"ಮುಮುಕ್ಷುವಿಗೆ ಪ್ರವೃತ್ತಿಧರ್ಮದಿಂದ ಆಗಬೇಕಾದ ಪ್ರಯೋಜನ ಒಂದಿದೆ, ನಿವೃತ್ತಿಧರ್ಮದಿಂದ ಆಗಬೇಕಾದ ಪ್ರಯೋಜನ ಇನ್ನೊಂದಿದೆ. ಪ್ರವೃತ್ತಿಧರ್ಮ ಹೇಗೆ ನಡೆಯಬೇಕೋ ಹಾಗೆ ನಡೆದಲ್ಲದೆ ನಿವೃತ್ತಿಧರ್ಮ ಸಾಂಗವಾಗಿ ನಡೆಯದು. ಹಾಗಾದರೆ ನಿವೃತ್ತಿಗೆ ಅನುಕೂಲವಾಗುವಂಥ ಆ ಪ್ರವೃತ್ತಿಯ ಲಕ್ಷಣವೇನು? ಯಾವ ರೀತಿ ಬದುಕನ್ನು ನಡೆಸಿದರೆ ಬದುಕಿನ ಹೊರೆ ಹಗುರವಾಗಿ, ನಮ್ಮ ಕಣ್ಣಿಗೆ ಎಂದೆದಿಗೂ ಅಳಿಯದಿರುವ ಬೆಳಕು ಕಾಣಬರುತ್ತದೆ? ಈ ಪ್ರಶ್ನೆಗೆ ಉತ್ತರವನ್ನು ಚಿಕ್ಕಚಿಕ್ಕ ಮಾತುಗಳಲ್ಲಿ ಸಂಗ್ರಹವಾಗಿ ತಿಳಿಸಿರುವುದೇ ಈಶೋಪನಿಷತ್ತು ನಮಗೆ ಮಾಡಿರುವ ವಿಶೇಷ ಉಪಕಾರ. ಬದುಕುವುದು ಕರ್ತವ್ಯ, ಆದರೆ ಹೇಗೆ ಬದುಕಿದರೆ ಚೆನ್ನ? ಇದನ್ನು ಈಶೋಪನಿಷತ್ತು ತಿಳಿಸುತ್ತದೆಯಾದ್ದರಿಂದ, ಇದು ಇಂದಿನ ಲೋಕಕ್ಕೆ ಹೆಚ್ಚು ಬೆಲೆಯುಳ್ಳದ್ದಾಗಿದೆ."
"ಕರ್ಮ-ಜ್ಞಾನ; ಲೌಕಿಕ-ವೈರಾಗ್ಯ; ಪ್ರವೃತ್ತಿ-ನಿವೃತ್ತಿ, ಈ ಜೋಡಿಗಳಲ್ಲಿ ಪ್ರತಿಯೊಂದು ಜೋಡಿಯ ಎರಡಂಶಗಳೂ ಅನ್ಯೋನ್ಯ ವಿರೋಧಿಗಳಲ್ಲ, ಬದಲಾಗಿ ಸಹಕಾರಿಗಳು. ಕರ್ಮವು ಜ್ಞಾನಕ್ಕೆ ಮೆಟ್ಟಿಲು, ಜ್ಞಾನವು ಕರ್ಮಕ್ಕೆ ಫಲ. ಹಾಗೆಯೇ ಲೌಕಿಕವು ವೈರಾಗ್ಯಕ್ಕೆ ಪೂರ್ವಸಿದ್ಧತೆ; ವೈರಾಗ್ಯವು ಲೌಕಿಕದ ಪುಷ್ಪಸೌರಭ. ಹೀಗೆ ಆ ಜೋಡಿಗಳ ಉಭಯಾಂಶಗಳೂ ವಾಸ್ತವವಾಗಿ ಬೇರೆಬೇರೆಯಲ್ಲ. ಅವು ಕೂಡಿಕೊಂಡೇ ಇರುತ್ತವೆ-ಒಂದೇ ಕೋಲಿನ ಎರಡು ಕೊನೆಗಳಂತೆ. ಪ್ರವೃತ್ತಿ ನಿವೃತ್ತಿಗಳೆರಡೂ ಒಂದೇ ಧರ್ಮದ ಎರಡು ಪಕ್ಕಗಳು; ಹೀಗೆಂಬುದು ಈಶೋಪನಿಷತ್ತಿನ ತಾತ್ಪರ್ಯವೆಂದು ನಾನು ನಂಬಿಕೊಂಡಿದ್ದೇನೆ."
