍ ॥

Friday, 23 February 2024

ಸರ್ವಮತ ಸಿದ್ಧಾಂತ - ವಸಂತ ಕುಸುಮಾಂಜಲಿ - ಡಿವಿಜಿ

ಸರ್ವಮತ ಸಿದ್ಧಾಂತ - ವಸಂತ ಕುಸುಮಾಂಜಲಿ - ಡಿವಿಜಿ

ಎನಿತೋ ಮತಂಗಳುಂ ನಿಗಮ ಶಾಸ್ತ್ರ ಪುರಾಣಗಳುಂ ಮಗುಳ್ದು ತಾ– । 
ವೆನಿತೋ ಮಠಂಗಳುಂ ಗುರುಗಳುಂ ವ್ರತಹೋಮಜಪಾದಿಕರ್ಮಮುಂ ॥ 
ಮನುಜರು ಸರ್ವಭೂತಗಳೊಳಂ ಪ್ರಿಯಭಾವವ ತೋರಲಾಗ ಸಂ– । 
ಜನಿಪುದು ಸರ್ವಕರ್ಮಗಳಿನಾಗದ ಸೌಖ್ಯಮದೆಲ್ಲ ಲೋಕಕಂ ॥ 

(ಬಹುಶಃ, ವಿಲ್‍ಕಾಕ್ಸ್)

Thursday, 22 February 2024

ಜೀವಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

‘ಜೀವಗೀತೆ’ ಯ ಪ್ರಸ್ತಾವನೆ

ಜೀವಗೀತೆಯು ಆಂಗ್ಲಭಾಷೆಯ ಕವಿಗಳ್ಲೊಬ್ಬನಾದ ವ್ಹಿಟ್ಟಿಯರ್‍ (J.G.Whittier) ಎಂಬಾತನ “ಮೈಸೋಲ್‍ ಅಂಡ್‍ ಐ” (ನನ್ನ ಜೀವವೂ ನಾನೂ) ಎಂಬ ಕೃತಿಯ ಅನುವಾದ.

ವ್ಹಿಟ್ಟಿಯರನು ಅಮೆರಿಕಾ ಖಂಡದ ಸಂಯುಕ್ತ ರಾಷ್ಟ್ರದಲ್ಲಿ ಕ್ರಿ.ಶ. ೧೮೦೭ ರಿಂದ ೧೮೯೨ರ ವರೆಗೆ ಜೀವಿಸಿದ್ದನು. ಆತನು ಭಕ್ತಿಭರಿತವೂ ನೀತಿಬೋಧಕವೂ ಆದ ಅನೇಕ ಪದ್ಯಾವಳಿಗಳನ್ನು ಬರೆದಿರುತ್ತಾನೆ. ಅವು ಅತಿ ಲಲಿತವಾಗಿಯೂ ರಸವತ್ತಾಗಿಯೂ ಇರುವ ಕಾರಣ ಜನಸಾಮಾನ್ಯಕ್ಕೆಲ್ಲ ಆದರಣೀಯವಾಗಿವೆ. ಇಂಗ್ಲೆಂಡಿನ ಪ್ರಖ್ಯಾತವಾಗ್ಮಿಯೂ ರಾಜನೀತಿಕೋವಿದನೂ ಪ್ರಜಾಭಿಮಾನಿಯೂ ಆಗಿದ್ದ ಜಾನ್‍ ಬ್ರೈಟ್‍ ಮಹಾಶಯನು ವ್ಹಿಟ್ಟಿಯರನ ಕಾವ್ಯಗಳನ್ನು ಪದೇ ಪದೇ ಓದಿ ಸಂತೋಷಪಡುತ್ತಿದ್ದನು.

ವ್ಹಿಟ್ಟಿಯರನು ಧರ್ಮಸೂಕ್ಷ್ಮದರ್ಶಿಯೂ ಲೋಕಹಿತ ಚಿಂತಕನೂ ಆಗಿದ್ದನು. ಸಾಮಾನ್ಯ ಜನರ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಆತನು ತನ್ನ ಕಾವ್ಯಗಳಲ್ಲಿ ವಿಮರ್ಶಿಸಿ, ಅನ್ಯಾಯ ದೂಷಣೆಯನ್ನೂ ನ್ಯಾಯ ಪೋಷಣೆಯನ್ನೂ ಮಾಡಿರುತ್ತಾನೆ. ಪ್ರಜಾಪಕ್ಷವಾದಿಗಳಾದ ಕವಿಗಳಲ್ಲಿ ಆತನು ಅಗ್ರಗಣ್ಯನೆಂದು ಸುಪ್ರಸಿದ್ಧ ಪತ್ರಿಕಾಕರ್ತನೂ ಲೋಕೋಪಕಾರಿಯೂ ಆಗಿದ್ದ ಸ್ಟೆಡ್‍ ಮಹಾಶಯನ ಅಭಿಪ್ರಾಯ.

ಜೀವಗೀತೆಯು ಪ್ರಶ್ನೋತ್ತರ ರೂಪದಲ್ಲಿದೆ; ಮನುಷ್ಯನು ತನ್ನ ಬಾಳಿಕೆಯ ರೀತಿಯನ್ನು ತನ್ನ ಮನಸ್ಸಿನಲ್ಲಿ ತಾನೇ ವಿಚಾರಮಾಡಿಕೊಂಡು, ತನ್ನೊಡನೆ ತಾನೇ ಸಂವಾದ ಬೆಳೆಯಿಸಿದಂತೆ ಇದೆ. ನಮ್ಮ ಪುರಂದರಾದಿ ದಾಸರುಗಳ “ಸಿಕ್ಕಿದೆಯಾ ಎಲೊ ಜೀವ”, “ಮನವೇ ಮರೆಯದಿರೋ ಹರಿಯ” ಮೊದಲಾದ ಆತ್ಮ ಪರಿಶೋಧನೆಯ ಪದಗಳೂ, ಮಹಾರಾಷ್ಟ್ರದ ರಾಮದಾಸ ಸ್ವಾಮಿಗಳ “ಮನಾಚೆ ಶ್ಲೋಕ” ವೂ, ಭರ್ತೃಹರಿಯ ಮನಸ್ಸಂಬೋಧನ ವಾಕ್ಯಗಳೂ ಇದೇ ಜಾತಿಯ ಕವಿತೆಯೆಂದು ಹೇಳಬಹುದು. ಬುದ್ಧಿಯು ಕೇಳುವ ಪ್ರಶ್ನೆಗಳಿಗೆ ಜೀವನು ಹೇಳುವ ಪ್ರತ್ಯುತ್ತರಗಳನ್ನು ವಾಚಕರ ಸೌಕರ್ಯಕ್ಕಾಗಿ (“” ಈ ಬಗೆಯ) ಉದಾಹರಣ ಚಿಹ್ನೆಗಳಿಂದ ಸ್ಪಷ್ಟಪಡಿಸಿದೆ.

