Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
Monday, 11 December 2023
Friday, 8 December 2023
ಬಾಳೊಂದು ಗೋಳು - ಕೇತಕೀವನ - ಡಿವಿಜಿ
ಮಗುಗಳಾಟದೆ ಮನಸು ಬೇಸರುವ ಮುನ್ನ
ನಗುವಾತಿನಿಂದಲೆದೆ ವಿಕಸಿಸದ ಮುನ್ನ
ಜಗದಿ ನಾನೊಬ್ಬಂಟಿಯೆಂದೆನಿಪ ಮುನ್ನ
ಮುಗಿಯಲೀ ಬಾಳು ಮಿಗುವೊಡದು ಗೋಳು.
ತುಂಬುಚಂದ್ರನ ನೋಟ ಬೇಡೆನಿಪ ಮುನ್ನ
ಇಂಬನರಸುವ ಸಾಸ ಸಾಕೆನಿಪ ಮುನ್ನ
ತುಂಬಿಹೂಗಳ ಲೀಲೆ ಬರಿದೆನಿಪ ಮುನ್ನ
ಮುಗಿಯಲೀ ಬಾಳು ಮಿಗುವೊಡದು ಗೋಳು.
ಗಾನ ಕವನಗಳ ರುಚಿ ಹಳಸಪ್ಪ ಮುನ್ನ
ಜ್ಞಾನಶ್ರಮ ಚೇತನಕೆ ದಣಿವೆನಿಪ ಮುನ್ನ
ಮಾನವತೆ ತಿರುಳಳಿದು ಸಪ್ಪೆಯಹ ಮುನ್ನ
ಮುಗಿಯಲೀ ಬಾಳು ಮಿಗುವೊಡದು ಗೋಳು.
**************
"ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ" ಎಂದು ಬಯಸಿ, ಜೀವನವನ್ನು ಪ್ರೀತಿಸಿದ ಕವಿ ಡಿ.ವಿ. ಗುಂಡಪ್ಪನವರು ಇರುವ ನಾಲ್ಕು ದಿನದ ಬಾಳನ್ನು ಎಲ್ಲರೊಡನೆ ಸಮರಸವಾಗಿ ಬೆರೆತು ಬಾಳುತ್ತ, ಮಾನವೀಯತೆಯಿಂದ ಧನ್ಯತೆಯಿಂದ ಬಾಳಬೇಕೆನ್ನುತ್ತಾರೆ. ಬಾಳನ್ನು ಗೋಳನ್ನಾಗಿ ಮಾಡಿಕೊಳ್ಳಬಾರದು.
ಮಕ್ಕಳಾಟವನ್ನು ಕಂಡು ಸಂತೋಷದಿಂದ ಮಕ್ಕಳೊಡನೆ ಮಕ್ಕಳಾಗಿ ನಗುತ್ತ ನಗಿಸುತ್ತಾ ಸರಸವಾಗಿ ಬಾಳಬೇಕು. ಸರಸವಿನೋದದ ಮಾತುಗಳಿಂದ ಹುಮ್ಮನಸ್ಸಿನಿಂದ ವಿಕಸಿಸುತ್ತಾ ಬಾಳಬೇಕು. ಜಗತ್ತಿನಲ್ಲಿ ನಾನು ಒಂಟಿಯಾದೆ ಎಂಬ ಬೇನೆ ಬೇಸರಗಳು ಅಪ್ಪಳಿಸದಂತೆ ಬಾಳಬೇಕು.
ಬೇನೆ ಬೇಸರ ಮನೋವೇದನೆಗಳಿಂದ ನರಳಾಡುವ ಒಂದು ಕ್ಷಣವೂ ಬಾರದಿರಲಿ. ಬಾಳು ಗೋಳಾಗುವ ಮೊದಲೇ ನಗುನಗುತ್ತಲೇ ಧನ್ಯತೆಯಿಂದ ಜೀವನಪಯಣವನ್ನು ಮುಗಿಸಲು ಪ್ರಯತ್ನಿಸಬೇಕು.
ಹುಣ್ಣಿಮೆಯ ಚಂದಿರನ ಹಾಲಿನಂತಹ ಬೆಳಕನ್ನು ಸವಿಯಲಾಗದಂತಹ ದೌರ್ಬಲ್ಯವು ಕಣ್ಣು ಹಾಗೂ ಮನಸ್ಸಿಗೆ ಬರಬಾರದು. ಎಲ್ಲರಿಗೂ ಒಳಿತನ್ನು ಬಯಸಿ ಸಹಕರಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿ ಬರಬಾರದು. ಹೂಗಳ ಮಕರಂದವನ್ನು ಹೀರಲು ಹೂಗಳ ಸುತ್ತ ಓಡಾಡುವ ದುಂಬಿಗಳ ಆಟವನ್ನು ಸವಿಯಲಾರದ ಹೀನ ಸ್ಥಿತಿ ಬರುವ ಮೊದಲೇ ನಮ್ಮ ಬಾಳಲೀಲೆಗಳನ್ನು ಮುಗಿಸಿಕೊಳ್ಳಬೇಕು.
ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿದ್ದು, ಎಲ್ಲರೊಡನೆ ಸಮರಸವಾಗಿ ಹೊಂದಿಕೊಂಡು ಬಾಳುತ್ತಿರಬೇಕು. ಈ ರೀತಿಯಲ್ಲಿ ಬಾಳಲು ಸಾಧ್ಯವಾಗದೆ, ಬಾಳು ಬರೀ ಗೋಳು ಎಂಬಂತಾಗ ಬಾರದು. ಅದರ ಮೊದಲೇ ನಮ್ಮ ಕರ್ತವ್ಯಗಳನ್ನು ಮುಗಿಸಿಕೊಳ್ಳಬೇಕು.
ಕಿವಿಗಳು ಗಾನಕವನಗಳ ಸವಿಯನ್ನು ಆಸ್ವಾದಿಸುತ್ತಾ ಎಲ್ಲರೊಡನೆ ಕಲೆತುಬಾಳುತ್ತಿರಬೇಕು. ಗಾನಕವನಗಳು ಹಳಸೆನ್ನುವ ದೀನಹೀನಸ್ಥಿತಿಯು ಬರಬಾರದು.ಅಂತಹ ಹೀನ ಸ್ಥಿತಿಯು ಬರುವ ಮೊದಲೇ ಧನ್ಯತೆಯಿಂದ ಬಾಳನ್ನು ಮುಗಿಸಿಕೊಳ್ಳಬೇಕು. ಅನಂತರ, ದಿನಗಳನ್ನು ಸವೆಸುತ್ತಿದ್ದರೆ ಅದು ಬಾಳಲ್ಲ, ಅದು ಬಾಳೊಂದು ಗೋಳು. ಓದು ಬರಹ ಅಧ್ಯಯನಗಳು ಸಾಕು, ದಣಿವಾಗುತ್ತಿದೆ, ಓದು ಬರಹಗಳು ಆಯಾಸವನ್ನು ಹೆಚ್ಚಿಸುತ್ತದೆ, ಚೈತನ್ಯವನ್ನು ಕುಗ್ಗಿಸುತ್ತದೆ ಎಂಬ ಅನ್ನಿಸಿಕೆ ಮನಸಿಗೆ ಬರುವ ಮೊದಲೇ ನಮ್ಮ ಜೀವನದ ಕೆಲಸಗಳನ್ನು ಪೂರೈಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳು ಬಾಳೆಂಬುದು ಗೋಳಿನ ಗೋಳವಾಗುವುದು. ಮಾನವೀಯತೆಯಲ್ಲಿ ಸ್ವಾರಸ್ಯವಿಲ್ಲ ಎಂಬ ಭಾವನೆ ಮೂಡುವ ಮೊದಲೇ ಬಾಳದೀವಿಗೆಯ ನಿಜವಾದ ಬೆಳಕನ್ನು ಹರಡುವ ಕರ್ಮವನ್ನು ಮುಗಿಸಿಬಿಡಬೇಕು. ನಗುನಗುತ್ತಾ ನಗಿಸುತ್ತಾ ಸಮರಸವಾಗಿ ಹೊಂದಿಕೊಂಡು ಬಾಳುತ್ತಾ ಧನ್ಯತೆಯಿಂದ ಜೀವನವು ಕೊನೆಗೊಳ್ಳಬೇಕು.
ಸಾಕಪ್ಪ ಸಾಕು ಬೇಡವೀ ಗೋಳು ಎಂದೆನ್ನುವ ದಿನಗಳು ಬಾಳಿನಲ್ಲಿ ಬರಬಾರದು ಎಂದು ಡಿವಿಜಿಯವರು ಬಯಸುತ್ತಾರೆ.. ಭಾವಾನುವಾದ:
©ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ
Thursday, 7 December 2023
ಬಡವ - ಕೇತಕೀವನ - ಡಿವಿಜಿ
ಮೂಡುವಿಂದುವ ನೋಡಲೆವೆಯರಳದವ ಬಡವ
ಹಾಡಿನಿಂಪಿಂದ ಕಿವಿಯಗಲದವ ಬಡವ
ಆಡುವೆಳೆಯರ ಕೂಡಲಾಡದೆದೆಯವ ಬಡವ
ಕಾಡ ಹಸಿರಿರೆ ತಣಿಯಲಾರದವ ಬಡವ
ಆಗಸದ ಬೆರಗಿಂದೆ ಮೈ ಮರೆಯದವ ಬಡವ
ಲೋಗರಾಯಸದಾಳವರಿಯದವ ಬಡವ
ರಾಗರಸಗಳ ಹತಿಗೆ ಸೋಲದಾತನು ಬಡವ
ರಾಗಿಯೊಳಗಮೃತವನು ಕಾಣದವ ಬಡವ
ಧರೆಯ ಬದುಕಿನೊಳಿನಿತು ಪಾಲೊಲ್ಲದವ ಬಡವ
ನರಗಣದ ಋಣದೆಳೆತವೆಣಿಸದವ ಬಡವ
ಕರುಣವಾರ್ತೆಯ ಕೇಳಿ ಕರಗದಾತನೆ ಬಡವ
ಕರಣಸಂಕೋಚಗಳನಾಂತವನೆ ಬಡವ
ಕವಿಯ ಜಗದಲಿ ದಿಟವ ಕಾಣದಾತನೆ ಕುರುಡ
ಸವಿಯನೀ ಬಾಳ್ಕೆಳೆಯೊಳರಸದನೆ ಹೆಳವ
ಭವದ ಸಂತೆಯೊಳಾತ್ಮದುಲಿಯ ಮರೆವನೆ ಕಿವುಡ
ವಿವಿಧದೀ ಕರಣಮಾಂದ್ಯಗಳಿಂದೆ ಬಡವ.