"ಜಗತ್ತಿನ ವಿಷಯದಲ್ಲಿ ಉಪನಿಷತ್ತು ಎರಡು ಮಾತುಗಳನ್ನು ಸೂಚಿಸಿದೆ; ೧) ಆ ವಸ್ತುವನ್ನು ಜನ ಉಪಾದಿಸುತ್ತಾರೆ; ೨)ಅದರಿಂದ ಒಳ್ಳೆಯದಾಗುವುದು ಸಾಧ್ಯವಿದೆ. ಜಗತ್ತು ಕೇವಲ ಶ್ರೇಷ್ಠವೇನೂ ಅಲ್ಲ; ಆದರೆ ಅದು ಕೇವಲ ತುಚ್ಛವೂ ಅಲ್ಲ. ನಮ್ಮ ಆತ್ಮೋದ್ಧಾರಕ್ಕಾಗಿ ಅದರಿಂದ ದೊರೆಯಬೇಕಾದ ಸಹಾಯವೂ ಒಂದಷ್ಟಿದೆ. ಲೋಕಸಂಪರ್ಕವು ಜೀವಕ್ಕೆ ಸಂಕಟ ಕಷ್ಟಗಳನ್ನು ತಂದು ಜೀವವನ್ನು ಪರೀಕ್ಷೆಗೆ ಗುರಿಪಡಿಸಿ ಶೋಧನೆ ಮಾಡಿಸುತ್ತದೆ. ಹಾಗೆಯೇ ಸುಖಸಂತೋಷಗಳು ಕೂಡ ಜೀವದಲ್ಲಿಯ ಲೋಕಮೈತ್ರಿ, ಜೀವನೋತ್ಸಾಹ ಮೊದಲಾದ ಗುಣಗಳನ್ನು ಉತ್ತೇಜನಪಡಿಸಿ ಸಂಸ್ಕಾರಕಾರಕಗಳಾಗುತ್ತವೆ. ಹೀಗೆ ಲೋಕಜೀವನದಲ್ಲಿ ಮಿಳಿತವಾಗುವುದು ತತ್ತ್ವಜ್ಞಾನಕ್ಕೆ ಅವಶ್ಯವಾದ ಒಂದು ಮನಸ್ಸಂಸ್ಕಾರ. ಆದ್ದರಿಂದ ಜಗತ್ತು ಈಶ್ವರನದೆಂಬ ದೃಷ್ಟಿಯಿಂದ ನಾವು ಅದನ್ನು ಕಂಡರೆ ಆಗ ಅದು ನಮಗೆ ಬಂಧನವಾಗಿರುವುದು ಹೋಗಿ ತಾರಕವಾದೀತು-ಎಂಬಿದು ಈಶಾವಸ್ಯದ ಉಪದೇಶ."