ಅಮೆರಿಕದ ವ್ಹಿಟ್ಟಿಯರನು ಪ್ರತಿಪಾದನೆ ಮಾಡಿರುವ ತತ್ತ್ವಗಳು ಭರತಖಂಡದ ಜನರಿಗೆ ಅಪೂರ್ವವಾದುವಲ್ಲ. ಆತನ ವಾಕ್ಯಗಳಿಗೆ ಸಮಾನವಾದ ವಾಕ್ಯಗಳನ್ನು ಭಗವದ್ಗೀತೆಯಲ್ಲಿಯೂ ಪುರಾಣಗಳಲ್ಲಿಯೂ ನಮ್ಮ ಮತಾಚಾರ್ಯರುಗಳ ಉಪದೇಶಗಳಲ್ಲಿಯೂ ದಾಸರ ಕೀರ್ತನೆಗಳಲ್ಲಿಯೂ ಯಥೇಷ್ಟವಾಗಿ ಕಾಣಬಹುದು. ಹೀಗೆ ಪಾಶ್ಚಾತ್ಯ ಮಹಾಕವಿಗಳೂ ಪೌರಸ್ತ್ಯ ಮಹಾಕವಿಗಳೂ ಮಾನವ ಜೀವನದ ಮುಖ್ಯವಿಷಯಗಳಲ್ಲಿ ಏಕವಾಕ್ಯವಾಗಿರುವುದನ್ನು ನೋಡಿದರೆ, ‘ಭಗವಂತನು ತನ್ನ ಮಹಿಮೆಯನ್ನು ಎಲ್ಲ ಜನರಿಗೂ ತೋರಿಕೊಂಡಿರುವನು; ಮಹನೀಯರು ಎಲ್ಲೆಲ್ಲಿಯೂ ಇರುವರು; ಅವರು ಒಮ್ಮುಖದಿಂದ ಹೇಳುವ ತತ್ತ್ವಗಳು ಎಲ್ಲ ಕಾಲ ದೇಶಗಳಲ್ಲಿಯೂ ಎಲ್ಲರಿಂದಲೂ ಮನ್ನಣೆ ಪಡೆಯಲು ಅರ್ಹವಾದುವು’ ಎಂದು ಯಾರ ಮನಸ್ಸಿಗೂ ಹೊಳೆಯದೇ ಇರದು.

ಶ್ರೀಃ

ಪ್ರಣವ ವಿಬೋಧಕ ವದನಂ ।
ಪ್ರಣತ ಶ್ರೇಯೋನಿಕೇತನಂ ಪ್ರಾಜ್ಞಧನಂ ॥
ಗಣನಾಥಂ ಕವಿಗೀತಂ ॥
ಗುಣಸಂಪದವೀಗೆ ಕೃತಿಗೆ ಕರುಣೋಪೇತಂ ॥

ಜೀವಗೀತೆ

ನಿಲ್ಲು ನಿಲ್ಲೆಲೊ, ಜೀವ, ನಿನ್ನನೇಕಾಂತದಲಿ
ದೇವನಿದಿರಲಿ ಮಾತನೊಂದ ಕೇಳ್ವೆಂ ।
ನಿರ್ವಿಚಾರದಿ ಭವದ ಘೋರಾಂಧಕಾರದೊಳು
ನೀನೆತ್ತ ಪೋದಪೆಯೊ ನಿಂತು ನೋಡೈ ।
ಪುರುಷರೂಪವ ಧರಿಸಿ ಧರೆಯೊಳಾದರದಿ ನೀ–
ನಾವ ಕರ್ತವ್ಯಕಾಗಿರುವೆ ತಿಳಿಯೈ ।
ಜೀವ ನಿನ್ನಯ ಜನ್ಮ ಸಾಫಲ್ಯವೆಂತಹುದು
ನಿನ್ನ ಧರ್ಮವದೇನು ಬಗೆದು ಪೇಳೈ ॥

ದೇಹಸೌಖ್ಯವನಾಂತು ಮೆರವುದೋ ಬಂಧುಕುಲದೊಳ್‍ ।
ಮುದವನೊಂದುವುದೊ ಮೇಣತಿಶಯದ ಧನವ ಗಳಿಸಿ ।
ಕೀರ್ತಯೊಂದುವುದೊ ಮತ್ತಾವುದೈ ನಿನ್ನ ಧರ್ಮಂ? ।
– “ತಾನೊಂದುಮಲ್ತಿದರೊಳಾವುದುಂ ಧರ್ಮಮಲ್ತು” ॥೧

ಸರ್ವಲೋಕಕೆ ಸಾಕ್ಷಿಯಾದ ದೇವನು ನಿನ್ನ
ಕರ್ಮಗಳನಾವಗಂ ನೋಳ್ಪನಲ್ತೆ ।
ಆತನಿಚ್ಛೆಯನರಿಯುತದನೆ ಅನುವರ್ತಿಸುತ–
ಲಾತನಂ ಸೇವಿಪುದೆ ಧರ್ಮಮಲ್ತೆ ।
ಅಂತಾದೊಡೀಗಳಾ ದೇವನ ಸನ್ನಿಧಿಯೊ–
ಳೇನ ಪೇಳುವೆ, ಜೀವ, ಭಯವದೇಕೆ ।
ನರರ ಬಳಿಯೊಳು ಹರುಷದಿಂದ ಚರಿಸುವ ನಿನಗೆ
ಪರಮನಿದಿರಲಿ ಬರಲು ಚಿಂತೆಯೇಕೆ ॥
ಸತ್ಯಮಂ ಧರ್ಮಮಂ ನೀನೆಂತು ಕಾಯುತಿರ್ಪೆ ।
ದೇವನಂ ನೀನೆನಿತು ಭಕ್ತಿಯಿಂ ಭಜಿಸುತಿರ್ಪೆ ।
ಭೂತಕೋಟಿಯೊಳೆನಿತು ಮೈತ್ರಿಯಿಂ ನಡೆಯುತಿರ್ಪೆ ।
ಆಯುಷ್ಯವೆಲ್ಲಮಂ ನೀನೆಂತು ಕಳೆಯುತಿರ್ಪೆ? ॥ ೨

“ಅನ್ಯಾಯಮೆಲ್ಲಿರ್ದೊಡಂ ಧೈರ್ಯದಿಂದೆ ನಾ–
ನದರ ಮೂಲವ ನಾಶಗೊಳಿಸುತಿರ್ಪೆಂ ।
ಧರ್ಮಮದು ತಾನೆನಿತು ಬಲಮಿಲ್ಲದಿರ್ದೊಡಂ
ನಾನದರ ಕೈಂಕರ್ಯವೆಸಗುತಿರ್ಪೆಂ ।
ಸ್ವಾತಂತ್ರ್ಯರಿಪು ನಿಹಿತ ಬಂಧನಂಗಳ ಕಳೆವ
ಜನರಿಂಗೆ ನಾಂ ಜಯವ ಬಯಸುತಿರ್ಪೆಂ ।
ಅನೃತಮದು ತಾನೆನಿತು ಶಕ್ತಿವಡೆದಿರ್ದೊಡಂ
ನಾನದನು ಭರದಿಂದ ತಡೆಯುತಿರ್ಪೆಂ” ॥
–ಇಂತುಸಿರ್ವೊಡೆ ನಿನ್ನ ದನಿಯೇಕೆ ನಡುಗುತಿಹುದು ।
ಜೀವ, ನೀನಿಂತು ಮಾಡಿರ್ಪೊಡದೆ ಸುಕೃತಮಲ್ತೆ ।
ಆದೊಡಂ ನೀನಂತು ಮಾಳ್ಪುದಕೆ ಕಾರಣಮದೇಂ ।
ತತ್ತ್ವಚಿಂತೆಯೊ ಯಶಶ್ಚಿಂತೆಯೋ ದಿಟವನುಸಿರೈ ॥ ೩

