Wednesday, 20 March 2013

ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ ’ಡಾಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು.

ಡಿವಿಜಿ ಯವರ ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ.

ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಬಾಲ್ಯದಲ್ಲಿ ಮಗ್ಗಿ ಹೇಳುವುದೊಂದು ಪರಿಪಾಟಲಾಗಿತ್ತು ಡಿವಿಜಿಯವರಿಗೆ. ೧ ರಿಂದ ೧೧ ಹೇಗೋ ನಿಭಾಯಿಸುತ್ತಿದ್ದು, ತದನಂತರ ಮಾವನವರ ಸಹಾಯದಿಂದ (ಅವರು ನಿಧಾನಕ್ಕೆ ಕಿವಿಯಲ್ಲಿ ಉಸಿರುತ್ತಿದ್ದುದನ್ನು, ಡಿವಿಜಿಯವರು ಜೋರಾಗಿ ಕೂಗುತ್ತಿದ್ದರಂತೆ) ತಂದೆಯವರ ಕೋಪದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮಗ್ಗಿಗೆ ಕಷ್ಟಪಡುತ್ತಿದ್ದ ಡಿವಿಜಿಯವರು, ಜೀವನದ ಸಂಕೀರ್ಣ ಲೆಕ್ಕವನ್ನೇ ಕಗ್ಗದಲ್ಲಿ ಅಷ್ಟು ಸುಂದರವಾಗಿ ಬಿಡಿಸಿರುವುದನ್ನು ಕಂಡಾಗ, ಲೆಕ್ಕ ತಪ್ಪುವ ಪಾಳಿ ನಮ್ಮದಾಗುತ್ತದೆ!

ಡಿವಿಜಿ ಯವರೇ ಹೇಳುವಂತೆ ಅವರು ತೇರ್ಗಡೆಯಾದದ್ದು, ಎರಡೇ ಪರೀಕ್ಷೆಗಳಲ್ಲಿ, ೧೮೯೮-೯೯ ರಲ್ಲಿ ಕನ್ನಡ ಎಲ್.ಎಸ್ (ಲೋಯರ್ ಸೆಕೆಂಡರಿ) ಹಾಗೂ ೧೯೦೦ ರಲ್ಲಿ ಇಂಗ್ಲಿಷ್ ಎಲ್.ಎಸ್. ತಂದೆಯವರ ಸ್ನೇಹಿತ ರಸೂಲ್ ಖಾನ್ ಅವರ ಒತ್ತಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ಗೆ ಸೇರಿದರು.

ಬಾಪೂ ಸುಬ್ಬರಾಯರು, ಮೈಸೂರು ವೆಂಕಟಕೃಷ್ಣಯ್ಯ (ತಾತಯ್ಯ) ನವರು, ಬೆಳವಾಡಿ ದಾಸಪ್ಪ ಮುಂತಾದ ಉಪಾಧ್ಯಾಯರ ಪ್ರಭಾವ ಹಾಗೂ ಪ್ರೋತ್ಸಾಹ. ಆದರೆ ತಾತ ರಾಮಣ್ಣ, ಅಜ್ಜಿ ಸಾಕಮ್ಮನವರ ನಿಧನ, ಪ್ಲೇಗ್ ಹಾವಳಿ, ಕಳವು, ಬೇಸಾಯ ಹಾನಿ, ವ್ಯವಹಾರ ನಷ್ಟ - ಸಾಲು ಸಾಲಾಗಿ ಬೆನ್ನಟ್ಟಿ ಬಂದ ಅನರ್ಥಗಳಿಂದ ಮೈಸೂರಿನಿಂದ ಹಿಂದಿರುಗಿದರು.

ಸ್ವಲ್ಪ ಸ್ಥಿತಿ ಸುಧಾರಿಸಿದ ನಂತರ, ಪೂಜೆ, ಪಾಠ ಹೇಳಿಕೊಂಡು, ಕೋಲಾರದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಉಪಾಧ್ಯಾಯ ಹನುಮಂತರಾಯರು ಡಿವಿಜಿಯವರ ಕನ್ನಡ ಭಾಷೆಗೆ ಸಾಣೆ ಹಿಡಿದರೆ, ಆರ್.ವಿ.ಕೃಷ್ಣಸ್ವಾಮಯ್ಯರ್ (ಆರ್.ಕೆ.ನಾರಾಯಣ್ ಅವರ ತಂದೆ) ಇಂಗ್ಲಿಷ್ ಭಾಷೆಗೆ ಹೊಳಪು ನೀಡಿದರು.

ಆದರೆ ಈ ಬಾರಿ ವಿಧಿ ಖಾಯಿಲೆಯ ರೂಪದಲ್ಲಿ ಕಾಡಿತ್ತು. ಮುಂದಿನ ವರ್ಷ ಮುಂದುವರೆಸಿದ ವಿದ್ಯಾಭ್ಯಾಸದಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಕನ್ನಡ, ಗಣಿತ ಕೈಕೊಟ್ಟವು. ತೇರ್ಗಡೆಯಾಗಲಿಲ್ಲ. ಸಂಸ್ಕೃತವನ್ನೂ ಇವರು ಶಾಲೆಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಲಿಲ್ಲ. ಮನೆಯ ವಾತಾವರಣದಲ್ಲಿ ಪರಿಚಯವಾದ ಸಂಸ್ಕೃತಕ್ಕೆ ತಮ್ಮ ಸ್ವಂತ ಆಸಕ್ತಿ, ಪರಿಶ್ರಮ ಸೇರಿಸಿ ಕಲಿತರು.

ಛಪ್ಪಲ್ಲಿ ವಿಶ್ವೇಶ್ವರ ಶಾಸ್ತ್ರಿಗಳು ಮತ್ತು ಹಾನಗಲ್ಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಸ್ವಲ್ಪ ಅಭ್ಯಾಸ ಮಾಡಿದರು. ಡಿವಿಜಿ ಯವರು ಪಡೆದುಕೊಂಡದ್ದಲ್ಲೆವೂ ಸ್ವಪ್ರಯತ್ನದಿಂದಲೇ. ಡಿವಿಜಿ ಯವರು ಯಾವ ಕಾಲೇಜನ್ನೂ ಕಾಣಲಿಲ್ಲ. ಯಾವ ಪಂಡಿತ ಪರೀಕ್ಷೆಯನ್ನೂ ಮಾಡಲಿಲ್ಲ. ಆದರೆ ಅವರ ಕೃತಿಗಳು ಕಾಲೇಜು ಉನ್ನತ ವ್ಯಾಸಂಗಕ್ಕೆ ಪಠ್ಯಗಳಾದವು. ಅವರು ಪಂಡಿತ ಪರೀಕ್ಷಕರಾದರು. ಇವರ ಜೀವನ, ವಿದ್ಯೆಗೂ ವಿದ್ವತ್ತಿಗೂ ಕೊಂಡಿಯಿಲ್ಲ, ಪದವಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ರುಜುವಾತು ಮಾಡುವಂತಿದೆ....ಮಂದೆ ಓದಿ....ವಿನುತ ಅವರ ನನ್ನಾಲೋಚನೆ ಬ್ಲಾಗ್ ನಲ್ಲಿ

No comments:

Post a Comment