ಅರುಮೆಯೆಳೆತವೆ ಸೃಪ್ಟಿಮರುಮವೆನದವ ಬಡವ
ದುರಿತವಂತರಿಗಾಗಿ ಮರುಗದವ ಬಡವ
ಸಿರಿಯ ಹೊರಗರಸಿ ತನ್ನೊಳು ಕಾಣದವ ಬಡವ
ಸರಸತೆಯನುಳಿದು ಬಾಳ್ವವನೆ ಕಡು ಬಡವ
**********
**********
ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಗನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳ ಮುನಿಯ || (೫೫೪)
Wednesday, 6 December 2023
ಒಂದು ಪತ್ರಪ್ರಸಂಗ - ಕೇತಕೀವನ - ಡಿವಿಜಿ
I. ಕವಿ ಬೆನಕನಿಗೆ
ಗೆಳೆಯ,
ಅನ್ನ ಹಳಸುವುದುಂಟು;
ಗೆಳೆಯ,
ಅನ್ನ ಹಳಸುವುದುಂಟು;
ಹಣ್ಣು ಕೊಳೆಯುವುದುಂಟು;
ಕನ್ನೆ ಮುದಿಯಹುದುಂಟು;
ಕೆಳೆಗೆ ಕುಂದುಂಟೆ?
ಹೂವು ಬಾಡುವುದುಂಟು;
ಮಾವು ಹುಳಿಯುವುದುಂಟು;
ದೈವ ಮುಳಿವುದುಮುಂಟು;
ಕೆಳಗೆ ಕುಂದುಂಟೆ?
ಏನೊ ಹವ್ಯಾಸದಲಿ,
ಏನೊ ಹಂಗರಣದಲಿ,
ಏನೊ ಬೇಸರದಲ್ಲಿ,
ಏನೊ ಬಳಲಿಕೆಯಲ್ಲಿ
ಮರೆತುದುಂಟು,
ಬರೆಯದಿದ್ದುದುಂಟು.
ಎನಿತು ದಿನವಂತಿಹುದು-
ನೆನಪೆನಿತು ನಿದ್ರಿಪುದು?
ಎಚ್ಚರದೆ ನೆನಪು-
ಚುಚ್ಚದೇ ಮನವ?
ಇಂದೆನಗೆ ಹಾಗಾಯ್ತು,
ಚೆಂದ ಮನಕಾಯ್ತು.
ಹಳೆಯ ದಫ್ತರಗಳೊಳದೇನನೋ ಹುಡುಕುತಿರೆ,
ಹೊಳೆಯಿತೊಂದೋಲೆ ನೀಂ ಬರೆದಿದ್ದುದೆನಗೆ
ಏನೊಲವು ಬರಹವದು, ಏನು ಆ ನಲುಮೆ!
ಆನಂದವುಕ್ಕಿಪಾಳದ ತಿಳಿಯ ಚಿಲುಮೆ!
ನೆನಪುಕ್ಕಿತಾಗ,
ಮನವಳುಕಿತಾಗ,
ಅಳುಕು ಮರುನಿಮಿಷದಲಿ
ಇಳಿದು ಮರೆಯಾಯ್ತು.
ಭರವಸೆಯು ತಲೆದೋರಿ
ಹರುಷ ತುಂಬಾಯ್ತು.
ಹರುಷದಾ ಲೆಕ್ಕಣಿಕೆ
ಕೆಳೆಯ ದೌತಿಯಲಿ
ಮುಳುಮುಳುಗಿ ಭರದಿಂದ
ಬರೆಯಿಸಿಹುದಿದನು-
ಸರಸಪತ್ರವೊ ಎನಿಪ ತರ
ಗು ಪತ್ರೆಯನು.
ಮನ್ನಿಸೈ ನೀನಿದನು ಕವಿದೃಷ್ಟಿಯಿಡುತ,
ಕನ್ನಡದ ಕವಿ ಬೆನಕ, ರಸಕವಳವೆನುತ
ಬೆಂಗಳೂರು,೪ ಸೆಪ್ಟಂಬರ್ ೧೯೪೧
II. ಪ್ರಿಯ ಡಿ.ವಿ.ಜಿ. ಯವರಲ್ಲಿ
ಉನ್ನತಾದ್ರಿ ಶೃಂಗಶಿಲೆಗೆ
ಲ್ಲಿ ನೋಡು! ಇಳೆಗೆ
ಪಾವಕವನು ತಂದ ವೀರ
ಪ್ರಮಿಥೀಯಸ್ನಿವನು ಧೀರ
ನವೆಯುತಿಹನು ಸೆರೆಯಲಿ
ಪ್ರೀತಿಯಿವನ ಪೊರೆಯಲಿ.
ಗರುಡನಂಥ ಮಹಾಚಿಂತೆ
ಎದೆಯ ತಿನ್ನುತಿರಲು, ನಿಂತೆ
ಗೊಮ್ಮಟನಂತಳುಕದೆ,
ಶೋಕ ತುಂಬಿ ತುಳುಕದೆ.
ಅನ್ನ, -ವಾಯುದೇವನುಸಿರು.
ವರುಣ ತಂದ ಮಳೆಯೆ ನೀರು.
ಬನ್ನ ಬಡುವ ಕುವರನನ್ನು
ಹಗಲಿರುಳೂ ಕಟ್ಟಿಕೊಂಡು
ಬಗೆಗಾಣದ ಬಯಲಿನಲ್ಲಿ
ಶೂನ್ಯದಾ ಶ್ಮಶಾನದಲ್ಲಿ
ಸುತ್ತುತಿಹಳು ಬೊಗರೆಯಂತೆ
ಬೆದರಿ ನೋಡಿ ಚಿಗರೆಯಂತೆ;
ಕಣ್ಣು ಬಿಡುವ ತಾರೆಗಳಿಗೆ
ಕರುಣೆಪಡುವ ಗ್ರಹಂಗಳಿಗೆ
ಮೊರೆಯಿಡುವಳು ಧಾರುಣಿ,
ಆ ತ್ರಿಲೋಕತಾರಿಣಿ!
ಇಂತು ತೊಳಲ್ವ ಪ್ರಮಥಗಾವ
ಸುಖವು ಕೇಳು? ಆವ ಕಾವ?
ಇಳೆಯ ತೋರ್ವ ಚೆಲುವ ಬಣ್ಣ
ತಂಪುವಡಿಸುತಿಹುದು ಕಣ್ಣ.
ಮಿಂಚಿನಂತೆ ಗುಪ್ತ ಸುಪ್ತ-
ಭೂಮಿ ವ್ಯೋಮಗಳಲಿ ವ್ಯಾಪ್ತ-
ವಾದೊಲವಿನ ಭರವಸೆ
ಮುಗ್ಗಿದೆದೆಯ ತುಂಬಿಸೆ
ಲೋಕಕೆ ಸುಖ-ಸ್ವಾತಂತ್ರ್ಯ,
ನಾಡಿಗೆ ಸುಖ-ಸ್ವಾತಂತ್ರ್ಯ,
ವೈಷಮ್ಯಕೆ ಪಾರತಂತ್ರ್ಯ,
ಬರುವ ದಿವ್ಯ ಸಂಜ್ಞೆಯಿರೆ
ನೆಲ ಮುಗಿಲದ ಸಾರುತಿರೆ
ಹೃದಯವದಕೆ ಹಿಗ್ಗುತಿರೆ, -
ಸ್ವರ್ಣಯುಗದ ಕಹಳೆಯೂದಿ
ದ್ವೇಷದೂಷಣೆಗಳ ಬೂದಿ
ದಿಕ್ಕು ದಿಕ್ಕಿನಲ್ಲಿ ಚೆಲ್ಲಿ
ಪ್ರೇಮವು ಹೊಂದೇರಿನಲ್ಲಿ
ಬರುವ ತನಕ-ಯಾವ ಸುಖ?
ಪೂರ್ವಸಂಜ್ಞೆಯೊಂದೆ ಸುಖ,
ಇಂದಿದೇ ವಿಮೋಚನೆ.
ಇದಕೆ ಬೇಡ ಯೋಚನೆ.
ನಮ್ಮ ಪ್ರಮಥರಲ್ಲಿ ಪ್ರಥಮ
ಗಣ ನಿನ್ನದು. ನಿನ್ನ ತಮ್ಮ-
ನಾಗಿ ಬೆಳೆದೆ ಕೇಳೊ! ಅಣ್ಣ!
ನಿನ್ನಾತುಮನೊಲುಮೆಗಣ್ಣ
ಬೆಳಕಿನಲ್ಲಿ. ನಿನ್ನ ಹರಕೆ
ಕಾಯಲೆಂಬುದೊಂದೆ ಅರಿಕೆ.
ಕೆಳೆಯಂಬುವ ಮಹಾಮಂತ್ರ-
ವಿರೆ ಸ್ವತಂತ್ರ, ಸರ್ವತಂತ್ರ
ಎದೆಬೀಣೆಯ ನುಡಿಯಿಸೆ
ಮನದ ಕೊಂಬ ಹಿಡಿಯಿಸೆ,
ಅದರ ನಾದದಲ್ಲಿ ಕೂಡಿ
ಬೆಳೆಯಿತೆಮ್ಮ ಗಣವು ಹಾಡಿ.
ನಾನಾಡಿದ ತೊದಲುಮಾತು
ಇರಲಿ ನಿನ್ನ ಮನದಿ ಹೂತು.
ನಾನಾಡಿದುದೆಲ್ಲ ತೊದಲು,
ನನ್ನ ಸುತ್ತಲಿಹುದು ಹುದುಲು.
ತಾರೆಯೆಂತು ದಿಗ್ವಲಯದಿ
ಮಿನುಗಿತಂತು ಮಮ ನಿಲಯದಿ
ನಿನ್ನ ನಚ್ಚಿನೋಲೆಯೂ
ಮತ್ತೆ ಮೇಲೆ ಮೇಲೆಯೂ
ಸೆರೆಯಾಳನು ಮುಕ್ತಿಯ ಚೆಲು
ಗನಸೆಲ್ಲಿಯು ಮುತ್ತಿದವೊಲು
ನಿನ್ನ ನೇಹದಾಳದಲ್ಲಿ
ಮುಳುಗಿ ಪಡೆದ ಸವಿಯದಿಲ್ಲಿ
ಉಕ್ಕೇರಿತು. ಆದರೇನು?
ಸುತ್ತಲಿರುವ ಹುದುಲಿಗೇನು?