“ಮಾನಿಸರ ಮೆಚ್ಚಿಕೆಯೆ ನಾನೆಸುತಿರ್ಪೆಲ್ಲ
ಕಾರ್ಯಕಂ ಫಲ” ಮೆಂದು ಪೇಳ್ವೆಯೇನೈ ।
ಅಂತು ನೀನುಸಿರುವೊಡೆ ಬಲುಧನಮನಾರ್ಜಿಸುವ
ಕೃಪಣಗಂ ನಿನಗಮಿಹ ಭೇದಮೇನೈ ।
ಸ್ವಾರ್ಥತೆಯದೇತಕೈ ಕೀರ್ತಿಯೇತಕೆ ನಿನಗೆ
ನಿನ್ನ ಪಯಣದ ಬಗೆಯನರಿಯೆಯೇನೈ ।
ಇಹದಿ ನಿನ್ನಯ ಬಾಳು ಮುಗಿದ ಬಳಿಕೆಲ್ಲಿ ನೀ–
ನಾವಪರಿಯಿರ್ದಪೆಯೊ ಬಲ್ಲೆಯೇನೈ ॥
ಮೃತ್ಯುವಿನ ಕಾರ್ಮುಗಿಲು ನಿನ್ನನಾವರಿಸಿದಂದು ।
ನಿನ್ನ ದೃಷ್ಟಿಯು ನಷ್ಟಮಾಗೆ ನೀನಬಲನಾಗೆ ।
ನಿನ್ನ ಗತಿಯಿಂತೆಂದು ನಿನಗಾರು ತೋರ್ಪರೈಯ ।
ಜೀವ, ನೀಂ ಸಾವೆನ್ನಲೇಕಿಂತು ಭೀತನಾದೆ? ॥ ೪

“ಮೃತ್ಯುವಿನ ಕತ್ತಲೆಯು ಮುತ್ತಲೆತ್ತೆತ್ತಲುಂ
ಹಿಂದುಮುಂದುಗಳ ನಾನೆಂತು ತಿಳಿವೆಂ ।
ಎನಿಬರೋ ಜೀವರ್ಕಳಾ ಮೃತ್ಯುಮುಖವನೇ
ದುಃಖದಿಂ ಪೊಕ್ಕು ಪಿಂದಿರುಗದಿರ್ಪರ್‍ ।
ಮೃತ್ಯು ಬಳಿಸಾರಲಿನ್ನೆನಿಬರೋ ಚಿತ್ತದೊಳು
ಜಗದೊಡೆಯನನು ನೆನೆದು ನಲಿಯುತಿರ್ಪರ್‍ ।
ಮೃತ್ಯುವನು ಮರೆಮರೆತು ಬದುಕಿ ಮತ್ತೆನಿಬರೋ ।
ಮೃತ್ಯುಮುಖವನೆ ಕಡೆಗೆ ಸೇರುತಿರ್ಪರ್‍ ॥
ಅವರೊಳಾರುಂ ತಮ್ಮಹದನೆನಗೆ ತಿಳಿಪಲಾರರ್‍ ।
ಮೃತ್ಯುಭಯದಿಂ ಜಗವು ಗೋಳಿಡುತ ನಡುಗುತಿಹುದು ।
ನಿಚ್ಚಮಾ ಮೃತ್ಯುವಿನ ಬಳಿಗೆ ನಾಂ ನಡೆಯುತಿಹೆನು ।
ಅಲ್ಲಿನೆಲ್ಲಿಗೊ ಮುಂದೆ ನಾನದನದೆಂತು ತಿಳಿವೆಂ” ॥ ೫

ಏನಿದೇನಿಂತು ಪೇಳುವೆ, ಜೀವ, ನಿನ್ನಯಾ
ಬುದ್ಧಿ ಧೈರ್ಯಗಳಿನಿತು ಕುಂದಲೇಕೆ ।
ಲೌಕಿಕೋದ್ಯಮಗಳಲಿ ನಿನಗಿರ್ಪ ಜಾಣ್ಮೆಯದು
ಮೃತ್ಯುಮುಖದಲಿ ಮಾಯವಾಗಲೇಕೆ ।
ಮೋದ ಖೇದಗಳಂತೆ ಭೀತಿಯುಂ ನಿನ್ನಯ
ಸ್ವಾಭಿಮಾನದೆ ಪುಟ್ಟಿ ಬೆಳೆವುದಯ್ಯ ।
ಮತಿಯು ಮಂಕಾಗಲಜ್ಞಾನವಪ್ಪುದು ನಿನ್ನ
ಮತಿವೈಪರೀತ್ಯವೇ ಭೀತಿಯಯ್ಯ ॥
ದೇವದೇವನು ನಿನ್ನ ರಿಪುಗಳಂ ಸದೆವನಲ್ತೆ ।
ಆತನೆಡೆಯೊಳು ಭೀತಿಯೊಂದಿನಿಸುಮಾಗದಲ್ತೆ ।
ಆತನಿಂ ನಿನ್ನ ಕತ್ತಲೆಯೆಲ್ಲ ಪರಿವುದಲ್ತೆ ।
ಆತನಂ ಬಿಟ್ಟು ನೀಂ ಚಿಂತಿಪುದೆ ಮೌಢ್ಯಮಲ್ತೆ ॥ ೬

ಪಿಂತಾದುದಂ ಮುಂದೆ ಬರ್ಪುದಂ ಚಿಂತಿಪುದು
ಮರುಳುತನವೆಂಬುದನು ಮರೆಯಬೇಡೈ ।
ವರ್ತಮಾನದಿ ದೈವಭಕ್ತಿಯಂ ಸ್ಥಿರಗೊಳಿಸಿ
ಧರ್ಮಮಾರ್ಗದಿ ಚರಿಸಿ ಜಾಣನಾಗೈ ।
ಮೃತ್ಯುವಿಂ ನಿನಗಾವ ಹಾನಿಯುಂ ಬಾರದೈ
ಮರಣಭೀತಿಯು ಮೂರ್ಖಜನರಿಗಯ್ಯ ।
ಇಹದೊಳಂ ಪರದೊಳಂ ಪರಮೇಶನೊರ್ವನೇ
ತನ್ನ ಸಂತಾನದೊಡನಿರ್ಪನಯ್ಯ ॥
ಅವನಿನನ್ಯವನೊಂದ ಭಾವಿಪುದೆ ಪಾಪಮಲ್ತೆ ।
ಆತನೊಳೆ ಜೀವಕೋಟಿಗಳು ನಿಂದಿರ್ಪುವಲ್ತೆ ।
ಅವರನಾತಂ ಭ್ರಾತೃವಾತ್ಸಲ್ಯ ಸೂತ್ರದಿಂದಂ ।
ಬಂಧಿಸಿಹನಾ ಸೂತ್ರವಿಭಜನಮೆ ದುಃಖಮೂಲಂ ॥ ೭