"ಜೀವನದ ಪರಮಧ್ಯೇಯ ಏನಾಗಿರಬೇಕೆಂಬ ವಿಚಾರದಲ್ಲಿ ಲೋಕದ ಮನಸ್ಸು ಈ ಹೊತ್ತಿಗೆ ಇಬ್ಬಗೆಯಾಗಿದೆ. ಐಹಿಕಭೋಗ. ಇಂದ್ರಿಯಾಪ್ಯಾಯನ, ಸರ್ವ ವಿಸ್ಮಾರಕವಾದ ಬಾಹ್ಯವ್ಯಾಪಾರವಿಷಯಮಗ್ನತೆ - ಇದು ಪಾಶ್ಚಾತ್ಯ ಜನದ ಸಾಮಾನ್ಯ ಮನೋವೃತ್ತಿ. ನೂತನ ವಿಜ್ಞಾನಸಿದ್ಧಗಳಾದ ರಾಸಾಯನಿಕ ದ್ರವ್ಯಗಳಿಂದಲೂ ಶಸ್ತ್ರಸಾಧನಗಳಿಂದಲೂ ಆರೋಗ್ಯವನ್ನೂ ಆಯುರ್ವೃದ್ಧಿಯನ್ನೂ ಗಳಿಸಿಕೊಳ್ಳುವುದು, ವಿವಿಧ ವಾಹನ ಸೌಕರ್ಯಗಳಿಂದ ದೇಶವಿದೇಶಗಳನ್ನು ಸುತ್ತುವುದು, ಹೊಸ ಹೊಸ ಆಹಾರಪಾನಪೀಠಪರಿಕರಗಳಿಂದ ಹೊಸ ಹೊಸ ಸುಖಾನುಭವಗಳನ್ನು ಸಂಪಾದಿಸುವುದು, ಮುಖ್ಯವಾಗಿ ಮನಸ್ಸನ್ನು ಯವುದೋ ಒಂದು ಬಾಹ್ಯೋದ್ವೇಗದಲ್ಲಿ ಲೀನವಾಗಿಸಿಡುವುದು-ಇದು ಬಹುಮಂದಿ ಪಾಶ್ಚಾತ್ಯರ ಪುರುಷಾರ್ಥ. ಭೋಗಕ್ಕಾಗಿ ಜನ್ಮ; ಮನಸ್ಸಿನ ಉದ್ರೇಕವೇ ಸೌಖ್ಯ-ಇದು ಪ್ರವೃತ್ತಿ ಪಂಥದ ಅತಿರೇಕ-ವಿಪರೀತ ಪ್ರವೃತ್ತಿ.
ಇದರಿಂದ ವಿಲಕ್ಷಣವಾದದ್ದು ನಮ್ಮ ಭಾರತೀಯರ ಇಂದಿನ ಮನೋವೃತ್ತಿ. ಅದನ್ನು ಪ್ರವೃತ್ತಿಯೆನ್ನೋಣವೆಂದರೆ ಅದು ಪೌರುಷಪೂರ್ವಕವಾದ ಪ್ರವೃತ್ತಿಯಲ್ಲ. ಪಾಶ್ಚಾತ್ಯರ ಪ್ರವೃತ್ತಿಯಲ್ಲಿ ಪೌರುಷವಿದೆ; ಶ್ರದ್ಧೆಯಿದೆ; ದಕ್ಷತೆಯಿದೆ. ನಮ್ಮದು ಅರೆಮನಸ್ಸಿನ ಮತ್ತು ವಿಚಕ್ಷಣೆಯಿಲ್ಲದ ನಿರ್ವೀರ್ಯವರ್ತನೆ. ಇದನ್ನು ನಿವೃತ್ತಿಯೆನ್ನೋಣವೆಂದರೆ ಭೋಗಲಾಲಸೆ ನಮಗೇನೂ ಕಡಿಮೆಯಾಗಿಲ್ಲ. ಪಾಶ್ಚಾತ್ಯರ ವೈಭವ ವಿಲಾಸಗಳನ್ನು ನೋಡಿ ನಾವು ಹೊಟ್ಟೆ ಕಿವುಚಿಕೊಳ್ಳುತ್ತೇವೆ. ಅವರ ಸಾಹಸ ಸ್ವೇಚ್ಛಾಚಾರಗಳನ್ನು ಪ್ರಗತಿಯೆಂದು ಕೊಂಡಾಡುತ್ತೇವೆ. ಅವರ ಸಂಪತ್ಪ್ರತಾಪಗಳು ನಮಗೂ ಬೇಕು. ಆದರೆ ಬೇಡವೇನೋ ಎಂಬಂತೆ ನಡೆಯುತ್ತೇವೆ. ನಾವು ಇತ್ತ ಲೌಕಿಕದಲ್ಲಿ ಕೃತಕೃತ್ಯರಾಗಿಲ್ಲ; ಅತ್ತ ವಿರಕ್ತಿಯಲ್ಲಿ ಸಿದ್ಧಾರ್ಥರಾಗಿಲ್ಲ. ನಮ್ಮದು ರೋಗಿಯ ಚಿತ್ತದೌರ್ಬಲ್ಯ-ಚಪಲತೆ-ತೇಜೋವಿಹೀನತೆ. ಉಭಯಧರ್ಮಿಕರು ನಾವು.