ಕೆಸರನೆಲ್ಲ ಬದಿಗೆ ಸರಿಸಿ
ಒಂದು ನಿಮಿಷವೆಲ್ಲ ಮರೆಸಿ
ನಿನ್ನ ಪ್ರೀತಿಸರಸೆಯಲ್ಲಿ
ಜೀವಹಂಸ ನೆಗೆದಿತಿಲ್ಲಿ!
ನೆಗೆದು ನಭಕೆ ಹಾರಿತು,
ಇಳಿದು ಬಳಿಗೆ ಸಾರಿತು.
ನಿನ್ನ ಕ್ಷಮೆಯ ಹೊಂದಿತು.
ಓಲೆಯಿದನು ತಂದಿತು!
೧೪ ಸೆಪ್ಟೆಂಬರ್ ೧೯೪೧ - ಬೆನಕ
**************************
**************************
ಅನ್ನ ಹಳಸಿ ಕೆಡಬಹುದು. ಹಣ್ಣುಗಳು ಕಾಲವಶದಿಂದ ಕೊಳೆತು ಹೊಲಸಾಗುವುದೂ ಇದೆ. ಸುಂದರಿಯಾದ ಕನ್ಯೆಯು ಕಾಲವಶದಿಂದ ಮುದಿಯಾಗಿ ತೊಗಲು ಬಿದ್ದವಳಾಗಿ ಜನರಿಂದ ದೂರವಾಗುವ ಸಾಧ್ಯತೆ ಇದೆ. ಗೆಳೆಯಾ! ಅಪ್ಪಟ ಗೆಳೆತನದಲ್ಲಿ ಕುಂದುಕೊರತೆಗಳಿಗೆ ಅವಕಾಶವಿಲ್ಲ.
ಹೂವು ಬಾಡೀತು. ಮಾವು ಹುಳಿಯಾಗುವುದೂ ಇದೆ. ಕೆಲವೊಮ್ಮೆ ದೈವವೂ ಮುನಿಸಬಹುದು.
ಆದರೆ ಗೆಳೆತನಕ್ಕೆ ಕುಂದಾಗದು. ಪ್ರಕೃತಿಯೇ ಏರುಪೇರಾದರೂ ನಿಜವಾದ ಗೆಳೆತನಕ್ಕೆ ಯಾವುದೇ ರೀತಿಯ ಊನವಾಗದು.
ಯಾವದೋ ಒತ್ತಡದಿಂದ ಮರೆತಿರುವುದು ಇದ್ದಿರಬಹುದು. ಹವ್ಯಾಸಗಳ ಒತ್ತಡ, ಯಾವದೋ ಹಗರಣ, ಯಾವದೋ ಬಳಲಿಕೆ, ಬೇಸರಗಳಿಂದ ಮರೆತಿರಬಹುದು. ಓಲೆ ಬರೆಯಲು ಮರೆತಿರಬಹುದು.
ಒಂದೊಮ್ಮೆ ಮರೆತೆನೆಂದರೆ ಮರೆವು ಶಾಶ್ವತವಲ್ಲ. ನಿದ್ದೆಗೊಂಡವನು ಎಚ್ಚರವಾಗಲೇ ಬೇಕಲ್ಲವೇ? ಎಚ್ಚರವಾದಾಗ ನೆನಪುಗಳು ಮನಸ್ಸನ್ನು ಕಾಡುತ್ತವೆ.
ಕೆಲವು ದಿನಗಳ ಹಿಂದೆ ನೀನು ನನಗೊಂದು ಓಲೆಯನ್ನು ಬರೆದುದು ನೆನಪಾಯಿತು. ಒಲವುತುಂಬಿದ ಓಲೆಯದು. ಆ ಓಲೆಯ ಬರಹದಲ್ಲಿ ಅನುಪಮ ನಲುಮೆಯದು ಸೂಸುವುದು! ಆನಂದವನ್ನೇ ಚಿಮ್ಮಿಸುವ ಚಿಲುಮೆಯದು!
ಆ ನಲುಮೆಯ ಪತ್ರವನು ಮತ್ತೆ ಕಂಡಾಗ ನೆನಪುಗಳು ಕಾಡುತ್ತಾ ಸಕಾಲದಲ್ಲಿ ಸ್ಪಂದಿಸದುರುವ ಬಗೆಗೆ ಒಳಗೊಳಗೇ ಅಳುಕಿದೆನು. ಗೆಳೆತನದಲ್ಲಿ ಅಳುಕಿಗೆ ಅವಕಾಶವಿಲ್ಲ ಎಂದಯ ಮುಕ್ಷಣದಲ್ಲಿ ಸುಧಾರಿಸಿಕೊಂಡೆ. ಗೆಳೆಯಾ, ಭರವಸೆಯಿಂದ ಹರುಷವಾಯಿತು ಮನಕೆ.
ಹರ್ಷಗೊಂಡ ಮನಸ್ಸು ಕೈಗೆ ಲೆಕ್ಕಣಿಕೆಯನ್ನು ಹಿಡಿಸಿತು. ಗೆಳೆಯಾ, ನಾನಲ್ಲ ನಿನ್ನ ಗೆಳೆತನವೇ ಈ ಮಾರೋಲೆಯನ್ನು ಬರೆಯಿಸಿತು. ಮಸಿಕುಡಿಕೆಯೊಳಗೆ ಮುಳುಮುಳುಗಿ ಲಗುಬಗೆಯಿಂದ ಈ ಸರಸಪತ್ರವನ್ನು ಗೆಳೆತನವೇ ಬರೆಯಿಸಿತು.
ಈ ಒಣಹಾಳೆಗಳಿಗೆ ಗೆಳೆತನದ ಒಲವಿನ ಪತ್ರವೇ ಜೀವಚೈತನ್ಯವನ್ನು ಮೂಡಿಸಿದೆ.
ಕವಿವರ ಕನ್ನಡದ ಬೆನಕ! ಕವಿದೃಷ್ಟಿಯುಳ್ಳವನು ನೀನು. ರಸಗವಳವೆಂದು ಸ್ವೀಕರಿಸಿ ಎನ್ನ ಮರೆಗುಳಿತನವನ್ನು ಮನ್ನಿಸುವುದು!
****
****
ಪ್ರಮೀತಿಯಸ್ ಎಂಬುದು ಗ್ರೀಕ್ ದೇವತೆಯೊಬ್ಬನ ಹೆಸರು. ಜೆಯಾಸನು ಮಾನವರ ಬಳಕೆಯ ಬೆಂಕಿಯನ್ನು ಕಿತ್ತುಕೊಂಡನಂತೆ. ಪ್ರಮೀತಿಯಸನು ಗೆಳೆಯನಿಗಾಗಿ ಬೆಂಕಿಯನ್ನು ಜಿಯಾಸನ ಹಿಡಿತದಿಂದ ಕದ್ದು ತಂದು ಭೂಮಿಗೆ ತಂದು ಗೆಳೆಯನ ಬಂಧನವನ್ನು ಬಿಡಿಸಿದವನು ಎಂಬ ದಂತಕತೆಯೊಂದು ಹೇಳುತ್ತದೆ. ಪ್ರಮೀತಿಯಸನು ಮಾಡಿದ ಅಪರಾಧಕ್ಕಾಗಿ ಅವನನ್ನು ಪರ್ವತದ ಕೋಡುಗಲ್ಲಿಗೆ ಸರಪಣಿಗಳಿಂದ ಬಿಗಿದು ರಣಹದ್ದಿನಿಂದ ಅವನ ಯಕೃತ್ತಿನ ಮಾಂಸವನ್ನು ಕಿತ್ತು ಕಿತ್ತು ತಿನ್ನುವ ಶಿಕ್ಷೆ ವಿಧಿಸಲಾಯಿತು. ಅವನ ಯಕೃತ್ತು ಮತ್ತಮತ್ತೆ ಬೆಳೆಯುತ್ತಿತ್ತು ಎಂದು ಕತೆಯ ಉಲ್ಲೇಖ.
'ಕವಿ ಬೆನಕನಿಗೆ' ಹೆಸರಲ್ಲಿ ಬರೆದ ಓಲೆಗೆ ಹತ್ತು ದಿನಗಳ ಅನಂತರ ಗೆಳೆಯನ ಮಾರೋಲೆ. ( ಮಾರುತ್ತರದ ಓಲೆ)
ಎತ್ತರವಾದ ಗಿರಿಶಿಖರದ ಕೋಡುಗಲ್ಲಿಗೆ ಗೆಳೆಯನಿಗಾಗಿ ಜೀವವನ್ನು ಪಣವಿಟ್ಟ ಪ್ರಮೀತಿಯಸನ್ನು ಸರಪಣಿಯಿಂದ ಬಿಗಿದರು. ಈ ಭೂಮಿಯನ್ನು ಪಾವನಗೊಳಿಸುವ ಬೆಂಕಿಯನ್ನು ತಂದ ಪ್ರಮೀಥಿಯಸ್ ಧೀರನು. ಈ ನನ್ನ ಗೆಳೆಯನು ಸೆರೆಯಲ್ಲಿ ನವೆಯುತ್ತಿದ್ದಾನೆ. ಗೆಳೆಯನ ಪ್ರೀತಿಯು ಪ್ರೀತಿಯನ್ನೂ ಗೆಲ್ಲಿಸಲಿ. ಗೆಲುವು ನಮ್ಮ ಗೆಳೆತನವನ್ನೂ ಗೆಲ್ಲಿಸಲಿ. ಪ್ರಮೀಥಿಯಸ್ಸನ ಎದೆಬಗೆಯುತ್ತಿದ್ದ ಗರುಡನಂತೆ ಮಹಾಚಿಂತೆಯು ಎದೆಯ ಕೊರೆಯುತ್ತಿದೆ. ಆದರೂ, ಅಂಜದೆ ಅಳುಕದೆ, ನಿಶ್ಚಲವಾಗಿ ನಿಂತ ಗೊಮ್ಮಟನಂತೆ ಅಚಲವಾಗಿ ನಿಂತೆ. ವಾಯುವೇ ಅನ್ನ. ಸುರಿವಮಳೆಯೇ ನೀರು. ಸಂಕಟಗಳನ್ನು ಎದುರಿಸುವ ಕುಮಾರನನ್ನು ಕಟ್ಟಿಕೊಂಡು ಹಗಲಿರುಳೂ ಮುಂದುಗಾಣದ ಬಯಲಲ್ಲಿ ಶೂನ್ಯ ಮಸಣದಲ್ಲಿ ಎಂಬಂತೆ ಗುರಿಯಿಲ್ಲದ ಬುಗುರಿಯಂತೆ, ಬೆದರಿದ ಚಿಗರೆಯಂತೆ ಪಿಳಿಪಿಳಿ ಕಣ್ಣುಬಿಡುತ್ತದ್ದೇನೆ.