ಜಗಮೆಂಬ ವೀಣೆಯಾ ತಂತ್ರಿಗಳೆ ಜೀವಿಗಳ್‍
ಅವರೆಲ್ಲ ಸಮದೊಳಿರೆ ಮಧುರ ನಿನದಂ ।
ಆ ತಂತ್ರಿಗಳೊಳಾವುದೊಂದು ವಿಷಮಿಸಿದೊಡಂ
ನಾದಮೆಲ್ಲಂ ಕೆಡುಗುಮದರ ಕತದಿಂ ।
ಜೀವ, ನೀನದರಿನಾ ಪ್ರೇಮ ಸೂತ್ರವನರಿಯು–
ತದರಂತೆ ಚರಿಸುವುದೆ ಧರ್ಮಸೂಕ್ಷ್ಮಂ ।
ಭೂತಹಿತವಾಚರಿಸೆ ಭೂತಲವೆ ನಾಕವೈ
ತಪ್ಪಿದೊಡೆ ಭೂತಲವೆ ನರಕವಯ್ಯ ॥
ನೀನೆನಿತು ಹಿತವನೆಸಗಿದೊಡೆ ನಿನಗನಿತು ಹಿತವೈ ।
ನೆರೆಹೊರೆಯ ದುಃಖಮೇ ನಿನಗೀಗ ನರಕ ದುಃಖಂ ।
ಅವರ ಸಂತಸಮೆ ನಿನ್ನಾತ್ಮಕ್ಕೆ ಪರಮ ಸುಖದಂ ।
ಅದರಿನಾವಗಮೆಸಗುತಿರು ಜೀವ ಲೋಕಹಿತಮಂ ॥ ೮

ಇಹದೊಳಂ ಪರದೊಳಂ ದಿನದೊಳಂ ನಿಶಿಯೊಳಂ
ಸರ್ವರಂ ಸರ್ವೇಶನೋವುತಿಹನು ।
ಮನಸಿಗಂ ಬುದ್ಧಿಗಂ ಗೋಚರಿಸದೆಡೆಗಳೊಳ್‍
ಸರ್ವ ಕಾಲಂಗಳೊಳಮಾತನಿಹನು ।
ನಿನ್ನಯ ಕ್ಲೇಶಂಗಳಾತನಿಂ ತೊಲಗುವುವು
ಆತನಭಯವನಿತ್ತು ಕಾವನಯ್ಯ ।
ಆತನಂ ನೆರೆನಂಬುತಾತನಾಜ್ಞೆಯನರಿಯು–
ತದರವೊಲು ಚರಿಪವನೆ ಧನ್ಯನಯ್ಯ ॥
ಆತನೊಲವಿಂ ನಿನ್ನ ದುರ್ಬಲವು ಸುಬಲವಹುದು 
ಆತನ ಪ್ರಭೆಯಿಂದೆ ತಮಸೆಲ್ಲ ನಾಶವಹುದು ।
ನೀನಾತನಲ್ಲಿ ನಿಲೆ ಭೂತಭವ್ಯಗಳ ಮಾತೇಂ ।
ಆ ಪರಬ್ರಹ್ಮನೊಳೆ ಸಕಲಮುಂ ಲೀನಮಲ್ತೆ ॥ ೯

ಗುಡಿಗೋಪುರಂಗಳಿಂ ದೀಪಧೂಪಂಗಳಿಂ
ಮಂತ್ರಪುಷ್ಪಂಗಳಿಂ ಪರನೊಲಿಯನೈ ।
ಪ್ರಾಣಿವರ್ಗದೊಳೆಲ್ಲ ಸೋದರತ್ವದಿ ಚರಿಪ
ಧರ್ಮಮಾ ದೇವಂಗೆ ನೈವೇದ್ಯಮೈ ।
ಕರುಣೆಯಿರ್ಪೆಡೆಯೊಳಾತನ ಶಾಂತಿಯಿರ್ಪುದೈ
ಲೋಕೋಪಕಾರಮಾತನ ಪೂಜೆಯೈ ।
ಶೋಕತಪ್ತರನಂಗಹೀನರಂ ದೀನರಂ
ಸಂತೋಷಗೊಳಿಪುದಾತನ ಸೇವೆಯೈ ॥
ಈ ಧರ್ಮತತ್ತ್ವಮಂ ನರರೆಲ್ಲ ತಿಳಿದು ನಡೆಯೆ ।
ದ್ವೇಷಮುಂ ಪಾಪಮುಂ ದುಃಖಮುಂ ದೂರ ತೊಲಗಿ ।
ಪ್ರೀತಿಯುಂ ಪುಣ್ಯಮುಂ ಶಾಂತಿಯುಂ ಸ್ಥಿರದಿ ನೆಲಸಿ ।
ಸ್ವರ್ಗಾಪವರ್ಗಗಳ್‍ ಭೂಮಿಯೊಳೆ ಸಿದ್ಧಿಸುವುವೈ ॥ ೧೦

Wednesday, 21 February 2024

ಸರಳರಿಗೆ - ವಸಂತ ಕುಸುಮಾಂಜಲಿ - ಡಿವಿಜಿ

ಸರಳರಿಗೆ - ವಸಂತ ಕುಸುಮಾಂಜಲಿ - ಡಿವಿಜಿ

ಸಂಜೆಯಲಿ ತೆಲೆಯೆತ್ತಿ
ನಿಶಿಯಲ್ಲಿ ಬೆಳೆದು
ಮುಂಜಾವದಲಿ ಬಿರಿದು
ಬಿಸಿಲೇರೆ ಬತ್ತಿ
ತೀರಿಕೊಳ್ಳುವುದು ಬೇಗ, ಕಿರಿಬಾಳು, ನೋಡು;
ಪಾರಿಜಾತವದೇನು, ಅರೆದಿನದ ಪಾಡು.

ನನೆಯಾಗಿ ಹತ್ತುದಿನ
ಅರಳುತೈದುದಿನ
ವನಿತೆಯರ ಹೆರಳಿನಲಿ
ಮೆರೆವುದೇಳುದಿನ;
ಹಲವು ತಲೆಗೊಂದೆ ತಾಳೆಯ ಹೂವು ಸಾಕು;
ಬಲದ ಬದುಕದು, ನೋಡು, ಬಿತ್ತರದ ಜೋಕು.

ಹೆಸರಿಲ್ಲದಲರುಗಳು
ಬೀಳ್ಬಯಲಿನಲ್ಲಿ
ನಸುನಗುತ ನಲಿಯುವುವು
ಬೇಳ್ಪರಿರದಲ್ಲಿ;
ಗರುವಗೌರವವಿನಿಸುಮರಿಯದವುಗಳನು
ಗುರಿ ಮರೆತು ನಿರವಿಸಿದನೋ ವಿರಿಂಚನನು!

ಬಿರಿದಳಿವ ಹೂವೇಕೆ?
ಕಿರಿ ಬಾಳದೇಕೆ?
ಮರೆವಿಗಾಹುತಿಯಪ್ಪ
ಕಿರುಗವಿತೆಯೇಕೆ?
ಎಡೆಯುಂಟು ಸೃಷ್ಟಿತಾಯುದ್ಯಾನದೊಳಗೆ
ಬಡಹೂವು ಬಡಹಾಡು ಬಡಬಾಳುಗಳಿಗೆ.

ಕಲೆ ಚಮತ್ಕಾರಗಳ
ನರಿಯದೀ ಕಂತೆ
ಗೆಳೆಯರಿರ್ವರಿಗೊರ್ಮೆ
ಸರಸ ತೋರ್ದಂತೆ
ಮುಂದೆಯುಂ ಸುಲಭದೊಲಿವರ ಕಾಣಲಹುದೆ?
ಹಿಂದಿನಂದದ ಸರಳಜನರಿನ್ನುಮಿಹರೆ?

