ಡಿ.ವಿ.ಜಿ.ಯವರ ‘ಸಾಹಿತ್ಯಶಕ್ತಿ’ ಸೂತ್ರಸದೃಶವಾದ ರೀತಿಯಲ್ಲಿ ಕವಿ ಕಾವ್ಯ ವಿಚಾರವನ್ನು ನಿರೂಪಿಸುವ ಪುಸ್ತಕ. ಈ ಪುಸ್ತಕವನ್ನು ಡಿವಿಜಿ ಯವರು "ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ" ಅವರಿಗೆ ಸಮರ್ಪಣೆ ಮಾಡಿದ್ದಾರೆ. ಡಿವಿಜಿ ಅವರ ಉಪನ್ಯಾಸಗಳಲ್ಲಿ ಕೆಲವನ್ನು ಈ ಪುಸ್ತಕರೂಪದಲ್ಲಿ ಶ್ರೀ ಚಿದಂಬರಂ ಅವರು ಪ್ರಕಟಿಸಿದ್ದಾರೆ. ಪುಸ್ತಕದಲ್ಲಿ ಪ್ರಕಟಿಸಿರುವ ಉಪನ್ಯಾಸಗಳ ಪಟ್ಟಿ ಇಂತಿದೆ:
೧. ರಾಷ್ಟ್ರಕನಿಗೆ
ಸಾಹಿತ್ಯ ಬೇಕೆ?
೨. ಆಧುನಿಕ
ವಿಚಾರೋಪಾನ್ಯಾಸಗಳು
೩. ನೂತನ ಸಾಹಿತ್ಯ ರಚನೆ
೪. ಭಾಷೆಯ ನವೀಕರಣ
೫. ನವ್ಯತೆಯೇ ಜೀವನ
೬. ವಿಜ್ಞಾನ ಲೋಕಪರಿಜ್ಞಾನ
೭. ಉಪಾಧ್ಯಾಯ ಪಂಡಿತರು
೮. ಕಾವ್ಯದಲ್ಲಿ ಜೀವನ ತತ್ತ್ವದರ್ಶನ
೯. ಕನ್ನಡ ಜನತೆಗೋಸ್ಕರ ಕನ್ನಡ
೧೦. ಉಪಾಧ್ಯಾಯರು ಮತ್ತು ಸಾಹಿತ್ಯಪಾಠ
೧೧. ಕನ್ನಡಿಗರಿಗೆ ಸಂಸ್ಕೃತ
೧೨. ಕಾವ್ಯೋಪಾಸನೆ
*******
"ಮಹಾಕಾವ್ಯಕ್ರಿಯೆ
ಅಷ್ಟಕ್ಕೆ ನಿಲ್ಲುವುದಿಲ್ಲ. ಬರಿಯ ಕಣ್ಣೀರು, ಅಥವಾ ಬರಿಯ ಸಂತೋಷ, ಬರಿಯ ರೋಷ, ಅಥವಾ ಬರಿಯ
ಹಂಬಲ-ಅಷ್ಟರಲ್ಲೇ ಅದರ ಉಪಕಾರ ಮುಗಿಯುವುದಿಲ್ಲ. ಕವಿನಿರ್ಮಿತಲೋಕದಲ್ಲಿ ಕಂಡದ್ದನ್ನು ಮನಸ್ಸು
ಮತ್ತೆ ಮತ್ತೆ ನೆನೆಯುತ್ತದೆ; ಅದನ್ನು ಕುರಿತು ಚಿಂತಿಸುತ್ತದೆ; "ಅದು ಸರಿಯೆ? ಇದು ಸರಿಯೆ?"