ಕಣ್ಣುಬಿಡುವ ತಾರೆಗಳಿಗಳಲ್ಲಿ, ಕರುಣೆ ಪಡುವ ಗ್ರಹಗಳಿಗಳಲ್ಲಿ ಲೋಕಸಂರಕ್ಷಕಳಾದ ಧಾರಿಣಿಯೇ ಅಸಹಾಯಕಳೋ ಎಂಬಂತೆ ಮೊರೆಯಿಡುತ್ತಿದ್ದಾಳೆ.
ಈ ರೀತಿಯಲ್ಲಿ ತೊಳಲಾಡುತ್ತಿರುವ ಶಿವಭಕ್ತ ಪ್ರಮಥನಂತಹ ಗೆಳೆಯನಿಗೆಲ್ಲಿಯ ಸುಖ!? ಗೆಳೆಯನನ್ನು ಹಾಗೂ ಗೆಳೆತನವನ್ನು ಕಾಪಾಡುವವರು ಯಾರು!? ಗೆಳೆತನವೇ ಈ ವಸುಂಧರೆಯ ಚೆಲುವನ್ನು ಸಿರಿಸಂಪದವನ್ನು ತೆರೆದು ತೋರಿಸುವುದು. ಈ ಕಣ್ಣುಗಳಿಗೆ ತಂಪನ್ನು ನೀಡುವ ಗೆಳೆತನವು ಅಂತರಂಗದ ಕಣ್ಣುಗಳನ್ನು ತೆರೆಸಲು ಕಾರಣ.
ಬಾನಲ್ಲಿ ಮೂಡುವ ಮಿಂಚಿನೊಳಗೆ ಅಮೋಘವಾದ ವಿದ್ಯುತ್ಸಂಚಾರದ ಶಕ್ತಿ ಅಡಗಿರುತ್ತದೆ. ಹಾಗೆಯೇ, ದಿಗಂತವನ್ನು ಮೀರಿ ವಿಸ್ತರಿಸುವ ಗೆಳೆತನವು ಒಲವಿನ ಆಕರ್ಷಣೆಯ ಶಕ್ತಿಯಿಂದ ಮುದುಡಿದ ಎದೆಯಲ್ಲಿ ಭರವಸೆಯ ಜೀವಸಂಚಲನವನ್ನುಂಟುಮಾಡುತ್ತದೆ. ಮುಗ್ಗಿದೆದೆಯಲ್ಲಿ ಒಲವನ್ನು ತುಂಬಿಸುವದರಿಂದ ಲೋಕದಲ್ಲಿ ಸುಖ ಸ್ವಾತಂತ್ರ್ಯ ! ನಾಡಿನಲ್ಲಿ ಸುಖ ಸ್ವಾತಂತ್ರ್ಯವನ್ನು ಮೂಡಿಸಲು ಗೆಳೆತನವು ಕಾರಣವಾಗಬಲ್ಲದು.
ಪರಸ್ಪರ ವೈಷಮ್ಯವಿಲ್ಲಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಪಾರತಂತ್ರ್ಯವೇ ಗತಿ!
ಗೆಳೆಯನ ಆಗಮನದ ದಿವ್ಯ ಸೂಚನೆ ಸಿಕ್ಕರೆ, ಹೃದಯವೇ ಆಗಸದಂತೆ ಹಿಗ್ಗಿ ಮುಗಿಲೆತ್ತರ ಗೆಳೆಯನ ಆಗಮನದ ಸಂತಸವನ್ನು ಬಿತ್ತರಿಸುತ್ತ ಹಿಗ್ಗಿ ಹೀರೇಕಾಯಾಗುತ್ತಾನೆ.
ಸುವರ್ಣಯುಗ ಕೂಡಿಬಂತೆಂದು ಕಹಳೆಯೂದುವವನು, ನೀನೆ ಗೆಳೆಯ! ಗೆಳೆಯನಿರುವಲ್ಲಿ ದ್ವೇಷ ಅಸೂಯೆಗಳು ಬೂದಿಯಾಗಿ ದಿಗ್ದಿಗಂತಗಳಾಚೆ ಚೆಲ್ಲುತ್ತೆ. ಪ್ರೇಮದೋಲೆಯು ಹೊನ್ನಿನ ತೇರೇರಿಲಿ ಬರುವುದನ್ನೇ ಎದುರು ನೋಡಯತ್ತಾನೆ. ಯಾವಾಗ ಓಲೆ ಕೈಗಾನಿಸುವುದೋ ಎಂದು ಗೋಣೆತ್ತಿ ನೋಡುತ್ತಾ ಸವೆಯುತ್ತಾನೆ. ಗೆಳೆಯನ ಓಲೆಯ ಸುಳಿವೊಂದು ಸಿಕ್ಕಿದರೆ ಅದೂ ಕೂಡ ಒಳ್ಳೆಯ ಸೂಚಿಸಿದರೂ ಅದೇ ಒಂದುರೀತಿಯ ಸುಖದ ಸಗ್ಗ. ಗೆಳೆಯಾ, ನಮ್ಮ ಗಣಪ್ರವರರಲ್ಲಿ ನೀನೇ ಗಣಪತಿಯಂತೆ ಪ್ರಥಮವಂದ್ಯ ಪ್ರಮಥನಾಯಕ ಬೆನಕದೇವ! ಗೆಳೆಯಾ ನಾನಿನ್ನ ತಮ್ಮನಾಗಿ ಬೆಳೆದೆ. ನಿನ್ನ ಆತ್ಮೀಯ ಒಲವಿನ ಬೆಳಕಿನಲ್ಲಿ ನಾನು ಬೆಳೆದೆನು ಬೆಳಗುತ್ತಿರುವೆನು. ಅಣ್ಣಾ! ನಿನ್ನ ಹರಕೆಯು ನಿನ್ನ ಆತ್ಮದೊಲವಿನ ಬೆಳಕಲ್ಲಿ ಬೆಳಗಿ ನಿನ್ನನ್ನು ಕಾಪಾಡಲಿ ಎಂದು ಎಂಬುದೇ ನನ್ನ ಅರಿಕೆ.
ಗೆಳೆತನವು ಮಹಾಮಂತ್ರ. ಗೆಳೆತನದ ಮಹಾಮಂತ್ರವು ಸಿದ್ಧಿಸಿದರೆ ಸರ್ವರೂ ಸ್ವತಂತ್ರರು. ಹೃದಯವೆಂಬ ವೀಣೆಯನ್ನು ಭಾವವೆಂಬ ತಂತಿಯಿಂದ ಮಿಡಿದಾಗ ಅದರ ದಿವ್ಯ ನಾದದಲ್ಲಿ ಬೆನಕನ ಗಣಗಳಾದ ನಾವು ಒಂದುಗೂಡಿ ತಾಳ ಹಾಕುತ್ತ ಕುಣಿಯುತ್ತೇವೆ.
ಗೆಳೆಯ, ನಾನಾಡಿದ ಮಾತುಗಳು ಬರಿಯ ತೊದಲುನುಡಿಗಳು ನಿನ್ನಮನದೊಳಗೆ ಹುದುಗಿ ನಿಂತಿರಲಿ.
ನನ್ನ ಸುತ್ತಮುತ್ತ ಕೆಸರಿನಂತಹ ಬೇನೆಬೇಸರಗಳು ಆವರಿಸಿವೆ. ಕತ್ತಲಿನ ಆಕಾಶದಲ್ಲಿ ಮಿನುಗುಮಿಂಚಿನ ತಾರೆಯೊಂದು ಹೊಳೆದಂತೆ ನನ್ನ ಮನೆಯಲ್ಲಿ ನಿನ್ನ ನೆಚ್ಚಿನ ಓಲೆಯನ್ನು ಕಂಡೆನು. ಸೆರೆಯಾಳು ಸೆರೆಯಿಂದ ಬಿಡುಗಡೆ ಕಂಡಂತೆ ಈ ನಿನ್ನ ಮೆಚ್ಚಿನೋಲೆಯು ನನ್ನನ್ನು ಬೇನೆ ಬೇಸರಗಳ ಬಂಧನದಿಂದ ಮುಕ್ತಿ ನೀಡಿತು. ಸೆರೆಯಾಳಿಗೆ ಕನಸಲ್ಲಿ ಬಿಡಗಡೆಯಾದಂತೆ ನನಗೆ ನಿನ್ನ ಪತ್ರವು ಬೇನೆಬೇಸರಗಳಿಂದ ಒಂದಿನಿತು ಮುಕ್ತವಾದಂತೆ ಹಾಯೆನ್ನಿಸಿತು. ಗೆಳೆಯಾ, ನಿನ್ನ ಗೆಳೆತನದಲ್ಲಿ ಮುಳುಗೆದ್ದ ಮೀಹದಿಂದ ಆನಂದದ ಸವಿ ಉಕ್ಕೇರಿತು. ಸುತ್ತಮುತ್ತ ಚೆಲ್ಲಿರುವ ರಾಡಿ ಕೊಚ್ಚೆಕೆಸರಲ್ಲೂ
ಕೆಸರನೆಲ್ಲ ಒಂದೇ ನಿಮಿಷದಲ್ಲಿ ಹೊರಚೆಲ್ಲಿದಂತೆ ಬೇನೆ ಬೇಸರಗಳು ದೂರಸರಿದವು. ದುಗುಡವೆಲ್ಲವನು ನಿನ್ನ ಓಲೆ ಮರೆಯಿಸಿತು.
ಗೆಳೆಯಾ! ನಿನ್ನ ಪ್ರೀತಿಯ ಕೊಳದಲ್ಲಿ ಜೀವಹಂಸವನ್ನು ಆಗಸಸರಸಿಯಲಿ ತೇಲಿಬಿಟ್ಟೆ. ಈ ಜೀವಹಂಸವು ಸರಸಿಯಿಂದ ನಭದೆತ್ತರಕ್ಕೆ ಜಿಗಿಯಿತು. ನಭದಿಂದ ಮೆದುವಾಗಿ ಇಳಿದು ನನ್ನ ಬಳಿಗೆ ಮಂದಹಾಸ ಬೀರುತ್ತಾ ಬಂತು! ನಿನ್ನ ಕ್ಷಮೆಯ ಭಾರವನ್ನು ಹೊತ್ತುಕೊಂಡೇ ಒಲವಿನ ಓಲೆ ಎನ್ನ ಬಳಿಸಾರಿತು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣವಭಟ್ ಮಂಡ್ಯ
Monday, 4 December 2023
ನಳಿನಿಗೆ - ಕೇತಕೀವನ - ಡಿವಿಜಿ
ನವನೀತ ನಾನಲ್ಲ
ಧವಳಾಂಗವೆನಗಿಲ್ಲ
ಎನ್ನ ನೀಂ ಮೆಚ್ಚುವೆಯ?