ಜುಲೈ ೨೦, ೧೯೫೦

Tuesday, 20 February 2024

ಕೃತಿಪರಿಚಯ/ಹೊಸ ಮುನ್ನುಡಿ/ಮುನ್ನುಡಿ/ವಿಜ್ಞಾಪನೆ - ವಸಂತ ಕುಸುಮಾಂಜಲಿ - ಡಿವಿಜಿ

ಕೃತಿಪರಿಚಯ/ಹೊಸ ಮುನ್ನುಡಿ/ಮುನ್ನುಡಿ/ವಿಜ್ಞಾಪನೆ - ವಸಂತ ಕುಸುಮಾಂಜಲಿ - ಡಿವಿಜಿ

ಕೃತಿಪರಿಚಯ (ಕೃಪೆ - ಪ್ರಜಾವಾಣಿ):

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ 1922ರಲ್ಲಿ ಪ್ರಕಟಿಸಿದ ಅನನ್ಯ ಕೃತಿ ಡಿ.ವಿ. ಗುಂಡಪ್ಪನವರ "ವಸಂತ ಕುಸುಮಾಂಜಲಿ" ಕವನ ಸಂಕಲನ. ಸಂಘದ ಅಧ್ಯಕ್ಷರಾದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಈ ಕೃತಿಯನ್ನು ಪ್ರಕಟಪಡಿಸಿರುವುದರ ಜೊತೆಗೆ ಮುನ್ನುಡಿಯನ್ನೂ ಬರೆದಿದ್ದಾರೆ.

52 ಪುಟಗಳ ಅಷ್ಟಕಿರೀಟಾಕಾರದ ಈ. ಪುಟ್ಟ ಕವನ ಸಂಕಲನ ಇದೇ ಲೇಖಕರ "ನಿವೇದನ" ಕೃತಿಗಿಂತ ಎರಡು ವರ್ಷ ಮೊದಲು ಮುದ್ರಣಗೊಂಡಿದೆ. ಈ ಸಂಕಲನದ ಮೊದಲ ಐದು ಪದ್ಯಗಳು 1911ರ ಹೊತ್ತಿಗೇ ಮುದ್ರಿತವಾಗಿದ್ದವು. 

"ವಸಂತ ಕುಸುಮಾಂಜಲಿ" ಪ್ರಕಟಣೆಯ ಬಗ್ಗೆ ಡಿ.ವಿ.ಜಿ. ಅವರಿಗಿದ್ದ ಅಳುಕು ಗ್ರಂಥಾರಂಭದ ವಿಜ್ಞಾಪನೆಯಲ್ಲಿ ಸ್ಪಷ್ಟವಾಗಿದೆ. ಈ ಬಗೆಯ ಸಂಶಯವು ಬಲವಾಗಿದ್ದರೂ ಕನ್ನಡಿಗರಿಗೆ ಪರಮ ಗೌರವಾರ್ಹರಾದ ಮ ಬೆಳ್ಳಾವೆಯ ವೆಂಕಟನಾರಾಯಣಪ್ಪನವರೂ ಮ ತಳುಕಿನ ವೆಂಕಣ್ಣಯ್ಯನವರೂ, ಹಾಗೆಯೇ ಈ ಪದ್ಯಗಳನ್ನು ಆಗಾಗ ಓದಿದ್ದ ಅಥವಾ ಕೇಳಿದ್ದ ಕಾವ್ಯಜ್ಞರಾದ ಇತರ ಕೆಲ ಮಿತ್ರರೂ ಈ ಪದ್ಯಸಮುಚ್ಛಯವು ಪ್ರಕಟನೆಗೆ
ಅರ್ಹವಾಗಿದೆಯೆಂದು ಲೇಖಕನಿಗೆ ಭರವಸೆ ಹೇಳಿ, ಇದು ಪ್ರಕಟವಾಗಲೇಬೇಕೆಂದು ನಿಶ್ಚಯಿಸಿದರು.   

ತೋಟದಲ್ಲಿ ಎತ್ತರವಾದ ಮರಗಳೂ ಬಹುದೂರ ಹಬ್ಬಿರುವ ಬಳ್ಳಿಗಳೂ ಇದ್ದರೂ ನೆಲವನ್ನೇ ಅವಲಂಬಿಸಿಕೊಂಡಿರುವ ಬಡ ಹುಲ್ಲೂ ಇರುವಂತೆ ಸಾಹಿತ್ಯವನದಲ್ಲಿ ಮಹಾಕಾವ್ಯಗಳೂ ಉದ್ದಾಮ ಗ್ರಂಥಗಳೂ ಇದ್ದರೂ ಇಂತಹ ಅಲ್ಪಕೃತಿಗಳೂ ಇರಬಹುದಲ್ಲವೆ? ಎಂದು ಡಿ.ವಿ.ಜಿ. ಹೇಳಿದ್ದಾರೆ. 

ತಮ್ಮ ಭಾಷಾ ರಚನೆಯ ವಿನ್ಯಾಸಗಳು ಕವಿತೆಗಳಲ್ಲವೇನೋ ಎಂಬ ಸಂಶಯ ಡಿ.ವಿ.ಜಿ. ಅವರಿಗೆ ಯಾವಾಗಲೂ ಇದ್ದೇ ಇತ್ತು. ಒಂದು ಪತ್ರದಲ್ಲಿ ಅವರು, "ಕನ್ನಡ ಸಾಹಿತ್ಯದಲ್ಲಿ ನಾನು ಮಾಡಿರುವುದು ತೇಪೆ ಹಾಕುವ ಕೆಲಸ" ಎಂದು ಬರೆದಿದ್ದಾರೆ. ಇದರ ಜೊತೆಗೆ, `ಉತ್ತಮ ಕವಿತ್ವಕ್ಕಿರಬೇಕಾದ ಲಕ್ಷಣಗಳು ಅವುಗಳಲ್ಲಿಲ್ಲದೆ ಇರಬಹುದು; ಅವಿದ್ವತ್ಕವಿತೆಯ ದೋಷಗಳು ಹೇರಳವಾಗಿರಬಹುದು~ ಎಂದೂ ಸಂದೇಹಿಸಿದ್ದಾರೆ.

ಇದು ಅವರ ವಿನಮ್ರತೆಗೆ ಉದಾಹರಣೆಯಷ್ಟೇ. ಈ ಸಂದರ್ಭದಲ್ಲಿ, ಕುವೆಂಪು ಅವರು ತಮ್ಮ "ಆಧುನಿಕ ಕನ್ನಡ ವಾಙ್ಮಯ"  ಎಂಬ ಲೇಖನದಲ್ಲಿ ಡಿ.ವಿ.ಜಿ. ಅವರ ಕಾವ್ಯವನ್ನು ಕುರಿತು ಕನ್ನಡ ಕಬ್ಬವೆಣ್ಣು ಸನಾತನ ಮತ್ತು ನೂತನಗಳ ಮಧ್ಯೆ ಹೊಸ್ತಿಲ ಮೇಲೆ ನಿಂತಂತಿದೆ. ಅನೇಕ ಪದ್ಯಗಳು ವೃತ್ತಕಂದ ರೂಪವಾಗಿವೆ. 