ಇನ್ನೂ ಒಂದು ಚೋದ್ಯಉಂಟು. ಪಾಶ್ಚಾತ್ಯರ ಪ್ರವೃತ್ತಿ ನಿಷ್ಠೆಯಿಂದ ಅವರ ಜೀವನ ನಿರುಪದ್ರವವಾಗಿ ನಡೆಯುತ್ತಿದೆಯೆಂದಾಗಲಿ ಹಾಗೆ ನಡೆಯುವ ಭರವಸೆ ತೋರುತ್ತಿದೆ ಎಂದಾಗಲೀ ಯಾರೂ ಹೇಳರು. ಅವರ ಯಾವ ಸ್ವಭಾವಗುಣಗಳು ಭೋಗಾನ್ವೇಷಣೆಯನ್ನು ಪ್ರೇರಿಸುತ್ತಿವೆಯೋ ಅದೇ ಸ್ವಭಾವದ ಇನ್ನು ಕೆಲವು ಗುಣಗಳು ಆ ಪ್ರಯತ್ನವನ್ನು ವಿಕಾರಪಡಿಸುತ್ತಿವೆ. ಸಂಪತ್ಸಾಧನೆಯ ಸ್ಪರ್ಧೆಯಲ್ಲಿ ದೇಶದೇಶಕ್ಕೂ ಜನವರ್ಗ ಜನವರ್ಗಕ್ಕೂ ಮಾತ್ಸರ್ಯವೈಷಮ್ಯಗಳು ಬೆಳೆಯುತ್ತಿವೆ. ಇದರ ಜೊತೆಗೆ ದೈಹಿಕ ಭೋಗ ಮಾತ್ರದಿಂದ ಆತ್ಮಸಂತೃಪ್ತಿಯಾಗಲಾರದೆಂಬುದನ್ನೂ ಪಾಶ್ಚಾತ್ಯಲೋಕ ಕಂಡುಕೊಳ್ಳುತ್ತಿವೆ. ಮಾನವಜೀವನವೆಂದರೆ ಉಣ್ಣುವುದು ಉಡುವುದು ಮೆರೆಯುವುದು ಮೈಮರೆಯುವುದು ಇವಿಷ್ಟೇ ಅಲ್ಲ. ಈ ದೇಹದ ಹಸಿವುಗಳೆಲ್ಲ ತೀರಿದಮೇಲೂ ಅಂತರಂಗದಲ್ಲಿ ಏನೋ ಒಂದು ಕೊರಗು-ಒಂದು ಬಯಕೆ-ಉಳಿದುಕೊಂಡಿರುತ್ತದೆ. ಆ ಒಳಹಸಿವು ಹೊರಗಣ ಉಪಚಾರಗಳಿಂದ ತೀರತಕ್ಕದ್ದಲ್ಲ; ಅದು ಆಧ್ಯಾತ್ಮಿಕವಿರಬಹುದು-ಎಂಬ ಅನುಮಾನವೂ ಪಾಶ್ಚಾತ್ಯರಲ್ಲಿ ತಲೆದೋರುತ್ತಿದೆ. ಎಲ್ಲ ಸುಖಸಾಮಗ್ರಿ ಇದ್ದರೂ ನೆಮ್ಮದಿ ಇಲ್ಲವಾಗಿದೆ, ಆ ಪ್ರಪಂಚದಲ್ಲಿ. ನಿವೃತ್ತಿ ಧರ್ಮವನ್ನು ಮರೆತ ಪ್ರವೃತ್ತಿಯ ಗತಿ ಹಾಗೆ.