-ಎನ್ನದಿರು, ನಳಿನಿ.
ರವಿಯ ತಾಪದಿ ಜೀವ
ತವಿಸುತಿರೆ ಬೇಕಿಹುದು
ಕಣ್ಣಿರಿವ ಝಳವಲ್ಲ,
ತಣ್ಣನೆಯ ನೆರಳು.
ದಿನಮಧ್ಯದುಮ್ಮಳದಿ
ವನದ ಛಾಯೆಯ ತೆರದಿ
ಕೋಮಲದ ನಿನ್ನೊಡಲ
ಶಾಮಲತೆಯೆನಗೆ
ನೀಲನಭದವೊಲು ಮುಖ
ಲೋಲನಯನವೆ ತಾರೆ
ತಿಳಿನಗುವೆ ಚಂದ್ರಕಳೆ
ಚೆಲುವುಂಟೆ ಬೇರೆ?
ತಿಳಿಗೊಳದಿ ಸುಳಿಸುಳಿದು
ಹೊಳೆಹೊಳೆವ ಮೀನವೊಲು
ಸುಳಿವ ನಿನ್ನಾ ಕಣ್ಣು
ಬೆಳಕೆನ್ನ ಬಾಳ್ಗೆ.
ಬಿಳಿದೊವಲು ಹೆಚ್ಚೇನು
ಜಳದ ಚವಿ ಕುಂದೇನು
ಚೊಕ್ಕಟವೆ ಮೆಯ್ಸೊಬಗು
ಅಕ್ಕರೆಯೆ ಬೆಡಗು.
ಮನಸಿನಿನಿರಸವೆಲ್ಲ
ತನುವೊಳುಕ್ಕುತ ಪರಿಯೆ
ಕಾದ ಹೊನ್ನಿನ ಮೆರುಗು
ಮೈದೊವಲ ಬೆರಗು.
ತುಂಬುಕೆನ್ನೆಯ ನುಣ್ಬು
ಇಂಬಾದ ನಗುಬೆಳ್ಬು
ಕಣ್ಣಾಲಿ ಕರಿತಳ್ಪು
ನಿನ್ನ ಮೆಯ್ಯೊಳ್ಪು.
ನಿಲದಲೆವ ಮುಂಗುರುಳು
ವಲಯಿತದ ಕರಿಹೆರಳು
ಇಂದುಫಲಕದ ನೊಸಲು
ಸುಂದರದ ಹೊನಲು.
ಕರಿಣಿ ಪೀವರಗಾತ್ರ ತರಳ
ವಿದ್ಯುನ್ನೇತ್ರ ನಗುವು
ತುಂಬಿದ ವದನ
ಸೊಗಕದುವೆ ಸದನ.
*****************
ಮನಮೆಚ್ಚಿದೆಡೆ ತನ್ನ ಕಣ್ಣಿಗೆ ಪ್ರೇಯಸಿಯು ಪ್ರೇಮಿಗೆ ಸುಂದರವಾಗಿಯೇ ಕಾಣುತ್ತಾಳೆ. ಶರೀರವು ಕರಿಣಿಯಂತಿದ್ದರೂ ಅದರಲ್ಲೂ ಸೊಗಸನ್ನೇ ಅರಸುತ್ತಾನೆ. ಪ್ರೀತಿ ಪ್ರೇಮಕ್ಕೆ ನೀಳಕಾಯದ ತನ್ವಂಗಿಯಾಗ ಬೇಕೆಂಬುದಿಲ್ಲ. ನೀಳವೇಣಿಯ ಶ್ಯಾಮಲತನುವಿನ ಕರಿಣಿಯೂ ಪ್ರೇಮಿಗೆ ಚೆಲುವೆಯಾಗಿಯೇ ಕಾಣುತ್ತಾಳೆ ಎಂಬುದನ್ನು ಡಿವಿಜಿಯವರು ನಳಿನಿ ಕವನದಲ್ಲಿ ಸೊಗಸಾಗಿ ನಿರೂಪಿಸುತ್ತಾರೆ.
ತಾನು ಮೆಚ್ಚಿದ ಕೃಷ್ಣವರ್ಣದ ಪ್ರೇಯಸಿಯು ತನ್ನ ಪ್ರೇಮನಿವೇದನೆಯನ್ನು ಎಲ್ಲಿ ನಿರಾಕರಿಸುವಳೋ ಎಂಬ ಸಂಶಯದ ಹುಳು ಮನಸನ್ನು ಹೊಕ್ಕು ಕೊರೆಯುತ್ತಿದೆ. ಮನದಲ್ಲೇ ಪ್ರೇಯಸಿಗೆ ಓಲೆಬರೆದಂತೆ ನಿವೇದಿಸಿಕೊಳ್ಳುತ್ತಾನೆ.
" ನಳಿನಾಂಗಿ, ಕೆನೆಬೆಣ್ಣೆಯಂತಹ ಸೊಗಸಾದ ದೇಹಕಾಂತಿಯ ಬಿಳಿಬಣ್ಣದವಳಲ್ಲ, ಮಸಿಬಣ್ಣದ ನನ್ನನ್ನು ಮೆಚ್ಚುವೆಯಾ!?" ಎಂದು ಸಂಶಯದಿಂದ ಪ್ರಶ್ನಿಸದಿರು.
ಸೂರ್ಯನ ಬೆಂಕಿಬಿಸಿಲಿನ ಕಾವಿನಿಂದ ನೊಂದು ಬೆಂದವನಿಗೆ, ಕಣ್ಣುಕೋರೈಸುವ ಬೆಳಕಿನಝಳವು ಬೇಡ, ತಣ್ಣನೆಯ ನೆರಳಿನಾಸರೆಯಷ್ಟೇ ಸಾಕು. ಸುಡುಬಿಸಿಲ ನಡುಹಗಲಿನಲ್ಲಿ ಬಸವಳಿದಿದ್ದೇನೆ.
ವನರಾಜಿಯ ನೆರಳಲ್ಲಿ ಮರವನ್ನು ಬಳಸಿದ ಕೋಮಲವಾದ ಲತೆಯಂತಿರುವೆ ನೀನು. ನಿನ್ನೊಡಲ ಪ್ರೀತಿಯೇ ಎನಗೆ ತಣ್ಣೆಳಲ ಆಸರೆ.
ನಿನ್ನ ಈ ವದನಾರವಿಂದವು ಇರುಳಿನ ನೀಲಿಮೆಯ ಆಕಾಶದಂತೆ ಶಾಂತವಾದುದು. ನೀಲಾಕಾಶದಂತಹ ನಿನ್ನ ಮುದ್ದುಮೊಗದಲ್ಲಿ ನಯನಗಳೇ ಮಿಂಚುತ್ತಿರುವ ತಾರೆಗಳು. ನಿನ್ನ ಚೆಲುನಗೆಯೇ ಚಂದಿರನ ಕಳೆ! ಇದಕ್ಕಿಂತ ಚೆಲುವೆಲ್ಲಿದೆ!?
ತಿಳಿಯಾದ ಕೊಳದಲ್ಲಿ ಸುಳಿಸುಳಿಯುತ್ತಾ ಓಡಾಡುವ ಮೀನುಗಳಂತೆ ಈ ನಿನ್ನ ಚಂಚಲ ನೋಟದ ಕಂಗಳು ಸೌಂದರ್ಯದ ಜೀವಾಳ. ಈ ನಿನ್ನ ಕಣ್ಣ ಬೆಳಕಿನದೂಲವೇ ನನ್ನ ಬಾಳ ಬೆಳಕಾಗಿ ಬೆಳಗುವುದು.
ಕೆಲವರು ಬಿಳಿದೊಗಲಿನಲ್ಲೇ ಸೌಂದರ್ಯವನ್ನು ಅರಸುವರು. ಬಿಳಿಯ ಬಣ್ಣವದರಿಂದಲೇ ಮೈಸೊಗಸೆನ್ನುವುದು ಭ್ರಮೆ. ಶ್ಯಾಮಲ ವರ್ಣದ ಮುಗಿಲ ಬಣ್ಣದ ಕುಂದೇನು?
ನಿರ್ಮಲವಾದ ಮೈಸೊಬಗೇ ಬೆಡಗಿನಖನಿಯು.
ಮನಸಿನ ಪ್ರೇಮರಸವು ಶರೀರವನ್ನು ಆವರಿಸಿದಾಗ ಪುಟವಿಟ್ಟ ಬಂಗಾರದಂತೆ ಬೆರಗಾಗುವಂತಹ ಚೆಲುವು ತುಂಬಿತುಳುಕುತ್ತದೆ.
ತುಂಬುಕೆನ್ನೆಯ ಬೊಗಸೆ ಕಂಗಳ ನಿನ್ನ ನುಣುಪಾದ ಮುಖದಲ್ಲಿ ಚೆಲುನಗೆಯ ತಣಿವು ಹಾಗೂ ಕಣ್ಣಾಲಿಗಳ ಕಪ್ಪು ಇವು ನಿನ್ನ ಮೈಯ ಚೆಲುವಿಗೆ ಸರಿಸಾಟಿಯಾಗಿ ಸುಂದರವಾಗಿ ಮಿನುಗುತ್ತಿರುವೆ.
ನಿನ್ನ ಹಣೆಯ ಪಾರ್ಶ್ವಗಳಲ್ಲಿ ಮುಂಗುರುಳುಗಳು ತರಂಗಿಣಿಯ ಅಲೆಗಳಂತೆ ಮಂದವಾಗಿ ಹಾರಾಡುತ್ತಿವೆ. ಕೃಷ್ಣವರ್ಣದ ನೀಳವಾದ ಹೆರಳು ನಿನ್ನನ್ನು ಸುತ್ತುಬಳಸಿ ನಿನ್ನ ಚೆಲುವನ್ನು ಹೆಚ್ಚಿಸುತ್ತಿದೆ. ಚಂದಿರನಂತಹ ಹಣೆ ನಿನ್ನನ್ನು ಸೌಂದರ್ಯದ ಹೊನಲನ್ನಾಗಿಸಿದೆ.