ಆತ್ಮವು ನೂತನವಾದರೂ ವೇಷವು ಪುರಾತನವಾದುದು ಎಂದು ಹೇಳುವ ಮಾತುಗಳನ್ನು ಗಮನಿಸಬಹುದು.ಬೆಳ್ಳಾವೆ ವೆಂಕಟನಾರಾಯಣಪ್ಪನವರು 'ವಸಂತ ಕುಸುಮಾಂಜಲಿ'ಗೆ ಬರೆದ ಮುನ್ನುಡಿಯಲ್ಲಿ- ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವನ ತತ್ವಾಲೋಚನೆಯೂ ಎರಡನೆಯದರಲ್ಲಿ ಆಧುನಿಕ ಭಾರತೀಯ ಮಹಾಪುರುಷ ವಿಷಯಕವಾದ ಕವಿತೆಗಳೂ ಇವೆ.
 
ಮೊದಲನೆಯ ಭಾಗವು ಉತ್ತಮವಾದ ಜೀವನಕ್ರಮದ ಸ್ವರೂಪವನ್ನು ತೋರಿಸುತ್ತದೆ. ಲೋಕಸೇವೆಯೇ ಮಾನವನ ಪರಮಧರ್ಮವೆಂಬ ನೀತಿಯು ಅದರಲ್ಲಿ ಪ್ರತಿಪಾದಿತವಾಗಿದೆ. ಈ ನೀತಿಯನ್ನು ನಡೆವಳಿಕೆಯಲ್ಲಿ ತೋರಿಸಿರುವ ಆಧುನಿಕ ಭಾರತೀಯ ಮಹಾಪುರುಷರ ಗುಣವಿಶೇಷಗಳು ದ್ವಿತೀಯ ಭಾಗದಲ್ಲಿ ಸೂಚಿತವಾಗಿವೆ ಎಂದು ವಿವರಿಸಿದ್ದಾರೆ.

ವ್ಹಿಟ್ಟಿಯರ್ ಕವಿ, ಶ್ರೀ ರಾಮಕೃಷ್ಣ ಪರಮಹಂಸರು, ರಾಜಾರಾಮ ಮೋಹನರಾಯರು, ದಾದಾಭಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ವಿವೇಕಾನಂದ, ಬಾಲಗಂಗಾಧರ ತಿಲಕರು, ಕವಿ ರವೀಂದ್ರರು, ವಿಜ್ಞಾನಿ ಜಗದೀಶ ಚಂದ್ರ ಬೋಸ್, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಮಹಾತ್ಮ ಗಾಂಧಿ ಮತ್ತು ಮಹಾರಾಜ ಶ್ರೀಕೃಷ್ಣರಾಜೇಂದ್ರ ಒಡೆಯರ್ ಅವರುಗಳ ಚಿತ್ರಗಳ ಜೊತೆಗೆ ದಾದಾಭಾಯಿ ನವರೋಜಿಯವರ ಹಸ್ತಾಕ್ಷರದ ಚಿತ್ರವನ್ನೂ ನೀಡಿರುವುದು `ವಸಂತ ಕುಸುಮಾಂಜಲಿ~ ಸಂಕಲನದ ಒಂದು ವಿಶೇಷ.

`ವಸಂತ ಕುಸುಮಾಂಜಲಿ~ಯಲ್ಲಿ ಕಂದ ಪದ್ಯ, ಹಲವು ಬಗೆಯ ವೃತ್ತಗಳು, ಷಟ್ಪದಿಗಳು ಹಾಗೂ ಸೀಸಪದ್ಯಗಳಿವೆ. ಅದರಲ್ಲಿಯೂ ಸೀಸಪದ್ಯಗಳನ್ನು ವಿಶೇಷವಾಗಿ ಬಳಸಲಾಗಿದೆ. ಸೀಸಪದ್ಯ ಇಂಗ್ಲಿಷಿನ ಸಾನೆಟ್‌ಗೆ ಹತ್ತಿರವಾದ ಛಂದೋರೂಪ. ಸಾನೆಟ್ ಹದಿನಾಲ್ಕು ಸಾಲಿನ ಪದ್ಯವಾದರೆ ಸೀಸಪದ್ಯ 12 ಸಾಲಿನ ಪದ್ಯದ ಕಟ್ಟು ಮತ್ತು ಇದು ಶುದ್ಧ ದ್ರಾವಿಡ ಛಂದೋರೂಪ. ಇದರಲ್ಲಿ ಒಂದು ಅಷ್ಟಪದಿಯೂ ಮತ್ತು ಒಂದು ಚೌಪದಿಯೂ ಇರುತ್ತದೆ. ಸಾನೆಟ್ ಕನ್ನಡದಲ್ಲಿ ಅಷ್ಟು ಹೊತ್ತಿಗಾಗಲೇ (1916) ಗೋವಿಂದ ಪೈ ಅವರ `ಕವಿತಾವತಾರ~ದ ಮೂಲಕ ಅವತಾರವಾಗಿಬಿಟ್ಟಿತ್ತು. 

ಈ ಸಂಕಲನದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವಗೀತೆ, ಆತ್ಮಗೀತೆ, ಸರ್ವಮತ ಸಿದ್ಧಾಂತ, ದೇವರೆಲ್ಲಿ?, ಮತ್ತು ಬೇಡಿಕೆ ಎಂಬ ಐದು ಪದ್ಯಗಳಿವೆ. ಜೀವಗೀತೆಯು ವ್ಹಿಟ್ಟಿಯರ್ ಕವಿಯ `ಮೈ ಸೋಲ್ ಅಂಡ್ ಐ~ ಎಂಬ ಕವಿತೆಯ ಅನುವಾದ. ಆತ್ಮಗೀತೆಯು ವಾಲ್ಟ್ ವ್ಹಿಟ್‌ಮನ್ನನ `ಸಾಂಗ್ ಆಫ್ ಮೈ-ಸೆಲ್ಫ್~ ಎಂಬ ಕವಿತೆಯ ಅನುವಾದ. 
ಎರಡನೆಯ ಭಾಗದಲ್ಲಿ ಆ ಕಾಲಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಹಿರಿಯ ಚೇತನಗಳಾದ ರಾಮಕೃಷ್ಣ ಪರಮಹಂಸ, ಗಾಂಧಿ, ಜಗದೀಶ್‌ಚಂದ್ರ ಬೋಸ್, ಟ್ಯಾಗೋರ್ ಮುಂತಾದ ಮಹಾಪುರುಷರನ್ನು ಕುರಿತ ವ್ಯಕ್ತಿಚಿತ್ರ ಗೀತಗಳಿವೆ.

ಹೊಸ ಮುನ್ನುಡಿ:

ಈ ಕವನಸಂಗ್ರಹಕ್ಕೆ “ವಸಂತ ಕುಸುಮಾಂಜಲಿ” ಎಂದು ಹೆಸರು ಕೊಟ್ಟವರು ಶ್ರೀ ಟಿ.ಎಸ್‍. ವೆಂಕಣ್ಣಯ್ಯನವರು.

ವಿಷಯದಲ್ಲಿಯೂ ಶೈಲಿಯಲ್ಲಿಯೂ ಈ ಕವನಗಳು ಕನ್ನಡಪ್ರಪಂಚಕ್ಕೆ ಆಗ ಬರಲಿದ್ದಂತೆ ತೋರಿದ ಹೊಸ ವಸಂತಕಾಲದ ಮೊದಲ ಗುರುತಿನ ಮೊಗ್ಗುಗಳಂಥವು ಎಂಬುದು ಅವರ ಭಾವನೆ. ಅದು ಸ್ನೇಹಾಭಿಮಾನದ ಕಲ್ಪನೆ ಎಂದು ನನ್ನ ಮನಸ್ಸಿಗೆ ಆಗಲೂ ತೋರಿತ್ತು.