ಅರ್ಜುನನು ಪ್ರವೃತ್ತಿ ಧರ್ಮವನ್ನು ತೊರೆದು ನಿವೃತ್ತನಾಗುವೆನೆಂದ. ಅದಾಗದೆಂದು ಕೃಷ್ಣನು ಕಾರಣ ತೋರಿಸಿದ್ದೇ ಭಗವದ್ಗೀತೆ.
ಪ್ರವೃತ್ತಿ ನಿವೃತ್ತಿಗಳೆರಡರ ಸಮನ್ವಯವನ್ನು ಭೋಧಿಸುವುದೇ ಈಶೋಪನಿಷತ್ತಿನ ವಿಶೇಷಗುಣ. ಬದುಕಬೇಕು, ಭೋಗವೇ ದೊಡ್ಡದೆಂದುಕೊಳ್ಳದೆ ಬದುಕಬೇಕು- ಈಶ್ವರಸೇವೆಗಾಗಿ ಬದುಕಬೇಕು; ಲೋಕಕಾರ್ಯಗಳನ್ನು ಮಾಡಬೇಕು. ಸ್ವಾರ್ಥದ ಸೋಂಕಿಲ್ಲದೆ ಮಾಡಬೇಕು; ಸಂತೋಷಪಡಬೇಕು. ಪ್ರವೃತ್ತಿಯಿಲ್ಲದೆ-ಲೌಕಿಕಜೀವನವಿಲ್ಲದೆ-ಅಂತರಂಗಶೋಧನೆಯಿಲ್ಲ. ಅಂತರಂಗಶೋಧನೆಯಿಲ್ಲದ ನಿವೃತ್ತಿಗೆ-ಸಂನ್ಯಾಸಕ್ಕೆ-ಸಾರ್ಥ್ಯಕ್ಯವಿಲ್ಲ. ಅಂಥ ಪರಿಶುದ್ಧ ನಿವೃತ್ತಿ ಮೂಲಕವಲ್ಲದೆ ತತ್ತ್ವಸಾಕ್ಷಾತ್ಕಾರವಿಲ್ಲ. ತತ್ತ್ವಸಾಕ್ಷಾತ್ಕಾರವಿಲ್ಲದೆ ಮನುಷ್ಯನಿಗೆ ಲೋಕ ಜೀವನದ ದ್ವಂದ್ವಜಾಲಿಕೆಯಿಂದ ಬಿಡುಗಡೆಯಿಲ್ಲ. ಲೋಕಾಸಕ್ತಿ ಸ್ವಾರ್ಥವಿರಕ್ತಿಗಳೆರಡನ್ನೂ ಜೋಡಿಗೂಡಿಸಿ ಬಾಳಬಲ್ಲವನೇ ಯೋಗಿ. ಅವನನ್ನು ಯಾವ ದೋಷವೂ ಯಾವ ದುಃಖವೂ ಮುಟ್ಟದು. ಇದು ಈಶೋಪನಿಷತ್ತಿನ ಬೋಧನೆ. ಈ ನೀತಿಸೂತ್ರ ಯಾವ ಮನುಷ್ಯನಿಗೆ ಬೇಡ? ಅದರಿಂದ ಲಭಿಸುವ ಆತ್ಮಶಾಂತಿ ಯಾರಿಗೆ ಬೇಡ?"
-ಈಶೋಪನಿಷತ್ತು (ಶ್ರೀ.ಡಿ.ವಿ.ಜಿ), ಕನ್ನಡ ಛಾಯಾಪದ್ಯ-ಟಿಪ್ಪಣಿ ತಾತ್ಪರ್ಯ ಸಂಗ್ರಹಗಳೊಡನೆ; ೫೩ ಪುಟಗಳು; ಬೆಲೆ: ೩೦ ರೂ

No comments:
Post a Comment