ಮಂದಗಮನೆಯಾದ ಕರಿಣಿಯಂತೆ ತುಂಬಿತೊನೆಯುವ ದೇಹಸೌಂದರ್ಯವು ನಿನ್ನ ವಿದ್ಯುಲ್ಲತೆಯಂತಹ ಚಂಚಲ ನೋಟದಿಂದ ಎನಗೆ ಕಣ್ಣು ಮನಸ್ಸುಗಳಿಗೆ ಹಬ್ಬ! ತುಂಬುಮೊಗದಾವರೆಯಲ್ಲಿ ಮಿನುಗುವ ಚೆಲುನಗುವು, ಸುಖಸಗ್ಗವನ್ನು ಧರೆಗಿಳಿಸಿದೆ.
ಭಾವಾನುವಾದ:
©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ದನಿ ನೀಡಿದವರು,: ಶ್ರೀಮತಿ ಮಂಗಳಾ ನಾಡಿಗ್
Saturday, 2 December 2023
ಅವಳು-ನಾನು - ಕೇತಕೀವನ - ಡಿವಿಜಿ (ಒಂದು ಉರ್ದು ಕವಿತೆಯ ಛಾಯೆ)
ಕದವ ತಟ್ಟುವನದಾರ್?- ಎಂದು ಕೇಳಿದಳು;
ನಿನ್ನ ಅರ್ಚಕನ್ ಎಂದು ಪೇಳ್ದೆನ್.
ಈ ಮನೆಯನೇನೆಂಬೆ?-ಎಂದು ಕೇಳಿದಳು;
ನಿನ್ನ ದೇಗುಲ-ಎಂದು ಪೇಳ್ದೆನ್.
ಅದಕೇನು ರುಜುವಾತು?-ಎಂದು ಕೇಳಿದಳು;
ಎನ್ನಡಿಯ ಗುರುತೆಂದು ಪೇಳ್ದೆನ್.
ಉದ್ಯೋಗವೇನು ನಿನಗೆಂದು ಕೇಳಿದಳು;
ವಿಗ್ರಹಾರ್ಚನೆ ಎಂದು ಪೇಳ್ದೆನ್.
ಆರ ವಿಗ್ರಹವೊ ಅದು?-ಎಂದು ಕೇಳಿದಳು;
ಎನ್ನ ದೇವರದೆಂದು ಪೇಳ್ದೆನ್.
ಆರು ನಿನ್ನ ದೇವರೆಂದು ಕೇಳಿದಳು;
ಒಲವ ಗೆಲಿದಿಹರ್ ಎಂದು ಪೇಳ್ದೆನ್.
ನೀನೊಲಿವ ಸೊಬಗದೇನೆಂದು ಕೇಳಿದಳು :
ನುಡಿಯ ಮೀರಿದುದೆಂದು ಪೇಳ್ದೆನ್,
ವರವನೇಂ ಬೇಡಿರುವೆ?-ಎಂದು ಕೇಳಿದಳು;
ಅರ್ಚಕತೆಯನೆ-ಎಂದು ಪೇಳ್ದೆನ್.
ನೈವೇದ್ಯಕೇನಿಹುದು?-ಎಂದು ಕೇಳಿದಳು;
ಎನ್ನ ಶಿರವಿಹುದೆಂದು ಪೇಳ್ದೆನ್.
ಕಡಿಯಲದ ಕೊಡಲಿಯೆಲ್ಲೆಂದು ಕೇಳಿದಳು;
ಅದು ನಿನ್ನ ಹುಬ್ಬೆಂದು ಪೇಳ್ದೆನ್.
ನಿನ್ನ ಬಿಗಿದಿಡೆ ಹಗ್ಗ?-ಎಂದು ಕೇಳಿದಳು;
ನಿನ್ನ ಮುಂಗುರುಳೆಂದು ಪೇಳ್ದೆನ್.
ನಿನಗಿಂತು ದುಗುಡವೇಕೆಂದು ಕೇಳಿದಳು;
ನಿನ್ನ ಮೌನದಿನ್-ಎಂದು ಪೇಳ್ದೆನ್.
ಈ ಬೇನೆಗೆಂದು ಮೊದಲೆಂದು ಕೇಳಿದಳು;
ನೀಂ ಕೈಯ ಬಿಟ್ಟದಿನವೆಂದೆನ್.
ಅದಕೇನು ಪರಿಹಾರ?-ಎಂದು ಕೇಳಿದಳು;
ನಿನ್ನ ಮುಖದುಷೆ-ಎಂದು ಪೇಳ್ದೆನ್.
ನಿನ್ನ ಬದುಕೇತರಿಂದೆಂದು ಕೇಳಿದಳು;
ನಿನ್ನ ಸೊಬಗಿಂದೆಂದು ಪೇಳ್ದೆನ್.
ನಿನ್ನ ಸಾವೇತರಿಂದೆಂದು ಕೇಳಿದಳು;
ನಿನ್ನ ತೊರೆತದಿನೆಂದು ಪೇಳ್ದೆನ್.
ಮರಳಿ ನೀನೆಂದುದಿಪೆ?-ಎಂದು ಕೇಳಿದಳು;
ನೀನೆ ಕರೆವಂದೆಂದು ಪೇಳ್ದೆನ್.
ನೀನಾರ ನಿಂದಿಸುವೆ?-ಎಂದು ಕೇಳಿದಳು;
ಎನ್ನದೃಷ್ಟವನೆಂದು ಪೇಳ್ದೆನ್.
ನಿನ್ನ ದೃಷ್ಟವದೆಲ್ಲಿ ಎಂದು?-ಕೇಳಿದಳು;
ನಿನ್ನ ಮನದೊಳಗೆಂದು ಪೇಳ್ದೆನ್.
****************************
ಹೊಂಗುರುಳಿನ ಕಡೆಗಣ್ಣ ನೋಟದ ಆ ಮನದನ್ನೆಯ ಆರಾಧಕನಾದ ಪ್ರೇಮಿಯು ಕಾರಣಾಂತರಗಳಿಂದ ತನ್ನಿಂದ ದೂರವಾದ ಪ್ರೇಯಸಿಯ ಸಮಾಗಮವನ್ನು ಕನವರಿಸುತ್ತಾ ನಡೆಸುವ ಸಂಭಾಷಣೆ ಕುತೂಹಲಕರವಾಗಿದೆ.
ತನ್ನ ಕನಸಿನ ಬೊಗಸೆಕಂಗಳ ಇನಿಯಳ ಮನದ ಮನೆಬಾಗಿಲಲಿ ನಿಂತು ಕದವ ತಟ್ಟುತ್ತಿದ್ದಾನೆ. ಆಗ, ಮನೆಯೊಳಗಿಂದಲೇ, "ಮನೆಯ ಕದತಟ್ಟುವವನು ಯಾರದು?" ಎಂದು ಪ್ರಶ್ನಿಸಿದಳು.
" ನಿನ್ನನ್ನು ಆರಾಧಿಸುವ ಪೂಜಾರಿಯಿವನು" ಎಂದು ಉತ್ತರಿಸಿದನು.
" ಹೌದೇ! ಈ ಮನೆಯನ್ನು ಏನೆಂದು ಕರೆಯುವೆ? " ಎಂದು ಆಕೆಯ ಪ್ರಶ್ನೆ.
" ನಿನ್ನ ದೇವಮಂದಿರ" ಎಂದು ಉತ್ತರಿಸಿದನು
"ಹಾಗಾ! ಹಾಗಾದರೆ, ಇದಕ್ಕೆ ಪುರಾವೆಯನ್ನು ತೋರಿಸುವೆಯಾ!?" ಎಂಬ ಕುತೂಹಲದ ಪ್ರಶ್ನೆಗೆ " ಎನ್ನಡಿಯ ಗುರುತುಗಳು ಎಂದು ಉತ್ತರಿಸಿದೆ.
" ನಿನ್ನ ಉದ್ಯೋಗ!? "
" ಆರಾಧ್ಯದೇವತೆಯ ಮೂರ್ತಿಯನ್ನು ಪೂಜಿಸುವುದಲ್ತೆ!". "ಹಾಗೇನು? ಯಾರ ವಿಗ್ರಹವೆಂದು ಹೇಳಬಾರದೆ!?" ಎಂಬ ಕೆಣಕುವ ಪ್ರಶ್ನೆಗೆ,
"ನನ್ನ ಆರಾಧ್ಯದೇವತೆಯ ಮೂರುತಿ" ಎಂದು ಉತ್ತರಿಸಿದೆನು.
" ಅದಾರು ನಿನ್ನ ಆ ಆರಾಧ್ಯದೇವತೆ!?" ಎಂಬ ಸವಾಲಿಗೆ "ನನ್ನ ಒಲವನ್ನು ಗೆದ್ದಿಹಳಾಕೆ" ಎಂದರೆ,
"ಆ ದೇವತೆಯಲ್ಲಿ ನಿನ್ನನ್ನು ಒಲಿಸಿಕೊಂಡ ಸೊಬಗು ಯಾವುದು"? ಎಂದು ಕೇಳಿದಳು.
" ತುಟಿಗೆಮೀರಿದ ಸೊಬಗು, ಬಣ್ಣಿಸಲಾಗದು." ಎಂದೆನು. "ಒಲಿದ ಆ ದೇವಿಯಲ್ಲಿ ಏನೆಂದು ಬೇಡಿದೆ?" ಎಂದು ಕೇಳಿದರೆ, "ಆರಾಧನೆಯನ್ನೇ" ಎಂಬ ಉತ್ತರಕ್ಕೆ
ನೀನು ಸಲ್ಲಿಸುವ ಪೂಜೆಗೆ ನೈವೇದ್ಯವಾವುದು!?" ಎಂಬ ಸವಾಲಿನ ಪ್ರಶ್ನೆ!
"ನನ್ನ ಶಿರವೇ ನೈವೇದ್ಯ!" ಎಂದು ಉತ್ತರಿಸಿದೆನು.
"ಬಲಿನೀಡಲು ಕತ್ತಿಯೆಲ್ಲಿಹುದು?"
"ನಿನ್ನ ಕುಡಿನೋಟವೇ ಬಲಿಗತ್ತಿಯೆಂಬೆನಲ್ತೆ!"
"ಬಲಿಯಾಗಿ ನಿಂತ ನಿನ್ನನ್ನು ಯಾವ ಹಗ್ಗದಿಂದ ಬಿಗಿದಿಹರು!?"
"ನಿನ್ನ ಮುಂಗುರುಳೇ ನನ್ನನ್ನು ಬಿಗಿದಿರುವ ಪಾಶ!"