"ಅಲ್ಲಿ ಹಾಗೇಕೆ, ಇಲ್ಲಿ ಹೀಗೇಕೆ?"- ಎಂದು ಪ್ರಶ್ನೆ ಮಾಡುತ್ತದೆ. ಈ ಆಂದೋಳನ ವಿಮರ್ಶನಗಳಿಂದ
ಫಲಿಸುತ್ತದೆ ಒಂದು ಪ್ರಚೋದಕ ಧ್ವನಿ. ಆ ಮಹಾಧ್ವನಿಯ ಶುಶ್ರೂಷೆಯಿಂದ ಲಭಿಸುತ್ತದೆ ಒಂದು
ಶುಭಸೌಂದರ್ಯದರ್ಶನ- ಒಂದು ಒಳ್ಳೆಯದೆಂಬುದರ ತಿಳಿವಳಿಕೆ- ಒಂದು ಧರ್ಮಾನ್ವೇಷಣಪ್ರವೃತ್ತಿ. ಅದೇ
ಕಾವ್ಯಸ್ಪೂರ್ತಿ. ಅದರಿಂದ ಜೀವಕ್ಕೆ ಬಂಧ ವಿಮೋಚನೆ, ಅದೇ ಅತ್ಮಕ್ಕೆ ಪುನರ್ಜನ್ಮ." - (ಪುಟ
೨೫)
"ಸಾಹಿತ್ಯಕ್ಕಿರುವ
ಮುಖ್ಯ ವಿಷಯಗಳು ಮುರು- ಶೃಂಗಾರ, ರಾಜಕೀಯ, ಜೀವಧರ್ಮ. ಇವುಗಳಲ್ಲಿ ರಾಜ್ಯವಿಚಾರವನ್ನು ಬಿಟ್ಟ
ಸಾಹಿತ್ಯ ಬರಿಯ ಗೊಣಗಾಟ ಪೇಚಾಟಗಳಾಗಿ ಬಡವಾದೀತು. ರಾಜಕೀಯವೇ ಪೌರುಷಪ್ರಕಾಶದ ಭೂಮಿ. ಅದೇ ವೀರರಂಗ,
ರಾಜ್ಯವೆಂಬುದು ಜನತಾ ಜೀವನಭೂಮಿ ತಾನೆ? ಸಾಹಿತ್ಯವೂ ಜನಜೀವನವಲ್ಲದೆ ಮತ್ತೇನು?
ಪ್ರಪಂಚದ
ಮಹಾಸಾಹಿತ್ಯದಲ್ಲಿ ಬಹುಭಾಗದ ಮುಖ್ಯ ವಿಷಯ ರಾಜಕೀಯವೆಂಬುದನ್ನು ನಾವು ಮರೆಯಬಾರದು. ವೇದವು
ರಾಜರಾಜರ್ಷಿಗಳನ್ನು ಬಿಟ್ಟಿಲ್ಲ. ಪೌಷ್ಯ, ಹರಿಶ್ಚಂದ್ರ, ದಿವೋದಾಸ, ಜನಕ, ವಿಶ್ವಾಮಿತ್ರ-ಇಂಥಾ
ಕ್ಷತ್ರಿಯವೀರರ ಪ್ರಶಂಸೆಗೂ, ರಾಜಸೂಯ, ವಿಶ್ವಜಿತ್ತು ಮೊದಲಾದ ಜನತಾ ಸಂಗ್ರಹಣಸಾಧಕಗಳಾದ
ಯಜ್ಞಾಯಾಗಗಳ ಮಹಿಮಾಖ್ಯಾನಕ್ಕೂ ವೇದವು ಅವಕಾಶ ಕೊಟ್ಟಿದೆ, ರಾಮಾಯಣ ಮಹಾಭಾರತಗಳ ಮುಖ್ಯವಸ್ತು
ರಾಜಧರ್ಮ; ರಾಜರುಗಳ ಕಥೆ ಅವೆರಡರಲ್ಲಿ ತುಂಬಿದೆ."(ಪುಟ ೨೮)
"ಪ್ರತಿಯೊಬ್ಬ ಮನುಷ್ಯನಿಗೂ ಒಂದು ವ್ಯಕ್ತಿ ವೈಶಿಷ್ಟ್ಯವಿರುತ್ತದೆ. ಅದು ರಹಸ್ಯ. ಕವಿ ಅಸಾಧಾರಣ ಮನುಷ್ಯ; ಆದ್ದರಿಂದ ಅವನದು ಅಸಾಧಾರಣ ವ್ಯಕ್ತಿತ್ವ. ಅದು ಅಂತರ್ಮುಖ ವ್ಯಕ್ತಿತ್ವ. ಆ ವ್ಯಕ್ತಿವೈಶಿಷ್ಟ್ಯದ ಬಹಿಃ ಪ್ರಾಕಟ್ಯವೇ ಕಾವ್ಯ" (ಪು, ೧೭೬-೧೭೭) "ಸೂಕ್ಷ್ಮಾನುಭವ ಘಟ್ಟ, ಧ್ಯಾನಕಲ್ಪನಘಟ್ಟ, ವಾಕ್ಪ್ರಭಾವಘಟ್ಟ ಎಂಬ ಮೂರು ಘಟ್ಟಗಳಲ್ಲಿ ನಡೆಯುತ್ತದೆ ಕವನಕರ್ಮ. ಅದರ ಫಲಿತಾಂಶ ಕಾವ್ಯ". (ಪು.೧೩)