ಆಂದಿನಿಂದ ಇದುವರೆಗಿನ ಸುಮಾರು ೩೦ ವರ್ಷಗಳಲ್ಲಿ ಕನ್ನಡ ಹೊಸತನವನ್ನು ಸಂಪಾದಿಸಿಕೊಂಡಿರುವುದು ಈಗ ಚೆನ್ನಾಗಿ ಕಾಣುತ್ತಿದೆ. ಗ್ರಂಥದ ವಿಷಯ, ಶಬ್ದಸಾಮಗ್ರಿ, ವಾಕ್ಯರಚನೆಯ ರೀತಿ, ಪ್ರತಿಪಾದನಕ್ರಮ–ಇವೆಲ್ಲ ಹೊಸದಾಗುತ್ತಿವೆ. ಭಾಷೆಗೆ ಬಂದಿದ್ದ ಪೆಡಸುತನ, –ಅದರ ಎರಕದಚ್ಚಿನ ಸರಿತನ, –ಅದರ ಮರಮುಟ್ಟಿನ ಒಣ ಅಚ್ಚುಕಟ್ಟು–ಈಗ ಸಡಿಲವಾಗಿ, ಅದಕ್ಕೆ ಜೀವಂತಾಂಗದ ಮೃದುತೆ ನಯನಮ್ಯತೆಗಳು ಬರುತ್ತಿವೆ. ಇಂಗ್ಲಿಷ್‍ ಮೊದಲಾದ ಇತರ ವ್ಯಾವಹಾರಿಕ ಭಾಷೆಗಳ ಧೋರಣೆಯ ಅನುಕರಣೆ ಕನ್ನಡ ಸಾಹಿತ್ಯದಲ್ಲಿ ಆಗುತ್ತಿದೆ. ಹೀಗೆ ಶ್ರೀಮಾನ್‍ ವೆಂಕಣ್ಣಯ್ಯನವರ ಭವಿಷ್ಯದ್ದೃಷ್ಟಿ ಈಗ ಫಲಕ್ಕೆ ಬರುತ್ತಿದೆಯೆಂದು ಹೇಳಬಹುದಾಗಿದೆ. (ಅದು ಈ ಕೃತಿಗಳ ಪ್ರಭಾವವೆಂದು ಲೇಖಕನು ಎಷ್ಟುಮಾತ್ರವೂ ಎಣಿಸಿಕೊಂಡಿಲ್ಲವೆಂಬುದನ್ನು ಹೇಳಬೇಕಾದದ್ದಿಲ್ಲವಷ್ಟೆ?) ಈ ನವೋದಯಕ್ಕೆ ಕಾರಣ ಕಾಲಗರ್ಭದಲ್ಲಿ ಅಡಗಿಕೊಂಡಿರುವ ಮಾನವ ಪ್ರಗತಿ ಬೀಜ. ಆಗಿಂದಾಗಿಗೆ ಹೊಸಹೊಸದಾಗುತ್ತಿರುವುದು ಪ್ರಪಂಚದ ಎಲ್ಲ ಜೈವ ವಸ್ತುಗಳಿಗೂ ಸ್ವಭಾವಸಿದ್ಧವಾಗಿರುವ ಲಕ್ಷಣ. ಅದು ಭಾಷೆಸಾಹಿತ್ಯಗಳಿಗೂ ಉಂಟು.

ಪ್ರಕೃತ, ಈ ಮುದ್ರಣದಲ್ಲಿ ಕೆಲವುಕಡೆ ಕೊಂಚ ಕೊಂಚ ತಿದ್ದುಪಡಿಗಳಾಗಿರುವುದಲ್ಲದೆ ಮೂರು ತುಣಕುಗಳು ಹೊಸದಾಗಿ ಸೇರಿವೆ. ಇವುಗಳಲ್ಲಿ ಒಂದು ಬಹುಶಃ ಇಪ್ಪತ್ತೈದು ವರ್ಷಗಳಷ್ಟು ಹಳೆಯದು.

ಏಪ್ರಿಲ್‍, ೧೯೫೧
ಡಿ.ವಿ.ಜಿ.

ಮುನ್ನುಡಿ:

ಉತ್ತಮವಾದ ಚಿಕ್ಕ ಗ್ರಂಥವೊಂದನ್ನು “ಪ್ರಬುದ್ಧ ಕರ್ಣಾಟಕದ” ಚಂದಾದಾರರಿಗೂ ಪೋಷಕರಿಗೂ ಸಂಘದ ಕೃತಜ್ಞತಾ ಸೂಚಕವಾಗಿ ಅರ್ಪಿಸಬೇಕೆಂದು ಸಂಕಲ್ಪಿಸಿ ಈ ಗ್ರಂಥವನ್ನು ಪ್ರಕಟಿಸಿರುವೆವು.

ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವನ ತತ್ತ್ವಾಲೋಚನೆಯೂ ಎರಡನೆಯದರಲ್ಲಿ ಆಧುನಿಕ ಭಾರತೀಯ ಮಹಾಪುರುಷ ವಿಷಯಕವಾದ ಕವಿತೆಗಳೂ ಇವೆ. ಈ ಪುಸ್ತಕಕ್ಕೆ ವಸಂತ ಕುಸುಮಾಂಜಲಿ ಎಂಬ ಹೆಸರನ್ನಿಟ್ಟು ಪ್ರಕಟಿಸಿದ್ದೇವೆ. ಮೊದಲನೆಯ ಭಾಗವು ಉತ್ತಮವಾದ ಜೀವನಕ್ರಮದ ಸ್ವರೂಪವನ್ನು ತೋರಿಸುತ್ತದೆ. ಲೋಕಸೇವೆಯೇ ಮಾನವನ ಪರಮಧರ್ಮವೆಂಬ ನೀತಿಯು ಅದರಲ್ಲಿ ಪ್ರತಿಪಾದಿತವಾಗಿದೆ. ಈ ನೀತಿಯನ್ನು ನಡೆವಳಿಕೆಯಲ್ಲಿ ತೋರಿಸಿರುವ ಆಧುನಿಕ ಭಾರತೀಯ ಮಹಾಪುರುಷರ ಗುಣ ವಿಶೇಷಗಳು ದ್ವಿತೀಯ ಭಾಗದಲ್ಲಿ ಸೂಚಿತವಾಗಿವೆ.

ಪರೋಪಕಾರ ಧರ್ಮವು ನಮ್ಮ ದೇಶಕ್ಕೆ ಹೊಸದಲ್ಲವಾದರೂ ಅದಕ್ಕೆ ಸಮಾಜೋಪಯುಕ್ತವಾದ ರೂಪವನ್ನು ಕೊಡುವ ವಾಡಿಕೆಯು ಈಚೀಚಿಗೆ ಕಡಿಮೆಯಾಗುತ್ತ ಬಂದಿದೆ. ಒಂದು ದೇಶದ ಜನರು ಸಚೇತನರಾಗಿರುವರೆಂಬುದಕ್ಕೆ ಅವರ ಸಮಾಜಸೇವಾ ನಿಷ್ಠೆಯೇ ದೊಡ್ಡ ಗುರುತು. ಈ ವಿಷಯವನ್ನು ನಮ್ಮ ವಾಚಕರು ಗಮನಕ್ಕೆ ತಂದುಕೊಂಡು ಈ ನಮ್ಮ ಕಾಣಿಕೆಯನ್ನು ಆದರದಿಂದ ಪರಿಗ್ರಹಿಸುವರೆಂದು ದೃಢವಾಗಿ ನಂಬಿದ್ದೇವೆ.