"ನಿನ್ನ ಈ ದುಗುಡಕ್ಕೇನದು ಕಾರಣವೆಂದು ಕೇಳಬಹುದೇ!?" ಎಂಬ ಕೆಣಕುವ ಪ್ರಶ್ನೆಗೆ, "ನಿನ್ನ ಮೌನವೆಂದು ತಿಳಿದೂ ತಿಳಿದೂ ಪರೀಕ್ಷೆಗಾಗಿ ಪ್ರಶ್ನೆಯೇ!?" ಎಂದು ಪಾಟೀಸವಾಲಿನಂತೆ ಉತ್ತರಿಸಿದೆ.
"ಈ ವೇದನೆಯು ಈ ಚಡಪಡಿಕೆಯು ಎಂದಿನಿಂದಾರಂಭವಾಯಿತು!?" ಎಂಬ ವಿಚಾರಣೆಗೆ, "ನೀನು ನನ್ನನ್ನು ಉಪೇಕ್ಷಿಸಿ ಮುಖತಿರುವಿದ ಕ್ಷಣದಿಂದ" ಎಂದು ಉತ್ತರಿಸಿದೆನು.
"ಅಂತಿರ್ಪೊಡೆ, ನಿನ್ನ ಬದುಕು ಯಾವುದರಿಂದ !?"
"ನಿನ್ನೊಡನೆ ಬೆರೆಯುವುದರಿಂದ"
"ನಿನ್ನ ಸಾವು ಯಾವುದರಿಂದ!?"
"ನಿನ್ನನ್ನು ನಾನು ತೊರೆದರೆ ಆ ಕ್ಷಣವೇ ಎನಗೆ ಮೃತ್ಯು!"
" ಮತ್ತೆ ನೀನೆಂದು ನನ್ನ ಹುಣ್ಣಿಮೆಯ ಚಂದಿರನಾಗಿ ಮೂಡಿಬರುವೆ!?" ಎಂಬ ಅವಳ ಇಂಗಿತದ ವಿಚಾರಣೆಗೆ "ನೀನು ಮತ್ತೆ ಕರೆಯುವ ಕ್ಷಣವನ್ನು ಎದುರು ನೋಡುತ್ತಿರುವೆ" ಎಂದೆನು.
"ಘಟಿಸಿರುವ ಬಿರುಕಿಗೆ ಆರು ಕಾರಣವೆಂಬೆ!? ಯಾರನ್ನು ನಿಂದಿಸುವೆ?" ಎಂಬ ಜಾಣ್ಮೆಯ ಪ್ರಶ್ನೆಗೆ " "ಎನ್ನ ಅದೃಷ್ಟವನ್ನು" ಎಂದೆನು.
"ನಿನಗೆ ಕಾಣದ ಆ ಕಾರಣವು ಎಲ್ಲಿಹುದು!?" ಎಂಬ ಚತುರ ಪ್ರಶ್ನೆಗೆ ಸೋಲದೆ, "ನಿನ್ನ ಮನದೊಳಗೆ ಎಂಬುದು ನಿನಗೇ ತಿಳಿದಿರುವುದಲ್ಲವೇ!" ಎಂದು ಉತ್ತರಿಸಿದೆನು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
Friday, 1 December 2023
ಬೆಂಕಿಯಾಟ - ಕೇತಕೀವನ - ಡಿವಿಜಿ
ಎಲೆ ತರಳೆ, ಬೇಡುವೆನು :
ನಿಲಿಸು ನಿನ್ನಾಟವನು;
ನಿನ್ನೊಲವು ಬೆಂಕಿಕಾಟ.
ಎದೆಗೆ ಮುಳ್ಳಿರಿಯುವುದೆ
ಬದುಕನುರಿಗೊಡ್ಡುವುದೆ
ನಿನ್ನ ಚೆಲುವಾಡುವಾಟ.
ಎಲೆ ಕುಟಿಲೆ, ದೂರವಿರು;
ಸನಿಹದಲಿ ಬಾರದಿರು;
ಸಾಕು ನಿನ್ನೊನಪು ನೋಟ.
ಹಿಂದೆ ನೀ ಹೊತ್ತಿಸಿದೆ
ಬೆಂಕಿಯನದಾರದಿದೆ,
ಈಗದನು ಕೆಣಕಬೇಡ.
ಒಲವು ಮೇವನು ಸೂಸಿ
ಚೆಲುವು ಬಲೆಯನು ಬೀಸಿ
ಬೇಡಿತಿವೊಲಾದೆ ನೀನು.
ಸೆರೆತೊಡಕ ಶಂಕಿಸದ
ಗುರಿಗತಿಯ ಚಿಂತಿಸದ
ಮೂಢ ಖಗವಾದೆ ನಾನು.
ಮಲಯಮಾರುತವೆಂದು
ತಿಳಿದಿದ್ದೆ ನಾನಂದು
ನಿನ್ನ ಮೈಸೋಕಿದೆಲರ;
ಬಳಿಸಾರಲೀಗಳದು
ಪ್ರಳಯದ ಜ್ವಾಲೆವೊಲು
ಸುಡುವುದೆನ್ನಸುವಿನರಲ.
ಮುಳಿಸು ಬೇಡೀ ನುಡಿಗೆ
ಹಳಿವು ಸಲ್ಲದು ನಿನಗೆ
ತಪ್ಪೆನದು, -ವೇಧಸನದು.
ಬೆಡಗುರೂಪಿನ ಮಾತು
ದಿಟವೆಂದು ಮನಸೋತು
ಬೆಪ್ಪಾದೆ, ಮೋಹ ಕವಿದು.
ಬಲು ವರುಷ ಕಾದಿದ್ದೆ,
ಹಲತೆರದಿ ನೊಂದಿದ್ದೆ
ತರಳೆ, ನಿನಗಾಗಿ ನಾನು;
ನೂರು ಹುಸಿನಗು ನಗುತ
ಹೇರಾಸೆ ಹುಟ್ಟಿಸುತ
ಮರುಳನಂ ಗೈದೆ ನೀನು.
ಇನ್ನು ಸಾಕೀ ನಟನೆ-
ನಿನ್ನ ವಿಷಮಧು ಘಟನೆ-
ನೂತನದ ಪೂತನಿವೊಲು.
ದಿಟದೊಲವ ನೀನರಿಯೆ,
ಸಟೆಗೆ ನೆಲೆ ನಿನ್ನೆದೆಯೆ,
ಪ್ರೀತಿ ನಿನಗುಡುಪಿನವೊಲು.
ಪ್ರೀತಿಯಾತುಮದ ರಸ,
ನೀತಿಯೆನಗದರ ವಶ;
ಮುರಿದೆ ನೀನದನು ಸೊಕ್ಕಿ.
ಎನ್ನ ಕುದಿವೆದೆಯ ಬಿಸಿ
ನಿನ್ನ ತಾಕದೆ ತಪಿಸಿ
ಕರುಮವೆಂದಾನುಮ್ ಉಕ್ಕಿ?
ಕನಿಕರವ ತೋರುವೊಡೆ
ಎನಗೊಳಿತ ಮಾಡುವೊಡೆ
ಕೆರಳಿಸದಿರೆನ್ನ ನೆನಪನ್
ಕಳೆದ ನಮ್ಮಯ ಕತೆಯ
ಅಳಿಸಿ ತೊಳೆ ಎನ್ನೆದೆಯ,
ಮರೆವನನುಗೊಳಿಸು ಕೃಪೆಯಿಂ.
ಹೊಳೆಗಣ್ಣ ಮಿಟುಕದಿರು,
ಚೆಲು ಬಲೆಯ ಬೀಸದಿರು,
ಸೆರೆಕೊಳದಿರೆನ್ನ ಮರಳಿ.
ಉರಿಮುಖವ ತೋರುತಿರು,
ಕರಿ ವಿಷವ ಕಾರುತಿರು,
ವಿರಸೆ ನೀನಾಗು ಜರೆಯಿಂ.
ಎಲೆ ತರಳೆ, ಬೇಡುವೆನು;
ನಿಲಿಸು ನಿನ್ನಾಟವನು.
ನಿನ್ನೊಲವು ಬೆಂಕಿಕಾಟ.
ಎಲೆ ಕುಟಿಲೆ, ದೂರವಿರು,
ಸನಿಹದಲಿ ಬಾರದಿರು,
ಸಾಕು ನಿನ್ನೊನಪು ನೋಟ.
********************
********************
ಪ್ರೇಯಸಿಯಿಂದ ಪ್ರೀತಿವಂಚಿತನಾದ ಭಗ್ನಪ್ರೇಮಿಯು "ನಿಲಿಸು ನಿನ್ನ ಬೆಂಕಿಕಾಟವನು" ಎಂದು ತಹತಹಿಸುತ್ತಾನೆ.
ಪ್ರೇಮವಂಚಿತನಾದರೂ ಪ್ರೇಮಿಯ ಎದೆಯೊಳಗೆ ತನ್ನ ಕನಸುಗಳನ್ನು ಕದ್ದವಳ ಬಗೆಗಿನ ಮೋಹದಾಟಗಳು ಕಾಡುತ್ತಲೇ ಇರುತ್ತವೆ. ಇದರಿಂದ ದುಃಖ, ವೇದನೆ, ಹತಾಶೆಗಳಿಂದ ಪ್ರೇಯಸಿಯ ಕಾಡುವ ಚಿತ್ರಗಳು ಚಿತ್ತದಲಿ ಮೂಡುವಾಗ ಕಾಡಬೇಡೆನ್ನ ತೊಲಗಾಚೆ ಎಂದು ಗೋಗರೆಯುತ್ತಾನೆ.
ಸಾಕು ಮಾಡು ನಿನ್ನ ಒಲವಿನ ನಾಟಕವನ್ನು. ದೂರಸರಿ. ನಿನ್ನ ಒಲವಿನ ನಾಟಕವನ್ನರಿಯದೆ ಬೆಂಕಿಯೊಡನೆ ಸರಸವಾಡಿದೆನು. ಬೆಂಕಿಯ ನಾಲಿಗೆಗೆ ಸಿಲುಕಿದೆನು.
ನಿನ್ನ ಚೆಲುವಿಗೆ ಮನಸೋತ ನನ್ನೆದೆಗೆ ಮುಳ್ಳಿನಿಂದ ಇರಿದು ಪ್ರೀತಿಯನ್ನು ಬಲಿಕೊಟ್ಟೆ. ನನ್ನ ಬದುಕಿನರಮನೆಗೆ ಬೆಂಕಿಯಿಟ್ಟೆ. ನಿನ್ನ ಚೆಲುವಿನ ಮಾಟದ ಕಾಟವು ಸಾಕು ಸಾಕಿನ್ನು ಕಾಡದಿರು.