"ಕಾವ್ಯಕರ್ಮವು ಶಬ್ದಾರ್ಥ ಪ್ರಪಂಚದ ನಾನಾ ಧಾತುಗಳ ಸಮ್ಮಿಳಿತ ಪಾಕ". (ಪು. ೧೭೯)
"ಕವಿ ಸ್ವಪ್ರತಿಭಾಶಕ್ತಿಯಿಂದ ನಮಗಾಗಿ ರಚಿಸುತ್ತಾನೆ ನೂತನ ಲೋಕಭ್ರಾಂತಿಯನ್ನು" (ಪು. ೧೬)
"ಕಾವ್ಯದಿಂದ ನಮಗೆ ಲಭ್ಯವಾಗುವುದು ಈ ಒಂದು ಜೀವದ ಅಥವಾ ಆ ಒಂದು ಜೀವದ ಪ್ರತಿಬಿಂಬವಲ್ಲ; ಅದು ವಿಶ್ವಜೀವನದ ಪ್ರತಿಬಿಂಬ". (ಪು. ೧೮)
"ವಿಶ್ವಸಂಬೋಧನೆಯೇ ಕಾವ್ಯದ ಮಹತ್ವ". (ಪು. ೨೦೧)
"ಜೀವನದ ಕೊಳೆ ಕಲ್ಮಷಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಥ". (ಪು. ೧೧)
-
ಈ ಕೆಲವು ಮಾತುಗಳು ಸಾಕು, ಡಿ.ವಿ.ಜಿ.ಯವರ ಅಭಿವ್ಯಕ್ತಿಯ ತುಂಬ ಎಷ್ಟೊಂದು ವಿಚಾರಗಳು ಘನೀಭವಿಸಿವೆ ಎನ್ನುವುದನ್ನು ತೋರಿಸಲು. ಈ ಪುಸ್ತಕದ ತುಂಬ ಇಂಥ ಚಿಂತನೆಯಲ್ಲಿ ಹರಳುಗೊಂಡ ಮಾತುಗಳು ಸುಸಂಬದ್ಧವಾಗಿ ವಿಚಾರ ಪ್ರಚೋದಕವಾಗಿ ತುಂಬಿಕೊಂಡು ಬರುತ್ತವೆ. ಭಾರತೀಯ ಕಾವ್ಯಮೀಮಾಂಸೆ ಮತ್ತು ತತ್ವಶಾಸ್ತ್ರದ ವಿಚಾರಗಳು ಇವರ ಕಾವ್ಯಮೀಮಾಂಸೆಯ ತಳಹದಿಯಾಗಿವೆ. ಜೊತೆಗೆ ಬೇರೆ ಬೇರೆಯ ಸಾಹಿತ್ಯ ಸಂಪ್ರದಾಯದ ಮಾತುಗಳೂ ಇವರ ಆಲೋಚನೆಯಿಂದ ಸ್ಫುಟಗೊಳ್ಳುತ್ತವೆ. ಪೂರ್ವ ಹಾಗೂ ಪಶ್ಚಿಮದ ಕಾವ್ಯ ತತ್ವಾಧ್ಯಯನಗಳಿಂದ ರೂಪುಗೊಂಡ ಡಿ. ವಿ. ಜಿ. ಯವರ ಕಾವ್ಯಮೀಮಾಂಸೆಯಲ್ಲಿ ಪರಂಪರೆಯ ಸತ್ವದಿಂದ ಪುಷ್ಟವಾದ, ನಾವೀನ್ಯ ಮಾತ್ರದಿಂದ ಭಾವವಶವಾಗದ, ಪಾಂಡಿತ್ಯ ಪೂರ್ಣವಾದ ಗಂಭೀರ ವಿಚಾರಸರಣಿಯನ್ನು ಗುರುತಿಸಬಹುದು. ಉತ್ತಮ ಅಭಿರುಚಿ, ಬುದ್ಧಿಯ ಸಮತೂಕ, ಬಾಳಿನ ಶ್ರೇಯಸ್ಸು ಇವುಗಳನ್ನೇ ಗುರಿಯಾಗಿರಿಸಿಕೊಂಡ ಡಿ. ವಿ. ಜಿ. ಯವರ ಕಾವ್ಯಮೀಮಾಂಸೆ ಹಳೆಯದನ್ನೆ ಹೊಸ ರೀತಿಯಲ್ಲಿ ಸ್ಫುಟವಾಗಿ ಪ್ರಕಟಿಸುತ್ತದೆ.
*****
ಪ್ರಕಾಶಕರು: ಕಾವ್ಯಾಲಯ, ಜಯನಗರ, ಮೈಸೂರು
ಪುಟಗಳು: 198
ಬೆಲೆ: 75 ರೂಪಾಯಿಗಳು
ಮುದ್ರಣಗಳು: 1950,1954,1966,1973
No comments:
Post a Comment