ಬೆಳ್ಳಾವೆ ವೆಂಕಟನಾರಾಯಣಪ್ಪ
ಅಧ್ಯಕ್ಷಕರ್ಣಾಟಕ ಸಂಘ, ಸೆಂಟ್ರಲ್‍ ಕಾಲೇಜು

ವಿಜ್ಞಾಪನೆ:

ಈ ಸಣ್ಣ ಪುಸ್ತಕದ ಮೊದಲನೆಯ ಭಾಗದಲ್ಲಿರುವ ಪದ್ಯಗಳು ಹತ್ತು ವರ್ಷಗಳ ಹಿಂದೆ (ಸುಮಾರು ೧೯೧೧) ಮುದ್ರಿತವಾಗಿದ್ದವು. ಅಲ್ಲಿಂದೀಚೆಗೆ ತನ್ನ ವಯಸ್ಸು ಹೆಚ್ಚಿದಂತೆ ಲೇಖಕನಿಗೆ ಅವುಗಳ ಗುಣ ವಿಷಯದಲ್ಲಿ ಸಂದೇಹವೂ ಹೆಚ್ಚುತ್ತ ಬಂತು.

ಎರಡನೆಯ ಭಾಗದಲ್ಲಿರುವ ಪದ್ಯಗಳು ಬಹುಶಃ ಕಳೆದ ಆರೇಳು ವರ್ಷಗಳಲ್ಲಿ ಆಗಾಗ ಲಿಖಿತವಾದುವು. ಇಂತಹ ಪ್ರಾಸ್ತಾವಿಕ ಪದ್ಯಗಳಲ್ಲಿರಬಹುದಾದ ಗುಣಲೇಶವು ಸಾಮಾನ್ಯವಾಗಿ ಬಹುಕಾಲ ನಿಲ್ಲತಕ್ಕುದಲ್ಲವೆಂದು ಅನೇಕರು ಹೇಳುವರು.

ಹೀಗಿರಲಾಗಿ, ಈ ಪದ್ಯಗಳನ್ನು ಪುನಃ ಗ್ರಂಥರೂಪದಲ್ಲಿ ಪ್ರಕಟಗೊಳಿಸಬೇಕೆಂಬ ಆಸೆಯು ಲೇಖಕನಿಗೆ ಅಷ್ಟೇನೂ ತೀವ್ರವಾಗಿರಲಿಲ್ಲ. ಉತ್ತಮ ಕವಿತ್ವಕ್ಕಿರಬೇಕಾದ ಲಕ್ಷಣಗಳು ಅವುಗಳಲ್ಲಿಲ್ಲದೆ ಇರಬಹುದು; ಅವಿದ್ವತ್ಕವಿತೆಯ ದೋಷಗಳು ಹೇರಳವಾಗಿರಬಹುದು.

ಈ ಬಗೆಯ ಸಂಶಯವು ಬಲವಾಗಿದ್ದರೂ ಕನ್ನಡಿಗರಿಗೆ ಪರಮ ಗೌರವಾರ್ಹರಾದ ಮ ॥ ಬೆಳ್ಳಾವೆಯ ವೆಂಕಟನಾರಾಯಣಪ್ಪನವರೂ ಮ ॥ ತಳಕಿನ ವೆಂಕಣ್ಣಯ್ಯನವರೂ, ಹಾಗೆಯೇ ಈ ಪದ್ಯಗಳನ್ನು ಆಗಾಗ ಓದಿದ್ದ ಅಥವಾ ಕೇಳಿದ್ದ ಕಾವ್ಯಜ್ಞರಾದ ಇತರ ಕೆಲಮಂದಿ ಮಿತ್ರರೂ ಈ ಪದ್ಯ ಸಮುಚ್ಚಯವು ಪ್ರಕಟನೆಗೆ ಅರ್ಹವಾಗಿದೆಯೆಂದು ಲೇಖಕನಿಗೆ ಭರವಸೆ ಹೇಳಿ, ಇದು ಪ್ರಕಟವಾಗಲೇಬೇಕೆಂದು ನಿಶ್ಚಯಿಸಿದರು.

ತೋಟದಲ್ಲಿ ಎತ್ತರವಾದ ಮರಗಳೂ ಬಹುದೂರ ಹಬ್ಬಿರುವ ಬಳ್ಳಿಗಳೂ ಇದ್ದರೂ ನೆಲವನ್ನೇ ಅವಲಂಬಿಸಿಕೊಂಡಿರುವ ಬಡ ಹುಲ್ಲೂ ಇರುವಂತೆ ಸಾಹಿತ್ಯ ವನದಲ್ಲಿ ಮಹಾಕಾವ್ಯಗಳೂ ಉದ್ದಾಮ ಗ್ರಂಥಗಳೂ ಇದ್ದರೂ ಇಂತಹ ಅಲ್ಪ ಕೃತಿಗಳೂ ಇರಬಹುದಲ್ಲವೆ?

ಮಾರ್ಚಿ, ೧೯೨೨
ಡಿ.ವಿ.ಜಿ.

Monday, 19 February 2024

ಅರೆಮೂಕ - ಹಾಡುಗಳು - ನಿವೇದನ - ಡಿವಿಜಿ

ಅರೆಮೂಕ - ಹಾಡುಗಳು - ನಿವೇದನ - ಡಿವಿಜಿ
(ರೀತಿಗೌಳ ರಾಗ) 

ಅರೆಮೂಕನಾಗಿಹೆನು । 
ಕರೆಕರೆಯ ಪಡುತಿಹೆನು । 
ಒರೆಯಲರಿಯೆ–ನುಡಿವ ಪರಿಯನರಿಯೆ ॥ 

ಮನವಿಹುದು ತವಕದಲಿ । 
ಪನಿಯಿಹುದು ಕಣ್ಗಳಲಿ । 
ಮಾತನರಿಯೆ-ಪೇಳ್ವ ರೀತಿಯರಿಯೆ ॥ 

ಜೀವನವು ಕುಂದಿಹುದು । 
ಆವುದೋ ಬೇಕಿಹುದು । 
ಪೇಳಲರಿಯೆ–ನುಡಿದು ಕೇಳಲರಿಯೆ ॥ 

ಅಳಲಿನಲಿ ಮೊರೆಯಿಡಲು । 
ನಲವಿನಲಿ ನುತಿಕುಡಲು ನುಡಿಯ । 
ನುಡಿಯ ತಿಳಿಯೆ–ಬಾಯ ಬಿಡಲು ತಿಳಿಯೆ ॥ 

ಶಿರವೆತ್ತಿ ನೋಡುವೆನು । 
ಕರವೆತ್ತಿ ಜೋಡಿಪೆನು । 
ಬೇಡಲರಿಯೆ–ಪದದಿ ಪಾಡಲರಿಯೆ ॥