ಸ್ವಾರ್ಥ ಕುಟಿಲ ಸ್ವಭಾವದ ನೀನು ಮತ್ತೆ ನನ್ನ ಬಳಿ ಬಾರದಿರು.
ನಿನ್ನ ವೈಯಾರದ ಕುಡಿನೋಟದ ಬಲೆಯನ್ನು ಬೀಸಬೇಡ!
ನಿನ್ನ ವೈಯಾರದ ನೋಟದ ಬೆಂಕಿಯಿಂದ ಬೆಂದು ಹೋಗಿದ್ದೇನೆ. ಅದರ ಕಾವಿನ್ನೂ ಆರಿಲ್ಲ. ಆದರೆ ನಿನ್ನ ನೋಟಬೇಟದ ಬೆಂಕಿಯ ಕಾಟವಿನ್ನೂ ನಿಂತಿಲ್ಲ. ಬೂದಿಮುಚ್ಚಿದ ಕೆಂಡವನ್ನು ಕೆಣಕಬೇಡ.
ಒಲವೆಂಬ ಚಿಗುರುಮೇವನ್ನು ಮುಂದೊಡ್ಡಿದೆ. ಚೆಲುವಿನ ಬಲೆಯನ್ನು ಬೀಸಿದ್ದನ್ನು ನಾನು ತಿಳಿಯಲೇ ಇಲ್ಲ. ನೀನು ರಾಮನಿಗಾಗಿ ಹಂಬಲಿಸಿದ ಶಬರಿಯಲ್ಲ. ಮಾಯಾ ಜಿಂಕೆಯಾಗಿ ಸೀತೆಯ ಬಳಿ ಸುಳಿದ ಮಾರೀಚನೆಂಬ ಬೇಡತಿ ನೀನು. ನೀನು ಬೀಸಿದ ಬಲೆಯೊಳಗೆ ಸಿಲುಕಿ ವಿಲವಿಲನೆ ಒದ್ದಾಡುವ ಅವಿವೇಕಿ ಹಕ್ಕಿಯಾದೆನು.
ನಿನ್ನ ಕೋಮಲವಾದ ಶರೀರದ ಸಂಸ್ಪರ್ಶದಿಂದ ಮಲಯಮಾರುತದ ಮಂದಾನಿಲನದ ಸುಖಸ್ಪರ್ಶವೆಂದು ಭ್ರಮಿಸಿದ್ದೆ. ಇಂದು ನೀನೆನ್ನ ಬಳಿ ಸುಳಿದರೆ ಪ್ರಳಯಕಾಲದ ಜ್ವಾಲೆಯೇ ನನ್ನ ಜೀವಕುಸುಮವನ್ನು ಬಲಿತೆಗೆದುಕೊಳ್ಳಲು ಹಾತೊರೆಯುತ್ತದೆ ಎಂಬುದನ್ನು ಕಾಣುತ್ತಿದ್ದೇನೆ.
ಬೆಂದು ನೊಂದ ಮನದಿಂದ ಹೊರಹೊಮ್ಮುತ್ತಿರುವ ಈ ನನ್ನ ವೇದನೆಯ ಮಾತುಗಳಿಗೆ ಕೋಪಿಸಬೇಕಿಲ್ಲ. ಇಷ್ಟಕ್ಕೂ ನಿನ್ನನ್ನು ನಿಂದಿಸುವುದೂ ತರವಲ್ಲ. ತಪ್ಪು ನಿನದಲ್ಲ . ತಪ್ಪು ನನ್ನದು. ನನ್ನನ್ನು ನಿನ್ನ ಬಳಿ ನಿಲ್ಲಿಸಿದ ಬ್ರಹ್ಮನದು ತಪ್ಪು.
ನಿನ್ನ ಕಣ್ಣುಕೋರೈಸುವ ಚೆಲುವಿಗೆ ಮರುಳಾಗಿ ನಿನ್ನ ಮಾತುಗಳನ್ನು ನಿಜವೆಂದು ಮನಸೋತು ಬೆಪ್ಪನಾದೆ. ಮೋಹ ಕವಿದ ಮನಸ್ಸು ಕತ್ತಲಿಗೆ ತಳ್ಳಿತು.
ನಿನ್ನ ಒಲವನ್ನು ಸಂಪಾದಿಸಿ ನನ್ನವಳನ್ನಾಗಿಸಿಕೊಳ್ಳುವ ಕನಸಿನಲ್ಲಿ ಎಷ್ಟೋ ವರ್ಷಗಳನ್ನು ಸವೆಯಿಸಿದೆ. ಹಲವು ಎಡರು ತೊಡರುಗಳ ನ್ನು ನಿನ್ನಮೇಲಣ ಮೋಹಕ್ಕಾಗಿ ವ್ಯರ್ಥವಾಗಿ ಎದುರಿಸಿದೆ.
ಪ್ರೀತಿ ಪ್ರೇಮದ ಹೆಸರಲ್ಲಿ ನೂರಾರು ಸಲ ಹುಸಿನಗೆಯಿಂದ ನನ್ನನ್ನು ಮರುಳುಗೊಳಿಸಿದೆ. ಬೆಟ್ಟದಂತಹ ಕನಸುಗಳನ್ನು ಮೂಡಿಸಿದೆ. ನಾನು ಮೂರ್ಖನಾದೆ ಎಂಬುದನ್ನು ಅರಿತಾಗ ತುಂಬ ತಡವಾಗಿತ್ತು .
ಇನ್ನೂ ಕಾಡಬೇಡ ನಿನ್ನ ನಾಟಕದ ನಟನಾಗಲಾರೆ. ನಿನ್ನ ಒಲವಿನ ನಾಟಕವು ಬಾಲಕೃಷ್ಣನಿಗೆ ವಿಷವುಣ್ಣುಸಲು ಬಂದ ಪೂತನಿಯನ್ನು ನೆನಪಿಸುತ್ತಿದೆ. ಈ ನಿನ್ನ ಮಾಟವಾದ ಪಯೋಧರಗಳಲ್ಲಿ ಅಮೃತವಲ್ಲ, ವಿಷವೇ ತುಂಬಿದೆ ಎಂಬುದನ್ನು ಬಲ್ಲೆನು. ನಿನ್ನೆದೆಯಲ್ಲಿ ನಿಜವಾದ ಪ್ರೀತಿಯ ಕ್ಷೀರವಿಲ್ಲ. ಪ್ರೇಮ ಪ್ರೀತಿ ಒಲವುಗಳೆಂಬುದು ನಾಟಕದ ಉಡುವ - ಬಿಚ್ಚಿಡುವ ಉಡುಪುತೊಡುಪುಗಳಲ್ಲ. ಕೃತಕ ಆಭರಣಗಳಲ್ಲ.
ಪ್ರೀತಿಯೆಂಬುದು ಜೀವಜೀವಗಳನ್ನು ಬೆಸೆಯುವ ಆತ್ಮರಸ. ನ್ಯಾಯ ನೀತಿಯ ಧರ್ಮದ ದಾರಿಯಲ್ಲಿ ಪ್ರೀತಿಯು ಗೆಲುಮೆಯನ್ನು ಹೊಂದಬೇಕು.
ಒಲವಿನ ಸೇತುವೆಯನ್ನು ನೀನು ಸೊಕ್ಕಿನಿಂದ ಮುರಿದು ನಡುನೀರಲ್ಲಿ ತಳ್ಳಿದೆ.
ನನ್ನೆದೆಯನ್ನು ಕುದಿಸಿದ ಕಾವು ನಿನ್ನನ್ನು ಬೆಂಬಿಡದೆ ಕಾಡುವುದು. ಮರೆಯದಿರು! ಮಾಡಿದ ಕರ್ಮವನ್ನು ಅನುಭವಿಸಲೇ ಬೇಕು.
ನಿಜಕ್ಕೂ ನನ್ನ ಬಗೆಗೆ ಕನಿಕರವಿದ್ದರೆ, ಮತ್ತೆಮತ್ತೆ ಮನದೊಳಗೆ ಇಳಿಯ ಬೇಡ! ದಮ್ಮಯ್ಯ ನನ್ನನ್ನು ಮತ್ತೆ ಕಾಡಬೇಡ! ಕಳೆದ ಕತೆಗಳನ್ನು ಮರೆಸಿಬಿಡು. ನನ್ನ ಮನಸನ್ನು ಕಾಲಿಮಾಡಿ ದೂರಸರಿ. ನನ್ನ ಮನಸ್ಸನು ತೊಳೆದುಬಿಡು. "ದಯಮಾಡಿ ನನಗೆ ಮರೆವನ್ನು ಕರುಣಿಸು" ಎಂದು ಕಾಡುವ ಇನಿಯೆಯನ್ನು ಮೊರೆಯಿಡುತ್ತಾನೆ.
ತುಂಟಮಿನುಗುನೋಟದಿಂದ ಕಾಡಬೇಡ. ಮಾಟವಾದ ಚೆಲುಸೌಂದರ್ಯದಿಂದ ಬಲೆಬೇಸಬೇಡ.
ನನ್ನ ಬಳಿ ಬರಲೇಬೇಕಿದ್ದರೆ ಉರಿಮುಖದಿಂದ ಬಾ! ಉಗ್ರವಾದ ಕರಿವಿಷವನ್ನು ಕಾರುತ್ತಾ ಬಾ! ಬರುವದಾಗಿದ್ದರೆ ಮುಪ್ಪಿನಿಂದ ತೊಗಲುಬಿದ್ದ ಮುದಿಯಾಗಿ ಬಾ!
ಒಲವಿನ ಹೆಸರಲ್ಲಿ ನಾಟಕವಾಡುವ ತರಲೆಯೇ! ದಮ್ಮಯ್ಯ ಬೇಡುವೆನು ನಿನ್ನ ಈ ಚೆಲ್ಲಾಟವನ್ನು ನಿಲ್ಲಿಸು. ನಿನ್ನ ಬೆಂಕಿಕಾಟವನ್ನು ಸಹಿಸಲಾರದಾದೆನು. ಕಟಿಲೆಯೇ ಕಾಡದಿರು. ನಿನ್ನ ವೈಯಾರದ ಕುಟಿಲನೋಟದಿಂದ ನನ್ನನ್ನು ಇನ್ನೂ ಇನ್ನೂ ಕಾಡಬೇಡ. ಸಾಕು ನಿನ್ನ ಒಲವಿನ ನಾಟಕ. ಈ ನಾಟಕದ ಅಂಕಕ್ಕೆ ತೆರೆಯೆಳೆಯೋಣ. ನಾನು ನಟನಾಗಲಾರೆ.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
Subscribe to:
Posts (Atom)